Shridevi Patil

Tragedy Action Others

4.2  

Shridevi Patil

Tragedy Action Others

ಮಾವನ ಆಸ್ತಿಗೆ ಕಣ್ಣು ಹಾಕಿ..?

ಮಾವನ ಆಸ್ತಿಗೆ ಕಣ್ಣು ಹಾಕಿ..?

2 mins
367



ಆಗಿನ ಕಾಲಕ್ಕೆ ಮನೆಗೊಬ್ಬ ಗಂಡು ಮಗ ಇರಲೇಬೇಕೆಂಬ ನಿಯಮವಿತ್ತೇನೋ ಗೊತ್ತಿಲ್ಲ, ಒಟ್ಟಿನಲ್ಲಿ ನಾಲ್ಕೈದು ಹೆಣ್ಣುಮಕ್ಕಳು ಜನಿಸಿದರೂ ಕೂಡ ಹೆಣ್ಣು ಮಕ್ಕಳು ಮಕ್ಕಳಲ್ಲವೇನೋ ಎಂಬಂತೆ ಗಂಡು ಮಗುವಿಗಾಗಿ ಪೂಜೆ, ಹರಕೆ ಮತ್ತೊಂದು ಮಗದೊಂದು ಮಾಡುತ್ತಿದ್ದರು. ಅಷ್ಟಾದರೂ ಗಂಡುಮಗು ಹುಟ್ಟಿಲ್ಲವಾದರೆ ಆ ತಾಯಿಯನ್ನು ಜರಿಯುತ್ತ, ಆಕೆಯ ಗಂಡನಿಗೆ ಮತ್ತೊಂದು ಮದುವೆ ಮಾಡಲು ಕೂಡ ಹಿಂದೇಟು ಹಾಕುತ್ತಿರಲಿಲ್ಲ. ಅದೂ ಸ್ಥಿತಿವಂತರ ಮನೆಯೇನಾದರೂ ಆಗಿದ್ದರಂತೂ ಮುಗಿದೆ ಹೋಯ್ತು. ಇಷ್ಟೊಂದು ಆಸ್ತಿ ಇದೆ, ಆದರೆ ಅದನ್ನು ಉಣ್ಣಲು ಒಂದು ಗಂಡು ಮಗು ಇಲ್ಲವಲ್ಲ ಎಂದು ಆಡಿಕೊಳ್ಳುವವರೆ ಹೆಚ್ಚು. ಇನ್ನೇನಿದ್ದರೂ ಆ ಹೆಣ್ಣುಮಕ್ಕಳ ಪೈಕಿ ಒಬ್ಬ ಮಗಳ ಗಂಡನನ್ನು ಮನೆ ಅಳಿಯನನ್ನಾಗಿ ಮಾಡಿಕೊಂಡು ಆ ಮಾವನ ಆಸ್ತಿಗೆ ಕಾವಲುಗಾರನನ್ನಾಗಿ ಮಾಡಬೇಕು ಅಷ್ಟೇ ಎಂದು ವ್ಯಂಗ್ಯವಾಡುತ್ತಿದ್ದರು. ಇದು ಈಗಲೂ ಹೆಚ್ಚು ಕಮ್ಮಿ ಹೀಗೆಯೇ ಮುಂದುವರಿದುಕೊಂಡು ಬಂದಿದೆಯೆಂದರೆ ತಪ್ಪಾಗಲಾರದು.



ಸುಂದರಮ್ಮ ಅಜ್ಜಿಗೆ ಲಲಿತಾ ಹಾಗೂ ನಾಗವೇಣಿ ಎನ್ನುವ ಇಬ್ಬರು ಹೆಣ್ಣು ಮಕ್ಕಳು ಇದ್ದು ಆಪರೇಷನ್ ಮಾಡಿಸದೆ ಇದ್ದರೂ ಮೂರನೇ ಮಗು ಜನಿಸಲೂ ಇಲ್ಲ, ಇಡೀ ಆಸ್ತಿಗೆ ವಾರಸುದಾರ ಗಂಡು ಮಗು ಆಗಲಿಲ್ಲ. ಸುಂದರಮ್ಮ ಅಜ್ಜಿಯ ಗಂಡ ಗಂಡು ಮಗು ಗಂಡು ಮಗು ಎನ್ನುತ್ತಲೇ ಕೊರಗಿ ಕೊರಗಿ ಕೊನೆಗೆ ಸತ್ತೇ ಹೋದನು. ಆದರೆ, ಸುಂದರಮ್ಮ ಅಜ್ಜಿ ಹೆಣ್ಣು ಮಕ್ಕಳಿಬ್ಬರನ್ನು ಚೆನ್ನಾಗಿ ಬೆಳೆಸಿದರು. ಓದಿಸದೆ ಹೋದರೂ ಪರವಾಗಿಲ್ಲ ಉತ್ತಮ ಸಂಸ್ಕಾರ ಕೊಟ್ಟು, ಸುಸಂಸ್ಕೃತರನ್ನಾಗಿ ಮಾಡಿದರು. ಇದೆಲ್ಲದರ ಮದ್ಯ ಲಲಿತಾ ಮದುವೆ ವಯಸ್ಸಿಗೆ ಬಂದಳು. ಹೇಗೂ ಇನ್ನೊಬ್ಬ ಮಗಳಿದಾಳೆ ಆಕೆಯ ಗಂಡನನ್ನು ಮನೆಯಳಿಯನಾಗಿ ಮಾಡಿಕೊಂಡರಾಯಿತೆಂದು ಸುಂದರಮ್ಮ ಅಜ್ಜಿ ಲಲಿತಾಳನ್ನು ಮದುವೆ ಮಾಡಿ ಗಂಡನ ಮನೆಗೆ ಕಳುಹಿಸಿದಳು. ಲಲಿತಾಳ ಗಂಡನಿಗೂ ಮಾವನ ಆಸ್ತಿಯ ಮೇಲೆ ಕಣ್ಣು ಇದ್ದರೂ ಸಹ ಅಲ್ಲಿ ಆಸ್ತಿಗಾಗಿ ಮಾತನಾಡುವ ಸಂದರ್ಭ ಬರಲೇ ಇಲ್ಲ.



ಒಂದೆರಡು ವರುಷದ ಬಳಿಕ ನಾಗವೇಣಿ ಮದುವೆ ಪ್ರಸ್ತಾಪವಾಯಿತು. ಆಗ ಮೊದಲ ಮಗಳ ಗಂಡ ಸುಂದರಮ್ಮ ಅಜ್ಜಿಯೊಡನೆ ಮಾವನ ಆಸ್ತಿಯ ಕುರಿತು ಮಾತನಾಡಲು ಶುರು ಮಾಡಿದನು. ಹೇಗಿದ್ದರೂ ಇಬ್ಬರ ಮದುವೆ ಆದ ಮೇಲೆ ಆಸ್ತಿ ಭಾಗವಾಗಲೇಬೇಕಲ್ಲ ಅತ್ತೆ, ಈಗಲೇ ಮಾಡಿಬಿಡಿ ಎನ್ನುತ್ತಾ ಪೀಠಿಕೆ ಹಾಕಿದನು. ಏಕಾಏಕಿ ಸುಂದರಮ್ಮ ಅಜ್ಜಿ ಸಿಟ್ಟಾಗಿ ಆಸ್ತಿಯ ವಿಷಯ ನಿಮಗೆ ಬೇಡ, ನಾನು ಒಂದು ನಿರ್ಧಾರ ಮಾಡಿದ್ದೇನೆ. ಅದರಂತೆಯೇ ಮಾಡುವೆ ಎಂದಳು. ಮೊದಲ ಅಳಿಯ ಮನಸ್ಸಲ್ಲೇ ಅತ್ತೆಯನ್ನು ಬೈಯುತ್ತ ಸದ್ಯಕ್ಕೆ ಸುಮ್ಮನಾದನು. ಕೊನೆಗೆ ನಾಗವೇಣಿಗೆ ಮದುವೆ ನಿಶ್ಚಯವಾಯಿತು. ಆಗ ಸುಂದರಮ್ಮ ಅಜ್ಜಿ ಎಲ್ಲರನ್ನು ಕೂರಿಸಿಕೊಂಡು ಎರಡನೇ ಅಳಿಯನನ್ನು ಮನೆಅಳಿಯನನ್ನಾಗಿ ಮಾಡಿಕೊಳ್ಳುವ ಕುರಿತು, ಹಾಗೂ ಅವರಿಗೆ ಜನಿಸುವ ಗಂಡುಮಗುವಿಗೆ ಆಸ್ತಿಯ ಹಕ್ಕು ಲಭಿಸುವಂತೆ, ಮೊದಲ ಮಗಳನ್ನು ತವರಿಗೆ ಕರೆದು ಕಳುಹಿಸುವ ಜೊತೆಗೆ ಆಕೆಯ ಕಷ್ಟಗಳಿಗೆ ನೆರವಾಗುವಂತೆ ಕರಾರು ಪತ್ರ ಮಾಡಿಸಿ ಎಲ್ಲರೆದುರು ಸಹಿ ಹಾಕಿಸುತ್ತಾಳೆ.


ಮೊದಲ ಅಳಿಯನಂತೂ ನಾಗರಹಾವಿನಂತೆ ಬುಸುಗುಡುತ್ತ, ದ್ವೇಷದಿಂದ ಕುದಿಯಲಾರಂಭಿಸಿದನು. ಆತನಿಗೆ ಮೊದಲೇ ಮಾವನ ಆಸ್ತಿಯ ಮೇಲೆ ವಕ್ರ ದೃಷ್ಟಿ ಬಿದ್ದಿತ್ತು.ಹೇಗಾದರೂ ಮಾಡಿ ಅದನ್ನು ಪಡೆಯಲೇ ಬೇಕೆಂಬ ಆತನ ಆಸೆಗೆ ಸುಂದರಮ್ಮ ಅಜ್ಜಿ ತಣ್ಣೀರು ಎರಚಿದ್ದಳು.


ನಾಗವೇಣಿಗೂ ಮದುವೆ ಆಗಿ ತನ್ನ ದಾಂಪತ್ಯ ಜೀವನದಲ್ಲಿ ಸುಖಿಯಾಗಿದ್ದಳು. ದೇವರ ಅನುಗ್ರಹ ಶೀಘ್ರ ಲಭಿಸಿ ವರುಷ ತುಂಬುವಷ್ಟರಲ್ಲಿ ಗರ್ಭಿಣಿಯಾಗಿ, ಗಂಡು ಮಗುವಿಗೆ ಜನ್ಮವಿತ್ತಳು. ಮನೆಯಲ್ಲಿ ಸಂಭ್ರಮ ಮನೆ ಮಾಡಿತು. ಮೊದಲ ಅಳಿಯ ಮಾತ್ರ ಆ ಮಗುವನ್ನು ಹೊಸಕಿಹಾಕಿ, ಮಾವನ ಆಸ್ತಿಯನ್ನು ಲಪಟಾಯಿಸಲು ಹೊಂಚು ಹಾಕುತ್ತಿದ್ದನು. ಉಪಾಯ ಮಾಡಿ ಎಲ್ಲರನ್ನೂ ದೇವಸ್ಥಾನಕ್ಕೆ ಕರೆದೊಯ್ಯುವ ನೆಪ ಮಾಡಿ ಅಲ್ಲಿ ಆ ಮಗುವನ್ನು ಕೊಲ್ಲುವ ಸಂಚು ರೂಪಿಸಿದನು.


ತಾನೊಂದು ಬಗೆದರೆ ದೈವವೊಂದು ಬಗೆಯಿತು ಎನ್ನುವಂತೆ ದೇವಸ್ಥಾನ ಆವರಣಕ್ಕೆ ಕಾಲಿಡುತ್ತಿದ್ದಂತೆ ಅಲ್ಲಿದ್ದ ನಾಗರ ಹಾವೊಂದು ಕಚ್ಚಿ ಆತನೇ ಸತ್ತು ಹೋದನು.


ಮಾವನ ಆಸ್ತಿಯ ಮೇಲೆ ಕಣ್ಣು ಹಾಕಿ ಅದನ್ನ ಪಡೆಯುವ ಭರದಲ್ಲಿ, ತನ್ನ ನೆಮ್ಮದಿಯನ್ನೂ ಕಳೆದುಕೊಂಡು, ಕೊನೆಗೆ ಪ್ರಾಣವನ್ನೇ ಕಳೆದುಕೊಂಡನು.



Rate this content
Log in

Similar kannada story from Tragedy