ಹೃದಯ ಸ್ಪರ್ಶಿ

Drama Tragedy Others

5.0  

ಹೃದಯ ಸ್ಪರ್ಶಿ

Drama Tragedy Others

ಅನುದ್ವಿಗ್ನ(ಭಾವನೆ ಮರೆತ ನಂತರ)

ಅನುದ್ವಿಗ್ನ(ಭಾವನೆ ಮರೆತ ನಂತರ)

5 mins
403



'ಸರ್, ಇವತ್ತು ಮಾನಿನಿಯ ಮುಂದಿನ ಭಾಗ ಬಂದಿಲ್ಲ' ಹೇಳುತ್ತಲೇ ಒಳಗಡಿಯಿಟ್ಟಳು ಪೂರ್ವಿ.


'ಹ್ಞಾಂ, ಏನೋ ಸಮಸ್ಯೆ ಇದೆ. ಸ್ವಲ್ಪ ತಡವಾಗಬಹುದೆಂದು ಮೊದಲೇ ಹೇಳಿದ್ರು!' ಕೂಲಾಗಿ ನುಡಿದ ಮಹೇಶ್.



ಮಹೇಶ್ 'ಭಾವಸೆಲೆ' ಎಂಬ ಮ್ಯಾಗಝೀನ್ ಒಂದರ ಸಂಪಾದಕ.



"ಮಾನಿನಿ" ಅವನ ಮ್ಯಾಗಝಿನಿನಲ್ಲಿ ಪ್ರಕಟವಾಗುತ್ತಿರೋ ಅತ್ಯುತ್ತಮವಾದ ಒಂದು ಧಾರಾವಾಹಿ. ಸಫಲ ನಲವತ್ತೊಂಬತ್ತು-ಭಾಗಗಳನ್ನು ಪೂರೈಸಿ ಕೊನೆಯ ಹಂತಕ್ಕೆ ಬಂದು ನಿಂತಿದೆ. ಇಂದಿನ ಐವತ್ತನೇ ಭಾಗವೇ ಮಾನಿನಿ ಧಾರಾವಾಹಿಯ ಕೊನೆಯ ಕಂತು.


ಮಾನಿನಿ ಧಾರಾವಾಹಿಯ ಬರಹಗಾರರಾರು ಎಂಬುದರ ಬಗ್ಗೆ ಯಾರಿಗೂ ತಿಳಿದಿಲ್ಲ, ಸ್ವತಃ ಸಂಪಾದಕ ಮಹೇಶನಿಗೂ ಕೂಡ. ಮಾನಿನಿ ಎಂಬ ಹೆಸರಲ್ಲೇ ವಿಳಾಸವಿಲ್ಲದ ಕವರೊಂದು ವಾರದ ಕೊನೆಯಲ್ಲಿ, ಭಾವಸೆಲೆಯ ಆಫೀಸ್ ಬಂದು ತಲುಪುತ್ತಿತ್ತು. ಅದರಲ್ಲಿ ಅಂದಿನ ದಿನದ ಕಥಾ ಭಾಗ ಇರುತ್ತಿದ್ದು ಬಿಟ್ಟರೇ, ಕಥೆಗಾರರೆಂದು ತಿಳಿದುಕೊಳ್ಳುವ ಯಾವ ಸುಳಿವೂ ಇರುತ್ತಿರಲಿಲ್ಲ.



'ಹೆಲೋ ಮಹಿ..ಇವತ್ತಿನ ಕಥಾಭಾಗ ಬಂತಾ ?' ಅವನ ಫಿಯಾನ್ಸಿ ಊರ್ಮಿಳಾಳ ಕರೆ.


'ಇಲ್ಲ, ಊರ್ಮಿ. ನಾನೂ ಕಾಯುತ್ತಿದ್ದೇನೆ, ಅವರಿಗೇನೋ ಸ್ವಲ್ಪ ಸಮಸ್ಯೆ ಆಗಿದೆಯಂತೆ.. ಹಾಗಾಗಿ ತಡ ಆಗುತ್ತೆ ಅಂದಿದ್ರು' ನುಡಿದ ಮಹೇಶ್. ಎಲ್ಲರಂತೆ ಅವನೂ ಕುತೂಹಲದಿ, ಕಾತರದಿ ಕಾಯುತ್ತಿದ್ದಾನೆ.



'ಬಂದ ಕೂಡಲೇ ನನಗೆ ಕಾಲ್ ಮಾಡಿ.' ಎಂದವಳು ಕರೆ ಕಡಿತಗೊಳಿಸಿದಳು.


'ಸರ್.. ಭಾವಸೆಲೆ ಮ್ಯಾಗಝೀನ್ ಮಾರ್ಕೆಟ್ ಎಷ್ಟೊತ್ತಿಗೆ ತಲುಪುತ್ತೆ?' ಸಾವಿರ ಸಂಖ್ಯೆಯಲ್ಲಿ ಬರತೊಡಗಿದ್ದವು ಕರೆ. ಉತ್ತರಿಸಿ, ಉತ್ತರಿಸಿ ಸಾಕಾದ ಮಹೇಶ್ ಮೊಬೈಲ್ ಆಫ್ ಮಾಡಿ ಲ್ಯಾಂಡ್ಲೈನ್ ಲೈನ್ ಕಟ್ ಮಾಡಿ ಉಸ್ಸಪ್ಪ ಎಂದು ಛೇರ್ ಮೇಲೆ ಕುಕ್ಕರಿಸಿದ. 




ಜಗವ ಬೆಳಗೋ ಸೂರ್ಯ-ಚಂದ್ರರಿಗೆ ಒಟ್ಟಿಗೆ ನಲಿವ ಪುಣ್ಯವಿಲ್ಲ. ಸಾವಿರ ವರ್ಷಗಳು ಉರುಳಿದರೂ, 

ಬಾನು ಬರಿಗೈ ಪ್ರೇಮಿ,ಭೂಮಿಯ ಸ೦ಧಿಸದೆ. 


ಕೂಗಿ ಕೂಗಿ ಕರೆದರೂ ತಿರುಗಿ ನೋಡಲಾರನವನಿಂದು. ಪ್ರೀತಿಗೇ ಅಚ್ಚರಿ ಹುಟ್ಟಿಸಿದ ಪ್ರೇಮಿಯಾತ ಒಂದು ಕಾಲದಿ. ಗೋಕುಲದ ಸುಂದರ ಪ್ರಕೃತಿಯ ನಡುವೆಯೂ 

ಪ್ರತಿಕ್ಷಣವೂ ಒಂಟಿಯಾದ ರಾಧೆಯಂತೆ. ಇಂದು ನಾನೂ ಒಂಟಿ. ಮುಂದಿನ ಜೀವನವಿಡೀ !


ಪ್ರೀತಿಯೆಂಬ ಆಸೆಯ ಕುದುರೆಯೇರಿಸಿ ಅಲ್ಲಿಂದ ಕೆಳಗಿಳಿಯುವ ಮುನ್ನವೇ ನನ್ನನ್ನಲ್ಲೇ ಒಂಟಿಯಾಗಿ ಬಿಟ್ಟು ಹೋದ ಪ್ರೇಮಿಯವನು. ನಾ ದೂರಲಾರೆ ಅವನ, ಕಾರಣ ತಪ್ಪಿಲ್ಲ ಅವನದೇನು? ವಿಧಿಯಾಟದಿ ಕೈಗೊಂಬೆಯಾದ ನಾವಿಬ್ಬರೂ ನಮ್ಮ ನಮ್ಮ ಜೀವನ ಸಾಗಿಸಲೇಬೇಕಿದೆ ಇಂದು. ನಮ್ಮ ಹಾದಿಯಲಿ ಪರಸ್ಪರ ಇನ್ನೊಬ್ಬರ ಸುಳಿವಿಲ್ಲದಂತೆ!



ಮಾನಿನಿ ಧಾರಾವಾಹಿಯ ಕೆಲವೊಂದು ಸಾಲುಗಳು ಇನ್ನೂ ಮಹೇಶ್ ಮನದಲ್ಲಿ ಬಿಡದೆ ಕೊರೆಯುತ್ತಿದೆ. ಕಥಾನಾಯಕಿ ಮಾನಿನಿಯ ಜೀವನ ನಿಜಕ್ಕೂ ದುರಂತವೆಂದೇ ಅನಿಸತೊಡಗಿತ್ತು ಅವನಿಗೆ. 



ಸೋದರಮಾವನ ಆಶ್ರಯದಲ್ಲಿ ಬೆಳೆದ ಮಾನಿನಿ ಸೌಂದರ್ಯ, ಗುಣ-ನಡತೆ ವಿದ್ಯೆ-ಬುದ್ಧಿ ಎಲ್ಲದರಲ್ಲೂ ಮುಂದು. ಮುದ್ದು ಗೊಂಬೆಯಂತಿರೋ ಹುಡುಗಿಗೆ ಬರದ ಸಂಬಂಧವಿಲ್ಲ. ಆದರೆ ಅತೀ ಪ್ರೀತಿಯಿಂದ ಬೆಳೆಸಿದ್ದ ಸೋದರಮಾವ ಶಂಕರಪ್ಪನಿಗೆ ಯಾವ ಸಂಬಂಧವೂ ಒಪ್ಪಿಗೆಯಾಗಿರಲಿಲ್ಲ. ಕೊನೆಗೆ ಅಳೆದೂ ತೂಗಿ ಅವರು ಅವಳಿಗಾಗಿ ಆರಿಸಿದ ಹುಡುಗನೇ ಮನನ್.

ಶ್ರೀಮಂತ ಮನೆತನದ ಒಬ್ಬನೇ ಮಗ. ಫಾರಿನ್ನಲ್ಲಿ ಓದಿ ಬಂದಿದ್ದರೂ ನಮ್ಮ ಸಂಸ್ಕೃತಿಯನ್ನು ಎಳ್ಳಷ್ಟೂ ಮರೆತಿಲ್ಲ. ಗಂಭೀರ ಮನನ್, ಮನೆಮಂದಿಯೊಂದಿಗೆ ಮಾತ್ರ ಬರೀ ತುಂಟ. ಹಿರಿಯರ ಒಪ್ಪಿಗೆ ಆಶೀರ್ವಾದಗಳೊಂದಿಗೆ ಮಾನಿನಿ-ಮನನ್ ಸತಿ-ಪತಿಗಳಾಗಿದ್ದರು. ಮನೆ ಸೊಸೆಯಾಗಿ ಆಗಮಿಸಿದ ಹುಡುಗಿಯನ್ನು ಮನೆ ಮಗಳಂತೆ ಆದರಿಸಿತ್ತು ಮನನ್ ಕುಟುಂಬ.


ನೋಡಲು ಗಂಭೀರನಂತಿರೋ ಮನನ್... ಮಾನಿನಿಯ ಮುದ್ದು-ಮುದ್ದು ಮಾತು, ಅವಳ ಮುದ್ದು-ಮುಖ, ಜಾಣತನಕ್ಕೆ ಅದಾಗಲೇ ತಲೆಬಾಗಿದ್ದ. ಮೊದಲ ನೋಟದಲ್ಲೇ ಅವಳ ಸೌಂದರ್ಯ ಅವನ ಕಣ್ಮನ ಸೆಳೆದಿದ್ದರೆ ಅವಳ ಗುಣ-ನಡತೆ ಅವನನ್ನು ಸಂಪೂರ್ಣ ಅವಳಿಗೆ ದಾಸನನ್ನಾಗಿಸಿತ್ತು. ಮಧ್ಯಮವರ್ಗದಲ್ಲಿ ಬೆಳೆದ ಮಾನಿನಿಗೆ ಈ ಶ್ರೀಮಂತಿಕೆಯೆಲ್ಲಾ ಆಡಂಭರ ಎನಿಸತೊಡಗಿದ್ದವು. ಆದರೆ ಬಾಯ್ಬಿಟ್ಟು ಹೇಳಲೂ ಸಾಧ್ಯವಿಲ್ಲ. ಹೇಳದೆಯೇ ಅರ್ಥಮಾಡಿಕೊಂಡಿದ್ದ ಮನನ್ ಅವಳಿಗಾಗಿ ನಗರದಿಂದ ಸ್ವಲ್ಪ ದೂರದಲ್ಲಿರೋ ಊರಿನಲ್ಲಿ ತಮ್ಮಿಬ್ಬರಿಗಾಗಿ ಪುಟ್ಟದಾದ ಮನೆಯೊಂದನ್ನು ಕೊಂಡುಕೊಂಡಿದ್ದ. ನವಜೋಡಿಗಳು ಒಟ್ಟಿಗೆ ಸಮಯ ಕಳೆಯಲಿ ಎಂಬ ಕಾರಣಕ್ಕೆ ಮನೆಯಲ್ಲೂ ಒಪ್ಪಿಗೆ ದೊರಕಿತ್ತು. ಇದೆಲ್ಲಾ ಮದುವೆಯಾದ ಒಂದು ತಿಂಗಳಲ್ಲೇ ನಡೆದಿತ್ತು..!

ಆ ಒಂದು ತಿಂಗಳಲ್ಲೇ ಜನ್ಮಕ್ಕಾಗುವಷ್ಟು ಪ್ರೀತಿಯನ್ನು ಅವಳಿಗೆ ಧಾರೆಯೆರೆದಿದ್ದ ಮನನ್.


ತಮ್ಮದೇ ಪುಟ್ಟ ಮನೆ. ಜೊತೆಗೆ ನಾವಿಬ್ಬರೂ.. ನಮ್ಮ ಜೊತೆ ಪುಟ್ಟ ಪಾಪು.. ಈ ರೀತಿಯ ಅವನ ಸಾವಿರ ಕನಸುಗಳನ್ನು ಅವಳ ಕಂಗಳಲ್ಲೂ ತುಂಬಿಸಿಬಿಟ್ಟಿದ್ದ. ಅವಳಿಗಾಗುವ ಸಣ್ಣ ಗಾಯ ತನ್ನದೆಂದು ಅನುಭವಿಸುತ್ತಿದ್ದ. ಆಗೆಲ್ಲಾ ಅವನ ಪರದಾಟ ಕಂಡು ಎಷ್ಟೋ ಬಾರಿ ಅವಳೇ ನಕ್ಕುಬಿಡುತ್ತಿದ್ದಳು. ಆದರೆ ಸುಖ-ಸಂಸಾರಕ್ಕೆ ದೃಷ್ಟಿ ಬೇಗ ಆಗುವುದೆಂದು ಯಾರಿಗೆ ತಾನೇ ಗೊತ್ತಿತ್ತು. ತಾಯಿಗೆ ಹುಷಾರಿಲ್ಲವೆಂದು, ಮಡದಿಯನ್ನು ಮನೆಯಲ್ಲಿ ಬಿಟ್ಟು.. ತಾಯಿಯ ನೋಡುವ ಸಲುವಾಗಿ ನಗರದಲ್ಲಿರೋ ಮನೆಗೆ ಬಂದಿದ್ದ ಮನನ್. ಸೊಸೆಯನ್ನು ಕರೆತರದ ಮಗನ ಮೇಲೆ ತುಸು ಕೋಪಿಸಿಕೊಂಡರೂ ತನ್ನ ತುಂಟಾಟದಿ ಅವರ ಕೋಪ ಮರೆಸಿ ಸಂಜೆಯವರೆಗೂ ಅಲ್ಲೇ ಇದ್ದು, ಸಂಜೆಗೆ ಅಲ್ಲಿಂದ ಹೊರಟಿದ್ದ. ಆದರೆ ಇನ್ನು ಮುಂದೆ ಎಂದಿಗೂ ಅಲ್ಲಿಗೆ ಹೋಗಲಾಗದು ಎಂಬ ಸತ್ಯದಿಂದ ಎಲ್ಲರೂ ಅನತಿ ದೂರದಲ್ಲಿದ್ದರು. ವಿಧಿಯಾಟ ಎನ್ನುವುದು ಅದನ್ನೇ ಇರಬೇಕು...!!


ಅಂಗಳಕ್ಕೆ ಕಾಲಿಡುತ್ತಲೇ ತೆಂಗಿನಕಾಯಿ ಕೀಳಲೆಂದು ಬಂದವರು ಕಿತ್ತ ಕಾಯಿಯೊಂದು ಅವನ ತಲೆಗೆ ಬಿದ್ದು ಅಲ್ಲೇ ಮೂರ್ಚೆ ತಪ್ಪಿದ್ದ ಮನನ್. ತಮ್ಮ ಕಣ್ಣೆದುರಲ್ಲೇ ನಡೆದ ಘಟನೆಗೆ ಕಿರುಚಿ ಬೊಬ್ಬೆಹಾಕಿದ ಅವನ ತಾಯಿಯೂ ಅಲ್ಲೇ ಕುಸಿದಿದ್ದರು ಪ್ರಜ್ಞೆ ಕಳೆದುಕೊಂಡ !

ವಿಷಯ ತಿಳಿದ ಮಾನಿನಿಗೆ ಯಾರೋ ತನ್ನ ಹೃದಯವನ್ನೇ ಕಿತ್ತುಕೊಂಡು ಹೋದ ಅನುಭವ !


ನಂತರ ಮನನ್ ಚಿಕಿತ್ಸೆ ಫಲಕಾರಿಯಾಗಿ ಗುಣಮುಖನಾದರೂ ಅಷ್ಟರಲ್ಲವನು ತನ್ನ ಮದುವೆಯನ್ನೇ ಮರೆತುಬಿಟ್ಟಿದ್ದ. ಮದುವೆಯೊಂದಿಗೆ ತನ್ನ ಕೈಹಿಡಿದ ಪತ್ನಿ, ತನ್ನ ಜೀವದುಸಿರಾಗಿದ್ದ ಮಾನಿನಿಯನ್ನೂ ಮರೆತುಬಿಟ್ಟಿದ್ದ. ವಿಷಯ ತಿಳಿದ ಮಾನಿನಿ ಕಲ್ಲಾಗಿದ್ದಳು ! ಡಾಕ್ಟರ್ ಕೂಡಾ ಮನಸ್ಸಿನ ಮೇಲೆ ಯಾವುದೇ ಒತ್ತಡ ಹಾಕಬಾರದು ಎಂದಿದ್ದರಿಂದ ಎಲ್ಲರೂ ಅಸಹಾಯಕರಾದರು. ಅವನಿಂದೆಲ್ಲವನ್ನೂ ಮುಚ್ಚಿಡಲೇಬೇಕಾದ ಸ್ಥಿತಿಯನ್ನು ತಂದು ಅವಳ ಕಣ್ಣೀರನ್ನು ಕಂಡು ನಗುತ್ತಾ ನಿಂತಿತ್ತು ವಿಧಿ !

ಅವನಿಗೆ ಮೊದಲೇ ಮದುವೆಯಾಗಿದೆ ಎಂಬ ಯಾವ ಸುಳಿವೂ ಇಲ್ಲದಂತೆ !

ಎಲ್ಲವನ್ನು ತನಗೆ ಮತ್ತು ಮಡದಿಗೆಂದು ಅವನು ಮಾಡಿದ್ದ ಆ ಮನೆಯಲ್ಲೇ ತಂದು ಇರಿಸಲಾಯಿತು. ಮನೆಯವರೆಲ್ಲರ ಒತ್ತಾಯವನ್ನೂ ಮೀರಿ ತಾನು ಅಲ್ಲೇ ಉಳಿಯುವ ನಿರ್ಧಾರ ಮಾಡಿದ ಮಾನಿನಿ, ಅವನು ತನಗಾಗಿ ಕೊಂಡುಕೊಂಡಿದ್ದ ಅದೇ ಮನೆಯಲ್ಲೇ ಉಳಿದಳು. ಎಲ್ಲಾ ಮರೆತ ಪತಿಯೆದುರು ಅಪರಿಚತಳಂತೆ ಬದುಕುವುದು ಅವಳಿಗೆ ಬೇಕಿರಲಿಲ್ಲ. ಪತಿಯ ಮರೆವು ಅವಳ ಮನದ ಮೇಲೆ ಮಾಡಿದ ಗಾಯ ಅಂತಿಂಥಹದ್ದಲ್ಲ !


ಮನನ್ ತನ್ನ ಜೀವನದಲ್ಲಿ ಎಲ್ಲವನ್ನೂ ಮರೆತು ಮುಂದೆ ಸಾಗಿದರೆ, ಮಾನಿನಿ ಯಾವುದನ್ನು ಮರೆಯಲೂ ಆಗದೇ, ನೆನಪಿನಲ್ಲೇ ಕೊರಗುತ್ತ, ದೂರದಿಂದಲೇ ಪತಿಯ ಯಶಸ್ಸನ್ನು ಕಂಡು ಕಣ್ತುಂಬಿಕೊಳ್ಳುತ್ತಿದ್ದಳು. ಇದರ ನಡುವೆ ಸೊಸೆಯ ಕಣ್ಣೀರು ನೋಡಲಾಗದೆ ಮಗನಿಗೆ ನೆನಪಿಸುವ ಪ್ರಯತ್ನ ಮಾಡಿ, ಅದವನ ಮನದ ಮೇಲೆ ಪ್ರಭಾವ ಬೀರಿ ಮತ್ತೆ ಆಸ್ಪತ್ರೆ ಸೇರಿ, ಹುಷಾರಾಗಿ ಮನೆಸೇರಿದ್ದ ಮನನ್. ಇದನ್ನು ಕಂಡ ಮಾನಿನಿ ತನ್ನ ಕಾರಣಕ್ಕೆ ಇನ್ಮುಂದೆ ಅಂತಹ ಯಾವುದೇ ಪ್ರಯತ್ನ ಮಾಡಬಾರದೆಂದು ಆಣೆ ಮಾಡಿಸಿ ಅವರನ್ನು ಸುಮ್ಮನಾಗಿಸಿದ್ದಳು.


ಒಂದೇ ಜೀವದಂತಿದ್ದ ಇಬ್ಬರ ಜೀವನ ವಿಧಿಯಾಟಕ್ಕೆ ಸಿಲುಕಿ ಎರಡು ಕವಲಾಗಿತ್ತು !


ಮತ್ತೊಂದು ತಿಂಗಳಾಗುವಷ್ಟರಲ್ಲಿ ಪಲ್ಲವಿ ಎಂಬ ಹುಡುಗಿಯೊಂದಿಗೆ ಬಂದು ಮನೆಯವರ ಮುಂದೆ ನಿಂತಿದ್ದ ಮನನ್. ಪಲ್ಲವಿ, ಅವರದೇ ಕಂಪನಿಯಲ್ಲಿ ಕೆಲಸ ಮಾಡುತ್ತಿರೋ ಅನಾಥ ಹುಡುಗಿ. ಸುಸಂಸ್ಕೃತ ಗುಣನಡತೆಗೆ ಮೆಚ್ಚಿ ಅವಳಿಗೆ ಬಾಳನ್ನು ನೀಡುವ ನಿರ್ಧಾರ ಮಾಡಿದ್ದ. ಮನೆಮಂದಿ ಕೈ ಕಾಲಾಡದೆ ನಿಂತುಬಿಟ್ಟಿದ್ದರು. ಅವನಲ್ಲಿ ಬೇಡವೆನ್ನಲು ಕಾರಣವೂ ಇಲ್ಲ, ಹಾಗೇ ಒಪ್ಪಿಗೆ ಕೊಡುವಂತೆಯೂ ಇಲ್ಲ !



'ಸರ್...ಮಾನಿನಿಯ ಕೊನೆಭಾಗ ಬಂತು' ಖುಷಿಯಲ್ಲಿ ಹೆಚ್ಚುಕಮ್ಮಿ ಕೂಗೇ ಬಿಟ್ಟಳು ಪೂರ್ವಿ.


'ಸದ್ಯ..ಬಂತಲ್ಲ.

ಸಾವಿರ ಓದುಗರು ಕಾಯ್ತಿದ್ದಾರೆ. ಬೇಗ-ಬೇಗ ಟೈಪ್ ಮಾಡಿ ಪ್ರಿಂಟಿಗೆ ಹಾಕಲು ಹೇಳು. ಮ್ಯಾಗಝೀನ್ನ ಉಳಿದ ಎಲ್ಲವೂ ರೆಡಿಯಾಗಿದೆ ತಾನೇ?

ಇದನ್ನು ಮ್ಯಾಗಝೀನ್ ಇಪ್ಪತ್ತನೇ ಪುಟದಲ್ಲಿ ಬರುವಂತೆ ಎಡಿಟ್ ಮಾಡಿ ಪ್ರಿಂಟಿಗೆ ಹಾಕಲು ಹೇಳು' ಹೇಳಿದ ಮಹೇಶ್.



'ಕೊನೆಗೂ, ಮಾನಿನಿಗೊಂದು ಅಂತ್ಯ ಸಿಗುತ್ತಿದೆ. ಎಲ್ಲಾ ಮರೆತಿರೋ ಮನನ್, ಪಲ್ಲವಿಯನ್ನು ಮದುವೆಯಾಗುತ್ತಾನೋ? ಸತ್ಯ ಮುಚ್ಚಿಟ್ಟಿರೋ ಮನೆಯವರು ಈ ಮದುವೆಗೆ ಒಪ್ಪಿಗೆ ಸೂಚಿಸುತ್ತಾರೋ..?

ಈ ಗೊಂದಲಕ್ಕಿಂದು ತೆರೆ ಬೀಳುತ್ತದೆ.' ಎಂದುಕೊಂಡವನು ಮೊಬೈಲ್ ಆನ್ ಮಾಡಿ ಕುಳಿತಲ್ಲಿಂದ ಎದ್ದು ನಡೆದ.



ಎರಡು ಗಂಟೆಯ ನಂತರ ಮರಳಿ ಬಂದಳು ಪೂರ್ವಿ.

'ಸರ್, ಮ್ಯಾಗಝಿನ್ ಪ್ರಿಂಟಾಗಿ, ಸೇಲ್ ಕೂಡಾ ಆಯಿತು' ಎಂದಳು.


'ಅಂದ್ರೆ ?'


'ಸರ್, ಕೊಂಡುಕೊಳ್ಳೋರೆಲ್ಲಾ ಮ್ಯಾಗಝೀನ್ ಪ್ರಿಂಟಾಗೋ ಮೊದಲೇ ಶಾಪ್ಗಳಲ್ಲಿ ಕಾಯ್ತಿದ್ರು. ಹಾಗೇ ಇಲ್ಲಿ, ಮ್ಯಾಗಝೀನ್ ತೆಗೆದುಕೊಂಡು ವಾಹನಗಳು ಕೂಡಾ ಅದಾಗಲೇ ಬಂದಿದ್ವು. ಸೋ ಎಲ್ಲಾ ಮುಗಿಸಿಯೇ ಬಂದೆ.' ಅವಳ ಮಾತು ಕೇಳಿ ಸುಮ್ಮನೇ ನೋಡಿದ ಅವನು.


'ಡೋಂಟ್ವರೀ ಸರ್. ಟೆನ್ಷನ್ ಆಗ್ಬೇಡಿ. ನಿಮಗೆಂದು ಒಂದು ಮ್ಯಾಗಝೀನ್ ಅದಾಗಲೇ ತೆಗೆದಿಡುವಂತೆ ಹೇಳಿದ್ದೆ. ಅದನ್ನೇ ಕೊಡಲು ಬಂದೆ' ನೀಡಿದಳು.


'ಥ್ಯಾಂಕ್ಯೂ, ಥ್ಯಾಂಕ್ಯೂ, ಸೋ ಮಚ್' ಅಲ್ಲೇ ಚೇರೊಂದನ್ನು ಎಳೆದು ಕುಳಿತುಬಿಟ್ಟ ಓದಲು.



ಮನೆ ಮುಂದಿನ ಗಿಡ ಚಿಗುರಲು ಶುರು ಮಾಡಿದೆ. ವಸ೦ತ ಹೆಜ್ಜೆಯ ಮೇಲೊ೦ದು-ಹೆಜ್ಜೆಯನ್ನಿಟ್ಟು ಕೋಗಿಲೆಯ ದನಿಯಾಗಲು ತಯಾರಿ ನಡೆಸಿದ್ದಾನೆ. ನಾನು ಮಾತ್ರ ಹೇಮ೦ತನ ಜಪದಲಿ ದಿನಗಳ ದೂಡುತಿರುವೆ.

ಮನೆಯವರು ಈ ಗೊಂದಲಕ್ಕೆ ಉತ್ತರ ಕಂಡುಕೊಳ್ಳಲು ನನ್ನ ಬಳಿ ಬಂದಿದ್ದಾರೆ. ಮನನ್ ನನ್ನ ಜೀವದುಸಿರು. ಹೇಗೆ ಬಿಟ್ಟು ಕೊಡಲಿ ಇನ್ನೊಬ್ಬರಿಗೆ ? ಆದರೆ ನನ್ನ ನೆನಪಾದರೂ ಎಲ್ಲಿದೆಯವನಿಗೆ?


ಗಟ್ಟಿ ಮನಸ್ಸು ಮಾಡಿದ ಮಾನಿನಿ ಈ ಮದುವೆ ಮಾಡಿಬಿಡಿ ಎಂದು ಬಿಟ್ಟಳು. ಅವಳ ನಿರ್ಧಾರ ಎಲ್ಲರ ಕಂಗಳನ್ನು ಒದ್ದೆಯಾಗಿಸಿದ್ದವು.


ನಾನು ಈ ಊರನ್ನು ಬಿಟ್ಟು ಬೆಂಗಳೂರಿಗೆ ಹೋಗುತ್ತಿದ್ದೇನೆ. ಅಲ್ಲೇ ಆಶ್ರಮವೊಂದರಲ್ಲಿ ನನ್ನ ಮುಂದಿನ ಜೀವನ ಕಳೆಯಬೇಕೆಂದಿದ್ದೇನೆ. ನೀವೆಲ್ಲಾ ಹೋಗಿ ! 

ಅವಳ ಮನಬದಲಾಯಿಸುವ ಅವರೆಲ್ಲರ ಪ್ರಯತ್ನ ವಿಫಲವಾಗಿತ್ತು.


ಕೊನೆಯದಾಗಿ ನನ್ನ(ಮಾನಿನಿಯ)ಮಾತು.. 


ಕವಿತೆಗಳ ಸಾಲು-ಸಾಲುಗಳು ಮೌನ ಸಂಗ್ರಾಮದಲಿ ಸೋಲುತ್ತಿದ್ದರೂ,

ನಾ ನಿನ್ನ ಪ್ರೀತಿಯ ಸಾಲಗಾರಳಾಗಿದ್ದೇನೆ. ನಿನ್ನೊಲವಿನ ಒಂದೆರಡು ಪದಗಳಿಗಷ್ಟೇ, ಕಾಯುತ್ತಿರುವ ನಾನು ಕ್ಷಣ-ಕ್ಷಣವೂ ಕ್ಷೀಣಳಾಗುತ್ತಿದ್ದೇನೆ !

ಇದನ್ನೆಲ್ಲಾ ಮರೆತಿರುವ ನೀನು-ಎಲ್ಲರ ಕಥೆಯ ನಾಯಕನಾಗಿರುವೆ. 

ನಾನು ಮಾತ್ರ ಕೇವಲ ದುರಂತ ನಾಯಕಿಯಷ್ಟೇ !



ಓದಿ ಮುಗಿಸಿದವನು, 

ಇದೇನು ಹೀಗಾಯಿತು ?

ಅಂದುಕೊಳ್ಳುತ್ತಿರುವಂತೆ ಅವನ ಮೊಬೈಲ್ ರಿಂಗಾಗಿತ್ತು.



'ಹೆಲೋ ! ಮಹೀ, ಅಂಕಲ್ ಆಂಟಿ ನಿನ್ನ ಊರ್ಮಿ ಮದುವೆಗೆ ಒಪ್ಕೊಂಡ್ರು ಕಣೋ!' ಗೆಳೆಯನ ಮಾತು ಕೇಳಿ ಮತ್ತೆ ಗೊಂದಲಕ್ಕೆ ಬಿದ್ದ ಮಹೇಶ್. 


ಇಡೀ ಕಥೆ ಓದಿ ಮುಗಿಸಿದರೂ ಅದು ತನ್ನ ಜೀವನಕ್ಕೆ ಸಂಬಂಧಿಸಿರುವುದೆಂದು ಒಂದು ಕ್ಷಣಕ್ಕೂ ಅನಿಸಲಿಲ್ಲ ಅವನಿಗೆ. 


ಕನಸು ಮರೆತ ಕಂಗಳಿಂದು, ಕನಸು ಕಾಣಲು ಭಯ ಪಟ್ಟಿದೆ.

ತನ್ನ ಜೊತೆ ಇರೋ ಅವನ ನೆನಪಿನಲ್ಲೇ ತನ್ನುಳಿದ ಜೀವನ ಸಾಗಿಸೋ ಅವಳ ನಿರ್ಧಾರವಾದರೆ, ತನ್ನ ನೆನಪನ್ನೇ ಮರೆತ ಅವನು ಮುಂದಿನ ಜೀವನದ ಹೊಸ ಕನಸುಗಳನ್ನು ಹೆಣೆಯತೊಡಗಿದ್ದಾನೆ !


ಮುಗಿಯಿತು.






Rate this content
Log in

Similar kannada story from Drama