ಅಕ್ಕಮ್ಮ
ಅಕ್ಕಮ್ಮ
ಬಹಳ ಹಿಂದೆ ನಾನು ಕೊಯಮತ್ತೂರಿನಿಂದ ಬೆಂಗಳೂರಿಗೆ ರೈಲು ಪ್ರಯಾಣ ಮಾಡ್ತಿದ್ದೆ. ನನ್ನ ಎದುರು ಸೀಟಿನಲ್ಲಿ ಮಧ್ಯ ವಯಸ್ಸಿನ ಹೆಂಗಸು, ಜೊತೆಗೆ ಸುಮಾರು ಏಳು ಎಂಟು ವರ್ಷ ವಯಸ್ಸಿನ ಹುಡುಗಿ ಕೂತಿದ್ದಳು . ಆ ಹುಡುಗಿಗೆ ಬಹಳ ಹಸಿವಾಗಿರಬೇಕು ರೈಲು ಹೊರಡಲು ಇನ್ನೂ ಹತ್ತು ನಿಮಿಷವಿದೆ. ಇಳಿದು ಹೋಗಿ ಏನಾದರೂ ತಿಂಡಿ ತರಲು ಅ ಹೆಂಗಸಿಗೆ ಭಯ. ನಾನು ಕೇಳಿದೆ ಇಳಿದು ಹೋಗಿ ಏನಾದರೂ ತರಬೇಕಾ, ಹತ್ತೇ ನಿಮಿಷ time ಇರೋದು. ನನಗೆ ಏಕೆ ತೊಂದರೆ ಕೊಡಬೇಕಂತಲೋ ಏನೋ ಪರವಾಗಿಲ್ಲ ಬಿಡಿ ಮುಂದಿನ ಸ್ಟೇಶನ್ ಬಂದಾಗ ತಿಂಡಿ ತಿಂದರಾಯ್ತು ಅಂದು ಸುಮ್ಮನಾದಳು. ಹಾಗೇ ಮಾತನಾಡುವಾಗ, ಅವರು ಬೆಂಗಳೂರಿಗೆ ಬಂದು ಅಲ್ಲಿಂದ ಪಶ್ಚಿಮ ಬಂಗಾಳದ ಯಾವುದೋ ಒಂದು ಊರಿಗೆ ಆ ಹುಡುಗಿ ಮಾತ್ರ ಪ್ರಯಾಣ ಮಾಡುತ್ತಾಳೆ ಎಂದಾಗ ನನಗೆ ಆಶ್ಚರ್ಯ. ಮತ್ತೆ ಕೇಳಿದಾಗ ಬೆಂಗಳೂರಿನಿಂದ ಒಬ್ಬರು ಇವಳನ್ನ ಜೊತೆಗೆ ಕರೆದು ಕೊಂಡು ಹೋಗುತ್ತಾರೆ ಎಂದಾಗ ಕಾರಣ ಕೇಳಿದೆ. ಅದಕ್ಕೆ ಆ ಹೆಂಗಸು ಹೇಳಿದ್ದು, ಇದು ಕನ್ನಡದ ಹುಡುಗಿ . ಬಳ್ಳಾರಿ ಹತ್ತಿರ ಯಾವುದೋ ಹಳ್ಳಿ. ಇವರ ಅಪ್ಪ ಅಮ್ಮ ಬಹಳ ಬಡವರು. ನಾಲ್ಕು ಹೆಣ್ಣು ಮಕ್ಕಳನ್ನ ಸಾಕಲು ಬಹಳ ಕಷ್ಟ ಅಂತ ಇಬ್ಬರನ್ನ ಕೆಲಸಕ್ಕೆ ಕಳಿಸಿದ್ದಾರೆ. ಇವಳು ಮೂರನೆಯವಳು. ಒಂದು ವರ್ಷದ ಹಿಂದೆ ಯಾರೋ ಬೆಂಗಳೂರಿಗೆ ಕರೆದು ತಂದು ಒಬ್ಬ MLA ಮನೆಯಲ್ಲಿ ಕೆಲಸಕ್ಕೆ ಬಿಟ್ಟಿದ್ದರು.MLA ತಂಗಿ ಕೊಯಮತ್ತೂರಿನಲ್ಲಿ ಇದ್ದಾರೆ. ಅವರಿಗೆ ಮೂರು ವರ್ಷದ ಮಗು ಇದ್ದು, ಮನೆಯನ್ನ ನೋಡಿಕೊಳ್ಳಲು ಕಷ್ಟವಾಗಿತ್ತು ಅದಕ್ಕೇ ಇಲ್ಲಿಗೆ ಕಳುಹಿಸಿದರು. ಈಗ ಅವರ ಅಕ್ಕನ ಮಗ ಎಲ್ಲೋ ಪಶ್ಚಿಮ ಬಂಗಾಳದಲ್ಲಿ ಇದ್ದಾನಂತೆ ಅವನಿಗೆ ನಂಬಿಕೆ ಇರುವ ಯಾರಾದರೂ ಕೆಲಸದವರು ಬೇಕಿರುವುದರಿಂದ ಅಲ್ಲಿಗೆ ಹೋಗುತ್ತಿದ್ದಾಳೆ. ನಾನು ಇವಳನ್ನ ಬೆಂಗಳೂರಿನಲ್ಲಿ ಬಿಟ್ಟು ಅವರೊಂದಿಗೆ ಕಳಿಸಿ ನಾಳೆ ವಾಪಸ್ ಬರ್ತೀನಿ ಅಂತ ತಮಿಳು ಮಿಶ್ರಿತ ಕನ್ನಡದಲ್ಲಿ ಹೇಳಿದಾಗ, ಇಷ್ಟು ಚಿಕ್ಕ ವಯಸ್ಸು ಪಾಪ ಹೊರ ಪ್ರಪಂಚ ಅರಿಯದ ಮುಗ್ದ ಹೆಣ್ಣು. ಯಾರೋ ಅಪರಿಚಿತರು ಕರೆದ ಕಡೆ ಹೋಗಿ ಕೆಲಸ ಮಾಡಬೇಕು. ನಕ್ಕು ನಲಿದು ಶಾಲೆಗೆ ಹೋಗ ಬೇಕಾದ ವಯಸ್ಸು. ಎಂತಹ ವಿಪರ್ಯಾಸ ಅಂತ ಯೋಚನೆ ಮಾಡ್ತಿದ್ದೆ. ಆಗ ನನ್ನ ಬ್ಯಾಗಲ್ಲಿ ಇದ್ದ ಎರಡು ಬಿಸ್ಕತ್ ಪ್ಯಾಕೆಟ್ ತೆಗೆದು, ತೊಗೊ ಅಂದೆ. ಮೊದಲು ತಕ್ಷಣ ಕೈ ಚಾಚಿ ಬೇಡ ಬೇಡ ಅಂತ ಕೈ ಹಿಂದೆ ತೆಗೆದು ಕೊಂಡಿದ್ದು ಗಮನಿಸಿದೆ. ಪರವಾಗಿಲ್ಲ ತೊಗೊ ಅಂತ ಆ ಹೆಂಗಸು ಹೇಳಿದ ಮೇಲೆ ತೆಗೆದುಕೊಂಡಿದ್ದು. ಯಜಮಾನ್ರು ಹೇಳಿ ಕಳ್ಸಿದಾರೆ ಯಾರೋ ತಿನ್ನಕ್ಕೆ ಏನಾದರೂ ಕೊಟ್ಟರೆ ತಿನ್ನಬಾರದು ಅಂತ ಅದಕ್ಕೇ ಭಯ ಅಷ್ಟೇ ಅಂತ ಆ ಹೆಂಗಸು ಹೇಳಿದಳು. ಒಟ್ಟಿಗೆ ಮೂರು ನಾಲ್ಕು ಬಿಸ್ಕತ್ ತಿನ್ನೋದು ನೋಡಿ, ಹಸಿವು ಹೆಚ್ಚಾಗಿ ಇರಬೇಕು ಅಂತ ಊಹಿಸಿದೆ. ಯಾರೋ ಇಡ್ಲಿ ವಡೆ ಅಂತ ಕೂಗಿದ್ದು ಕೇಳಿಸಿತು. ತಕ್ಷಣ ಆ ಹುಡುಗಿಗೆ ಇಲ್ಲೇ ಕೊಡಿಸುವ ಮನಸಾಯ್ತು. ಆದರೇ ಎಷ್ಟು ಹೊತ್ತಾದರೂ ಅವನು ಈ ಕಡೆ ಬರಲೇ ಇಲ್ಲ. ನಾನೇ ಪಕ್ಕದ ಬೋಗಿಗೆ ಹೋಗಿ ತಂದು ಬಿಡೋಣ ಅಂತ ನೋಡಿದರೆ ಅವನ ಹತ್ತಿರ ಎಲ್ಲಾ ಖಾಲಿ.ಮತ್ತೆ ತರ್ತೀಯಾ ಎಂದರೆ ಇಲ್ಲಾ ಸಾರ್ ನನ್ನ ಡ್ಯೂಟಿ ಮುಗೀತು. ಬೇರೆ ಯಾರಾದ್ರೂ ಬರ್ತಾರೆ ತೊಗೋಳಿ ಅಂದುಬಿಟ್ಟ. ಬಂದು ಕೂತೆ. ಸುಮಾರು ಅರ್ಧಗಂಟೆ ಆದ ಮೇಲೆ ಬೋಂಡಾ ವಡೆ ಬಂತು. ಅದನ್ನಾದರೂ ಕೊಡಿ ಸೋಣ ಅಂತ ಕೊಡಿಸಿದರೆ, ಪಾಪ ಅದು ರಣ ಖಾರ. ಕಣ್ಣು ಮೂಗಲ್ಲಿ ನೀರು. ಕುಡಿಯಲು ನೀರು ಬೇಕು. ನನ್ನ ಹತ್ತಿರ ಇದ್ದ ನೀರಿನ ಬಾಟಲಿ ಕೊಟ್ಟೆ. ಆದರೂ ನನಗೆ ಬಹಳ ಬೇಜಾರಾಯ್ತು. ಏನಮ್ಮ ಬಳ್ಳಾರಿ ಹುಡುಗಿ ಖಾರ ತಿನ್ನಲ್ವಾ ಅಂದೆ. ಅದಕ್ಕೆ ಇಲ್ಲ ಪಾಪ ಯಾಕೋ ಬಾಯಿ ಹುಣ್ಣಾಗಿದೆ ಮೂರು ದಿನದಿಂದ ಖಾರ ಆಗ್ತಿಲ್ಲ ಅಂದಾಗ ಅಯ್ಯೋ ಪಾಪ ಅನಿಸಿತು. . ಆ ಹೆಂಗಸು ಹಾಗೇ ಕಣ್ಣುಮುಚ್ಚಿ ಏನೋ ಘಾಡವಾಗಿ ಯೋಚನೆ ಮಾಡ್ತಿದ್ರೆ. ಈ ಹುಡುಗಿ ಕಿಟಕಿ ಹೊರಗೆ ಜೋರಾಗಿ ಹಿಂದಕ್ಕೆ ಹೋಗುವ ಮರಗಳು ಕಂಬಗಳು ಆಗಾಗ ಸಿಗುವ ಸುರಂಗದಂತಹ ಬ್ರಿಡ್ಜ್ ಗಳನ್ನ ನೋಡ್ತಾ ಒಂದು ಸಲ ನಗೋದು ಮತ್ತೊಂದು ಸಲ ಏನೋ ಯೋಚನೆ ಮಾಡೋ ಹಾಗೆ ಕಣ್ಣು ಮುಚ್ಚೋದು ಮಾಡ್ತಿತ್ತು. ನಾನು ಅವಳನ್ನೇ ಗಮನಿಸುತ್ತಿದ್ದೆ. ಇನ್ನೊಂದು ಪ್ಯಾಕೆಟ್ ಬಿಸ್ಕತ್ ಬೇಕಾ ಅಂದೆ. ಕೈ ಚಾಚಿದಳು ಆ ಹೆಂಗಸಿಗೆ ಗೊತ್ತಾಗದೆ ಕೊಟ್ಟೆ. ಒಂದೊಂದೇ ತಿಂತಾ ನೀರು ಕುಡೀತಾ ಇದ್ದಳು. ನಿನ್ನ ಹೆಸರೇನು ಅಂದೆ. ಅಕ್ಕಮ್ಮ ಅಂದಳು. ಅಪ್ಪಾ ಅಮ್ಮ ಎಲ್ಲಿದಾರೆ ಅಂದೆ ನಾನು ಬರೋವಾಗ ಬಳ್ಳಾರಿಲಿ ಇದ್ರು, ಈಗ ಅಲ್ಲೂ ಇಲ್ವಂತೆ. ಮನೇಲಿ ಇನ್ಯಾರು ಇದಾರೆ. ಸರಸಿ ಅಕ್ಕ, ಮಂಗಳ ಅಕ್ಕ, ನಿನಗೆ ತಂಗಿ ಒಬ್ಬಳು ಇದ್ದಾಳಂತೆ ಅಂತ ಕೇಳ್ದೆ ಅದಕ್ಕೆ ಗೊತ್ತಿಲ್ಲ ಅಂದು ಬಿಟ್ಟಳು. ಅಮ್ಮಅಪ್ಪಾ ಅಕ್ಕಾ ಅವರನ್ನೆಲ್ಲಾ ನೋಡಬೇಕು ಅನ್ಸಲ್ವಾ ಅಂದೆ. ಮಾತನಾಡಲಿಲ್ಲ. ಮುಖಾನ ಕಿಟಕಿ ಕಡೆ ತಿರುಗಿಸಿ ಒಬ್ಬಳೇ ಮಾತ ನಾಡ್ಕೋತಾ ಇದಾಳೆ. ಅದು ತೆಲುಗು ಮಿಶ್ರಿತ ಕನ್ನಡ ಅಂತ ಊಹಿಸಿದೆ.ಬಹಳ ಹೊತ್ತು ಮತ್ತೆ ನನ್ನ ಕಡೆ ನೋಡಲೇ ಇಲ್ಲ. ಅಯ್ಯೋ ನಾನು ಕೇಳ ಬಾರದಿತ್ತೇನೋ ಅನಿಸಿತು. ಸ್ವಲ್ಪ ಹೊತ್ತು ನಾನೂ ಕಣ್ಣುಮುಚ್ಚಿ ಕೂತೆ. ಅ ಹೆಣ್ಣು ಮಗುವಿನ ಮುಗ್ಧ ಮುಖವೇ ಮುಂದೆ ಬರ್ತಾ ಇತ್ತು. ನಾನು ಏನು ಸಹಾಯ ಮಾಡಬಹುದು ಅಂತ ಯೋಚಿಸಿದೆ. ಏನೂ ಹೊಳೆಯಲಿಲ್ಲ. Pantry ಸರ್ವಿಸ್ ನವನು ಬಂದು ಊಟ ಬುಕ್ ಮಾಡಿಕೊಳ್ಳಿ ಅಂತ ಹೇಳ್ತಾ ಇದ್ದ. ಕೆಲವರು ಊಟ ಕೆಟ್ಟದಾಗಿರತ್ತೆ. ದುಡ್ಡುಕೊಟ್ಟರೂ ಒಳ್ಳೇ ಊಟ ಕೊಡಲ್ಲ ಅಂತ. ಮತ್ತೆ ಕೆಲವರು ಸೋಡಾ ಹಾಕ್ತಾರೆ ತಿನ್ನಕ್ಕಾಗಲ್ಲ ಅಂತ ಮತ್ತೆ ಕೆಲವರು. ಹೀಗೇ ಮಾತ ನಾಡಿದವರೆಲ್ಲರೂ ಬುಕ್ ಮಾಡಿದ್ದು ನೋಡಿ ನಗು ಬಂತು. ನಾನು ಆ ಹುಡುಗಿ ಯನ್ನ ಕೇಳ್ದೆ ಊಟ ಮಾಡ್ತಿಯಾ ಅಂತ. ಅದನ್ನ ಕೇಳಿಸ್ಕೊಂಡ ಹೆಂಗಸು ಬೇಡ ಬೇಡ ನಾವು ಏನಾದ್ರೂ ತಿಂಡಿ ತಿಂತೀವಿ ಅಂತ ಹೇಳಿ ನಾ ಕೊಟ್ಟ ಬಾಟಲಿ ನೀರು ಕುಡಿದ್ಲು. ನಾನು ಊಟ ತೊಗೊಳ್ಳೋನು ಏಕೋ ಬೇಡಾ ಅನಿಸ್ತು. ಸುಮ್ಮನಾದೆ.
ಯಾರೋ ಜ್ಯೂಸ್ ಜ್ಯುಸ್ ಅಂತ ಬಂದ. ಬಾಯಿ ಹುಣ್ಣಿಗೆ ಒಳ್ಳೆಯದು ಕುಡಿ ಅಂದೆ. ಆ ಹೆಂಗಸು ಬೇಡಾ ಅಂದಳು. ನಾನು ಸುಮ್ಮನಾದೆ. ಪಕ್ಕದಲ್ಲಿದ್ದವರು ಯಾರೋ ಹೇಳಿದ್ರು ಇನ್ನು ತಿಂಡಿ ಬರಲ್ಲ ಏನಿದ್ರೂ ಊಟ. ಟೈಮ್ ಆಯ್ತಲ್ಲ ಅಂದ್ರು. ಪಾಪ ಬೆಳಗ್ಗೆ ಇಂದ ಖಾರದ ವಡೆ ಬೋಂಡಾ ಬಿಟ್ಟರೆ ಬರೀ ನೀರು ಕುಡೀತಾ ಇದೆ. ಒಬ್ಬರು ಯಾರೋ ತಮಿಳಿನಲ್ಲಿ ನಮ್ಮಹತ್ತಿರ ಚಪ್ಪಾತಿ ಜಾಸ್ತಿ ಇದೆ ಕೊಡ್ಲಾ ಅಂತ ಕೇಳಿದ್ರು. ಇವರಿಗೆ ತಿನ್ನಕ್ಕೆ ಭಯ. ಬೇಡಾ ಅಂದರು. ನಾಲ್ಕೈದು ಜನ ಹೇಳಿದ್ದಕ್ಕೆ ತೊಗೊಂಡ್ರು. ಬೆಂಗಳೂರಿನಲ್ಲಿ ಇಳಿದಾಗ ಕುತೂಹಲಕ್ಕೆ ಅವನು ಯಾರು ಈ ಮಗೂನ ಕರೆದುಕೊಂಡು ಹೋಗೋನು ನೋಡಬೇಕಂತ ಇವರ ಹಿಂದೇನೆ ಹೋದೆ. ಬಂದಿದಾರಾ ಅಂತ ಸುಮ್ಮನೆ ಕೇಳ್ದೆ. ಹೊರಗಡೆ ಆಟೋ ಸ್ಟಾಂಡ್ ಹತ್ತಿರ ಬಂದಿರ್ತಾರೆ ಅಂದಾಗ, ನಾನು ಅವರನ್ನು ನೀವು ನೋಡಿದ್ದೀರಾ ಅಂತ ಕೇಳ್ದೆ. ಗೌರಿ ನೋಡಿದಾಳೆ ಒಂದು ತಿಂಗಳು ಇಲ್ಲೇ ಅವರ ಮನೆಯಲ್ಲಿ ಕೆಲಸ ಮಾಡಿದ್ದಾಳೆ ಅಂದಳು. ಯಾವುದಕ್ಕೂ ಆ ಮನುಷ್ಯ ಬಂದಮೇಲೆ ಹೋಗೋಣ. ಇಷ್ಟು ದೊಡ್ಡ ನಗರದಲ್ಲಿ ಅಕಸ್ಮಾತ್ ಆ ಮನುಷ್ಯ ಬರೆದೆ ಹೋದ್ರೆ ಇವರ ಗತಿ ಏನು ಅಂತ ಅಲ್ಲೇ ನಿಂತೆ. ಈಗಿನಂತೆ ಮೊಬೈಲ್ ಅನುಕೂಲ ಇರಲಿಲ್ಲ. ನಿಮ್ಮನ್ನ ಇಲ್ಲಿಗೆ ಕಳುಹಿದವರು ಏನು ಹೇಳಿದ್ದಾರೆ. ಆ ಮನುಷ್ಯ ಬರದೇ ಹೋದ್ರೆ ಏನು ಮಾಡ್ತೀರಿ ಅಂತ ಕೇಳಿದರೆ ಉತ್ತರ ಇಲ್ಲ. ಆಗ ಸ್ವಲ್ಪ ಹೆದರಿದಂತೆ ಕಾಣ್ತು. ಅವರಿಬ್ಬರೂ ಹತ್ತಿರದಲ್ಲೇ ಇದ್ದ ladies ಟಾಯ್ಲೆಟ್ ಗೆ ಹೋಗಿ ಬರ್ತಿವಿ ಅಂತ ಹೋದ್ರು. ಎಷ್ಟು ಹೊತ್ತಾದ್ರೂ ಬರದೇ ಇದ್ದಾಗ ನಾನೇ ಆ ಕಡೆ ಹೋದೆ. ಈ ಹೆಂಗಸು ಯಾರೋ ಇಬ್ಬರ ಜೊತೆ ಜಗಳವಾಡ್ತಿದಾರೆ. ಮೊದಲು ನಾನು ತಿಳಿದದ್ದು ಎಲ್ಲೋ ಜಾಸ್ತಿ ಕಾಸು ಕೇಳಿದ್ದಕ್ಕೆ ಇರಬಹುದು ಅಂತ. ಆದರೆ ಹತ್ತಿರ ಹೋದಾಗ ಆಶ್ಚರ್ಯ. ಆ ಟಾಯ್ಲೆಟ್ ನೋಡಿಕೊಳ್ಳುತ್ತಿರುವ ಗಂಡ ಹೆಂಡತಿ ಈ ಹುಡುಗಿ ಅಪ್ಪ ಅಮ್ಮ. ಹೇಗೋ ಅಮ್ಮ ಮಗಳನ್ನ ಗುರುತು ಹಿಡಿದು ಇನ್ನೆಲ್ಲೂ ನಿನ್ನ ಕಳಿಸಲ್ಲ ನಮ್ಮ ಜೊತೇನೆ ಇರು ಅಂತ. ಅದಕ್ಕೇ ಜೊತೆಗೆಬಂದಿದ್ದ ಆ ಹೆಂಗಸು ನಾನು ಕರೆದುಕೊಂಡು ಬಂದಿರೋದು. ಯಜಮಾನರಿಗೆ ನಾನು ಏನು ಉತ್ತರಕೊಡ್ಲಿ ಅಗಲ್ಲ ಅಂತ. ಹೀಗೇ ಕೈ ಹಿಡಿದು ಎಳೆದಾಡ್ತಾ ಇದಾರೆ ಆ ಹೆಣ್ಣು ಮಗೂನ. ಅಲ್ಲಿಗೆ ಒಬ್ಬ ಪೊಲೀಸ್ ನವರು ಬಂದಾಗ ನಾನು ಎಲ್ಲಾ ವಿಷಯ ತಿಳಿಸಿ ಹೇಗಾದರೂ ಮಾಡಿ ಮಗು ಅಪ್ಪ ಅಮ್ಮನ ಜೊತೆ ಇರೋ ಹಾಗೆ ಮಾಡಿ ನಿಮಗೆ ಪುಣ್ಯ ಬರತ್ತೆ ಅಂದೆ. ನೀವೇನು ಯೋಚನೆ ಮಾಡ್ಬೇಡಿ ನಾನು ನೋಡ್ಕೋತೀನಿ ಅಂದಾಗ ನಾನು ಅಲ್ಲಿಂದ ಹೋದೆ. ಆರು ತಿಂಗಳಾದ ಮೇಲೆ ಒಮ್ಮೆ ಆಕಡೆ ಹೋದಾಗ ಕುತೂಹಲಕ್ಕೆ ಆ ಮನುಷ್ಯ ನನ್ನ ಕಂಡು ಸುಮ್ಮನೆ ಆ ಹುಡುಗಿ ಬಗ್ಗೆ ವಿಚಾರಿಸಿದೆ. ಒಳಗಿಂದ ಓಡಿ ಬಂದು ಇದೇ ಅಂಕಲ್ ಅವತ್ತು ನನಗೆ ತಿಂಡಿ ಕೊಡ್ಸಿದ್ದು ಅಂದಳು. ಚೆನ್ನಾಗಿದ್ದಿಯ ಅಂದೆ ಓಹ್ ಅಂತ ಅಪ್ಪನ ಹತ್ರ ಕಾಸು ತೊಗೊಂಡು tea ತರಕ್ಕೆ ಓಡಿ ಹೋದ್ಲು.
ಕಷ್ಟವೋ ಸುಖವೊ ಬಡತನವೋ ಸಿರಿತನವೋ ಮಕ್ಕಳು ಹೆತ್ತವರ ಹತ್ರ ಇರಬೇಕು ಅನ್ನೋದಕ್ಕೆ ಒಳ್ಳೆಯ ನಿದರ್ಶನ ಅನಿಸಿದ್ದಂತೂ ನಿಜ.