Read a tale of endurance, will & a daring fight against Covid. Click here for "The Stalwarts" by Soni Shalini.
Read a tale of endurance, will & a daring fight against Covid. Click here for "The Stalwarts" by Soni Shalini.

B S Jagadeesha Chandra

Tragedy Inspirational Others

2  

B S Jagadeesha Chandra

Tragedy Inspirational Others

ಹಬ್ಬದ ಸಡಗರ

ಹಬ್ಬದ ಸಡಗರ

2 mins
11.8Kಭಾರತಿಗೆ ಹಬ್ಬ ಬಂದಿತಲ್ಲ ಎಂದು ಸಡಗರ ಆದರೆ ಮನೆಯಲ್ಲಿರುವ ಮಗ ಬ್ರಿಜುಗೆ, ಮಗಳು ಆರತಿಗೆ ಒಂದಿಷ್ಟು ಸಂಭ್ರಮವೇ ಇಲ್ಲ.

ಅಂದು ಯುಗಾದಿ ಹಬ್ಬ. ಬೆಳೆಗ್ಗೆ ಬೇಗ ಎದ್ದು ನೀರು ಕಾಯಿಸಿ ಎಲ್ಲರಿಗೂ ನೀರು ಹಾಕಿಕೊಳ್ಳಲು ಹೇಳಿದಳು ಭಾರತಿ. ಯಾರೂ ಏಳಲು ಸಿದ್ಧವೇ ಇಲ್ಲ. ಮಗನಂತೂ ಸುಮ್ಮನೆ ತಲೆ ತಿನ್ನಬೇಡಮ್ಮ, ರಾತ್ರಿ ಮಲಗಿದ್ದು ತಡವಾಗಿದೆ, ಇಂದು ರಜಾ, ಸ್ವಲ್ಪ ನೆಮ್ಮದಿಯಾಗಿ ಮಲಗಲು ಬಿಡು ಎಂದು ಗದರಿದ. ಇಂದು ಹಬ್ಬ, ಮನೆಗೆ ತೋರಣ, ರಂಗೋಲಿ, ಅಡುಗೆ ಎಷ್ಟೊಂದು ಕೆಲಸಗಳಿವೆ, ಇಂದಾದರೂ ಏಳಬಾರದೇ ಎಂದರೂ ಯಾರೂ ಏಳುತ್ತಲೇ ಇಲ್ಲ. ರೇಡಿಯೋದಲ್ಲಿ 'ಯುಗಯುಗಾದಿ ಕಳೆದರೂ ' ಎಂಬ ಹಾಡು ಬಂದಾಗ ಮಕ್ಕಳು ಅಮ್ಮ " ಅದನ್ನು ಆರಿಸು, ನಾವು ನಿದ್ದೆ ಮಾಡಬೇಕು ಎಂದರು" . ಭಾರತಿಗೆ ಅಂದು ಇದ್ದ ಹಬ್ಬದ ಸಡಗರವೆಲ್ಲ ಜರ್ ಎಂದು ಇಳಿದು ಹೋಯಿತು.

ಭಾರತಿಗೆ ತನ್ನ ಚಿಕ್ಕಂದಿನ ದಿನದ ನೆನಪುಗಳು ಬಂದವು. ಅವಳಿಗೆ 'ಜಾನಕಿ' ಅವರು ಹೇಳಿದ 'ಯುಗ ಯುಗಾದಿ ಕಳೆದರೂ' ಹಾಡನ್ನು ಕೇಳಿದಾಗಲೆಲ್ಲಾ ಬಾಲ್ಯದ ನೆನಪುಗಳು ಬರುತ್ತಿದ್ದವು. ಬೇಗ ಎದ್ದು ಮನೆಗೆ ತೋರಣ ಕಟ್ಟುವುದು, ರಂಗೋಲಿ ಹಾಕಲು ಹೋಗಿ ಅಮ್ಮನ ಕೈಲಿ ಬೈಸಿಕೊಳ್ಳುವುದು, ಬೇವನ್ನು ತಿನ್ನಲ್ಲ ಎಂದು ಅಪ್ಪನ ಕೈಲಿ ಹೊಡೆಸಿಕೊಂಡು ನಂತರ ಅಪ್ಪನ ಕೈಲೇ ಮುದ್ದು ಮಾಡಿಸಿಕೊಂಡು ಬೇವು ಬೆಲ್ಲದ ಕಥೆಯನ್ನು ಕೇಳುವುದು, ಒಂದೇ ಎರಡೇ? ಈ ಮಕ್ಕಳಿಗೆ ಯಾವುದು ಬೇಕಾಗಿಲ್ಲವಲ್ಲಾ ಎಂದು ಕೊರಗಿದಳು.

ಗೌರಿ ಗಣೇಶ ಹಬ್ಬ ಬಂದಿದೆ, ಗೌರಿ ಹಬ್ಬಕ್ಕೆ ಯಾರೂ ರಜಾ ತೊಗೊಂಡಿಲ್ಲ. ಅಮ್ಮ, ನೀನು ಹಬ್ಬ ಮಾಡಿಬಿಡು, ನಾವು ಸಂಜೆ ಬಂದು ಊಟಕ್ಕೆ ಒಬ್ಬಟ್ಟು ಕಡುಬು ತಿನ್ನುತ್ತೇವೆ ಎನ್ನುತ್ತಾರೆ. ಗಣೇಶನ ಹಬ್ಬಕ್ಕೆ ಎಲ್ಲವೂ ರೆಡಿಮೇಡ್. ಒಂದು ಸ್ವಲ್ಪವೂ ಶ್ರಮವಿಲ್ಲ, ಉತ್ಸಾಹವಿಲ್ಲ. ಹೋಗಲಿ ಕಡುಬು ತಿನ್ನುವ ತವಕವೂ ಇಲ್ಲ. ಅದಕ್ಕೆ ಈ ಬಾರಿ ಭಾರತಿ ತಾನೂ ಗೌರಿ ಗಣೇಶನ ಹಬ್ಬಕ್ಕೆ ರಜಾ ಹಾಕಿ ಹಳ್ಳಿಯಲ್ಲಿರುವ ತನ್ನ ಅಮ್ಮನ ಮನೆಗೆ ಹೋಗಿ ಅಲ್ಲಿ ಸಡಗರದಿಂದ ಪಾಲುಗೊಂಡಿದ್ದಾಳೆ. ಅವಳಿಗೆ ಅಲ್ಲಿ ತನ್ನ ಬಾಲ್ಯದ ನೆನಪುಗಳು ಮರುಕಳಿಸಿವೆ. ಮಂಟಪ ಕಟ್ಟುವುದು, ತೋರಣ, ಅಲಂಕಾರಗಳು, ಹೊಸ ಹೊಸ ರಂಗೋಲಿಗಳು, ಒಬ್ಬಟ್ಟು, ಕಡುಬಿಗೆ ತಯಾರಿ ಇದರಲ್ಲಿ ಹೊತ್ತು ಕಳೆದದ್ದೇ ಗೊತ್ತಾಗಲಿಲ್ಲ. ಮಗ, ಮಗಳ ಫೋನ್ ಬಂದಾಗ ಬಲವಂತವಾಗಿ ಹೋರಾಡಬೇಕಾಯಿತು. ಒಳ್ಳೆಯ ಗಂಡ, ಮಕ್ಕಳು ಇದ್ದರೂ ತನ್ನ ಮನೆ ಒಂದು ಮನೆಯಾಗಿರಲಿಲ್ಲ, ಎಲ್ಲವೂ ಯಾಂತ್ರಿಕ. ಭಾರತಿ ತನ್ನ ಆಸೆ ಆಕಾಂಕ್ಷೆಗಳನ್ನು ಬದಿಗಿಟ್ಟು ಗಂಡ ಮಕ್ಕಳಿಗೆ ಜೀವನವನ್ನು ಮುಡಿಪಿಟ್ಟಿದ್ದಳು. ಆದರೆ ಇದನ್ನು ಅವರು ಅರ್ಥ ಮಾಡಿಕೊಂಡೇ ಇರಲಿಲ್ಲ. ಅವಳನ್ನು ಸಂತೋಷವಾಗಿ ಇರುವಂತೆ ನೋಡಿಕೊಳ್ಳುವುದಕ್ಕಾಗಿಯಾದರೂ ಸ್ಪಂದಿಸಬಹುದಿತ್ತು. ಆದರೆ ಅದು ಭಾರತಿಯ ಹಣೆಯಲ್ಲಿ ಬರೆದಿರಲಿಲ್ಲ.

ಮುಂದೆ ನವರಾತ್ರಿ ಹಬ್ಬ ಬಂತು. ಮನೆಯಲ್ಲಿ ಅಟ್ಟದ ಮೇಲಿರುವ ಪೆಟ್ಟಿಗೆಯನ್ನು ತೆಗೆದು ಬೊಂಬೆ ಇಡುವ ಅಸೆ ಭಾರತಿಗೆ. ಯಥಾಪ್ರಕಾರ ಮಕ್ಕಳಿಗೆ ಅಸಡ್ಡೆ. ಅದರಿಂದ ಏನು ಪ್ರಯೋಜನ? ಸುಮ್ಮನೆ ಕಾಲಹರಣ ಎಂದು ಅವರ ಅನಿಸಿಕೆ. ಆದರೆ ಈ ಬಾರಿ ಭಾರತಿ ಯಾರ ಮಾತಿಗೂ ಸೊಪ್ಪು ಹಾಕದೆ ಒಂದು ತಿಂಗಳಿನಿಂದಲೇ ಬೊಂಬೆ ಇಡಲು ತಯಾರಿ ಮಾಡಿಕೊಂಡಳು. ಹಳೆಯ ಬೊಂಬೆಗಳನ್ನು ನೋಡಿ ತನ್ನ ಬಾಲ್ಯದ ಸವಿ ನೆನಪುಗಳನ್ನು ನೆನೆದು ಆನಂದ ಪಟ್ಟಳು. ತಾನೊಬ್ಬಳೇ ತನ್ಮಯತೆಯಿಂದ ಅದರಲ್ಲಿ ಲೀನವಾದಳು. ಬೊಂಬೆಗಳನ್ನು ಹೀಗೆ, ಹಾಗೆ ಇಟ್ಟು, ಜೋಡಿಸಿ ದೂರದಿಂದ ನೋಡಿ ಸಂತಸ ಪಟ್ಟಳು. ರಾಮಾಯಣದ ಥೀಮ್, ಮೃಗಾಲಯ, ಅಂಗಡಿ ಬೀದಿ ಎಂದು ಕಲ್ಪಿಸಿಕೊಂಡು ಬೊಂಬೆಗಳನ್ನು ಜೋಡಿಸಿಟ್ಟಳು. ದೊಡ್ಡ ಬೊಂಬೆಯೊಂದಕ್ಕೆ ಒಂದೊಂದು ದಿನ ಒಂದೊಂದು ದೇವಿಯ ಅಲಂಕಾರ ಮಾಡಿ ನವರಾತ್ರಿಗಳನ್ನು ನವನವೀನವಾಗಿರುವಂತೆ ಮಾಡಿಕೊಂಡಳು. ಹಬ್ಬಕ್ಕೆಂದು ಪ್ರಸಾದ ಮಾಡಿ ಬೊಂಬೆ ನೋಡಲು ಬಂದ ಮಕ್ಕಳಿಗೆ ಕೊಟ್ಟು ಪಾವನಳಾದಳು.

ಆ ಹಳೆಯ ಬೊಂಬೆಗಳನ್ನು, ಆ ಪದ್ದತಿಯನ್ನು ಅನೇಕರು ಬಂದು ನೋಡಿ ಮೆಚ್ಚಿ ಅದು ಒಂದು ದೊಡ್ಡ ಸುದ್ದಿಯೇ ಆಯಿತು. ಶಾಲೆಗಳಿಂದ ಮಕ್ಕಳನ್ನು ಕರೆದುಕೊಂಡು ಬಂದು ತೋರಿಸಿದರು. ಮನೆಯಲ್ಲಿ ನನ್ನವರು ಮೆಚ್ಚಿದ್ದರೇನಂತೆ, ಜನ ಮೆಚ್ಚಿದರಲ್ಲ ಎಂದು ಭಾರತಿ ಹೆಮ್ಮೆ ಪಟ್ಟಳು. ಎಲ್ಲಕ್ಕಿಂತ ಮುಖ್ಯವಾಗಿ ಅವಳಿಗೆ ಹಳೆಯ ನೆನಪು ಮರುಕಳಿಸಿದ್ದುದು ಮನಸ್ಸಿಗೆ ನೆಮ್ಮದಿ ನೀಡಿತ್ತು.

ಈಗ ದೀಪಾವಳಿಗೆ ಏನೇನು ಮಾಡಬೇಕು ಎಂದು ಪಟ್ಟಿ ಮಾಡಿಕೊಂಡು ಅದಕ್ಕೆ ಕಾಯುತ್ತ ಕುಳಿತಿದ್ದಾಳೆ. ಅವಳ ಮಕ್ಕಳಿಗೆ ನಮ್ಮ ಅಮ್ಮಒಂದು ರೀತಿಯ ವಿಚಿತ್ರ ಎಂಬ ಭಾವನೆ. ಈಗ ಭಾರತಿ, ಮಕ್ಕಳಿಗೆ, ನಿಮಗೇನು ಇಷ್ಟವೋ ನೀವು ಮಾಡಿ, ನನಗೇನು ಇಷ್ಟವೋ ಅದನ್ನು ನಾನು ಮಾಡುತ್ತೇನೆ, ಸುಮ್ಮನೆ ತಲೆ ಹಾಕಿ ನಿಮ್ಮ ಅನಿಸಿಕೆಗಳನ್ನು ನನ್ನ ಮೇಲೆ ಹೇರಬೇಡಿ ಎಂದು ತಾಕೀತು ಮಾಡಿ ಈಗ ದೀಪಾವಳಿ ಎಂದು ಬರುವುದೋ ಎಂದು ಶಬರಿಯಂತೆ ಕಾಯುತ್ತಿದ್ದಾಳೆ. ಬಾಲವಿಹಾರ ತೆರೆದು ಅದರಲ್ಲಿ ಮಕ್ಕಳನ್ನು ಸೇರಿಸಿಕೊಂಡು ಅವರಿಗೆ ನಮ್ಮ ಭಾರತೀಯ ಸಂಸ್ಕೃತಿಯನ್ನು ಹೇಳಿಕೊಡಬೇಕು, ನಮ್ಮ ಅನುಭವಗಳನ್ನು ಹಂಚಿಕೊಳ್ಳಬೇಕು, ಎಂದೆಲ್ಲ ಹಲವಾರು ಯೋಚನೆಗಳಿವೆ. ಹೇಗೆ ಮಾಡುವುದು ಎಂದು ಆಲೋಚಿಸುತ್ತಾ ಕುಳಿತಿದ್ದಾಳೆ.


Rate this content
Log in

More kannada story from B S Jagadeesha Chandra

Similar kannada story from Tragedy