ಋಣಾನು ಬಂಧ
ಋಣಾನು ಬಂಧ
ಕಣ್ಣಾರೆ ನಾ ಕಂಡು ಆ ಕ್ಷಣ ಮರುಗಿದ ಸನ್ನಿವೇಶವನ್ನು ಓದುಗರೊಂದಿಗೆ ಹಂಚಿಕೊಳ್ಳಲು ನನ್ನ ಮನಸ್ಸು ಇಷ್ಟಪಟ್ಟಿತಾದರೂ ಇದುವರೆಗೂ ಸಾಧ್ಯವಾಗಿರಲಿಲ್ಲ.
ಮರೆತು ಹೋಗುತ್ತೇನೆಂದು ಸಾಮಾನ್ಯವಾಗಿ ನೋಟ್ ಮಾಡೋದು ನನ್ನ ಹವ್ಯಾಸ ಇಂದು ಅಕಸ್ಮಾತ್ ಕಣ್ಣಿಗೆ ಬಿದ್ದು ನೆನಪಿನ ಸುರುಳಿ ಬಿಚ್ಚಿಕೊಂಡ ಪರಿಣಾಮ ಈ ಪುಟ್ಟ ಪ್ರಯತ್ನ.
ಸುಮಾರು ಒಂದು ವರ್ಷದ ಹಿಂದೆಯಷ್ಟೇ ನನ್ನ ಹತ್ತಿರದ ಸಂಭಂದಿಕರ ಒಂದು ಕಾರ್ಯಕ್ರಮಕ್ಕೆ ಹೋಗಿದ್ದಾಗ ನಡೆದ ಒಂದು ಮರೆಯಲಾಗದ ಸನ್ನಿವೇಶ.ಛತ್ರದ ಹೊರಗಡೆ ಏಳೆಂಟು ವರ್ಷದ ಒಬ್ಬ ಬಾಲಕ ನೊಬ್ಬ ಅದೇ ವಯಸ್ಸಿನ ಮಕ್ಕಳೊಂದಿಗೆ ಬೆರೆತು ಆಟವಾಡುತ್ತಿದ್ದ .ಬೇರೆ ಮಕ್ಕಳಿಗಿಂತ ಸ್ವಲ್ಪ ವಿಭಿನ್ನವಾಗಿ ಎಲ್ಲರೊಂದಿಗೆ ಬೆರೆತು ಬೇಗನೆ ಸ್ನೇಹ ಗಳಿಸಿ ತನ್ನ ವಯಸ್ಸಿಗೆ ಮೀರಿ ಮಾತನಾಡುತ್ತಿದ್ದುದು ನನ್ನಂತೆ ಹೊರಗೆ ನಿಂತಿದ್ದ ವಯಸ್ಸಾದ ಕೆಲವರ ಗಮನ ಸೆಳೆದಿತ್ತು .ಸುಮಾರು ಎಂಬತ್ತು ವರ್ಷದ ವಯೋವೃದ್ಧರೊಬ್ಬರು ಆ ಹುಡುಗನನ್ನ ಹತ್ತಿರ ಕರೆದು ಆತ್ಮೀಯವಾಗಿ ಮಾತನಾಡುವಾಗ ಅಷ್ಟೇ ಸಹಜವಾಗಿ ತನ್ನ ಬಗ್ಗೆ ಹೇಳಿಕೊಳ್ಳುತ್ತಿದ್ದಾಗ ಕುತೂಹಲದಿಂದ ನಾನೂ ಹತ್ತಿರ ಹೋಗಿ ನಿಂತೆ . ಆ ವೃದ್ಧರು ಬಾಲಕನ ಹೆಸರನ್ನು ಕೇಳಿದರು . ಸಚಿನ್ ಅಂದ ಅದಕ್ಕೆ ಅವರು ನನ್ನ ಹೆಸರು ಸಚ್ಚಿದಾನಂದ ಅಂತ ಹೇಳಿಕೊಂಡರು. ಯಾವ ಸ್ಕೂಲ್ ಅಂತ ಕೇಳಿದಾಗ ಜ್ಞಾನಗಂಗಾ ಅಂದ. ಇವರು ನಾನು ಕೆಲವು ವರ್ಷ ಅಲ್ಲಿ ಮೇಷ್ಟ್ರ ಕೆಲಸ ಮಾಡಿದ್ದೆ ಅಂದರು. ಮನೆಯಲ್ಲಿ ಯಾರ್ಯಾರು ಇದೀರಿ ಅಂದಾಗ ನಾನು ಅಮ್ಮ ಅಪ್ಪ ಅಂದ. ಅದಕ್ಕೆ ನಾವೂ ಮೂರು ಜನರೇ ಇರೋದು. ನಾನು ನನ್ನ ಮಗ ಸೊಸೆ ಅಂತ ನಗ್ತಾ ಹೇಳಿದ್ರು .ಈಗ ಅವನ ಸರದಿ , ತಾತಾ ನೀವು ಒಬ್ಬರೇ ರೂಮಲ್ಲಿ ಮಲ್ಕೊಳ್ತೀರಾ , ಅದಕ್ಕೆ ಅವರು ಹೌದು ಏಕೆ ಅಂದಾಗ ನಾನೂ ಅಷ
್ಟೆ ಅಂದ. ಮತ್ತೆ ನಿಮಗೆ ಭಯ ಆಗಲ್ವಾ ಅಂದ, ಆಗತ್ತೆ ಏನು ಮಾಡೋದು ಅಂದರು .ತಾತಾ ತಿಂಡಿ ತಿನ್ನುವಾಗ ಮೈ ಮೇಲೆ ಬೀಳುತ್ತೆ ಆಗ ಅಪ್ಪ ಬೈತಾರೆ ನಿಮಗೆ ಅಂದ .ಬೀಳುತ್ತಪ್ಪ ಏನು ಮಾಡೋದು. ಬೈಕೋತಾರೇನೋ ಕೇಳಿಸಲ್ಲ ಅಂದರು. ಶರ್ಟ್ ಗುಂಡಿ ಸರಿಯಾಗಿ ಹಾಕ್ಕೊಳಕ್ಕೆ ಬರಲ್ಲ ಅಂತ ಬೈತಾರೆ ನಿಮಗೆ ಅಂದ . ನಿಜ ನನಗೂ ಎಷ್ಟೋ ಸಲ ಹಾಗೆ ಆಗುತ್ತೆ ಮಗ ಕಿವಿಯಲ್ಲಿ ಬಂದು ಹೇಳ್ತಾನೆ ಪ್ಯಾಂಟ್ ಝಿಪ್ ಹಾಕೊಂಡಿಲ್ಲ ಏನಪ್ಪಾ ಅಂತ.ನಿಮಗೆ ಫ್ರೆಂಡ್ಸ್ ಇದಾರ ಅಂದ , ಇದ್ರು ಈಗ ಯಾರೂ ಇಲ್ಲಾಂತ ಕಣ್ಣಲ್ಲಿ ನೀರು ತುಂಬಿ ಬಂತು. ಅಷ್ಟು ಹೊತ್ತಿಗೆ ಅವರಪ್ಪ ಬಂದು ಏ ಎಲ್ಲೋ ಹುಡುಕೋದು ನಿನ್ನ . ಬಾ ಊಟಕ್ಕೆ ಅಂದಾಗ ಓಡಿಹೋದ. ನಾವು ಊಟಕ್ಕೆ ಕೂತಾಗ ನನ್ನ ಪಕ್ಕದಲ್ಲಿ ಆ ವೃದ್ದರು ಕೂತರು. ಎದುರಿಗೆ ಅವನು ಅಪ್ಪ ಅಮ್ಮನ ಜೊತೆ ಕೂತಿದ್ದ. ಆ ಬಾಲಕನಿಗೆ ಏನಾಯ್ತೋ ಗೊತ್ತಿಲ್ಲ ಅಲ್ಲಿಂದಲೇ ತಾತಾ ನಿಮ್ಮ ಪಕ್ಕದಲ್ಲಿ ಕೂತುಕೊಳ್ಳಲೇ ಅಂದ ಅವನ ಅಮ್ಮ ಬೇಡ ಅಂತ ಕೈ ಹಿಡಿದು ಕೊಂಡರು .ಇವರು ಬಾ ಅಂದ ತಕ್ಷಣ ಓಡಿ ಬಂದು ಕೂತ. ಅವರಿಬ್ಬರಿಗೂ ಒಂದು ತರಾ ಕಸಿವಿಸಿ ಆಯ್ತು .ವಿಧಿ ಇಲ್ಲದೆ ನಾಟಕೀಯವಾಗಿ ನಕ್ಕು ಸುಮ್ಮನಾದರು. ಎಲ್ಲರೂ ಊಟ ಮಾಡ್ತಿರೋವಾಗ ಅವನನ್ನ ಕೇಳಿದ್ರು ನಿನಗೆ ಯಾವ ಸ್ವೀಟ್ ಇಷ್ಟ? ಅದಕ್ಕೆ ಜಿಲೇಬಿ ಅಂದ . ಅವನ ಅದೃಷ್ಟಕ್ಕೆ ಜೀಲೇಬಿಯೇ ಬಂತು. ಅದುವರೆಗೂ ನನ್ನ ಹತ್ರ ಒಂದು ಮಾತೂ ಆಡದ ಅವರು ಹೇಳಿದರು ನೋಡಿ ಇದಕ್ಕೇ ಹೇಳೋದು ಯಾವುದೋ ಜನ್ಮದ ಸಂಭಂದ ಅಂತ. ನಾನು ಸಿಹಿ ತಿನ್ನೋದು ಬಿಟ್ಟು ಇಪ್ಪತ್ತು ವರ್ಷ ಆಯ್ತು ಇವತ್ತು ಏನಾದ್ರೂ ಆಗ್ಲಿ ತಿನ್ನೋಣ ಅಂತ ಮನಸಾಗ್ತಿದೆ ಏಕೆ ಗೊತ್ತಾ ಇವನಿಗೂ ಜಿಲೇಬಿ ಇಷ್ಟ ಅಂತೆ ನನಗೂ ಅಷ್ಟೆ. ಏನಂತೀರಿ ಅಂದರು. ಹೃದಯ ಭಾರವಾಗಿ ಉತ್ತರಿಸಲಾದೆ .