ಹೃದಯ ಸ್ಪರ್ಶಿ

Romance Tragedy Fantasy

4  

ಹೃದಯ ಸ್ಪರ್ಶಿ

Romance Tragedy Fantasy

ನಿನ್ನೊಲವ ಮತ್ತಿನಲ್ಲಿ..

ನಿನ್ನೊಲವ ಮತ್ತಿನಲ್ಲಿ..

3 mins
440


ನೀನೊಂತರ ಹವಳದ ಮುತ್ತು.. ಬಳಿ ಇಲ್ಲದೆಯೂ ಏರಿಸುತ್ತಿರುವೆ ನಿನ್ನದೇ ಮತ್ತು. ನಗು ನಗುತ ನನ್ನೆದೆ ಹೊಕ್ಕು ಬಾಳ ಕಣ್ಣಾದವಳು ಇಂದು ಕಣ್ಣಂಚಲಿ ನೆನಪಾಗಿ ಕುಳಿತಿರುವೆ. ಕರೆವೆನೆಂದರೂ ಕೇಳಿಸದ ಊರಲಿ ಕಾಣಿಸದಂತೆ ಕಣ್ಮರೆಯಾಗಿರುವೆ. 


ನೀ ಎನಗೆ ಕಲಿಸಿದ ಮೊದಲ ಪ್ರೇಮವೇ ನಗು. ನೋವಿನಲ್ಲೂ ನಗು. ನೋವ ಮರೆಸಲು ನಗು. ಮಗುವಾಗಿಸೋ ನಗು. ಪೆದ್ದು ಪೆದ್ದು ಮಾತಿನಲೂ ಪ್ರಬುದ್ಧೆ ನೀ. ಒಂಥರಾ ನನ್ನ ಬಾಳ ತುಂಬಾ ಆವರಿಸಿರುವ ಈ ಪರಿಯ ನಾ ಹೇಗೆ ಅರ್ಥೈಸಲಿ ನಿನಗೆ..?


ಮೆಸೇಜ್ ಮೂಲಕ ಆರಂಭವಾಗಿ ಕಾಲ್ ನಲ್ಲಿ ಮುಂದುವರೆದು ಮತ್ತದೇ ಮೆಸೇಜಿನಲ್ಲಿ ಬ್ರೇಕಪ್ ಆಗುವ ಈ ಕಾಲದಲ್ಲಿ ನಾನಿನ್ನೂ ನಿನ್ನ ಪ್ರೀತಿಯನ್ನೇ ಎದುರು ನೋಡುತ್ತಿರುವೆ ಎಂದರೆ ನೀನು ನಂಬಲಾರೆ ಏನೋ, ಬಹುಶಃ!


ತಿದ್ದಿ ಬುದ್ಧಿ ಹೇಳೋ ತಿಳುವಳಿಕೆಯಲಿ ಬುದ್ಧೆ ನೀ.ಬಾಳ ಪಯಣದಲ್ಲಿ ಯಾಕಿಷ್ಟು ಅವಸರಿಸಿದೆ ನನ್ನ ಒಂಟಿಯಾಗಿಟ್ಟು ಈ ಜಗದಲ್ಲಿ. ನನಗೆ ಬಾಳ ದಾರಿ ತೋರೋ ನೆಪದಲ್ಲಿ ಮುನ್ನಡೆದ ನೀ ಸೇರಿದೆ ಮರಳಿ ಬಾರದೂರಿಗೆ. ಆದರೆ ನನ್ನ ಹೃದಯದಿ ನೀ ಇಂದಿಗೂ ನಗುತ್ತಿರುವೆ!


ನೀನಿಲ್ಲದ ಈ ಒಂಟಿ ಪಯಣ

ಬೇಸರವಾಗಿದೆ ಮನ

ನಿನ್ನೊಲವಿನ ಗಾಯನ

ಎದೆಗಂಟಿರುವ ಮೌನ


ಬಚ್ಚಿಟ್ಟ ಮಾತೆಲ್ಲವನ್ನೂ

ಬಿಚ್ಚಿಡಲು ಹಾತೊರೆಯುತಿದೆ ಮನ

ಯಾವೂರಲಿ ಕುಳಿತಿರುವೆ

ಮಾತನಾಡದೆ ನೀ..!!


ನೀನು ನನ್ನ ಬದುಕಿನ ಅಂಗಳಕ್ಕೆ ಕಾಲಿಟ್ಟಾಗ ಬದುಕೊಂದು ಸುಂದರ ಉದ್ಯಾನವನದಂತೆ ಕಂಗೊಳಿಸಿತ್ತು. ಇನ್ನೇನು ನಮ್ಮಿಬ್ಬರ ಒಲವಿನ ಹೂಗಳೆಲ್ಲಾ ಅರಳಿ ನಾವಿಬ್ಬರೂ ಜೊತೆಯಾಗಿ ಆ ಹೂಗಳನ್ನು ಜೋಪಾನ ಮಾಡಬೇಕು ಎಂಬ ಮಧುರ ಕನಸು ಕಾಣುತ್ತಿರುವಾಗಲೇ ನನ್ನೀ ಹೃದಯವನ್ನು ಬರಡಾಗಿಸಿ ನೀ ತೆರಳಿದೆ. ಇಂದು ನನ್ನೀ ಹೃದಯ ಮರುಭೂಮಿಯಂತೆ ಬರಡಾಗಿದೆ. ಏನಿದೆ ಇನ್ನು ಈ ಬದುಕಿನಲ್ಲಿ..?!


ನೀನಿಲ್ಲದ ಯಾವ ಕ್ಷಣಗಳು ಪೂರ್ಣವಾಗುತ್ತಿಲ್ಲ. ಹೃದಯ ಬಿಕ್ಕಿ ಬಿಕ್ಕಿ ಅಳುತ್ತಿರಲು ಸಂತೈಸಲು ನನ್ನಿಂದ ಸಾಧ್ಯವಿಲ್ಲ. ನಿನ್ನ ಮಡಿಲಿನಾಸರೆ ಇಲ್ಲದ ಮೇಲೆ ಒಡಲು ನಿರ್ಜೀವವೇ. ನಿನ್ನ ನಗುವೇ ಕಾಣದ ಈ ಕಣ್ಣುಗಳಿಗೆ ಜಗವೇ ಅಂಧಕಾರದಂತೆ ಕಾಣುತ್ತಿದೆ. 


ಅಂದು ನೀ ಒಂದು ಮಾತು ಹೇಳಿದ್ದೆ.. ಒಬ್ಬರ ಬೆಲೆ ಗೊತ್ತಾಗಬೇಕಾದರೆ ಅವರಿಂದ ಸ್ವಲ್ಪ ದೂರವಿದ್ದು ನೋಡಬೇಕೆಂದು., ಆದರೆ ಆ ಕ್ಷಣಕ್ಕೆ ಅದು ನನಗೆ ಅರ್ಥವಾಗಿರಲಿಲ್ಲ. ಇವಳೆಲ್ಲಿ ನನ್ನ ಬಿಟ್ಟು ಹೋಗುತ್ತಾಳೆ ಅನ್ನುವ ಉದಾಸೀನ ಭಾವವಿತ್ತು ನನ್ನಲ್ಲಿ. ಇದೇ ನಾವು ಮಾಡುವ ಮೊದಲ ತಪ್ಪು. ಹುಡುಗಿ ಅತಿಯಾಗಿ ಪ್ರೀತಿಸುತ್ತಾಳೆ ಅಂದಾಗ ನಾವು ಉದಾಸೀನರಾಗುತ್ತೇವೆ. ಇವಳಿಗೆ ನಾನೇ ಸರ್ವಸ್ವ ಇನ್ನು ಇವಳು ನನ್ನ ದೂರ ಮಾಡಲಾರಳು ಅನ್ನುವ ಅತಿಯಾದ ನಂಬಿಕೆಯೊಂದು ಒಳಗಿಂದ ಗಟ್ಟಿಯಾಗಿರುತ್ತದೆ. ಆದರಿಂದು ನಿನಗಾಗಿ ಹಂಬಲಿಸಿದರೂ ನೀ ಮರಳಿ ಬರಲಾರೆ..!


ಜೊತೆಗಿರಲು ಎಲ್ಲಿಗೆ ಹೋಗುತ್ತಾಳೆಂಬ ಭಾವ.. ಅದಕ್ಕೇ ಇರಬೇಕು ಇವತ್ತು ನೀನಿಲ್ಲದ ಒಂದೊಂದು ಕ್ಷಣವೂ ನನ್ನನ್ನು ನನ್ನ ಮನಸ್ಸನ್ನು ಇಷ್ಟೊಂದು ಕಾಡುತ್ತಿರುವುದು. ನಿನ್ನ ಗೈರು ಹಾಜರಿ ನನ್ನ ಬದುಕನ್ನು ಮತ್ತೆ ಸರಿ ಮಾಡುತ್ತದೆ ಅನ್ನುವ ಯಾವ ಸೂಚನೆಯೂ ನನಗೆ ಸಿಗುತ್ತಿಲ್ಲ. 


ನಿನಗಾಗಿ ಹಂಬಲಿಸುವ ಕ್ಷಣಗಳಲ್ಲಿ ಮತ್ತದೆ ಪತ್ರಗಳ ರಾಶಿಯನ್ನು ಮುಂದೆ ಹರವಿ ಸುಮ್ಮನೆ ಕೂರುತ್ತೇನೆ‌. ನಿನ್ನ ಜೊತೆ ಕಳೆದ ಎಲ್ಲ ಕ್ಷಣಗಳು ಅದು ಕಲ್ಪನೆಗೂ ನಿಲುಕದು. ಇವತ್ತು ಮತ್ತೆ ಒಂಟಿ ನಾನು‌.


ಆದುದನು ಮರೆತು ನಡೆಯಲು

ಮರೆವೇ ಇಲ್ಲವಾಯಿತೇ

ಹಾರೋ ಹಕ್ಕಿಗೆ ಗೂಡು ಕಟ್ಟಲು

ಮರವೇ ಇಲ್ಲವಾಯಿತೇ

ಜನ್ಮ ಜನ್ಮದ ಬಂಧು

ನನ್ನ ಬಿಟ್ಟು ಹೋಗಿರಲು


ಈ ಪ್ರೀತಿ ಇಷ್ಟಕ್ಕೆ ಕೊನೆಯಾಯಿತೇ?!


ಇನ್ನು ನೀನಿಲ್ಲ ಎಂದಾಗ ಆ ಕ್ಷಣಕ್ಕೆ ನಾನದನ್ನು ನಂಬಿರಲಿಲ್ಲ. ಹೇಗೆ ನಂಬಲಿ..? ನನ್ನ ತೋಳತೆಕ್ಕೆಯಿಂದ ಅಷ್ಟು ಬೇಗ ನೀ ಜಾರಿ ಹೋದೆ ಎಂದರೆ..? ಇಷ್ಟೇನಾ ಈ ಪ್ರೀತಿಗೆ ಇರುವ ಶಕ್ತಿ.?


ಗತಿಸೋ ಸಮಯದ ಸೂಚಿಯೇ ಮುಳ್ಳಾಗಿರುವಾಗ ಸದಾ ಕಾಲ ಹೂವನ್ನೇ ಬಯಸೋ ನಾವೆಷ್ಟು ಹುಂಬರು.? ಬಗೆದಷ್ಟು ಬರಿದಾಗದ ನಿನ್ನೀ ನೆನಪು ಸುಡುತಿದೆ ನನ್ನದೆಯನು ನೀಡದೆ ಒಂದಿನಿತು ತಂಪು.!


ಕೈಗೂಡದ ಕನಸೆಲ್ಲವೂ ಇಂದು ಕಣ್ಣಾಲಿಯ ಸೇರಿ ಹನಿ ಬಿಂದುಗಳಾಗಿ ನೆಲ ಸೇರುತ್ತಿರುವೆ. ಮತ್ತೆ ಹುಟ್ಟಿ ಬಂದು ಜಗಕ್ಕೆ ಬೆಳಕು ನೀಡುವ ಸೂರ್ಯನಂತೆ ನೀನೂ ಮತ್ತೆ ಮರಳಿ ಬಂದು ನನ್ನ ಸೇರಬಾರದೆ..?!


ಎದೆಯ ಗೂಡಲಿ ಗುಬ್ಬಚ್ಚಿಯಂತೆ ಬೆಚ್ಚಗೆ ಕೂತಿದ್ದ ನಿನ್ನ ನೆನಪು ಎಂಬ ಗೂಡಿಗೆ ಯಾವ ಕಿಡಿ ಸೋಕಿ ಸುಡುತಿದೆ ಎನ್ನ. ಸಾಗಿ ಬಿಡು ಸಮಯ ಮಾಗಿದ ಹಣ್ಣಾಗುವೆ ನಾನು. ಅವಳೊಲವಿನ ನೆನಪನು ಹೊತ್ತು ಈ ಭುವಿಯಲಿ ಮಣ್ಣಾಗುವೆ ನಾನು.


ನೀನು ನನ್ನ ಸೇರಲಿಲ್ಲ

ಈ ಉಸಿರು ಇನ್ನೂ ಹಾರಲಿಲ್ಲ

ಕನಸಿನ ಕಣ್ಣೇ ಕುರುಡಾಗಿದೆ

ಒಲವಿನ ಮಣ್ಣೇ ಬರಡಾಗಿದೆ..!!


ಮನದಲ್ಲಿ ಸುರಿಯುತ್ತಿರುವ ಬೆಂಕಿಯ ಮಳೆಗೆ ಹಿಡಿಯಲಿ ಹೇಗೆ ಸಾಂತ್ವನದ ಕೊಡೆಯ..? ಹಣೆಯಲ್ಲಿ ಇರದ ನಿನ್ನ ಹೆಸರನು ಹೃದಯದಿ ಕೆತ್ತಿದರೇನು ಬಂತು ಪ್ರಯೋಜನ..?!


ಭುವಿಯು ಎಷ್ಟು ಸುತ್ತು ಸುತ್ತಿದರೂನು, ರವಿಯು ಎಷ್ಟು ದಿನ ಹೊತ್ತಿದರೂನು ಬರಿದಾಗದ ನಿನ್ನ ನೆನಪೇ ನನ್ನಯ ದಿನಚರಿ. ಅಂಬಿಗನಿಲ್ಲದ ಹಾಯಿದೋಣಿ ಸರಿ ದಿಕ್ಕಲ್ಲಿ ಸಾಗಿ ದಡ ಸೇರುವುದಾದರೂ ಹೇಗೆ? ತೇಲುತಿಹುದು ಕಣ್ಣೀರಲಿ ನನ್ನ ಬದುಕೆಂಬ ಹಾಯಿದೋಣಿ ನೀನಿಲ್ಲದೆ, ಒಂಟಿಯಾಗಿ ನಡು ನೀರಿನಲಿ.


ಆವರಿಸಿದ ಕತ್ತಲೆಯಲಿ ಎಲ್ಲವೂ ಶೂನ್ಯ. ಬರ ಬಂದಂತೆ ಮುತ್ತಿಕೊಂಡ ನೀರವ ಮೌನ ಮಾತ್ರವೇ ಉಳಿದಿದೆ ನನ್ನ ಬಾಳಿಗೆ. ಮಾತನಾಡಬಾರದೇಕೊಮ್ಮೆ ಮೌನವನು ಮೌನಿಯಾಗಿಸುವಂತೆ.? ನಮ್ಮೊಲವೇ ದಿಕ್ಕ ತೋರುವುದು ನನಗೆ ನೀನಿರುವ ಊರಿಗೆ. ಸೇರಿಕೊಳ್ಳುವೆ ನಿನ್ನನ್ನು ನಾ ಈ ಪಾಪಿ ಜಗದ ಮೌನವ ತೊರೆದು!


ಎಂದೆಂದಿಗೂ ನಿನ್ನವನೇ 

ಮೌನಿ



Rate this content
Log in

Similar kannada story from Romance