ಕರಗಿದ್ದು ಕನಸಾ ? ( Dreams that melted )
ಕರಗಿದ್ದು ಕನಸಾ ? ( Dreams that melted )
ಕನಸುಗಳ ಬೆನ್ನತ್ತಿ ನಾನು ಮುಂಬಯಿಯ 'ಚರ್ಚ್ ಗೇಟ್ ಲಾ..ಕಾಲೇಜಿನಲ್ಲಿ' ಎಲ್.ಎಲ್.ಬಿ ದಾಖಲೆ ಪಡೆದಿದ್ದೆ. ಅಷ್ಟರವರೆಗೂ ನನಗೆ ಮನೆಯರ ಬೆರಳಿಡಿದೆ.. ಟ್ರೈನ್ ಪ್ರಯಾಣ ಮಾಡಿ ಗೊತ್ತು.
ಆ ಕಾಲೇಜಿನಲ್ಲಿ ದಾಖಲೆ ಪಡೆದ್ದದ್ದರಿಂದಾಗಿ ಮುಂಬಯಿ ಫಾಸ್ಟ್ ಲೋಕಲಿನ ಪ್ರಯಾಣ ಹೊಸ ಅನುಭವ. ಸಣ್ಣವಳಾಗಿದ್ದರಿಂದ ರೈಲು ನಿಲ್ದಾಣ ಒಂದು ವಿಸ್ಮಯದ ಜಗದಂತೆ ಕಾಣಿಸುತ್ತಿತ್ತು ಕೂಲಿ,ಚಹಾ ತಿಂಡಿ ಮಾರುವವರು ಸಣ್ಣದಾದ ಮಾರುಕಟ್ಟೆಯನ್ನು ಒಂದು ಬೋಗಿಯಿಂದ ಇನ್ನೊಂದು ಬೋಗಿಗೆ ಸರಬರಾಜು ಮಾಡುವವರು, ದುತ್ತನೆ ಎದುರಾಗಿ ಟಿಕೀಟ್ ತೋರಿಸಲು ಕೋರ್ಟ್ ಮಾರ್ಷಲ್ ಮಾಡುವ ರೇಲ್ವೆ ಟಿ.ಸಿ.ಗಳು," ಎಷ್ಟೇ ಸಲ ಹೇಳಿದ್ದನ್ನೇ ಹೇಳಿದರೂ ದಣಿಯದೇ ಅನುರಣಿಸುವ ಇನಿದಾದ ಧ್ವನಿ. ಮತ್ತು ನಿಚ್ಚಳ ಮೌನದಲ್ಲಿ ಲೆಕ್ಕವಿಲ್ಲದ್ದು.. ಕಥೆಗಳೊಂದಿಗೆ ಏರುವ ಇಳಿಯುವ ಅನಾಮಿಕ ಚಹರೆಗಳು.
ಕಾಲೇಜಿಗೆ ಹೊರಡುತ್ತಿದಂತೆ, ಅಮ್ಮ ತನ್ನ ರೆಕಾರ್ಡೆಡ್ ಮಂತ್ರದೊಂದಿಗೆ ರೆಡಿಯಾಗಿರುತ್ತಿದ್ದಳು,“ಕುಸುಮಾ, ಟ್ರೇನ್ ಬಾಗಿಲಿನತ್ತ ನಿಲ್ಬೇಡ, ರಷ್ ಇದ್ರೆ ಟ್ರೈನ್ ಬಿಟ್ಬಿಡು, ಓಡೋಡಿ ಟ್ರೈನ್ ಹಿಡಿಯುವುದಾಗಲಿ ಇಳಿಯುದಾಗಲಿ ಬೇಡ". ನಿಜವೆಂದರೆ ಈ..ಟಿ.ವಿ. ನ್ಯೂಸುಗಳಲ್ಲಿ ಹಾಗೂ ವೃತ್ತಪತ್ರಿಕೆಗಳಲ್ಲಿ ದಿನಾ ಅಪಘಾತದ ಸುದ್ದಿ ನೋಡಿ, ಕೇಳಿ ಅವಳಲ್ಲಿ ಒಂದು ಅನೂಹ್ಯ ಭಯ ಆವರಿಸಿಕೊಂಡಿತ್ತು. ಮೊದಲಂತು ಆಕೆ, “ ಟ್ರೇನ್ ಪ್ರಯಾಣವಾದರೆ, ಇಷ್ಟು ಕಲಿತದ್ದೇ ಸಾಕೆಂದು ದಬಾಯಿಸುತ್ತಿದ್ದಳು. ಆಗ ಅಪ್ಪ ಮಧ್ಯೆ ಬಾಯಿ ಹಾಕಿ, “ ನಿನ್ನ ಮಗಳೊಬ್ಬಳೇ ಪ್ರಯಾಣ ಮಾಡೋದಲ್ಲ ಮಾರಾಯತಿ. ಹೋಗಲಿ ಬಿಡು” ಎಂದು ನನ್ನ ಪರವಹಿಸಿದ್ದರು. ಅಂತೂ ಕಾಲೀಜಿನ ವಾರ್ಷಿಕ ಪರೀಕ್ಷೆಯೂ ಮುಗಿಯಿತು. ರಜೆಯ ಬಳಿಕ ಮತ್ತೆ ಕಾಲೇಜು ಆರಂಭವಾಯಿತು. ಎಲ್ಲವೂ ಯಾಂತ್ರಿಕವಾಗಿ ನಡೆಯುತ್ತಿತ್ತು. ಡಿಸೆಂಬರ್ ತಿಂಗಳ ಚಳಿಯನ್ನೂ ಸೀಳುತ್ತಾ ಕಾಲೇಜಿಗೆ ಹೋಗುವುದೂ ನಮಗೆ ಒಂದು ರೀತಿಯ ಚಾಲೆಂಜು . ಆಗ ರಾಮ ಮಂದಿರ ಬಾಬರಿ ಮಸೀದಿಯ ಸುದ್ದಿ ಇನ್ನೂ ಮಾಧ್ಯಮಗಳಲ್ಲಿಯೇ ಕಾವೇರುತ್ತಿದ್ದವು .! ಅವು ಇಷ್ಟು ವೇಗದಿಂದ ನಮ್ಮ ಶಹರ, ನಮ್ಮ ಬೀದಿ, ನಮ್ಮ ವಠಾರದವರೆಗೂ ನುಸುಳಿ ಬರುವುದೆಂದು ಊಹಿಸಿರಲಿಲ್ಲ .
ಅಂದು ಕಾಲೇಜಿನಿಂದ ಮನೆಗೆ ಬರುತ್ತಿದಂತೆ ದಾದರ್ ಸ್ಟೇಷನಿನಲ್ಲಿ ಹಠಾತ್ತನೆ ಗಲಭೆ . ರಥ ಯಾತ್ರೆ ಹಾಗೂ ಬಾಬರಿ ಮಸೀದಿಯನ್ನು ಧ್ವ೦ಸ ಗೊಳಿಸಿದ ಸುದ್ದಿ ದೇಶದಾದ್ಯಂತ ಹಬ್ಬಿತ್ತು. ಅದರಲ್ಲೂ ಎಲ್ಲರ ಮಮತೆಯನ್ನು ತನ್ನೆದೆಯಲ್ಲಿಟ್ಟು ಪೊರೆವ ಮುಂಬಯಿ ಆಯಿಯ ಸೆರಗಿಗೆ ಸಿಡಿದ ಕಿಡಿ ಮೈಯೆಲ್ಲಾ ಬೊಬ್ಬೆಗಳೆಬ್ಬಿಸಿತು. ನಾವಿನ್ನು ಭಯದ ಅಂಚಿನಲ್ಲಿದ್ದು ಚರ್ಚ್ಗೇಟಿನಿಂದ ದಾದರಿನವರೆಗೂ ಬಂದೆವು. ಅಲ್ಲಲ್ಲಿ ಕಲ್ಲೆಸೆತಗಳ ತುಂಡು ಸುದ್ದಿಗಳು ಕಿವಿಗೆ ಬಿದ್ದರೂ, ದಾದರ್ ಸ್ಟೇಷನಿನಿಂದ ಬೇರೆ ಪ್ಲಾರ್ಟ್ಫಾರ್ಮ್ ಬದಲಿಸಿದೆವು.
ದಾದರಿನಿಂದ ಹೊರಟ ಟ್ರೇನಿನ ವಿವಶತೆಯನ್ನು ನಾವೂ ಅನುಭವಿಸಿದೆವು. ಕೆಲವೇ ಕ್ಷಣದಲ್ಲಿ ಕಿಡಿಗೇಡಿಗಳು ಟ್ರೇನುಗಳಿಗೆ ಕಲ್ಲು, ಮೊಟ್ಟೆ, ಖಾಲಿ ಬಾಟಲಿ ಅಷ್ಟೇ ಅಲ್ಲ ಮಲ, ಹೊಲಸು ಪದಾರ್ಥಗಳನ್ನು ಪ್ರಯಾಣಿಕರತ್ತ ಎಸೆಯರಾರಂಭಿಸಿದರು. ಬೋಗಿಯಲ್ಲಿದ್ದ ಪಾರ್ಸಿ ಮಹಿಳೆಯರು ನಮ್ಮನ್ನು ಓಲೈಸುತ್ತಾ ಬಾಗಿಲೆಳೆದು ನಮ್ಮೊಳಗೆ ಇಷ್ಟಿಷ್ಟೇ ಧೈರ್ಯವನ್ನು ತುಂಬಿಸಲಾರಂಭಿಸಿದರು . ಒಂದು ಕಡೆಗೆ ಕಿಡಿಗೇಡಿಗಳು ಇನ್ನೊಂದು ಕಡೆ ಇಂತಹ ಬಣ್ಣ ಬಣ್ಣದ ವಸ್ತ್ರದ ಬಿಳಿ ದೇವತೆಗಳನ್ನೂ ದೇವರು ಸೃಷ್ಟಿಸಿದ್ದಾರೆ.
ಎಷ್ಟು ಸಾವರಿಸಿಕೊಂಡರೂ ಶುಷ್ಕ ಭಯದ ಛಾಯೆ ಮನಸ್ಸನ್ನಾವರಿಸಿತ್ತು. ನಮ್ಮ ಟ್ರೇನಿಗೆ ಕುರ್ಲಾದಿಂದ ಘಾಟ್ಕೋಪರ್ ಸ್ಟೇಷನಿನ ಬರಲು ಐದು ತಾಸು ತಗಲಿತು .ಆದ್ರೂ ಯುದ್ಧಭೂಮಿಯ ಗಾಯಗೊಂಡ ಧೀರ ಸೈನಿಕನಂತೆ ನಮ್ಮ ಟ್ರೇನು ಅವರವರ ನಿಲ್ದಾಣದಲ್ಲಿ ತಂದಿಳಿಸಿದ್ದೇ ನೆಮ್ಮದಿ.
ಬಾಗಿಲಲ್ಲೆ ನಿಂತ ಅಮ್ಮ ನನ್ನ ದಾರಿ ಕಾಯುತ್ತಾ ವಿಲವಿಲನೆ ಒದ್ದಾಡುತ್ತಿದ್ದಳು. ನನ್ನನ್ನು ನೋಡಿದಾಕ್ಷಣ ಕಣ್ಣೀರು ತುಂಬಿ ಬಂತು. ಆಕೆಯ ಎದೆ ಡವಗುಟ್ಟುತ್ತಿತ್ತು. ನನ್ನ ನಿಟಿಗೆ ಮುರಿದು, ಮುಷ್ಠಿತುಂಬ ಉಪ್ಪಿನಿಂದ ದೃಷ್ಠಿ ತೆಗೆದಳು..
ನಾನು ಎಂದಿನಂತೆ ಬೆಳಿಗ್ಗೆ ಎದ್ದು ಕಾಲೇಜಿಗೆ ಹೋಗಲು ತಯಾರಾದೆ. ಅಪ್ಪ ಬಂದು, “ ಕಾಲೇಜಿಗೆ ಹೋಗುವುದು ಬೇಡ” ಅಂದರು. ನಾನೂ ಸುಮ್ಮನಾದೆ. ಒಂದು ರೀತಿಯಲ್ಲಿ ಹೋಗದಿರುವುದು ಒಳ್ಳೆಯದೇ ಆಯಿತು. ಸೂರ್ಯ ನೆತ್ತಿಗೇರುತ್ತಿದಂತೆ ಜನರ ಆಕ್ರೋಶವು ಕಿಡಿಗೆ ಗಾಳಿ ಊದಿದ ಬೆಂಕಿಯಾಯಿತು. ಮಧ್ಯಾಹ್ನ ಊಟ ಇನ್ನೂ ಆಗಿರಲಿಲ್ಲ. ಅಡುಗೆ ತಯಾರಾಗಿತ್ತು. ಅಣ್ಣ ಹೊರಗೆ ಹೋಗಿದ್ದರು. ಹೋಗುವುದೇ ಬೇಡವೆಂದು ಎಷ್ಟು ತಡೆದರೂ ಕೇಳಿರಲಿಲ್ಲ. ನಾವೆಲ್ಲಾ ಅವರಿಗಾಗಿಯೇ ಕಾಯುತ್ತಿದ್ದೆವು. ಅಷ್ಟರಲ್ಲಿಯೇ ಅಣ್ಣಾ ಬೆವತು ಹೆದರಿದ್ದ ಮಾತೂ ಬಾರದೆ ತೊದಲುತ್ತಾ, ಅಮ್ಮಾ. ಅಮ್ಮಾ…. ಬರ್ತಿದ್ದಾರೆ
. ಅವ… ಅವರು ಬರ್ತಿದ್ದಾರೆ " ಎಂದು ಒಳಹೊಕ್ಕವನು ಗರ ಬಡಿದವರಂತೆ ನಿಂತಿರುವುದ್ದನ್ನು ನೋಡಿ ವಿಷಯ ಏನೆಂದು ಅರ್ಥವಾಗಲಿಲ್ಲ. ಹೊರಗೆ ನೋಡುತ್ತಿದ್ದಂತೆ ಜನರ ಹಿಂಡೇ ಕೈಯಲಿ ಲಾಠಿ, ಕತ್ತಿ, ನಾನ್ ಚಾಕು, ಚೈನುಗಳನ್ನು ಹಿಡಿದು ಕಾಡಲ್ಲಿ ಬೇಟೆಗೆ ಹೊರಟಂತೆ ಬೊಬ್ಬಿಡುವ ಸದ್ದು...ನಮ್ಮ ವಠಾರದಲ್ಲಿ ನಾಲ್ಕು ಬದಿಯಿಂದ ಒಳ ಬರುವ ರಸ್ತೆಗಳಿವೆ. ಅಲ್ಲಲ್ಲಿ ಸಡಿಲಾದ ಚಪ್ಪಡಿಗಳು ಅವರ ನಡಿಗೆಗೆ ಗಡಗಡ ನಡುಗುತ್ತಿದ್ದವು. ಪ್ರತಿಯೊಂದು ಮನೆಗಳ ಬಾಗಿಲುಗಳು ಅದರಾಚೆಯ ಭಯವನ್ನು ಕಾಯ್ದಿಡಲು ಎಷ್ಟು ಪ್ರಯತ್ನಿಸಿದರೂ ಹೊರಗಿರುವ ಅನಾಮಿಕ ಗುಂಪಿನ ಜಾತಿ ಧರ್ಮ ಗೊತ್ತಿರದೇ ಎದೆಬಡಿತ ಮನೆಯ ಸೂರುಗಳನ್ನು ದಾಟಿ ಮುಗಿಲು ಮುಟ್ಟಿತ್ತು . ಅಕ್ಷರಶಃ ಕಣ್ಣು ಕತ್ತಲಾಗುವಂತಹ ದೃಶ್ಯ.
ನಾವೆಲ್ಲಾ ಮನೆಯ ಮಾಳಿಗೆಯಲ್ಲಿ ಅವಿತು ನಡುಗುತ್ತಾ ಸಾವಿರ ದೇವರನಾಮ ಜಪ ಪಠಿಸುತ್ತಿದ್ದೆವು. ಪ್ರತಿಯೊಬ್ಬರ ಕಣ್ಣಲ್ಲಿ ಭಯ ಮತ್ತು ಹತಾಶೆ ಪಗಡೆಯಾಟ ಆಡುತ್ತಿತ್ತು , ಅದೇ ಸಮಯ ನಮ್ಮ ಬಾಗಿಲು ದಡದಡ ಕಂಪಿಸಿತು. ಹೊರಗಿನಿಂದ ..ಮಾಮಿ….ಮಾಮಿ ಬಚಾವ್ ಬಚಾವ್ ... ಎಂದು ಆರ್ತವಾಗಿ ಕೂಗುವುದು ಕೇಳಿಸಿತು. ಆ ದನಿ ಪರಿಚಿತವಾಗಿತ್ತು. ಅಷ್ಟಕ್ಕೇ ಅದು ಬೇರೆ ಯಾರದ್ದು ಅಲ್ಲ ನಮ್ಮ ಮನೆ ಬಿಟ್ಟು ನಾಲ್ಕನೇ ಮನೆಯ ಆಯಿಷಾಭೀದ್ದಾಗಿತ್ತು . ಮೇಲಿನಿಂದಲೇ ಇಣುಕಿ ನೋಡಿದಾಗ ಆಕೆ ತನ್ನ ಗರ್ಭಿಣಿ ಸೊಸೆ, ಮೊಮ್ಮಕ್ಕಳೊಂದಿಗೆ ಜೀವ ಕೈಯಲ್ಲಿಟ್ಟು ಒಳ ಬರಲು ಹಾತೊರೆಯುತ್ತಿದ್ದಳು. ಆಗಲೇ ಅವಳ ಮುಖ ಬಿಳುಚಿಕೊಂಡಿತ್ತು. ಸಾವಿನ ದವಡೆಗೆ ಸಿಕ್ಕಿಕೊಂಡ ನಾವು ಇತರರಿಗೆ ಸಹಾಯವಾಗುವುದಾದರೂ ಹೇಗೆ?, ನಮ್ಮ ಕಷ್ಟದ ದಿನಗಳಲ್ಲಿ ಪರದೇಶದಲ್ಲಿದ್ದ ತನ್ನ ಪತಿಯಲ್ಲಿ ಹೇಳಿ ಎಲ್ಲಾ ರೀತಿಯಲ್ಲಿ ನೆರವಾದವರನ್ನು ಕೈ ಬಿಡೋದು ನ್ಯಾಯವಲ್ಲ ,ಆಗುವುದಾಗಲಿ, ಸತ್ತರೂ ಬದುಕಿದರೂ ಒಟ್ಟಿಗೆ ' ಎಂಬ ದೃಢ ಮನಸ್ಸಿನಿಂದ ಅಪ್ಪ ಅವರನ್ನು ಒಳಕರೆತಂದಿದ್ದ.
ಒಳಬಂದಂತೆ ಸೊಸೆ ಮೂರ್ಛೆಹೋದಳು. ಅವರನ್ನೇ ಬೆನ್ನಟ್ಟಿ ಬಂದವರು ನಮ್ಮ ಬಾಗಿಲು ಬಡಿಯುತ್ತಾ , ಬೋಸಡಿಕೆ ಬಾಹರ್ ನಿಕಲ್ " ಅಸಂಬದ್ದ ಬೈಗುಳಗಳು ಬಾಗಿಲಿಗೆ ಅಪ್ಪಳಿಸಿ ನಮ್ಮೆಲ್ಲರ ಎದೆಗೂ ಗುದ್ದಿದಂತಾಗುತ್ತಿದ್ದವು. ಬಾಗಿಲು ತೆರೆಯದಿರಲು ರೊಚ್ಚಿಗೆದ್ದ ಕಿಡಿಗೇಡಿಗಳು ಪಕ್ಕದಲ್ಲಿದ್ದ ದೊಡ್ಡದಾದ ಕಲ್ಲೊಂದನ್ನು ಎತ್ತಿ ಬಾಗಿಲು ಒಡೆಯಲು ಸಜ್ಜಾದರು. ಅಪ್ಪ ಅಮ್ಮ ಗ್ಯಾಲರಿಯಿಂದಲೇ ಕೈ ಜೋಡಿಸುತ್ತಾ ದೀನವಾಗಿ “ದಾದಾ, ತೋಡು ನಕಾಹೋ. ಅಮ್ಹಿ ಪನ್ ತುಮಚೆಚ್ ಲೋಕ್” ( ಮುರಿಯಬೇಡಿ ಅಣ್ಣಾ, ನಾವೂ ನಿಮ್ಮವರೇ) " ಎಂದು ದೀನವಾಗಿ ಬೇಡಿಕೊಂಡರು. ಅಲ್ಲಿಗೆ,ಎತ್ತಿದ ಕಲ್ಲು ಹಾಗೆ ಕೆಳಗೆ ಬಿತ್ತು .” ಚಲೋರೆ ಅಪ್ನೆಹೀ ಲೋಗ್ ಹೈ ಛೋಡೋ” ( ಬನ್ರೋ ನಮ್ದೇ ಜನರು ಮುನ್ನಡೆದರು. ಅಮ್ಮನ ಹಣೆಯ ತುಂಬು ಕುಂಕುಮ, ಕೈಯ ಬಳೆಗಳು ಮುಂಚೂಣಿಯಲ್ಲಿ ನಿಂತು ಸದ್ದು ಮಾಡಿ ಆ ಕ್ಷಣದ ಯುದ್ಧವನ್ನು ಗೆದ್ದಿದ್ದರೂ ,ಅಕ್ಕ ಪಕ್ಕದಲ್ಲಿದ್ದ ಎಷ್ಟೋ ಮನೆಗಳು ತಮ್ಮ ಅಸ್ತಿತ್ವ ಕಳೆದು ಬಟಾಬಯಲಾಗಿ ತನ್ನೊಡೆಯರನ್ನು ಕಾಯುತ್ತಿದ್ದವು. ದಿಕ್ಕು ಪಾಲಾದ ಜನರ ಲೆಕ್ಕ ಹಿಡಿಯುವುದಾದರೂ ಯಾರು?.. ಎಷ್ಟೋ ಜೀವ ಜೀವಂತ ದಹನವಾಗಿದ್ದವು. ತಮ್ಮ ಧರ್ಮದ ಕುರುಹುಗಳನ್ನೂ ಜೀವದಾಸೆಗೆ ತೊರೆಯುವ ಪರಿಸ್ಥಿತಿ ಬಂದೊಡ್ಡಿತು..ಮನೆಯವರಂತಿದ್ದ ಜನರು , “ನಾನು… ನೀನೂ … ನಮ್ಮವರು …ಪರಕೀಯರು “ ಎಂಬ ಭಾಷೆ ಮಾತಾನಾಡಲಾರಂಭಿಸಿದರು.
ಆ ದಿನಗಳಲ್ಲಿ ಮಹಿಳೆಯರು, ಹಸುಳೆ, ವೃದ್ಧರೆಂಬ ಭೇದವಿಲ್ಲದೆ ಬಲಿಗಾಗಿ ಬಿಟ್ಟ ಅಮಾಯಕ ಪ್ರಾಣಿಗಳು ತಮ್ಮ ಸರದಿಯನ್ನು ಕಾಯುವಂತೆ ಎಲ್ಲರ ಪರಿಸ್ಥಿತಿ. ಕಿಡಿಗೇಡಿಗಳು ಅಲ್ಲಲ್ಲಿ "ಹಗಲು ನಿಮ್ಮದು ರಾತ್ರಿ ನಮ್ಮದು " ಎಂದು ಬರೆದಿಟ್ಟು ಹೆದರಿಸಿದಾಗ, ಕುಲಜೀತ್ ಕೌರ್ ಆಂಟಿ ಹಾಗೂ ದಿಲ್ವೇರ್ ಅಂಕಲ್ ನಮ್ಮೆಲ್ಲರನ್ನೂ ಅವರ ಮನೆಯಲ್ಲಿಟ್ಟು ನಮಗೂ ಅವರಂತೆ ಧಿರಿಸು ತೊಡಿಸಿದ್ದರು . ಗ್ರಂಥ ಪಾರಾಯಣ "ಯಾ ಅಲ್ಲಾಹ ರೆಹಮ್ ಕರ್" "ಹೇ ಪಾಲನ್ ಹಾರ ಬಕ್ಷ್ ದೆ " ಎಂಬ ಮೊರೆ ಕಲುಷಿತ ಗಾಳಿಯಲ್ಲಿ ಮಿಳಿತಗೊಂಡು ಪರಿಸರ ಶುದ್ಧೀಕರಣದ ದೀಕ್ಷೆಯನ್ನು ಕೈಗೊಂಡಿತೋ ಏನೋ ಎನ್ನುವ ಪರಿಸ್ಥಿತಿ.
ಬೆಳಿಗ್ಗೆ ಐದೂವರೆಗೆ ಎದ್ದು ಒಂದು ಕಡೆ ಸಾರ್ವಜನಿಕ ಟಾಯ್ಲೆಟ್ ಗಳಿಗೆ ಬಾಲ್ಡಿ ಹಿಡಿದು ಹೋಗುವ ಹಾಗೂ ರೇಷನ್ ಅಂಗಡಿಯಲ್ಲಿ ಖಾಲಿ ಡಬ್ಬಿಗಳನ್ನೋ, ಕಲ್ಲುಗಳನ್ನು ಮನುಷ್ಯರಂತೆ ಸಾಲಲ್ಲಿಟ್ಟು , ಸಿಗುವ ಹತ್ತು ಕಿಲೋ ಅಕ್ಕಿ,ಗೋದಿ ೨ ಕಿಲೋ ಸಕ್ಕರೆಗಾಗಿ ತಾಸುಗಟ್ಟಲೆ ನಂಬರ್ ತಾಗಿಸುವ ನಮ್ಮಂತಹ ಸಾಮಾನ್ಯ ಜನರಿಗೆ ಈ ಧರ್ಮಗಳ ಸೆಣಸಾಟ ಬೇಕಿತ್ತಾ..? ಗೊತ್ತಿಲ್ಲ.
ಪೂರ್ತಿ ಒಂದು ತಿಂಗಳು ನಮ್ಮ ಏರಿಯಾದಲ್ಲಿ ಭಾರತೀಯ ಸೈನಿಕರ ನಿಗಾ ಇಟ್ಟಿದ್ದರು. ನಾವೂ ನಮ್ಮದೇ ವಠಾರದಲ್ಲಿ ಬಂಧಿಯಾಗಿದ್ದೆವು. ಮನೆಯಲ್ಲಿ ಎಷ್ಟೇ ಬಂಧಿಯಾಗಿದ್ದರೂ ಪಾಯಿಖಾನೆಗೆ ಹೊರಗೆ ಹೋಗಲೇ ಬೇಕಿತ್ತು. ಆಗ ನಮ್ಮ ವಠಾರದ ತಿರುವಿನಲ್ಲಿ ಸಾಲಿಗೆ ನಾಲ್ಕು ಟಾಯ್ಲೆಟ್ ಗಳಿದ್ದವು. ಅಂದು ಮಧ್ಯಾಹ್ನ ಮೂರರ ಸುಮಾರಿಗೆ ಯಾಕೋ ಹೊಟ್ಟೆ ಹಳಸಿದ ಹಾಗೆನಿಸುತಿತ್ತು. ಮನೆಯಲ್ಲಿ ಅಮ್ಮ ಸುಸ್ತಾಗಿ ಮಲಗಿದ್ದಳು. ಅವಳ ಆ ನವಿರಾದ ನಿದ್ದೆಯನ್ನು ಮುರಿಯಲು ನನಗೂ ಮನಸ್ಸು ಬರಲಿಲ್ಲ. ಮೆಲ್ಲನೆ ಬಾಗಿಲು ತೆರೆದು ಹೊರಗೆ ಇಣುಕಿದೆ. ಸುಡು ಸುಡುವ ಅತಂಕದ ಮಧ್ಯೆ ಮೆತ್ತಗೆ ಹೆಜ್ಜೆ ಇಟ್ಟು ಕೈಯಲ್ಲಿ ಬಕೆಟ್ ಹಿಡಿದು ಧೈರ್ಯವನ್ನು ಇಂಚಿಂಚೇ ನನ್ನೊಳಗಿಳಿಸುತ್ತಾ ಹೊರಗೆ ಹೋದೆ. ತಿರುವಿಗೆ ಇನ್ನೇನು ಎರಡೇ ಹೆಜ್ಜೆ ಎನ್ನುವಷ್ಟರಲ್ಲೇ ಯಾರೋ ಬಲವಾಗ ನನ್ನ ಕೈ ಹಿಡಿದು ಎಳೆದಂತಾಯಿತು. ಬೊಬ್ಬೆಗೆ ಬಾಯಿ ತೆರೆಯುವ ಮುನ್ನವೇ ಬಾಯಿಗೆ ಬಟ್ಟೆಯ ತುಂಡೊಂದ್ದನ್ನು ಗಂಟಲ ವರೆಗೂ ತುರುಕಿ ಕೈಗಳನ್ನು ಹಿಂದೆ ಕಟ್ಟಿ ಬಿರಬಿರನೆ ಎಳೆದಿರುವುದು ವ್ಯಕ್ತಿ ಅಲ್ಲಾ.. ಯಾವುದೋ ವ್ಯಾಘ್ರವೋ ಗೊತ್ತಾಗಲಿಲ್ಲ. ನನ್ನ ಭುಜದ ಶಾಲನ್ನೆಳೆದು ಕಣ್ಣಿಗೆ ಕಟ್ಟಿ ಕಕ್ಕಸಿನಲ್ಲಿ ದಬ್ಬಿ ದಡಾಲನೇ ಬಾಗಿಲು ಹಾಕಿದ ಸದ್ದು ಎದೆಗೆ ಗುದ್ದಿದಂತಾಯಿತು.! ಭಯ ...ಭಯ ನನ್ನ ಮೈಯನ್ನೇ ಪರಚಿ ಪರಚಿ ಗಾಯ ಗೊಳಿಸಿದರೂ ಆ ನೋವು ನನಗಾಗಲಿಲ್ಲ. ಮೈಮೇಲಿನ ಬಟ್ಟೆ ಅವನ ಅಮಾನುಷ ಕೃತ್ಯಕ್ಕೆ ಬೇಕಾದಷ್ಟೇ ಹರಿದೋ ಸರಿದೋ ಅವನ ತೃಪ್ತಿಗೆ ಅನುಮಾಡಿಕೊಟ್ಟಿತ್ತು. ಅವನ ಏದುಸಿರಲಿನಲ್ಲಿ ನನ್ನ ಕಂಪನ ಬೆಚ್ಚಿ ನಿಶಬ್ಧವಾಗಿತ್ತು . ಏನಾಗುತ್ತಿದೆ, ಯಾಕಾಗುತ್ತಿದೆ ಎಂದು ಯೋಚಿಸುವಷ್ಟು ಸಮಯದಲ್ಲೇ ಎಲ್ಲಾ ಮುಗಿದಿತ್ತು. ಬೆವರಿನ ಜಿಗುಟಿನ ಕಟು ವಾಸನೆ ಮೂಗಿಗೆ ಅಡರಿ ಹೇಸಿಗೆಯ ತುತ್ತ ತುದಿಯಲ್ಲಿ ನಾನಿದ್ದರೂ ನಾನು ಸತ್ತಿರಲಿಲ್ಲ ಬದುಕಿದ್ದೆ. ಯಾಕೆ ಬದುಕ್ಕಿದ್ದೇನೋ ಎಂಬ ಪ್ರಶ್ನೆ ನನ್ನ ಚಿತ್ತಕ್ಕೆ ಹೊಕ್ಕುವಷ್ಟರಲ್ಲಿಯೇ ಚೂಪಾದ ಅಸ್ತ್ರವೊಂದು ನನ್ನ ಹೊಟ್ಟೆಯ ಆರುಪಾರಾಯಿತು . ಅವನ ಎಲ್ಲಾ ವಿಕೃತಗಳನ್ನು ಹೇರಿದ ನನ್ನ ದೇಹವನ್ನು ಅಲ್ಲೇ ಬಿಸಾಕಿ ಓಡಿ ಹೋದ ಅವನು, ಅವನು...... ಕ್ಷಮಿಸಿ ಯಾವ ಧರ್ಮ ಯಾವ ಜಾತಿಯವನೆಂದು ನನಗೂ ಗೊತ್ತಿಲ್ಲ. ನನ್ನ ಕಣ್ಣಿಗೆ ಬಟ್ಟೆ ಕಟ್ಟಿತ್ತಲ್ಲ..ಅವನ ಚಿತ್ರ ಬಿಡಿಸಬೇಕೆಂದರೆ, ನನ್ನ ಬಾಯಿಗೆ ಬಟ್ಟೆ ತುರುಕಿತ್ತು.. ಇನ್ನು ಅವನ ವಾಸನೆ ಅವನ ಕಾಮುಕ ಸ್ಪರ್ಶವನ್ನು ಬಣ್ಣಿಸಬೇಕಾದರೆ ನನ್ನಲ್ಲಿ ಉಸಿರೇ ಇರಲಿಲ್ಲ.ಅಪ್ಪ ಇಂದಿಗೂ ಎಲ್ಲರಲ್ಲೂ “ ನನ್ನ ಮಗಳು ವಕೀಲೆ” ಎಂದೇ ಹೇಳುತ್ತಿರುತ್ತಾರೆ. ಅಮಾಯಕ ಕನಸುಗಳು ಮುಂಜಾವಿನ ಇಬ್ಬನಿಯಂತೆ ಕರಗಿಹೋದದ್ದು ಮಾತ್ರ ಯಾವ ಧರ್ಮ ರಕ್ಷಕರಿಗೂ ಗೊತ್ತಾಗಲೇ ಇಲ್ಲ.