B S Jagadeesha Chandra

Inspirational

4.5  

B S Jagadeesha Chandra

Inspirational

ಪುಟ್ಟಕೆರೆ

ಪುಟ್ಟಕೆರೆ

9 mins
1.1K


ಬೆಂಗಳೂರು ನಗರದ ಕನಕಪುರ ರಸ್ತೆಯಲ್ಲಿ ಹೋಗಿ ನೈಸ್ ರಸ್ತೆ ಆದ ನಂತರ ಅಲ್ಲಿ ಎಡಕ್ಕೆ ತಿರುಗಿ ಒಳಕ್ಕೆ ಹೋದರೆ ಅಲ್ಲಿ ಒಂದು ಪುಟ್ಟ ಕೆರೆ ಇದೆ. ಅದರ ಸುತ್ತಲೂ ಗದ್ದೆಗಳು, ಸ್ವಲ್ಪ ಆಚೆಗೆ ಹೊಲಗಳು ಹಸಿರಿನಿಂದ ನಳನಳಿಸುತ್ತಿವೆ. ಅದರ ಆಚೆಗೆ ಕಲ್ಲು ಬಂಡೆಗಳ ಬಂಜರು ಭೂಮಿ ನೀರಿಲ್ಲದೆ ಸೊರಗುತ್ತಿದೆ. ಈ ಹೊಲಗಳ ಬದಿಯಲ್ಲೇ “ಪುಟ್ಟ ಕೆರೆ” ಗ್ರಾಮ ಇದೆ. ನಮ್ಮ ಇತರ ಹಳ್ಳಿಗಳಂತೆ ಇದೂ ಒಂದು ಕುಗ್ರಾಮ, ಕೊಚ್ಚೆ, ಗಲೀಜು, ಇವೆಲ್ಲ ಕಣ್ಣಿಗೆ ಕುಕ್ಕುತ್ತವೆ. ಹಳ್ಳಿಯ ಹೊರಬದಿಗೆ ಸ್ವಲ್ಪ ಎತ್ತರದ ಜಾಗವಿದ್ದು ಬರಡು ಭೂಮಿಯಾಗಿ ಕೇವಲ ಕುರುಚಲು ಗಿಡಗಳು, ಅಲ್ಲಲ್ಲಿ ಕೆಲವು ಬಂಡೆಗಳು ಕಾಣುತ್ತವೆ. ಹಳ್ಳಿಯ ಕುರಿ ಮೇಕೆ, ದನಗಳು ಅಲ್ಲಿ ಬೆಳೆಯುವ ಕೆಲವೇ ಗಿಡಗಳನ್ನೂ ತಿಂದು ಹಾಕಿವೆ. ಅಲ್ಲಿನ ಜನರಿಗೆ ಬೆಳೆ ಚೆನ್ನಾಗಿರಬೇಕು, ದನಗಳು ಚೆನ್ನಾಗಿ ಹಾಲು ಕೊಡಬೇಕು ಇಷ್ಟೇ ಬೇಕಾಗಿರುವುದು. ಪರಿಸರ, ಸ್ವಚ್ಛತೆ, ಪಶುಗಳ ಅರೋಗ್ಯ, ಇವು ಯಾವುದೂ ಬೇಡ.

ಈ ಎತ್ತರದ ಪ್ರದೇಶದಾಚೆಗೆ ಅಲ್ಲಲ್ಲೇ ಕೆಲವು ಗುಡ್ಡಗಳು ಇವೆ. ಅಲ್ಲಿ ಯಾರೂ ಏನೂ ಬೆಳೆಯುವುದಿಲ್ಲ, ಅವರಿಗೆ ಅದು ಬೇಕಾಗಿಯೂ ಇಲ್ಲ. ಈ ಪುಟ್ಟಕೆರೆ ಗ್ರಾಮವೇ ನಮ್ಮ ಕನ್ನಡ ಚಿತ್ರರಂಗದ ಪ್ರಖ್ಯಾತ ಅಭಿನೇತ್ರಿ ಪುನ್ನಾಗಿನಿ ಅವರ ಊರು. ಇದು ಇಲ್ಲಿನ ಜನರಿಗೆ ಗೊತ್ತೇ ಹೊರತು ಇತರ ಕನ್ನಡಿಗರಿಗೆ ಗೊತ್ತಿಲ್ಲ. ಆಕೆಯ ಹೆಸರು ನಾಗಿಣಿ, ಅದರ ಹಿಂದಿರುವ ಪು ಎಂಬುದು ಪುಟ್ಟಕೆರೆ ಗ್ರಾಮ ಎಂದು ಈ ಹಳ್ಳಿಯವರಿಗೆ ಹಾಗೂ ಪುನ್ನಾಗಿನಿ ಅವರಿಗೆ ಮಾತ್ರ ಗೊತ್ತು ಅನ್ನಿಸುತ್ತದೆ. ಈ ಹಳ್ಳಿಯಲ್ಲಿ ಪುನ್ನಾಗಿನಿ ಅವರ ಒಂದು ದೊಡ್ಡ ಮನೆ ಈಗಲೂ ಇದೆ. ಅದರಲ್ಲಿ ಯಾರೂ ಇಲ್ಲ, ಆದರೂ ಆಗಾಗ್ಗೆ ಯಾರೋ ಒಬ್ಬರು ಬಂದು ಮನೆಯನ್ನೆಲ್ಲ ಶುಚಿ ಮಾಡಿ ಹೋಗುತ್ತಾರೆ. ಅಲ್ಲಿಗೆ ಪುನ್ನಾಗಿನಿ ಬಂದುದನ್ನು ಇದುವರೆಗೂ ಯಾರೂ ಕಂಡಿಲ್ಲ.

ಈ ಪುಟ್ಟಕೆರೆಯ ಯಶೋಗಾಥೆಯನ್ನು ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದಾಗ ನನಗೆ ಅಲ್ಲಿಯ ರೈತ ಮಿತ್ರನೊಬ್ಬ ಹೇಳಿದ. ಅದನ್ನು ಕೇಳಿದ ನನಗೆ ಹೀಗೂ ಸಾಧ್ಯವೇ ಎಂದು ಆಶ್ಚರ್ಯವಾಯಿತು.

ಇತ್ತೀಚಿಗೆ ಕನಕಪುರ ರಸ್ತೆಯನ್ನು ಹೆದ್ದಾರಿಯಾಗಿ ಮಾಡಿ ಅದನ್ನು ಅಗಲಗೊಳಿಸುತ್ತಿರುವ ನಾಡಿನ ಪ್ರಖ್ಯಾತ ಉದ್ಯಮಿ ಪ್ರಕಾಶ ಪಟ್ನಮ್ ಅವರ ಕಣ್ಣಿಗೆ ಈ ಪುಟ್ಟ ಕೆರೆ ಗ್ರಾಮ ಬಿದ್ದಿತು. ಅವರ ಕಣ್ಣಿಗೆ ಬಿದ್ದಿತು ಎಂದರೆ ಅದೃಷ್ಟ ಲಕ್ಷ್ಮಿ ಒಲಿದಂತೆಯೇ. ಮೊದಲೇ ಭಾರಿ ಉದ್ಯಮಿ, ದಾರ್ಶನಿಕರು, ಕನಸುಗಾರರು. ದುಡ್ಡಿಗೇನೂ ಕೊರತೆ ಇಲ್ಲ. ಒಂದು ದೊಡ್ಡ ಕನಸನ್ನೇ ಕಂಡು ಅದನ್ನು ನನಸು ಮಾಡಲು ಸಿದ್ಧರಾದರೆಂದರೆ ಯಾರೂ ತಡೆಯಲು ಸಾಧ್ಯವಿಲ್ಲ. ಹಾಗೆಂದು ಅವರು ದುಡ್ಡಿಗಾಗಿ ಮಾಡುವವರಲ್ಲ. ನಿಸ್ವಾರ್ಥವಾಗಿ ದೇವರ ಸೇವೆ ಎಂದೇ ಮಾಡುತ್ತಾರೆ. ಮೋಸ, ತಟವಟ, ಲಂಚ ಎಂಬುದು ಅವರಿಂದ ನೂರು ಗಾವುದ ದೂರ. ಅಂತಹ ಜನ ಇನ್ನೂ ಇದ್ದಾರಲ್ಲ ಎಂದು ನಾವು ಸಂತೋಷ ಪಡಬೇಕು.

ದಾರ್ಶನಿಕರಾದ ಪ್ರಕಾಶ ಪಟ್ನಮ್ ಅವರ ಕಣ್ಣಿಗೆ ಬಿದ್ದ ಈ ಕುಗ್ರಾಮ ‘ಪುಟ್ಟಕೆರೆ’ ಅವರಿಗೆ ಹಲವಾರು ಕನಸನ್ನು ಕಾಣಿಸಿತು. ಅಲ್ಲಿನ ಕೆರೆ, ಕೊಳಕಾಗಿದ್ದರೂ, ಸ್ವಚ್ಛ ಮಾಡಿದರೆ ಸುಂದರವಾಗಿ ಕಾಣುತ್ತದೆ, ಜೊತೆಗೆ ಪುಟ್ಟಕೆರೆ ಹಳ್ಳಿ, ಸುತ್ತಲಿನ ಹೊಲ ಗದ್ದೆಗಳು, ಅದರಾಚೆಗಿನ ಬಂಡೆಗಲ್ಲಿನ ಎತ್ತರದ ಪ್ರದೇಶ, ಅದರಾಚೆಗಿನ ಗುಡ್ಡಗಳು ಅವರಿಗೆ ಕಲಾವಿದನಿಗೆ ಚಿತ್ರ ಬರೆಯಲು ಕೊಟ್ಟ ಬಿಳಿಯ ಹಾಳೆಯಂತೆ ಕಂಡಿತು. ಈಗ ಅವರ ಕೆಲಸ ಅದನ್ನು ಸುಂದರವಾಗಿ ಚಿತ್ರಿಸುವುದು. ಕೂಡಲೇ ತಮ್ಮ ಬಳಿ ಯಾವಾಗಲೂ ಇರುತ್ತಿದ್ದ ಪುಟ್ಟ ಪುಸ್ತಕದಲ್ಲಿ - “ಶುದ್ಧವಾದ ನೀರು, ಸದಾ ಹಸಿರಿನ ಪರಿಸರ, ಬರಡು ಭೂಮಿಯಲ್ಲಿ ಕಾಡು, ಕಾಡಿನ ಗುಡ್ಡಗಳೇ ಹಳ್ಳಿಯ ಮಿತಿ” ಎಂದು ಬರೆದುಕೊಂಡರು.

ಇವನ್ನು ಈಡೇರಿಸುವುದು ಹೇಗೆ ಎಂದು ಅವರು ಯೋಚಿಸಲಾರಂಭಿಸಿದರು. ಮೊದಲು ಹಳ್ಳಿಗೆ ಹೋಗಿ ಅಲ್ಲಿನ ಜನರನ್ನು ಒಳ್ಳೆಯ ಮಾತುಗಳಿಂದ ಒಲಿಸಿ ನಂತರ ಅದನ್ನು ಹೇಗೆ ನಂದನವನವನ್ನಾಗಿ ಮಾಡ ಬಹುದು ಎಂದು ಮನದಟ್ಟು ಮಾಡಿಕೊಡುವುದು, ನಂತರ ಅವರಿಗೆ ಶುಚಿ, ಸ್ವಚ್ಛತೆಯ ಮಹತ್ವದ ಅರಿವುಂಟುಮಾಡುವುದು, ಇದಾದ ಮೇಲೆ ಪರಿಸರ ಸಂರಕ್ಷಣೆಯ ಬಗ್ಗೆ ಹೇಳುವುದು ಇತ್ಯಾದಿ. ಜೊತೆಗೆ ಪುನ್ನಾಗಿನಿ ಅವರನ್ನು ಸಂಪರ್ಕಿಸಿ ಅವರನ್ನೂ ಇದರಲ್ಲಿ ತೊಡಗಿಸಿ ಜನರಲ್ಲಿ ಹುರುಪು ಉಂಟುಮಾಡುವುದು ಎಂದು ಯೋಚಿಸಿದರು.

ತಮ್ಮದೇ ಆದ “ಪರಿಸರ ಮಕ್ಕಳ ಬಳಗ”ವನ್ನು ಇದರಲ್ಲಿ ಸಕ್ರಿಯಾಗಿ ತೊಡಗಿಸಬೇಕು ಎಂದುಕೊಂಡು, ಕೂಡಲೇ ಅದರ ಮುಖ್ಯಸ್ಥರಾದ ರಾಜು ಅವರಿಗೆ ಕರೆ ಮಾಡಿ, “ನೋಡಿ, ಮುಂದಿನ ವಾರ ಪುಟ್ಟಕೆರೆ ಗ್ರಾಮಕ್ಕೆ ನಿಮ್ಮ ಯಾತ್ರೆ, ನಾನೂ ಬರುತ್ತೇನೆ, ಅಲ್ಲಿನ ಜನರಿಗೆ ಪರಿಸರ ಸಂರಕ್ಷಣೆ, ಶುಚಿತ್ವ, ಕಾಡಿನ ಮಹತ್ವ, ಗೋವುಗಳ ರಕ್ಷಣೆ, ಗೊಬ್ಬರ ಅನಿಲ, ಇವುಗಳ ಬಗ್ಗೆ ಅರಿವನ್ನು ಉಂಟು ಮಾಡಬೇಕು. ಎಲ್ಲ ಕಾರ್ಯಕರ್ತರು, ಮಕ್ಕಳು ಈಗಲೇ ಒಂದು ಪವರ್ ಪಾಯಿಂಟ್ ಪ್ರೆಸೆಂಟೇಷನ್ ಮಾಡಬೇಕು. ಅದರಲ್ಲಿ ಹೆಚ್ಚು ಚಿತ್ರಗಳನ್ನು ಅಳವಡಿಸಿ ಹಳ್ಳಿಗರಿಗೆ ಅರ್ಥವಾಗುವಂತೆ ಉದಾಹರಣೆಗಳ ಸಮೇತ ಶುದ್ಧವಾದ ಕನ್ನಡದಲ್ಲಿ ವಿವರ ನೀಡಬೇಕು” ಎಂದು ತಿಳಿಸಿದರು.

ಮೇಲಧಿಕಾರಿ ಹೇಳಿದಮೇಲೆ ಇನ್ನೇನು, ಎಲ್ಲವೂ ಭರದಿಂದ ಸಿದ್ಧವಾಯಿತು. ಒಂದು ರಜೆಯ ದಿನ ಮಕ್ಕಳ ಪಡೆಯೇ ಪುಟ್ಟಕೆರೆಗೆ ಯಾತ್ರೆ ಹೊರಟಿತು. ಮಕ್ಕಳ ಬಾಯಿಂದ ಚಿತ್ರ ಸಮೇತ ವಿವರಗಳನ್ನು ನೋಡಿದ ಹಳ್ಳಿಗರಿಗೆ ಆಶ್ಚರ್ಯವೋ ಆಶ್ಚರ್ಯ. ಮೂಗಿನ ಮೇಲೆ ಬೆರಳಿಟ್ಟುಕೊಂಡು, ಕಣ್ಣು ಬಾಯಿ ಬಿಟ್ಟುಕೊಂಡು ಎಲ್ಲವನ್ನು ಕೇಳಿದರು, ತಮಗೆ ತೋಚಿದ ಪ್ರಶ್ನೆಗಳನ್ನೂ ಕೇಳಿ ತಿಳಿದುಕೊಂಡು ಬೆರಗಾದರು. ಪ್ರಕಾಶ್ ಪಟ್ನಮ್ ಅಂಥವರೇ ತಮ್ಮ ಬಳಿ ಬಂದು ಖುದ್ದಾಗಿ ಇಷ್ಟೆಲ್ಲವನ್ನೂ ಮಾಡುತ್ತಿದ್ದಾರಲ್ಲಾ ಎಂದು ಹೆಮ್ಮೆ ಪಟ್ಟುಕೊಂಡರು. “ನೀವು ನಮಗೆ ಹೇಳಿಕೊಟ್ಟರೆ ಎಲ್ಲವನ್ನು ಮಾಡುತ್ತೇವೆ” ಎಂದು ಮಾತುಕೊಟ್ಟರು. ಪ್ರಕಾಶ್ ಪಟ್ನಮ್ ಅವರೂ “ತಾವು ಪುನ್ನಾಗಿನಿ ಅವರನ್ನು ಕರೆದು ಕೊಂಡು ಬರುತ್ತೇವೆ” ಎಂದಾಗ ಆ ಹಳ್ಳಿಗರ ಸಂತೋಷಕ್ಕೆ ಪಾರವೇ ಇರಲಿಲ್ಲ.

ತಾವು ಹೇಳಿದಂತೆ ಪ್ರಕಾಶ್ ಪಟ್ನಮ್ ಅವರು ಪುನ್ನಾಗಿನಿ ಅವರನ್ನು ಸಂಪರ್ಕಿಸಿದರು. ಅವರ ಪುಟ್ಟಕೆರೆ ಗ್ರಾಮದ ಬಗ್ಗೆ ಹೇಳಿದಾಗ, “ನಾನು ಇಂದು ಚಾಲ್ತಿ ಇಲ್ಲದ ನಟಿ, ಹೇಳಿಕೊಳ್ಳಲು ಅದು ನನ್ನ ಊರು, ಈಗ ಅಲ್ಲಿ ಇರುವ ಮನೆ, ಸ್ವಲ್ಪ ಬಂಜರು ಭೂಮಿಯನ್ನು ಬಿಟ್ಟರೆ ಅದಕ್ಕೂ ನನಗೂ ಇನ್ಯಾವ ಸಂಬಂಧವೂ ಇಲ್ಲ” ಎಂದರು. ಆದರೆ ಪ್ರಕಾಶ್ ಪಟ್ನಮ್ ಅವರು ತಮ್ಮ ಕನಸನ್ನು ಅವರಿಗೆ ವಿವರಿಸಿ ಆ ಹಳ್ಳಿಯನ್ನು ಹೇಗೆ ಒಂದು ಮಾದರಿ ಗ್ರಾಮವನ್ನಾಗಿ ಮಾಡಬಹುದು ಎಂದು ವಿವರಿಸಿದಾಗ ಪುನ್ನಾಗಿನಿ ಅವರಿಗೂ “ಯಾಕಾಗಬಾರದು” ಅನ್ನಿಸಿತು. “ತಾವು ಹೇಗೆ ಇದರಲ್ಲಿ ತೊಡಗಿಸಿಕೊಳ್ಳ ಬಹುದು?” ಎಂದಾಗ, “ನೀವು ಸುಮ್ಮನೆ ಅಲ್ಲಿ ಮೊದಲು ನಿಮ್ಮ ಮನೆಯಲ್ಲಿ ಉಳಿದುಕೊಳ್ಳಿ, ನಂತರ ನಿಧಾನವಾಗಿ ಜನರೊಂದಿಗೆ ಬೆರೆತು ನಮ್ಮ ಮಕ್ಕಳ ಬಳಗದ ಜೊತೆಗೂಡಿ ನೀವೂ ಸೇವೆ ಮಾಡಿ ಸಾಕು. ಹಳ್ಳಿಯ ಜನರಿಗೆ ನಿಮ್ಮ ಒಡನಾಟ ಹುರುಪು ತಂದು ಗ್ರಾಮೋದ್ಧಾರಕ್ಕೆ ಉತ್ತೇಜಿಸಿದಂತಾಗುತ್ತದೆ” ಎಂದರು.

ಈಗ ಪುಟ್ಟಕೆರೆ ಹಳ್ಳಿಗೆ ‘ಪುಟ್ಟಕೆರೆ ನಾಗಿಣಿ” ಅವರ ಪ್ರವೇಶವೂ ಆಯಿತು. ಜನರಿಗಂತೂ ಇದು ನಿಜವೇ ಎಂದು ಮೈ ಚಿವುಟಿ ಕೊಳ್ಳುವಂತಾಯಿತು. ಮಕ್ಕಳು ಹಳ್ಳಿಯ ಉದ್ಧಾರದ ಬಗ್ಗೆ ವಿವರಿಸುತ್ತಿದ್ದುದನ್ನು ಕೇಳಿದ ಪುನ್ನಾಗಿನಿ ಅವರಿಗೆ “ತಾವು ಇಷ್ಟೊಂದು ಹಣ ಸಂಪಾದಿಸಿದ್ದು, ಜನ ಮನ್ನಣೆ ಗಳಿಸಿದ್ದು, ಯಾವ ಪುರಷಾರ್ಥಕ್ಕೆ” ಎನ್ನಿಸಿಬಿಟ್ಟಿತು. “ತಾನು ಎಷ್ಟೊಂದು ಸ್ವಾರ್ಥಿ” ಎಂದು ತಮ್ಮ ಮೇಲೆ ತಮಗೇ ಬೇಸರವಾಯಿತು. ತಮ್ಮ ಬಿಂಕ, ಬಿನ್ನಾಣಗಳನ್ನು ಕೂಡಲೇ ಬದಿಗಿಟ್ಟು ತಾವೂ ಅಲ್ಲಿಯ ಒಬ್ಬ ಜನರಂತೆ ಗ್ರಾಮ ಸೇವೆಗೆ ಟೊಂಕ ಕಟ್ಟಿ ನಿಂತರು. ತಮ್ಮ ಅಸ್ತಿಯಾದ ಬಂಜರು ಭೂಮಿಯನ್ನು ನಂದನವನವನ್ನಾಗಿ ಮಾಡುತ್ತೇನೆ ಎಂದು ಪಣ ತೊಟ್ಟರು.

ಇದೆ ಸಮಯವನ್ನು ಕಾಯುತ್ತಿದ್ದ ಪ್ರಕಾಶ್ ಪಟ್ನಮ್ ಅವರು ಈಗ ರಂಗಕ್ಕಿಳಿದರು. ಮೊದಲು ಹಳ್ಳಿಯನ್ನು ಶುಚಿ ಯಾಗಿರಿಸಿಕೊಳ್ಳಲು ಏನೇನು ಬೇಕೋ ಅವೆಲ್ಲವನ್ನೂ ಪಟ್ಟಿಮಾಡಿ ಒಂದೊಂದಾಗಿ ಜಾರಿಗೆ ತಂದರು. ಶೌಚ ಗೃಹ, ನೀರಿನ ಮರು ಬಳಕೆ, ಮನೆಯಲ್ಲೇ ಗೊಬ್ಬರ, ಗೊಬ್ಬರದ ಅನಿಲ ಇತ್ಯಾದಿಗಳನ್ನು ಸಾಧ್ಯವಿದ್ದ ಕಡೆಗೆಲ್ಲ ಅಳವಡಿಸಿ ಕೊಟ್ಟರು. ರಸ ಗೊಬ್ಬರಕ್ಕಿಂತ ಕೊಟ್ಟಿಗೆ ಗೊಬ್ಬರದ ಮಹತ್ವವನ್ನು ವಿವರಿಸಿ ಎಲ್ಲರೂ ಅದನ್ನೇ ಬಳಸಲು ಆರಂಭಿಸಿದರು. ರಸ್ತೆಗಳೆನ್ನೆಲ್ಲ ಚೊಕ್ಕ ಮಾಡಿ ಸಾಧ್ಯವಿರುವ ಕಡೆಯಲ್ಲಿ ಗಿಡ ಮರಗಳನ್ನು ನೆಟ್ಟರು. ಸಾಮಾಜಿಕ ಅರಣ್ಯವೂ, ಗೋಮಾಳವೂ ಸಿದ್ಧವಾದುವು. ಕೆರೆಯ ನೀರು ಶುದ್ಧವಾಗಿರಲು ಅದರಲ್ಲಿ ಮೀನುಗಳು, ಆಮೆಗಳು ಮೊದಲಾದುವನ್ನು ಬಿಟ್ಟರು. ಕೆರೆಗೆ ಸೇರುವ ನಾಲೆಯ ನೀರಿಗೆ ಒಂದು ತಡೆ ಒಡ್ಡಿ ಅದನ್ನು ಶುದ್ಧೀಕರಿಸಿ ನಂತರ ಕೆರೆಗೆ ನೀರನ್ನು ಬಿಟ್ಟರು. ಶುದ್ಧೀಕರಿಸಿದಾಗ ಬಂದ ಕೊಳಚೆಯನ್ನು ಗೊಬ್ಬರವನ್ನಾಗಿ ಪರಿವರ್ತಿಸಿ ಅದನ್ನು ಜನರಿಗೇ ಹಂಚಿದರು. ಮನೆಯ ಸುತ್ತಲಿನ ಜಾಗಗಳಲ್ಲೂ ಗಿಡ ಮರ ನೆಟ್ಟು ಬಿಸಿಲಿನ ಝಳ ನಿವಾರಿಸಿದರು.

ಈಗ ಹಳ್ಳಿಯ ರೂಪವೇ ಬದಲಾಗಿತ್ತು. ಕೊಳೆತು ನಾರುತ್ತಿದ್ದ ಕುಗ್ರಾಮ ಪುಟ್ಟಕೆರೆ ಈಗ ಒಂದು ನಂದನ ವನ ವಾಗಿ ಪರಿವರ್ತಿತವಾಗಿತ್ತು. ಹಳ್ಳಿಯ ಸುತ್ತಲಿನ ಬಂಜರು ಭೂಮಿಗೆ, ಪುನ್ನಾಗಿನಿ ಅವರ ಬಂಜರು ಭೂಮಿಯ ಆಸ್ತಿಗೆ ಈಗ ಕಾಯಕಲ್ಪ ಆಗಬೇಕಿತ್ತು. ಇದಕ್ಕೆ ಪುನ್ನಾಗಿನಿ ಅವರೂ ಒಂದು ಹೊಸರೀತಿಯ ಯೋಜನೆ ಹಾಕಿದರು. “ಪರಿಸರ ಮಕ್ಕಳ ಬಳಗ”ದೊಂದಿಗೆ ಬೆರೆತು ಅವರೂ ಈಗ ಒಬ್ಬ ಪ್ರೌಢ ಪರಿಸರವಾದಿಯಾಗಿ ಬಿಟ್ಟಿದ್ದರು. ಆ ಹಳ್ಳಿಯ ಸುತ್ತಲಿನ ಬಂಜರು ಭೂಮಿಯಲ್ಲಿ ತಾವು ಮರಗಳನ್ನು ನೆಟ್ಟು ಕಾಡನ್ನಾಗಿ ಪರಿವರ್ತಿಸುತ್ತೇನೆ ಎಂದು ಪಣ ತೊಟ್ಟರು. ಸಾಲು ಮರದ ತಿಮ್ಮಕ್ಕ ಅವರಿಗೆ ಸ್ಫೂರ್ತಿಯಾದರು. ಸುಮ್ಮನೆ ಸಸಿ ನೀಡಿ ಎಂದರೆ ಯಾರು ಮುಂದೆ ಬರುತ್ತಾರೆ ಎಂದು ಮನಗಂಡ ಅವರು ಮೊದಲು ತಮ್ಮ ಪತಿ, ಜನಪ್ರಿಯ ನಟ ದಿವಂಗತ ರಾಜಕೇಸರಿ ಅವರ ಹೆಸರಿನಲ್ಲಿ ೧೦೦ ಸಸಿಗಳನ್ನು ತಂದು ಹಳ್ಳಿಯ ಹೆಂಗಸರನ್ನು ಕರೆದುಕೊಂಡು ಹೋಗಿ ತಾವೂ ಅವರೊಂದಿಗೆ ಬೆರೆತು ಬಂಜರು ಭೂಮಿಯಲ್ಲಿ ನೆಟ್ಟರು. ನಂತರ ಅಲ್ಲಿಯೇ ಒಂದು ಕೊಳವೆ ಭಾವಿಯೊಂದನ್ನು ತೆಗೆಸಿ ಅದರ ನೀರನ್ನು ಅವುಗಳಿಗೆ ಉಣಿಸಿದರು. ಹೆಂಗಸರಿಗೂ ಸಂಭ್ರಮವೋ ಸಂಭ್ರಮ. “ನೀವೂ ಸಹ ತಮ್ಮ ಪ್ರೀತಿಯ ಬಂಧುಗಳ ನೆನಪಿನಲ್ಲಿ ಹೀಗೆಯೇ ಸಸಿಗಳನ್ನು ನೆಡಬಹುದು” ಎಂದು ಪುನ್ನಾಗಿನಿ ಅವರು ಸಲಹೆ ನೀಡಿದಾಗ ಎಲ್ಲರೂ ಉತ್ಸಾಹದಿಂದ ಮುಂದೆ ಬಂದರು. ಈಗ ನೂರು ಸಸಿ ಸಾವಿರವಾಗಿ ಅದಕ್ಕೆ ಎಲ್ಲರೂ ಶ್ರದ್ಧೆ ಯಿಂದ ನೀರನ್ನು ಹಾಕಿ ಉಪಚಾರ ಮಾಡಿ ಅದು ಬೆಳೆಯುವುದನ್ನು ನೋಡಿ ಆನಂದ ಪಡುತ್ತಿದ್ದರು. ಸತ್ತವರ ವರುಷದ ದಿನ ಬಂದರೆ ಅಂದು ಹಳ್ಳಿಗರೆಲ್ಲ ಹಾಗೂ ಆ ಕುಟುಂಬದ ಮನೆಯವರೆಲ್ಲ ಮರದ ಬಳಿ ಸೇರಿ ಅದಕ್ಕೆ ನೀರು ಹಾಕಿ, ಅದರ ಒಣಗಿದ ರೆಂಬೆ,ಕೊಂಬೆಗಳನ್ನು ಸವರಿ ಅದಕ್ಕೆ ನಮಸ್ಕರಿಸಿ ಎಲ್ಲರೂ ಮನೆಯಿಂದಲೇ ತಂದ ತಿಂಡಿಯನ್ನು ಪ್ರಸಾದವೆಂದು ತಿನ್ನುತ್ತಿದ್ದರು.

ಪುನ್ನಾಗಿನಿ ಅವರಂತೂ ಈಗ ಈ ಬಂಜರು ಭೂಮಿಯಲ್ಲಿಯೇ ತಮ್ಮ ಹೆಚ್ಚಿನ ಕಾಲ ಕಳೆಯುತ್ತಾ ಆ ಹಳ್ಳಿಯ ಹೆಂಗಸರಿಗೆ ಹಾಡು, ಹಸೆ, ನೀತಿ ಪಾಠ ಇತ್ಯಾದಿ ಗಳನ್ನೂ ಹೇಳಿಕೊಡಲು ಆರಂಭಿಸಿದರು. ತಮ್ಮ ಇಳಿ ವಯಸ್ಸಿನಲ್ಲಿ ಇಷ್ಟೊಂದು ಸಂತೋಷವಾಗಿ ಕಾಲ ಕಳೆಯಬಹುದಾ ಎಂದು ಅವರಿಗೇ ಆಶ್ಚರ್ಯವಾಗಿತ್ತು. ಇದಿಲ್ಲವಾದಲ್ಲಿ ಅವರು ತಮ್ಮ ಮಗಳೊಂದಿಗೆ ದೂರದ ಅಮೆರಿಕದಲ್ಲಿ ಇರಬೇಕೆಂದಿದ್ದರು ಅಥವಾ ಯಾವುದಾದರೂ ವೃದ್ಧಾಶ್ರಮದಲ್ಲಿ ಇರಬೇಕು ಎಂದುಕೊಂಡಿದ್ದರು. ದೇವರೇ ಪಟ್ನಮ್ ಪ್ರಕಾಶ್ ಅವರ ರೂಪದಲ್ಲಿ ಬಂದು ತಮ್ಮನ್ನು ಹೀಗೆ ಸಂತೋಷವಾಗಿ ಇರಲು ಪ್ರೇರೇಪಿಸಿದ ಎಂದು ಎಲ್ಲರಿಗೂ ಹೇಳುತ್ತಿದ್ದರು. ಹೀಗೆ ಹಳ್ಳಿಯಲ್ಲಿ ಹಳ್ಳಿಯಲ್ಲಿ ಯಾರಾದರೂ ಮರಣ ಹೊಂದಿದರೆ ಅವರ ಗುಣಗಾನ ಮಾಡಿ ಅವರ ಹೆಸರಿನಲ್ಲಿ ಒಂದು ಮರ ನೆಡುವ ಸಂಪ್ರದಾಯ ಹುಟ್ಟಿಕೊಂಡಿತು. ಹಾಗೆಯೇ ಯಾವುದಾದರೂ ಮಗು ಹುಟ್ಟಿದರೂ ಅದರ ಹೆಸರಿನಲ್ಲಿ ಒಂದು ಮರ ನೆಡುವ ಸಂಪ್ರದಾಯವಾಗಿ ಹುಟ್ಟಿಕೊಂಡಿತು. ಹೀಗಾಗಿ ಆ ಬಂಜರು ಭೂಮಿಯಲ್ಲಿ ಈಗ ಹಲವಾರು ಸಸಿಗಳು ಬೆಳೆದು ನಳನಳಿಸುತ್ತಿದ್ದವು. ಮಳೆಯ ನೀರು, ಜನರು ಆ ಸಸಿಯನ್ನು ತಮ್ಮ ಮನೆಯ ಸದಸ್ಯನಂತೆ ಕಂಡು, ಪ್ರೀತಿಯಿಂದ ಉಣಿಸುವ ಕೊಳವೆ ಭಾವಿಯ ನೀರು ಕುಡಿದು ಆ ಸಸಿಗಳು ಬೇಗನೆ ಬೆಳೆದವು. ಈಗ ಅವಕ್ಕೆ ನೀರಿನ ಅವಶ್ಯಕತೆ ಇರಲಿಲ್ಲ. ಹೀಗಾಗಿ ಪುನ್ನಾಗಿನಿ ಅವರ ಕಾರ್ಯ ಕ್ಷೇತ್ರ ಇನ್ನೂ ಮುಂದಕ್ಕೆ ಹೋಗಿ ಗುಡ್ಡಗಳ ಬುಡದಲ್ಲಿ ವನಮಹೋತ್ಸವ ಪ್ರಾರಂಭವಾಯಿತು. ಈಗ ಪ್ರಕಾಶ್ ಪಟ್ನಮ್ ಅವರಿಗಿಂತ ಪುನ್ನಾಗಿನಿ ಅವರೇ ಹಳ್ಳಿಯ ಉದ್ಧಾರದ ಕೆಲಸವನ್ನು ಪಟ್ನಮ್ ಅವರ ಸಲಹೆಯಂತೆ ಕಾರ್ಯಗತಗೊಳಿಸಲು ಆರಂಭಿಸಿದರು. ಅದರಲ್ಲಿ ಸೇರಿಕೊಳ್ಳಲು ಎಲ್ಲ ಹಳ್ಳಿಗರನ್ನು ಸ್ವತಃ ಕರೆದು ಕೆಲಸ ಮಾಡುವಂತೆ ಪ್ರೇರೇಪಿಸಿದರು. ಈಗ ಅವರ ಹೆಸರು ಪುಟ್ಟಕೆರೆ ನಾಗಿಣಿ ಎಂದು ಬದಲಾಗಿದೆ. ಇವೆಲ್ಲ ಆಗಿ ಈಗ ಸುಮಾರು ಹದಿನೈದು ವರ್ಷಗಳು ಕಳೆದಿವೆ. ಪು. ನಾಗಿಣಿ ಅವರು ದಿನಗಳೆದಂತೆ ಇನ್ನೂ ಚಿಕ್ಕವರಾಗಿ ಕಾಣುತ್ತಿದ್ದಾರೆ. ಹಳ್ಳಿಯ ಸ್ವಚ್ಛ ಪರಿಸರದಲ್ಲಿ, ಜನಸೇವೆಯಲ್ಲಿ ಮೈಮರೆತಿರುವುದರಿಂದ ಅವರ ಅರೋಗ್ಯ ಬಹಳವೇ ಸುಧಾರಿಸಿದೆ.

ಇಂದು ಪುಟ್ಟಕೆರೆ ಭಾರತದ ಒಂದು ಪ್ರಸಿದ್ಧ ಮಾದರಿ ಗ್ರಾಮವಾಗಿದೆ. ಅದಕ್ಕೆ ಅತ್ಯಂತ ಸ್ವಚ್ಛ ವಾದ ಹಳ್ಳಿ ಎಂಬ ಬಿರುದೂ ಬಂದಿದೆ. ಪು. ನಾಗಿಣಿ ಅವರು ಬೆಳೆಸಿರುವ ಕಾಡು ಅವರ “ಪ್ರಸಿದ್ಧ ನಟಿ” ಎಂಬ ಹೆಸರನ್ನು ಅಳಿಸಿ “ವನ ಪುನ್ನಾಗಿನಿ” ಎಂದು ಪುನರ್ನಾಮಕರಣ ಮಾಡಿದೆ. ಆಕೆಯೂ ಇದರಲ್ಲಿಯೇ ಹೆಚ್ಚು ಸಂತೋಷ ಕಂಡುಕೊಂಡಿದ್ದಾರೆ.

ಪಟ್ನಮ್ ಪ್ರಕಾಶ್ ಅವರೂ ಈಗ ಬಂಧುಗಳನ್ನು ಕಳೆದುಕೊಂಡು ಒಬ್ಬಂಟಿಯಾಗಿದ್ದಾರೆ. ತಮ್ಮ ಕೆಲಸಗಳನ್ನು ಕಡಿಮೆ ಮಾಡಿಕೊಂಡು ಇಲ್ಲಿಯೇ ಒಂದು ಸಣ್ಣ ಮನೆಯಲ್ಲಿ ನೆಲಸಿ, ಮರಣಿಸಿದ ತಮ್ಮ ಬಂಧುಗಳನ್ನೆಲ್ಲ ವೃಕ್ಷಗಳ ರೂಪದಲ್ಲಿ ನೋಡುತ್ತಾ ಸನ್ಯಾಸಿಯಂತೆ ಕಾಲ ಕಳೆಯುತ್ತಿದ್ದಾರೆ. ವಿಶ್ವ ಮಾನವ ಸಿದ್ದಾಂತವನ್ನು ಜನರಿಗೆ ಬೋಧಿಸಿ ಎಲ್ಲ ಧರ್ಮವೂ ಒಂದೇ, ಇರುವುದು ಒಂದೇ ಅದು ಮಾನವ ಜಾತಿ ಅಥವಾ ಧರ್ಮ ಎಂದು ಜನರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಈಗ ಅಲ್ಲಿ ಹಿಂದೂ, ಕ್ರಿಶ್ಚಿಯನ್, ಮುಸ್ಲಿಂ ಎಂಬ ಧರ್ಮ ಬೇಧ ಇಲ್ಲ. ಎಲ್ಲರೂ ವಿಶ್ವಮಾನವರಾಗಿ ಬಿಟ್ಟಿದ್ದಾರೆ. ಬಂಜರು ಭೂಮಿಯ ಕಾಡಿನಲ್ಲಿ ಒಂದು ವನದೇವತೆಯನ್ನು ಬಿಂಬಿಸುವ ಒಂದು ಕಲಾತ್ಮಕವಾದ ಕಲ್ಲನ್ನು ಹಳ್ಳಿಯ ಕಲ್ಲುಕುಟಿಗರ ಕೈಲೇ ಮಾಡಿಸಿ ಅದಕ್ಕೊಂದು ಗುಡಿ ಕಟ್ಟಿಸಿ ಎಲ್ಲರೂ ಅದಕ್ಕೆ ನಮಸ್ಕಾರ ಮಾಡುತ್ತಾರೆ. ಅಲ್ಲಿ ನಿಮಗೆ ಸಿಗುವುದು ಸಿಹಿಯಾದ ಹಣ್ಣುಗಳ ಪ್ರಸಾದ ಹಾಗೂ, ಗಿಡಗಳ ಬೀಜಗಳ ಪ್ರಸಾದ. ಅದನ್ನು ಸಾಧ್ಯವಾದ ಕಡೆಯಲ್ಲೆಲ್ಲಾ ಚೆಲ್ಲಿ ಗಿಡ ಬೆಳೆಸಿ ಎಂಬುದೇ ಅವರ ಸಿದ್ದಾಂತ. ಪಟ್ನಮ್ ಅವರು ಕಾವಿ ಬಟ್ಟೆ ಧರಿಸಿಬಿಟ್ಟರೆ ನಿಜವಾಗಿಯೂ ವಿವೇಕಾನಂದರಂತೆ ಕಂಗೊಳಿಸುತ್ತಾರೆ, ಅಂತಹ ವರ್ಚಸ್ಸು ಅವರಿಗಿದೆ. ಎಲ್ಲ ಜನರೂ ಅವರನ್ನು ಗೌರವಿಸುತ್ತಾರೆ. ಪು. ನಾಗಿಣಿ ಅವರಂತೂ ಅವರನ್ನು ಗುರುಗಳೆಂದೇ ಸ್ವೀಕರಿಸಿದ್ದಾರೆ.

ಪಟ್ನಮ್ ಅವರು ಹಸು ಹಾಗೂ ಇತರ ಪ್ರಾಣಿಗಳ ಬಗ್ಗೆ ಜನರಿಗೆ ಅನೇಕ ತಿಳುವಳಿಕೆ ನೀಡಿ, ಇಂತಹ ಪಶುಗಳಿಂದ ಜನರಿಗೆ ಎಷ್ಟು ಲಾಭ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ. ಪಶು ಎಂದರೆ ಅಸ್ತಿ, ಹಿಂದೆ ಜನರ ಸಿರಿತನವನ್ನು, ಹಿರಿತನವನ್ನು ಅವರಲ್ಲಿರುವ ಗೋವುಗಳಿಂದೆ ಅಳೆಯುತ್ತಿದ್ದರು ಎಂದು ಕಥೆಗಳಿಂದ ಉದಾಹರಿಸಿದ್ದಾರೆ. “ನೀನಾರಿಗಾದೆಯೋ ಎಲೆ ಮಾನವಾ ಹರಿ ಹರಿಯೇ ಗೋವೂ ನಾನು “ ಎಂಬ ಹಾಡನ್ನು ಮಕ್ಕಳ ಕೈಲಿ ಹಾಡಿಸಿ ಎಲ್ಲರಿಗೂ ಅದರ ಅರ್ಥವನ್ನು ವಿವರಿಸಿದ್ದಾರೆ. ಹೀಗಾಗಿ ಬರಡಾಗಿದ್ದ ಗೋಮಾಳವೂ ಈಗ ಪಶುಗಳಿಗೆ ಸ್ವರ್ಗವಾಗಿದೆ. ಅವುಗಳ ಗೊಬ್ಬರ, ಗೊಬ್ಬರದ ಅನಿಲ, ಸಮೃದ್ಧಿಯಾದ ಹಾಲು ಇವು ಜನರಿಗೆ ಅನೇಕ ರೀತಿಯಲ್ಲಿ ಲಾಭ ತಂದುಕೊಟ್ಟಿವೆ. ಹಸುವನ್ನು ಹಿಂದೆ ಏಕೆ ಪೂಜಿಸುತ್ತಿದ್ದರು ಎಂದು ಜನರಿಗೆ ಈಗ ಅರ್ಥವಾಗಿದೆ. ಪೂಜೆ ಎಂದರೆ ಸುಮ್ಮನೆ ಕುಂಕುಮ ಇಟ್ಟು ಹಾರ ಹಾಕಿ ನಮಸ್ಕಾರ ಹಾಕುವುದಲ್ಲ, ಅವನ್ನು ಚೆನ್ನಾಗಿ ನೋಡಿಕೊಳ್ಳಬೇಕು, ಮನೆಯ ಒಬ್ಬ ಸದಸ್ಯನಂತೆ ಕಾಣಬೇಕು ಎಂದು ಜನರಿಗೆ ಅರಿವಾಗಿದೆ. ಪರಿವಾರದ ಒಬ್ಬ ಸದಸ್ಯನನ್ನೇ ಮಾಂಸಕ್ಕೆ ಮಾರಲಾಗುತ್ತದೆಯೇ, ಚೆನ್ನಾಗಿದ್ದಾಗ ಅದರ ಲಾಭ ಪಡೆದು ವಯಸ್ಸಾದಮೇಲೆ ಅದನ್ನು ಅಟ್ಟಿಬಿಡಲಾಗುತ್ತದೆಯೇ, ಅಪ್ಪ ಅಮ್ಮ ಮುದುಕರಾದರಂದು ಅವರನ್ನು ಆಚೆಗೆ ಅಟ್ಟಲಾಗುತ್ತದೆಯೇ, ಅಥವಾ ಕೊಂದು ಬಿಡಲಾಗುತ್ತದೆಯೇ ಎಂದು ಜನ ಯೋಚಿಸುವ ಹಾಗೆ ಪಟ್ನಮ್ ಅವರು ಪಶುಗಳ ಬಗ್ಗೆ ತಿಳುವಳಿಕೆ ನೀಡಿದ್ದಾರೆ.

ಈಗ ನೀವು ಈ ಮಾದರಿ ಪುಟ್ಟಕೆರೆಗೆ ಹೋದರೆ ನಿಮಗೆ ಕಾಣಿಸುವುದು ಸುಂದರವಾದ ಪುಟ್ಟ ಕೆರೆ, ಅದರ ಸುತ್ತಲೂ ಇರುವ ಹಸಿರುಮಯ ಗದ್ದೆ, ಹೊಲಗಳು, ಇವುಗಳ ಮಧ್ಯೆ ಹಸಿರು ಮರಗಳ ನಡುವೆ ರಾರಾಜಿಸುತ್ತಿರುವ ಪುಟ್ಟಕೆರೆ ಗ್ರಾಮ, ಅಲ್ಲಿನ ಸ್ವಚ್ಛ ಪರಿಸರ, ಸುಸಂಸ್ಕೃತರಾದ ಹಳ್ಳಿಯ ಜನಗಳು, ಹಳ್ಳಿಯ ಸುತ್ತಲೂ ಇದ್ದ ಬಂಜರು ಭೂಮಿಯಲ್ಲಿ ಪು. ನಾಗಿಣಿ ಅವರು ಬೆಳೆಸಿರುವ ಕಾಡು, ಅದರ ಹಿಂದೆ ಗುಡ್ಡವೂ ಈಗ ಹಸಿರುಮಯವಾಗಿ ಕಣ್ಣಿಗೆ ಹಬ್ಬ ಉಂಟು ಮಾಡುತ್ತಿದೆ. ಪು. ನಾಗಿಣಿ ಅವರೂ ಈಗ ಒಂದು ಸಣ್ಣ ಕೊಠಡಿಗೆ ತಮ್ಮನ್ನು ವರ್ಗಾಯಿಸಿಕೊಂಡು ಅವರ ಮನೆಯನ್ನು ಅಲ್ಲಿಗೆ ಬರುವ ಜನರಿಗೆ ವಸತಿಗೃಹವನ್ನಾಗಿ ಮಾಡಿ ಅದರಿಂದ ಬರುವ ಹಣವನ್ನು ಗ್ರಾಮೋದ್ಧಾರಕ್ಕೆ ಮೀಸಲಿಟ್ಟಿದ್ದಾರೆ.

ಅಂತೂ ದಾರ್ಶನಿಕ ಪಟ್ನಮ್ ಪ್ರಕಾಶ್ ಅವರ ಕನಸು, ಪು. ನಾಗಿಣಿ ಅವರ ಮುಡಿಪಿನ ಜೀವನ ಎರಡೂ ಮಿಲನಗೊಂಡು ಪುಟ್ಟಕೆರೆ ಗ್ರಾಮವನ್ನು ಭಾರತದ ನಕ್ಷೆಯಲ್ಲಿ ಪ್ರಕಾಶಿಸುವಂತೆ ಮಾಡಿದೆ. ಜನ ಇಂದು ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದಾರೆ. ಇಲ್ಲಿ ಅವರು ಬೆಳೆದ ಬೆಳೆ, ಹಾಲು, ಗೊಬ್ಬರ, ಅವರು ಮಾಡಿದ ವಸ್ತು, ಇತ್ಯಾದಿಗಳು ಒಬ್ಬರಿಂದ ಒಬ್ಬರಿಗೆ ವಿನಿಮಯವಾಗಿ ಜನಕ್ಕೆ ಯಾವುದಕ್ಕೂ ಹಳ್ಳಿಯಿಂದ ಆಚೆಗೆ ಹೋಗುವ ಪ್ರಮೇಯ ಬರುತ್ತಿಲ್ಲ. ಇನ್ನು ಹಳ್ಳಿಯಿಂದ ಅನೇಕ ಅರೋಗ್ಯ ಭರಿತ ಬೆಳೆಗಳು, ತರಕಾರಿಗಳು, ಹೂವುಗಳು ನಗರಗಳಿಗೆ ಮಾರಾಟವಾಗುತ್ತಿವೆ. ಪುಟ್ಟಕೆರೆಯಲ್ಲಿ ಬೆಳೆದ ಬೆಳೆ ಎಂದರೆ ಅಲ್ಲಿನ ಜನ ಮುಗಿಬಿದ್ದು ಕೊಳ್ಳುತ್ತಾರೆ. ಹೀಗಾಗಿ, ಏನೆ ಆದರೂ ಕೆರೆ ಮತ್ತು ಅದರ ಸುತ್ತಲೂ ಇರುವ ಹಸಿರು ಕೃಷಿ ಭೂಮಿಯನ್ನು ಹಾಗೆಯೆ ಉಳಿಸಿಕೊಳ್ಳಬೇಕು ಎಂಬುದು ಎಲ್ಲರ ಕನಸಾಗಿದೆ. ಹಳ್ಳಿಯ ಜನರಿಗೂ ಅದು ಮನವರಿಕೆಯಾಗಿದೆ. ಜೊತೆಗೆ ಹಳ್ಳಿಯಲ್ಲೇ ಸಿಗುವ ಗೊಬ್ಬರ, ಸುತ್ತಲಿನ ವನದಿಂದ ಆಗಿರುವ ಅನುಕೂಲ ಇವೆಲ್ಲವೂ ನಮ್ಮ ಕರ್ನಾಟಕದಲ್ಲಿ ಇನ್ನಷ್ಟು ಮಾದರಿ ಗ್ರಾಮಗಳು ಉದಯವಾಗಲು ಪ್ರೇರೇಪಿಸುತ್ತಿವೆ. ಒಟ್ಟಿನಲ್ಲಿ ಕೆರೆ, ಕಾಡು, ಸ್ವಚ್ಛತೆ, ಸಹಜೀವನ, ಸಾಮಾಜಿಕ ಅರಣ್ಯ, ಪಶು ಸಂಪತ್ತು, ಗೋಮಾಳ, ಇವು ಗ್ರಾಮೋದ್ಧಾರಕ್ಕೆ ಎಷ್ಟು ಮುಖ್ಯ ಎಂಬುದು ಎಲ್ಲರಿಗೂ ಮನವರಿಕೆಯಾಗಿದೆ.

ಹೀಗೆ ಕಥೆ ಮುಗಿಸಿದ ನನ್ನ ರೈತ ಮಿತ್ರ, “ಬೆಂಗಳೂರಿಗೆ ಬಂದರೆ ಪುಟ್ಟಕೆರೆ ಗ್ರಾಮವನ್ನು ನೋಡಲು ಮರೆಯಬೇಡಿ, ಹಾಗೆಯೇ ಪಟ್ನಮ್ ಪ್ರಕಾಶ್ ಅವರನ್ನೂ, ಪು. ನಾಗಿಣಿ ಅವರನ್ನೂ ಭೇಟಿ ಮಾಡಿ ಅವರಿಂದಲೇ ಗ್ರಾಮೋದ್ಧಾರದ ಬಗ್ಗೆ ವಿವರಗಳನ್ನು ಕೇಳಿ ತಿಳಿದುಕೊಂಡು ನೀವೂ ಅಳವಡಿಸಿಕೊಳ್ಳಿ. ನಿಮ್ಮ ಹಳ್ಳಿಯನ್ನೂ ಒಂದು ಮಾದರಿ ಗ್ರಾಮವನ್ನು ಮಾಡುವ ಕನಸು ಕಂಡು ಅದನ್ನು ಸಾಕಾರ ಗೊಳಿಸಿ” ಎಂದು ಹೇಳಿದ.

ಈ ಬಾರಿ ಏನಾದರೂ ಸರಿ, ಆ ಗ್ರಾಮವನ್ನು ನೋಡಲೇಬೇಕೆಂದು ತೀರ್ಮಾನಿಸಿದೆ, ಅದನ್ನು ಕಣ್ಣಾರೆ ಕಂಡೆ. ಅದರಲ್ಲಿ ಏನೂ ಉತ್ಪ್ರೇಕ್ಷೆ ಇಲ್ಲ, ನಿಜವಾಗಿಯೂ ಅದೊಂದು ಮಾದರಿ ಗ್ರಾಮ ಎಂದು ಮನವರಿಕೆಯಾಯಿತು. ಅಲ್ಲಿಯೇ ಇದ್ದು ಬಿಡೋಣವೆಂದು ಮನಸಾಯಿತು. ಆದರೆ ಪಟ್ನಮ್ ಪ್ರಕಾಶ್ ಅವರು “ಇಲ್ಲಿ ಇದ್ದುಬಿಡುವುದು ಬಲು ಸುಲಭ, ನೀವೂ ಸಹ ನಿಮ್ಮ ಹಳ್ಳಿಯನ್ನು ಇದಕ್ಕಿಂತ ಚೆನ್ನಾಗಿ ಉದ್ಧಾರ ಮಾಡುತ್ತೇನೆ ಎಂದು ಶಪಥ ಮಾಡಿ, ನಂತರ ಅಲ್ಲಿಯೇ ಇದ್ದುಬಿಡಿ” ಎಂದು ನಯವಾಗಿಯೇ ಚಾಟಿ ಬಿಸಿದರು. ಅದೂ ನಿಜವೇ ಅನ್ನಿಸಿ ನನ್ನ ಹಳ್ಳಿಯನ್ನೂ ಚೆನ್ನಾಗಿ ಉದ್ಧಾರ ಮಾಡಬೇಕೆಂದು ಮನಸಿನಲ್ಲೇ ಶಪಥ ಮಾಡಿ, ಅಲ್ಲಿನ ಪರಿಸರದ ಚಿತ್ರೀಕರಣ ಮಾಡಿಕೊಂಡೆ. ಈಗ ನನ್ನ ಹಳ್ಳಿಯ ಜನರಿಗೆ ಇದರ ಬಗ್ಗೆ ಮನವರಿಕೆ ಮಾಡಿಕೊಡುವ ಭಾರ ನನ್ನ ಹೆಗಲ ಮೇಲೆ ಬಿದ್ದಿದೆ. ಮಾಡುತ್ತೇನೆ ಎಂಬ ಭರವಸೆಯೂ ನನಗಿದೆ. ಪುಟ್ಟಕೆರೆ ಗ್ರಾಮಕ್ಕೆ ಪೈಪೋಟಿ ನೀಡುವ ಗ್ರಾಮವನ್ನು ಇನ್ನೊಂದು ಸ್ವಲ್ಪ ದಿನದಲ್ಲೇ ನೀವು ಖಂಡಿತ ಕಾಣುತ್ತೀರಿ.

ಹಿನ್ನುಡಿ - ಇದು ಕೇವಲ ಕಥೆಯಷ್ಟೇ. ಆದರೆ ಇದನ್ನು ಕಾರ್ಯರೂಪಕ್ಕೆ ತರಬಹುದಲ್ಲವೇ? ಎಲ್ಲರೂ ಮನಸ್ಸು ಮಾಡಿದರೆ ಯಾಕೆ ತಾನೇ ಸಾಧ್ಯವಿಲ್ಲ? ಎಲ್ಲರೂ ಕೈ ಜೋಡಿಸೋಣ. 


Rate this content
Log in

Similar kannada story from Inspirational