Prabhakar Tamragouri

Inspirational

3.5  

Prabhakar Tamragouri

Inspirational

ಸಿಡಿದ ಮೊಗ್ಗು ( ಕಥೆ )

ಸಿಡಿದ ಮೊಗ್ಗು ( ಕಥೆ )

7 mins
178


ಎಲ್ಲರೂ ನಾಲ್ಕೈದು ದಿವಸಗಳಿಂದ ಎದುರು ನೋಡಿದ್ದ ಆ ದಿನ ನಾಳೆ ಬರಲಿತ್ತು . ಈ ರಾತ್ರಿ ಮುಗಿದರೆ ಬೆಳಗು ಆ ವಂಶದ ಬಗ್ಗೆ ಹೊಸ ಇತಿಹಾಸವೊಂದನ್ನು ಸೃಷ್ಟಿಸಲಿತ್ತು . ರಾಮ ಹೆಗ್ಡೆಯವರ ವಂಶದ ಗೌರವ ನಾಳಿನ ಕಾರ್ಯಕ್ರಮದದೊಂದಿಗೆ ಬೀದಿಪಾಲಾಗಲಿದೆ . ಎರಡು ಮೂರು ವರ್ಷಗಳ ಹಿಂದೆ ಆ ಊರಿನ ಗೌರವದ ಗುರುತಾಗಿ , ವಂಶ ಪಾರಂಪರ್ಯದಿಂದ ಮನೆಮಾತಾಗಿ ವಿಜೃಂಭಿಸುತ್ತಿದ್ದ ಆ ಭವ್ಯ ಬಂಗಲೆ ರಾಮ ಹೆಗ್ಡೆಯವರ ಬದುಕಿನ ಏರಿಳಿತದಂತೆಯೇ ಬಣ್ಣ ಕಳೆದುಕೊಳ್ಳುತ್ತಾ ಬಂದು ನಾಳೆ ಸಾರ್ವಜನಿಕ ಹರಾಜಿಗೆ ಬಂದು ಯಾರದೋ ಮೂರನೆಯವರ ಸ್ವತ್ತಾಗಲಿದೆ . ಇಷ್ಟು ವರ್ಷ ದರ್ಪ ಠೀವಿಗಳಿಂದ ಮೆರೆದವರು , ಅವರ ಮಕ್ಕಳು , ತಾವು ಹುಟ್ಟಿ ಬೆಳೆದು ಸಂಭ್ರಮಪಟ್ಟ ವಾಸಸ್ಥಳವನ್ನು ಉಳಿಸಿಕೊಳ್ಳಲು ಅಸಮರ್ಥರಾಗಿದ್ದಾರೆ ಈಗ .

      

ಮಧುಗೆ ನಿದ್ದೆ ಬರಲಿಲ್ಲ . ಆ ಬಂಗಲೆಯ ರಕ್ತ ಸಂಬಂಧಿಗಳಲ್ಲಿ ಒಬ್ಬನಾದ ತನಗೆ ಬಂಗಲೆಯವರಿಂದ ದೊರಕಿದ ಸ್ವಾಗತ ಸಂಬಂಧಗಳು ಅವನು ಯಾವ ಕ್ಷಣದಲ್ಲೂ ಮರೆಯಲಾಗದಂಥದ್ದು . ಆ ಬಂಗಲೆಯ ಮಕ್ಕಳೊಂದಿಗೆ ಶ್ರೀಮಂತ ವಾತಾವರಣದಲ್ಲಿ ಬೆಳೆಯಬೇಕಾಗಿದ್ದ , ಉಳಿದು ಎಲ್ಲರ ಪ್ರೀತಿ ವಾತ್ಸಲ್ಯಗಳನ್ನು ಗಳಿಸಬೇಕಾಗಿದ್ದ ತಾನು ಆ ಬಂಗಲೆಗೆ ಬೇಡವಾದ ಶಿಶು . ಬಡತನದಲ್ಲಿ ಬೆಳೆದು ಈಗ ತಾನೊಬ್ಬ ಸಮಾಜದ ಗಣ್ಯ ವ್ಯಕ್ತಿ ಆಗಿರುವುದೊಂದು ಆಕಸ್ಮಿಕ ! ಮಗನ ಕೋಣೆಯ ದೀಪ ಆರಿಸಲು ಬಂದ ಜಾನಕಿ ಅವನಿನ್ನೂ ನಿದ್ದೆ ಮಾಡದೆ ಅತ್ತಿತ್ತ ಹೊರಳಾಡುತ್ತಿರುವುದನ್ನು ಕಂಡಳು . ಅವಳಿಗೂ ನಿದ್ದೆ ಬಂದಿರಲಿಲ್ಲ . ಶಾಂತವಾಗಿ ಮಲಗಲು ಹೇಗೆ ಸಾಧ್ಯ ? ರಾಮ ಹೆಗ್ಡೆಯವರ ಮಗಳಾಗಿ ತಾನು ಹುಟ್ಟಿ ಬೆಳೆದ ಮನೆ ನಾಳೆ ಹರಾಜಿಗೆ ಬರಲಿದೆ . ಈ ಘಟನೆ ರಾಮ ಹೆಗ್ಡೆಯವರ ಮೇಲೆ ಎಂಥ ಪರಿಣಾಮ ಮಾಡಬಹುದೆಂದು ಅವಳಿಗೆ ಗೊತ್ತು .

     

ಸುತ್ತ ಮುತ್ತ ಸಮಾಜ ಬದಲಾಗುತ್ತಿದ್ದರೂ , ಜನರೇ ನಾಡಿನ ಆಡಳಿತಗಾರರಾಗುತ್ತಿದ್ದರೂ , ಯಾರಿಗೂ ಬೇಡವಾದ ಹಿಂದುಳಿದ ಜನ ಒಂದು ನೆಲೆ ಕಂಡುಕೊಳ್ಳುತ್ತಿದ್ದ ಕಾಲ ನಡೆಯುತ್ತಿದ್ದರೂ , ಅವರಿಗೆ ಮಾತ್ರ ತಾವು ದೊಡ್ಡ ಶ್ರೀಮಂತರೆಂಬ ಅಭಿಮಾನ . ಆ ಹಳ್ಳಿಯೆಲ್ಲ ತಮ್ಮದಾಗಿತ್ತು . ಈ ಹಳ್ಳಿಯ ಜನರೆಲ್ಲಾ ತಮ್ಮ ವಂಶದವರಲ್ಲಿ ಊಳಿಗ ಮಾಡಿದವರು ಎಂದೇ ಭಾವನೆ . ಜಾನಕಿಗೆ ತಂದೆಯ ಗುಣಗಳೆಲ್ಲ ಗೊತ್ತು . ಅವರು ತನ್ನ ಪ್ರೀತಿ , ಸ್ನೇಹದ ಸ್ವಾತಂತ್ರ್ಯ ಸಹಿಸಲಾರರು ಎಂದು ತಿಳಿದಿದ್ದರೂ ಗೋಪಾಲನನ್ನು ಮದುವೆಯಾಗಿದ್ದಳು . ಮೂಲತಃ ಗೋಕರ್ಣದವನಾದ ಗೋಪಾಲ ತೀರಾ ಬಡವ . ಅವರ ಮನೆಯಲ್ಲಿ ಓದಲು ಇದ್ದವ . ಅದು ರಾಮ ಹೆಗ್ಡೆಯವರಿಗೆ ಸರಿಬರಲಿಲ್ಲ . ತಮ್ಮ ಘನತೆ , ಗೌರವಕ್ಕೆ ಸರಿಹೊಂದುವಂಥದ್ದಲ್ಲ ಎಂದು ಅವಳ ಮೇಲೆ ರೇಗಾಡಿದರು . ಓದಲು ಬಂದ ಗೋಪಾಲ ಮೊದಲ ನೋಟದಲ್ಲೇ ತನ್ನ ಮನಸ್ಸಿನಲ್ಲಿ ಸೇರಿಹೋದವನು , ಮುಂದೆ ತನ್ನವನೇ ಆಗಬೇಕಾದಾಗ ಅವಳು ಆ ಭವ್ಯ ಬಂಗಲೆಯನ್ನು ತ್ಯಜಿಸಿ ಬರಬೇಕಾಯಿತು .

       

" ಮಧು , ಇನ್ನೂ ನಿದ್ದೆ ಬರಲಿಲ್ವೇನೋ ?" ಮಗನ ತಲೆ ಮುಟ್ಟುತ್ತಾ ಜಾನಕಿ ಕೇಳಿದಳು . " ನಾಳೆ ಆ ಬಂಗ್ಲೆ ಹರಾಜಿಗೆ ಬರೋದು ನಿನ್ಗೆ ಜ್ಞಾಪಕ ಇದೆ ತಾನೆ ?" ಎಂದಳು . ಮಧು ತಾಯಿಯನ್ನೇ ನೋಡಿದ . ಈ ವೇಳೆಗೆ ಇದನ್ನು ಹೇಳಲು ಬಂದುದರ ಅರ್ಥವೇನಿರಬಹುದು ಅನ್ನಿಸಿತು . " ಹೌದಮ್ಮ , ನಾಳೆ ಇಷ್ಟು ಹೊತ್ತಿಗೆ ಅದು ಬೇರೆಯವರ ಬಂಗ್ಲೆ ಆಗಿರುತ್ತೆ ...." ಎಂದ . ಒಂದು ಕ್ಷಣ ಮೌನ . ದೀಪದ ಮಂದ ಬೆಳಕಿನಲ್ಲಿ ಮಧು ತಾಯಿಯ ಮಖ ನೋಡಿದ . ಅವಳ ಕಣ್ಣುಗಳಲ್ಲಿ ಬೆಳಕು ಪ್ರತಿಫಲಿಸುತ್ತಿರುವುದು ಕಾಣಿಸಿತು . ಅವಳಿಗೆ ದುಃಖವಾಗಿದೆ ಎಂದೆನಿಸಿತು . " ನಿನಗೆ ಮಾಡಿದ ಪಾಪಕ್ಕೆ ತಕ್ಕ ಫಲಾನ ಆ ಜನ ಅನುಭವಿಸ್ತಿದ್ದಾರೆ . ಅದಕ್ಕಾಗಿ ಯಾಕೆ ಗೋಳಾಡ್ತೀಯಾ ಬಿಡಮ್ಮ " ಎಂದ ಮಧು .

    

ತನಗೆ ಆ ವಂಶದ ಜನ ಏನೇನು ತೊಂದರೆಗಳನ್ನು ಕೊಟ್ಟಿದ್ದಾರೆಂದು ಅವನಿಗೆ ಜಾನಕಿಯೇ ಹೇಳಿದ್ದಳು . ತಮ್ಮ ಅಂತಸ್ತಿಗೂ ತೀರಾ ಕೆಳಮಟ್ಟದಲ್ಲಿರುವ ಗೋಪಾಲನ ಮದುವೆ ತನ್ನೊಂದಿಗೆ ಖಂಡಿತಾ ಆಗಕೂಡದು ಎಂದು ತಂದೆ ಅಬ್ಬರಿಸಿ ಹೇಳಿದ್ದರು . ಹಾಗೆ ಏನಾದರೂ ಆದರೆ ನಿನ್ನನ್ನು ಮನೆಯಿಂದ ಹೊರಗೆ ಹಾಕಿ ವಂಶದ ಗೌರವವನ್ನು ಉಳಿಸಿಕೊಳ್ಳುತ್ತೇನೆ ಎಂದಿದ್ದರು . ಆದರೆ ಈಗ , ನಾಳೆ ಆ ವಂಶದ ಗೌರವ ಏನಾಗಲಿದೆ .....? " ಇಲ್ಲ ಕಣೋ ಮಧು . ಹಾಗಾಗ್ಬಾರ್ದು . ನಿಮ್ತಾತ ಚೆನ್ನಾಗಿ ಬದುಕಿ ಬಾಳ್ದೋರು . ಅವರ ಹೃದಯ ಹೀಗೆ ಒಡೆದು ಚೂರು ಚೂರಾಗ್ಬಾರ್ದು. ನನ್ನ ಈ ಜೀವನವನ್ನು ನಾನೇ ಆರಿಸಿಕೊಂಡಿದ್ದು . ನಂಗೆ ತಂದೆಗಿಂತಲೂ ಹೊಸ ಸ್ನೇಹಾನೆ ಮುಖ್ಯ ಅನ್ನಿಸ್ತು . ಅವರಿಗೆ ಮಗಳಿಗಿಂತಲೂ ವಂಶದ ಗೌರವ ಮುಖ್ಯ ಅನ್ನಿಸ್ತು . ಅವ್ರು ಮುಖ್ಯ ಅಂದ್ಕೊಂಡದ್ದು ಅವರಿಂದ ಹೊರಟು ಹೋಗೋದು ತಾತಂಗೆ ನಂಗೆ ತುಂಬಾ ಸಂಕಟವೆನಿಸ್ತಿದೆ ...." ಜಾನಕಿ ಹೇಳಿದಳು . ಮಗನಿಂದ ಏನಾದರೂ ಉತ್ತರ ಬಂದಿತೇನೋ ಅಂತ ಕಾಡು ನೋಡಿದಳು ಕೆಲಕ್ಷಣ . ಉತ್ತರವಿಲ್ಲ ನಿದ್ದೆ ಬಂದಿರಬೇಕೆನಿಸಿತು . ದೀಪ ಆರಿಸಿ ಮಲಗಲು ಹೋದಳು .

    

ಮಧು ತಾಯಿ ಹೋದದ್ದನ್ನು ಗಮನಿಸಿದ . ಹೌದು , ತಾತ ಚೆನ್ನಾಗಿ ಬದುಕಿ ಬಾಳಿದವರು . ಆದರೆ , ತಮ್ಮನ್ನು ಸಮಾಧಾನವಾಗಿ ಬದುಕಿ ಬಾಳಲು ಬಿಡಲಿಲ್ಲ . ಊರಿನವರಿಗೆಲ್ಲ ಸಹಾಯ ಮಾಡುವ ಮನುಷ್ಯನಿಗೆ ಮಗಳು ಬೇಡವಾಯಿತು . ಮಗಳ ಬಡತನ ಕಾಣದಾಯಿತು . ಮಗಳ ಮಗ ಬೇಡವಾಗುವ ಹಾಗಾಯಿತು . ಜಾನಕಿ ಗೋಪಾಲ ಮದುವೆಯಾಗಿ ಹೊಸ ಬದುಕು ಪ್ರಾರಂಭಿಸಿದ್ದು ಮಧುನ ಹುಟ್ಟಿಗೆ ನಿಮಿತ್ತವಾದಂತಾಯಿತೇ ಹೊರತು ಜಾನಕಿಯ ಬದುಕು ಆಸೆಪಟ್ಟಂತಾಗಲಿಲ್ಲ . ಮಧು ಅವಳ ಹೊಟ್ಟೆಯಲ್ಲಿದ್ದಾಗಲೇ ರತ್ನಮ್ಮ ಬಂಗಲೆ ಬಿಟ್ಟು ಜಾನಕಿಯ ಮನೆ ಸೇರಿದಳು . ಮಧು ಹುಟ್ಟಿ ಎರಡು ವರ್ಷವಾಗಿದ್ದಾಗ ತೋಟದಲ್ಲಿ ಹಾವು ಕಚ್ಚಿ ಗೋಪಾಲ ತೀರಿಕೊಂಡ .

    

" ಜಾನಕಿ ಅಪ್ಪನ ಮನೆಯಲ್ಲಿ ರಾಣಿ ಹಾಗೆ ಇರಬಹುದಾಗಿತ್ತು . ಆದ್ರೆ , ಅವಳಿಗೆ ಗೋಪಾಲನೇ ಹೆಚ್ಚಾದ . ಅವನನ್ನೇ ಮದುವೆ ಮಾಡ್ಕೊಂಡು ಆ ಐಶ್ವರ್ಯನ ಬಿಟ್ಟು ಬಂದ್ಳು . ಬಡತನದಲ್ಲಿ ಜೀವನ ಪ್ರಾರಂಭಿಸಿದ್ಳು . ಹಣಕ್ಕಿಂತಲೂ ಅವ್ಳಿಗೆ ಸ್ನೇಹ , ಪ್ರೀತಿನೇ ಜಾಸ್ತಿಯಾಗೋಯ್ತು . ಆದ್ರೆ ಪಾಪ ಅವ್ಳಿಗೆ ಆ ಸುಖಾನೂ ದಕ್ಲಿಲ್ಲ . ಗೋಪಾಲನನ್ನೂ ಕಳ್ಕೊಂಡು ಒಂಟಿ ಆದ್ಳು . ನೀನೇ ಅವಳಿಗೆ ಸರ್ವಸ್ವ ಆಯ್ತು . ನಿಂಗೋಸ್ಕರ ಅವಳು ಬದುಕಿದ್ಳು . ಬಡತನದಲ್ಲಿ ಕಷ್ಟ ಪಡ್ತಾ ನಿನ್ನನ್ನು ಬೆಳೆಸಿದ್ಳು , ಓದಿಸಿದ್ಳು . ಹೀಗೆ ಒಬ್ಬ ದೊಡ್ಡ ಮನುಷ್ಯನಾಗೂ ಮಾಡಿದಳು . ನೀನು ಈಗ ಸಂಪಾದಿಸಿರೋ ಐಶ್ವರ್ಯ , ಘನತೆ , ಗೌರವಗಳೆಲ್ಲ ಅವಳ ದುಡಿಮೆ ,ತ್ಯಾಗಗಳ ಫಲ . ಅವಳನ್ನು ನೀನು ಚೆನ್ನಾಗಿ ನೋಡ್ಕೋಬೇಕು . ಯಾವ ದುಃಖಾನೂ ಕೊಡಬಾರ್ದು ....." ರತ್ನಮ್ಮ ಸಾಯುವುದಕ್ಕೆ ಕೆಲವು ದಿನಗಳಿಗೆ ಮೊದಲು ಮಧುಗೆ ಹೇಳಿದ್ದಳು 

      

ನವರಾತ್ರಿ ಹಬ್ಬ ಬಂಗಲೆಯಲ್ಲಿ ಅತೀ ಸಂಭ್ರಮದಿಂದ ನಡೆಯುವುದನ್ನು ಮಧುಗೆ ತೋರಿಸಬೇಕೆಂದು ರತ್ನಮ್ಮನಿಗೆ ಬಹಳ ಇಷ್ಟ . ಚಿಕ್ಕ ಹುಡುಗ ಮಧುನನ್ನು ಕರೆದೊಯ್ದಳು ಒಂದು ವರ್ಷ . ಬಂಗಲೆಯನ್ನು ಅಷ್ಟು ವೈಭವವಾಗಿ ಮಧು ಎಂದೂ ಕಂಡಿರಲಿಲ್ಲ . ಬಂಗಲೆಯ ಹೊರಗಿಗಿಂತ ಒಳಗೆ ದೀಪಾಲಂಕಾರ , ಬಣ್ಣ ಬಣ್ಣದ ಬೊಂಬೆಗಳ ಸಾಲು , ಅಲ್ಲಿನ ದೊಡ್ಡವರು ಜರ್ಬಾಗಿ ಉಡುಪು ಧರಿಸಿಕೊಂಡು ಓಡಾಡುತ್ತಿದ್ದುದು , ಅವನ ವಯಸ್ಸಿನ ಮಕ್ಕಳು ಹೊಸ ಬಟ್ಟೆ ಧರಿಸಿ ಮಹಡಿ ಹತ್ತಿ ಇಳಿಯುತ್ತಿದ್ದುದನ್ನೆಲ್ಲಾ ಅವನು ನೋಡಿದಾಗ ಆ ಮನೆ ತನ್ನದು , ತಾನೂ ಈ ಮನೆಗೆ ಸೇರಿದವನು ಎನ್ನಿಸಿತ್ತು .

     

ಆ ಮಕ್ಕಳ ಸಂಗಡ ಆಡಲು ಹೋದಾಗ , ಎಲ್ಲಿದ್ದರೋ ರಾಮ ಹೆಗ್ಡೆಯವರು ಕೆಂಗಣ್ಣು ಮಾಡುತ್ತಾ , ದೊಡ್ಡ ಮೀಸೆ ಹುರಿ ಮಾಡುತ್ತಾ ಅಬ್ಬರಿಸುತ್ತಾ ಬಂದಿದ್ದರು . ಮಧುನನ್ನು ಸ್ನೇಹದಿಂದ ಕಂಡು ಮಾತನಾಡಿಸಿದ್ದ ಆ ಮನೆಯ ಹುಡುಗಿ ಚಂದ್ರಿಕಾ ತಾತನನ್ನು ನೋಡಿ ಬೆದರಿ ದೂರ ನಿಂತಿದ್ದಳು . ಕೂಡಲೇ ರಾಮ ಹೆಗ್ಡೆಯವರು ಮಧುನನ್ನು ಎಳೆದು ಬೀದಿಗೆ ದಬ್ಬಿದ್ದರು . ಅವನ ಕೈಯಲ್ಲಿದ್ದ ತಿಂಡಿಯ ತಟ್ಟೆಯನ್ನು ಕಿತ್ತೆಸೆದರು . " ಭಿಕಾರಿಗಳಿಗೆಲ್ಲ ಇಲ್ಲಿ ಜಾಗಾ ಇಲ್ಲ . ನಡೆ ಹೊರಗೆ " ಎಂದಿದ್ದರು . ಚಂದ್ರಿಕಾ ಬೆಪ್ಪಾಗಿ ಅವನನ್ನು ನೋಡುತ್ತಿದ್ದಂತೆ ಮಧು ರತ್ನಮ್ಮನನ್ನೂ ಮರೆತು ಕಣ್ಣೀರು ಸುರಿಸುತ್ತ ಅಮ್ಮನ ಹತ್ತಿರ ಬಂದಿದ್ದ . ಅಮ್ಮನ ಮಡಿಲಲ್ಲಿ ಮಲಗಿ ಅತ್ತಿದ್ದ .

     

ಜಾನಕಿ ದೀಪ ಆರಿಸಿ ಹೋಗಿದ್ದರೂ ಮಧುಗೆ ನೆನಪುಗಳು ನಿದ್ದೆ ಮಾಡಲು ಬಿಟ್ಟಿರಲಿಲ್ಲ . ಚಿಕ್ಕಂದಿನಿಂದ ನಡೆದದ್ದೆಲ್ಲ ನೆನಪಿಗೆ ಬರುತ್ತಿದ್ದವು . " ನೀನು ಆ ಮನೆಯವರಿಗೆ ಬೇಡದವನಾಗಿರಬಹುದು ಆದ್ರೆ , ಭಿಕಾರಿ ಅಲ್ಲ . ಹಾಗೆ ಆಗೋಕ್ಕೆ ನಾನು ಬಿಡೋಲ್ಲ " ಎಂದು ಜಾನಕಿ ಮಗನನ್ನು ಜೀವನದ ಒಂದೊಂದು ಹಂತದಲ್ಲೂ ಮೇಲೇರಿಸಿದ್ದಳು .ಮಧು ತಾಂತ್ರಿಕ ನಿಪುಣನಾದ . ದೊಡ್ಡ ಓದು ಓದಿದ . ತನ್ನದೇ ಆದ ಕಾರ್ಖಾನೆ , ವ್ಯಾಪಾರ ವಹಿವಾಟು ಪ್ರಾರಂಭಿಸಿ ಹಂತಗಳನ್ನು ಬೇಗ ಬೇಗ ದಾಟಿದ . ಈಗ ಅವನು ಸಮಾಜದ ಅತಿಗಣ್ಯ ವ್ಯಕ್ತಿಗಳಲ್ಲೊಬ್ಬ . ದೊಡ್ಡ ಶ್ರೀಮಂತ ವರ್ಗ ಗೌರವಿಸುವ ವ್ಯಕ್ತಿ . ಮಧು ಈಗ ತಾಯಿಯನ್ನು ಸುಖದ ಸುಪ್ಪತ್ತಿಗೆಯಲ್ಲಿ ತೇಲಾಡಿಸುತ್ತಿದ್ದಾನೆ . ಅವಳು ದುಃಖ ಗಳೆಲ್ಲವನ್ನೂ ಮರೆಯುವಂತೆ ಆಧಾರಸ್ತಂಭವಾಗಿ ನಿಂತಿದ್ದಾನೆ . ತನ್ನ ತವರನ್ನು ಮರೆತ ತಾಯಿ , ಆ ವಂಶದ ಏರಿಳಿತಗಳನ್ನು ಕಂಡು ತಿಳಿದು ಸುಮ್ಮನಿರಲು ಸಾಧ್ಯವಾಗಲಿಲ್ಲ .

    

ಆ ಮನೆಗೆ ಅದೇನು ಗರ ಬಡಿಯಿತೋ . ಮಕ್ಕಳೆಲ್ಲ ಆಸ್ತಿಗಾಗಿ ತಂದೆಯೊಂದಿಗೆ ಜಗಳವಾಡಿದರು . ದೊಡ್ಡಸ್ಥಿಕೆ ಉಳಿಸಿಕೊಳ್ಳಲು ರಾಮ ಹೆಗ್ಡೆಯವರು ಹಿಂದಿನ ವೈಭವ ಮುಂದುವರಿಸಲು ಪ್ರಯತ್ನಿಸಿದರು . ಮಕ್ಕಳು ಮಾಡಿದ ಸಾಲ ಸೋಲ ಅವರ ತಲೆಯ ಮೇಲೆ ಬಂದಿತು . ಸಾಲ ತೀರಿಸಲು ರಾಮ ಹೆಗ್ಡೆಯವರ ಸರ್ವಸ್ವವೂ ಖರ್ಚಾಯಿತು . ಕೋರ್ಟು ಕಚೇರಿಗಳಿಗೆಂದು ಬೇಕಾದಷ್ಟು ಕರಗಿಹೋಯಿತು . ಬಂಗಲೆಯ ಮೇಲೂ ದೊಡ್ಡ ಸಾಲವಾಯಿತು . ತೀರಿಸುವ ಗಡುವು ತೀರಿಹೋಗಿ ಈಗ ಬಂಗಲೆ ಹರಾಜಿಗೆ ಬಂದಿದೆ . ಆ ವಂಶದವರೆಲ್ಲರ ಗೌರವ ಹರಾಜಾಗಲಿದೆ . ಇವರಿಗೆಲ್ಲ ಹೀಗೇ ಆಗಬೇಕು .ಎನ್ನಿಸಿತ್ತು ಮಧುಗೆ . ಆದರೆ , ತಾಯಿ ಮನಸ್ಸಿನಲ್ಲೇ ಗೋಳಾಡುತ್ತಿರುವುದು ಅವನಿಗೆ ಚೆನ್ನಾಗಿ ಅರ್ಥವಾಗಿತ್ತು .

    

ಎರಡೇ ದಿನಗಳ ಹಿಂದೆ ರಾಮ ಹೆಗ್ಡೆಯವರು ಇವನ ಮನೆ ಹೊಸ್ತಿಲು ತುಳಿದು ಬಂದು ಮೊದಲ ಸಲವಾಗಿ ಮಗು ಮೊಮ್ಮಗನ ಮುಂದೆ ನಿಂತಿದ್ದರು . ಅವರ ಜೋಲು ಮುಖ , ಬಣ್ಣ ಕಳೆದುಕೊಂಡ ವ್ಯಕ್ತಿತ್ವ ಕಂಡೇ ಜಾನಕಿ ಅರ್ಧ ಕುಸಿದಿದ್ದಳು . ತಂದೆಯನ್ನು ಬಿಗಿದಪ್ಪಿಕೊಂಡಿದ್ದಳು . ಅವರನ್ನು ಕೂರಿಸಿ ಸಾಂತ್ವನಗೊಳಿಸಿದ್ದಳು . ಮಧು ಬಂದು ಅಮ್ಮನ ಹತ್ತಿರ ಕುಳಿತು ತಾತನನ್ನೇ ನೋಡಿದ್ದ . " ನಾಳೆ ಬಂಗ್ಲೆ ಹರಾಜು ಆಗ್ತಿದೆ . ಹಿರಿಯರ ಆಸ್ತಿ , ವಂಶದ ಗೌರವ ಹೋಗ್ತಿದೆ ...." ತಲೆ ಬಗ್ಗಿಸಿಕೊಂಡೇ ರಾಮ ಹೆಗ್ಡೆಯವರು ಮಾತನಾಡಿದ್ದರು . " ಈಗ ನಿನ್ನ ಮಗ ಏನಾದ್ರೂ ಮಾಡ್ಬೇಕು ...." ಎಂದಿದ್ದರು . ಜಾನಕಿ ಮಗನ ಮುಖವನ್ನೇ ನೋಡಿದ್ದಳು . ಅವಳ ಕಣ್ಣುಗಳಲ್ಲೂ ಕಣ್ಣೀರು ಧಾರೆ .

    

ಮಧು ನೆನಪುಗಳ ಕಾಡುವಿಕೆಯಲ್ಲಿ ರಾತ್ರಿಯೆಲ್ಲ ಹೊರಳಾಡಿದ್ದ . ಈ ವಂಶದ ಜಂಭ ಕೊನೆ ಕಾಣುತ್ತದೆ . ಅಹಂಕಾರಕ್ಕೊಂದು ಫಲ ಸಿಗಲಿದೆ . ಹಾಗೆ ಮಾಡಿದವರು ಹೀಗೆ ಅನುಭವಿಸಲೇಬೇಕು ...... ಎಂದುಕೊಂಡಿದ್ದ . ತನ್ನ ತಾಯಿಯ ಯೌವನದ ಬದುಕನ್ನು ಚಿವುಟಿಹಾಕಿದ ಜನ , ತನ್ನನ್ನು ಕತ್ತು ಹಿಡಿದು ಹೊರದಬ್ಬಿದ ಜನ ಇದನ್ನು ತಿಳಿಯಲಿ . ಅವರ ಕಾಲ ಆಗಿಹೋಯಿತು . ಇದೀಗ ನನ್ನ ಕಾಲ ಎಂದುಕೊಂಡ . ಮರುದಿನ ಬೆಳಕಾಗುತ್ತಿದ್ದಂತೆಯೇ ಜಾನಕಿ ಮಗನ ಮುಂದೆ ಬಂದು ನಿಂತಿದ್ದಳು . ಮಗನಿಗೆ ಯಾವ ಬಲವಂತವನ್ನೂ ಮಾಡದೆ , ಮನಸ್ಸಿನೊಳಗೆ ಬಂದು ತುಂಬಿಕೊಂಡ ತವರಿನ ದುಃಖವನ್ನು ಭರಿಸಲಾಗದ ಸಂಕಟದ ಅಸಹಾಯಕತೆ ಅವಳದು . ಹೊರಬಾಗಿಲಿಗೂ , ತನ್ನ ರೂಮಿಗೂ ಅವಳು ಚಡಪಡಿಸುತ್ತಾ ಓಡಾಡುವುದನ್ನೇ ಮಧು ಗಮನಿಸಿದ . 

   

ಯಾವುದೋ ನಿಮಿಷದಲ್ಲಿ ಡಂಗುರದ ಸದ್ದು ಕೇಳಿಸತೊಡಗಿತು . ಬಂಗಲೆ ಹರಾಜು ವೇಳೆ ಹತ್ತಿರವಾಯಿತೆಂದು ಸೂಚಿಸುವ ಸದ್ದು . ಜಾನಕಿಯ ಕಣ್ಣೀರು ಧಾರಾಕಾರವಾಯಿತು . ಮಧು ಉಡುಪು ಧರಿಸಿಕೊಂಡ . " ಬಾಮ್ಮ ಅಲ್ಲಿಗೆ ಹೋಗೋಣ " ಎಂದು ಬಲವಂತವಾಗಿ ತಾಯಿಯನ್ನು ಹೊರಡಿಸಿದ . ಮನೆ ಮುಂದಿನ ಪೋರ್ಟಿಕೋದಲ್ಲಿದ್ದ ವಿದೇಶಿ ಕಾರು ಬಾಗಿಲು ತೆಗೆದು ತಾನೇ ಅವಳನ್ನು ಒಳಗೆ ಹತ್ತಿಸಿದ . " ಬಂಗ್ಲೆಯ ಕಡೆ ನಡೆ " ಎಂದು ಡ್ರೈವರನಿಗೆ ಹೇಳಿದ . ಬಂಗಲೆಯ ಮುಂದೆ ಆ ಊರಿನವರೆಲ್ಲ ಬಂದು ತುಂಬಿದಂತಿತ್ತು . ಆ ವಂಶದವರ ಗೌರವ ಧೂಳೀಪಟವಾಗುವುದು ಎಲ್ಲರಿಗೂ ಬೇಕಾಗಿತ್ತು ಅನ್ನುವ ಹಾಗೆ ........ಹೊರ ಬಾಗಿಲು ಮುಂದಿನ ಸೋಫಾವೊಂದರಲ್ಲಿ ರಾಮ ಹೆಗ್ಡೆಯವರು ತಲೆ ಬಗ್ಗಿಸಿ ಕುಳಿತುಕೊಂಡಿದ್ದರು . ಅವರೊಬ್ಬರೇ ಒಂಟಿಯಾಗಿ , ಯಾವ ಮಕ್ಕಳು , ಮೊಮ್ಮಕಳ ಜೊತೆಯೂ ಇಲ್ಲದೆ ಬದುಕಿನಲ್ಲಿ ಮೊದಲ ಬಾರಿಗೆ ನಿಸ್ತೇಜರಾಗಿ ಕುಳಿತಿದ್ದರು .

    

ಸರ್ಕಾರಿ ಅಧಿಕಾರಿ ಹರಾಜು ಮೊದಲು ಮಾಡಿದ್ದ ಐದಾರು ಲಕ್ಷ ರೂಪಾಯಿಗಳಿಂದ ಹತ್ತು ಲಕ್ಷಕ್ಕೆ ಬಂದಿದ್ದ . ಗುಂಪಿನ ಮಧ್ಯದಿಂದ ಯಾರೋ ಹದಿನೈದು ಲಕ್ಷ ಎಂದು ಕೂಗಿದ್ದರು . ಅಷ್ಟರಲ್ಲಿ " ಇಪ್ಪತ್ತೈದು ಲಕ್ಷ ....!! " ಊರಿನವರೆಲ್ಲ ಥಟ್ಟನೆ ತಿರುಗಿ ನೋಡಿದರು . ಮಧು ಕಾರಿನಿಂದ ಇಳಿದು ಬರುತ್ತಾ ಕೂಗಿದ್ದ . ಜಾನಕಿ ಮೆಚ್ಚುಗೆ ,ಹೆಮ್ಮೆಯಿಂದ ಮಗನ ಮುಖ ನೋಡಿದ್ದಳು . ತಲೆ ಬಗ್ಗಿಸಿಕೊಂಡು ಕುಳಿತಿದ್ದ ರಾಮ ಹೆಗ್ಡೆಯವರು ಥಟ್ಟನೆ ಎದ್ದು ನಿಂತರು . ಅವರ ವಯಸ್ಸಾದ ದೇಹ ಅಲುಗಾಡಿತು . ತಲೆತಲಾಂತರದಿಂದ ಶ್ರೀಮಂತರ ಮನೆಯಾಗಿದ್ದ ಆ ಊರಿನ ಭಾರೀ ಬಂಗಲೆ ಮಧುವಿನ ವಶಕ್ಕೆ ಬಂದಿತು . ತನ್ನನ್ನು , ತನ್ನ ತಾಯಿಯನ್ನೂ ಹೊರಗಟ್ಟಿದವರನ್ನು ಹೊರಗಟ್ಟಿ ತಾನೀಗ ಅದನ್ನು ತನ್ನದಾಗಿಸಿಕೊಳ್ಳಬೇಕು . " ಭಿಕಾರಿಗಳಿಗೆ ಜಾಗ ಇಲ್ಲ ಹೊರಡು " ಎಂದು ಅಬ್ಬರಿಸಿದವರನ್ನು ರಸ್ತೆಗಿಳಿಸಿ ಭಿಕಾರಿಯನ್ನಾಗಿ ಮಾಡಬೇಕು . ಮಧು ತಾಯಿಯೊಂದಿಗೆ ಮೊದಲ ಬಾರಿಗೆ ಹಕ್ಕಿನೊಂದಿಗೆ ಆ ಮನೆಯೊಳಗೆ ಕಾಲಿಟ್ಟ .

   

ರಾಮ ಹೆಗ್ಡೆಯವರು ಅವನ ಹತ್ತಿರ ಬಂದರು . " ಮಗೂ , ನಿನ್ನನ್ನ ಮಾತಾಡ್ಸೋ ಹಕ್ಕನ್ನೂ ನಾನು ನನ್ನ ನಡವಳಿಕೆಯಿಂದ ಕಳೆದುಕೊಂಡುಬಿಟ್ಟಿದ್ದೀನಿ ಒಬ್ಬರಿಗೆ ಜೀವನದಲ್ಲಿ ಬುದ್ಧಿ ಬರೋಕೆ ಸರ್ವನಾಶ ಆಗ್ಬೇಕಾದದ್ದಿಲ್ಲ . ಆದ್ರೆ , ನನ್ನ ವಿಷ್ಯದಲ್ಲಿ ಹೀಗಾಯ್ತು . ನಾನು ಈಗ ಬೀದಿಪಾಲಾಗಿದ್ರೂ ಈ ವಂಶದ ಗೌರವ ಉಳ್ದಿದೆ .ಇದಿನ್ನು ನಿಂದು . ನಾನು ಹೋಗ್ತೀನಿ ....." ಎಂದು ತಾತ ಹೊರಗೆ ಹೆಜ್ಜೆ ಹಾಕಿದ್ದನ್ನು ಮಧು ನೋಡಿದ . ಎಲ್ಲಾ ಆಗಿ , ಏನೂ ಇಲ್ಲವಾಗಿ , ಬಾಳಿನಲ್ಲಿ ಕುಸಿದಿದ್ದರೂ ಆ ಧೀಮಂತ ನಿಲುವು , ವಂಶದ ಘನತೆ ಉಳಿಯಬೇಕೆಂದು ಮಗಳನ್ನು ಕಳೆದುಕೊಂಡ ಹಾಗೆ ಬಂಗಲೆಯನ್ನು ಕಳೆದುಕೊಂಡಿದ್ದರೂ , ರಕ್ತದಲ್ಲಿ ಹರಿಯುತ್ತಿರುವ ಆ ಘನತೆ , ಗಾಂಭಿರ್ಯ ಮಧು ಅವರ ಮುಖವನ್ನೇ ನೋಡುತ್ತಾ ನಿಂತ . ಆ ಮುಖದಲ್ಲೀಗ ಒಂದಿಷ್ಟು ಗೆಲುವು ಕಾಣಿಸಿತ್ತು .

   

ಮೊದಲ ಬಾರಿಗೆ ಮಧು ಮಾತನಾಡಿದ . " ತಾತಾ , ನಮ್ಮೆಲ್ಲರ ಜೀವನದಲ್ಲಿ ಏನೇನೋ ಆಗೋಯ್ತು . ನಿಮಗೂ ರಕ್ತ ಸಂಬಂಧಕ್ಕಿಂತ ವಂಶದ ಗೌರವಾನೆ ಮುಖ್ಯವಾಯ್ತು . ಗಟ್ಟಿ ಮನಸ್ಸು ಮಾಡಿ ನೀವು ವಂಶದ ಗೌರವಾನ ಉಳಿಸಿದ್ರಿ . ಆದ್ರೆ , ನಿಮ್ಮನ್ನು ರಸ್ತೆಪಾಲು ಮಾಡಿ ನನ್ನ ಘನತೆಯನ್ನು ಕಳೆದುಕೊಳ್ಳೋದಿಕ್ಕೆ ನಂಗೆ ಇಷ್ಟವಿಲ್ಲ . ಈ ಬಂಗ್ಲೆ ನಿಮ್ಮದು . ಯಾವಾಗಲೂ ನಿಮ್ಮದೇ .....!! " ರಾಮ ಹೆಗ್ಡೆಯವರ ಕಣ್ಣುಗಳಿಂದ ಬಳಬಳನೆ ನೀರು ಸುರಿಯಿತು . ಜಾನಕಿ ಸುಮ್ಮನೆ ನಿಂತಳು . ತಂದೆಯ ದೊಡ್ಡಸ್ತಿಕೆಗಿಂತಲೂ ದೊಡ್ಡತನ ಪ್ರದರ್ಶಿಸಿದ ಮಗನ ಬಗ್ಗೆ ಅವಳಿಗೆ ಹೆಮ್ಮೆ ಅನಿಸಿತು . " ಮಧು , ನಾವು ಬಂದ ಕೆಲಸ ಆಯ್ತು . ಈ ವಂಶದ ಗೌರವ ಉಳಿಯಿತು . ಇನ್ನು ನಮಗಿಲ್ಲೇನೂ ಕೆಲಸ ಇಲ್ಲ . ನಡೆ ಹೋಗೋಣ " ಎಂದಳು .

  

ತಮಗೆ ಹೊಸ ಬದುಕು ಕೊಟ್ಟು ಮೊಮ್ಮಗ , ಮಗಳು ಕಾರು ಹತ್ತಿ ತಮ್ಮಿಂದ ದೂರ ದೂರ ಹೋಗುವುದನ್ನೇ ನೋಡುತ್ತಾ ರಾಮ ಹೆಗ್ಡೆಯವರು ನಿಂತರು . ಅವರನ್ನು ಕೂಗಿ ಕರೆಯಬೇಕು ಎನಿಸಿದರೂ , ಅದೇಕೋ ಮಾತೇ ಹೊರಡಲಿಲ್ಲ


Rate this content
Log in

Similar kannada story from Inspirational