ಪುಸ್ತಕ ತಂದ ಅದೃಷ್ಟ...!
ಪುಸ್ತಕ ತಂದ ಅದೃಷ್ಟ...!
ಎಲ್ಲಾ ಸ್ವಲ್ಪ ಪಕ್ಕಕ್ಕೆ ಸರಿದು ಕುಳಿತುಕೊಳ್ಳಿ....!
ಹನುಮಾನಂದ ಸ್ವಾಮಿಗಳು ಬರುವ ವೇಳೆಯಾಯ್ತು...!
ತಮ್ಮ ತಮ್ಮ ಸರತಿಯ ಸಾಲಿನಲ್ಲಿ ಮಾತ್ರ ಬಂದು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ!
ಹೀಗೆ ಸೇವಕ ನಂಜನ ಬಾಯಿಂದ ಒಂದೊಂದೇ ಸೂಚನೆಗಳು ಗುಂಪುಗೂಡಿದ್ದ ಜನರಿಗೆ ಕೇಳುತ್ತಿದ್ದಂತೆಯೇ, ಅಸ್ತವ್ಯಸ್ತವಾಗಿದ್ದ ಜನ ಲಗುಬಗೆಯಿಂದ ಎದ್ದು, ಸರತಿಸಾಲಿನಲ್ಲಿ ನಿಂತರು.
ಎಷ್ಟೋ ದೂರದಿಂದ ಮೊದಲ ಸಲ ಬಂದವರು, ಪುನಃ ಪುನಃ ಬಂದವರು ಬೆಳಗಿನಿಂದ ಕಾದಿದ್ದವರು ತಮ್ಮ ಸರದಿಗಾಗಿ ಕಾಯುತ್ತಾ ತಮ್ಮ ಕೈಯಲ್ಲಿದ್ದ ದಕ್ಷಿಣೆಯ ತಾಂಬೂಲದ ಪರಿಕರಗಳನ್ನು ಒಮ್ಮೆ ನೋಡಿಕೊಂಡು ಮನದಲ್ಲೇ ತಮ್ಮ ಸಮಸ್ಯೆಗಳನ್ನು ಚಿಂತಿಸುತ್ತಾ ನೋಟವನ್ನು ಒಳಗೆ ನೆಟ್ಟರು.
ಅಷ್ಟಕ್ಕೂ ಅವರೆಲ್ಲ ಕಾದಿರುವುದು ನಮ್ಮ ಹನುಮನಿಗಾಗಿ!
ಅಲ್ಲ...ಅಲ್ಲ....ಹನುಮಾನಂದ ಸ್ವಾಮೀಜಿಯವರಿಗಾಗಿ. ತಮ್ಮ ಜೀವನದಲ್ಲಿ ಕಾಡುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು, ತಮ್ಮ ಮುಂದಿನ ಭವಿಷ್ಯದ ರೂಪುರೇಷೆಗಳ ಬಗ್ಗೆ, ಆಗುಹೋಗುಗಳ ಬಗ್ಗೆ ತಿಳಿದುಕೊಳ್ಳಲು...... ಹನುಮಾನಂದ ಸ್ವಾಮಿಯವರ ಬಾಯಿಂದ ಹೊರಬೀಳುವ ಆಣಿಮುತ್ಯಗಳನ್ನು ಕೇಳುವ ಸಲುವಾಗಿ ಅವರೆಲ್ಲರೂ ಅಲ್ಲಿ ನೆರೆದಿದ್ದರು.
ಹನುಮಾನಂದ ಸ್ವಾಮಿಯವರು ಸುತ್ತಲೂ ಹದಿನಾರು ಹಳ್ಳಿಗಳಲ್ಲಿಯೂ ಹೆಸರುವಾಸಿಯಾಗಿದ್ದರು. ಅವರು ಹೇಳಿದ ಯಾವುದೇ ಭವಿಷ್ಯ ಸುಳ್ಳಾಗಿರಲಿಲ್ಲ. ಜನರ ನಂಬಿಕೆಗೆ ಪಾತ್ರವಾದಷ್ಟೂ ಅವರ ದಕ್ಷಿಣೆಗಳು, ಸಮರ್ಪಣಾ ತಾಂಬೂಲಗಳ ಪ್ರಮಾಣವೂ ಹೆಚ್ಚುತ್ತಾ ಬಂದಿತ್ತು. ಅವರ ಭೇಟಿಗೆ ದಿನಗಳ ಗಟ್ಟಲೆ ಸರತಿಯ ಸಾಲಿನಲ್ಲಿ ಜನ ಕಾಯುತ್ತಿದ್ದ ದೃಶ್ಯ ಸರ್ವೇ ಸಾಮಾನ್ಯವಾಗಿತ್ತು.
ಆದರೆ ಯಾರು ಈ ಹನುಮಾನಂದ ಸ್ವಾಮಿಗಳು? ಅವರಲ್ಲೇನು ಅಷ್ಟೊಂದು ವಿಶೇಷತೆಯಿದೆ? ಎಂದು ನಿಮಗನ್ನಿಸಿರಬಹುದು ಅಲ್ಲವೇ....! ಹಾಗಾದರೆ ಕೇಳಿ.....!
ಹನುಮಾನಂದ ಸ್ವಾಮಿಗಳು...ಅಲ್ಲ...ಅಲ್ಲ..... ನಮ್ಮ ಹನುಮ ಇದೇ ಚೆಲುವನಹಳ್ಳಿಯಲ್ಲಿ ಅಷ್ಟ ಕಷ್ಟಗಳ ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದವ. ಬಡತನಕ್ಕೆ ಮಕ್ಕಳು ಹೆಚ್ಚು ಎಂಬಂತೆ ತಂದೆ-ತಾಯಿಯರ 10 ಮಕ್ಕಳಲ್ಲಿ ಆರನೆಯವ. ಎಲ್ಲರಂತೆ ಶಾಲೆಗೆ ಹೋಗಿ ವಿದ್ಯೆ ಕಲಿಯುವ ಭಾಗ್ಯ ಅವನ ಪಾಲಿಗೆ ಕೇವಲ ಏಳನೆಯ ತರಗತಿವರೆಗೆ ಮಾತ್ರ ಒದಗಿಬಂದದ್ದು,ಅವನ ಅದೃಷ್ಟವೇ ಸರಿ!
ಅವನಿಗಿಂತ ಹಿರಿಯ ಮಕ್ಕಳು ಮನೆಯಲ್ಲಿ ದುಡಿಯುತ್ತಿದ್ದ ಕಾರಣ, ಇವನು ಅರೆಬರೆ ವಿದ್ಯಾಭ್ಯಾಸ ತನ್ನ ಹಳ್ಳಿಯಲ್ಲಿ ಮುಗಿಸಿದ. ಅದಾದ ನಂತರ ಹಿರಿಯ ಅಕ್ಕಂದಿರಿಗೆಲ್ಲಾ ಮದುವೆಗಳಾಗಿ ಬೇರೆಬೇರೆ ಸಂಸಾರ ಹೂಡುತ್ತಿದ್ದಂತೆ, ಅನಿವಾರ್ಯವಾಗಿ ಇವನ ತಂದೆ ಇವನನ್ನು ಊರಿನ ಮಾಜಿ ಶಾನುಭೋಗರ ಮನೆಗೆ ಅವರ ದನಕರುಗಳನ್ನು ನೋಡಿಕೊಳ್ಳಲು ಕೆಲಸಕ್ಕೆ ಹಾಕಿದರು.
ಸರಿ.... ಅಲ್ಲಿಂದ ಪ್ರಾರಂಭವಾಯಿತು ಹನುಮನ ಜೀತದ ಬದುಕು.
ತಕ್ಕಮಟ್ಟಿಗೆ ಚುರುಕಾಗಿದ್ದ ಹನುಮ ಬಹಳ ಸೃಜನಶೀಲ ಗುಣ ಹೊಂದಿದ್ದ. ಎಲ್ಲಾ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದ. ತಾನು ಏನಾದರೂ ಒಂದನ್ನು ಸೃಷ್ಟಿಸಿ ಆ ಉಪಾಯದಿಂದ ಉಪಾಯದಿಂದ ಸುಲಭವಾಗಿ ಕೆಲಸ ಮಾಡಿಕೊಂಡು, ಹೆಚ್ಚು ಸಮಯ ವಿಶ್ರಾಂತಿಯಲ್ಲಿ ಕಳೆಯಲು ಇಚ್ಚಿಸುತ್ತಿದ್ದ. ಆದರೆ ಆಗ ಒಂದು ನಿಮಿಷವೂ ಬಿಡುವಿಲ್ಲದ ಸತತ ಕೆಲಸಗಳ ಮಧ್ಯೆ ಹೈರಾಣಾಗಿ ಹೋಗುತ್ತಿದ್ದ. ಅತ್ತ ಹೊರಗಿನ ದುಡಿತದ ಜೊತೆಗೆ ತನ್ನ ಸ್ವಂತ ಮನೆಯ ದುಡಿತವು ಸೇರಿ, ಬದುಕು ಜರ್ಜರಿತವಾಗಿತ್ತು.
ಮುಂದೆ ಶಾನುಭೋಗ ಗುಂಡಣ್ಣನವರ ಮಕ್ಕಳು ಉತ್ತಮ ವಿದ್ಯಾಭ್ಯಾಸ ಪಡೆದು ಪಟ್ಟಣಗಳಲ್ಲಿ ನೆಲೆಸಿದರು. ವಯಸ್ಸಾದ ಗುಂಡಣ್ಣನವರು ಮತ್ತು ಅವರ ಧರ್ಮಪತ್ನಿ ಮಾತ್ರ ಹಳ್ಳಿಯಲ್ಲಿ ಉಳಿದಿದ್ದರು. ಹೀಗೆಯೇ ಮನೆಯ ಕೆಲಸಗಾರನಾದ ಕಾರಣ ವಿಧಿಯಿಲ್ಲದೆ ಅವರಿಬ್ಬರ ಸೇವೆಯನ್ನು ಮಾಡುತ್ತಾ, ಹನುಮ ಒಂದರ್ಥದಲ್ಲಿ ಸವೆದು ಹೋಗಿದ್ದ. ಜೀವನದಲ್ಲಿ ಮುಂದಿನ ಕಾಲದಲ್ಲಾದರೂ ಸುಖವನ್ನು ಹೊಂದುವ ಕನಸು ಕಾಣುತ್ತಿದ್ದ.
ಅವನ ಅದೃಷ್ಟವೋ ಎಂಬಂತೆ ಗುಂಡಣ್ಣನವರ ಧರ್ಮಪತ್ನಿ ಸೀತಮ್ಮನವರು ವಿಧಿವಶರಾದಾಗ, ಅವರ ಮಕ್ಕಳು ಗುಂಡಣ್ಣನವರನ್ನು ತಮ್ಮ ಜೊತೆ ಪಟ್ಟಣಕ್ಕೆ ಕರೆದುಕೊಂಡು ಹೋಗಲು ತೀರ್ಮಾನಿಸಿದರು. ಹಾಗೆ ಹೋಗುವಾಗ ಮುಖ್ಯವಾಗಿ ಕೆಲಸಕ್ಕೆ ಬರುವ ಕೆಲವು ವಸ್ತುಗಳನ್ನು ಮಾತ್ರ ತಮ್ಮೊಂದಿಗೆ ಕೊಂಡೊಯ್ದು, ಉಳಿದ ವಸ್ತುಗಳನ್ನು ಆರಕ್ಕೋ-ಮೂರಕ್ಕೋ ಅಲ್ಲೇ ಮಾರಾಟ ಮಾಡಲು ಹನುಮನಿಗೆ ಒಪ್ಪಿಸಿದರು. ಅದಾದ ತರುವಾಯ ಅರೆಬರೆ ಶಿಥಿಲವಾಗಿದ್ದ ಖಾಲಿ ಮನೆಯಲ್ಲಿ ಹನುಮನ ದರ್ಬಾರ್ ಆರಂಭವಾಯಿತು.
ಹೀಗೆ ಒಮ್ಮೆ ಅವನು ಗುಜರಿ ಸಾಮಾನಿನವರಿಗೆ ಹಾಕಲು ಹಳೆಯ ಪೆಟ್ಟಿಗೆಗಳನ್ನು ಖಾಲಿ ಮಾಡುತ್ತಿರುವಾಗ, ಯಾವುದೋ ಒಂದು ಪುಸ್ತಕ ಅವನ ಕೈಗೆ ಸಿಕ್ಕಿತು. ಮೊದಲನೆಯ ಎರಡು ಪುಟಗಳು ಗೆದ್ದಲು ಹಿಡಿದು ಹಾಳಾಗಿತ್ತು. ಆದರೂ ಏನೋ ಒಂದು ಆಕರ್ಷಣೆ ಆ ಭಾರಿ ಪುಸ್ತಕದ ಮೇಲೆ ಹನುಮನಿಗೆ ಉಂಟಾಗಿ, ಅದನ್ನು ಬಿಸಾಡದೆ ಮನೆಗೆ ತೆಗೆದುಕೊಂಡು ಬಂದ. ತನ್ನ ಸಂಸಾರದಲ್ಲ
ಿ ಹೆಂಡತಿ ಮತ್ತು ಮೂವರು ಮಕ್ಕಳಿಗೆ ಅದರ ಬಗ್ಗೆ ಏನು ಹೇಳದೆ ಅದನ್ನು ಜೋಪಾನವಾಗಿಟ್ಟ. ಆದರೆ ತುಂಟ ಮಕ್ಕಳ ಕಣ್ಣಿಂದ ಆ ಪುಸ್ತಕ ತಪ್ಪಿಸಿಕೊಳ್ಳಲು ಆಗದೆ, ಒಂದು ದಿನ ಹನುಮನ ಹೆಂಡತಿ ಒಗ್ಗರಣೆ ಹಾಕಿದ ಮಂಡಕ್ಕಿಯನ್ನು ಎಲ್ಲರಿಗೂ ಹಂಚುವಾಗ, ಒಬ್ಬ ಮಗ ಆ ಪುಸ್ತಕದಿಂದ ಒಂದು ಹಾಳೆ ಹರಿದು, ಅದರಲ್ಲಿ ಮಂಡಕ್ಕಿಯನ್ನು ಹಾಕಿಕೊಂಡು ಹನುಮನ ಮುಂದೆ ತಿನ್ನಲು ಕುಳಿತ.
ಅವನ ಕೈಯಲ್ಲಿ ಆ ಹಾಳೆ ಹನುಮನ ಕಣ್ಣಿಗೆ ಬಿತ್ತು. ಅದನ್ನು ಕಸಿದುಕೊಂಡು ಮಗನನ್ನು ಗದರಿಸಿ ಒಮ್ಮೆ ಹಾಳೆಯ ಮೇಲೆ ಕಣ್ಣಾಡಿಸಿದ. ಅಲ್ಲಿ ಯಾವುದೋ ಚೌಕಾಕಾರದ ಮನೆಗಳ ಮೇಲೆ ಸಂಖ್ಯೆಗಳು; ಕೆಳಗೆ ವಿವರಣೆಗಳು ಕಂಡವು. ಆಶ್ಚರ್ಯದಿಂದ ಒಮ್ಮೆ ಓದಿದ! ಅದು ಯಾವುದೋ ಜ್ಯೋತಿಷ್ಯಶಾಸ್ತ್ರದ ಸೂಚನೆ ನೀಡುತ್ತಿತ್ತು. ತಕ್ಷಣವೇ ಪುಸ್ತಕವನ್ನು ತೆಗೆದು ಹರಿದ ಪುಟವನ್ನು ಸರಿಯಾಗಿ ಹೊಂದಿಸಿ, ಅದನ್ನು ಪರಿಶೀಲಿಸಿದ. ನಿಸ್ಸಂದೇಹವಾಗಿ ಜ್ಯೋತಿಷ್ಯ ಶಾಸ್ತ್ರದ ಪುಸ್ತಕ!
ಹಸ್ತಸಾಮುದ್ರಿಕ, ಗ್ರಹಗತಿ ವಿಚಾರ, ಕಡ್ಡಿಹಾಕಿ ಭವಿಷ್ಯದ ಲೆಕ್ಕಾಚಾರ ಮಾಡುವುದು, ಮದುವೆ ನಕ್ಷತ್ರಗಳ ಹೊಂದಾಣಿಕೆ, ರಾಶಿ ಫಲ ಭವಿಷ್ಯ, ಚೋರ ಸಾಮುದ್ರಿಕ, ಮಳೆಯ ಲೆಕ್ಕಾಚಾರ, ಕನ್ಯಾ ವಿಚಾರ, ಆರೋಗ್ಯ ಸಮಸ್ಯೆಗಳಿಗೆ ಪರಿಹಾರದ ಯಂತ್ರಗಳ-ತಾಯತ್ತುಗಳ ಮಾಹಿತಿ, ಗ್ರಹಕೂಟ ಹೊಂದಾಣಿಕೆ ವಿಚಾರ, ಕವಡೆ ಶಾಸ್ತ್ರ, ಮನಸ್ಸಿನಲ್ಲಿ ಅಂದುಕೊಂಡ ಸಂಖ್ಯೆಗೆ ವಿವರಣೆ ನೀಡುವುದು...... ಇತ್ಯಾದಿ ಬಗೆಬಗೆಯ ಭವಿಷ್ಯದ ವಾಣಿ ಗಳನ್ನು ಹೇಳುವ ಪ್ರಯೋಗಗಳು ಅದರಲ್ಲಿ ಕಂಡವು. ಬಹಳ ಹಳೆಯ ಪುಸ್ತಕ!
ಪ್ರಯೋಗಾರ್ಥವಾಗಿ ತನ್ನ ಹೆಂಡತಿಯಿಂದ ಒಂದು ಸಂಖ್ಯೆ ಹೇಳಿಸಿದ. ಅದಕ್ಕೆ ಮುಂದಿನ ವಿವರಣೆ ನೋಡಿದ.... ಅದನ್ನು ಕೇಳಿದ ಆಕೆ ಎದ್ದು ಕುಣಿದಾಡಿ, ನನ್ನ ಮನದಲ್ಲಿ ಇದ್ದಿದ್ದನ್ನು ನೀವೇ ಹೇಳಿದಿರಿ! ಎಂದಳು. ಇದು ಏಕೋ ಕೆಲಸಕ್ಕೆ ಬರುವುದು ಎಂದು ಅವನ ಭವಿಷ್ಯ ಅವನಿಗೆ ಕಾಲಜ್ಞಾನದಂತೆ ಹೊಳೆಯಿತು. ಈಗ ತನ್ನಲ್ಲಿದ್ದ ಸೃಜನಶೀಲತೆಗೆ ಕೆಲಸ ಬಂದಿತು ಎಂದುಕೊಂಡ.
ಇದೇ ಊರಿನಲ್ಲಿ ಇದರ ಪ್ರಯೋಗ ಮಾಡುವುದು ಸಮಂಜಸವಲ್ಲ ಎಂದು ಮರುದಿನ ಮುಂಜಾನೆ ಆ ಪುಸ್ತಕದೊಂದಿಗೆ ತನ್ನ ಅಕ್ಕನ ಊರಿಗೆ ಪ್ರಯಾಣ ಬೆಳೆಸಿದ. ತನ್ನ ಅಕ್ಕನಿಗೆ ಹೆಚ್ಚು ವಿಸ್ತಾರವಾಗಿ ಈ ಬಗ್ಗೆ ಹೇಳದೆ; ತಾನು ಕೆಲಸ ಮಾಡುತ್ತಿದ್ದ ಗುಂಡಣ್ಣನವರ ದೈವಭಕ್ತ ತಂದೆಯವರು ತನಗೆ ಕನಸಿನಲ್ಲಿ ಬಂದು ಕಾಲಜ್ಞಾನದ ಬಗ್ಗೆ ತಿಳಿಸಿದ್ದಾರೆ! ಆದ್ದರಿಂದ ನಾನು ಹೇಳುವ ಎಷ್ಟೋ ಭವಿಷ್ಯವಾಣಿಗಳು ನಿಜವಾಗುತ್ತದೆ! ಬೇಕಾದರೆ ನೆರೆಹೊರೆಯವರಿಗೆ ಹೇಳು ನಾನು ಅವರ ಕಷ್ಟಗಳಿಗೆ ಸಹಾಯ ಮಾಡಲು ಸಿದ್ಧವಿರುವೆ! ಎಂದು ಹೇಳಿದ.
ತಮ್ಮನನ್ನು ನಂಬಿದ ಅಕ್ಕ ತನ್ನ ನೆರೆಹೊರೆಯ ಮಹಿಳೆಯರನ್ನು ಕರೆದು ಭವಿಷ್ಯ ಕೇಳಲು ಹೇಳಿದಳು. ಒಬ್ಬೊಬ್ಬರಿಗೆ ಒಂದೊಂದು ವಿಧದಲ್ಲಿ ಪುಸ್ತಕ ಬಳಸಿ ಭವಿಷ್ಯವಾಣಿ ನುಡಿದ. ಏನಾಶ್ಚರ್ಯ! ಎಲ್ಲವೂ ಸರಿ....ಸರಿ.....ಸರಿ....! ತಕ್ಷಣವೇ ಅಲ್ಲಿಗೆ ಬಂದಿದ್ದ ಮಹಿಳೆಯರು ದಕ್ಷಿಣೆಗಳನ್ನು ಸಮರ್ಪಿಸಿಯೇ ಬಿಟ್ಟರು! ಅನಾಯಾಸವಾಗಿ ಹಣ ಬಂದದ್ದನ್ನು ಕಂಡ ಹನುಮ ಪುಸ್ತಕದ ಮಹಾತ್ಮೆಯನ್ನು ಮನದಲ್ಲಿ ಸ್ಮರಿಸುತ್ತಾ, ತನ್ನ ಊರಿಗೆ ಹೊರಟ.
ಹೆಂಡತಿ ಮಕ್ಕಳೊಂದಿಗೆ ಈ ವಿಚಾರ ಪ್ರಸ್ತಾಪಿಸಿ ಪುಸ್ತಕದ ಬಗ್ಗೆ ಯಾರಿಗೂ ಏನೂ ಹೇಳಬಾರದೆಂದು ಭಾಷೆ ತೆಗೆದುಕೊಂಡ. ವಿಪರ್ಯಾಸ ದಂತೆ ರಾತ್ರೋರಾತ್ರಿ ಹನುಮನ ಭವಿಷ್ಯದ ಬಗ್ಗೆ ಅಕ್ಕನ ಊರಿನಲ್ಲಿ ಪ್ರಚಾರವಾಗಿ, ಮರುದಿನವೇ ಮತ್ತೆ ಹನುಮನಿಗೆ ಬುಲಾವ್ ಬಂದಿತ್ತು. ಇನ್ನಷ್ಟು ಜನ ತಮ್ಮ ಭವಿಷ್ಯವನ್ನು ಕೇಳಲು ಕಾತುರರಾಗಿದ್ದರು. ಹೀಗೆ ಪದೇಪದೇ ಆ ಊರಿಗೆ ಹೋಗಿ ಬರುತ್ತಾ, ಅಕ್ಕನವರ ಖಾಲಿ ನಿವೇಶನದಲ್ಲಿ ಒಂದು ಮನೆಯನ್ನೂ ಕಟ್ಟಿಕೊಂಡ. ಬರುಬರುತ್ತಾ ಕುಟುಂಬವನ್ನೇ ಅಲ್ಲಿಗೆ ಸ್ಥಳಾಂತರಿಸಿದ.
ಹನುಮ ಈಗ ಹನುಮಾನಂದ ಸ್ವಾಮೀಜಿ ಆದ. ಸೇವೆಗೆ ನಂಜನನ್ನು ನೇಮಿಸಿಕೊಂಡ. ಹನುಮ ಪುಸ್ತಕ ಬಳಸಿ ಹೇಳುತ್ತಿದ್ದ ಭವಿಷ್ಯ ಸಾಕಷ್ಟು ಅಚ್ಚರಿಗಳನ್ನು ಮೂಡಿಸಿತ್ತು. ಈತ ದೈವಾಂಶಸಂಭೂತನೇ ಎಂದು ಜನರು ಭಾವಿಸಿದ್ದರು. ಪುಸ್ತಕದ ಮೂಲ ಯಜಮಾನರಿಗೆ ದಕ್ಕದ ಈ ಸೌಭಾಗ್ಯ ಹನುಮನ ಪಾಲಿಗೆ ಒದಗಿತ್ತು. ಸುತ್ತಲೂ ಪ್ರಚಾರ ಗಿಟ್ಟಿಸಿದುದರ ಫಲವಾಗಿ ಅವನ ಆದಾಯವೂ ದಿನೇದಿನೇ ಹೆಚ್ಚಾಯ್ತು. ಆದರೂ ತನಗೆ ಮಾತ್ರ ಗೊತ್ತಿದ್ದ ಆ ಪುಸ್ತಕದ ಮಹತ್ವ ಹಾಗೂ ಪುಸ್ತಕದ ಇರುವಿಕೆಯ ಬಗ್ಗೆ ಯಾರಿಗೂ ಸುಳುಹು ಬಿಟ್ಟುಕೊಡಲಿಲ್ಲ.
ಈಗ ತನ್ನ ಪೂರ್ವ ಜನ್ಮದ ಸುಕೃತವೆಂಬಂತೆ ಪ್ರತಿದಿನ ಪುಸ್ತಕಕ್ಕೆ ಶಿರಬಾಗಿ ವಂದಿಸಿ, ತನ್ನ ಹೊಸ ಸೃಷ್ಟಿಯ ಶಾಸ್ತ್ರ ಹೇಳುವ ಕಾಯಕದಲ್ಲಿ ತೊಡಗುತ್ತಿದ್ದಾನೆ ಹನುಮ.
ಜನಮರುಳೋ ಜಾತ್ರೆ ಮರುಳೋ ಎಂಬಂತೆ ಜನರು ತಮ್ಮ ತಮ್ಮ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುಲು ಈ ದಿನದಂತೆ ಪ್ರತಿದಿನವೂ ಬರುತ್ತಿದ್ದಾರೆ. ಜನ ಬಂದಂತೆ, ನಮ್ಮ ಹನುಮಾನಂದ ಸ್ವಾಮಿಗಳ ಕೀರ್ತಿ ಮತ್ತು ಸಂಪತ್ತು ಹೆಚ್ಚುತ್ತಲೇ ಇದೆ. ಬದುಕು ಬದಲಾಗಿದೆ. ಇಷ್ಟಕ್ಕೆಲ್ಲಾ ಕಾರಣ ಮಾತ್ರ ಗೆದ್ದಲು ಹಿಡಿಯಬೇಕಿದ್ದ ಆ ಪುಸ್ತಕ ತಂದ ಅದೃಷ್ಟ! ಎಂದು ಮನೆಯವರು ನಂಬಿದ್ದರೂ, ಹನುಮನಿಗೆ ಮಾತ್ರ ಗೊತ್ತು ಅದು ತನ್ನ ಸೃಜನಶೀಲತೆಗೆ ದಕ್ಕಿದ ಫಲ! ಎಂದು.... ಏಕೆಂದರೆ ಈಗೀಗ ಹನುಮ ಪುಸ್ತಕದಲ್ಲಿ ಇಲ್ಲದ್ದನ್ನೂ ಹೇಳಿ ಜನರನ್ನು ನಂಬಿಸುತ್ತಿದ್ದಾನೆ.
ಅಮಾಯಕರು ಇರುವವರೆಗೂ ಪ್ರಪಂಚದಲ್ಲಿ ಮೋಸ ಮಾಡುವವರಿಗೆ ಕೊರತೆ ಇರದು ಅಲ್ಲವೇ. ..??