manjula g s

Abstract Tragedy Inspirational

4  

manjula g s

Abstract Tragedy Inspirational

ತಲ್ಲಣಿಸದಿರು ಮನವೇ....!

ತಲ್ಲಣಿಸದಿರು ಮನವೇ....!

4 mins
358


ಜಾತಸ್ಯಹಿಧ್ರುವೋ ಮೃತ್ಯುಧ್ರು೯ವಂ ಜನ್ಮ ಮೃತಸ್ಯಚ! 

ತಸ್ಮಾದಪರಿಹಾಯೇ೯ಥೇ೯ ನತ್ವಂ ಶೊಚಿತು ಮಹ೯ಸಿ! 


ಹುಟ್ಟು-ಸಾವು, ಸುಖ-ದುಃಖ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ರಾತ್ರಿ ಇಲ್ಲದೆ ಹಗಲಿಲ್ಲ , ಹುಟ್ಟಿದ ಮೇಲೆ ಸಾವು ಕಟ್ಟಿಟ್ಟ ಬುತ್ತಿ! ನಾವು ಜೀವನದಲ್ಲಿ ಅನಿವಾರ್ಯವಾದದ್ದನ್ನು ಹೊಂದಿಸಿಕೊಳ್ಳುವುದನ್ನು ಕಲಿಯಬೇಕು. ಅದನ್ನು ಬಿಟ್ಟು ಕಷ್ಟ ಬಂದಾಗ ತಲ್ಲಣಿಸುವುದು ತರವಲ್ಲ. ಅನಿವಾರ್ಯವಾದ ಕರ್ತವ್ಯ ಪಾಲನೆಯಲ್ಲಿ ನಾವು ಎಂದಿಗೂ ದುಃಖಿಸಬಾರದು.....


ದೇವಸ್ಥಾನದ ಧ್ವನಿಸುರುಳಿಯಲ್ಲಿ ಭಗವದ್ಗೀತೆಯ ಎರಡನೆಯ ಅಧ್ಯಾಯದ ಈ ಶ್ಲೋಕಗಳು ಮತ್ತು ಅದರ ಅರ್ಥ ವಿವರಣೆ ಗಾಳಿಯ ಏರಿಳಿತದೊಂದಿಗೇ ಸುರುಳಿ-ಸುರುಳಿಯಾಗಿ ಹೊರಬಂದು ಶಾಂತಮ್ಮನವರ ಕಿವಿಗೆ ಅಪ್ಪಳಿಸುತ್ತಿತ್ತು..


ನಿರ್ಭಾವುಕರಾಗಿ ಯಾಂತ್ರಿಕವಾಗಿ ಕಲ್ಲು ಕಂಬದಂತೆ ಕುಳಿತಿದ್ದ ಅವರ ಮನಸ್ಸಿನ ಮೇಲೆ ಈ ಸಾಲುಗಳು ಯಾವುದೇ ಪರಿಣಾಮ ಬೀರುವ ಲಕ್ಷಣಗಳು ಗೋಚರಿಸಲಿಲ್ಲ.


ಅಷ್ಟಕ್ಕೂ ಶಾಂತಮ್ಮನವರು ಇಲ್ಲಿ ಯಾವುದೇ ಪ್ರವಚನವನ್ನು ಕೇಳಲು ಅಥವಾ ದೇವರ ಬಳಿಯಲ್ಲಿ ಬೇಡಿಕೆಗಳನ್ನು ತಿರಿಸಿಕೊಳ್ಳವ ಪ್ರಾರ್ಥನೆ ಸಲ್ಲಿಸಲು ದೇವಸ್ಥಾನಕ್ಕೆ ಬಂದಿರಲಿಲ್ಲ.....! ಬದಲಾಗಿ ಕೆಲವು ದಿನಗಳಿಂದ ತಮ್ಮ ಮನದಲ್ಲಿ-ಮನೆಯಲ್ಲಿ ನಡೆಯುತ್ತಿದ್ದ ಸಂಘರ್ಷಗಳಿಗೆ ಒಂದು ಅಂತಿಮ ಸಮಾರೋಪ ಕೊಡಲು ತೀರ್ಮಾನಿಸಿ ಬಂದಿದ್ದರು. ಅದುವೆ ದೇವಸ್ಥಾನದ ಹಿಂಭಾಗದಲ್ಲಿರುವ ಕಲ್ಯಾಣಿಯಲ್ಲಿ ಮುಳುಗಿ ದೇವರಪಾದ ಸೇರುವುದು ಅರ್ಥಾತ್ ಆತ್ಮಹತ್ಯೆ ಮಾಡಿಕೊಳ್ಳುವುದು! ಅಪರಾಹ್ನದ ವೇಳೆಯಾದ್ದರಿಂದ ರಾತ್ರಿಯವರೆಗೂ ಕಾದಿದ್ದು ಕತ್ತಲಲ್ಲಿ ಎಲ್ಲರೂ ಹೋದ ಮೇಲೆ ಈ ಕೆಲಸಕ್ಕೆ ಮುಂದಾಗಲು ಕಾದುಕುಳಿತಿದ್ದರು!


ಪಾಪ! ಶಾಂತಮ್ಮನವರು ಜೀವನದಲ್ಲಿ ಬಹಳ ನೊಂದಿದ್ದವರು. ಒಂದರ್ಥದಲ್ಲಿ ಅವರ ನೋವುಗಳಿಗೆಲ್ಲಾ ಕಾರಣವೂ ಅವರೇ! ಮೊದಲಿನಿಂದಲೂ ವಿತಂಡವಾದದ ಸ್ವಭಾವ, ಹಟಮಾರಿ ಹೆಣ್ಣು, ಗಟ್ಟಿಗಿತ್ತಿಯಾಗಿದ್ದರು ಅವರು. ಆ ಕಾಲಕ್ಕೇ ತಮ್ಮ ಅತ್ತೆಯನ್ನೂ, ಗಂಡನನ್ನೂ ಎದುರಿಸಿ ತಮಗೆ ಇಷ್ಟ ಬಂದ ರೀತಿಯಲ್ಲಿ ಸಂಸಾರ ನಡೆಸಿದ್ದವರು. ಆದರೆ ಕಾಲ ಕಳೆದಂತೆ ಬದಲಾಗದ ಅವರ ಮನಸ್ಥಿತಿಯಿಂದ, ತಾವೇ ಆಯ್ಕೆಮಾಡಿ ಮನೆಗೆ ತಂದುಕೊಂಡ ಒಬ್ಬಳೇ ಮುದ್ದಿನ ಸೊಸೆಯ ಮುಂದೆ ತಮ್ಮ ಪ್ರತಾಪ ತೋರಲಾರದೆ, ತಾವೂ ನೊಂದು;ಮನೆಯ ವಾತಾವರಣವನ್ನೂ ಕೆಡಿಸಿ ಬಿಟ್ಟಿದ್ದರು! ಇವರಿಬ್ಬರ ಜಗಳಗಳ ನಡುವೆ ತಮ್ಮ ಒಬ್ಬನೇ ಮಗ ಸನ್ಯಾಸಿಯಂತೆ ಆಗಿಬಿಟ್ಟಿದ್ದ. ಯಾವ ವ್ಯಾಮೋಹವೂ ಇಲ್ಲದೆ ಕೊನೆಯ ಬಾರಿ ತಾನೂ ಸಾಯಲು ಹೋಗುತ್ತಿದ್ದೇನೆ! ಎಂದಾಗಲೂ ತಡೆಯದೆ ಗರುಡಗಂಬದಂತೆ ನಿಂತೇ ಇದ್ದ. ಸೊಸೆಯಾದರೂ ಎಲ್ಲಾದರೂ ಹಾಳಾಗಿ ಹೋಗಿ...! ಎಂದು ಮುಖಕ್ಕೇ ಹೇಳಿದ್ದಳು. ಇನ್ನು ಗಂಡನಿಲ್ಲದ ತನ್ನ ಬದುಕಿಗೆ ತಡೆ ಎಲ್ಲಿ? ಆ ಮನೆಯಲ್ಲಿ!


ತಾನು ತನ್ನ ಮನೆಗಾಗಿ, ತನ್ನ ಮಗ-ಸೊಸೆ-ಮೊಮ್ಮಕ್ಕಳಿಗಾಗಿ ಎಷ್ಟೆಲ್ಲಾ ತ್ಯಾಗಗಳನ್ನು ಮಾಡಿದ್ದೇನೆ! ಎಂಬ ಯಾವ ಕಲ್ಪನೆಯೂ ಇಲ್ಲದೆ ತನ್ನನ್ನು ಎಷ್ಟು ಹಗುರವಾಗಿ ನಡೆಸಿಕೊಂಡಿದ್ದಾರೆ.....ಇನ್ನು ತಾನು ಬದುಕಿಯಾದರೂ ಏನು ಪ್ರಯೋಜನ? ಹೇಗಾದರೂ ಮಾಡಿ ದೇವರ ಪಾದ ಸೇರಿಬಿಡಬೇಕು....ಅದಕ್ಕೆ ಕಲ್ಯಾಣಿಯೇ ಸೂಕ್ತ ಎಂದು ತೀರ್ಮಾನಿಸಿದ್ದರು.


ಅವರ ಈ ತೀರ್ಮಾನಕ್ಕೆ ಮೂಲಕಾರಣ ಮೊದಲಿನಂತೆ ತನ್ನ ಮಾತು ಯಾರೂ ಕೇಳುತ್ತಿಲ್ಲ ಎಂಬುದು! ಆದರೆ ತಾನೇ ಬದಲಾಗುವ ಒಂದು ಸಣ್ಣ ಆಲೋಚನೆಯನ್ನೂ ಅವರು ಮಾಡಿರಲಿಲ್ಲ.


ಅದಾಗಲೇ ಸಂಜೆಯಾಗುತ್ತಾ ಬಂದಿತ್ತು. ದೇವಸ್ಥಾನಕ್ಕೆ ಬರುವ ಭಕ್ತಾದಿಗಳು ಎಂದಿನಂತೆ ಬಂದು ಕೈಮುಗಿದು ತಮ್ಮ ಪ್ರಾರ್ಥನೆ ಸಲ್ಲಿಸಿ ಹೋಗುತ್ತಿದ್ದರು. ಅಷ್ಟರಲ್ಲಿ ಇದ್ದಕ್ಕಿದ್ದಂತೆ ಸಂಜೆ ಬಿರುಸಾದ ಮಳೆ ಪ್ರಾರಂಭವಾಯಿತು. ಹೊರಗೆ ಹೋಗುತ್ತಿದ್ದವರೆಲ್ಲರೂ ಮಳೆಯ ಕಾರಣ ಪುನಃ ಆಶ್ರಯ ಪಡೆಯಲು ದೇವಸ್ಥಾನದ ಪ್ರಾಂಗಣದೊಳಗೆ ಬಂದರು. ಜೊತೆಗೆ ದೇವಸ್ಥಾನದ ಮೆಟ್ಟಿಲುಗಳ ಮೇಲೆ ಕುಳಿತು ಭಿಕ್ಷೆ ಬೇಡುತ್ತಿದ್ದ ಬಿಕ್ಷುಕರು ಸಹ ಅದೇ ಆವರಣದಲ್ಲಿ ಬಂದು ಸೇರಿದರು. ಗಿಜಿಬಿಜಿ ಪ್ರಾರಂಭವಾಯಿತು. ಹೊರಗೆ ಧೋ ಎಂದು ಸುರಿಯುತ್ತಿದ್ದ ಮಳೆ ಒಂದೆಡೆಯಾದರೆ....ಮತ್ತೊಂದೆಡೆ, ಒಳಗೆ ಸೇರಿದ್ದ ಜನರ ಬಿರುಸಾದ ಮಾತುಗಳು ಶಾಂತಮ್ಮನವರ ಏಕಾಂತವನ್ನು ಭಂಗಮಾಡಿತ್ತು.


ಸಹಜ ಸ್ವಭಾವದಂತೆ ಜನರ ಮಾತುಗಳಿಗೆ ಅವರ ಗಮನ ಹರಿಯಿತು.


..ಅಲ್ಲಿ ಯಾರೋ.... ಯಾರಿಗೋ ಹೇಳುತ್ತಿದ್ದರು....

ವಿಷಯ ಗೊತ್ತಾಯಿತಾ! ನೆನ್ನೆ ಆ ಮೂಲೆ ಮನೆ ರಂಗಪ್ಪ ಹೋಗಿಬಿಟ್ಟರಂತೆ.....! ಅವರ ಮಕ್ಕಳು ಎಲ್ಲೆಲ್ಲೋ ಪರದೇಶಗಳಲ್ಲಿ ಇದ್ದಾರಂತಲ್ಲಾ.... ಆದಕಾರಣ ಅವರ ಅಂತಿಮ ಕ್ರಿಯೆಗಳಿಗೆ ಯಾರೂ ಬರದೆ....ಕೊನೆಗೆ ಮುನ್ಸಿಪಾಲಿಟಿಗೆ ವ್ಯಾನ್ನಲ್ಲಿ ತೆಗೆದುಕೊಂಡು ಹೋಗಿ ಸುಟ್ಟರಂತೆ....ಛೇ! ಪಾಪ. 


ಶಾಂತಮ್ಮನವರ ಕಿವಿಗೆ ಬಿದ್ದ ಈ ಮಾತು ಮುಂದೆ ತಮ್ಮ ಹೆಣದ ಗತಿಯೇನು? ಎಂಬ ಆಲೋಚನೆ ತಂದೊಡ್ಡಿತು. ಅಷ್ಟರಲ್ಲಿ ಮತ್ಯಾರೋ....


ಅಯ್ಯೋ ಈದಿನ ನಮ್ಮೆಜಮಾನ್ರು ಅವರಪ್ಪನ್ನ ನೋಡೋಕೆ ಆಶ್ರಮಕ್ಕೆ ಹೋಗಿದ್ದಾರೆ.....ಅದಕ್ಕೇ ಒಬ್ಬಳೇ ವಾಕಿಂಗ್ ಹೋಗಲು ಬೇಜಾರಾಗಿ ದೇವಸ್ಥಕ್ಕೆ ಬಂದೆ..! 


ಅರೆ ಇದು ತಮ್ಮ ಯಜಮಾನರ ಗೆಳೆಯ ಗೋಪಾಲಯ್ಯನವರ ಸೊಸೆ ರಮಳ ಧ್ವನಿಯಲ್ಲವೇ?....ಹಾಗಾದರೆ ಅವಳು ಅವಳ ಮಾವನನ್ನು ಅತ್ತೆ ತೀರಿಹೋದ ಮೇಲೆ ಅನಾಥಾಶ್ರಮಕ್ಕೆ ಸೇರಿಸಿದ್ದಾಳೆ ಎಂದಾಯಿತು! ಪಾಪ, ಬಹಳ ಸಹನೆಯ ವ್ಯಕ್ತಿ ಗೋಪಾಲಯ್ಯ.ಮೊಮ್ಮಕ್ಕಳನ್ನು ಬಿಟ್ಟು ಹೇಗಿದ್ದಾರೋ..!


ಹಿಂದೆಯಿಂದ ಮತ್ತೊಂದು ಧ್ವನಿ....


ಈ ಮಳೆ ನಿಲ್ಲುವ ಲಕ್ಷಣವೇ ಕಾಣುತ್ತಿಲ್ಲವಲ್ಲಾ..... ಮೊಮ್ಮಕ್ಕಳನ್ನು ಪಾರ್ಕಿಗೆ ಕರೆದುಕೊಂಡು ಬಂದು ಆಡಲು ಬಿಟ್ಟು, ಅಷ್ಟರಲ್ಲಿ ಬೇಗ ಕೈಮುಗಿದು ಹೋಗೋಣ ಎಂದು ಇಲ್ಲಿಗೆ ಬಂದೆ! ಮಕ್ಕಳು ನೆನೆಯುತ್ತಿದ್ದಾರೋ ಏನೋ..... ಮಗ ಸೊಸೆಗೆ ಏನು ಉತ್ತರ ಕೊಡುವುದು? 


ಹೌದಲ್ಲವೇ....ತನ್ನ ಮೊಮ್ಮಕ್ಕಳು ಶಾಲೆಯಿಂದ ಬಂದು ಆಟವಾಡುತ್ತಿರುತ್ತಾರೆ. ಒಂದು ವೇಳೆ ಹೊರಗೆ ಬಂದು ಮಳೆಗೆ ನೆನೆದರೆ....ನೆಗಡಿ-ಕೆಮ್ಮು , ಜ್ವರ ಬರಬಹುದಲ್ಲಾ.....ಅವರನ್ನು ತಡೆಯುವವರು ಯಾರು? ನಾನು ಅಲ್ಲೇ ಇದ್ದಿದ್ದರೆ ನೋಡಿಕೊಳ್ಳಬಹುದಿತ್ತು....! ಎಂದು ಕೊಂಡರು.


ಅಷ್ಟರಲ್ಲಿ ಬಿಕ್ಷುಕರು ಚಿಲ್ಲರೆ ಕಾಸು ಎಣಿಸುತ್ತಿದ್ದ ಶಬ್ದ.....


ಏನಪ್ಪಾ ಈ ದಿನ ಬಂದಬಂದವರೆಲ್ಲಾ ನಿನಗೇ ದುಡ್ಡು ಕೊಡ್ತಾ ಇದ್ದರು. ಹಂಚಿಕೊಳ್ಳಿ ಅಂತೇಳಿ ಹತ್ತು ರೂಪಾಯಿ ಕೊಟ್ಟರೆ....ಎಲ್ಲಾ ನೀನೇ ತಗೊಂಡ್ ಇದ್ದೀಯಾ....ನನಗೂ ಭಾಗ ಬರಬೇಕು.... ಅಂತ ಒಬ್ಬ ಮುದುಕಿ...ಮುದುಕಗೆ ಹೇಳಿದಳು!


ತಗೋ ತಾಯಿ ನಿನಗೂ ಕೊಡ್ತೀನಿ.....ಯಾರೋ ಕೊಡೋ ಪುಣ್ಯಾತ್ಮರು ಕೊಡುತ್ತಾರೆ! ನಮ್ಮ ಆಯಸ್ಸೂ ಅವರೇ ಹಾಕೊಂಡು ಚೆನ್ನಾಗಿ ಬಾಳಲಿ! ಎಲ್ಲಾ ಪುಣ್ಯ ಭಗವಂತ ಅವರಿಗೇ ಕೊಡಲಿ....ನನಗೆ ಒಪ್ಪತ್ತಿನ ಊಟ ಸಿಕ್ಕರೆ ಸಾಕು. ದುಡ್ಡು ತೆಗೆದುಕೊಂಡು ನಾನೆಲ್ಲಿಗೆ ಹೋಗಬೇಕು? ಯಾವ ಜನ್ಮದ ಪಾಪವೋ ಏನೋ....ಈ ಜನ್ಮದಲ್ಲಿ ಅನಾಥರಾಗಿ ಇಲ್ಲಿ ಬಿದ್ದಿದ್ದೇವಿ! ಇನ್ನು ನಿನ್ನ ಪಾಲನ್ನೂ ತಿಂದು ಮುಂದಿನ ಜನ್ಮದಲ್ಲಿ ಇದೇ ಸ್ಥಿತಿ ಬರುವುದೇನೋ...! 

ಎನ್ನುತ್ತಿದ್ದಂತೆ ಆ ಹೆಂಗಸು.....


ನನಗೂ ಕಾಸಿಂದ ಏನೂ ಆಗಬೇಕಾಗಿಲ್ಲ.... ಅದ್ಯಾವುದೋ ಮಾತ್ರೆ ತಗೊಂಡ್ರೆ ಸ್ವಲ್ಪ ಆರಾಮಾಗಿರುತ್ತೆ....ಭಿಕ್ಷೆ ಬೇಡುವಾಗ ಕೂಗಿ ಕೂಗಿ, ಜೋರಾಗಿ ಕೇಳಿಕೊಂಡು ಭಾಳ ಸುಸ್ತಾಗುತ್ತೆ...! ಎಂದಳು.


ಅರೆ! ಇವರೆಲ್ಲಾ ಪ್ರತಿದಿನ ಇಲ್ಲೇ ಬಿಕ್ಷೆ ಬೇಡುತ್ತಾರೆ...ಆದರೆ ಇವರ ಬಗ್ಗೆ ನಾನು ಎಂದು ಯೋಚಿಸಲೇ ಇಲ್ಲ! ಮನೆಯಲ್ಲಿ ಮೂರು ಹೊತ್ತು ಬೆಚ್ಚಗೆ ಕುಳಿತು ತಿನ್ನುವ ನನಗೇ ಈ ಸಾಯುವ ಆಲೋಚನೆ ಬಂದಂತೆ ಇವರಿಗೆ ಇಂತಹ ಕಷ್ಟದಲ್ಲಿಯೂ ಸಾಯಬೇಕು ಎನಿಸುತ್ತಿಲ್ಲ! ಭಿಕ್ಷೆ ನೀಡುವವರಿಗೆ ಮನಸಾರೆ ಹರಸುತ್ತಿದ್ದಾರೆ. ಆ ಭಗವಂತ ಆಶೀರ್ವಾದ ಮಾಡುತ್ತಾನೋ ಇಲ್ಲವೋ ಗೊತ್ತಿಲ್ಲ...ಆದರೆ ಇವರ ಆಶೀರ್ವಾದವಂತು ಭಿಕ್ಷೆಯ ನೀಡಿದ ಎಲ್ಲರಿಗೂ ಖಂಡಿತವಾಗಲೂ ಸಿಗುತ್ತದೆ..... ಜೀವನದ ಕಷ್ಟಸುಖಗಳಿಗೆ ಎಲ್ಲರೂ ತಮ್ಮನ್ನು ತಾವು ಒಗ್ಗಿಸಿಕೊಂಡು ಹೇಗೋ ಬದುಕನ್ನು ನಡೆಸುತ್ತಿದ್ದಾರೆ.... ಆದರೆ ತಾನು? ಯಾರ ಮೇಲೆ ನನ್ನ ಕೋಪ?

ತನಗೆ ಮಾತ್ರ ಏತಕೆ ತಲ್ಲಣ??

....

ಅಷ್ಟರಲ್ಲಿ ವೇಗವಾಗಿ ಬಂದ ಮಳೆ ಅದೇ ವೇಗದಲ್ಲಿ ನಿಲ್ಲುವ ಸೂಚನೆ ನೀಡುತ್ತಿದ್ದಂತೆ, ಎಲ್ಲರಿಗೂ ಒಂದೇ ತವಕ! ಅವರವರ ಕೆಲಸಗಳಲ್ಲಿ ಮುಂದುವರೆಯಲು ಅವರವರದೇ ದಾರಿಗಳಲ್ಲಿ ಸಾಗಿದರು. ಬಿಕ್ಷುಕರು ಸಾವರಿಸಿಕೊಂಡು ಹೋಗಿ ಮೆಟ್ಟಿಲುಗಳ ಮೇಲೆ ಕುಳಿತು ಬಿಕ್ಷೆ ಬೇಡ ತೊಡಗಿದರು.


ಒಂದೆಡೆ ದೇವರನ್ನು ಬೇಡಲು ಬಂದ ಜನ....ಮತ್ತೊಂದೆಡೆ ಬಂದ ಜನರನ್ನು ಬೇಡಲು ಕಾದ ಬಿಕ್ಷುಕರು....ಎಲ್ಲರೂ ಹೊರಟಾದ ಮೇಲೆ ತಾನು ಮಾತ್ರ ಆವರಣದಲ್ಲಿ ಒಂಟಿ! ತಾನೂ ಎತ್ತಲಾದರೂ ಹೊರಡಬೇಕಲ್ಲವೇ? ಆದರೆ ಯಾವ ದಾರಿ? ದೇವಸ್ಥಾನದ ಹಿಂದಿನ ಕಲ್ಯಾಣಿಗೋ...? ದೇವಸ್ಥಾನದ ಮುಂದಿನ ಮನೆಯದಾರಿಗೋ....?


ಒಂದೊಮ್ಮೆ ದೇವಸ್ಥಾನದ ಹಿಂದಿನ ದಾರಿಗೆ ಹೋದರೆ ಅಲ್ಲಿಗೆ ತನ್ನ ಜೀವನದ ಅಂತ್ಯ ಆಗುತ್ತದೆ. ಹಾಗೆ ಮಾಡಲು ತಾನೇ....ತಾನು ಇಲ್ಲಿಗೆ ಬಂದು ಕುಳಿತಿದ್ದು! ಸರಿ ಇನ್ನು ತಡ ಮಾಡುವುದು ಬೇಡ.....ಎದ್ದುನಿಂತರು!


ದೇವಸ್ಥಾನದ ಪುರೋಹಿತರು ಸಕಲ ಇಷ್ಟಾರ್ಥ ಪ್ರಾಪ್ತಿರಸ್ತು.....ಸರ್ವೇ ಜನ ಸುಖಿನೋ ಭವಂತು.......ಎಂದು ಹೇಳುತ್ತಾ ಗರ್ಭಗುಡಿಯ ಬಾಗಿಲನ್ನು ಮುಚ್ಚಿ ಹೊರಟರು.


ಢಮಾರ್... ಎಂಬ ಶಬ್ದ ಹೊರಗೆ ಕೇಳಿಸಿತು! ನೋಡುತ್ತಿದ್ದಂತೆ ಜನ ಗುಂಪುಗೂಡಿದರು. ಯಾರೋ ಚಿಕ್ಕ ಹುಡುಗ ಸೈಕಲ್ ತುಳಿಯುತ್ತಾ ಬಂದು ರಾಡಿಯಲ್ಲಿ ಜಾರಿ ಬಿದ್ದುಬಿಟ್ಟಿದ್ದ. ಅವನನ್ನು ಪುರೋಹಿತರು ಮೇಲಕ್ಕೆತ್ತುತ್ತಿದ್ದರು.....!


ಜನರ ಗುಂಪಿನ ನಡುವೆ ಶಾಂತಮ್ಮನವರ ನೋಟ ಹುಡುಗನ ಮೇಲೆ ಬಿತ್ತು....

ಅರೇ! ಇವ ನಮ್ಮ ಅನೂಪನ ಹಾಗೆ ಇದ್ದಾನಲ್ಲ....! ಅವನೇನಾದರೂ ನನ್ನನ್ನು ಹುಡುಕಿಕೊಂಡು ಇಲ್ಲಿಗೆ ಬಂದಿದ್ದಾನೆಯೇ? ಎಂದುಕೊಳ್ಳುತ್ತಾ ಕ್ಷಣಮಾತ್ರವೂ ಆಲೋಚಿಸದೆ ಆಚೆಗೆ ಓಡಿದರು....


ಸದ್ಯಕ್ಕೆ ಅವನು ಅನೂಪ ಅಲ್ಲ ಹಾಗಾದರೆ ಅನೂಪ ಏನು ಮಾಡುತ್ತಿದ್ದಾನೆ? ಅಂಜಲಿ ಎಲ್ಲಿ ಹುಡುಕುತ್ತಿರಬಹುದು? ಹಾಲು ಕುಡಿದಳೋ ಇಲ್ಲವೋ...!ಎಂದು ತನ್ನ ಮೊಮ್ಮಕ್ಕಳನ್ನು ನೆನೆದು ಆತಂಕದಿಂದ ಒಂದೇ ಉಸಿರಿಗೆ ತಮ್ಮ ಮನೆಯ ಕಡೆಗೆ ಹೆಜ್ಜೆಗಳನ್ನು ಇರಿಸುತ್ತಾ ತಮಗೆ ಗೊತ್ತಿಲ್ಲದಂತೆಯೇ ತಮ್ಮ ದಾರಿಯನ್ನು ಆಯ್ಕೆ ಮಾಡಿಕೊಂಡಿದ್ದರು.


ಮುಕ್ತಾಯ ಮಾಡಬೇಕೆಂದುಕೊಂಡು ಬಂದಿದ್ದ ತಮ್ಮ ಕಥೆಯನ್ನು ಮರಳಿ ಮುಕ್ತಾಯವಿಲ್ಲದ ಕಥೆಯನ್ನಾಗಿಸುವ ದಾರಿಯಲ್ಲಿ ಸಾಗುತ್ತಿರುವ ಮತ್ತದೇ ತಲ್ಲಣ: ಅದನ್ನು ಕಂಡೂ ಕಾಣದಂತೆ ಆ ಭಗವಂತ ನಿಶ್ಚಲವಾಗಿಯೇ ಮುಗುಳ್ನಗುತ್ತಾ ನೋಡುತ್ತಿದ್ದ! 



Rate this content
Log in

Similar kannada story from Abstract