Prabhakar Tamragouri

Classics Inspirational Others

4  

Prabhakar Tamragouri

Classics Inspirational Others

ಹಿಸ್ಸಾ ( ಭಾಗ )

ಹಿಸ್ಸಾ ( ಭಾಗ )

11 mins
398



 ಏಪ್ರಿಲ್ ತಿಂಗಳ ವಿಪರೀತ ಧಗೆ , ಮನೆಯೊಳಗೆ ಸೆಖೆ ತಡೆಯಲಾಗದೆ ಹೊರಬಂದ ಕೆಂಚ . ಅಂಚೆ ಪೇದೆ ಹಲ್ಲು ಕಿರಿದು ಕೊಟ್ಟ ಕಾರ್ಡನ್ನುಆತುರದಿಂದ ಓದಿಕೊಂಡ . ಇದು ನಿಶ್ಚಯವಾಗಿಯೂ ಅವನಿಂದ ಬಂದ ಪತ್ರವೆಎಂದು ಆಶ್ಚರ್ಯದಿಂದ ಹಿಂದೆ ಮುಂದೆ ತಿರುಗಿಸಿ , ನೋಡಿ ಖಚಿತಪಡಿಸಿಕೊಂಡು ಮತ್ತೊಮ್ಮೆ ಓದಿದಾಗ ಹೊಟ್ಟೆಯೊಳಗೆ ಏನೋ ತಳಮಳ ಸಂಕಟವಾಗಿ ಕಣ್ಣಿಗೆ ಕತ್ತಲು ಕವಿದು ಶರೀರ ಕಂಪಿಸತೊಡಗಿದಾಗ ಜಗುಲಿಯ ಮೇಲೆ ಕುಳಿತು ಹಾಗೇ ಕಂಬಕ್ಕೊರಗಿಕೊಂಡ . ಹಾಗೆ ಕುಳಿತಿದ್ದಂತೆಯೇ ಅವನ ದೃಷ್ಟಿ ತುಸು ದೂರದಲ್ಲಿ ಬಂಗಾರದ ಬಣ್ಣದ ಬಿಸಿಲಿನಲ್ಲಿ ಸೊಂಪಾಗಿ ಬೆಳೆದು ಥಳಥಳನೆ ಹೊಳೆಯುತ್ತಿದ್ದ ತನ್ನ ಹೊಲದತ್ತ ಹರಿಯಿತು . ಈ ಸಾರಿ ತಣಿಯುವಷ್ಟು ಮಳೆ ನೀರನ್ನುಂಡು ಸೊಂಪಾಗಿ ಬೆಳೆದು ತೆನೆ ತುಂಬಿ ಬಸಿರಿಯಂತೆ ನಿಂತಿದ್ದ ಹೊಲವನ್ನು ನೋಡುತ್ತಿದ್ದಂತೆ ಅವನ ಕಣ್ಣುಗಳಿಂದ ನೀರು ಧಾರೆಯಾಗಿ ಹರಿದುಹೋಯಿತು .


    ನೋವಿನ ಸೆಳಕು ಮೈತುಂಬ ಹರಿದಾಡಿದಾಗ ಸ್ವಲ್ಪ ಹೊತ್ತು ಹಾಗೇ ಹೊಲದ ಬದುವಿನ ಮೇಲೆ ನೆಮ್ಮದಿಯಿಂದ ಅಡ್ಡಾಡಿ ಬರೋಣವೆಂದುಕೊಂಡು ಮೇಲೆದ್ದ ಕೆಂಚ . ಆದರೆ , ಸೋತು ಕೊರಡಿನಂತಾಗಿದ್ದ ಕಾಲುಗಳು ಮುಂದೆ ಹೆಜ್ಜೆ ಇಡಲು ನಿರಾಕರಿಸಿದವು .ಕೆಂಚ ಮತ್ತೆ ಕಂಬಕ್ಕೊರಗಿ ಕುಳಿತುಕೊಂಡ . ಮನಸ್ಸು ಹಳೆಯ ನೆನಪುಗಳತ್ತ ಜಾರಿತು .ಕುಡಿತದ ಚಟಕ್ಕೆ ಅಂಟಿಕೊಂಡಿದ್ದ ಅಪ್ಪ ಒಂದು ರಾತ್ರಿ ಕಂಠಪೂರ್ತಿ ಕುಡಿದು ತೂರಾಡುತ್ತ ಬಂದು ರಸ್ತೆಯ ಪಕ್ಕದ ಗಟಾರದಲ್ಲಿ ಬಿದ್ದು ತಲೆಯೊಡೆದುಕೊಂಡು ಸತ್ತಾಗ ಕೃಷ್ಣ ಇನ್ನೂ ಎರಡು ವರ್ಷದ ಹುಡುಗ . ಗಂಡನ ಆಕಸ್ಮಿಕ ಸಾವಿನಿಂದ ಧೈರ್ಯ ಕಳೆದುಕೊಂಡು ಕಂಗಾಲಾಗಿ ಕುಳಿತ ಅಮ್ಮ ಹಾಗೂ ತಮ್ಮನನ್ನು ಪೋಷಿಸುವ ಭಾರ ಹೊತ್ತುಕೊಂಡಾಗ ತನಗಿನ್ನೂ ಇಪ್ಪತ್ತರ ಹರೆಯ .


   ಸಾಯುವುದಕ್ಕೆ ಕೆಲವು ತಿಂಗಳ ಮುಂಚೆ ಅಪ್ಪ ಊರಿನ ಸಾಹುಕಾರ ದಯಾನಂದನ ಬಳಿ ಅಡವು ಹಾಕಿದ್ದ ತುಂಡು ಹೊಲವನ್ನು ಪುನಃ ಬಿಡಿಸಿಕೊಂಡು ತನ್ನ ವಶಕ್ಕೆ ತೆಗೆದುಕೊಳ್ಳುವ ಛಲದಿಂದ ಕಂಡ ಕಂಡವರ ಹೊಲಗದ್ದೆಗಳಲ್ಲಿ ಕೂಲಿ ಆಳಾಗಿ ದುಡಿದಿದ್ದ . ಹರೆಯದ ಮೈ ಕಬ್ಬಿಣದಂತೆ ಇದ್ದಾಗ ಬೆವರು ಹರಿಸಿ ಕಷ್ಟಪಟ್ಟು ದುಡಿದು ಕಾಸಿಗೆ ಕಾಸು ಗಂಟು ಹಾಕಿದ್ದ ಅವನ ಕೈ ಹಿಡಿದ ಲಕ್ಷ್ಮಿ ಮೈಮೇಲೆ ಒಂದಿಷ್ಟು ಚಿನ್ನದ ಒಡವೆ ಹಾಕಿಕೊಂಡು ಅವನ ಭಾಗಕ್ಕೆ ಮಹಾಲಕ್ಷ್ಮಿಯಂತೆ ಮನೆ ತುಂಬಿದಳು . ತನ್ನದೇ ಆದ ಭೂಮಿಯಲ್ಲಿ ದುಡಿಯುವ ಆಸೆ ಗಂಡನಿಗೆ ಅದಮ್ಯವಾಗಿದೆ ಎಂದು ತಿಳಿದ ಅವಳು ತಾನಾಗಿಯೇ ಮೈಮೇಲಿನ ಒಡವೆಗಳನ್ನು ಕಳಚಿಕೊಟ್ಟು " ಇದನ್ನು ಸಾಹುಕಾರರಿಗೆ ಕೊಟ್ಟು ನಿಮ್ಮ ಹೊಲವನ್ನು ಬಿಡಿಸಿಕೊಳ್ಳಿ . ಭೂಮಿತಾಯಿ ಅನುಗ್ರಹ ಮಾಡಿದಾಗ ಮತ್ತೆ ಒಡವೆಗಳನ್ನು ಮಾಡಿಸಿಕೊಂಡರಾಯಿತು ....." ಎಂದಳು ಲಕ್ಷ್ಮಿ ಗಂಡನ ಹತ್ತಿರ . ಸಾಹುಕಾರನ ಋಣ ಬಡ್ಡಿ ಸಮೇತ ತೀರಿಸಿ ತನ್ನ ಹೆಸರಿಗೆ ಹೊಲವನ್ನು ಬರೆಸಿಕೊಂಡಾಗ ಇಡಿಯ ಜಗತ್ತನ್ನೇ ಗೆದ್ದಷ್ಟು ಸಂತೋಷವಾಯಿತು .


   ಇನ್ನು ತನ್ನ ಕಷ್ಟಗಳೆಲ್ಲಾ ತೀರಿದವು ಎಂದು ನಿರಾಳವಾಗಿ ಉಸಿರು ಬಿಟ್ಟಾಗ ಅವನ ಅಮ್ಮ ಕಾಯಿಲೆ ಬಿದ್ದಳು . ಎಷ್ಟು ಹಣ ಖರ್ಚು ಮಾಡಿದರೂ ಅವಳನ್ನು ಉಳಿಸಿಕೊಳ್ಳಲು ಆಗಲಿಲ್ಲ . ಸಾಯುವ ಮುನ್ನ ಅವಳು ಸೊಸೆಯ ಕೈ ಹಿಡಿದು , " ಕೃಷ್ಣನನ್ನು ನಿನ್ನ ಮಡಿಲಿಗೆ ಹಾಕಿದ್ದೇನೆ . ಇನ್ನು ಮೇಲೆ ನೀನೆ ಅವನಿಗೆ ತಾಯಿ ...." ಎಂದು ಅವನನ್ನು ಒಪ್ಪಿಸಿ ಈ ಪ್ರಪಂಚಕ್ಕೆ ಕೈ ಮುಗಿದು ಹೊರಟುಬಿಟ್ಟಳು . ತನ್ನ ಅತ್ತೆಗೆ ಕೊಟ್ಟ ಮಾತಿನಂತೆ ಲಕ್ಷ್ಮಿ ಕೃಷ್ಣನನ್ನು ತನ್ನ ಚೊಚ್ಚಲು ಮಗನೆಂದೇ ತಿಳಿದು ಮುದ್ದಿನಿಂದ ಬೆಳೆಸಿದಳು . ಮುಂದೆ ಕೆಲವು ವರ್ಷಗಳ ಮೇಲೆ ಅವಳ ಹೊಟ್ಟೆಯಲ್ಲಿ ಪಾರ್ವತಿ ಹುಟ್ಟಿದರೂ ಅವನ ಮೇಲಿನ ಪ್ರೀತಿ ಕಡಿಮೆ ಮಾಡಲಿಲ್ಲ . ಅವಳೇನೂ ತನ್ನ ಮಗಳ ಕಣ್ಣಿಗೆ ಬೆಣ್ಣೆ , ಮೈದುನನ ಕಣ್ಣಿಗೆ ಸುಣ್ಣ ತಿಕ್ಕುವ ಹೀನ ಕೆಲಸಕ್ಕೆ ಕೈ ಹಾಕಿದವಳಲ್ಲ . ಎಂದಿದ್ದರೂ ಹೆಣ್ಣು ಮಗಳು ವಯಸ್ಸಿಗೆ ಬಂದ ಮೇಲೆ ಮದುವೆಯಾಗಿ ಗಂಡನ ಮನೆಗೆ ಹೊರಟು ಬಿಡುತ್ತಾಳೆ . ಮುಪ್ಪಿನ ಸಮಯದಲ್ಲಿ ತಮಗೆ ಊರುಗೋಲಾಗಿ ನಿಲ್ಲುವವನು ತನ್ನ ಮೈದುನನೇ ಎನ್ನುವ ಆಸೆ ಇಟ್ಟುಕೊಂಡಿದ್ದಳು ;


  ಸುಖವಾಗಿ ಬೆಳೆದ ಕೃಷ್ಣನಿಗೆ ಕೈ ಕೆಸರು ಮಾಡಿಕೊಂಡು ಹೊಲದಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲವೆಂದು ತಿಳಿದ ಕೆಂಚ ತಮ್ಮನನ್ನು ಸ್ಕೂಲಿಗೆ ಹಾಕಿದ .ಅವನು ಚೆನ್ನಾಗಿ ಕಲಿತು ನೌಕರಿ ಹಿಡಿದು ಹಾಯಾಗಿ ಕುರ್ಚಿಯಲ್ಲಿ ಕುಳಿತು ಹಣ ಸಂಪಾದಿಸಲಿ ಎನ್ನುವ ಆಸೆ ಅವನದು . ಕೃಷ್ಣ ಹೈಸ್ಕೂಲು ಮುಗಿಸಿದ ಮೇಲೆ ಅವನನ್ನು ಬೆಂಗಳೂರಿನಲ್ಲಿ ಹಾಸ್ಟೇಲಿನಲ್ಲಿ ಇಟ್ಟುಕಾಲೇಜಿಗೆ ಸೇರಿಸಿದ . ತನ್ನ ಸಂಸಾರದ ಖರ್ಚು ವೆಚ್ಚದಲ್ಲಿ ಕೈ ಬಿಗಿ ಹಿಡಿದು ತಮ್ಮನ ಓದಿಗಾಗಿ ಹಣ ಉಳಿಸಿ ಪ್ರತಿ ತಿಂಗಳೂ ತಪ್ಪದೆ ಕಳುಹಿಸಿದ . ಅವನಿಗೆ ಯಾವುದಕ್ಕೂ ಕೊರತೆ ಆಗದಂತೆ ನೋಡಿಕೊಂಡ . ಕೃಷ್ಣ ಓದಿನಲ್ಲಿ ತುಂಬಾ ಬಿದ್ಧಿವಂತ . ಒಂದು ತರಗತಿಯಲ್ಲಿಯೂ ಫೇಲಾಗದೆ ಮೇಲೇರುತ್ತ ಉನ್ನತ ದರ್ಜೆಯಲ್ಲಿ ಪಾಸು ಮಾಡಿ ಪದವೀಧರನಾಗಿ ಆನಂತರ ಬ್ಯಾಂಕ್ ಒಂದರಲ್ಲಿ ಆಫೀಸರ್ ಆಗಿ ಸೇರಿಕೊಂಡಾಗ ಕೆಂಚನಿಗೆ ಅಂಗೈಯಲ್ಲಿಯೇ ಸ್ವರ್ಗ ಕಂಡಂತಾಯಿತು 


   ಕೃಷ್ಣ ಸಂಪಾದಿಸಲು ಪ್ರಾರಂಭಿಸಿದ ಮೇಲೆ ತನ್ನ ಊಟ , ವಸತಿ ಹಾಗೂ ಜೇಬು ಖರ್ಚಿಗೆ ಬೇಕಾದಷ್ಟು ಹಣ ಮಾತ್ರ ಇಟ್ಟುಕೊಂಡು ಉಳಿದದ್ದನ್ನೆಲ್ಲ ಅಣ್ಣನ ಹೆಸರಿಗೆ ಕಳುಹಿಸಿಕೊಟ್ಟಾಗ ಲಕ್ಷ್ಮಿ ಹರ್ಷದಿಂದ ಅಕಾಶಕ್ಕೇ ಹಾರಿದಳು . ಅವನಿಗೆ ಹೆಣ್ಣು ಕೊಡಲು ಊರಿನ ದೊಡ್ಡ ಜಮೀನುದಾರ ದಯಾನಂದ ತಾವಾಗಿಯೇ ಮನೆ ಬಾಗಿಲಿಗೆ ಬಂದಾಗ , ಕೆಂಚ ಹೆಮ್ಮೆಯಿಂದ ಉಬ್ಬಿಹೋದ . ಹೆಣ್ಣು ನೋಡಲು ಕೂಡಲೇ ಹೊರಟು ಬರಬೇಕೆಂದು ತಮ್ಮನಿಗೆ ಪಾತ್ರ ಬರೆದು ಹಾಕಿದ .ಕೃಷ್ಣನ ಬದಲು ಅವನ ಪತ್ರ ಬಂದಿತ್ತು . ಕೃಷ್ಣ ತಾನು ಕೆಲಸ ಮಾಡುತ್ತಿರುವ ಬ್ಯಾಂಕಿನ ತನ್ನ ಸಹೋದ್ಯೋಗಿ ಕುಸುಮಳನ್ನು ಪ್ರೀತಿಸುತ್ತಿರುವುದಾಗಿ ತಿಳಿಸಿದ್ದ . ಅವಳನ್ನು ಮದುವೆಯಾಗಲು ಅನುಮತಿ ಕೊಡಬೇಕೆಂದು ಪ್ರಾರ್ಥಿಸಿದ್ದ . ಯಾವತ್ತೂ ತಾನು ಹಾಕಿದ ಗೆರೆಯನ್ನು ದಾಟದಿದ್ದ ತಮ್ಮ ಈಗ , ಜೀವನದ ಬಹು ಮುಖ್ಯ ವಿಷಯದಲ್ಲಿ ತಾನೇ ಸ್ವಂತ ನಿರ್ಧಾರವನ್ನು ತೆಗೆದುಕೊಂಡಾಗ ಕೆಂಚನ ಅಭಿಮಾನಕ್ಕೆ ಕೊಡಲಿ ಪೆಟ್ಟು ಬಿದ್ದಿತ್ತು . ಈ ಅಪಮಾನದ ಕಹಿ ನುಂಗಲಾರದೆ ತತ್ತರಿಸಿದ . ಈ ವಿಷಯ ತಿಳಿದಾಗ ಲಕ್ಷ್ಮಿ ಸಿಟ್ಟು ,ನಿರಾಸೆಗಳಿಂದ ಕುದಿದಳು .


  ಅವಳು ಬೆಟ್ಟದಷ್ಟು ಆಸೆಗಳನ್ನು ಇಟ್ಟುಕೊಂಡಿದ್ದಳು .ಮೈದುನನನ್ನು ತನ್ನ ಸ್ವಂತ ಮಗನಂತೆ ಸಾಕಿ ಸಲಹಿದ್ದೇನೆ . ಈಗ ಅವನು ದೊಡ್ಡ ನೌಕರಿಯಲ್ಲಿದ್ದು ಕೈತುಂಬಾ ಸಂಪಾದಿಸುತ್ತಿದ್ದಾನೆ . ಆದ್ದರಿಂದ ತನ್ನ ಮಗಳು ಪಾರ್ವತಿಯ ಮದುವೆಯ ಜವಾಬ್ಧಾರಿಯನ್ನು ಅವನೇ ಹೊರುತ್ತಾನೆ . ತನ್ನ ತೌರಿನ ಸಂಬಂಧದ ಹೆಣ್ಣನ್ನು ಮೈದುನನಿಗೆ ತಂದುಕೊಂಡರೆ ಸಂಸಾರದಲ್ಲಿ ಹುಳಿ ಹಿಂಡಿ ಮನೆ ಮುರಿಯದೆ ಹೊಂದಿಕೊಂಡು ಹೋಗುತ್ತಾಳೆ .... ಎಂದೆಲ್ಲಾ ಅವಳು ನೇಯ್ದುಕೊಂಡಿದ್ದ ಸಪ್ತವರ್ಣ ರಂಜಿತ ಕನಸುಗಳೆಲ್ಲ ಈಗ ಒಡೆದು ಚೂರಾಗಿದ್ದವು . ಅವಳು ಹಾಕಿದ ಯೋಜನೆ ಹರಿದು ಮೂರಾಬಟ್ಟೆಯಾದಾಗ ಕೆರಳಿ ಕೆಂಡವಾದಳು . " ಈಗ ಅವನಿಗೆ ರೆಕ್ಕೆಪುಕ್ಕ ಬಲಿಯಿತು . ಅವನ ಕಾಲಿಗೆ ಶಕ್ತಿ ಬಂದಮೇಲೆ ಇನ್ನು ನಮ್ಮ ಅವಶ್ಯಕತೆ ಏನಿದೆ .....? ನಮ್ಮ ಮಾತಿಗೆ ಇನ್ನು ಮೇಲೆ ಏಕೆ ಬೆಲೆ ಕೊಡ್ತಾನೆ ? 

ಇಷ್ಟ ಬಂದ ಹೆಣ್ಣನ್ನು ಮದುವೆಯಾಗಿ ಪುರ್ರನೆ ಹಾರಿಹೋಗುತ್ತಾನೆ . ಹುಡುಗಿ ನಮ್ಮ ಜಾತಿಯವಳಾದರೂ ಪಟ್ಟಣದ ಕಲಿತ ಹೆಣ್ಣು . ಮೇಲಾಗಿ ಉದ್ಯೋಗದಲ್ಲಿದ್ದು ಹೇಳಿ ಬನ್ನಿ ....." ಎಂದು ಲಕ್ಷ್ಮಿ ಗಂಡನಸಂಪಾದಿಸುತ್ತಿದ್ದಾಳೆ . ಇಂಥವಳು ನಮ್ಮಂಥ ಹಳ್ಳಿಮುಕ್ಕರಿಗೆ ಏನು ಮರ್ಯಾದೆ ಕೊಡ್ತಾಳೆ ...? ಹೋಗಿ ನಿಮ್ಮ ತಮ್ಮನಿಗೆ ಛೀಮಾರಿ ಹಾಕಿ , ಸರಿಯಾಗಿ ಬುದ್ಧಿ ನ್ನು ಬೆಂಗಳೂರಿಗೆ ಕಳುಹಿಸಿಕೊಟ್ಟಳು .


  ಕೆಂಚ ತಮ್ಮನನ್ನು ಭೇಟಿ ಮಾಡಿ ತನ್ನ ಮತ್ತು ಅವನ ಅತ್ತಿಗೆಯ ಅಭಿಪ್ರಾಯಗಳನ್ನು ತಿಳಿಸಿದ . ಕೃಷ್ಣ ಅವನನ್ನು ತನ್ನ ಭಾವಿ ಮಾವನ ಮನೆಗೆ ಕರೆದುಕೊಂಡು ಹೋಗಿ ಅಲ್ಲಿ ತನ್ನ ಭಾವಿ ಪತ್ನಿ ಕುಸುಮಳನ್ನು ತೋರಿಸಿದ . ಹುಡುಗಿ ನೋಡಲು ಬಹಳ ಲಕ್ಷಣವಾಗಿದ್ದಳು . ಹುಡುಗಿಯ ತಂದೆ ತಾಯಿಯರ ಸೌಜನ್ಯ ನಡವಳಿಕೆ ಕೆಂಚನಿಗೆ ತುಂಬಾ ಮೆಚ್ಚಿಗೆಯಾಯಿತು . " ನೀನು ಒಪ್ಪಿರುವ ಹೆಣ್ಣನ್ನೇ ನಾವು ಮನೆ ತುಂಬಿಸಿಕೊಳ್ಳುತ್ತೇವೆ ....." ಎಂದು ತಮ್ಮನಿಗೆ ಹೇಳಿ ಕೆಂಚ ಊರಿಗೆ ಬಂದ .ಗಂಡ ಒಪ್ಪಿದ ಹೆಣ್ಣನ್ನು ಮನೆ ತುಂಬಿಸಿಕೊಳ್ಳಲು ಲಕ್ಷ್ಮಿ ಬೇಡವೆನ್ನಲಿಲ್ಲ . " ಮನೆ ಮುರಿಯದೆ ಎಲ್ಲರೊಂದಿಗೆ ಚೆನ್ನಾಗಿ ಹೊಂದಿಕೊಂಡು ಬಾಳಿದರೆ ಸಾಕು ...." ಎಂದು ಅವಳು ತನ್ನ ಒಪ್ಪಿಗೆ ಕೊಟ್ಟಳು 


ಆಮೇಲೆ , ಕೃಷ್ಣ ಮದುವೆಯಾಗಿ ಹೊಸ ಸಂಸಾರ ಹೂಡಿದಮೇಲೂ ತಿಂಗಳಿಗೊಂದಿಷ್ಟು ಹಣ ಅಣ್ಣನಿಗೆ ಕಳುಹಿಸುವುದನ್ನು ಮಾತ್ರ ತಪ್ಪಿಸಲಿಲ್ಲ . ಅವನ ಹೆಂಡತಿ ಕುಸುಮ ರಜೆ ಸಿಕ್ಕಾಗಲೆಲ್ಲ ಊರಿಗೆ ಬಂದು ಲಕ್ಷ್ಮಿ ಹಾಗೂ ಪಾರ್ವತಿಯ ಸಂಗಡ ನಾಲ್ಕು ದಿನಗಳು ಇದ್ದು ಸಂತೋಷವಾಗಿ ಕಾಲ ಕಳೆದು ಹೋಗುತ್ತಿದ್ದಳು . " ಒರಗಿತ್ತಿಯರಲ್ಲಿ ಹೊಂದಾಣಿಕೆ ಇದೆ . ಅಣ್ಣ ತಮ್ಮಂದಿರು ಒಳ್ಳೆ ರಾಮ ಲಕ್ಷ್ಮಣರಂತೆ ಇದ್ದಾರೆ ....." ಎಂದು ಊರಿನವರೆಲ್ಲ ಹೊಗಳಿ ಹಾಡಿತ್ತಿರುವಾಗ , ಇಂದು ಕೆಂಚನಿಗೆ ಕೃಷ್ಣನಿಂದ ಈ ಕಾಗದ ಬಂದಿತ್ತು . ಅದನ್ನು ಓದಿ ಕೆಂಚನ ಹೊಟ್ಟೆಯಲ್ಲಿ ಬೆಂಕಿ ಬಿದ್ದಂತಾಗಿತ್ತು . ಮೆಲ್ಲನೆ ಹೆಜ್ಜೆ ಹಾಕುತ್ತಾ ಹೋಗಿ ಅಡುಗೆಯ ಮನೆಯ ಬಾಗಿಲಲ್ಲಿ ನಿಂತು " ಲಕ್ಷ್ಮಿ , ಕುಡಿಯಲು ಸ್ವಲ್ಪ ಮಜ್ಜಿಗೆ ಕೊಡು ....." ಎಂದಾಗ ಅವಳು ಒಂದು ದೊಡ್ಡ ಲೋಟದ ತುಂಬಾ ಮಜ್ಜಿಗೆ ತುಂಬಿ ಚಿಟಿಕೆ ಉಪ್ಪಿನ ಪುಡಿ ಹಾಕಿ ಕೊಟ್ಟಳು . ಕೆಂಚ ಗಟಗಟನೆ ಕುಡಿದು ಲೋಟ ಅವಳ ಕೈಗೆ ಕೊಟ್ಟು ಕೈ ತಿಕ್ಕುತ್ತಾ , " ಆದ್ರೂ , ನನ್ನ ಹೊಟ್ಟೆ ಉರಿ ,ಸಂಕಟ ಕಡಿಮೆ ಆಗಲಿಲ್ಲ " ಎಂದು ಹೇಳುತ್ತಾ ಮುಖ ಹಿಂಡಿದಾಗ ಅವಳು ಗಾಬರಿಯಿಂದ ಏನೂ ತಿಳಿಯದೆ , " ಯಾಕೆ , ಇದ್ದಕ್ಕಿದ್ದಂತೆ ನಿಮಗೆ ಏನಾಯ್ತು ...?" ಎಂದಳು .

  " ನನ್ನ ಬೆನ್ನಿನಲ್ಲಿ ಬಿದ್ದ ತಮ್ಮನೇ ನನ್ನ ಹೊಟ್ಟೆಗೆ ಕೆಂಡ ಸುರಿಯುತ್ತಾನೆ ಅಂತ ನಾನು ತಿಳಿದಿರಲಿಲ್ಲ " ಎಂದ ಗದ್ಗದಿತನಾಗಿ . " ಕೃಷ್ಣನಿಂದ ಕಾಗದ ಬಂದಿತೇ ಏನು ಬರೆದಿದ್ದಾನೆ ಅವನು ...?" ಎಂದಳು ಲಕ್ಷ್ಮಿ ಆತಂಕಗೊಂಡು . " ನಮಗೆ ಹೊಟ್ಟೆಗೆ ಅನ್ನ ಕೊಟ್ಟು ಸಾಕುತ್ತಿರೋ ಈ ಭೂಮಿಯನ್ನು ಎರಡು ಭಾಗ ( ಹಿಸ್ಸಾ 

 ) ಮಾಡಬೇಕಂತೆ . ಅದರಲ್ಲಿ ಬರುವ ಒಂದು ಭಾಗ ಹೊಲವನ್ನು ಅವನ ಸ್ನೇಹಿತನಿಗೆ ಬಿಟ್ಟುಕೊಡಬೇಕಂತೆ . ಅವನು ಅಲ್ಲಿ ತೆಂಗಿನ ತೋಟ ಮಾಡುತ್ತಾನಂತೆ ನಾಳೆ ಬೆಳಿಗ್ಗೆ ಅವನ ಸ್ನೇಹಿತನನ್ನು ಕರೆದುಕೊಂಡು ಊರಿಗೆ ಬರ್ತಾನಂತೆ . ಎಲ್ಲ ವಿಷಯ ಆಗ ಮಾತನಾಡೋಣ ...ಅಂತ ಬರೆದಿದ್ದಾನೆ ." " ಆಂ, ಅವನು ಈ ರೀತಿ ಬರೆದಿದ್ದಾನಾ !?" ಲಕ್ಷ್ಮಿಗೆ ಆ ಮಾತು ಕೇಳಿ ಸಿಡಿಲು ಬಡಿದಂತಾಯ್ತು . " ನಿಜವಾಗಿ ಕೃಷ್ಣ ಹಾಗೆ ಬರೆದಿದ್ದಾನೆಯೇ ? ಇಲ್ಲ , ನಾನು ಇದನ್ನು ಖಂಡಿತವಾಗಿಯೂ ನಂಬುವುದಿಲ್ಲ ...." " ಬೇಕಾದ್ರೆ ಪಾರ್ವತಿಯ ಕೈಯಲ್ಲಿ ಕಾಗದ ಕೊಟ್ಟು ಓದಿಸಿ ಕೇಳು ..." ಎಂದು ತನ್ನ ಜೇಬಿನಲ್ಲಿದ್ದ ಕಾಗದವನ್ನತೆಗೆದು ಅವಳ ಕೈಗೆ ಕೊಟ್ಟ ಲಕ್ಷ್ಮಿ , ಪಾರ್ವತಿಯನ್ನು ಗಟ್ಟಿಯಾಗಿ ಕೂಗಿ ಕರೆದಳು . ಕೋಣೆಯಲ್ಲಿ ಪುಸ್ತಕ ಓದುತ್ತಿದ್ದ ಪಾರ್ವತಿ ಪುಸ್ತಕವನ್ನು ಕೈಯಲ್ಲಿ ಹಿಡಿದೇ ಓಡಿಬಂದಳು . ಮಗಳ ಕೈಗೆ ಕಾಗದ ಕೊಟ್ಟು , " ನಿನ್ನ ಚಿಕ್ಕಪ್ಪ ಏನು ಬರೆದಿದ್ದಾನೆ ಅಂತ ಗಟ್ಟಿಯಾಗಿ ಓದಿ ಹೇಳು " ಎಂದಳು .


  ಪಾರ್ವತಿ ಪತ್ರವನ್ನು ಒಮ್ಮೆ ಮನಸ್ಸಿನಲ್ಲಿ ಓದಿಕೊಂಡು ಆನಂತರ ಗಟ್ಟಿಯಾಗಿ ಓದಿ ತಾಯಿಯ ಕೈಗೆ ಕೊಟ್ಟು ತಕ್ಷಣವೇ ತನ್ನ ಕೋಣೆಗೆ ಹೋಗಿಬಿಟ್ಟಳು . ಲಕ್ಷ್ಮಿ ಕನಲಿ ಕೆಂಡವಾದಳು . " ಇಷ್ಟು ದಿನ ಮಲ್ಲಿ ಹಾಗೆ ಇದ್ದ ಆ ಕುಸುಮಳೇ ಅವನ ಕಿವಿ ಹಿಂಡಿದ್ದಾಳೆ " ಎಂದು ಮನಸ್ಸಿನ ಕಹಿಯನ್ನೆಲ್ಲಾ ಒರಗಿತ್ತಿಯ ಮೇಲೆ ಹಾಕಿದಳು . " ಬೇರೆ ಮನೆಯಿಂದ ಬಂದವಳನ್ನು ಏಕೆ ಬಯ್ಯುತ್ತೀಯೆ ....? ನನ್ನ ತಮ್ಮನ ಬುದ್ದಿ ನೆಟ್ಟಗಿದ್ದಿದ್ದರೆ ಯಾರು ತಾನೇ ಏನು ಮಾಡೋದಕ್ಕೆ ಆಗುತ್ತೆ ಹೇಳು ? ಮುಖ್ಯವಾಗಿ ಅವನಿಗೆ ಈಗ ಹಣ ಬೇಕಾಗಿದೆ ....ಅಂತ ಕಾಣುತ್ತೆ . ಅದಕ್ಕೇ ಪಾಲಿನ ವಿಷಯ ಎತ್ತಿದ್ದಾನೆ . ಹೋದಸಾರಿ ಊರಿಗೆ ಬಂದಿದ್ದಾಗ ಬೆಂಗಳೂರಿನಲ್ಲಿ ಒಂದು ಸೈಟು ತೆಗೆದುಕೊಂಡು ಮನೆ ಕಟ್ಟಬೇಕು ಅಂತ ಹೇಳಿದ್ದು ನಿಂಗೆ ಜ್ಞಾಪಕ ಇರಬೇಕಲ್ಲವೇ ? ತನ್ನ ಪಾಲಿನ ಹೊಲವನ್ನು ಸ್ನೇಹಿತನಿಗೆ ಮಾರಿಕೊಂಡು ಅಲ್ಲಿ ಸೈಟು ಕೊಳ್ಳವುದು ಅವನ ಉದ್ದೇಶ ಅಂತ ಕಾಣುತ್ತೆ " 


    " ನಾಳೆ ನಿಮ್ಮ ತಮ್ಮ ಬಂದಾಗ ಖಡಾಖಂಡಿತವಾಗಿ ಹೇಳಿಬಿಡಿ . ಹೊಲ ನಮ್ಮದು . ಅದರಲ್ಲಿ ನಿನಗೆ ಪಾಲುಗೀಲು ಏನೂ ಇಲ್ಲ ಅಂತ . ಆದರೆ , ತಮ್ಮನ ಮುಖ ನೋಡಿದ ತಕ್ಷಣವೇ ಕರಗಿಹೋಗಿ ಏನಾದರೂ ಎಡವಟ್ಟು ಮಾಡಿ ನಮ್ಮ ತಲೆಯ ಮೇಲೆ ಚಪ್ಪಡಿ ಎಳೆಯಬೇಡಿ . ಪಾರ್ವತಿ ಮದುವೆಗೆ ನಿಂತಿದ್ದಾಳೆ .ಅವಳ ಮದುವೆ ಬೇರೆ ಆಗಬೇಕು . ಆಮೇಲೆ ಏನಾದರೂ ಹೆಚ್ಚುಕಡಿಮೆ ಆದರೆ .....?! ಇವನನ್ನು ನಂಬಿದರೆ ನಮ್ಮ ಕೈಗೆ ತೆಂಗಿನ ಚಿಪ್ಪು ಸಿಗುತ್ತೆ ಅಷ್ಟೇ . ನಮ್ಮ ಹೊಲದಲ್ಲಿ ಪಾಲು ಕೇಳಿದವನು ಇನ್ನು ನಮ್ಮ ಪಾರ್ವತಿಯ ಮದುವೆ ಮಾಡುತ್ತಾನೆಯೇ ....? ನಮ್ಮ ಹೊಲ ಮಾರಿಕೊಂಡೇ ಮಗಳ ಮದುವೆ ಮಾಡಬೇಕಾಗುತ್ತದೆಯೋ ಏನೋ ? " ಎಂದು ಲಕ್ಷ್ಮಿ ಗಟ್ಟಿಯಾಗಿ ಬಿಕ್ಕಳಿಸಲಾರಂಭಿಸಿದಳು . ಕಣ್ಣೀರು ಹರಿಸುತ್ತಾ ಮುಂದೆ ನಿಂತಿದ್ದ ಹೆಂಡತಿಯನ್ನು ಕಂಡು ಕೆಂಚನ ಎದೆ ಹಿಂಡಿದಂತಾಯಿತು . ಇವಳು ಕೃಷ್ಣನನ್ನು ಅದೆಷ್ಟೊಂದು ಪ್ರೀತಿಸುತಿದ್ದಳು ಅವನ ನೆತ್ತಿಗೆ ಹರಳೆಣ್ಣೆ ಹಾಕಿ ನೀರು ಹಾಕಿ , ಹಾಲು ತುಪ್ಪ ಸಮೃದ್ಧಿಯಾಗಿ ಉಣಿಸಿ ಮುದ್ದು ಮಾಡಿ ಬೆಳೆಸಿದ್ದಳು . ಅವನು ಹಟ ಮಾಡಿದಾಗ ತಾನು ಹೊಡೆಯಲು ಕೈ ಎತ್ತಿದರೆ ಅಡ್ಡ ನಿಂತು " ಹುಡುಗ ಚಿಕ್ಕವನು . ತಿಳುವಳಿಕೆ ಇಲ್ಲ " ಎಂದು ಅವನ ಪರ ವಹಿಸಿ ಮಾತನಾಡುತ್ತಿದ್ದಳು . ಅವನನ್ನು ಕಂಡರೆ ಪ್ರಾಣಬಿಡುತ್ತಿದ್ದ ಇವಳಿಗೆ ಇಂಥ ದುಃಖವನ್ನು ಅವನು ಕೊಡಬಹುದೇ ? ಗಿಣಿಯಂತೆ ತನ್ನನ್ನು ಸಾಕಿದವಳನ್ನು ಹದ್ದಾಗಿ ಕುಕ್ಕಿಬಿಡಬಹುದೇ ....?


  " ಎಲ್ಲಾದ್ರೂ ಅವನು ಚೆನ್ನಾಗಿ ಬದುಕಿಕೊಳ್ಳಲಿ ಬಿಡು . ಏನೇ ಅಂದರೂ ಇದು ನನ್ನ ಅಪ್ಪನ ಹೊಲ . ಪಿತ್ರಾರ್ಜಿತ ಆಸ್ತಿ . ನನ್ನ ಸ್ವಂತ ಆಸ್ತಿಯಲ್ಲ . ನನ್ನ ಜೊತೆಯಲ್ಲಿ ರಕ್ತ ಹಂಚಿಕೊಂಡು ಹುಟ್ಟಿದ ತಮ್ಮನಿಗೆ ಈ ಹೊಲದಲ್ಲಿ ಪಾಲು ಸೇರಬೇಕಾದದ್ದು ನ್ಯಾಯ ಅಲ್ಲವೇ ? ಅವನಿಷ್ಟದಂತೆ ಪಾಲು ಮಾಡಿ ಕೊಟ್ಟುಬಿಡೋಣ .ಅವನು ಏನು ಬೇಕಾದರೂ ಮಾಡಿಕೊಳ್ಳಲಿ . ಅವನು ಕೈ ಬಿಟ್ಟರೂ ಹುಟ್ಟಿಸಿದ ಆ ದೇವರು ನಮ್ಮ ಕೈ ಬಿಡುವುದಿಲ್ಲ . ಕಾಪಾಡುತ್ತಾನೆ ...." ಎಂದ ಕೆಂಚ ಗೊಗ್ಗರು ದನಿಯಿಂದ . ಲಕ್ಷ್ಮಿ ಸಿಟ್ಟಿನ ಜ್ವಾಲೆಯಾದಳು . ಅವಳ ಬಾಯಿಂದ ಗುಂಡುಗಳೇ ಸಿಡಿದವು . " ಇದು ನ್ಯಾಯ ಅಂತ ಆ ಶಿವನೂ ಒಪ್ಪುವುದಿಲ್ಲ . ಅವನನ್ನು ಹಾಸ್ಟಲಿನಲ್ಲಿಟ್ಟು ಓದಿಸುವುದಕ್ಕೆ ಎಷ್ಟೊಂದು ಹಣ ಖರ್ಚು ಮಾಡಲಿಲ್ವೆ ? ಆದರೆ , ಈಗ ಅವನು ದೊಡ್ಡ ಕೆಲಸದಲ್ಲಿದ್ದಾನೆ . ಕೈತುಂಬಾ ಸಂಪಾದಿಸುತ್ತಾನೆ . ಅಲ್ಲದೆ ಅವನ ಹೆಂಡತಿಯೂ ಸಂಪಾದಿಸುತ್ತಾಳೆ . ಈಗ ಅವನಿಗೆ ಹಣದ ಕೊರತೆ ಎಲ್ಲಿದೆ ....? ಅದೂ ಅಲ್ಲದೆ ನಮ್ಮ ಹೊಲದಲ್ಲಿ ಪಾಲು ಕೇಳಲು ಹಕ್ಕು ಎಲ್ಲಿದೆ ? ನಿಮ್ಮಪ್ಪ ಸಾಹುಕಾರರಲ್ಲಿ ಅಡವಿಟ್ಟಿದ್ದ ಹೊಲವನ್ನು ನನ್ನ ಒಡವೆಗಳನ್ನು ಕೊಟ್ಟು ಬಿಡಿಸಿಕೊಂಡಿರುವ ವಿಷಯ ಊರಿನಲ್ಲಿ ಎಲ್ಲರಿಗೂ ತಿಳಿದಿದೆ . ಹೇಗೂ ಹೊಲ ನಿಮ್ಮ ಹೆಸರಿನಲ್ಲಿ ಇದೆ . ಊರಿನ ನಾಲ್ಕು ಜನ ಹಿರಿಯರನ್ನು ಸೇರಿಸಿ ಪಂಚಾಯಿತಿ ಮಾಡಿ ಅವನ ಮುಖಕ್ಕೆ ಮಂಗಳಾರತಿ ಎತ್ತಿ ಮತ್ತೆ ಪಾಲಿನ ಸುದ್ದಿ ಎತ್ತದಂತೆ ಮಾಡಿ ಕಳುಹಿಸಿ ...."


  ಅವಳ ಮಾತು ಕೇಳಿ ಕೆಂಚ ವಿಚಿತ್ರವಾಗಿ ನಕ್ಕ . ಊರಿನ ಹಿರಿಯರ ಸಮ್ಮುಖದಲ್ಲಿ ಸಾಕಿದ ತಮ್ಮನೊಂದಿಗೆ ತುಂಡು ಭೂಮಿಯ ಸಲುವಾಗಿ ಜಗಳವಾಡಿ ಮನೆಯ ಮರ್ಯಾದೆಯನ್ನೆಲ್ಲ ಹರಾಜಿಗಿಡಲೇ ...? ಹೊಲ ತನ್ನ ಹೆಸರಿನಲ್ಲೇನೋ ಇದೆ . ಅವನು ಕೋರ್ಟು ಹತ್ತಿದರೂ ಕಾನೂನು ಪ್ರಕಾರ ಅವನಿಗೆ ದಕ್ಕುವುದಿಲ್ಲ ನಿಜ , ಆದರೆ , ಕಾನೂನು ಹೇಳದಿದ್ದರೂ ಈ ಹೊಲದಲ್ಲಿ ಒಡಹುಟ್ಟಿದ ಅವನಿಗೂ ಹಕ್ಕಿದೆ . ಎಂದು ತನ್ನ ಅಂತರಾತ್ಮ ನುಡಿಯುತ್ತಿದೆಯಲ್ಲ . ಇನ್ನು ಹೆಂಡತಿಯ ಜೊತೆಯಲ್ಲಿ ವಾದ ಮಾಡಿದರೆ ಅವಳನ್ನು ಮತ್ತಷ್ಟು ಉದ್ರೇಕಿಸಿದಂತೆ ಆಗುತ್ತದೆಯೇ ವಿನಾ ಯಾವ ಪ್ರಯೋಜನವೂ ಆಗುವುದಿಲ್ಲ . ಅವಳ ಮನಸ್ಸು ಒಡೆದು ಹೋಗಿದೆ . ಈಗ ಏನೇ ಮಾಡಿದರೂ ಹೊಲವನ್ನು ಅವನಿಗೆ ಕೊಡಲು ಅವಳು ಒಪ್ಪುವುದಿಲ್ಲ . ಆದ್ದರಿಂದ ಕೃಷ್ಣ ಬಂದ ಮೇಲೆ ಅವನೊಂದಿಗೆ ಏಕಾಂತದಲ್ಲಿ ಮಾತನಾಡಿ ಹೊಲವನ್ನು ಗುಟ್ಟಾಗಿ ಅಡವಿಟ್ಟು ಹಣ ಪಡೆದು ಕೃಷ್ಣನ ಪಾಲನ್ನು ಕೊಟ್ಟುಬಿಡಬೇಕು .....ಎಂದು ನಿರ್ಧರಿಸಿದರೂ ಮನಸ್ಸಿನ ವಿಪ್ಲವ ಕಡಿಮೆ ಆಗಲಿಲ್ಲ . " ಇಷ್ಟು ದಿನ ಸರಿಯಾಗಿದ್ದ ಕೃಷ್ಣನಿಗೆ ಈ ದುರ್ಬುದ್ಧಿ ಈಗ ಏಕೆ ಬಂತು " ಎಂದು ಒದ್ದಾಡಿದ .


   ಲಕ್ಷ್ಮಿಯಂತೂ ದುಃಖದಿಂದ ಹುಚ್ಚಿಯಂತೆ ಆಗಿದ್ದಳು . ಒಮ್ಮೊಮ್ಮೆ ಗಟ್ಟಿಯಾಗಿ ಅಳುತ್ತಿದ್ದಳು . ಮತ್ತೊಮ್ಮೆ ಸಿಟ್ಟಿಗೆದ್ದು ಬಾಯಿಗೆ ಬಂದಂತೆ ಕೃಷ್ಣನನ್ನು ಬೈಯುವಳು. ಪಾರ್ವತಿ , " ಚಿಕ್ಕಪ್ಪ ಅಂಥವರಲ್ಲ . ಅವರು ಬರುವವರೆಗೆ ನೀನು ಸ್ವಲ್ಪ ಸುಮ್ಮನಿರಬಾರದೇ ...? " ಎಂದು ಎಷ್ಟು ವಿಧದಲ್ಲಿ ಸಮಾಧಾನ ಮಾಡಿದರೂ ಅವಳು ಕೇಳುತ್ತಿರಲಿಲ್ಲ . ಬೆಳಗಿನಿಂದಲೂ ಇದೇ ಯೋಚನೆಯಲ್ಲಿ ಹಣ್ಣಾಗಿದ್ದ ಕೆಂಚನಿಗೆ ಅಂದು ರಾತ್ರಿ ಎಷ್ಟು ಹೊತ್ತಾದರೂ ನಿದ್ರೆ ಹತ್ತಲಿಲ್ಲ . ಹಡೆದ ತಾಯಿಗಿಂತಲೂ ಹೆಚ್ಚಾಗಿ ಸಾಕಿದ ಲಕ್ಷ್ಮಿಯ ಮನಸ್ಸು ಕೃಷ್ಣ ನೋಯಿಸಿಬಿಟ್ಟನಲ್ಲ ...ಎನ್ನುವ ವ್ಯಥೆ , ದುಃಖ ಮಡುಗಟ್ಟಿತ್ತು . ರಾತ್ರಿಯೆಲ್ಲ ನಿದ್ದೆಯಿಲ್ಲದೆ ಬೆಳಗಿನ ಸಮಯದಲ್ಲಿ ಸ್ವಲ್ಪ ನಿದ್ರೆ ಹತ್ತಿ ಕಣ್ಣು ಮುಚ್ಚಿದಾಗ , " ಅಪ್ಪ ಚಿಕ್ಕಪ್ಪ ಬಂದ " ಎಂದು ಪಾರ್ವತಿ ಅವನ ಮುಟ್ಟಿ ಅಲುಗಾಡಿಸಿದಾಗ ಕೆಂಚ ಇದೇನು ಕನಸೋಎಂದು ತಟ್ಟನೆದ್ದು ಕುಳಿತ . ಕಣ್ಣುಜ್ಜಿಕೊಂಡು ನೋಡಿದಾಗ ತಲೆಬಾಗಿಲಲ್ಲಿ ಕೃಷ್ಣ ತನ್ನ ಸ್ನೇಹಿತನ ಜೊತೆ ನಿಂತಿದ್ದ . ಎದ್ದು ಹೋಗಿ ಅವರನ್ನು ಸ್ವಾಗತಿಸುವ ಉತ್ಸಾಹವಿಲ್ಲದ್ದರಿಂದ ಹಾಸಿಗೆಯ ಮೇಲೆ ಹಾಗೇ ಕುಳಿತುಬಿಟ್ಟ .


  ಮಗಳ ಕೂಗು ಕೇಳಿ ಅಡುಗೆಯ ಮನೆಯಿಂದ ಹೊರಬಂದ ಲಕ್ಷ್ಮಿ ಕೃಷ್ಣ ಹಾಗೂ ಅವನ ಸ್ನೇಹಿತನನ್ನು ಒಂದು ಕ್ಷಣ ಮಾತಿಲ್ಲದೆ ನೋಡುತ್ತಾ ನಿಂತುಬಿಟ್ಟಾಗ ಕೆಂಚನಿಗೆ ಕಳವಳವುಂಟಾಯಿತು . ಹೆಂಡತಿ ಎದೆ ತುಂಬಾ ಸಿಟ್ಟು ತುಂಬಿಕೊಂಡಿದ್ದಾಳೆ . ಅದನ್ನು ಕೃಷ್ಣನ ಮೇಲೆ ಹಾಕಿ ಅವನ ಸ್ನೇಹಿತನ ಎದುರಿನಲ್ಲಿ ತಮ್ಮ ಸಂಸಾರದ ಗುಟ್ಟು ಒಡೆದು ಎಲ್ಲಿ ರಾದ್ದಾಂತ ಎಬ್ಬಿಸಿಬಿಡುವಳೋ ಎನ್ನುವ ಆತಂಕದಿಂದ , " ಲಕ್ಷ್ಮಿ , ಸ್ವಲ್ಪ ಇಲ್ಲಿ ಬಾ " ಎಂದು ಗಟ್ಟಿಯಾಗಿ ಕೂಗಿದ ಕೆಂಚ .ಲಕ್ಷ್ಮಿ ಗಾಬರಿಗೊಂಡು ಗಂಡನ ಹತ್ತಿರಕ್ಕೆ ಓಡಿಬಂದು ತಗ್ಗಿದ ದನಿಯಲ್ಲಿ " ನಿಮ್ಮ ಕಾಲಿಗೆ ಬೀಳ್ತೀನಿ . ಸುಮ್ನಿರಿ . ಸಿಟ್ಟಿನಲ್ಲಿ ಏನಾದರೂ ಬಾಯಿಗೆ ಬಂದ ಹಾಗೇ ಕೂಗಾಡಬೇಡಿ . ಅವನ ಸ್ನೇಹಿತನ ಎದುರಿನಲ್ಲಿ ನಮ್ಮ ಮನೆ ಮರ್ಯಾದೆ ಹೋಗುವುದು ಬೇಡ ..." ಎಂದು ಕಣ್ಣೊರೆಸಿಕೊಂಡು ಕೇಳಿದಾಗ , ಕೆಂಚ ಆಶ್ಚರ್ಯದಿಂದ ಹೆಂಡತಿಯ ಮುಖ ನೋಡಿದ 


  ನಿನ್ನೆಯೆಲ್ಲಾ ಸೂರು ಕಳಚಿ ಬೀಳುವಂತೆ ಸಿಕ್ಕಾಪಟ್ಟೆ ಕೂಗಾಡಿದಳು . ಆದರೆ ಈಗ , ಅವನ ಮುಖ ಕಂಡಕೂಡಲೇ ಮೆತ್ತಗಾಗಿಬಿಟ್ಟಳಲ್ಲ . ಎಷ್ಟೇ ಆಗಲಿ ಕೃಷ್ಣನನ್ನು ಸಾಕಿದವಳಲ್ಲವೇ ? ಅವನು ಏನು ತಪ್ಪು ಮಾಡಿದರೂ ಹೊಟ್ಟೆಯಲ್ಲಿ ಹಾಕಿಕೊಂಡು ಅವನನ್ನು ಕ್ಷಮಿಸುವ ಆತ್ಮ ಶಕ್ತಿ ಅವಳಿಗಿದೆ . ಹೊರಗೆ ಎಷ್ಟೇ ಒರಟಾಗಿ ಮಾತನಾಡಿದರೂ ಅವಳ ಹೃದಯ ತುಂಬಾ ಕೋಮಲ , ಮೃದು ಎಂದು ಲಕ್ಷ್ಮಿಯನ್ನು ಮೆಚ್ಚಿಗೆಯಿಂದ ನೋಡಿ ನಕ್ಕ . " ನೀವು ಬೇಗನೆದ್ದು ಮುಖ ತೊಳೆದುಕೊಂಡು ಬಂದು ಕೃಷ್ಣನ ಸ್ನೇಹಿತನನ್ನು ಮಾತನಾಡಿಸಿ . ಮನೆಗೆ ಬಂದ ಅತಿಥಿಗೆ ಮುಖ ಮುರಿದು ಅವಮರ್ಯಾದೆ ಮಾಡಬಾರದಲ್ಲ " ಎಂದು ಲಕ್ಷ್ಮಿ ಅಡುಗೆಯ ಮನೆ ಸೇರಿದಾಗ ಕೆಂಚ ಮುಖ ತೊಳೆಯಲು ಬಚ್ಚಲು ಕೋಣೆಗೆ ಧಾವಿಸಿದ . ಕೆಂಚ ಹೆಗಲ ಮೇಲಿದ್ದ ಪಂಚೆಯಿಂದ ಮುಖ ಒರೆಸಿಕೊಳ್ಳುತ್ತ ಹಜಾರಕ್ಕೆ ಬಂದಾಗ ಕೃಷ್ಣ ತನ್ನ ಸ್ನೇಹಿತನ ಪರಿಚಯ ಮಾಡಿಕೊಟ್ಟ . " ಶಿವರಾಮ ತುಂಬಾ ಬುದ್ಧಿವಂತ . ಕೃಷಿ ಪದವೀಧರ . ಅವನಿಗೆ ಸರಕಾರೀ ಕೆಲಸಕ್ಕೆ ಸೇರುವ ಮನಸ್ಸಿಲ್ಲ . ನಿನ್ನ ಹಾಗೆ ಮಣ್ಣಿನಲ್ಲಿ ದುಡಿಯುವುದು ಅಂದರೆ ತುಂಬಾ ಪ್ರೀತಿ ....." ಎಂದು ಕೃಷ್ಣ ಬಡಬಡನೆ ಅವನ ಬಗ್ಗೆ ಹೇಳಿದಾಗ , ಶಿಷ್ಟಾಚಾರಕ್ಕಾದರೂ ಕೆಂಚ ನಿರ್ವಾಹವಿಲ್ಲದೆ ಬಾಯಿ ಬಿಡಲೇಬೇಕಾಯ್ತು ಅಲ್ಲಿ. 


  "ತುಂಬಾ ಸಂತೋಷ ಈಗ ಹಳ್ಳಿಯಲ್ಲಿ ಹುಟ್ಟಿದವರು ಕೂಡ ಓದಿ ಪಟ್ಟಣ ಸೇರಿಕೊಳ್ಳುತ್ತಾರೆ . ಅಂಥದ್ದರಲ್ಲಿ ಪಟ್ಟಣದಲ್ಲಿ ಹುಟ್ಟಿ ಬೆಳೆದ ನೀವು ಈ ಹಳ್ಳಿಗೆ ಬಂದು ವ್ಯವಸಾಯ ಮಾಡ್ತೀನಿ ಅಂತ ಹೇಳ್ತಾ ಇದ್ದೀರಲ್ಲ . ಅದು ಬಹಳ ಸಂತೋಷದ ವಿಷಯ ......" ಎಂದು ಹೇಳಿದರೂ ಅವನ ಅಂತರಂಗದಲ್ಲಿ ಹರ್ಷದ ಕಾರಂಜಿಯೇನೂ ಚಿಮ್ಮಲಿಲ್ಲ . ಮೂವರೂ ಸೇರಿ ಅದೂ ಇದೂ ಮಾತನಾಡುತ್ತಿದ್ದಾಗ , ಪಾರ್ವತಿ ನಾಚುತ್ತ ,ಬಳುಕುತ್ತ ಬಂದು ತಿಂಡಿ ಕಾಫಿ ಸರಬರಾಜು ಮಾಡಿದಳು . ಎಲ್ಲರ ಉಪಾಹಾರವಾದಮೇಲೆ ಕೃಷ್ಣ ಪಾರ್ವತಿಯನ್ನು ಹತ್ತಿರಕ್ಕೆ ಕರೆದು ನಿಲ್ಲಿಸಿಕೊಂಡು , " ನಮ್ಮ ಪಾರ್ವತಿ ಎಸ್ ಎಸ್ ಎಲ್ ಸಿ ಮಾಡಿದ್ದಾಳೆ ಕಸೂತಿ ಕೆಲಸದಲ್ಲಿ ಬಹಳ ಜಾಣೆ . ದೇವರ ನಾಮ , ಸಿನಿಮಾ ಹಾಡುಗಳನ್ನು ಚೆನ್ನಾಗಿ ಹಾಡ್ತಾಳೆ . ಇಷ್ಟೇ ಅಲ್ಲದೆ ಸೊಂಟಕ್ಕೆ ನೊಗ ಕಟ್ಟಿ ಹೊಲದಲ್ಲಿ ದುಡಿಯುತ್ತಾಳೆ .ಅವಳಿಗೆ ಬರದೇ ಇರುವ ಕೆಲಸವೇ ಇಲ್ಲ ....." ಎಂದು ಸ್ನೇಹಿತನ ಮುಂದೆ ಅವಳನ್ನೂ ಹೊಗಳಿದಾಗ , ಅವಳ ಕೆನ್ನೆಗಳಲ್ಲಿ ಕೆಂಪು ಗುಲಾಬಿ ಅರಳಿತು . ಆದರೆ ಕೆಂಚ ಮೂಕನಂತೆ ಕುಳಿತಿದ್ದ . ಶಿವರಾಮ ಕಸಿವಿಸಿಗೊಂಡಾಗ ಕೃಷ್ಣ , " ಪಾರ್ವತಿ , ನನ್ನ ಸ್ನೇಹಿತನಿಗೆ ನಮ್ಮ ಹೊಲ ತೋರಿಸಿಕೊಂಡು ಬಾ " ಎಂದು ಅವಳನ್ನು ಅವನ ಜೊತೆಯಲ್ಲಿ ಕಳುಹಿಸಿದ .


   ಇಬ್ಬರೂ ಮುಂಬಾಗಿಲು ದಾಟಿ ಕಣ್ಮರೆಯಾದ ಮೇಲೆ ಅಡುಗೆಯ ಮನೆಯ ಬಾಗಿಲಲ್ಲಿ ನಿಂತು ಎಲ್ಲವನ್ನೂ ಕೇಳಿಸಿಕೊಳ್ಳುತ್ತಿದ್ದ ಲಕ್ಷ್ಮಿ ಹಾರಿಬಂದು ಮೈದುನನನ್ನು ತರಾಟೆಗೆ ತೆಗೆದುಕೊಂಡಳು ." ಕೃಷ್ಣ ಇದೆಲ್ಲ ಸ್ವಲ್ಪವೂ ಚೆನ್ನಾಗಿ ಕಾಣುವುದಿಲ್ಲ . ಹೊಲ ತೋರಿಸುವುದಕ್ಕೆ ನೀನೆ ಹೋಗಬೇಕಾಗಿತ್ತು . ಅದು ಬಿಟ್ಟು ವಯಸ್ಸಿಗೆ ಬಂದ ಪಾರ್ವತಿಯನ್ನು ಅವನ ಜೊತೆಯಲ್ಲಿ ಯಾಕೆ ಕಳುಹಿಸಿದೆ ...? ಊರಿನ ಜನ ಕಂಡರೆ ಆಡಿಕೊಂಡು ಗುಲ್ಲೆಬ್ಬಿಸುವುದಿಲ್ಲವೇ ....? ನಮಗೆ ಮರ್ಯಾದೆ ಬರುತ್ತದೆಯೇ ? " ಎಂದು ಸಿಟ್ಟಿನಿಂದ ಹೇಳಿದಳು . " ಅತ್ತಿಗೆ , ಯಾಕೆ ಅಷ್ಟೊಂದು ರೇಗಾಡ್ತೀರಾ ? ಊರಿನ ಜನರೆಲ್ಲಾ ನಿಮ್ಮ ಅಳಿಯನನ್ನು ನೋಡಲಿ ಅಂತಲೇ ನಾನು ಅವರಿಬ್ಬರನ್ನೂ ಜೊತೆಯಲ್ಲಿ ಕಳುಹಿಸಿದ್ದು . ಜೋಡಿ ಎಷ್ಟು ಚೆನ್ನಾಗಿದೆ ಅಂತ ಹೊಟ್ಟೆಕಿಚ್ಚು ಪಟ್ಟುಕೊಳ್ಳಲಿ ..." ಎಂದು ತುಂಟತನದಿಂದ ಕಣ್ಣು ಹೊಡೆದು ನಕ್ಕಾಗ ಲಕ್ಷ್ಮಿಯ ಸಿಟ್ಟು ಜರ್ರನೆ ಇಳಿದುಹೋಯಿತು . " ಕೃಷ್ಣ ಇದೆಲ್ಲ ಏನು ? ನಿನ್ನ ಸ್ನೇಹಿತ ನಮ್ಮ ಜಾತಿಯವನೇ ? ನಮ್ಮ ಪಾರ್ವತಿಯನ್ನು ಮದುವೆಯಾಗಲು ಒಪಿಕೊಂಡಿದ್ದಾನೆಯೇ ? ಇದೆಲ್ಲ ಏರ್ಪಾಡು ಯಾವಾಗ ನಡೆಸಿದೆ ? ಈ ವಿಷಯವನ್ನು ಮೊದಲೇ ಯಾಕೆ ನನಗೆ ತಿಳಿಸಲಿಲ್ಲ ? " ಎಂದು ಆಶ್ಚರ್ಯದಿಂದ ಪ್ರಶ್ನೆಗಳ ಮಳೆ ಸುರಿಸಿದಳು .


  " ಹೋದ ತಿಂಗಳು ಪಾರ್ವತಿ ಬೆಂಗಳೂರಿಗೆ ಬಂದವಳು ಒಂದು ವಾರ ನಮ್ಮ ಮನೆಯಲ್ಲಿದ್ದಾಗ ಈ ಏರ್ಪಾಡು ಮಾಡಿದೆ . ಶಿವರಾಮನಿಗೆ ತಂದೆ ತಾಯಿ ಯಾರೂ ಇಲ್ಲ .ಅವನು ತನ್ನ ಅಕ್ಕ ಭಾವನ ಮನೆಯಲ್ಲಿದ್ದಾನೆ . ಅವರು ಪಾರ್ವತಿಯನ್ನು ತುಂಬಾ ಮೆಚ್ಚಿಕೊಂಡಿದ್ದಾರೆ . ಅಷ್ಟೇ ಅಲ್ಲದೆ ಗಂಡು -ಹೆಣ್ಣು ಇಬ್ಬರೂ ಪರಸ್ಪರ ಒಪ್ಪಿದ್ದಾರೆ . ಎಲ್ಲರೂ ಒಪ್ಪಿದ ಮೇಲೆ ನೀವು ಕೂಡ ನನ್ನ ಸ್ನೇಹಿತನನ್ನು ಖಂಡಿತ ಒಪ್ಪುತ್ತೀರಿ ಅಂತ ಅವನನ್ನು ಕರೆದುಕೊಂಡು ಬಂದೆ ...." ಎಂದು ಹೇಳುತ್ತಾ ಕೆಂಚನ ಮುಖ ನೋಡಿದಾಗ , ಅವನಿಗೆ ಹಿಡಿಸಲಾರದಷ್ಟು ಸಂತೋಷವಾಯಿತು . " ಕಳ್ಳಿ ಪಾರ್ವತಿ ! ಈ ವಿಷಯ ನನಗೆ ತಿಳಿಸಲೇ ಇಲ್ಲ " ಎಂದಾಗ ಲಕ್ಷ್ಮಿ ಕಣ್ಣುಗಳು ಬೆಳಗಿ ಮುಖದಲ್ಲಿ ಮಂದಹಾಸ ಮೂಡಿತು . " ಪಾಪ , ಇದರಲ್ಲಿ ಪಾರ್ವತಿಯ ತಪ್ಪೇನೂ ಇಲ್ಲ . ನಾನು ಶಿವರಾಮನನ್ನು ಊರಿಗೆ ಕರೆದುಕೊಂಡು ಬರುವವರೆಗೆ ವಿಷಯ ಗುಟ್ಟಾಗಿರಲಿ ಅಂತ ಅವಳಿಗೆ ನಾನೇ ಹೇಳಿದ್ದೆ . ನಿಮ್ಮ ಇಷ್ಟದಂತೆ ಮಣ್ಣಿನಲ್ಲಿ ದುಡಿಯುವ ಆಸೆ ಇರುವ ವಿದ್ಯಾವಂತ ಗಂಡನ್ನೇ ಹುಡುಕಿ ಪಾರ್ವತಿಗೆ ಗೊತ್ತುಮಾಡಿದ್ದೇನೆ . ನಾನು ಬ್ಯಾಂಕಿನಿಂದ ಸಾಲ ತೆಗೆದು ಪಾರ್ವತಿಯ ಮದುವೆಯ ಖರ್ಚಿಗೆ ಏರ್ಪಾಡು ಮಾಡುತ್ತೇನೆ . ನಿಮ್ಮ ಹೊಲದಲ್ಲಿ ಅರ್ಧ ಭಾಗವನ್ನು ಶಿವರಾಮನಿಗೆ ಬಿಟ್ಟುಕೊಡಿ . ಅವನು ಅಲ್ಲಿ ತೆಂಗಿನ ತೋಟವನ್ನು ಮಾಡಿಕೊಂಡು ನಿಮ್ಮ ಕಷ್ಟ ಸುಖಗಳಲ್ಲಿ ಪಾಲುದಾರನಾಗಿ ಇಲ್ಲೇ ಇರುತ್ತಾನೆ . ನನ್ನ ಹಂಚಿಕೆ ನಿಮಗೆ ಒಪ್ಪಿಗೆ ತಾನೇ ....?" ಎಂದಾಗ ಕೆಂಚನಿಗೆ ಹೇಗೆ ಹೇಗೋ ಆಯಿತು .



Rate this content
Log in

Similar kannada story from Classics