B S Jagadeesha Chandra

Inspirational

2  

B S Jagadeesha Chandra

Inspirational

ಪುಸ್ತಕಗಳ ಉಡುಗೊರೆ

ಪುಸ್ತಕಗಳ ಉಡುಗೊರೆ

3 mins
2.9K



ಅಂದು ನನ್ನ ಮೇಷ್ಟ್ರು ಜಿ ವಿ ಕೆ ಸಿಕ್ಕಿದ್ದರು. ಬಹಳ ಒಳ್ಳೆಯ ಮೇಷ್ಟ್ರು, ಅವರ ಪಾಠಗಳು ಇನ್ನೂ ಕಿವಿಯಲ್ಲಿ ಗುಯ್ಗುಡುತ್ತದೆ. ನಮಗೆ ಎಲ್ಲವನ್ನು ಕಥೆಯ ಮೂಲಕವೇ ಚೆನ್ನಾಗಿ ತಿಳಿಸಿ ಹೇಳುತ್ತಿದ್ದರು. ಅವರ ಪತ್ನಿ ಕಮಲಾ ಅವರೂ ಅಷ್ಟೇ, ಮನೆಗೆ ಹೋದರೆ ಬಹಳ ಚೆನ್ನಾಗಿ ಮಾತನಾಡಿಸಿ ತಿನ್ನಲು ಏನಾದರೂ ಕೊಡುತ್ತಿದ್ದರು. ಅವರು ನನ್ನ ತಂದೆಯ ಪರಿಚಿತರಾದುದರಿಂದ ಅವರ ಮನೆಗೆ ಹೋಗುವಷ್ಟು ಸಲಿಗೆ ನನಗಿತ್ತು. ಅಂದು ಒಂದು ಹೊಸ ಪುಸ್ತಕಗಳ ಹೊರೆಯನ್ನೇ ಹೊತ್ತುಕೊಂಡು ಹೋಗುತ್ತಿದ್ದರು. 'ಸರ್, ಇದೇನು ಇಷ್ಟು ಭಾರ ಹೊತ್ತುಕೊಂಡು ಹೋಗುತ್ತಿದ್ದೀರಿ, ಬನ್ನಿ, ನನ್ನ ಸ್ಕೂಟರ್ ನಲ್ಲಿ ಮನೆಗೆ ಬಿಡುತ್ತೇನೆ' ಎಂದೆ. ಕೈ ನೋಯುತ್ತಿತ್ತೇನೋ, ಮರು ಮಾತನಾಡದೆ ಸ್ಕೂಟರ್ ಏರಿ ಕುಳಿತರು. ಅವರ ಮನೆಗೆ ಬಿಟ್ಟೆ. ಮನೆಯಲ್ಲಿ ಗುರುಪತ್ನಿ ಕಮಲಾ ಅವರೂ ಕಾಯುತ್ತಿದ್ದರು. 'ನೀನು ಕರೆದುಕೊಂಡು ಬಂದೆಯಾ, ಒಳ್ಳೆಯದಾಯಿತು. ಕಡಿಮೆ ಪುಸ್ತಕ ತನ್ನಿ ಎಂದರೆ ಒಮ್ಮೆ ಹೋದಾಗ ತಂದು ಬಿಡುವೆ ಎಂದು ಹೀಗೆ ಹೊರಲಾರದಷ್ಟು ಪುಸ್ತಕ ತರುತ್ತಾರೆ' ಎಂದು ಹುಸಿ ಮುನಿಸನ್ನು ತೋರಿಸಿದರು.

ನಾನು ಇಷ್ಟೊಂದು ಪುಸ್ತಕ ಯಾಕೆ? ಎಂದು ಕೇಳಿದೆ. ಆಗ ಕಮಲಾ ಅವರು, 'ಉಡುಗೊರೆ ಕೊಡುವುದಕ್ಕೆ' ಎಂದಾಗ ನನಗೆ ಆಶ್ಚರ್ಯವಾಯಿತು. ನನ್ನ ಮುಖವನ್ನು ನೋಡಿ ಭಾವನೆಯನ್ನು ಅರ್ಥ ಮಾಡಿಕೊಂಡ ಜಿ ವಿ ಕೆ ಅವರು ಅದಕ್ಕೆ ತಮ್ಮದೇ ಸಮಜಾಯಿಷಿ ಈ ರೀತಿ ನೀಡಿದರು.

ನಾನು ಹಿಂದೆ ಸಮಾರಂಭಗಳಿಗೆ ಹೋದಾಗ ಏನೇನೋ ಉಡುಗೊರೆಗಳನ್ನು ಕೊಡುತ್ತಿದ್ದೆ. ಆದರೆ ಅದು ಅವರಿಗೆ ಬೇಕೋ ಬೇಡವೋ ಗೊತ್ತಾಗುತ್ತಿರಲಿಲ್ಲ. ನಮ್ಮ ಹತ್ತಿರದ ಬಂಧುಗಳ ಮನೆಯಲ್ಲಿ ಸಮಾರಂಭವಾದ ಮೇಲೆ ಬಂದ ಉಡುಗೊರೆಗಳನ್ನು ತೆಗೆದಿಡುವಾಗ 'ಅಯ್ಯೋ, ಇದನ್ನು ಕೊಟ್ಟಿದ್ದಾರೆ, ಅದನ್ನು ಕೊಟ್ಟಿದ್ದಾರೆ, ಇದೇನು ಉಪಯೋಗವಿಲ್ಲ, ಇದಾದರೂ ಕೊಟ್ಟಿದ್ದರೆ ಚೆನ್ನಾಗಿತ್ತು' ಇತ್ಯಾದಿ ಟೀಕೆಗಳು ಸರ್ವೇ ಸಾಮಾನ್ಯ. ಅರ್ಧಕ್ಕರ್ಧ ಉಡುಗೊರೆಗಳು ಅವರಿಗೆ ಬೇಕಾಗಿಯೇ ಇರುವುದಿಲ್ಲ. ಅವೆಲ್ಲವನ್ನು ಒಂದು ಡಬ್ಬದಲ್ಲಿ ಹಾಕಿ ಹಾಗೆ ಇಟ್ಟಿರುತ್ತಾರೆ. ಇನ್ನು ಕೆಲವರು ಅದನ್ನು ಇನ್ಯಾರಿಗೋ ದಾಟಿಸಿಬಿಡುತ್ತಾರೆ. ಈ ಸಾಮ್ರಾಜ್ಯಕ್ಕೆ ಉಡುಗೊರೆ ಬೇಕಾ?

ಇನ್ನು ಆ ಹೂಗುಚ್ಛಗಳ ಉಡುಗೊರೆಯಂತೂ ದೇವರಿಗೇ ಪ್ರೀತಿ. ಸಮಾರಂಭ ದಿಂದ ಹೊರಡುವಾಗಲೇ ಕೆಲವು ಕಸದ ಬುಟ್ಟಿಗೆ ಸೇರಿದರೆ, ಇನ್ನು ಕೆಲವು ಅಲ್ಲಿನ ಕೆಲಸಗಾರರಿಗೆ ಸೇರುತ್ತವೆ, ಇನ್ನು ಕೆಲವು ಸಮಾರಂಭದಲ್ಲಿಯೇ ಬಿದ್ದಿರುತ್ತವೆ. ಅದೃಷ್ಟ ಪಡೆದ ಕೆಲವು ಹೂಗುಚ್ಛಗಳು ಮನೆಗೆ ಹೋದಮೇಲೆ ಹಾಗೂ ಹೀಗೂ ಒಂದು ದಿನ ಮನೆಯಲ್ಲಿ ಇದ್ದು ಮರುದಿನ ಕಸದ ತೊಟ್ಟಿಗೆ ಸೇರುತ್ತವೆ.

ಇದಲ್ಲದೆ ನನಗೆ ಅನೇಕ ಫಲಕಗಳು, ಶಾಲುಗಳನ್ನು ಕೊಟ್ಟಿದ್ದಾರೆ. ಮೊದಲು ಕೊಟ್ಟಾಗ ತುಂಬಾ ಸಂತೋಷವಾಯಿತು. ಆದರೆ ಈಗ ಅದನ್ನು ಯಾಕಾದರೂ ಕೊಡುತ್ತಾರೋ ಎನ್ನಿಸಿಬಿಟ್ಟಿದೆ. ಅದಕ್ಕೆ ಬದಲು ಒಂದಷ್ಟು ಪುಸ್ತಕವನ್ನೋ ಅಥವಾ ಉಡುಗೊರೆ ಚೀಟಿ ಕೊಟ್ಟಿದ್ದಾರೆ ನಾನು ನನಗೆ ಬೇಕಾದ ಪುಸ್ತಕ ಕೊಳ್ಳುತ್ತಿದ್ದೆ. ಈಗ ನೋಡು ಮನೆ ತುಂಬಾ ಫಲಕಗಳು, ಪಳಪಳ ಹೊಳೆಯುವ ಶಾಲುಗಳು. ಅದನ್ನು ಏನು ಮಾಡುವುದು ಎಂಬುದೇ ಚಿಂತೆಯಾಗಿದೆ ಎಂದು ನಿಡುಸುಯ್ದರು.

ಇವೆಲ್ಲವನ್ನೂ ಹತ್ತಿರದಿಂದ ಗಮನಿಸಿದಾಗ ನನಗೆ ಅನ್ನಿಸಿದ ಮುಖ್ಯ ಅಂಶವೆಂದರೆ, ಅನೇಕರಿಗೆ ಉಡುಗೊರೆಗಳು ಬೇಕಾಗಿಯೇ ಇರುವುದಿಲ್ಲ ಅಥವಾ ಅವರಿಗೆ ಬೇಕೆನಿಸುವ ಉಡುಗೊರೆಯನ್ನು ಯಾರೂ ಕೊಟ್ಟಿರುವುದಿಲ್ಲ. ಹೀಗಾಗಿ ಎಲ್ಲವೂ ವ್ಯರ್ಥವೇ. ಇದರಿಂದ ನನಗೆ ಉಡುಗೊರೆ ಕೊಡುವುದೆಂದರೆ ಏನೋ ಒಂದು ರೀತಿಯ ವ್ಯರ್ಥ ಎಂಬ ಭಾವನೆ ಉಂಟಾಗುತ್ತದೆ. ಅದಕ್ಕೆ ಎಲ್ಲರಿಗೂ ಪುಸ್ತಕ ಕೊಟ್ಟುಬಿಡುತ್ತೇನೆ, ಅದನ್ನು ಯಾರು ಬೇಕಾದರೂ ಓದಬಹುದು, ಅದನ್ನು ನೋಡಿದಾಗಲೆಲ್ಲ ಅವರಿಗೆ ಸಮಾರಂಭದ ನೆನಪು ಉಂಟಾಗುವುದು. 'ನೋಡು ಯಾರಾದರೂ ಈ ಶಾಲುಗಳಿಗೆ ಬದಲಾಗಿ ಒಂದಷ್ಟು ಪುಸ್ತಕ ಕೊಟ್ಟರೆ ನಾನು ಈಗಲೇ ತೆಗೆದುಕೊಂಡು ಬಿಡುತ್ತೇನೆ' ಎಂದು ನಕ್ಕರು. ಕಮಲಮ್ಮನವರೂ ತಲೆ ಅಲ್ಲಾಡಿಸುತ್ತ, 'ನಮ್ಮ ಮನೆಯ ಅಟ್ಟದಮೇಲೆ ಒಂದೆರೆಡು ಡಬ್ಬದ ತುಂಬಾ ಉಡುಗೊರೆಗಳು ಕೂತಿವೆ. ಮಕ್ಕಳಿಗೆ ತೆಗೆದುಕೊಂಡು ಹೋಗಿ ಎಂದರೆ ಮುಟ್ಟುವುದೇ ಇಲ್ಲ. ಒಂದು ದಿನ ನಾನು ಅದೆಲ್ಲವನ್ನು ಹೊರಗೆ ಇಟ್ಟು ದಾನ ಮಾಡಿಬಿಡುತ್ತೀನಿ' ಎಂದರು.

ಹೀಗೆ ಅವರಿಬ್ಬರೂ ತಮ್ಮ ಅಭಿಪ್ರಾಯವನ್ನು ತಿಳಿಸಿದ ಮೇಲೆ, ಅವರು ಹೇಳಿದ್ದು ನಿಜ ಅನ್ನಿಸಿತು. ಆಗ ನಾನು 'ನೀವು ಬರೆದಿರುವ ಲೇಖನಗಳನ್ನೇ ಪುಸ್ತಕವನ್ನೇಕೆ ಮಾಡಿ ಕೊಡಬಾರದು?' ಎಂದೆ.  ಆಗ ಜಿ ವಿ ಕೆ ಅವರು 'ಅಯ್ಯೋ ಅದನ್ನು ಪ್ರಕಟಿಸುವಷ್ಟು ದುಡ್ಡು ನನ್ನಲ್ಲಿ ಎಲ್ಲಿದೆ, ಅವೆಲ್ಲ ಬೇಡಪ್ಪ ಎಂದರು. ಆಗ ನಾನು, 'ನಾನು ಸಹಾಯ ಮಾಡುವೆ, ಮೇಡಂ ನನಗೆ ಎಲ್ಲಾ ಹಸ್ತಪ್ರತಿ ಕೊಟ್ಟರೆ ನಾನು ಕನ್ನಡದಲ್ಲಿ ಟೈಪ್ ಮಾಡಿಸಿ ನಂತರ ಮುದ್ರಿಸಿ ಕೊಡುವೆ' ಎಂದೆ. ಆಗ ಮೇಷ್ಟ್ರು ನೀನುಂಟು, ನಿನ್ನ ಮೇಡಂ ಉಂಟು ಎಂದು ಬಿಟ್ಟರು. ಕಮಲಾ ಮೇಡಂ ನನ್ನ ಬಳಿ ಎಲ್ಲವನ್ನು ಕೇಳಿ ತಿಳಿದುಕೊಂಡು, 'ಎರಡು ದಿನಗಳಲ್ಲಿ ಎಲ್ಲವನ್ನು ಹುಡುಕಿಟ್ಟು ತಲುಪಿಸುವೆ' ಎಂದು ಹೇಳಿ, ಕೊಟ್ಟ ಮಾತಿನಂತೆ ತಲುಪಿಸಿದರು.

ಈಗ ಮಾಸ್ತರರ ಪ್ರಬಂಧ ಸಂಕಲನ, ಕಥೆಗಳ ಸಂಕಲನ ಹಾಗೂ ವಿಚಾರ ಪೂರಿತ ಲೇಖನಗಳ ಸಂಕಲನ ಹಾಗೂ ಮೇಡಂ ಬರೆದ ಕವಿತೆಗಳ ಸಂಕಲನ ಎಂದು ನಾಲ್ಕು ಹಸ್ತಪ್ರತಿಗಳು ಸಿದ್ದವಾದವು. ನಾನು ಅವನ್ನು ಗಣಕದಲ್ಲಿ ಟೈಪಿಸಿ, ಅದಕ್ಕೆ ಒಂದು ಸುಂದರವಾದ ಮುಖಪುಟವನ್ನು ಮಾಡಿಕೊಟ್ಟೆ. ಅವೆಲ್ಲವನ್ನು ಒಬ್ಬ ಜೆರಾಕ್ಸ್ ಅಂಗಡಿಯವನ ಕೈಲಿ ಲೇಸರ್ ಪ್ರಿಂಟಿಗೆ ಒಪ್ಪಿಸಿದೆ. ಪಿನ್ ಹಾಕಿದ ಪುಸ್ತಕವಾದುದರಿಂದ ಹೆಚ್ಚು ಹಣ ಖರ್ಚಾಗಲಿಲ್ಲ. ಸುಮಾರು ೧೦೦ ಪ್ರತಿಗಳನ್ನು ಮಾಡಿಸಿ ಮೇಷ್ಟ್ರಿಗೆ ಉಡುಗೊರೆ ಎಂದು ಕೊಟ್ಟೆ. ಅವರಿಗೆ ಸಂತೋಷದೊಂದಿಗೆ ಒಂದು ರೀತಿಯ ಮುಜುಗರವೂ ಆಯಿತು. ನಾನು ಅದನ್ನು ಗುರುದಕ್ಷಿಣೆ ಎಂದುಕೊಳ್ಳಿ ಎಂದು ಹೇಳಿದೆ. ಅವರಿಬ್ಬರೂ ಸಂತೋಷದಿಂದ ನನಗೆ ಆಶೀರ್ವಾದ ಮಾಡಿದರು. ಅದನ್ನು ನನ್ನ ತಂದೆಗೆ, ಅಂದರೆ ಅವರ ಆಪ್ತಮಿತ್ರನಿಗೆ ಅರ್ಪಣೆ ಮಾಡಿ, ಮುನ್ನುಡಿಯಲ್ಲಿ ನನಗೂ ಕೃತಜ್ಞತೆ ಅರ್ಪಿಸಿದ್ದಾರೆ.

ಈಗ ಮೇಷ್ಟ್ರು ಯಾವುದೇ ಸಮಾರಂಭಕ್ಕೆ ಹೋದರೂ ಅಲ್ಲಿ ತಮ್ಮ ಪುಸ್ತಕವನ್ನು ಕೊಡುತ್ತಾರೆ, ನಾನೂ ಸಹ ಸಮಾರಂಭಗಳಿಗೆ ಹೀಗೆ ನನ್ನ ಮಿತ್ರರೇ ಬರೆದ ಪುಸ್ತಕಗಳನ್ನು, ನನ್ನ ಮೇಷ್ಟ್ರು ಬರೆದ ಪುಸ್ತಕಗಳನ್ನು ಉಡುಗೊರೆಯಾಗಿ ನೀಡುವುದನ್ನ ಅಭ್ಯಾಸ ಮಾಡಿಕೊಂಡಿದ್ದೇನೆ. ಅನೇಕರು ನನ್ನನ್ನು ಭೇಟಿಯಾದಾಗಲೆಲ್ಲ ನಾನು ಕೊಟ್ಟ ಪುಸ್ತಕವನ್ನು ನೆನಪಿಸಿಕೊಳ್ಳುತ್ತಾರೆ. ಈ ವಿಚಾರ ಹೀಗೆ ಇತರರಿಗೂ ಹಬ್ಬಿರುವುದರಿಂದ ಬರೆಹಗಾರರಿಗೆ ಬಹಳ ಅನುಕೂಲವಾಗಿದೆ. ಸ್ವಮುದ್ರಣ ಮಾಡಿರುವವರಿಗಂತೂ ಒಂದು ವರವೇ ಆಗಿದೆ. ಕಮಲಮ್ಮ ಅವರಿಗಂತೂ ಅವರು ಬರೆದ ಕವನ ಸಂಕಲನ ಪುಸ್ತಕವಾಗಿ ಪ್ರಕಟವಾಗಿರುವುದು ಬಹಳ ಸಂತೋಷ ತಂದಿದೆ. ನನ್ನನ್ನು ನೋಡಿದಾಗಲೆಲ್ಲ ಹೊಗಳಿ ಹೊಗಳಿ ಅಟ್ಟಕ್ಕೇರಿಸುತ್ತಾರೆ. ಇದೆಲ್ಲವನ್ನೂ ನೋಡಿ ಈಗ ನನಗೂ ಬರೆಯುವ ಹಾಗೂ ಪ್ರಕಟಿಸುವ ಚಪಲ ಉಂಟಾಗಿದೆ. ನೋಡುತ್ತಾ ಇರಿ, ನಾನೂ ಒಂದಷ್ಟು ಪುಸ್ತಕ ಬರೆದು ಪ್ರಕಟಿಸಿ ನಿಮಗೂ ಉಡುಗೊರೆಯಾಗಿ ಕೊಡುತ್ತೇನೆ. ನೀವೂ ನನ್ನ ಪುಸ್ತಕಗಳನ್ನು ಕೊಂಡು ಇತರರಿಗೆ ಉಡುಗೊರೆಯಾಗಿ ಕೊಡುವಿರಿ ಅಲ್ಲವೇ?


Rate this content
Log in

Similar kannada story from Inspirational