Prabhakar Tamragouri

Inspirational

3.5  

Prabhakar Tamragouri

Inspirational

ಬದುಕಿನಿಂದೊಂದು ಪಾಠ

ಬದುಕಿನಿಂದೊಂದು ಪಾಠ

9 mins
264


ಮುಂದಿನ ವಾರದಲ್ಲಿ ಭಾಗತ್ತೆಯ ಮನೆಗೆ ಹೋಗಬೇಕೆಂದು ರಾಯರು ನಿರ್ಧರಿಸಿದ್ದರು . ಅಷ್ಟರಲ್ಲಿ ತೋಟದ ಕೆಲಸವೂ ಒಂದಿಷ್ಟು ಮುಗಿಯಬಹುದು . ಬಹಳ ದಿವಸಗಳಾಯಿತು ಭಾಗತ್ತೆಯನ್ನೂ , ಅವಳ ಮಕ್ಕಳನ್ನೂ ನೋಡಿ . ಈಗೊಂದು ವರುಷದ ಹಿಂದೆ ಬೆಂಗಳೂರಿನಲ್ಲಿ ಅಕಸ್ಮಾತ್ತಾಗಿ ಅವಳ ದೊಡ್ಡ ಮಗ ವಸಂತ ಸಿಕ್ಕಿದ್ದ . ನೋಡಿದರೂ ನೋಡದವನ ಹಾಗೆ ಮುಖ ತಿರುಗಿಸಿ ಹೋಗುತ್ತಿದ್ದವನನ್ನು ತಾನಾಗೇ ಕರೆದು ಮಾತನಾಡಿಸಿದ್ದಕ್ಕೆ ಸ್ವಲ್ಪ ಸಿಟ್ಟಿನಿಂದಲೇ , " ನಮ್ಮ ಆಸ್ತೀನೆಲ್ಲಾ ನುಂಗಿ ನೀರು ಕುಡಿದಾದ ಮೇಲೂ ನಿಮಗೆ ತೃಪ್ತಿ ಸಿಗಲಿಲ್ವಾ ....? ಇನ್ನೇನು ಬಾಕಿಯಿದೆ ....? "ಅಂತ ಹೇಳಿ ಹೊರಟು ಹೋಗಿದ್ದ .


ರಾಯರು ಏನೂ ಹೇಳದೆ ಸುಮ್ಮನೆ ಮುಗುಳ್ನಕ್ಕಿದ್ದರು . ವಯಸ್ಸಿಗೆ ಬಂದ ಹುಡುಗರು . ಯೌವನದ ಬಿಸಿರಕ್ತ ಮೈಯಲ್ಲಿ ಹರೀತಾ ಇದೆ . ವಯೋಧರ್ಮಕ್ಕನುಗುಣವಾಗಿ ಮಾತಾಡುತ್ತಾರೆ . ತಮ್ಮ ಅಂತರಂಗ ಅರಿತಾದ ಮೇಲೆ ಅವರಿಗೆಲ್ಲಾ ಆಶ್ಚರ್ಯವಾಗಬಹುದು ಅಂದುಕೊಳ್ಳುತ್ತಾರೆ ರಾಯರು . ಈಗ ಎರಡು ತಿಂಗಳ ಹಿಂದೆ ಅನಂತಯ್ಯನವರು ಪತ್ರ ಬರೆದಿದ್ದರು ಆ ಪತ್ರದಲ್ಲಿ ಭಾಗತ್ತೆಯ ಸಂಸಾರದ ಸಂಪೂರ್ಣ ಮಾಹಿತಿ ಇತ್ತು . ಅವಳು ಅನಂತಯ್ಯನವರಿಂದ ಆಗಾಗ ಸಹಾಯ ಬೇಡುತ್ತಿದ್ದಾಳೆಂದೂ , ಅವಳ ಮೂವರು ಮಕ್ಕಳೂ ಈಗ ತುಂಬಾ ಬುದ್ಧಿವಂತರಾಗಿದ್ದಾರೆಂದೂ ಬರೆದಿದ್ದರು . ಭಾಗತ್ತೆಯ ಮನೆಯ ವಿಚಾರವಾಗಿ ಅನಂತಯ್ಯನವರು ತಿಂಗಳಿಗೊಂದಾದರೂ ಪತ್ರ ಬರೆಯುತ್ತಿದ್ದರು .


 ಪ್ರತಿ ಪತ್ರ ಬಂದಾಗಲೂ ನನ್ನ ನಿರ್ಧಾರ ಸರಿಯಾಗಿತ್ತು . ನಾನು ಹಾಗೆ ನಡೆದುಕೊಂಡಿದ್ದೇ ಸರಿ ಅಂದು ಕೊಳ್ಳುತ್ತಾರೆ ರಾಯರು . ಆಗಾಗ ತಮ್ಮ ಕೋಣೆಯಲ್ಲಿ ಒಬ್ಬರೇ ಕುಳಿತು ಈ ಬಗ್ಗೆ ಚಿಂತಿಸುತ್ತಾರೆ . ಈಚೆಗೆ ಅವರ ಪತ್ನಿ ಸೀತಮ್ಮ ಕೂಡಾ .... , " ಇನ್ನೆಷ್ಟು ದಿನಾಂತ ಹೀಗೆ ....? ಅವರ ಭಾಗವನ್ನು ಅವರಿಗೇ ಕೊಟ್ಟುಬಿಡಿ ....." ಅಂತ ಒತ್ತಾಯಿಸುತ್ತಿದ್ದಾರೆ . ಹೌದು , ಈಗ ಆ ಕಾಲ ಬಂದಿದೆ ಅನಿಸುತ್ತಿದೆ ರಾಯರಿಗೆ . 


 ಭಾಗತ್ತೆ ರಾಯರಿಗೆ ದೂರದವಳೇನೂ ಅಲ್ಲ . ಸ್ವಂತ ಅತ್ತಿಗೆ . ಆದರೆ ಈಗ , ಆಕೆ ತನ್ನಿಂದ ದೂರವಾಗಿದ್ದಾಳೆ . ಆದರೇನು ....? ಒಂದಲ್ಲ ಒಂದಿನ ಮತ್ತೆ ತಮ್ಮ ಹತ್ತಿರ ಬಂದೇ ಬರುತ್ತಾಳೆ ಅನ್ನುವ ಭರವಸೆಯಿದೆ . ತಮ್ಮಿಂದ ದೂರ ಹೊರಟುಹೋದ ಆಕೆ ಒಂದೇ , ಎರಡೇ .....ಕಾಗದ ಬರೆದದ್ದು ? ಅಬ್ಬಾ ! ಅದೆಂಥಾ ಮಾತುಗಳು .... ಏನು ಕಥೆ .....ಒಂದಿಷ್ಟು ಆಸ್ತಿ ಕೈಬಿಟ್ಟು ಹೋಗೇ ಬಿಡ್ತು ಎನ್ನುವ ಸಂಶಯದಿಂದಾಗಿ ಬಾಯಿಗೆ ಬಂದಂತೆ ಬರೆದಿದ್ದಳು . ಅಷ್ಟೇಕೆ ..? ತಮ್ಮನ್ನು ಕೋರ್ಟಿಗೂ ಎಳೆಯುವುದಾಗಿ ಬೆದರಿಸಿದ್ದಳು . ಆದರೆ , ಏನೂ ಆಗಿರಲಿಲ್ಲ . ಕ್ರಮೇಣ ಆಕೆಯ ಕೋಪ , ಸಿಟ್ಟು ಹಾಗೇ ಶಮನವಾಗಿತ್ತು . ಆಕೆಗೆ ತಮ್ಮ ವಿಚಾರ ತಿಳಿಯುತ್ತಿದೆಯೋ ಇಲ್ಲವೋ ಗೊತ್ತಿಲ್ಲ . ಆದರೆ , ಆಕೆಯ ಪ್ರತಿಯೊಂದು ವಿಚಾರವೂ ತಮಗೆ ತಿಳಿಯುತ್ತಿದೆ . ತಮ್ಮ ಅವಶ್ಯಕತೆ ಇದ್ದಾಗ ಮಾತ್ರ ಎದುರಿಗೆ ಹೋದರಾಯಿತು ಅಂದುಕೊಂಡು ಹಿಂದೆಯೇ ಉಳಿದಿದ್ದಾರೆ ರಾಯರು .


ರಾಯರು ಆಗರ್ಭ ಶ್ರೀಮಂತರು . ತಮ್ಮ ಇಪ್ಪತ್ತು ಎಕರೆ ಪ್ರದೇಶದಲ್ಲಿ ತೆಂಗು , ಅಡಿಕೆ , ಏಲಕ್ಕಿ , ಮೆಣಸು ...ಮುಂತಾದವುಗಳ ಸಮೃದ್ಧ ಬೆಳೆ. ಹತ್ತಾರು ಜನ ನೆಮ್ಮದಿಯಿಂದ ಕಾಲ ಕಳೆಯುವಷ್ಟು ಉತ್ಪಾದನೆಯಾಗುತ್ತಿತ್ತು . ವಂಶಪಾರಂಪರ್ಯವಾಗಿ ಬಂದ ಆಸ್ತಿಗೆ ರಾಯರೂ ಮತ್ತು ಅವರ ಅಣ್ಣನೂ ಹಕ್ಕುದಾರರು . ಅವಿಭಕ್ತ ಕುಟುಂಬವಾದ್ದರಿಂದ ಆಸ್ತಿ ವಿಭಜನೆಯ ಪ್ರಶ್ನೆ ಉದ್ಭವಿಸಲೇ ಇಲ್ಲ . ರಾಯರ ಅಣ್ಣನಿಗೆ ಮೂವರು ಗಂಡು ಮಕ್ಕಳು . ರಾಯರಿಗೆ ಇಬ್ಬರು ಗಂಡು ಮಕ್ಕಳು . ಒಬ್ಬಳು ಮಗಳು . ಮಗಳಿಗೆ ಮದುವೆಯಾಗಿದೆ . ಗಂಡನ ಮನೆಯಲ್ಲಿ ಸುಖವಾಗಿ ಸಂಸಾರ ಮಾಡಿಕೊಂಡಿದ್ದಾಳೆ . ಅಳಿಯ ಇಂಜಿನೀಯರ್ . ಹಿರಿಯ ಮಗ ಪದವೀಧರನಾಗಿ , ಈಗ ತಂದೆಗೆ ಸಹಾಯಕನಾಗಿ ತೋಟದ ಜವಾಬ್ಧಾರಿ ಹೊತ್ತಿದ್ದಾನೆ . ಎರಡನೇ ಮಗ ಇಂಜಿನೀಯರ್ . ಮುಂಬೈನಲ್ಲಿ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ .


ರಾಯರು ಮಗಳ ಮದುವೆಗೆ ಆಹ್ವಾನಿಸಲು ಭಾಗತ್ತೆಯ ಮನೆಗೆ ಹೋದಾಗ , ಆಕೆ ರಾಯರನ್ನು ಒಳಗೆ ಕರೆಯಲೂ ಇಲ್ಲ . ಒಂದು ಲೋಟ ನೀರು ಕೂಡಾ ಕೊಡಲಿಲ್ಲ . ಬದಲಿಗೆ ಅತ್ತು ರಂಪ ಮಾಡಿದ್ದೂ ಅಲ್ಲದೇ ಇವರನ್ನು ಚೆನ್ನಾಗಿ ಬೈದಿದ್ದಳು . " ನಮ್ಮ ಭಾಗದ ಆಸ್ತೀನೆಲ್ಲಾ ನುಂಗಿ ಹಾಕಿದ್ದೀಯಾ .....ಖಂಡಿತಾ ನಿನಗೆ ಒಳ್ಳೇದಾಗಲ್ಲ . ನಿನ್ನ ವಂಶ ನಿರ್ವಂಶವಾಗುತ್ತೆ ........" ಅಂತ ಹಿಡಿಶಾಪ ಹಾಕಿದ್ದಳು . ರಾಯರೂ , ಸೀತಮ್ಮನೂ ಒಂದು ಮಾತೂ ಆಡದೇ ಮದುವೆಗೆ ಆಹ್ವಾನಿಸಿದರು . ಆಗಲೂ ಆಕೆ ಚೆನ್ನಾಗಿ ದಬಾಯಿಸಿ , " ನಮಗೂ ನಿಮಗೂ ಯಾವುದೇ ಸಂಬಂಧವಿಲ್ಲ .ಇನ್ನು ಮುಂದೆ ಈಕಡೆ ಬರಬೇಡಿ . ಏನೋ ಪಾಪ , ಅನಂತಯ್ಯನವರು ಇವರ ಸ್ನೇಹಿತರಾಗಿ ನಮಗೊಂದಿಷ್ಟು ಸಹಾಯ ಮಾಡ್ತಿರೋದ್ರಿಂದ ನಾವೂ ಬದುಕಿದ್ದೀವಿ ......" ಅಂತ ಕಣ್ಣೀರು ಹಾಕಿದ್ದಳು . ಆ ಕೂಡಲೇ ರಾಯರಿಗೆ ಏನೇನೋ ಮಾತಾಡಬೇಕು ಅನಿಸಿದ್ದರೂ ಸಂಯಮ ತಂದುಕೊಂಡು ಎಲ್ಲದಕ್ಕೂ ಒಂದು ಕಾಲವಿದೆ ಅಂದುಕೊಂಡು ಸುಮ್ಮನಾಗಿದ್ದರು .


ಮದುವೆಗೆ ಭಾಗತ್ತೆಯಾಗಲೀ , ಆಕೆಯ ಮಕ್ಕಳಾಗಲೀ ಯಾರೂ ಬರಲಿಲ್ಲ . ಮದುವೆಗೆ ಅವರ್ಯಾರೂ ಬರುವುದಿಲ್ಲವೆಂದು ಮೊದಲೇ ಊಹಿಸಿದ್ದ ರಾಯರು ಅದಕ್ಕಾಗಿ ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ . ಬಹಳ ದಿನಗಳ ನಂತರ ಆಕೆಯ ಮನೆಗೆ ಹೋಗಿ , " ಇದೋ , ನಿಮ್ಮ ಪಾಲಿಗೆ ಬರಬೇಕಾದ ಆಸ್ತಿ ...... ಇಷ್ಟು ವರ್ಷಗಳಿಂದ ನಿಮ್ಮ ಭಾಗದ ಆಸ್ತಿಯಲ್ಲಿ ಉತ್ಪಾದನೆಯಾದದ್ದಕ್ಕೆ ಸರಿಸಮನಾದ ಮೊತ್ತ ....." ಅಂತ ಹೇಳಿ ಎರಡನ್ನೂ ಆಕೆಯ ಎದುರಿಗಿಟ್ಟರೆ ಆಕೆಗೇನೆನಿಸಬಹುದು ......? ಖಂಡಿತಾ ಆಶ್ಚರ್ಯವಾಗುತ್ತೆ . ! ತೀರಾ ಅನಿರೀಕ್ಷಿತ ಸಂಗತಿ ನಡೆದರೆ , ನಮ್ಮ ಕಣ್ಣು ಕಿವಿಗಳನ್ನೇ ನಾವು ನಂಬಲಾಗುವುದಿಲ್ಲ . ಹಾಗೇ , ಆಮೇಲೆ ಒಂದೊಂದಾಗಿ ವಿಚಾರ ತಿಳಿಸಿದರೆ ತಮ್ಮ ಅಂತರಂಗವೇನು ಅಂತ ಆಕೆಗೇ ಅರಿವಾದೀತು ಅನಿಸಿದಾಗ , ರಾಯರಿಗೆ ಹುಸಿನಗು ಮೂಡುತ್ತದೆ .


ಸುಮಾರು ಹತ್ತು ವರ್ಷಗಳ ಹಿಂದಿನ ಘಟನೆ ಹಾಗೂ , ಅಲ್ಲಿಂದೀಚೆಗೆ ನಡೆದ ವಿದ್ಯಮಾನಗಳೆಲ್ಲಾ ರಾಯರಿಗೆ ನೆನಪಿಗೆ ಬರುತ್ತದೆ . ಯಾರಿಗೂ ತಿಳಿಯದಷ್ಟು ಅಷ್ಟೇಕೆ ತಮ್ಮ ಪತ್ನಿ ಸೀತಮ್ಮನಿಗೂ ಗೂಢವಾಗಿತ್ತು ತಮ್ಮ ಅಂತರಂಗ . ತೋಟದ ಒಂದಿಷ್ಟು ಕೆಲಸಗಳನ್ನು ಮುಗಿಸಿಕೊಂಡು ರಾಯರೂ , ಅವರ ಅಣ್ಣನೂ ಮನೆಗೆ ಬಂದಾಗ ಕತ್ತಲಾವರಿಸಿತ್ತು .ಇಬ್ಬರಿಗೂ ಆಯಾಸವಾಗಿತ್ತು . ಪ್ರತಿನಿತ್ಯ ತೋಟದ ಕೆಲಸ ಮುಗಿಸಿ ಮನೆಗೆ ಬಂದ ತಕ್ಷಣ ಬಿಸಿ ಬಿಸಿ ಚಹಾ ಕುಡಿದು , ಒಂದಿಷ್ಟು ವಿಶ್ರಾಂತಿ ಪಡೆದು ಆನಂತರ ಇತರ ಕೆಲಸಗಳ ಕಡೆಗೆ ಗಮನ ಹರಿಸೋದು ರೂಢಿ . ಆದರೆ , ಆ ದಿನ ಇಬ್ಬರೂ ಮನೆಯೊಳಗೆ ಕಾಲಿಡುತ್ತಿದ್ದಂತೆ ರಾಯರ ಅಣ್ಣ ಅಲ್ಲೇ ಕುಸಿದು ಬೀಳುತ್ತಾ " ಅಮ್ಮಾ ...ಅಪ್ಪಾ ...." ಅಂತ ನರಳಿದರು . ರಾಯರಿಗೆ ಇದೇನಿದು ಅಂತ ಗಾಬರಿ . " ಸೀತಾ , ಅತ್ತಿಗೆ ....ಬೇಗ ಬನ್ನಿ . ಸ್ವಲ್ಪ ನೀರು ತನ್ನಿ ...." ಅಂತ ಕೂಗಿ ಅಣ್ಣನಿಗೆ ಗಾಳಿ ಬೀಸಿ ಸ್ವಲ್ಪ ನೀರು ಕುಡಿಸಿದರು .ನಾಲ್ಕು ಗುಟುಕು ನೀರು ಕುಡಿದು , ರಾಯರ ಮುಖ ನೋಡುತ್ತಾ " ಮಕ್ಕಳನ್ನೂ , ಭಾಗೀರಥಿಯನ್ನೂ ಎಂದೂ ಕೈಬಿಡಬೇಡ ....." ಎಂದು ಹೇಳಿ ರಾಯರ ಅಣ್ಣ ಕಣ್ಣು ಮುಚ್ಚಿಬಿಟ್ಟರು . ತೀರಾ ಆಕಸ್ಮಿಕ ಸಂಗತಿಯೊಂದು ನಡೆದು ಹೋಯ್ತು . ಭಾಗೀರಥಿಯೂ ಅವರ ಮಕ್ಕಳೂ ತಾವು ಅನಾಥರಾದಷ್ಟೇ ದುಃಖಿಸಿದರು .


" ಹೃದಯಾಘಾತವಾಗಿದೆ ...." ಎಂದರು ಡಾಕ್ಟರು . ಅರ್ಧ ಗಂಟೆಯಷ್ಟೇ ಹಿಂದೆ ತಮ್ಮೊಂದಿಗೆ ಲೌಕಿಕ ವ್ಯವಹಾರಗಳನ್ನು ಮಾತಾಡುತ್ತಾ ಇದ್ದ ಅಣ್ಣನಿಗೆ ಹೃದಯಾಘಾತವಾದದ್ದಾದರೂ ಹೇಗೆ ಅಂತ ರಾಯರಿಗೆ ಗೊತ್ತಾಗಲಿಲ್ಲ . ಅಂತ್ಯಕ್ರಿಯೆ ಮುಂದಿನ ಕೆಲಸ ಎಲ್ಲದಕ್ಕೂ ರಾಯರು ಜವಾಬ್ಧಾರಿ ಹೊತ್ತರು . ಅಣ್ಣನ ಮಕ್ಕಳು ದೊಡ್ಡವರಾಗಿದ್ದಾರೆ . ಅವರವರು ತಮ್ಮ ಜವಾಬ್ಧಾರಿ ತಿಳಿದುಕೊಳ್ಳುವವರೆಗೂ ತಾವು ಅವರಿಗೆ ತಿಳುವಳಿಕೆ ಹೇಳಬೇಕು ಅಂತ ಅಂದುಕೊಂಡಿದ್ದರು . ಅಣ್ಣನ ಮೊದಲ ಮಗ ವಸಂತ ಪದವೀಧರನಾಗಿದ್ದ . ಎರಡನೆಯವನು ಆನಂದ ಬಿ .ಕಾಂ. ಓದುತ್ತಿದ್ದ . ಮೂರನೆಯವನು ಆದಿತ್ಯ ಹೈಸ್ಕೂಲಿನಲ್ಲಿ ಓದುತ್ತಿದ್ದ . ರಾಯರ ಮಗ ಪ್ರಶಾಂತನೂ ಆದಿತ್ಯನ ಸಹಪಾಠಿ . ಅವರಿಬ್ಬರ ವಿದ್ಯಾಭ್ಯಾಸ ಮುಗೀಲಿ . ಆಮೇಲೆ ಯಾವುದಾದ್ರೂ ನಿರ್ಧಾರ ತಗೊಂಡರಾಯ್ತು ..... ಅಷ್ಟರವರೆಗೆ ವಸಂತ ತೋಟದ ಕಡೆ ಸ್ವಲ್ಪ ಗಮನ ವಹಿಸಲಿ ಅಂತ ಅಂದುಕೊಂಡರು ರಾಯರು .


ತಂದೆ ಸತ್ತ ಮೂರು ತಿಂಗಳುಗಳಾಗುವುದರೊಳಗೇ ವಸಂತ ಚಿಕ್ಕಪ್ಪನ ಎದುರಿಗೆ ಬಂದಿದ್ದ . " ಏನು ವಿಷಯ ವಸಂತ ...? " " ನಾನು ನಿಮ್ಮ ಹತ್ತಿರ ಪಾಲು ಕೇಳ್ತಾ ಇದ್ದೀನಿ ..... ನಾನು ಏನಾದರೂ ಬಿಸಿನೆಸ್ ಮಾಡೋಣಾಂತ ಇದ್ದೀನಿ .... ನಮಗೆ ಬರುವ ಆಸ್ತಿಯಲ್ಲಿ ನಮ್ಮ ಪಾಲಿನದನ್ನು ನಮಗೆ ಕೊಟ್ಟುಬಿಡಿ ....." ಅವನ ಮಾತು ಕೇಳಿ ರಾಯರು ದಿಗ್ಭ್ರಾಂತರಾಗಿದ್ದರು . ಆದರೆ ಮಾತ್ರ ತಮ್ಮ ವಿಶಾಲ ದೃಷ್ಟಿಯಿಂದ ಯೋಚಿಸಿದ್ದರು . ವಸಂತನಿಗಿನ್ನೂ ಸಣ್ಣ ವಯಸ್ಸು . ಬಿಸಿನೆಸ್ ಮಾಡುವಷ್ಟು ಜಾಣ್ಮೆ ಇದ್ದಂತಿಲ್ಲ . ಹೋಗಲಿ , ಏನು ಬಿಸಿನೆಸ್ ಮಾಡಬೇಕು ಎನ್ನುವ ಅಂದಾಜೂ ಇದ್ದ ಹಾಗಿಲ್ಲ . ಅಂದ ಮೇಲೆ ಈಗ ಅವನು ಪಾಲು ತೆಗೆದುಕೊಂಡು ಏನಾದರೂ ಬಿಸಿನೆಸ್ ಮಾಡ್ತೀನಿ ಅಂತ ಎಲ್ಲಾ ಹಣಾನೂ ಹಾಲು ಮಾಡಿದರೆ .......? ಅವರಿಗೆ ಮುಂದಿನ ಜೀವನೋಪಾಯಕ್ಕೆ ದಾರಿ ಏನು ...? ಮತ್ತೆ ತಮ್ಮ ಹತ್ತಿರವೇ ಓಡಿ ಬಂದರೆ ?!


       

ಚೆನ್ನಾಗಿ ಯೋಚಿಸಿದ ಮೇಲೆ ರಾಯರು ವಸಂತನಿಗೆ ಬುದ್ಧಿವಾದ ಹೇಳಿದರು . ಆದರೆ , ಆತ ಕೇಳಲಿಲ್ಲ . ತನ್ನ ಹಠವನ್ನೇ ಮುಂದುವರಿಸಿದ . " ಆಸ್ತೀನ ಭಾಗ ಮಾಡಿ ....ನಮ್ಮ ಪಾಲಿನದನ್ನು ನಮಗೆ ಕೊಟ್ಟುಬಿಡಿ . ನಾವು ಏನು ಬೇಕಾದರೂ ಮಾಡ್ಕೋತೀವಿ . ನಮ್ಮ ಹಣೆಯ ಬರಹ ......" ಅಂತ ನಿರ್ಧಾರಿತ ಧ್ವನಿಯಲ್ಲಿ ಹೇಳಿದಾಗ ರಾಯರು ಬೆರಗಾದರು . ಬೇರೆ ದಾರಿ ಕಾಣದೆ " ಆಯ್ತಪ್ಪ , ನಿನ್ನ ಇಷ್ಟದಂತೆಯೇ ಆಗಲಿ . ನಿಮ್ಮ ಅಮ್ಮನ ಹತ್ತಿರ ಮಾತಾಡಿ ನಿರ್ಧಾರ ಮಾಡೋಣ ...." ಅಂದರು ರಾಯರು . ಅತ್ತಿಗೆಯಾದರೂ ಮಗನ ಸಲಹೆಯನ್ನು ತಳ್ಳಿ ಹಾಕಬಹುದು ಅಂದುಕೊಂಡಿದ್ದರು ರಾಯರು . ಆದರೆ , ಅದು ಸುಳ್ಳಾಯಿತು . 


ಕತ್ತು ಬಗ್ಗಿಸಿ ಕುಳಿತ ಭಾಗೀರಥಿ , " ಅವರೇ ಹೋದ ಮೇಲೆ ಇನ್ನು ಈ ಊರಲ್ಲಿ ಇರೋಕ್ಕೆ ನಂಗೆ ಮನಸ್ಸಿಲ್ಲ ....ಅಲ್ಲದೇ , ವಸಂತ ಏನೋ ವ್ಯಾಪಾರ ಮಾಡಬೇಕು ಅಂದ್ಕೊಂಡಿದಾನೆ " ಎಂದು ಪಾಲು ಬೇಡುವ ನಿರ್ಧಾರವನ್ನು ಪ್ರಕಟಿಸಿದ್ದಳು . " ಅಲ್ಲ ಅತ್ತಿಗೆ , ಹುಡುಗರು ಇನ್ನೂ ಚಿಕ್ಕವರು . ತಿಳುವಳಿಕೆ ಇಲ್ಲ . ನಾಳೆ ವ್ಯವಹಾರ , ಅಂತ ಅಂದ್ಕೊಂಡು ಇರೋ ನಾಲ್ಕು ಕಾಸನ್ನೂ ಹಾಳು ಮಾಡಿದರೆ ಮುಂದಿನ ದಾರಿ ಏನು .....? " ಅಂತ ರಾಯರು ವಿವರಿಸುತ್ತಿದ್ದಾಗ , " ಬೆಳೆಯೋ ಹುಡುಗರು ಇವತ್ತಲ್ಲ ನಾಳೆ ಬುದ್ಧಿ ತಿಳ್ಕೋತಾರೆ ...." ಅಂತ ಭಾಗೀರಥಿ ಮಾತನ್ನು ತುಂಡುಮಾಡಿಬಿಟ್ಟಳು . ಅಂತೂ ಅವರುಗಳು ಆಸ್ತೀಲಿ ಭಾಗ ಕೇಳ್ತಾ ಇರೋದು ದೃಢವಾಯ್ತು .


ಎರಡು ಮೂರು ದಿವಸ ರಾಯರಿಗೆ ಇದೇ ಯೋಚನೆಯಾಯ್ತು . ಆಸ್ತೀಲಿ ಭಾಗ ಮಾಡೋದು ಆಶ್ಚರ್ಯವಲ್ಲ . ಆದರೆ , ಅದನ್ನು ಅವರು ಉಳಿಸ್ಕೊತಾರ್ಯೆ ....? ಅಥವಾ ಏನಾದರೂ ಮಾಡ್ಕೊಳ್ಲಿಎಂದು ಅವರ ಪಾಲಿನದನ್ನು ಅವರಿಗೆ ಕೊಟ್ಟುಬಿಡಬೇಕೇ ....? ಅಥವಾ ಮಕ್ಕಳು ಬುದ್ಧಿವಂತರಾಗಿ ಒಂದು ದಡ ಸೇರೋದನ್ನು ಕಾಣಬೇಕೇ ...? ಅಂತ ಯೋಚಿಸಿದ್ದರು . " ಯಾಕೆ ಅಷ್ಟೊಂದು ಯೋಚನೆ ಮಾಡ್ತೀರಾ ? ಅವರದ್ದನ್ನು ಅವರಿಗೆ ಕೊಟ್ಟು ಕಳಿಸಿ . ಅವರು ಏನು ಬೇಕಾದರೂ ಮಾಡ್ಕೊಳ್ಲಿ ...." ಅಂದಿದ್ದರು ಸೀತಮ್ಮ . ಆದರೂ , ರಾಯರು ಚೆನ್ನಾಗಿ ಯೋಚಿಸಿ ನಿರ್ಧಾರ ಮಾಡಿದರು . 


ಸಂಪೂರ್ಣ ಆಸ್ತಿಯೆಲ್ಲಾ ರಾಯರ ಹೆಸರಿನಲ್ಲಿಯೇ ಇತ್ತು . ರಾಯರ ತಂದೆಗೆ ಕಿರಿಯ ಮಗನ ಮೇಲೆಯೇ ಹೆಚ್ಚಿನ ಪ್ರೀತಿ . " ನಾನು ಸತ್ತ ಮೇಲೆ ನೀವು ಪಾಲು ಮಾಡ್ಕೊಳ್ಳಿ " ಎಂದು ಆಸ್ತಿಯನ್ನೆಲ್ಲಾ ಕಿರಿಯ ಮಗನ ಹೆಸರಿಗೇ ಬರೆದಿದ್ದರು . ಅದಕ್ಕೆ ಅಣ್ಣನ ವಿರೋಧವೂ ಇರಲಿಲ್ಲ . " ಕಾಲಕ್ರಮೇಣ ಆಸ್ತಿಯನ್ನು ಪಾಲು ಮಾಡಿಕೊಳ್ಳೋಣ . ಆದರೆ , ಸಾಧ್ಯವಾದಷ್ಟು ದಿನ ಒಟ್ಟಿಗೇ ಅನ್ಯೋನ್ನವಾಗಿರೋಣ " ಅಂದುಕೊಂಡಿದ್ದರು . ಮತ್ತೆರಡು ದಿನ ಬಿಟ್ಟು ಪುನಃ ವಸಂತ ಆಸ್ತಿಯ ವಿಚಾರ ಎತ್ತಿದಾಗ , ರಾಯರು ಕಡ್ಡಿ ತುಂಡು ಮಾಡಿದಂತೆ ನಿರ್ಧಾರದ ಧ್ವನಿಯಲ್ಲಿ ಹೇಳಿದ್ದರು . " ಆಸ್ತೀನ ಈಗ ಭಾಗ ಮಾಡಲು ಸಾಧ್ಯವಿಲ್ಲ . ತೋಟದ ಮೇಲೆ ಬೇಕಾದಷ್ಟು ಸಾಲದ ಹೊರೆ ಇದೆ . ಅವೆಲ್ಲಾ ತೀರದ ಹೊರತು ಪಾಲು ಅಸಾಧ್ಯ ! ಅಲ್ಲದೇ , ಸಧ್ಯಕ್ಕೆ ಪಾಲು ಮಾಡುವ ವಿಚಾರ ನನಗಿಲ್ಲ ....." ವಸಂತ ಕೋಪೋದ್ರಿಕ್ತನಾಗಿದ್ದ . ಮನಸ್ಸಿಗೆ ಬಂದಂತೆಲ್ಲ ಮಾತನಾಡಿದ . ಭಾಗತ್ತೆಯೂ ಬಂದು ಹಠ ಹಿಡಿದಳು . ರಾಯರೂ ಹಠ ಹಿಡಿದಿದ್ದರು .


" ಚಿಕ್ಕಪ್ಪ ನೀವು ಹೀಗೆ ಮಾಡಿದರೆ ನಾವು ಕೋರ್ಟಿಗೆ ಹೋಗಬೇಕಾಗುತ್ತೆ " ಅಂತ ಹೆದರಿಸಿದ ವಸಂತ .ರಾಯರು ಸಾವಧಾನದಿಂದ , " ನಿನಗೆ ಅದೇ ಇಷ್ಟವಾದರೆ ಹಾಗೇ ಮಾಡು . ಕೋರ್ಟಿನಲ್ಲಿಯೇ ಇತ್ಯರ್ಥವಾಗಲಿ " ಅಂದಿದ್ದರು . ದೊಡ್ಡ ರಾದ್ಧಾಂತವಾಯಿತು . ಸೀತಮ್ಮ ಗಂಡನ ನಡವಳಿಕೆಯನ್ನು ನೋಡಿ , " ಇದೇನೂಂದ್ರೆ ....." ಪ್ರಶ್ನಿಸಿದಾಗ , " ನೀನು ಸುಮ್ನಿರು . ಇದೆಲ್ಲಾ ನಿಂಗೆ ಗೊತ್ತಾಗೋಲ್ಲ " ಅಂದು ಪತ್ನಿಯ ಬಾಯಿ ಮುಚ್ಚಿಸಿದ್ದರು . ಹೀಗೇ ಮತ್ತೆರಡು ದಿನ ಕಳೆಯುವಷ್ಟರಲ್ಲಿ ಭಾಗತ್ತೆಯೂ , ಅವಳ ಮಕ್ಕಳೂ ಮನೆ ಖಾಲಿ ಮಾಡಿದರು . ಎಲ್ಲರೂ ರಾಯರನ್ನು ಹೆದರಿಸಿಯೇ ಹೋದರು . ಭಾಗತ್ತೆ ತನ್ನ ಅಕ್ಕನ ಊರಿಗೆ ಹೋದಳು . ಆ ದಿನಗಳಲ್ಲಿ ರಾಯರ ಹೃದಯ ಭಾರವಾಗಿತ್ತು . ವಿಚಾರ ತಿಳಿದ ಕೆಲವರು ರಾಯರಿಗೆ ತಿಳುವಳಿಕೆ ಹೇಳಿದರು . ಇನ್ನೂ ಕೆಲವರು , " ಅಣ್ಣನ ಅಸ್ತಿಯನ್ನೇ ನುಂಗಿ ಹಾಕಿ ಅವರ ಹೆಂಡತಿ ಮಕ್ಕಳನ್ನು ಬೀದಿಪಾಲು ಮಾಡಿದ್ದಾನೆ " ಅಂತ ಜರೆದರು .


ಭಾಗತ್ತೆಯ ಅಕ್ಕನ ಊರಿನಲ್ಲಿ ರಾಯರ ಸ್ನೇಹಿತ ಅನಂತಯ್ಯನವರು ಇದ್ದರು . ರಾಯರು ಅವರಿಗೆ ಒಂದು ಪತ್ರ ಬರೆದು ಎಲ್ಲ ವಿವರಗಳನ್ನು ತಿಳಿಸಿ ಆ ಹುಡುಗರಿಗೆ ಈ ರೀತಿ ಸಹಾಯ ಮಾಡು . ನಾನು ಆಗಾಗ್ಗೆ ಹಣ ಕಳಿಸ್ತಾ ಇರ್ತೀನಿ ಅಂತ ಬರೆದಿದ್ದರು . ಒಂದೆರಡು ಬಾರಿ ಹೋಗಿ ಭಾಗತ್ತೆಯನ್ನೂ , ಮತ್ತು ಅವಳ ಮಕ್ಕಳನ್ನೂ ಮರೆಯಿಂದ ನೋಡಿ ಬಂದಿದ್ದರು . ವಸಂತ ಬಿಸಿನೆಸ್ ಪ್ರಾರಂಭ ಮಾಡ್ತೀನಿ ಅಂತ ತಾಯಿಯ ಒಡವೆಗಳನ್ನು ಮಾರಿದ್ದ . ಬಂದ ಹಣದಲ್ಲಿ ಒಂದಿಷ್ಟನ್ನು ಹಾಕಿ ಪ್ರಾರಂಭ ಮಾಡಿದ ವ್ಯಾಪಾರ ಕೈ ಹತ್ತಲಿಲ್ಲ . ಮತ್ತೆಲ್ಲೋ ವ್ಯಾಪಾರ ಮಾಡ್ತೀನಿ ಅಂತ ಅನಂತಯ್ಯನವರಿಂದ ಪಡೆದ ಐದು ಸಾವಿರವೂ ನಷ್ಟವಾಗಿ ಹೋಯ್ತು . ಕೊನೆಗೆ ಅನಂತಯ್ಯನವರ ಬೆಂಬಲದಿಂದಾಗಿ ಒಂದು ಬ್ಯಾಂಕಿನಲ್ಲಿ ಅವನಿಗೆ ಕೆಲಸ ಸಿಕ್ಕಿತು . ಇನ್ನಿಬ್ಬರ ಓದು ಒಂದು ಹಂತಕ್ಕೆ ಬಂದು ಅವರಿಗೂ ಕೆಲಸವಾಗಬೇಕಿತ್ತು . ರಾಯರು ಅನಂತಯ್ಯನವರಿಗೆ ಪತ್ರ ಬರೆದು " ಆ ಹುಡುಗರನ್ನು ಇಂಥ ಕಡೆ ಕರೆದುಕೊಂಡು ಹೋಗಿ . ಅಲ್ಲಿ ನಾನು ಹೇಳಿದೆ ಅಂತ ತಿಳಿಸಿ . ಅವರು ಕೆಲಸ ಕೊಡ್ತಾರೆ " ಅಂತ ತಿಳಿಸಿದ್ದರು .


ಹಾಗೇ ಇನ್ನಿಬರು ಹುಡುಗರಿಗೂ ಕೆಲಸ ಸಿಕ್ಕಿತ್ತು . ಒಂದು ಬಾಡಿಗೆ ಮನೆ ಮಾಡಿಕೊಂಡಿದ್ದರು . ಅನಂತಯ್ಯನವರು ರಾಯರಿಂದ ಪಡೆಯುತ್ತಿದ್ದ ಹಣವನ್ನು ಭಾಗತ್ತೆಯವರಿಗೂ ಮತ್ತು ಅವರ ಮಕ್ಕಳಿಗೂ ಅನುಮಾನ ಬಾರದ ಹಾಗೆ ಸಹಾಯ ರೂಪದಲ್ಲಿ ಕೊಡುತ್ತಿದ್ದರು . ಭಾಗತ್ತೆಗೆ ಅನಂತಯ್ಯನವರ ಪರಿಚಯವಿತ್ತು . ಸ್ವಲ್ಪ ದಿನಗಳಲ್ಲಿಯೇ ರಾಯರಿಗೆ ಕೋರ್ಟಿನ ನೋಟೀಸು ಬಂದಿತ್ತು . ವಸಂತ ದಾವಾ ಹೂಡಿದ್ದ . ರಾಯರು ಕೇಸನ್ನು ಎರಡು ಮೂರು ಬಾರಿ ಮುಂದೂಡಿ ಬಂದಿದ್ದರು . ಭಾಗತೆಯೂ , ಅವರ ಮಕ್ಕಳೂ ಎಷ್ಟು ಹಗೆತನ ಸಾಧಿಸುತ್ತಿದ್ದರೆಂದರೆ ಅಕಸ್ಮಾತ್ ಎದುರಿಗೆ ಸಿಕ್ಕರೆ ಯಾರೋ ಅಪರಿಚಿತರನ್ನು ಕಂಡಂತೆ ಹೊರಟು ಹೋಗುತ್ತಿದ್ದರು . ಅನಂತಯ್ಯನವರ ಎದುರಿನಲ್ಲಿ ರಾಯರನ್ನು ಚೆನ್ನಾಗಿ ಬೈದಿದ್ದರಂತೆ . ಆ ವಿಚಾರವನ್ನು ಅನಂತಯ್ಯನವರೇ ರಾಯರಿಗೆ ತಿಳಿಸಿದ್ದರು . ಅದನ್ನೋದಿ ರಾಯರಿಗೆ ನಗು ಬಂದಿತ್ತು .


ಬಹಳ ದಿವಸಗಳ ನಂತರ ಬಂದ ಅನಂತಯ್ಯನವರ ಪತ್ರದಲ್ಲಿ ಭಾಗತ್ತೆಯ ಮಕ್ಕಳು ಈಗ ಬಹಳ ಬುದ್ಧಿವಂತರಾಗಿರುವ ವಿಚಾರ ಬರೆದಿದ್ದರು . " ವಸಂತನಿಗೆ ಈಗ ಬಿಸಿನೆಸ್ ಮಾಡುವ ಹುಚ್ಚು ಹೋಗಿದೆ . ಬ್ಯಾಂಕ್ ಕೆಲಸದಿಂದ ಬರುವ ಸಂಬಳವನ್ನು ಹಿತಮಿತವಾಗಿ ಖರ್ಚು ಮಾಡುತ್ತಿದ್ದಾನೆ . ಅಲ್ಲದೇ , ಯಾವ ಕೆಟ್ಟ ಹವ್ಯಾಸಗಳೂ ಇಲ್ಲ . ಇನ್ನಿಬ್ಬರು ಮಕ್ಕಳು ಬುದ್ಧಿವಂತರೇ ..... ತಮ್ಮ ಸ್ಥಿತಿ ಗತಿಗಳನ್ನು ಅರಿತುಕೊಂಡಿದ್ದಾರೆ . ಬೆಳಿಗ್ಗೆಯಿಂದ ಸಂಜೆಯವರೆಗೆ ಸಂಪಾದಿಸಿ ರಾತ್ರಿ ಕಾಲೇಜಿನಲ್ಲಿ ಒಬ್ಬನು ಪದವಿಗೂ , ಇನ್ನೊಬ್ಬನು ತಾಂತ್ರಿಕ ಶಿಕ್ಷಣಕ್ಕೂ ಹೋಗುತ್ತಿದ್ದಾರೆ ." 


" ನಿಮ್ಮ ಹೆಸರು ಹೇಳಿ , ನಾನೇ ಅವನಿಗೆ ತಾಂತ್ರಿಕ ಶಿಕ್ಷಣಕ್ಕೆ ಸೀಟು ಕೊಡಿಸಿದೆ . ನನ್ನ ಅಭಿಪ್ರಾಯದ ಪ್ರಕಾರ ಈಗ ಅವರಿಗೆ ಆಸ್ತಿ ಭಾಗ ಕೊಟ್ಟರೆ ಸರಿ ಹೋದೀತು . ಅಲ್ಲದೇ , ಭಾಗತ್ತೆಗೂ ಈಗ ತಾಳ್ಮೆ ಬಂದಿದೆ . ಆಕೆ ಮೊದಲಿನಂತೆ ದುಡುಕೋದಿಲ್ಲ . ಆದರೆ , ಆಸ್ತಿಯ ಆಸೆ ಇನ್ನೂ ಹೋಗಿಲ್ಲ . ಭಾಗತ್ತೆಯೂ , ಅವರ ಮಕ್ಕಳೂ ಇಷ್ಟು ವರ್ಷಗಳ ಜೀವನಾನುಭವದಿಂದ ಅಲ್ಪ ಸ್ವಲ್ಪ ಪಾಠ ಕಲಿತಿರುವುದರಿಂದ ಈಗ ಅವರಿಗೆ ಬಾರೋ ಆಸ್ತಿಯನ್ನು ರೂಢಿಸಿಕೊಂಡು ಹೋಗ್ತಾರೆಯೇ ವಿನಾ ಕಳೆಯೋದಿಲ್ಲ ಅಂತ ನನ್ನ ನಂಬಿಕೆ . ಬೇಕಿದ್ದರೆ ನೀವೇ ಒಂದುಸಾರಿ ಬಂದು ಅವರನ್ನು ನೋಡಿ ನಿರ್ಧಾರ ಮಾಡಿ ....." ಅಂತ ವಿವರವಾಗಿ ಬರೆದಿದ್ದರು .


ಸೀತಮ್ಮನೂ , " ಇಷ್ಟು ವರ್ಷ ಅವರ ಆಸ್ತಿಯ ಜವಾಬ್ದಾರಿ ಹೊತ್ತಿದ್ದು ಸಾಕು . ಇನ್ನು ಅವರ ಪಾಲಿನ ಆಸ್ತಿಯನ್ನು ಅವರಿಗೆ ಕೊಟ್ಟುಬಿಡಿ ...." ಅಂತ ಅಂದ ಮೇಲೆ ರಾಯರಿಗೆ ಅದೇ ಸರಿಯೆನಿಸಿತ್ತು . ಇಷ್ಟು ವರ್ಷಗಳ ವಿಚಾರವನ್ನೆಲ್ಲ ಎದುರಿಗೆ ಕುಳಿತು ಮಾತನಾಡಲು ಆಗದು . ಅಲ್ಲದೇ , ನಮ್ಮನ್ನು ಕಂಡು ಆಕೆ ಒಳಗೆ ಬನ್ನಿ ಅಂತ ಕರೆಯುವವಳೂ ಅಲ್ಲ ...." ನಮ್ಮ ಮಾತುಗಳನ್ನು ಕೇಳುವಷ್ಟು ತಾಳ್ಮೆಯೂ ಆಕೆಗಿರೋಲ್ಲ ಅಂತ ವಿಚಾರ ಮಾಡಿ ರಾಯರು ಅತ್ತಿಗೆಗೆ ಒಂದು ದೀರ್ಘವಾದ ಪತ್ರವನ್ನು ಬರೆದಿದ್ದರು . ಆಕೆ ತಮ್ಮಿಂದ ದೂರವಾದರೂ ಅನಂತಯ್ಯನವರ ಮುಖಾಂತರ ತಾವು ಸಹಾಯ ಮಾಡುತ್ತಿದ್ದುದನ್ನು ತಿಳಿಸಿ , ಮುಂದಿನ ವಾರ ಮನೆಗೆ ಬಂದು ವ್ಯವಹಾರವನ್ನು ಬಗೆಹರಿಸುವುದಾಗಿ ತಿಳಿಸಿದ್ದರು .


 ತೋಟವನ್ನು ಸರಿಯಾಗಿ ಎರಡು ಭಾಗ ಮಾಡಿ , ಒಂದು ಪಾಲನ್ನು ಭಾಗತ್ತೆಯ ಹೆಸರಿಗೆ ಬರೆಸಿ , ಆ 

 ಪತ್ರವನ್ನು ಇಟ್ಟುಕೊಂಡು ಆಕೆ ಮನೆ ಬಿಟ್ಟ ವರ್ಷದಿಂದ ಆಕೆಯ ಭಾಗದ ತೋಟದಲ್ಲಿ ಬಂದ ಉತ್ಪನ್ನದ ಒಟ್ಟೂ ಮೊತ್ತ , ಅದರಲ್ಲಿ ಈಗಾಗಲೇ ಅನಂತಯ್ಯನವರ ಮುಖಾಂತರ ಕೊಟ್ಟಿರುವ ಹಣ , ಇನ್ನು ಕೊಡಬೇಕಾಗಿರುವ ಹಣ ........ಮುಂತಾದ ಖರ್ಚು , ವೆಚ್ಚ ಆದಾಯಗಳನ್ನು ತೋರಿಸುವ ಒಂದು ಪಟ್ಟಿಯನ್ನು ತಯಾರಿಸಿ ಹಣವನ್ನು ತೆಗೆದುಕೊಂಡು ಹೊರಟರು . ಜೊತೆಯಲ್ಲಿ ಪತ್ನಿ ಸೀತಮ್ಮ . ಅನಂತಯ್ಯನವರು ಕೂಡ ರಾಯರನ್ನು ನಿರೀಕ್ಷಿಸುತ್ತಿದ್ದರು .


ರಾಯರಿಗೆ ಆಶ್ಚರ್ಯವಾಗುವಂತೆ ವಸಂತ , ಆನಂದ , ಆದಿತ್ಯ ಮೂವರು ಬಸ್ ಸ್ಟಾಂಡಿನಲ್ಲಿ ಕಾಯುತ್ತಿದ್ದರು . ಎಲ್ಲರ ಮುಖದಲ್ಲೂ ಶರಣಾಗತ ಕಳೆ . ಅನಂತಯ್ಯನವರೂ ಅವರ ಸಂಗಡ ಬಂದಿದ್ದರು . " .......ಬನ್ನಿ ಚಿಕ್ಕಪ್ಪ , ಚಿಕ್ಕಮ್ಮ ....." ಅಂತ ಹೇಳುತ್ತಾ ವಸಂತ ರಾಯರ ಕೈಯಿಂದ ಬ್ಯಾಗ್ ತೆಗೆದುಕೊಂಡ . " ಎಷ್ಟು ವರ್ಷ ಆಗೋಗಿತ್ತು ಚಿಕ್ಕಪ್ಪ ನಿಮ್ಮನು ನೋಡಿ ...." ಅಂದರು ಆನಂದ ಆದಿತ್ಯ . ಭಾಗತ್ತೆ ಬಾಗಿಲಿನಲ್ಲಿಯೇ ಕಾಯುತ್ತಿದ್ದಳು . ರಾಯರು ಒಳಗೆ ಹೋಗಿ ಕೂತೊಡನೆ ವಸಂತ , ಆನಂದ, ಆದಿತ್ಯ ರಾಯರ ಕಾಲಿಗೆರಗಿ , " ಚಿಕ್ಕಪ್ಪ ನಮ್ಮನ್ನು ಕ್ಷಮಿಸಿಬಿಡಿ ....ನಿಮ್ಮ ಒಳ್ಳೆ ತಾಣವನ್ನು , ವಿಶಾಲ ಹೃದಯವನ್ನು ತಿಳಿಯುವಷ್ಟು ತಾಳ್ಮೆ ನಮಗಿರಲಿಲ್ಲ " ಅಂದರು . " ನಾನು ಏನೇನೋ ಅಂದಿದ್ದೆ ... ಪತ್ರ ಕೂಡ ಬರೆದಿದ್ದೆ . ನೀನು ಚಿಕ್ಕವನಾದ್ರೂ ನಿನ್ನ ಹತ್ತಿರ ಕ್ಷಮೆ ಕೇಳೋಕ್ಕೆ ನಂಗೇನೂ ಸಂಕೋಚ ಇಲ್ಲ ...." ಅಂದಳು ಭಾಗತ್ತೆ .


      

ಆಮೇಲೆ ವ್ಯವಹಾರದ ಕುರಿತು ಮಾತನಾಡಿದ ರಾಯರು ಆಸ್ತಿ ಭಾಗದ ಪತ್ರವನ್ನೂ , ಲೆಕ್ಕಪತ್ರದ ಕಾಗದವನ್ನೂ ಅವರಿಗೆ ಕೊಟ್ಟು , " ನೀವೆಲ್ಲಾ ಅಂದ್ಕೊಂಡಿದ್ದ ಹಾಗೆ ನಾನು ನಿಮ್ಮ ಭಾಗದ ಆಸ್ತೀನ ನುಂಗಿಹಾಕಬೇಕು ಅಂದ್ಕೊಂಡಿರಲಿಲ್ಲ .....ನೀವು ನನ್ನನ್ನು ತಪ್ಪು ತಿಳಿದಿದ್ದೀರಿ . ನೀವು ಕೇಳಿದಾಗಲೇ ನಾನು ಆಸ್ತಿ ಭಾಗ ಮಾಡಿಕೊಟ್ಟಿದ್ರೆ ಇಷ್ಟು ಹೊತ್ತಿಗೆ ಅದು ನಿಮ್ಮಲ್ಲಿ ಇರ್ತಿರಲಿಲ್ಲ . ಅದಕ್ಕೇ ಹುಡುಗರಿಗೆ ಜವಾಬ್ದಾರಿ ಬರೋವರ್ಗೂ ಕಾಯಬೇಕಾಯಿತು . ಜವಾಬ್ದಾರಿ ತಾನೇ ತಾನಾಗಿ ಬರೋಲ್ಲ . ಜೀವನಾನುಭವ ಜವಾಬ್ದಾರೀನ ಕಲಿಸುತ್ತೆ . ಇನ್ನು ನಿಮ್ಮ ಆಸ್ತೀನ ನಿಮಗೆ ಬಿಟ್ಟು ಕೊಡೋಕೆ ನನಗೆ ಯಾವ ಅನುಮಾನವೂ ಇಲ್ಲ ......" ಅಂದರು ರಾಯರು . ಚಿಕ್ಕಪ್ಪನ ವಿರುದ್ಧ ಹೂಡಿದ್ದ ದಾವಾ ಈ ಕೂಡಲೇ ವಾಪಸ್ ಪಡೆಯಬೇಕು ಅಂದುಕೊಂಡ ವಸಂತ .



Rate this content
Log in

Similar kannada story from Inspirational