STORYMIRROR

B S Jagadeesha Chandra

Tragedy Inspirational

3  

B S Jagadeesha Chandra

Tragedy Inspirational

ಜೀವನಕ್ಕೊಂದು ಉದ್ದೇಶ

ಜೀವನಕ್ಕೊಂದು ಉದ್ದೇಶ

3 mins
11.8K


ಜೀವನಕ್ಕೊಂದು ಉದ್ದೇಶ 

ಶ್ಯಾಮಲಾ ಪ್ರಖ್ಯಾತವಾದ ನಟಿ. ಚಂದನ ಅವಳ ಆಪ್ತ ಗೆಳತಿ, ಇಬ್ಬರ ಜೀವನ ಶೈಲಿಗಳು ಅಜಗಜಾಂತರ. ಶ್ಯಾಮಲಾ ಅತಿ ಶ್ರೀಮಂತಿಕೆಯ ಜೀವನ ನಡೆಸುತ್ತಿದ್ದಾರೆ, ಚಂದನ ಬಹಳ ಸರಳ ಜೀವಿ. ಆದರೂ ಇಬ್ಬರಿಗೂ ಅದೇನೋ ಸೆಳೆತ. ಶಾಲಾದಿನಗಳಿಂದಲೂ ಗೆಳತಿಯರು. ಅದು ಹಾಗೆಯೆ ಮುಂದುವರೆದಿದೆ. ತಪ್ಪು ಒಪ್ಪುಗಳನ್ನು ಯಾವುದೇ ಮುಜುಗರಗಳಿಲ್ಲದೆ ಹೇಳುತ್ತಾರೆ, ಹಂಚಿಕೊಳ್ಳುತ್ತಾರೆ, ಏನೇ ಆದರೂ ಬೇಸರ ಮಾಡಿಕೊಳ್ಳುವುದಿಲ್ಲ. 

ಶ್ಯಾಮಲಾ ಯಾವಾಗಲೂ ದುಡ್ಡು ದುಡ್ಡು ಎಂದು ಹಲುಬಿದರೆ ಚಂದನ 'ಅದೇಕೆ ಹಾಗೆ ಧನ ಪಿಶಾಚಿ ಹಿಡಿದವರಂತೆ ಆಡುತ್ತೀಯೆ?' ಎಂದು ಬಯ್ಯುತ್ತಾಳೆ. ಅದಕ್ಕೆ ಶ್ಯಾಮಲಾ, 'ಮತ್ತೆ ನಿನ್ನಂತೆ ಭಿಕಾರಿಯಾ ತರಹ ಇರಬೇಕಾ? ಒಂದಷ್ಟು ಜೊತೆ ಬಟ್ಟೆ ಬರೆ ಇಟ್ಟುಕೊಂಡು ಅದೇನು ಜೀವನ ನಡೆಸುತ್ತೀಯೋ' ಎಂದು ಹಂಗಿಸುತ್ತಾಳೆ. ಚಂದನ ಆಗ, 'ಹಾಗೆಯೆ ಇರಬೇಕೆ' ಎಂದು ಅಬ್ದುಲ್ ಕಲಾಂ, ಲಾಲ್ ಬಹದ್ದೂರ್ ಶಾಸ್ತ್ರೀ ಅವರನ್ನು ಕೋಟ್ ಮಾಡಿದರೆ ಶ್ಯಾಮಲಾ ಆಗ, ಮುಖೇಶ್ ಅಂಬಾನಿ, ಜಯಲಲಿತಾ, ಬಾಲಿವುಡ್ ಸಿನಿಮಾ ನಟ ನಟಿಯರನ್ನು ಹೆಸರಿಸುತ್ತಾಳೆ. ಕಡೆಗೆ ಶ್ಯಾಮಲಾ ಶ್ಯಾಮಲೆಯೇ, ಚಂದನ ಚಂದನಾನೆ. 

ಚಂದನ, ಮದುವೆ ಬೇಡ ಎಂದು ನಿರ್ಧರಿಸಿ ಒಬ್ಬಳೇ ಒಂದು ಸಣ್ಣ ಮನೆಯಲ್ಲಿದ್ದಾಳೆ. ಅದು ಶ್ಯಾಮಲಾಳ ಭವ್ಯವಾದ ಅರಮನೆಯ ಕಾಂಪೌಂಡ್ನಲ್ಲೆ ಇದೆ. ಶ್ಯಾಮಲಾಳ ಪರಿಚಿತರೊಬ್ಬರ ಕಂಪೆನಿಯಲ್ಲಿ ಸಣ್ಣ ಕೆಲಸದಲ್ಲಿದ್ದಾಳೆ. ಸಾಧ್ಯವಾದಾಗಲೆಲ್ಲ ರಾಮಕೃಷ್ಣಆಶ್ರಮಕ್ಕೆ ಹೋಗಿಬರುತ್ತಾಳೆ. ಬಿಡುವಿನವೇಳೆಯಲ್ಲಿ ಶ್ಯಾಮಲಾಳೇ ಇವಳ ಮನೆಗೆ ಬಂದು ಕುಳಿತು ಹರಟುತ್ತಾಳೆ. 

ಶ್ಯಾಮಲಾ ನೋಡಲು ಶ್ಯಾಮಲೆಯೇ ಆಗಿದ್ದರೂ ಸುಂದರಿ. ಹೀಗಾಗಿ ಇಂದು ಪ್ರಸಿದ್ಧ ನಟಿ ಆಗಿದ್ದಾಳೆ. ಹೆಸರು, ದುಡ್ಡು ಅಧಿಕಾರ ಇವೆಲ್ಲವೂ ಅವಳಿಗೆ ಬೇಕು. ಅದಕ್ಕಾಗಿ ಏನು ಮಾಡಲೂ ತಯಾರಿ. ಮದುವೆ ಮಾಡಿಕೊಳ್ಳಲು ಇಷ್ಟವಿದ್ದರೂ ಅವಳಿಗೆ ಬೇಕಾದಂತಹ ಹುಡುಗ ಇನ್ನೂ ಸಿಕ್ಕಿಲ್ಲ. ಇನ್ನೂ ಹುಟ್ಟಿಲ್ಲ ಎಂದು ಚಂದನಾಳ ಅನಿಸಿಕೆ. ಜೊತೆಗೆ ಸೌಂದರ್ಯವಿದ್ದಾಗ ಚೆನ್ನಾಗಿ ಸಂಪಾದಿಸಿಬಿಡಬೇಕು, ನಂತರ ಹೇಗೋ ಏನೋ ಎಂದು ದುಡಿಯುತ್ತಾಳೆ. ಒಳಗೊಳಗೇ ಅವಳಿಗೆ ಏನೋ ಭಯ, ಅದನ್ನು ತೋರಿಸಿಕೊಳ್ಳುವುದಿಲ್ಲವಾದರೂ ಅದು ಚಂದನಾಳಿಗೆ ಗೊತ್ತಾಗುತ್ತದೆ. ಚಂದನ ಅದಕ್ಕೆ ಬೈದರೂ, ಇವಳು ತಲೆಗೆ ಹಾಕಿಕೊಳ್ಳುವುದಿಲ್ಲ. ದುಡ್ಡಿದ್ದವನೇ ದೊಡ್ಡಪ್ಪ ಕಣೇ ಎಂದು ಚಂದನಳನ್ನೇ ಮೂದಲಿಸುತ್ತಾಳೆ. ತನ್ನ ಸೌಂದರ್ಯವನ್ನು ಕಾಪಾಡಿಕೊಳ್ಳಲು ಹರಸಾಹಸ ಪಡುತ್ತಾಳೆ. ಬೇರೆಯವರ ಎದುರಿಗೆ ತೋರ್ಪಡಿಸಿಕೊಳ್ಳಲು ಪೂರ್ವ ಸಿದ್ಧತೆ ಮಾಡಿಕೊಳ್ಳುತ್ತಾಳೆ. ಜೀವನ ಕೃತಕವಾಗಿದೆ, ಮಾನಸಿಕವಾಗಿ ಸುಖವಾಗಿಲ್ಲ. ಜೊತೆಗೆ ಮದುವೆಯ ವಿಷಯದಲ್ಲೂ ಅವಳಿಗೆ ಒಂದು ರೀತಿಯ ಭಯ ಮನೆಮಾಡಿದೆ. ಸೆಲೆಬ್ರಿಟಿ ಆಗಿರುವುದರಿಂದ ಅವಳು ಪ್ರಕೃತಿದತ್ತವಾದ ಜೀವನದಿಂದ ದೂರವಾಗಿದ

್ದಾಳೆ. ಹೀಗಾಗಿಯೇ ಅವಳು ಚಂದನಾಳ ಮನೆಗೆ ತಾನೇ ಹೋಗುವುದು. ಅಲ್ಲಿ ಹೋದಾಗ ಮಾತ್ರ ಅವಳು ಶ್ರೀ ಸಾಮಾನ್ಯಳಂತಿರುತ್ತಾಳೆ. ಬೇರೆ ಎಲ್ಲೇ ಹೋದರೂ ಎಲ್ಲವೂ ಕೃತಕ. ಅವಳ ಬಟ್ಟೆ, ಬರೆ ಚಪ್ಪಲಿ ಆಭರಣಗಳು ಇವೆಲ್ಲವನ್ನೂ ಒಂದು ಅಂಗಡಿ ಮಾಡಬಹುದು ಎಂದು ಚಂದನ ಹೇಳುತ್ತಿರುತ್ತಾಳೆ. ಒಟ್ಟಿನಲ್ಲಿ ಶ್ಯಾಮಲಾಳಿಗೆ ಯಾರಮೇಲೂ ನಂಬಿಕೆ ಇಲ್ಲ, ಪುರುಷರೆಲ್ಲರೂ ಕೆಟ್ಟವರು ಎಂಬ ದ್ವೇಷ, ಇವುಗಳಿಂದ ಅವಳಿಗೆ ಉತ್ಸಾಹ, ನೆಮ್ಮದಿ ಯಾವುದೂ ಇಲ್ಲ. ನೋಡಿದವರಿಗೆ ಆಹಾ ಎಂತಹ ಶ್ರೀಮಂತೆ, ಎಲ್ಲಕ್ಕೂ ಆಳುಕಾಳು, ಎಂದು ಹೊಟ್ಟೆಕಿಚ್ಚು ಪಡುವಂತೆ ತೋರ್ಪಡಿಸಿಕೊಳ್ಳುತ್ತಾಳೆ. ಆದರೆ ಅದರ ಒಳಗುಟ್ಟು ಅವಳಿಗೆ, ಚಂದನಾಳಿಗೆ ಮಾತ್ರ ಗೊತ್ತು. ಇದಕ್ಕೆಂದು ಯಾರ್ಯಾರೋ ಸ್ವಾಮಿಗಳ ಬಳಿ ಹೊಂದಳಾದರೂ ಅವರು ಇವಳ ದುಡ್ಡನ್ನು ಕಬಳಿಸಿದರೆ ಹೊರತು ಇವಳಿಗೆ ಕಿಂಚಿತ್ತಾದರೂ ಒಳಿತಾಗಲಿಲ್ಲ. 


ಚಂದನ ಒಬ್ಬ ಸ್ವಾಮಿಜಿಗಿಂತ ಹೆಚ್ಚು ತಿಳಿದುಕೊಂಡವಳಾದರೂ ಅವಳು ಎಂದು ತಾನೊಬ್ಬ ಸನ್ಯಾಸಿನಿ ಎಂದು ಹೇಳಿಕೊಳ್ಳಲಿಲ್ಲ, ಶ್ಯಾಮಲಳೂ ಅದನ್ನು ಒಪ್ಪಿಕೊಳ್ಳಲು ತಯಾರಿಲ್ಲ. ಹೀಗಾಗಿ ಚಂದನ ಅನೇಕ ಬಾರಿ ಬುದ್ಧಿವಾದ ಹೇಳಿದರೂ ಅದು ಶ್ಯಾಮಲಳಿಗೆ ತಟ್ಟುತ್ತಲೇ ಇರಲಿಲ್ಲ. 

ಜೀವನದಲ್ಲಿ ಎಲ್ಲವೂ ಸುಖವಾಗಿಯೇ ನಡೆದುಬಿಟ್ಟರೆ ಹೇಗೆ? ಹಾಗೆಯೇ ಶ್ಯಾಮಲಾಳ ಜೀವನದಲ್ಲೂ ಕೆಲವು ದುಃಖದ ಕ್ಷಣಗಳು ಮೂಡಲಾರಂಭಿಸಿದವು. ಹೊಸನಟಿಯರು ಬಂದು ಇವಳ ಪಟ್ಟಕ್ಕೆ ಚ್ಯುತಿ ಬಂತು. ಬರು ಬರುತ್ತಾ ಹಣದ ಆದಾಯವೂ ನಿಂತು ಹೋಯಿತು. ನಂಬಿದ ಅವಳ ಕೆಲಸಗಾರರು ಅವಳಿಗೆ ಕೈಕೊಟ್ಟರು. ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದ ಅವಳಿಗೆ ಕೊಂಚ ದುಃಖವನ್ನೂ ಸಹಿಸುವ ಶಕ್ತಿ ಇರಲಿಲ್ಲ. ಮಾನಸಿಕವಾಗಿ ಕುಗ್ಗಿದಳು, ಆತ್ಮಹತ್ಯೆಗೆ ಯತ್ನಿಸಿದಳು. ಚಂದನ ಇದ್ದುದರಿಂದ ಬಚಾವಾದಳು. ಆದರೆ ಅದಕ್ಕೂ ಚಂದನಳನ್ನೇ ಬಯ್ಯತೊಡಗಿದಳು. ಕಡೆಗೆ ಚಂದನಾಳೇ ಆಶ್ರಮದ ಸನ್ಯಾಸಿನಿಯೊಬ್ಬರಿಂದ ಹಿತವಚನ ಹೇಳಿಸಿ ಆತ್ಮಸ್ಥೈರ್ಯ ತುಂಬಿಸಿದಳು. ಸುಖ, ದುಃಖ ಎಲ್ಲವನ್ನು ಭರಿಸುವ ಶಕ್ತಿ ಬರುವಂತೆ ಮಾಡಿಸಿದಳು. ಜೀವನ ಪ್ರೀತಿ, ನಂಬಿಕೆ, ಭರವಸೆ, ಒಳನೋಟ ಇವುಗಳ ಮಹತ್ವವನ್ನು ಅರಿತ ಶ್ಯಾಮಲಾ ಈಗ ಸುಧಾರಿಸಿ ಒಳ್ಳೆಯ ಪಾತ್ರಗಳನ್ನು ಆಯ್ಕೆಮಾಡಿಕೊಂಡು ಅಭಿನಯಿಸಿ ಮತ್ತೆ ಪ್ರಸಿದ್ಧಳಾಗಿದ್ದಾಳೆ. ನಾಯಕಿ ಎಂದಲ್ಲವಾದರೂ ಅವಳು ಮಾಡಿದ ಚಿತ್ರಗಳೆಲ್ಲವೂ ಚೆನ್ನಾಗಿ ಓಡುತ್ತವೆ. ತಾನು ಗಳಿಸಿದ ಹಣವನ್ನು ಚಂದನಾಳ ಸಹಾಯದಿಂದ ಸದ್ವಿನಿಯೋಗ ಮಾಡುತ್ತಾ ಸುಖವಾಗಿದ್ದಾಳೆ. ಮೊದಲಿನ ಕೃತಕ ಜೀವನದಿಂದ ಹೊರಬಂದಿದ್ದಾಳೆ. ಸರಳ ಜೀವನ ನಡೆಸುತ್ತ ಚಂದನಳಿಗೆ ನಿಜವಾದ ಗೆಳತಿಯಾಗಿ ಬದುಕುತ್ತಿದ್ದಾಳೆ. ಅವಳ ಮನೆ ಇದ್ದ ಜಾಗದಲ್ಲಿ ಇಂದು ಒಂದು ಶಾಲೆ ಆರಂಭವಾಗಿದೆ. ಹಾಗೆಯೇ ಅನೇಕ ಕಡೆ ಶಾಲೆಗಳು, ಬಡವರ ವಸತಿಕೇಂದ್ರ ಇತ್ಯಾದಿಗಳೂ ಆರಂಭವಾಗಿದೆ. ಅವಳ ಜೀವನಕ್ಕೊಂದು ಉದ್ದೇಶ ಇರುವುದರಿಂದ ಉತ್ಸಾಹದಿಂದ ಪುಟಿಯುತ್ತಿದ್ದಾಳೆ.



Rate this content
Log in

Similar kannada story from Tragedy