Hema Amin _Sachi Sachi

Tragedy Inspirational

4.1  

Hema Amin _Sachi Sachi

Tragedy Inspirational

ಕೆಂಪು ಚಟ್ನಿ (Red chutney)-Mumbai stories.

ಕೆಂಪು ಚಟ್ನಿ (Red chutney)-Mumbai stories.

6 mins
133“ ನೀರ್ದೋಸೆ ಅಂದ್ರೆ ಕೈಗೆ ಒಂದ್ಚೂರು ಅಂಟಿಕೊಳ್ಳುವಂತಿರಬಾರದು. ತಳ ಸುಟ್ಟಿರಬಾರದು, ತೆಳುವಾಗಿ, ಶುಭ್ರವಾಗಿ ಗರಿ ಗರಿಯಾಗಿ ಅದರ ಪುಟ್ಟ ಪುಟ್ಟ ಚಿತ್ತಾರ ಕಣ್ಣಿಗೆ ಆಕರ್ಷಕವಾಗಿ ತಿನ್ನಲು ಹಾತೊರೆಯುವಂತಿರಬೇಕು. ಇದೇನು ಶಕ್ಕಕ್ಕ ? ಇದು ನಿಮ್ಮ ನೀರ್ದೋಸೆ ಎಂದು ಯಾರೂ ನಂಬಲಿಕ್ಕಿಲ್ಲ. ‘" 

ಸುರೇಶನ ತಾತ್ಸರ್ಯದೆ ಮಾತು ಶಕ್ಕುವಿನ ಕಿವಿಗೆ ಕಾದ ಕಬ್ಬಿಣ ಸುರಿಸಿ ದಂತಾಯಿತು. ತನ್ನ ಕೆಲಸಕ್ಕೆ ಯಾರಾದರೂ ಬೊಟ್ಟು ಮಾಡಿದರೆ ಅದು ಅವಳಿಂದ ಸಹಿಸಿಕೊಳ್ಳಲಾಗದು .

“ ಈ ಹಲ್ಕಟ್ ಸುರೇಶ, ಕಳೆದ ಎರಡು ವರುಷಗಳಿಂದ, ಬಾಯಲ್ಲಿ ಒಂದಿಷ್ಟು ಜಾಫ್ರಾನಿ ಬತ್ತಿಸಿ ಪಾನ್ ಮೆಲ್ಲತ್ತಾ, ಪಿಚಿಕ್ ಎಂದು ಉಗುಳಿ ಎಡಕೈಯಿಂದ ತುಟಿ ಸವರುತ್ತಾ ರಂಗಾಗಿ, “ ಏನೇ ಹೇಳಿ ಶಕ್ಕಕ್ಕ ನಿಮ್ಮ ಕೈಯ ದೋಸೆಯ ರುಚಿ, ಹಣ ಕೊಟ್ಟರೂ ಸಿಗಲಿಕ್ಕಿಲ್ಲ. ಅದಕ್ಕೆ ಒಪ್ಪುವ ಕೆಂಪು ಚಟ್ನಿ. ಅಹ.. ಆಹಾ ! ನಾಲಗೆಗೆ ಹುಳಿ ಖಾರ ಮಿಶ್ರಿತ ಬೇರೆಯೆ ರುಚಿ. ನಾನಂತು ಫುಲ್ ಫಿದಾ ನೋಡಿ. ನೀವು ಬೇಕಾದರೆ ಬರೆದಿಟ್ಕೊಳ್ಳಿ ನಿಮ್ಮ ನಿರ್ದೋಸೆ ಕೇಂದ್ರದ ಕಾಯಂ ಗಿರಾಕಿ ನಾನು. ಎಂದು ಜೊಲ್ಲು ಸುರಿಸುತ್ತಾ ಆಡಿಕೊಂಡವನು ಇಂದು ಈ ರೀತಿ ಹೇಳಿಕೊಳ್ಳುತ್ತಿದ್ದಾನಲ್ಲ ಎಂದು ಪಿತ್ತ ನೆತ್ತಿಗೇರಿದರೂ ಸುಮ್ಮನೆ ಅವನ ಮುಖವನ್ನು ಶೂನ್ಯದಂತೆ ನೋಡುತ್ತ ನಿಂತಳು.

ಅಷ್ಟರಲ್ಲೇ ಕೂದಲನ್ನು ಎದೆಯ ಮೇಲೆಳೆದು ಜಡೆ ಹೆಣೆಯುತ್ತಾ ಮಾಳಿಗೆಯ ಮೆಟ್ಟಿಲಿನಿಂದ ಇಳಿಯುತ್ತಾ ಬಂದ ರಾಗಿಣಿ “ ಇಂದು ನಾಸ್ತಗೆ ಏನಿದೆ ? ಬೇರೆ ಏನಾದರೂ ಇದೆಯಾ ಅಲ್ಲ,…. ಅದೇ ಬೋರಿಂಗ್ ನೀರ್ದೊಸೆಯಾ? ಎಂದ ಮಾತು ಶಕ್ಕುಗೆ ಅವಮಾನಕ್ಕೆ ಬೆಣ್ಣೆ ಹಚ್ಚಿದಂತಾಗಿ,“ಏ ರಾಗಿಣಿ ಏನೇ ನಿನ್ನ ಅಪ್ಪ ಸಾಮಾನು ತಂದು ಹಾಕಿದ್ದಾನಾ? ಅಲ್ಲಾ, ನಿನ್ ಯಾರ್ ದಿನಾ ಹೋಟಲ್ ಗಿಟೇಲಿಗೆ ಕರ್ಕೊಂಡು ಮಸ್ಕ ಪಾವ್, ಭುರ್ಜಿ ಪಾವ್ ತಿನ್ನಿಸುತ್ತಾನಾ?ಈ ಉತ್ತರವನ್ನು ಬಯಸದ ರಾಗಿಣಿ ಇದೇನಪ್ಪಾ ಎಲ್ಲಿಯ ಸರಕು ಎಲ್ಲಿಯೋ ರಪ್ತಾಗುತಿದೆಯಲ್ಲ! ಎಂದು ಇಲ್ಲಿಂದ ಸುಮ್ಮನೆ ಜಾಗ ಖಾಲಿ ಮಾಡೋದೇ ಲೇಸೆಂದು ಲಗುಬಗನೆ ಮೆಟ್ಟಿಲು ಹತ್ತಿಹೋದಳು. ಶಕ್ಕು ಮತ್ತೊಮ್ಮೆ ಸ್ಟೋರ್ ರೂಮಿಗಿ ಹೋಗಿ ಗೋಣಿ ಚೀಲದಲ್ಲಿದ್ದ ಅಕ್ಕಿಯನ್ನೊಮ್ಮೆ ಅಂಗೈಯಲ್ಲಿ ಹರವಿ ಮೂಗಿನ ಬಳಿ ತಂದು ಮೂಸಿ  ‘ ಯಾಕ್ಹಿಗಾಗುತ್ತಿದೆ? ಇಷ್ಟು ದಿನಗಳಿಂದ ನಾನು ಮಾಡಿದ ದೋಸೆಗೆ ಬಾರದ ತಕರಾರು ಕಳೆದ ಎರಡು ವಾರಗಳಿಂದ ಬರಲು ಕಾರಣವಾದರೂ ಏನು ? ಅದಕ್ಕೆ ಬಳಸುವ ಅಕ್ಕಿ ಪಡಿತರ ಚೀಟಿಯ ಹಸಿರು ಕಾರ್ಡಿನಿಂದ ತಂದದ್ದಲ್ಲ . ತರೋದಾದ್ರೂ ಹೇಗೆ ಅವನ ಚಟ್ಟಕ್ಕೆ ಯಾವಾಗ ನೋಡಿದ್ರು " ಸ್ಟಾಕ್ ಖಾಲಿಯಾಗಿದೆ" ಎಂದು ಬೋರ್ಡು ತೂಗಾಡಿಸಿ ಗೋದಾಮಿನಲ್ಲಿದ ನಮ್ಮ ಪಾಲಿನ ಅಕ್ಕಿಯನ್ನೇ ಡಬಲ್ ತ್ರಿಬಲ್ ರೇಟಿಗೆ ಮಾರಿದರೆ ನಾವು ತಿನ್ನುವುದೆಷ್ಟು ಹಂಚುವುದೆಷ್ಟು. ಎಂದು ತನ್ನಲ್ಲಿಯೇ ಗೊಣಗಾಡಿದಳು.


 ಕಳೆದ ಒಂದೆರಡು ವಾರಗಳಿಂದ ಶಕ್ಕುವಿನ ತಲೆಯಲ್ಲಿ ಈ ವಿಷಯ ಗೆದ್ದಲು ಹಿಡಿದಂತೆ ಕೊರೆಯುತ್ತಿತ್ತು . ಅಕ್ಕಿಗೆ ಹುಳುಹಿಡಿಯದಂತೆ ಬೇವಿನ ಒಣ ಸೊಪ್ಪು ಪ್ರತಿಯೊಂದು ಚೀಲದಲ್ಲಿ ಬೆರೆಸಿಟ್ಟಿದ್ದಳು. ಅಷ್ಟು ಸಾಲದಕ್ಕೆ ಮೊನ್ನೆ ಪಕ್ಕದ ಕ್ಲಾಸಲ್ಲಿ ಪಾಠ ಹೇಳಿಕೊಡಲು ಬರುತ್ತಿದ್ದ ರಮ್ಯ ಟೀಚರ್, “ ಅಕ್ಕಿಗೆ ಡಿ. ಡಿ. ಟಿ ಪೌಡರ್ ಬೆರೆಸಿಡಿ. ಬಳಸುವಾಗ ಮಾತ್ರ ಸರಿ ತೊಳೆದು ತೆಗೆಯಿರಿ “ ಎಂಬ ಸಲಹೆಯನ್ನೂ ಚಾ ...ಚೂ ತಪ್ಪದೆ ಪಾಲಿಸುತ್ತಿದ್ದಳು. ಹೀಗೇ ಆದರೆ ಒಂದು ದಿನ ಈ ನಿರ್ದೋಸೆ ಸೆಂಟರ್ ಕುಸಿದು ಬೀಳಬಹುದೆಂಬ ಅಂತಕ . ಅಷ್ಟಕ್ಕೂ ಈ ಪುಟ್ಟ ಸೆಂಟರ್ ಗಟ್ಟಿಯಾಗಿರಲು ಅವಳು ಮಾಡಿದ ಸರ್ಕಸ್ ಅಷ್ಟಿಷ್ಟಲ್ಲ.


******

         

ಅವಳಪ್ಪ ಮಂಜಣ್ಣನದ್ದು ಡೊಂಬಿವಲಿಯ ಸರಸ್ವತಿ ಹೈಸ್ಕೂಲಿನ ಕೊನೆಯ ತಿರುವಿನಲ್ಲಿ ಒಂದು ಸಣ್ಣ ಕ್ಯಾಂಟೀನಿತ್ತು. ಅವಳಮ್ಮ ಬೆಳಿಗ್ಗೆ ಚಟ್ನಿ , ಸಾಂಬಾರ್, ಬಟಾಟೆ ಪಲ್ಯ ಮನೆಯಲ್ಲಿ ತಯಾರಿಸಿ ಡಬ್ಬಿಯಲ್ಲಿ ಹಾಕಿ ಕಳುಹಿಸುತ್ತಿದ್ದಳು. ಅದನ್ನು ಅಪ್ಪನಿಗೆ ಕೊಟ್ಟು ಬೆಳಿಗ್ಗಿನ ಶಾಲೆ ಮುಗಿಸಿ ನೇರ ಅಪ್ಪನ ಬಳಿ ಬರುತ್ತಿದ್ದಳು. ಮಧ್ಯಾಹ್ನದವರೆಗೆ ಬಂದ ಗಿರಾಕಿಗಳ ಎಂಜಲು ಪಾತ್ರೆಗಳ ರಾಶಿ ತುಂಬಿಕೊಂಡಿರುತ್ತಿತ್ತು . ಮೊದಲಿಗೆ ಒಂದೋ ಎರಡೊ ದೋಸೆ ತಿಂದು ಆ ಬಳಿಕ ಪಾತ್ರೆಗಳನ್ನೆಲ್ಲ ಉಜ್ಜಿ ಬೋರಲು ಹಾಕಿ ಉಳಿದ ಕೆಲಸಗಳನ್ನು ಮುಗಿಸಿ ಮನೆಗೆ ತೆರಳುತ್ತಿದ್ದಳು. ದೋಸೆ ತಿನ್ನಲು ಮಾತ್ರ ತಮ್ಮ ಪ್ರದೀಪ . ಒಂದು ದಿನ ತನ್ನೊಂದಿಗೆ ಪಾತ್ರೆ ತಿಕ್ಲಿ ನೋಡುವಾ? ಅವನಿಗಿಷ್ಟಂತ ಕೆಂಪು ಚಟ್ನಿ ಬೇರೆ. ಶಕ್ಕುಗೆ ಅದು ಸ್ವಲ್ಪನೂ ಇಷ್ಟವಾಗ್ತಿರಲಿಲ್ಲ.


ಗಿರಾಕಿಗಳಿಗಿಟ್ಟ ಸಾಸಿವೆಯ ಒಗ್ಗರಣೆ ಹಾಕಿದ ಹಸಿರು ಚಟ್ನಿ ಮೇಲೆ ಅವಳ ಆಸೆಯ ಒಗ್ಗರಣೆ ಬಿದ್ದು ಘಮ್ಮೆಂದರೂ ಅಪ್ಪಾ ಆ ಚಟ್ನಿ ಶಕ್ಕುಗೆ ಕೊಡುತ್ತಿರಲಿಲ್ಲ. ಎರಡು ಕಾಯಿಯ ಚಟ್ನಿ ಮಧ್ಯಾಹ್ನದವರೆಗೆ ಸರಿಯಾಗುತ್ತಿತ್ತು, ಕೆಲವೊಮ್ಮೆ ಕೊನೆ ಕೊನೆಗೆ ಚಟ್ನಿ ತೆಳುವಾಗಿ ತನ್ನ ರೂಪ ಬದಲಾಯಿಸಿದ್ದು ಉಂಟು. ಅದಕ್ಕೆಂದೇ ಮೂರನೇ ಕಾಯಿ ಮುರಿಯುವ ಸಂಪ್ರದಾಯದವಂತೂ ಇರಲೇ ಇಲ್ಲ. 

ಒಂದು ಮಧ್ಯಾಹ್ನ ಸಮಯ ತಪ್ಪಿ ಕಾಲೇಜಿನ ಕೆಲವು ವಿಧ್ಯಾರ್ಥಿಗಳು ಬಂದು, " ಅಂಕಲ್ , ಹದಿನೈದು ಮಸಾಲೆ ದೋಸೆ " ಎಂದಾಗ ಮಂಜಣ್ಣ ಕಕ್ಕಾಬಿಕ್ಕಿಯಾಗಿದ್ದ. ದೋಸೆ ಹಿಟ್ಟಾದರೂ ಇತ್ತು. ಆದರೆ ಚಟ್ನಿ ಇಲ್ಲದೆ ಏನು ಮಾಡುವುದು? ಗಿರಾಕಿ ಕೈತಪ್ಪಿ ಹೋಗದಂತೆ ಚತುರೆ ಶಕ್ಕು  “ ಅಯ್ಯೋ ಈ ಕೆಂಪು ಚಟ್ನಿಯನ್ನೇ ಸ್ಪೆಷಲ್ ಚಟ್ನಿ ಅಂತ ಕೊಡಪ್ಪ....

" ಹಾಗೆ ಸರಿಯಲ್ಲ ಕೂಸೇ , ಅವರೇನು ಬಿಟ್ಟಿಗೆ ತಿನ್ನಲು ಬಂದಿಲ್ಲ.

" ಏ... ಏನೂ ಆಗಲ್ಲಪ್ಪ . ಅದೇ ಚಟ್ನಿಯ ಮೇಲೆ ಒಗ್ಗರಣೆ ಹಾಕು. ಎರಡೆಳೆ ಕೊತ್ತಂಬರಿ ಇಡು. ಇದನ್ನೇ ಚೆಂದದ ವಾಟಿಯಲ್ಲಿಟ್ಟು ಕೊಡು. ಶಕ್ಕುವಿನ ಕಣ್ಣ ಬೆಳಕಿನಲಿ ಎಲ್ಲವೂ ನಿರುಮ್ಮಳವಾಗಿ , ಸಲೀಸಾಗಿ ಹಗುರವಾಯಿತು. ತಂದೆಯ ತುಟಿಯಂಚನ್ನು ತನ್ನ ಬೆರಳಿನಿಂದ ಅಗಲಿಸುತ್ತಾ, ಬಡಿಸುವಾಗ ಕಾಲಾಂಶ ನಗುವನ್ನೂ ಬಡಿಸು " ಎಂದು ಹುರಿದುಂಬಿಸಿದಳು. ಆ ಮಾಂತ್ರಿಕ ನಗುವಿನೊಂದಿಗೆ ಮೊದಲ ಬಾರಿಗೆ ಕೆಂಪು ಚಟ್ನಿ ಗಿರಾಕಿಗಳಿಗಾಗಿಯೂ ಬಂತು. ಅದರ ರುಚಿ ನೇರವಾಗಿ ಹೃದಯದಲ್ಲಿ ಇಳಿದು ಉಳಿದು ತನ್ನದೇ ಹೆಸರು ಮಾಡಿತ್ತು. ಮುಂದೆ ದೋಸೆ ಆರ್ಡರ್ ಮಾಡುವವರು ದೋಸೆ ವಿದ್ ರೆಡ್ ಚಟ್ನಿ, ದೋಸೆ ವಿದ್ ಗ್ರೀನ್ ಚಟ್ನಿ ಎಂದು ಮೊದಲೇ ಹೇಳುತ್ತಿದ್ದರು.


ಶಕ್ಕುವಿನ ಮದುವೆ ಡೊಂಬಿವಲಿಯ ಖಾಸಗಿ ಕಂಪನಿಯೊಂದರ ಬಸ್ಸಿನ ಡ್ರೈವರ್ ಬಾಲಕೃಷ್ಣನ ಜೊತೆಗೆ ಗಾವ್ದೇವಿ ಮಂದಿರದಲ್ಲಿ ನಡೆದಿತ್ತು. ಆಮಂತ್ರಣ ಪತ್ರದಲ್ಲಿ ' ಶಕುಂತಲಾ ವೆಡ್ಸ್ ಬಾಲಕೃಷ್ಣ' ಎಂದು ಪೂರ್ತಿ ಹೆಸರನ್ನೇ ಬರೆಸಿದ್ದರು. ಮೊದಲಿಗೆ ಆ ಹೆಸರು ತನ್ನದೇ ಎಂದು ಅರಗಿಸಿಕೊಳ್ಳಲು ಇರುಸು ಮುರುಸಾಯಿತು. ಮದುವೆಯಾದ ಬಳಿಕ ಹನ್ನೊಂದು ತಿಂಗಳು ಬಾಲನ ಅತ್ತೆ ಮನೆಯಲ್ಲಿಯೇ ಬಾಡಿಗೆಗೆ ಇದ್ದರು. ನಂತರ ಕಲ್ಯಾಣದಲ್ಲಿ ಹತ್ತು x ಹತ್ತರ ಒಂದು ಖೋಲಿ ಮಾಡಿದ್ದ. ಬರುವ ಒಬ್ಬನ ಸಂಬಳದಿಂದ ಸಾಲ ತಿರಿಸೋದು ಕಠಿಣ. ಶಕ್ಕು ಹೆಚ್ಚು ಶಾಲೆ ಕಲಿತವಳಲ್ಲ.  ದೋಸೆ ಮಾಡುವುದೊಂದೇ ಗೊತ್ತಿರುವುದು . ಆದರೆ ಮಸಾಲೆ ದೋಸೆ, ಸೆಟ್ ದೋಸೆ, ಮೈಸೂರು ಮಸಾಲೆ ದೋಸೆ ಇತ್ಯಾದಿಗಳಿಗೆ ಬೇಕಾಗುವ ಅಕ್ಕಿ , ಉದ್ದಿನ ಬೇಳೆ, ಮಸ್ಕಾ, ಮಸಾಲೆಗಳಿಗೆ ಹಣದ ಬಂಡವಾಳ ಹೂಡುವುದು ಕಷ್ಟವೆಂದು ಸುಲಭ ಹಾಗೂ ಹೆಚ್ಚು ಖರ್ಚಿಲ್ಲದ ನಿರ್ದೋಸೆ , ಕೆಂಪು ಚಟ್ನಿಯನ್ನೇ ತನ್ನ ಬ್ರಾಂಡ್ ಎಂದು ಆರಂಭಿಸಿದಳು.


ಮಂಗಳವಾರ ಬೆಳಿಗ್ಗೆ ಬೇಗನೆ ಟಿಟವಾಲದ ಗಣೇಶ ಮಂದಿರಕ್ಕೆ ಹೋಗಿ ಕೈ ಮುಗಿದು ಅಲ್ಲಿಂದ ತಂದ ಅಕ್ಷತೆ ಕಾಳುಗಳನ್ನು ಅಕ್ಕಿಯಲ್ಲಿ ಬೆರೆಸಿ ನುಣ್ಣಗೆ ರುಬ್ಬಿ ಕಾವಲಿಯಲ್ಲಿ ತೆಳು ದೋಸೆ ಬಿಡಿಸಿದಳು. ತಣ್ಣಗಾದ ಬಳಿಕ ಎಲ್ಲಾ ದೋಸೆಗಳ ಮಧ್ಯೆ ಮಧ್ಯೆ ಬಾಳೆ ಎಳೆಯ ಚೂರನ್ನಿಟ್ಟು ಡಬ್ಬಿಯಲ್ಲಿ ತುಂಬಿಸಿ ಬಾಲಕೃಷ್ಣನ ಕೈಯಲ್ಲಿಟ್ಟಳು. ಅವುಗಳನ್ನು ಸೈಕಲಿನಲ್ಲಿ ಕೊಂಡ್ಹೋಗಿ ಸ್ಟೇಷನ್ ಪಕ್ಕದಲ್ಲೇ ಪೇಪರ್ ಪ್ಲೇಟಿನಲ್ಲಿ ಎರಡು ದೋಸೆ ಒಂದು ದೊಡ್ಡ ಚಮಚ ಚಟ್ನಿ ಹಾಕಿ ಕೊಟ್ಟರೆ ಹತ್ತು ರೂಪಾಯಿ ಸಿಗುತಿತ್ತು. ಅಲ್ಲಿದ್ದ ಟ್ಯಾಕ್ಸಿ, ಅಟೋ, ಡ್ರೈವರುಗಳಿಗೆ ಈ ದೋಸೆ ಚಟ್ನಿಯ ರುಚಿ ಹಿಡಿಸಿತು. ಶಕ್ಕುನ ದೋಸೆ ವ್ಯಾಪಾರ ಒಂದು ಹಂತಕ್ಕೆ ಬಂತು. ಬಾಲ ಬೆಳಿಗ್ಗಿನ ದೋಸೆ ಮಾರಿ ಕೆಲಸಕ್ಕೆ ಹೋಗುತ್ತಿದ್ದನು. ಶಕ್ಕು ರುಬ್ಬುವ ಕಲ್ಲಿನಿಂದ ಶ್ರಮ ಜಾಸ್ತಿನೇ ಎಂದು ಎರಡು ಮಿಕ್ಸರ್ ಖರೀದಿಸಿದಳು. ದೋಸೆ ವ್ಯಾಪಾರ ಜೋರು ಹಿಡಿಯಿತು. ಕೈಯಲ್ಲಿ ಹಣವೂ ನಿಲ್ಲುವಂತಾಯಿತು.


ಕಾಲ ಮಾತ್ರ ಒಂದೇ ರೀತಿ ನಿಲ್ಲಲಿಲ್ಲ. ಬಾಲನಿಗೆ ಸಕ್ಕರೆ ಕಾಯಿಲೆ ಬಂದದ್ದು ಗೊತ್ತಾಗದೆ ಒಂದು ದಿನ ರಸ್ತೆಯ ಮಧ್ಯ ಪ್ರಜ್ಞೆ ತಪ್ಪಿಬಿದ್ದನು. ಆಗ ಈ ಸುರೇಶನೇ ತನ್ನ ಆಟೋದಲ್ಲಿ ಕರೆದೊಯ್ದು ಆಸ್ಪತ್ರೆಗೆ ದಾಖಾಲಾಯಿಸಿದ್ದ . ಕೆಲಸದ ಮಧ್ಯ ಕಟ್ಟಿಂಗ್ ಚಹಾ ಕುಡಿಯುವ ಚಟ ಬಾಲನಿಗೆ . ದಿನಕ್ಕೆ ಸುಮಾರು ಏಳೆಂಟು ಚಹಾ ಆಗುತಿತ್ತು. ಅಷ್ಟೇ ಅಲ್ಲ ಸಿಹಿ ಅಂದ್ರೆ ಶಕ್ಕುನಿಂದ ಬೈಸಿಕೊಂಡಾದರೂ ಸ್ವಲ್ಪ ಹೆಚ್ಛೆ ತಿನ್ನುತ್ತಿದ್ದನು. ಅದರ ಫಲವಾಗಿ ಅವನ ದೃಷ್ಟಿ  ಕ್ಷೀಣಿಸಿತ್ತು, ಬಿದ್ದ ಗಾಯ ವಾಸಿಯಾಗದೆ ಬೆರಳು ಕಡಿಯುವಂತಾಯಿತು. 


“ ದೇವರು ಒಳ್ಳೆಯವರಿಗೆಯೇ ಇಂತಹ ಶಿಕ್ಷೆ ಕೊಡ್ತಾನೆ. ಪರವಾ ಮಾಡ್ಬೇಡಿ ಶಕ್ಕಕ್ಕ, ನಾನಿದ್ದೇನಲ್ಲ ನೀವು ದೋಸೆ ಮಾಡಿ ಕೊಡಿ. ನಾನು ಹೀಗೆ ಚಿಟಕಿ ಹೊಡೆಯುವುದರೊಳಗೆ ಮಾರಿ ಬರ್ತೇನೆ ನೋಡಿ” ಎಂದಿದ್ದು ಇದೇ ಸುರೇಶ. ಅಂತೂ ಹೇಳಿದಂತೆ ಮಾಡಿದನಪ್ಪ. ಗಿರಾಕಿಗಳ ಸಂಖ್ಯೆಯೂ ಹೆಚ್ಚಾದವು. ದೋಸೆಗಳ ಬೇಡಿಕೆಯೂ ಹೆಚ್ಚಾದವು. ನಡು ನಡುವೆ ಬೇರೆ ಬೇರೆ ನಮೂನೆಯ ದೋಸೆಗಳನ್ನೂ ಮಾಡಲು ಒತ್ತಾಯಿಸಿದ. ಆದರೆ ಪೂರ್ತಿ ವ್ಯಾಪಾರದಲ್ಲೇ ಹಾಸು ಹೊಕ್ಕರೆ ಮತ್ತೆ ಬಾಲನತ್ತ ಗಮನ ಕೊಡಲಾಗದೆಂದು , ಸದ್ಯಕ್ಕೆ ಇಷ್ಟೆ ಸಾಕೆಂದಿದ್ದಳು ಶಕ್ಕು .

ಇವುಗಳ ಮದ್ಯ ಅವಳಿಗೀಗ ಮಗುವಿನ ಆಸೆ. ಬಾಲ ಇದಕ್ಕೆ ರಾಜಿಯಾಗಲಿಲ್ಲ. ತನ್ನ ಬದುಕಿನ ಬಗ್ಗೆ ಒಂದು ರೀತಿಯ ಜಿಗುಪ್ಸೆ ಆವರಿಸಿದ ಏಕಾಂತ ದಿನೇ ದಿನೇ ಅವನನ್ನು ಒಳಗೊಳಗೆ ಕೊರೆಯುತ್ತಿತ್ತು. ಒಂದೆರಡು ಬಾರಿ ಜೀವಕ್ಕೆ ಹಾನಿ ಮಾಡುವ ನಿರ್ಧಾರ ಶಕ್ಕುವಿನಿಂದಾಗಿ ವಿಫಲವಾಗಿತ್ತು. ಈ ವಿಷಯದಿಂದ ಅವಳೂ ತೀರ ನೊಂದು ಅನಾಥ ಮಗುವೊಂದನ್ನು ಪಡೆಯುವ ಬಯಕೆಯನ್ನು ಬಾಲನಲ್ಲಿ ಹಂಚಿಕೊಂಡಳು. ತನ್ನ ದುಃಖದಲ್ಲಿ ಒಳ್ಳೆಯದ್ಯಾವುದು, ಕೆಟ್ಟದ್ಯಾವುದ್ದೆಂದು ತಿಳಿಯದ ಪರಿಸ್ಥಿತಿ ಅವನದ್ದು. ಆದರೆ ತನ್ನ ಪತ್ನಿಗೆ ಸಮಾಧಾನ, ಸಂತೋಷ ಸಿಗುವುದಾದರೆ, ಸರಿ ಎಂದು ಒಪ್ಪಿಕೊಂಡ. ಈ ಸುದ್ದಿ ಸುರೇಶನ ಕಿವಿಗೆ ತಲುಪಿದಷ್ಟೇ,

“ ಅಕ್ಕಾ, ಅನಾಥ ಮಗುವನ್ನು ತರುವುದೆಂದರೆ, ಗತಿ ಗೋತ್ರ ಗೊತ್ತಿಲ್ಲದ ಜೀವವನ್ನು ತರುವುದು. ಅದು ಬೆಳೆದು ಮುಂದೆ ನಮಗೆ ಎರಡು ಬಗೆಯುವ ಪರಿಸ್ಥಿತಿ ನೀನಾಗಿಯೇ ತಂದುಕೊಳ್ಳುವುದ್ಯಾಕೆ? ನಿಲ್ಲು ನಾನೇ ಏನಾದ್ರೂ ಮಂಡೆ ಖರ್ಚು ಮಾಡ್ತೇನೆ. ಎಂದು ತಲೆಗೆ ಬೆರಳ ಚೆಂಡೆಬಾರಿಸುತ್ತಾ ಗಾಢ ಯೋಚನೆಯಲ್ಲಿ ಮುಳುಗೆದ್ದು, “ ಹ್ಮ್, ನನ್ನ ಗೆಳೆಯ ಅಶೋಕ, ಅವನ ಅಕ್ಕ- ಭಾವ ರೋಡ್ ಅಪಘಾತದಲ್ಲಿ ತೀರಿಕೊಂಡಿದ್ದಾರೆ. . ಅವರಿಗೊಬ್ಬಳು ಮಗಳಿದ್ದಾಳೆ. ಅಶೋಕನಿಗೂ ಮೂರೂ ಮಕ್ಕಳು. ಅವರೆಲ್ಲರ ಓದು ಬರಹದ ಖರ್ಚಿನೊಂದಿಗೆ ಇವಳ ಖರ್ಚು ನಿಭಾಯಿಸುವುದು ಕಷ್ಟವೆಂದು ನನಗೆ ಪದೇ ಪದೇ ಹೇಳುತ್ತಿರುತ್ತಾನೆ. ನೀನು ಹೇಳುವುದಾದರೆ... ಎಂದು ರಾಗ ಎಳೆಯುತ್ತಿದ್ದಂತೆ, 

 ಶಕ್ಕು ಉತ್ಸಾಹದಿಂದ ತಟ್ಟನೆ ಸಮ್ಮತಿ ಕೊಟ್ಟು ಬಿಟ್ಟಳು. ಸುರೇಶ ಅಂದೇ ಸಂಜೆ ರಾಗಿಣಿ, ಅಶೋಕನನ್ನು ಕರೆತಂದಿದ್ದ. ಆಕೆಯ ಮುಖ ನೋಡುತ್ತಿದಂತೆ ಶಕ್ಕುವಿನ ತಾಯ್ತನ ಜಾಗ್ರತವಾಯ್ತು. ಬಾಲನಿಗೂ ರಾಗಿಣಿಯನ್ನು ತೋರಿಸುತ್ತಾ, ಮಾತಾಡಿಸಿ ಆಕೆಯ ಕೂದಲು ನೇವರಿಸಿ ಮುಡಿಗೆ ಹೂವಿಟ್ಟು, ಚಾಕಲೇಟು ಮತ್ತೆ ಒಂದಿಷ್ಟು ದೋಸೆ ಚಟ್ನಿ ಕಟ್ಟಿ ಕಳಿಸಿದ್ದಳು. . ಹೋಗುವಾಗ ಸುರೇಶನನ್ನು ಕರೆದು, ಆದಷ್ಟು ಬೇಗ ಈ ಮಗು ನಮ್ಮ ಮನೆ ಸೇರುವಂತಾಗಲಿ. ಇನ್ನೇನು ಕಾಗದ ಪತ್ರ ಮಾಡುವುದಾದರೂ ತನ್ನಿ. 

“ ಫಿಕರ್ ಮಾಡ್ಬೇಡಿ ಶಕ್ಕಕ್ಕ, ನಾನಿದ್ದೇನಲ್ಲ ಎಲ್ಲಾ ಮುಗಿಸಿ ಒಂದೆರಡು ದಿನಗಳಲ್ಲಿಯೇ ರಾಗಿಣಿ ನಿಮ್ಮ ಮನೆ ಮಗಳಾಗುವಂತೆ ಮಾಡುವೆ. “ ಎಂದಿದ್ದ .

ನಾಲ್ಕು ದಿನಗಳ ಬಳಿಕ ರಾಗಿಣಿಯ ಹುಟ್ಟುಹಬ್ಬವೆಂದು, ಅಂದೇ ಅವಳನ್ನು ಮನೆಗೆ ಸೇರಿಸಿ ಕೊಂಡಳು. ಶಕ್ಕು ಅತೀ ಮುದ್ದಿನಿಂದ ಮೊದಲು ಅವಳನ್ನು ಯಾವುದೇ ಕೆಲಸ ಮಾಡಲು ಬಿಡದೆ, ಬೇಕು ಬೇಕಾದದ್ದನು ತಂದು ಕೊಟ್ಟಳು. ಕೆಲಸದ ಒತ್ತಡದಿಂದ ತಾನೆಷ್ಟೆ ಒದ್ದಾಡಿದರೂ ರಾಗಿಣಿ ಎದ್ದು ಕೆಲಸಕ್ಕೆ ಕೈ ಜೋಡಿಸಲಿ ನೋಡುವ. ! ಹ್ಮೂ …ಹ್ಮೂ… ಇಲ್ಲ. ಅವಳದ್ದೇ ತಿಂದ ಬಟ್ಟಲು ತೊಳೆದಿಡುವ ದಾತರಿ ಅವಳಿಗಿಲ್ಲ. ಬಾಲ “ , ಅವಳಿನ್ನೂ ಸಣ್ಣವಳು ಮುಂದೆ ಮಾಡಿಯಾಳು ಎಂದು ಸಮಾಧಾನ ಹೇಳುತ್ತಾ ಇದ್ದ. 

ಹೌದಲ್ವ ಈಗ ಒಂಬತ್ತನೇ ಕ್ಲಾಸಂತೆ. ನೋಡಿದರೆ, ಒಂದೆರಡು ವರ್ಷ ಹೆಚ್ಚೇ ಕಂಡಿತ್ತು. ಈಗಿನ ಮಕ್ಕಳ ಬಗ್ಗೆ ಏನೂ ಹೇಳಲಾಗದು. ಎಲ್ಲಾ ಪಡೆದುಕೊಂಡು ಬಂದ ಭಾಗ್ಯ, ರಾಗಿಣಿ ಕೆಲಸ ಮಾಡದಿದ್ದರೂ ಅಷ್ಟೇನೂ ಹಾನಿಯಲ್ಲ. ಮಾತು ಮಾತಿಗೆ ಸಿಡಿಮಿಡಿಗೊಳ್ಳುವ ಸ್ವಭಾವವನ್ನು ಶಕ್ಕುವಿಂದ ತಡೆದುಕೊಳ್ಳಲಾಗಲಿಲ್ಲ. ಹಾಗಲ್ಲ ಹೀಗೆ ಎಂದು ಬುದ್ದಿ ಮಾತು ಹೇಳಿದರೂ, “ ಅಮ್ಮಣ್ಣಿ ನಾನೇನು ದುಂಬಾಲು ಬಿದ್ದು ಈ ಮನೆಗೆ ಬಂದವಳಲ್ಲ. ನಾನು ನೆಮ್ಮದಿಯಿಂದಿರುವುದನ್ನು ನೋಡಲಾಗದಿದ್ದರೆ ಮಾಮನ ಮನೆಗೆ ಕಳಿಸಿ ಬಿಡಿ . ಎಂದು ಪೆಟ್ಟು ಒಂದು ತುಂಡು ಎರಡೆನ್ನುವಂತೆ ಅವಳ ಉತ್ತರ. ಶಕ್ಕು ಮಾತು ಬೆಳೆಸಿದರೆ ಬಾಲನಿಗೆ ಬೇಜಾರಾಗಬಹುದೆಂದು ಉಕ್ಕಿ ಬರುತ್ತಿದ್ದ ಸಿಟ್ಟನ್ನು ನುಂಗಿ ಸುಮ್ಮನಾಗುತ್ತಿದ್ದಳು .


ರಾಗಿಣಿಗೆ ತಿನ್ನಲು ದಿನಾ ಬಗೆ ಬಣ್ಣದ ತಿಂಡಿ ಬೇಕು. ಮನೆಯಲ್ಲಿ ದೋಸೆ ಇದ್ದರೂ ಪಕ್ಕದ ಹೋಟೆಲಿನಿಂದ ವಡಾ ಪಾವ್, ಸಮೋಸ, ಚೈನೀಸ್ ಭೇಲ್ ತಂದು ತಿನ್ನುವ ಚಟ. ಸುರೇಶನಲ್ಲಿ ಈ ವಿಷಯ ಹೇಳಿದಾಗ, ಪಾಪ , ಇನ್ನೂ ತಂದೆ ತಾಯಿಯನ್ನು ಕಳೆದುಕೊಂಡ ಆಘಾತ. ಸ್ವಲ್ಪ ಅರ್ಥಮಾಡಿಕೊ. ಎಲ್ಲಾ ಸರಿಯಾಗುತ್ತದೆ. ಎಂದು ಬಾಯಿ ಮುಚ್ಚಿಸುತ್ತಿದ್ದ.

*****

ದೋಸೆಯ ಜಿಗುಟುತನದಿಂದ ಸೋತ ಶಕ್ಕು ಹೊಸ ಕಾವಲಿ ತರಲೆಂದು ಮಾರ್ಕೆಟಿಗೆ ಹೊರಟ್ಟಿದ್ದಳು. ಬಾಲನಲ್ಲಿ, " ನನಗೆ ಬರಲು ಲೇಟಾಗಬಹುದು. ರಾಗಿಣಿ ಬಂದರೆ ಒಟ್ಟಿಗೆ ಊಟ ಮಾಡಿ" ಎಂದು ಬಾಗಿಲನ್ನು ಎದುರೆಳೆದು ಹೋದಳು. ಹೊರಗೆ ನೋಡಿದ್ರೆ ಸರಿಯಾಗಿ ಕಣ್ತೆರೆಯಲಾಗದ ಉರಿ ಬಿಸಿಲು . ಎರಡು ಕಾವಲಿಗಳನ್ನು ಚೀಲದಲ್ಲಿ ಹಾಕಿ ರಸ್ತೆ ದಾಟಲು ಹವಣಿಸುತ್ತಿರುವ ಶಕ್ಕು ನೋಡಿದ್ದೇನು? ರಿಕ್ಷಾ ಸುರೇಶನದ್ದು... ಹಿಂದೆ ಕುಳಿತವಳು ರಾಗಿಣಿ. ಛೇ ತಾನು ಸರಿ ನೋಡಿರಲಿಕ್ಕಿಲ್ಲ ಎಂದು ತನ್ನನ್ನು ತಾನೇ ಸಮಾಧಾನಿಸಿ ಮನೆಗೆ ಬಂದಳು.


ಅಲ್ಲಿ ನೋಡಿದಾಗ ಎಲ್ಲಾ ಕೊಂಡಿಗಳು ಒಂದಕ್ಕೆ ಒಂದು ಜೋಡಿಕೊಂಡು ವಿಷಯ ಸ್ಪಷ್ಟವಾಯಿತು. ರಾಗಿಣಿ ಶಾಲೆಯಿಂದ ಬಂದವಳು ಶಕ್ಕುವಿನ ಕಪಾಟಿನಿಂದ ಅವಳ ಒಡವೆ , ಹಣ ಎಲ್ಲವನ್ನು ಚೀಲದಲ್ಲಿ ತುಂಬಿಸಿ ಹೊರಟಿದ್ದಳು . ಬಾಲ ಎಲ್ಲಿಗೆ ಎಂದು ಕೇಳಲು, “ ಟೀಚರ್, ಪ್ರೊಜೆಕ್ಟ್ ತೋರಿಸಲೆಂದು ವಾಪಸ್ಸ್ ಕರೆದಿದ್ದಾರೆಂದು ಸುಳ್ಳೇ ಹೇಳಿ ಹೊರಬಿದ್ದಳು.


ಇದನ್ನೆಲಾ ಕೇಳಿ ನೋಡಿ, “ ಅಯ್ಯೋ ನಾನ್ಯಾಕೆ ಬೀದಿಯಲ್ಲಿದ್ದ ಮಾರಿಯನ್ನು ಮನೆಗೆ ತಂದೆ ? ಆ ಲಫಂಗ ಸುರೇಶಾ ... ಇದೆಲ್ಲಾ ಅವನದ್ದೇ ಕುತಂತ್ರ.  ನನ್ನ ಮನಸ್ಸನ್ನು ಘಾಸಿ ಗೊಳಿಸಿದ್ದು ಸಾಲದು ಎನ್ನುವುದಕ್ಕೆ ಇದ್ದ ಚೂರು ಪಾರು ಒಡವೆಯನ್ನೂ ಬಿಡಲಿಲ್ಲ. ಈ ಜನ್ಮದಲ್ಲಿ ಅವನ ಉದ್ದಾರವಾಗಲಿಕ್ಕಿಲ್ಲ . ಪಕ್ಕದ ಖೋಲಿಯ ಕೌಶಲ್ಯ ವೈನಿ , ಅವರನ್ನು ಸುಲಭವಾಗಿ ಬಿಡ್ಬೇಡಿ. ಪೊಲೀಸ್ ಕಂಪ್ಲೇಂಟ್ ಕೊಡಿ ಅಂದಿದ್ದಳು.

" ಪೋಲಿಸ್ ಕಂಪ್ಲೇಂಟ್ ನೀಡಲು ಏನೂ ಪುರಾವೆಗಳಿಲ್ಲ. ಇನ್ನು ಅಶೋಕ ಎಲ್ಲಿಯವ? ಎಲ್ಲಿರುತ್ತಾನೆಂದು ವಿಚಾರಣೆ ಮಾಡಿ ರಾಗಿಣಿಯನ್ನು ಮನೆ ಸೇರಿಸಿಕೊ" ಎಂದು ಬಾಲ ಎಷ್ಟು ಹೇಳಿದರೂ ಭಾವನೆಯ ಪ್ರವಾಹದಲ್ಲಿ ಈಜಾಡುತ್ತಿರುವ ಶಕ್ಕುವಿಗೆ ಅದೆಲ್ಲಾ ಆಗ ಅಮುಖ್ಯವೆನಿಸಿತ್ತು. 


ಎರಡು ವಾರ ಕಳೆದರು ಅವರ ಏನು ಸುದ್ದಿಯಿಲ್ಲ. ಇತ್ತ ಕೆಲವು ದಿನಗಳಿಂದ ದೋಸೆಯ ಕಾವಲಿ ಬಿಸಿಯೇರಿಲ್ಲ. ಚಟ್ನಿಯೂ ಬಣ್ಣ ಕಳೆದಂತೆ, ಶಕ್ಕುವಿಗೆ ಯಾವುದರಲ್ಲಿಯೂ ಮನಸ್ಸಿಲ್ಲ. ಮತ್ತೆ ಮತ್ತೆ ಕಳೆದು ಹೋದ ಸಂಗತಿಗಳೇ ಉಪಟಳಗಳಂತೆ ಕಾಡುತ್ತಿದ್ದವು . ಏನು ಮಾಡಲು ಹೋದರೂ ಕೈ ನಡುಗುತಿತ್ತು. ಅಂದು ಬಾಲನ ಹೆಗಲಿಗೆ ಹೆಗಲೊಡ್ಡಿ ಬಿಕ್ಕಿ ಬಿಕ್ಕಿ ಅತ್ತಳು. ಅವನದ್ದು ಮೌನದ ಸಮರ. ಅದೆಷ್ಟೋ ನೋವುಗಳ ಬಂಡೆಗಳನ್ನು ಎದೆಯ ಮೇಲಿಟ್ಟು ಮೌನದ ಅಯುಧದಿಂದಲೇ ಪುಡಿ ಪುಡಿ ಮಾಡಿದ್ದ. ಅವನೆದೆ ಈಗ ಗಟ್ಟಿಯಾಗಿದೆ.


ಶಕ್ಕು ಏಳು, ಎದ್ದೇಳು ಬಾ ಇಲ್ಲಿ , ಒಂದು ಗ್ಲಾಸು ಅಕ್ಕಿ ನೆನೆಸಿಡು. ಒಂದು ಗಡಿ ಕಾಯಿ ತುರಿ. ಮೂರ್ನಾಲ್ಕು ಕೆಂಪು ಮೆಣಸು, ಜೀರಿಗೆ, ಹುರಿಡಿದು . ಶುಂಠಿ ಬೆಳ್ಳುಳ್ಳಿ , ಒಂದಿಷ್ಟು ಹುಣಿಸೆ ಹಣ್ಣು ಬೇರೆ ಬೇರೆಯಾಗಿಡು. “ ಎಂದಾಗ ಶಕ್ಕುವಿಗೆ ಎಲ್ಲಿಲ್ಲದ ಆಶ್ಚರ್ಯ. ಇಷ್ಟು ಸಮಯದಿಂದ ತಾನು ಮಾಡಿಕೊಟ್ಟದ್ದನ್ನು ಮಾರಿ ಬಂದವನು , ತಿಂದವನು. ಯಾವತ್ತೂ ಆಡುಗೆ ಕೋಣೆಗೆ ಬಂದವನೇ ಅಲ್ಲ. ಏನೂ ಮಾಡಲೂ ಧೈರ್ಯ ಬರಲಿಲ್ಲ.


“ ಶಕ್ಕು ಬಾ ನಾನಿದ್ದೇನೆ. ದೋಸೆ ಮಾಡು ನೋಡೋಣ “ ಎಂದಾಗ ಅವನನ್ನೇ ಅನುಕರಣೆ ಮಾಡಿದಳು. ಹ್ಮೂ ಇನ್ನು ರಾಗಿಣಿಯ ಬಿರುವಿನಲ್ಲಿ ನೇಲ್ ಪೇಂಟ್ ಇದ್ದರೆ ತಗೊಂಡು ಬಾ ಅಂದಾಗ ಬೆಚ್ಚಿ ಬೆರಗಾದಳು . ಆದರೂ ಮರು ಮಾತಾನಾಡದೆ ಬೆರಳುಗಳನ್ನು ಬಿಡಿಸಿ ಸಾವಕಾಶವಾಗಿ ಬಣ್ಣ ಬಳಿದು ಒಣಗಲು ಬಿಟ್ಟಳು. ಬಳಿಕ ಅಡುಗೆ ಟೇಬಲಿನ ಮೇಲೆ ಎಲ್ಲಾ ಸಾಮಾನುಗಳನಿಟ್ಟು ನಿರ್ದೋಸೆ ಮತ್ತು ಕೆಂಪು ಚಟ್ನಿ ಮಾಡುವ ಸುಲಭ ವಿಧಾನ. ಎಂದು ಬಾಲ ಹೇಳುತ್ತಾ ಹೋದ. ಅವನ ಧ್ವನಿಗೆ ಶಕ್ಕುವಿನ ಶ್ರಮ ಬೆರೆಯುತ್ತಾ ಮೊಬೈಲಲ್ಲಿ ಸೆರೆಯಾಯಿತು. ಅದನ್ನೇ ಎಡಿಟ್ ಮಾಡಿ, ಯು ಟ್ಯೂಬ್ನಲ್ಲಿ “ ಕೆಂಪು ಚಟ್ನಿ” ಎಂದು ಪೋಸ್ಟ್ ಮಾಡಿದನು. ದಿನಾ ಬೆಳಿಗ್ಗೆ ಅದರ ವ್ಯೂವ್ಸ್ ನೋಡಿ ಲೆಕ್ಕ ಹಾಕುತ್ತಾ ಹೋದ. ಅಂದು ಸಂಜೆ ಮೊಬೈಲ್ ನೋಡುತ್ತಿದ್ದಂತೆ “ ಅಭಿನಂದನೆಗಳು ನಿಮ್ಮ ಹತ್ತು ಸಾವಿರ ಚಂದದಾರರಾಗಿದ್ದಾರೆ ”. ಎಂದು ಕಾಮೆಂಟ್ಸ್ ನೋಟಿಫಿಕೇಷನ್ ನೋಡಿ ಬಾಲನಿಗೆ ಎಲ್ಲಿಲ್ಲದ ಸಂತೋಷ. ಆಗಲೇ ಮಾನಿಟೈಜ್ ಡಿಟೇಲ್ ಮೇಲ್ ಸಹ ಬಂತು . ದೋಸೆಯ ಬುಕ್ಕಿಂಗ್ ಎಲ್ಲ ಪೋನಿನಿಂದಲೇ ಆಗುತ್ತಿತ್ತು. ಬ್ಯಾಂಕ್ ಅಕೌಂಟ್ ಡೀಟೇಲ್ ಕಳಿಸಿ ಎಡ್ವಾನ್ಸ್ ಬಂದ ಬಳಿಕ ಡೆಲಿವರಿ .


ಕೆಂಪು ಚಟ್ನಿ ಈಗ ದೇಶವಿದೇಶಗಳಲ್ಲಿ ಹೆಸರು ಪಡೆದಿದೆ. ಶಕ್ಕುವಿಗೆ ಈಗ ಮೊದಲಿನದ್ದೆಲ್ಲ ಯೋಚಿಸಲು ಪುರುಸೊತ್ತು ಎಲ್ಲಿ? ಇವತ್ತು ಚಟ್ನಿಯ ನೂರ ಒಂದನೇ ಬಗೆ ಅಪ್ಲೋಡ್ ಆಗಲು ಸಿದ್ಧವಾಗಿದೆ.

                                               Rate this content
Log in

Similar kannada story from Tragedy