STORYMIRROR

Prabhakar Tamragouri

Tragedy

4.0  

Prabhakar Tamragouri

Tragedy

ಬದಲಾದ ದಿಕ್ಕುಗಳು

ಬದಲಾದ ದಿಕ್ಕುಗಳು

9 mins
376


ಬಾಗಿಲು ತಟ್ಟಿ ಒಳಗೆ ಕಾಲಿಟ್ಟ ಪದ್ಮಾ ಮಗುವೊಂದರ ಕಿಲ ಕಿಲ ನಗು ಕೇಳಿ ಆಶ್ಚರ್ಯಚಕಿತಳಾದಳು . ಹೆಗಲಿಗೆ ಜೋತುಬಿದ್ದ ವ್ಯಾನಿಟಿ ಬ್ಯಾಗನ್ನು ಅಲ್ಲೇ ಸೋಫಾದ ಮೇಲಿರಿಸಿ ಹಾಲ್ ನ ಕಿಟಕಿಯ ಕರ್ಟನ್ ಗಳನ್ನು ಸರಿಸಿ ಮಗುವಿನ ಹತ್ತಿರ ಬಂದು ಕಣ್ಣರಳಿಸಿ ನೋಡಿದಳು . ಅಲ್ಲೇ ಕಾಟಿನ ಮೇಲೆ ದಂತದ ಬೊಂಬೆಯಂತಹ ಸುಳಿಗೂದಲಿನ ಹಾಲುಗಲ್ಲದ ಆ ಮಗು ಆಗಷ್ಟೇ ಹುಟ್ಟಿದ ಮೇಲು ಸಾಲಿನ ಎರಡು ಹಲ್ಲುಗಳನ್ನು ತೋರಿಸುತ್ತಾ ಅವಳತ್ತ ನೋಡಿ ಕಿಲಕಿಲ ನಗುತ್ತಾ ಕೈಕಾಲು ಬಡಿದಾಗ ಪದ್ಮಾ ಅದನ್ನೆತ್ತಿ ಎದೆಗಪ್ಪಿ ಮಗುವಿನ ತುಂಬು ಕೆನ್ನೆಗೆ ತುಟಿ ಸೋಂಕಿಸಿ , " ಅಮ್ಮಾ , ಯಾರದು ಆ ಮಗು ? " ಎಂದು ಕೇಳಿದಳು . " ಇವತ್ತು ಊರಿಂದ ದತ್ತು ಬಂದಿದ್ದಾನೆ . ಇವಳು ಅವನ ಮಗಳು ಪ್ರೀತಿ ...." ಎಂದ ಅಮ್ಮ ಮಗುವನ್ನು ಅವಳ ಕೈಯಿಂದ ಪಡೆದು ಒಳನಡೆದಾಗ ಪದ್ಮಾ ಒಂದು ಕ್ಷಣ ಕಲ್ಲಾದಳು . ಕೆಟ್ಟ ನೆನಪು , ಸ್ವಾಭಿಮಾನ . ಈ ಹಾಳಾದ ದತ್ತು ಮತ್ತೆ ಯಾಕಾಗಿ ಬಂದನೋ ಎಂದು ಪದ್ಮಾ ಮನಸ್ಸಿನಲ್ಲಿಯೇ ಅಂದುಕೊಳ್ಳುತ್ತಿದ್ದಂತೆಯೇ ಅಮ್ಮ ಚಹಾ ತಂದಿಡುತ್ತಾ , " ಎಂಥಾ ಅನ್ಯಾಯ ಆಯ್ತು ಪದ್ಮಾ . ವಾಸಂತಿ ಸತ್ತು ಹೋಗಿ ವರ್ಷದ ಮೇಲಾಯಿತಂತೆ ....." ಎಂದಾಗ ಪದ್ಮಾ ಬೆಚ್ಚಿಬಿದ್ದಳು .


" ಆಂ.... ಏನು ....? ಅಮ್ಮಾ ನೀನು ಹೇಳೋದು ಸತ್ಯನಾ ....?" " ಅಲ್ದೆ ಮತ್ತೇನು ? ಇಂಥ ವಿಷಯಗಳನ್ನೆಲ್ಲಾ ಸುಳ್ಳು ಹೇಳ್ತಾರೇನು ? ತುಂಬಿದ ಬಸುರಿಯನ್ನು ತವರಿಗೆ ಕರೆದುಕೊಂಡು ಬಂದಿದ್ರಂತೆ . ತಿಂಗಳು ತುಂಬುವ ಮೊದಲೇ ಹಡೆದು ಸತ್ತೋದ್ಳಂತೆ. ಇನ್ನು ಈ ಮಗೂನ ನೋಡ್ಕೊಳ್ಳೋದಕ್ಕೆ ದತ್ತು ದಾದಿಯೊಬ್ಬಳನ್ನು ನೇಮಿಸಿದ್ದಾನಂತೆ . ಏನೋ ಕೆಲಸದ ಕಾರಣ ಈ ಊರಿಗೆ ಬಂದೋನು ಮಗೂನ ಒಂದು ಕ್ಷಣವೂ ಬಿಡ್ಲಾರ್ದೆ ಕರ್ಕೊಂಡು ಬಂದಿದ್ದಾನೆ . ಒಂದೆರಡು ದಿನ ಇಲ್ಲಿರಬಹುದು ....." ಅಮ್ಮನ ತೊಡೆಯಮೇಲೆ ಕೂತಿದ್ದ ಪ್ರೀತಿ ಅಮ್ಮನ ಬಳೆಗಳೊಂದಿಗೆ ಆಡಿಕೊಳ್ಳುತ್ತಿತ್ತು . ಪದ್ಮಾ ನಿಟ್ಟುಸಿರುಬಿಟ್ಟಳು . " ಇಷ್ಟು ಬೇಗ ವಾಸಂತಿಯ ಬಾಳು ಮುಗಿದು ಹೋಯ್ತೆ. ಜೀವನದಲ್ಲಿ ಅವಳು ಪಡೆದುಕೊಂಡು ಬಂದಿದ್ದು ಇಷ್ಟೇ ಅಂತ ಕಾಣುತ್ತೆ ಅಲ್ವೇನಮ್ಮಾ ....? " ಅಮ್ಮ ಮಗುವಿನೊಂದಿಗೆ ಆಡುತ್ತಿದ್ದಂತೆಯೇ ಪದ್ಮಾ ಆರಿ ಹೋಗಿದ್ದ ಚಹಾ ಕುಡಿದು ಸದ್ದಿಲ್ಲದೇ ತನ್ನ ಕೋಣೆಗೆ ಹೊರತು ಹೋದಳು . ಬಟ್ಟೆ ಬದಲಾಯಿಸದೆ ಕಾಟಿನ ಮೇಲೆ ಉರುಳಿಕೊಂಡಾಗ ಹೊಟ್ಟೆಯೊಳಗೆ ವಿಲಕ್ಷಣ ಸಂಕಟ . " ದೇವರೇ , ಹೀಗಾಗಬಾರದಿತ್ತು ಸಾಯಲಿಕ್ಕೆಂದೇ ವಾಸಂತಿ ದತ್ತುವನ್ನು ಮದುವೆಯಾಗುವಂತಾಯಿತೇ ?"


ಯೋಚಿಸಿದಂತೆಲ್ಲಾ ವಾಸಂತಿಯ ಒಳ್ಳೆಯ ಗುಣಗಳು , ಅವಳೊಡನೆ ತಾನು ಕಳೆದ ದಿನಗಳ ನೆನಪು ಮರುಕಳಿಸಿ ಪದ್ಮಾಳ ಮನಸ್ಸನ್ನು ಚುಚ್ಚಿದವು . ಆ ರಾತ್ರಿ ಊಟವನ್ನೂ ಮಾಡದೆ ಸತ್ತ ಗೆಳತಿಯನ್ನು ನೆನಪಿಸಿಕೊಂಡು ಮನಸ್ಸಿಗೆ ಸಮಾಧಾನ ಆಗುವವರೆಗೂ ಅತ್ತಳು . ನೆನಪುಗಳು ದಾಳಿಯಿಟ್ಟವು . ಒಮ್ಮೆ ರಜೆ ಹಾಕಿ ದತ್ತು ಊರಿಗೆ ಬಂದಿದ್ದ . " ನೋಡು ದತ್ತು , ಇವಳು ನನ್ನ ಗೆಳತಿ ವಾಸಂತಿ ...." ಎನ್ನುತ್ತಾ ಸಂಕೋಚ ಸ್ವಭಾವದ ವಾಸಂತಿಯನ್ನು ಬಲವಂತದಿಂದ ಆತನಿಗೆ ಪರಿಚಯ ಮಾಡಿಸಿದ್ದಳು ಪದ್ಮಾ . ಇದಾದ ಒಂದು ತಿಂಗಳ ನಂತರ ಒಂದು ಸಂಜೆ ಪದ್ಮಾ ಒಬ್ಬಳೇ ಮನೆಯಲ್ಲಿದ್ದಾಗ ದತ್ತು ಬಂದಿದ್ದ . ಆತ ಪದ್ಮಳ ಹತ್ತಿರ , " ವಾಸಂತಿ ತುಂಬಾ ಒಳ್ಳೆ ಹುಡುಗಿ ಆಲ್ವಾ ಪದ್ಮಾ ? ನಾನು ಅವಳನ್ನು ಮದುವೆ ಆಗ್ಬೇಕು ಅಂತಿದ್ದೀನಿ . ಅವಳೂ ಒಪ್ಪಿದ್ದಾಳೆ .... ನಿನಗೂ ಇಷ್ಟ ತಾನೆ....?" ಎಂದು ಕೇಳಿದ .


ತೀರಾ ಸಾಮಾನ್ಯವಾದ ವಿಷಯವನ್ನು ಕೇಳುವಂತೆ ಆತ ಕೇಳಿದ್ದ . ಏನು ಮಾತು ! ಅವನು ತಮಾಷೆ ಮಾಡುತ್ತಿದ್ದಾನೇನೋ ಅನ್ನಿಸಿತು ಪದ್ಮಳಿಗೆ . ಆದರೆ ಆತನ ಮುಖ ಗಂಭೀರವಾಗಿತ್ತು . ಅವಳ ಮನಸ್ಸನ್ನು ಓದಿಕೊಂಡವನಂತೆ ದತ್ತು ಪುನಃ , " ಸೀರಿಯಸ್ಸಾಗಿ ಹೇಳ್ತಿದ್ದೀನಿ . ತಮಾಷೆ ಅಂತ ತಿಳ್ಕೋಬೇಡ " ಅಂದಿದ್ದ . ಪದ್ಮಾಳಿಗೆ ಏನೊಂದೂ ಹೇಳಲಾಗದೆ ಬಾಯಿ ಕಟ್ಟಿದಂತಾಯಿತು .


ಹಾಸಿಗೆಯ ಬೆನ್ನಿಗೆ ತಲೆಯಾನಿಸಿ ಕೆಲವು ನಿಮಿಷ ಕಣ್ಮುಚ್ಚಿ ಸುಧಾರಿಸಿಕೊಂಡವಳು ನಿಧಾನವಾಗಿ ಯೋಚಿಸುವ ಶಕ್ತಿ ಮರಳಿ ಪಡೆಯುತ್ತಿದ್ದಂತೆಯೇ , ದತ್ತು ವಾಸ್ತವಿಕವಾಗಿಯೂ ಹಾಗೆ ಕೇಳುತ್ತಿದ್ದಾನೆಯೇ ಅಥವಾ ಕೇವಲ ತನ್ನ ಭ್ರಮೆಯೇ ಎನ್ನುವ ಗಲಿಬಿಲಿಯುಂಟಾಯಿತು . ಅಷ್ಟರಲ್ಲಿ ಆತ ಆಕೆಯ ಬಳಿ ಬಂದು ಅದೇ ಸಲುಗೆಯಲ್ಲಿ ಅವಳ ಭುಜದ ಮೇಲೆ ಕೈಯಿಟ್ಟು " ಪದ್ಮಾ ಏನಾಯ್ತು ? " ಎಂದು ಕೇಳಿದ . ಕಣ್ತೆರೆದು ತನ್ನತ್ತ ನೋಡಿದವಳ ಮಡುಗಟ್ಟಿದ್ದ ಕೆಂಗಣ್ಣುಗಳನ್ನು ಕಂಡು ಅವನಿಗೂ ಗಾಬರಿಯಾಗಿತ್ತು . " ನನ್ನ ಕ್ಷಮಿಸಿಬಿಡು ಪದ್ಮಾ . ನಿನ್ನ ಮನಸ್ಸಿನಲ್ಲಿರೋದು ನಂಗೂ ಗೊತ್ತು . ಆದ್ರೆ ಏನು ಮಾಡ್ಲಿ ? ವಾಸಂತಿಯನ್ನು ನೀನೇಕೆ ಪರಿಚಯ ಮಾಡಿಕೊಟ್ಟೆ ? ತಪ್ಪು ನಿನ್ನದೇ ಪದ್ಮಾ ...! ನಿಂಗೆ ಮೋಸ ಮಾಡಬಾರದೆಂದು ಮನಸ್ಸನ್ನು ನಾನೆಷ್ಟು ಹತೋಟೆಯಲ್ಲಿಟ್ಟುಕೊಂಡರೂ ಸಾಧ್ಯವಾಗಲೇ ಇಲ್ಲ . ವಾಸಂತಿಯ ಒಂದೊಂದು ನಡೆಯಲ್ಲಿ , ನುಡಿಯಲ್ಲಿ , ನೋಟದಲ್ಲೂ ಎಂಥ ಆಕರ್ಷಣೆ ಇದೆಯೆಂಬುದು ಗಂಡಾದ ನನಗೆ ಗೊತ್ತು . ಆ ಸೆಳೆತದಲ್ಲಿ ತಪ್ಪಿಸಿಕೊಳ್ಳಲಾರದಂತೆ ನಾನು ಸಿಕ್ಕಿಬಿದ್ದಿದ್ದೇನೆ ..." ಭಾವಪರವಶನಾಗಿ ದತ್ತು ಇನ್ನೂ ಏನೇನೋ ಹೇಳುತ್ತಿದ್ದಂತೆ ಪದ್ಮಾಳಿಗೆ ಹತಾಶೆ , ಸಿಟ್ಟು ,ದ್ವೇಷ ಉಕ್ಕಿಬಂದು ,


" ಹುಚ್ಚುಚ್ಚಾಗಿ ಮಾತಾಡಬೇಡ ದತ್ತು . ಬಿದಿರು ಕಡ್ಡಿಯ ಬೊಂಬೆಯಂಥ ಆ ವಾಸಂತಿಯಲ್ಲಿ ಏನಿದೆಯಂತ ಹೀಗೆ ಹೊಗಳುತ್ತಿ ...? ಒಂದು ಬಣ್ಣ , ರೂಪ , ಮೈಕಟ್ಟೇ ? ನನ್ನ ಕೂದಲ ಯೋಗ್ಯತೆಯೂ ಅವಳಿಗಿಲ್ಲ ." " ಇಲ್ಲೇ ನೀನು ತಪ್ತಾ ಇರೋದು . ಚೆಂದ ಬೇರೆ , ಆಕರ್ಷಣೆ ಬೇರೆ ಪದ್ಮಾ " ಅಂದಿದ್ದ ದತ್ತು ನಿಧಾನವಾಗಿ . ಪದ್ಮಾ ಹೆಡೆತುಳಿದ ಹಾವಿನಂತೆ ಭುಸುಗುಟ್ಟಿದ್ದಳು . ಒಳ್ಳೆಯ ಮಾತಿನಲ್ಲೇ ಅವಳ ಅಭಿಮಾನಕ್ಕೆ ಪೆಟ್ಟು ಕೊಟ್ಟಿದ್ದ ದತ್ತು . ಕುಳಿತಿದ್ದವಳು ಎದ್ದು ನಿಂತು ಅವನ ಕಡೆ ಬೆರಳು ತೂರಿ ತೀಕ್ಷ್ಣ ಸ್ವರದಲ್ಲಿ ಹೇಳಿದಳು " ನನ್ನ ಮದುವೆಯಾಗೋ ಯೋಗ್ಯತೆ ನಿನಗೆ ಇದ್ದಿದ್ದರೆ ನೀನು ಹೀಗೆಲ್ಲಾ ಮಾತಾಡ್ತಾ ಇರಲಿಲ್ಲ . ನನ್ನಲ್ಲಿ ಆಕರ್ಷಣೆ ಇಲ್ಲ ಆಲ್ವಾ ? ಹಾಗೆ ಆಗ್ಲಿ . ನಿನ್ನಂಥ ಗಂಡಸ್ರು ಇನ್ನೇನು ಹೇಳಿಯಾರು ? ನೀನಲ್ಲದಿದ್ದರೆ ಇನ್ನೊಬ್ಬರು . ಹೋಗು ಅವಳನ್ನೇ ಮದುವೆಯಾಗಿ ಹಾಯಾಗಿರು ..." ಮಾತು ಮುಗಿಸಿ ಬಿರುಗಾಳಿಯಂತೆ ಒಳಗೋಡಿದ ಪದ್ಮಾಳನ್ನು ನೋಡುತ್ತಾ ನಿಟ್ಟುಸಿರು ಬಿಟ್ಟಿದ್ದ ದತ್ತು .


ಮದುವೆಗೆ ಹೋಗಿದ್ದ ಪದ್ಮಾಳ ತಂದೆ ತಾಯಿ ಮರಳಿ ಬರುವಾಗ ದತ್ತು ಎಲ್ಲರೊಡನೆ ಕಲೆತು ಮಾತಾಡುತ್ತಿದ್ದ . ಆದರೆ ಪದ್ಮಾ ಮಂಚದ ಮೇಲೊರಗಿ ಮೌನವಾಗಿ ಅಳುತ್ತಿದ್ದಳು . ಹಿರಿಯರೆದುರು ದತ್ತು ಮತ್ತೊಮ್ಮೆ ತನ್ನ ಮನಸ್ಸನ್ನು ತೆರೆದಿಟ್ಟ . ಒಂದು ಕ್ಷಣ ಎಲ್ಲರಿಗೂ ನಿರಾಸೆಯಾದರೂ ಯಾರೂ ಪದ್ಮಾಳಂತೆ ರೇಗಿ ಕೂಗಾಡಲಿಲ್ಲ . ಎಷ್ಟಾದರೂ ತಿಳುವಳಿಕೆಯುಳ್ಳವರು . ತಮ್ಮ ಮುದ್ದಿನ ಮಗಳಾದ ಚೆಲ್ಲುತನದ ಪದ್ಮಾಳನ್ನು ಸಮಾಧಾನ ಪಡಿಸುವವರೆಗೂ ಸಾಕು ಸಾಕಾಗಿತ್ತು ಆ ಹಿರಿಯರಿಗೆ . ಪದ್ಮಾಳ ತಂದೆ ಗಣಪತಿ ಹೆಗಡೆಯವರು ಒಳ್ಳೆ ಆಸ್ತಿವಂತರು . ಗಂಡುಮಕ್ಕಳನ್ನು ಸಾಕುವಂತೆ ಇದ್ದೊಬ್ಬ ಮಗಳನ್ನು ಚೆನ್ನಾಗಿ ಬೆಳೆಸಿದ್ದರು . ದತ್ತು ಅವರ ಅಕ್ಕನ ಮಗ . ಅಪ್ಪ ಇಲ್ಲದ ಅನಾಥ ದತ್ತುವನ್ನು ಕೂಡಾ ಚೆನ್ನಾಗಿ ಓದಿಸಿದ್ದರು . ಬ್ಯಾಂಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ದತ್ತು ಬಿಸಿನೆಸ್ ಮಾಡುತ್ತೇನೆಂದು ಹೇಳಿದಾಗ , ಗಣಪತಿ ಹೆಗಡೆಯವರು ಅವನ ಚುರುಕುತನಕ್ಕೆ ಮೆಚ್ಚಿ ಬೇಕಾದ ಎಲ್ಲಾ ನೆರವು ನೀಡಿದ್ದರು . ದತ್ತುವನ್ನೇ ತಮ್ಮ ಅಳಿಯನನ್ನಾಗಿ ಮಾಡಿಕೊಂಡು ಹಾಯಾಗಿರಬೇಕೆನ್ನುವುದು ಆ ವೃದ್ಧರ ಸುಪ್ತ ಆಸೆ . ಇದನ್ನು ದತ್ತುವಿನ ಮುಂದೂ , ಆತನ ತಾಯಿಯ ಮುಂದೂ ಆಗಾಗ ಆಡಿ ತೋರಿಸಿದ್ದರು ಕೂಡ . " ಯಾವುದಕ್ಕೂ ನನ್ನ ವ್ಯಾಪಾರವೊಂದು ನೆಲೆ ನಿಲ್ಲಲಿ . ಆಮೇಲೆ ಮುಂದಿನ ಯೋಚನೆ " ಎಂದಿದ್ದ ದತ್ತು .


ಪದ್ಮಾಳಿಗೂ ಈ ವಿಷಯ ತಿಳಿದಿತ್ತು . ಹತ್ತು ಜನರಲ್ಲಿ ಎದ್ದು ತೋರುವಂತಿದ್ದ ಅವಳ ರೂಪ ,ಲಾವಣ್ಯ , ಸದಾ ತುಂಟತನವನ್ನು ಸೂಸುವ ಕಣ್ಣುಗಳು ಅವನಿಗೆ ಮೆಚ್ಚುಗೆ . ಪದ್ಮ ತನ್ನ ಪತ್ನಿಯಾಗುವುದೆಂದರೆ ಅವನಿಗೂ ಹೆಮ್ಮೆ . ಆದರೆ , ವಾಸಂತಿಯ ಪ್ರವೇಶದಿಂದ ಎಲ್ಲರ ಕಲ್ಪನೆಗಳೂ ತಲೆಕೆಳಗಾದವು . ದತ್ತು ವಾಸಂತಿಯ ಜನ್ಮ ಸಹಜವಾದ ನಗು , ವಿನಯ , ಗಂಭೀರತೆಗಳಿಗೆ ಸೋತುಹೋದ . ಪದ್ಮಾಳ ಕಣ್ಣು ಕುಕ್ಕುವ ಸೌಂದರ್ಯದಲ್ಲಿಲ್ಲದ ಯಾವುದೋ ಒಂದು ವಿಶೇಷ ವಾಸಂತಿಯ ಮೊದಲ ನೋಟಕ್ಕೆ ತೀರಾ ಸಾಧಾರಣವೆನಿಸಬಹುದಾದ ರೂಪದಲ್ಲಿತ್ತು .


ಪದ್ಮಾಳಿಗೆ ಅನ್ಯಾಯ ಮಾಡುತ್ತಿದ್ದೇನೋ ಎಂದು ಒಮ್ಮೆ ಅನ್ನಿಸಿದರೂ ಬಲವಂತದ ವಿವಾಹದಿಂದ ಯಾರಿಗೆ ಸುಖವಿದೆ ? ಅಲ್ಲದೇ, ತಮ್ಮಿಬ್ಬರ ಮದುವೆಯಾಗಲೇಬೇಕೆಂಬ ಕಟ್ಟುನಿಟ್ಟೇನಾದರೂ ಇದೆಯೇ ? ಇದರಲ್ಲಿ ನ್ಯಾಯ ಅನ್ಯಾದ ಪ್ರಶ್ನೆಯಾದರೂ ಎಲ್ಲಿದೆ ? ವಾಸಂತಿಯನ್ನು ಪ್ರೀತಿಸಿ , ಪದ್ಮಾಳನ್ನು ಮದುವೆಯಾದರೆ ಅದೂ ಕೂಡಾ ಒಂದು ಅನ್ಯಾಯ , ಆತ್ಮ ವಂಚನೆಯೇ ಅಲ್ಲವೇ ....?ಎಂದು ತನಗೆ ತಾನೇ ಸಮಾಧಾನ ಹೇಳಿಕೊಂಡಿದ್ದ . ದತ್ತುವಿನಂಥ ಹುಡುಗನೊಬ್ಬ ತಾನಾಗೇ ಕೇಳಿಕೊಂಡು ಬಂದಾಗ ವಾಸಂತಿಯ ಮನೆಯವರು ಮರು ಮಾತಿಲ್ಲದೆ ಮದುವೆಗೆ ಒಪ್ಪಿದ್ದರು . ಹೆಚ್ಚುದಿನ ಕಳೆಯದೇ ಆತುರದಲ್ಲೇ ದತ್ತು ವಾಸಂತಿ ದಂಪತಿಗಳಾಗಿ ಮಧುಚಂದ್ರಕ್ಕೆ ಹಾರಿದ್ದರು . 


        

ಕುಮಟಾ ಹತ್ತಿರದ ಬಾಡದ ತಿಮ್ಮಪ್ಪ ಹೆಗಡೆಯವರು ತಮ್ಮ ಮಗನಿಗೆ ಪದ್ಮಾಳನ್ನು ತಂದುಕೊಳ್ಳುವ ಇಚ್ಛೆ ವ್ಯಕ್ತಪಡಿಸಿದಾಗ ಗಣಪತಿ ಹೆಗಡೆಯವರು ಹೆಚ್ಚು ಒತ್ತಾಯ ಪಡಿಸಲಾರದೇ ಒಪ್ಪಿಗೆ ಕೊಟ್ಟಿದ್ದರು . ಪದ್ಮಾ ಕೂಡಾ ತನ್ನ ಹಿಂದಿನ ಎಲ್ಲಾ ಕನಸುಗಳನ್ನು ಮರೆತು ಫೀನಿಕ್ಸ ಪಕ್ಷಿಯ ಹಾಗೆ ಮತ್ತೆ ಹೊಸ ಬದುಕನ್ನು ಆರಂಭಿಸಲು ದೃಢ ಮನಸ್ಸು ಮಾಡಿದಳು . ಹೆಚ್ಚುದಿನ ಕಳೆಯುವುದು ಬೇಡವೆಂದು ಒಂದು ಶುಭ ಮುಹೂರ್ತದಲ್ಲೇ ಮದುವೆಯೂ ಆಗಿಹೋಯಿತು . ಗಣಪತಿ ಹೆಗಡೆಯವರು ತಮ್ಮ ಒಬ್ಬಳೇ ಮಗಳ ಮದುವೆಯನ್ನು ಅದ್ದೂರಿಯಾಗಿ ಮಾಡಿ ಮುಗಿಸಿದರು . ಶಂಕರ ಆಕೆಯ ಜೀವನ ಸಂಗಾತಿಯಾಗಿ ಬಂದ . ಪದ್ಮಾ ಮತ್ತು ದತ್ತು ಇವರಿಬ್ಬರ ಬದಲಾದ ದಿಕ್ಕುಗಳ ಕತೆ ಹೀಗೆ ..... ವರನ ಬಳಿ ಸಾಕಷ್ಟು ಆಸ್ತಿ ಇದ್ದರೂ ತನ್ನ ಒಬ್ಬನೇ ಅಳಿಯನಿಗೆ ಉತ್ತಮ ಕಾರೊಂದನ್ನು ಉಡುಗೊರೆಯಾಗಿ ಕೊಟ್ಟಿದ್ದರು ಗಣಪತಿ ಹೆಗಡೆಯವರು . ವರನ ರೂಪ , ಸಂಪತ್ತು , ದರ್ಬಾರು ನೋಡಿ ತನ್ನ ಮಗಳು ಸುಖವಾಗಿರಬಲ್ಲಳು ಎಂದು

ಕೊಂಡು ಅವರು ಸಂತೋಷ ಪಟ್ಟರು .


ಮದುವೆ ಮುಗಿಸಿ ತನ್ನ ಪತಿ ಶಂಕರನ ಜೊತೆಗೆ ತೃಪ್ತಿಯಿಂದಲೇ ಹೆಜ್ಜೆ ಹಾಕಿದ ಪದ್ಮಾಳಿಗೆ ಈ ಮದುವೆ ತನ್ನ ಬದುಕನ್ನು ಬೆಳಗಿಸಲಿಲ್ಲ , ಬದಲಾಗಿ ತನ್ನ ಬದುಕು ಕಾಣದ ಕತ್ತಲೆಗೆ ನೂಕಲ್ಪಟ್ಟಿತೆನ್ನುವುದು ಸ್ವಲ್ಪ ದಿನದಲ್ಲಿಯೇ ತಿಳಿಯಿತು . ದೊಡ್ಡ ಇಂಜನೀಯರ ಆಗಿದ್ದ ಆ ಶ್ರೀಮಂತ ಪುತ್ರ ಶಂಕರನಿಗೆ ಯೌವನ , ಸಂಪತ್ತು , ಪ್ರಭುತ್ವಗಳಿದ್ದು ಅವುಗಳ ಜೊತೆಗೆ ಹುಟ್ಟಿಕೊಳ್ಳುವ ಅವಿವೇಕಗಳೂ ಒಂದುಗೂಡಿಕೊಂಡಿದ್ದವು . ಸುಂದರಿಯಾದ ಪತ್ನಿ ಮನೆಯಲ್ಲಿರುತ್ತಾ, ಬೀದಿಯ ಹಲವಾರು ಹೆಣ್ಣುಗಳು ಶಂಕರನಿಗೆ ಗಂಟುಬಿದ್ದಿದ್ದರು . ಜೊತೆಯಲ್ಲಿ ಅಂಟಿಕೊಂಡಿದ್ದ ಮದ್ಯಪಾನ , ಜೂಜಾಟ ಇವೆಲ್ಲ ಅವನನ್ನೊಂದು ಪಶುವನ್ನಾಗಿಸಿದ್ದವು . ತನ್ನ ನೆಮ್ಮದಿಯ ದಿನಗಳು ಕಳೆದುಹೋದವೆಂದುಕೊಂಡಳು ಪದ್ಮಾ .ಆದರೆ , ತನ್ನ ನೋವು ತನ್ನ ಬಂಧುಗಳಿಗೆ , ಸ್ನೇಹಿತರಿಗೆ ಮುಖ್ಯವಾಗಿ ದತ್ತು ದಂಪತಿಗಳಿಗೆ ತಿಳಿಯಬಾರದೆಂದು  ಅವುಡುಗಚ್ಚಿ ಎಲ್ಲ ನೋವು , ನಿರಾಶೆಗಳನ್ನೂ ನುಂಗಿಕೊಂಡು ಗಂಡನ ಮನೆಯಲ್ಲಿಯೇ ಉಳಿದಳು .


ಒಂದು ರಾತ್ರಿ ಪಾರ್ಟಿಯೊಂದರಿಂದ ಶಂಕರ ಹಾಗೂ ಅವನ ಸ್ನೇಹಿತೆಯೊಬ್ಬಳು ಮರಳುತ್ತಿದ್ದರು ಕುಡಿದ ಅಮಲಿನಿಂದ ಕಾರನ್ನು ನಡೆಸುತ್ತಿದ್ದ ಶಂಕರನ ಅಚಾತುರ್ಯದಿಂದ ಕಾರು ಹೆಗಡೆ ಕ್ರಾಸ್ ಬಳಿ ಮರವೊಂದಕ್ಕೆ ಡಿಕ್ಕಿ ಹೊಡೆಯಿತು . ಇಬ್ಬರೂ ಅಲ್ಲೇ ಸಾವನ್ನಪ್ಪಿದ್ದರು . ಸುದ್ದಿ ತಿಳಿದ ಪದ್ಮಾ ತಡೆಯಲಾರದ ವೇದನೆಯಿಂದ ಚೀರಿ ನೆಲಕ್ಕೊರಗಿದಳು . ಮದುವೆಯಾದ ಆರೇ ತಿಂಗಳಲ್ಲಿ ಆಕೆಯ ಬದುಕು ಬರಿದಾಗಿತ್ತು . ಅತ್ತೆಯ ಮನೆಯಿಂದ ಮರಳಿ ಬಂದ ಮಗಳ ಬೋಳು ಬೋಳಾದ ಕತ್ತು ಕೈಗಳನ್ನು ನೋಡಿ ಗಣಪತಿ ಹೆಗಡೆಯವರು ಅತ್ತುಬಿಟ್ಟರು . ಅದೇ ಯೋಚನೆಯಿಂದ ಹಾಸಿಗೆ ಹಿಡಿದ ಆ ವಯೋವೃದ್ಧರು ಕೂಡಾ ಅದೊಂದು ದಿನ ಎದೆ ನೋವೆಂದು ತೀರಿಕೊಂಡಾಗ ಪದ್ಮಾಳಿಗೆ ಇನ್ನು ತನ್ನವರೆನ್ನುವವರಾರೂ ಈ ಮನೆಯಲ್ಲಿ ಇಲ್ಲವೆನಿಸಿತು .


ಬದುಕು ಕೊಟ್ಟ ಹಲವು ಪೆಟ್ಟುಗಳನ್ನು ತಿಂದ ಪದ್ಮಾ , ಭವಿಷ್ಯದ ಬಗ್ಗೆ ಚಿಂತಿಸಿ ಇನ್ನು ಅಣ್ಣ - ಅತ್ತಿಗೆಯವರ ಆಶ್ರಯದಲ್ಲಿದ್ದು ಹೀನಳಾಗುವ ಮೊದಲೇ ತಾನಿಲ್ಲಿಂದ ಹೊರಡಬೇಕೆಂದುಕೊಂಡಳು. ಅಪ್ಪ ತನ್ನ ಹೆಸರಿನಲ್ಲಿಟ್ಟ ಹಣ , ತನ್ನ ಮದುವೆಯ ಅಪಾರ ಒಡವೆ , ವಸ್ತುಗಳನ್ನು ಭದ್ರವಾಗಿರಿಸಿ ಒಡ ಹುಟ್ಟಿದವರಿಗೆ ದುಂಬಾಲು ಬಿದ್ದು ಮೈಸೂರಿನಲ್ಲಿ ಒಂದು ಕೆಲಸ ಗಿಟ್ಟಿಸಿಕೊಂಡಳು . ತನ್ನ ಜೊತೆಯಲ್ಲಿ ತಾಯಿಯನ್ನು ಕರೆದುಕೊಂಡು ದೂರದ ಊರಲ್ಲಿ ಯಾರ ಹಂಗಿಲ್ಲದೆ ಸ್ವತಂತ್ರಳಾಗಿ ಇರತೊಡಗಿದಳು . ಆದರೆ ಈಗ ....? ಈಗ ದತ್ತು ಬಂದಿದ್ದಾನೆ . ಬದುಕೊಂದು ವೃತ್ತ ಪರಿಧಿಯ ಸುತ್ತಲೇ ಗಿರಿಗಿಟ್ಟಿಯಾಡುತ್ತಿದೆ ಎನಿಸಿತವಳಿಗೊಮ್ಮೆ . ಹೌದೇ ...? ಅದು ಅನಿವಾರ್ಯವೇ ? ತನ್ನ ಪಕ್ಕದಲ್ಲೇ ಕೂತು ಆಡುತ್ತಿದ್ದ ಪ್ರೀತಿಯನ್ನು ನೋಡಿ ಸಂಭ್ರಮದಿಂದ ಎದೆಗಪ್ಪಿಕೊಂಡಳು . ಮಗುವನ್ನು ಎತ್ತಿಕೊಂಡೇ ಒಳಹೊರಗೆ ತಿರುಗಾಡಿ ಡೈನಿಂಗ್ ರೂಮಿಗೆ ಬಂದಳು .


" ಪದ್ಮಾ , ಒಂದು ಮಾತು ಹೇಳ್ತೇನೆ ತಪ್ಪು ತಿಳಿಯಬೇಡ . ದತ್ತುಗೆ ಬಹಳ ಕಡೆಯಿಂದ ನೆಂಟಸ್ತಿಕೆ ಬರ್ತಿದೆಯಂತೆ . ಅವನಿಗೇನು ಕೊರತೆ ಹೇಳು ... ರೂಪ , ಪ್ರಾಯ , ಕೈತುಂಬಾ ಆದಾಯ ಎಲ್ಲಾ ಇದೆ .ಆದ್ರೆ , ಅವನಿಗೆ ಅದೆಲ್ಲಾ ಬೇಡವಂತೆ . ನಿನ್ನನ್ನಾದ್ರೆ ಮದುವೆ ಮಾಡ್ಕೋಬಹುದು ಅನ್ನೋ ಮನಸ್ಸಂತೆ ..." ಎಂದು ತಾಯಿ ಹೇಳಿದಾಗ , ಪದ್ಮಾಳ ಮುಖ ಒಮ್ಮೆ ಗಂಭೀರವಾಗಿ ಮರುಕ್ಷಣವೇ ನಿರ್ವಿಕಾರವಾಯಿತು . ಮಗಳ ಮೌನ ಕಂಡ ತಾಯಿ ಉತ್ತೇಜಿತಳಾಗಿ ಮತ್ತೆ ಹೇಳಲಾರಂಭಿಸಿದಳು " ಎಷ್ಟು ಸ್ವಾಭಿಮಾನ ಇದ್ರೂನೂ ಬದಿಗಿಟ್ಟು , ಹೆಂಗಸಾದವಳು ತಗ್ಗಿ ನಡೆಯಲೇಬೇಕು .... ಪದ್ಮಾ . ಅಲ್ಲದೇ , ದತ್ತುನಂಥ ಹುಡುಗ ಸಿಗಬೇಕೆಂದರೆ ಪುಣ್ಯ ಮಾಡಿರಬೇಕು . ಮಗುವೊಂದಿದೆ ಅದನ್ನವ ಯಾವುದೇ ಹೆಣ್ಣಿನ ನೆರಳಿಲ್ಲದೇ ಹೇಗೆ ಸಾಕಬಲ್ಲ ....? ಸ್ವಲ್ಪ ಯೋಚಿಸು ."


ಇನ್ನು ಯೋಚಿಸಲೇನೂ ಉಳಿದಿರಲಿಲ್ಲ ಪದ್ಮಾಳಲ್ಲಿ . ಆಕೆ ಗಂಭೀರವಾಗಿದ್ದಳು . ಅಷ್ಟರಲ್ಲಿ ದತ್ತು ಅಲ್ಲಿಗೆ ಬಂದ . ಸಣ್ಣಗೆ ಕಂಪಿಸಿತು ಆಕೆಯ ದೇಹ ಹಾಗೆ ಹೃದಯ . ದತ್ತು ಇಳಿದು ಹೋಗಿದ್ದಾನೆ ತುಂಬಾ ...ತುಂಬಾ ....ಇಳಿದುಹೋಗಿದ್ದಾನೆನಿಸಿತವಳಿಗೆ . ಮೊದಲಿನ ಲವಲವಿಕೆ , ಚೆಲುವು , ಗೆಲುವು ಯಾವುದೂ ಇಲ್ಲ . ತಾನು ಒಂದು ಕಾಲದಲ್ಲಿ ತೀರಾ ಹಿಂದಿನದೇನಲ್ಲದ ಒಂದು ಕಾಲದಲ್ಲಿ ಮೆಚ್ಚಿದ್ದ , ಕಟ್ಟು ಮಸ್ತಾದ ಆತನ ಮೈಕಟ್ಟು ಕರಗಿಹೋಗಿ ಕಣ್ಣುಗಳ ಸುತ್ತ ಕಂದು ಉಂಗುರ , ಬಾಡಿದ ಮುಖ , ಶೇವ್ ಮಾಡದ ಗಡ್ಡ ..... ಊಹೂಂ ಇವನು ಮೊದಲಿನ ದತ್ತುವೆಂದು ಗುರುತಿಸುವುದೇ ಸಾಧ್ಯವಾಗುತ್ತಿಲ್ಲ .


" ಪದ್ಮಾ , ಒನ್ ಮಿನೀಟ್.... ಪ್ಲೀಸ್ . ನಿನ್ನ ಜೊತೆ ಸ್ವಲ್ಪ ಮಾತನಾಡಬೇಕು " ಡ್ರಾಯಿಂಗ್ ರೂಮಿಗೆ ಕರೆದ ದತ್ತು . ಪಾಪ , ಹೇಗಿದ್ದ ದತ್ತು ಹೇಗಾದ ಎನ್ನುವ ಸಣ್ಣ ದನಿಯೊಂದು ಅಂತರಾಳದಲ್ಲಿ ಹುಟ್ಟಿಕೊಂಡು ಅಲ್ಲೇ ಕಮರಿ ಹೋಯಿತು . ತನ್ನ ಸ್ವಾಭಿಮಾನಕ್ಕೆ ಮರೆಯಲಾರದಂಥ ಗಾಯ ಮಾಡಿದವನು , ತನ್ನ ಬದುಕನ್ನು ಹಾಳು ಮಾಡಿದವನು, ತನ್ನ ಸ್ವಪ್ನ ಸೌಧವನ್ನು ನಿರ್ದಯಿಯಂತೆ ಮಣ್ಣುಗೂಡಿಸಿದವನು .... ಎಂದು ಯೋಚಿಸುತ್ತಿದ್ದಂತೆ ಕರಗಿದ್ದ ಮನ ಕಲ್ಲಾಯಿತು . ಕಳೆದ ದಿನಗಳು ಸ್ಮರಣೆಗೆ ಬಂದಂತೆ ಗಂಟಿಕ್ಕಿದ ಹುಬ್ಬುಗಳನ್ನು ಬಲವಂತವಾಗಿ ಬಿಡಿಸಿಕೊಂಡು ಅವನತ್ತ ನೋಡಿ ಕ್ಷೀಣವಾಗಿ ನಕ್ಕು ಡ್ರಾಯಿಂಗ್ ರೂಮಿಗೆ ಆತನನ್ನು ಪದ್ಮಾ ಹಿಂಬಾಲಿಸಿದಳು . " ನೀನು ನನ್ನನ್ನು ಕ್ಷಮಿಸೋದೇ ಇಲ್ಲವಾ ಪದ್ಮಾ ....? ನಿನಗೆ ನಾನು ಅಷ್ಟೂ ಬೇಡವಾದನೇ ? ಆಗೋದೆಲ್ಲಾ ಆಗಿಹೋಯ್ತು ಅದನ್ನೇ ಮನಸ್ಸಿನಲ್ಲಿಟ್ಟುಕೊಂಡು ನನ್ನ ದ್ವೇಷಿಸ್ತಿದ್ದೀಯಾ ? ಆದ್ರೆ , ಅದರಿಂದ ಏನು ಉಪಯೋಗ ? ನನ್ನ ಮಾತು ಕೇಳು ಪದ್ಮಾ ನಿನ್ನಣ್ಣಂದಿರೂ , ನಿಮ್ಮಮ್ಮ ಎಲ್ಲಾ ಒಪ್ಪಿಕೊಂಡಿದ್ದಾರೆ ,ಕೊನೆ ಪಕ್ಷ ಅನಾಥ ಪ್ರೀತಿಗೋಸ್ಕರವಾದರೂ ....?"


 " ಓಹ್ ! ತನ್ನ ಸ್ವಾರ್ಥಕ್ಕೆ ಪ್ರೀತಿಯ ನೆಪ ಬೇರೆ ." ಹಾಗೆ ಬಾಯಿಬಿಟ್ಟು ಹೇಳಲಾರದವಳ ಮುಖದಲ್ಲಿ ವ್ಯಂಗ ನಗುವೊಂದು ಕಾಣಿಸಿತು . " ನನ್ನ ಪ್ರಶ್ನೆಗೆ ಉತ್ತರ ಇಲ್ವಾ ?" " ನನ್ನ ಉತ್ತರಕ್ಕೆ ಬೆಲೆಯಿದೆಯೆಂದೇನೂ ನೀನು ಭಾವಿಸಿಲ್ಲ ದತ್ತು . ನಿನ್ನ ಪ್ರಶ್ನೆಗೆ ನೀನೇ ಈ ಹಿಂದೆ ಉತ್ತರ ಕಂಡುಕೊಂಡಿದ್ದೀಯ ....." ಗಂಭೀರವಾಗಿ ಹೇಳಿದಳು . " ನನ್ನ ಪರಿಸ್ಥಿತಿ ಗೊತ್ತಿದ್ದೂ ನೀನು ಹೀಗೆ ಮಾತಾಡ್ತೀಯಾ ? ನೀನಿಷ್ಟು ನಿರ್ದಯಿಯಾಗ್ತೀಯಂತ ನಾನು ಅಂದುಕೊಂಡಿರಲಿಲ್ಲ " " ಯಾವತ್ತು ನಾನೆಂದರೆ ನಿನ್ನ ಕಾಲ ಕಸ ಅನ್ನೋ ಹಾಗೆ ನೀನು ತಿರಸ್ಕರಿಸಿ ಹೋದೆಯೋ ಆವತ್ತೇ ನನ್ನ ಮನಸ್ಸು ಮುರಿಯಿತು . ನಿನ್ನ ಮೇಲಿದ್ದ ಪ್ರೇಮ , ಪ್ರೀತಿ , ದಾಕ್ಷಿಣ್ಯ ಎಲ್ಲಾ ನಾಶವಾಯ್ತು . ನಾನು ಹೀಗೆ ಆಗೋದಕ್ಕೆ ಕಾರಣ ನೀನೇ ತಾನೇ .....?" " ಇರಬಹುದು , ನಾನೀಗ ಆ ದಿಕ್ಕಿನಿಂದ ಮರಳಿ ಸೋತು ಬಂದಿದ್ದೇನೆ . ಈಗ ನಿನ್ನನ್ನು ಮದುವೆಯಾಗಲು ಇಚ್ಚಿಸುತ್ತಿದ್ದೇನೆ . ಕೊನೆಯ ಉತ್ತರ ಏನೂ ಅಂತ ಹೇಳಿಬಿಡು ...." ತಿರುಗುತ್ತಿರುವ ಸೀಲಿಂಗ್ ಫ್ಯಾನಿನ ಮೇಲೆ ನೆಟ್ಟಿದ್ದ ದೃಷ್ಟಿಯನ್ನು ಕಿತ್ತು ಪದ್ಮಾ ದತ್ತುವಿನತ್ತ ತಿರುಗಿ ನೋಡಿದಳು . ಒಂದೇ ಒಂದು ಕ್ಷಣ ಎದೆ ಮಿಡಿತ ತಾಳ ತಪ್ಪಿತು .


ಒಂದು ಕಾಲದಲ್ಲಿ ತಾನು ತನ್ನ ಪ್ರಾಣಕ್ಕಿಂತಲೂ ಹೆಚ್ಚಿಗೆ ಪ್ರೀತಿಸಿದ , ಮದುವೆಯಾಗಬೇಕೆಂದು ಹಾತೊರೆದ ಅದೇ ದತ್ತು ಈಗ ತನಗೋಸ್ಕರ ಕಾದಿದ್ದಾನೆ . ತನ್ನ ಒಂದೇ ಒಂದು ಉತ್ತರ ಅವನ ಬದುಕಿನ ಹೆಜ್ಜೆಗಳನ್ನು ನಿರ್ಧರಿಸುತ್ತದೆ . ಇದು ದತ್ತು ತನಗೆ ಕೊಟ್ಟಿರುವ ಕೊನೆಯ ಅವಕಾಶ . ಅಲ್ಲ , ತಾನವನಿಗೆ ಕೊಡುತ್ತಿರುವುದೇ ....?ಪದ್ಮಾ ತಿಳಿಯದಾದಳು . ದತ್ತು ತೀರಾ ಬಳಲಿದವನಂತೆ ಕಂಡ . ತಾನು ಕೂಡ ಬದುಕಿನಲ್ಲಿ ನೊಂದವಳೇ ತಾನೇ ? ಅವನನ್ನು ಎದೆಗಪ್ಪಿಕೊಂಡು ಸಂತೈಸುವ ಹುಚ್ಚು ಬಯಕೆಯಾದದ್ದು , ಅವನ ಎದೆಯೊಳಗೆ ಮುಖ ಹುದುಗಿಸಿ ತನ್ನೆಲ್ಲ ದುಃಖವನ್ನು ತೋಡಿಕೊಳ್ಳುವ ಆಸೆಯಾದದ್ದು ಸುಳ್ಳಲ್ಲ , ಒಂದು ಕ್ಷಣ .... ಕೇವಲ ಒಂದೇ ಕ್ಷಣ ಮಾತ್ರ . ದತ್ತು ಎದುರಿನಲ್ಲಿದ್ದರೆ , ಅವನನ್ನು ನೋಡುತ್ತಲಿದ್ದರೆ ತಾನವನ ತಿರಸ್ಕಾರವನ್ನು ಮರೆಯಬಹುದಾದ ಸಾಧ್ಯತೆ ಇದ್ದರೂ ಅವನಿಲ್ಲದಾಗ , ತನ್ನನ್ನು ಆ ಹಳೆಯ ನೆನಪು ಚುಚ್ಚಿ ಕಾಡದೆ ಬಿಡಲಿಕ್ಕಿಲ್ಲ . ನಂತರದ ತನ್ನ ಬದುಕು ತ್ರಿಶಂಕುವಾಗದಿದ್ದೀತೆ ? ದತ್ತುವನ್ನು ಹಾಗೆ ನೋಡುತ್ತಿದ್ದರೆ ತನ್ನ ನಿರ್ಧಾರ ಕರಗಿ ನೀರಾಗಿಬಿಡಬಹುದೇ ಎನ್ನುವ ಅಂಜಿಕೆಯಿಂದ ಅವನಿಂದ ದೃಷ್ಟಿ ಕಿತ್ತು ನೆಲ ನೋಡಿ ಗಂಭೀರವಾಗಿ ಹೇಳತೊಡಗಿದಳು .


 " ಅಂದು, ವಾಸಂತಿ ಆಕರ್ಷಕಳಾಗಿ ಕಂಡಳು ಅಂತ ಅವಳನ್ನು ಮದುವೆಯಾದೆ . ಇಂದು , ಮಗಳು ಪ್ರೀತಿಯನ್ನು ಸಾಕಲೊಬ್ಬ ಹೆಂಗಸು . ಅಧಿಕೃತವಾಗಿ ನಿನ್ನ ಜೊತೆಗೂ ಇರಬಹುದಾದ ಹೆಂಗಸು . ಐ ಮೀನ್ ಹೆಂಡತಿ ಬೇಕೂಂತ ನನ್ನ ಮದುವೆಯಾಗೋಕೆ ಬಂದಿದ್ದೀಯ . ನೀನು ಗಂಡಸು , ನೀನು ಬೇಕಾದ್ದು ಮಾಡಬಲ್ಲೆ . ನಾನು ಒಪ್ಪದಿದ್ದರೆ ಬೇರೊಬ್ಬಳನ್ನು ಮದುವೆಯಾಗಬಲ್ಲೆ . ಆದ್ರೆ , ಹೆಣ್ಣಾದ ನನ್ನ ಭಾವನೆಗಳನ್ನೂ ಅರ್ಥಮಾಡಿಕೊಳ್ಳಲು ಸ್ವಲ್ಪ ಪ್ರಯತ್ನಿಸು . ನಾನು ನಿನ್ನನ್ನು ಒಂದು ಕಾಲದಲ್ಲಿ ಎಷ್ಟು ಪ್ರೀತಿಸ್ತಿದ್ದೆ ಅನ್ನೋದು ನಿನಗೂ ಗೊತ್ತು . ನೀನು ನನ್ನನ್ನು ತಿರಸ್ಕರಿಸಿದೆ . ನನ್ನಲ್ಲಿ ನಿನ್ನ ಬಗ್ಗೆ ದ್ವೇಷ ಉಂಟಾದದ್ದು ಸುಳ್ಳಲ್ಲ . ಈಗ ನೀನು ಮತ್ತೆ ಬಂದಿದ್ದೀಯ ತಪ್ಪೊಪ್ಪಿಕೊಂಡು ಸೋತು .... ಆದರೆ ದತ್ತು , ಬಣ್ಣಗಳನ್ನು ಬದ್ಲಾಯಿಸ್ತಾ ಇರೋದಕ್ಕೆ ಮನಸ್ಸು ಪರದೆಯಲ್ಲ . ನನಗೀಗ ನಿನ್ನ ಬಗ್ಗೆ ಇರೋದು ಕೇವಲ ಕರುಣೆ ಮಾತ್ರ . ಪ್ರೀತಿ ಬೇರೆ , ಕರುಣೆ ಬೇರೆ . ಅದನ್ನು ನೀನು ಅರ್ಥ ಮಾಡಿಕೊಳ್ಳಬೇಕು ....." ದತ್ತು ಮೌನವಾಗಿದ್ದ . ಪದ್ಮಾಳೇ ಪುನಃ ತನ್ನ ಮಾತು ಮುಂದುವರಿಸಿದಳು .


" ಅಲ್ಲದೇ , ಬದುಕಿನಲ್ಲಿ ಒಂದು ಹೆಣ್ಣು ಅನುಭವಿಸಬಹುದಾದ ಎಲ್ಲಾ ಕಷ್ಟಗಳಿಗೂ ತುತ್ತಾದ ನನ್ನೆದೆ ಈ ಚಿಕ್ಕ ವಯಸ್ಸಲ್ಲೇ ಕಲ್ಲಾಗಿದೆ . ನನ್ನಲ್ಲಿ ಯಾವ ಆಸಕ್ತಿಯೂ ಉಳಿದಿಲ್ಲ . ನನ್ನ ಮದುವೆಯಾದ್ರೆ ನೀನು ಸುಖವಾಗಿರಬಲ್ಲೆ ಅನ್ನೋ ನಂಬಿಕೆ ನನಗೆ ಇಲ್ಲ . ನನ್ನನ್ನು ಕ್ಷಮಿಸು ದತ್ತು . ಮತ್ತೆ ಹಿಂದಿರುಗಿ ಬರಲು ಸಾಧ್ಯವಾಗದಷ್ಟು ದೂರ ನಮ್ಮ ನಮ್ಮ ದಿಕ್ಕುಗಳಲ್ಲಿ ನಾವಿಬ್ಬರೂ ನಡೆದು ಹೋದದ್ದಾಗಿದೆ . ಇನ್ನು ಸಂಧಿಸುವ ಮಾತೆಲ್ಲಿ .....? " ಎಂದು ಹೇಳಿ ಪದ್ಮಾ ನಿಟ್ಟುಸಿರು ಚೆಲ್ಲಿದಳು .



Rate this content
Log in

Similar kannada story from Tragedy