ಹೃದಯ ಸ್ಪರ್ಶಿ

Crime

3.5  

ಹೃದಯ ಸ್ಪರ್ಶಿ

Crime

ಯುಕ್ತಿ

ಯುಕ್ತಿ

4 mins
297


ಮುಂಜಾನೆಯ ಸಮಯ..


ಇನ್ನೂ ಸರಿಯಾಗಿ ಎಲ್ಲಾ ಕಡೆ ಬೆಳಕು ಹರಿದಿಲ್ಲ. ಮುಸುಕು ಮುಸುಕು ಕತ್ತಲನ್ನು ಸೀಳಿಕೊಂಡು ಹೊರ ಬಂದಂತೆ ಕಂಡಿತೊಂದು ಕಪ್ಪನೆಯ ಆಕೃತಿ.


ಒಬ್ಬಳು ಯುವತಿ. ಬೆಳಿಗ್ಗೆ ಬೆಳಿಗ್ಗೆಯೇ ಮನೆಯಿಂದ ಜಾಗಿಂಗಿಗೆಂದು ಬಂದಂತಿತ್ತು. ಸ್ಪೋರ್ಟ್ಸ್ ಡ್ರೆಸ್ಸಿನಲ್ಲಿದ್ದಳು. ಮುಂಜಾನೆಯ ಸಮಯದಲ್ಲಿ ಖಾಲಿ ಖಾಲಿ ಎನಿಸುವ ಮೈನ್ ರೋಡಿನ ಬಲಭಾಗದಲ್ಲಿ ನಿಧಾನವಾಗಿ ಓಡುತ್ತಿದ್ದಾಳೆ. ಹಾಗೇ ಓಡುತ್ತಿದ್ದವಳ ಗಮನ ಯಾಕೋ ಮಾರ್ಗದ ಎಡಗಡೆಗೆ ಹರಿಯಿತು. ಗಮನ ಅತ್ತ ಹೋಗಿದ್ದರಿಂದ ಓಡುತ್ತಿದ್ದವಳ ಕಾಲು ಎಡವಿ ಮುಗ್ಗರಿಸಿ ಮಾರ್ಗಕ್ಕೆ ಬಿದ್ದು ಬಿಟ್ಟಳು. 


'ಅಮ್ಮಾ...' ಕಾಲು ಉಳುಕಿದ ಕಾರಣ ಅಸಾಧ್ಯ ನೋವು. ನಿಲ್ಲಲು ಯತ್ನಿಸಿ ಸೋತವಳು ಸುತ್ತ ನೋಡಿದರೆ ಯಾರೂ ಇಲ್ಲ. ಅಷ್ಟರಲ್ಲಿ ಎದುರಿನಿಂದ ಪಾಸಾಯಿತೊಂದು ಕಪ್ಪು ಬಣ್ಣದ ಕಾರು. ಸಹಾಯಕ್ಕಾಗಿ ಕೈ ಚಾಚಿದಳು. ಮುಂದೆ ಸಾಗಿದ ಕಾರು ರಿವರ್ಸ್ ಬಂದು ಅವಳ ಮುಂದೆ ನಿಂತಿತು.


'ಹೆಲ್ಪ್ ಬೇಕಾ..? ಸರಿ ಬಾ...' ವಿಂಡೋ ಗ್ಲಾಸ್ ಇಳಿಸಿ ಹೇಳಿದ ಯುವಕ. ಕಾರಿನಲ್ಲಿ ಇಬ್ಬರು ಯುವಕರನ್ನು ಹೊರತು ಪಡಿಸಿ ಬೇರಾರಿಲ್ಲ. ಉಗುಳು ನುಂಗಿಕೊಂಡು ಸುತ್ತ ನೋಡಿದಳು. ಮಾರ್ಗದಲ್ಲೂ ಯಾರೂ ಕಾಣಿಸುತ್ತಿಲ್ಲ. 


ಕಾಲನ್ನು ನೆಲಕ್ಕೆಯೂರಲು ಸಾಧ್ಯವಾಗುತ್ತಿಲ್ಲ. ಆದರೂ ಕಷ್ಟಪಟ್ಟು ಎದ್ದು ಕಾರಿನ ಹಿಂದಿನ ಸೀಟೇರಿದಳು ಯುವತಿ. 


ಕಾರು ಮುಂದೆ ಸಾಗಿತು, ನೋವಿನಿಂದ ಮುಲುಗುತ್ತಿರುವ ಯುವತಿಯ ಕಡೆಗೆ ಸೂಕ್ಷ್ಮವಾಗಿ ನೋಡಿದ ಸಹಾಯ ಬೇಕಾ ಎಂದು ಕೇಳಿದ್ದ ಆ ಯುವಕ. 


ಡ್ರೈವರ್ ಸೀಟಿನಲ್ಲಿದ್ದವನು ಫ್ರಂಟ್ ಮಿರರನ್ನು ಸರಿಯಾಗಿ ಯುವತಿ ಕಾಣಿಸುವಂತೆ ಜೋಡಿಸಿ, 'ನೀವು ಹುಷಾರಾಗಿದ್ದೀರಾ..?' ಕೇಳಿದ. 


'ಅಹ್.. ಹ್ ಅದು ಸ್ವಲ್ಪ ನೋವಾಗ್ತಿದೆ' ಅವರಿಬ್ಬರ ನೋಟವನ್ನು ತಪ್ಪಿಸುತ್ತಾ ನುಡಿದಳು ಯುವತಿ. 


'ಅರೇ, ಅದ್ಹೇಗೆ? ಏನು ಮಾಡದೆ..?' ಮೊದಲು ಮಾತನಾಡಿದ್ದ ಆ ಯುವಕನ ಪ್ರಶ್ನೆಗೆ ಯುವತಿ ಗಾಬರಿಯಾಗಿ ನೋಡಿದರೆ, ಡ್ರೈವಿಂಗ್ ಮಾಡುತ್ತಿದ್ದ ಯುವಕ ಸುಮ್ಮನಿರುವಂತೆ ಕಣ್ಣಲ್ಲೇ ಸೂಚಿಸಿದ್ದ. 


'ಎಷ್ಟು ಹೊತ್ತಿನಿಂದ ಅರ್ಥ ಮಾಡಿಸಲು ಪ್ರಯತ್ನಿಸುತ್ತಿದ್ದೇನೆ, ಸುಮ್ಮನಿರ ಬಾರದಾ?' ಗೊಣಗಿಕೊಂಡ ಅವನು. 


'ನೀವೆಲ್ಲಿಗೆ ಹೋಗ್ತಿದ್ದೀರಾ..?' ಯುವತಿಯ ಅನಿರೀಕ್ಷಿತ ಪ್ರಶ್ನೆಗೆ ಇಬ್ಬರೂ ಅವಳತ್ತ ತಿರುಗಿ ನೋಡಿ, ಉತ್ತರಿಸದೆ ಸುಮ್ಮನಾದರು.


'ಐ... ಐ ಮೀನ್ ನ..ನನ್ನನ್ನು ಸ್..ಸೆಕ್..ಕ್ಟರ್ 16ರಲ್ಲಿ ಬಿಡಬಹುದಾ..?' ಅವರ ನಡೆ ನುಡಿ ಅವಳಲ್ಲಿ ತುಸು ಅನುಮಾನ ಮೂಡಿಸಿತ್ತು.


'ಆಫ್ ಕೋರ್ಸ್, ನಾವು ನಿಮ್ಮನ್ನು ಚೆನ್ನಾಗಿ ನೋಡಿ ಕೊಳ್ಳುತ್ತೇವೆ' ನುಡಿದ. ಅವನ ಮಾತಿಗೆ ದುರುಗುಟ್ಟಿದ ಡ್ರೈವ್ ಮಾಡುತ್ತಿದ್ದವನು.


'ಐ ಮೀನ್, ನಾವು ನಿಮ್ಮನ್ನು ಸೇಫಾಗಿ ಡ್ರಾಪ್ ಮಾಡುತ್ತೇವೆ' ತಿದ್ದಿದ. ಆದರೆ ನಡೆ-ನುಡಿಗಳು ಯಾಕೋ ಅವಳಿಗೆ ಸರಿ ಕಾಣಿಸುತ್ತಿಲ್ಲ. ಕಾರು ಮುಂದೆ ಸಾಗುತ್ತಿದ್ದಂತೆ ಅವರುಗಳ ನಡೆಗಳು ತುಸು ತುಸುವೇ ಬದಲಾಗುತ್ತಾ ಹೋಗುತ್ತಿರುವುದು ಅವಳ ಗಮನ ಬಂದಿತ್ತು. ಆಗಲೇ ಅವಳ ಗಮನ ಪಕ್ಕದ ಸೀಟಿನ ಕಡೆಗೆ ಹರಿದಿದ್ದು. ಅಲ್ಲಿ ಕಂಡಿತು ಅನಾಥವಾಗಿ ಬಿದ್ದಿರೋ ಒಂದು ಲ್ಯಾಪ್‌ಟಾಪ್, ಚಾರ್ಜರ್ ಮತ್ತು ಪೆನ್. 


ಅವರು ತನ್ನನ್ನು ಗಮನಿಸುತ್ತಿದ್ದಾರೋ ಇಲ್ಲವೋ ಎಂದು ಗಮನಿಸುತ್ತಲೇ ಜಾರ್ಜರ್ ಮತ್ತು ಪೆನ್ನನ್ನು ಮೆಲ್ಲನೇ ಕೈಗೆತ್ತಿಕೊಂಡಳು.


'ಕ್ಯಾನ್ ಯೂ ಪ್ಲೀಸ್ ಪಾಸ್ ಮಿ ದ ಟಿಶ್ಯೂ..?' ಧೈರ್ಯ ಮಾಡಿ ಕೇಳಿದಳು.


'ಯಾ.. ಶ್ಯೂರ್' ಟಿಶ್ಯೂ ಪೇಪರೊಂದನ್ನು ಎತ್ತಿಕೊಂಡು ಎಡಗೈಯ ತೋರು ಬೆರಳು-ಮಧ್ಯ ಬೆರಳಿನ ಮಧ್ಯೆ ಸಿಗಿಸಿ ಅವಳತ್ತ ಚಾಚಿದ. ಆ ಗ್ಯಾಪಿನಲ್ಲಿ ಪೆನ್ನನ್ನು ಕೈಗೆತ್ತಿಕೊಂಡಿದ್ದವಳು ಅದನ್ನು ನೇರವಾಗಿ ಅವನ ಕುತ್ತಿಗೆಗೆ ಚುಚ್ಚಿ ಬಿಟ್ಟಿದ್ದಳು. ಅವನ ಕಣ್ಣ ಮುಂದೆ ಯಾವುದೋ ಮಂಪರು ಕವಿಯುತ್ತಿರುವ ಅನುಭವ ಆಗುತ್ತಿದ್ದಂತೆ ಚುಚ್ಚಿದ ಪೆನ್ನನ್ನು ಹೊರಗೆಳೆದು ತೆಗೆದ ಆ ಯುವತಿ ಈಗ ಚಾರ್ಜರ್ ವಯರನ್ನು ಕೈಗೆತ್ತಿಕೊಂಡಿದ್ದಳು.


ಎಳೆದ ರಭಸಕ್ಕೆ ರಕ್ತ ಹೊರ ಚಿಮ್ಮಿತ್ತು.

'ಅಮ್ಮಾ.. ಆ.. ಆ..' ಚೀರತೊಡಗಿದ. ಲೆಫ್ಟ್ ಸೀಟಿನಲ್ಲಿದ್ದ ಯುವಕ ವಿಂಡೋ ಮೂಲಕ ಹೊರ ನೋಡುತ್ತಾ ಮೈ ಮರೆತಿದ್ದು, ಗೆಳೆಯನ ಚೀರಾಟಕ್ಕೆ ಈ ಕಡೆ ತಿರುಗಿದ್ದ. ಆದರೆ ಅವನೇನಾದರೂ ಮಾಡುವ ಮೊದಲೇ, ಚಾರ್ಜರ್ ವಯರನ್ನು ಅವನ ಕೊರಳಿಗೆ ಹಾಕಿದ್ದಳು ಯುವತಿ. ಕಾಲನ್ನು ಅದೇ ಸೀಟಿಗೆ ಕೊಟ್ಟು ತನ್ನೆಲ್ಲಾ ಶಕ್ತಿ ಬಳಸಿ ಎಳೆದು ಹಿಡಿದಿದ್ದಳು ಚಾರ್ಜರ್ ವಯರ್.


'ಬಿ.. ಬಿಡು' ಕುತ್ತಿಗೆಗೆ ಹಾಕಿರುವ ವಯರ್ ಬಿಗಿದುಕೊಳ್ಳದಂತೆ ತನ್ನೆರಡು ಕೈಗಳನ್ನು ಅದರ ಮಧ್ಯೆ ಸಿಕ್ಕಿಸಿ ಚೀರಿದ ಅವನು. ಡ್ರೈವ್ ಮಾಡುತ್ತಿದ್ದವನಿಗೆ ಮೊದಲೇ ಗಾಯ ಮಾಡಿದ್ದರಿಂದ ಅವಳನ್ನು ಬಿಡಿಸಲು ಅವನೂ ಅಸಫಲನಾಗಿದ್ದ.


'ಹ್..ಹು..ಹುಚ್ಚು ಹಿ..ಡ್..ಡಿದಿ..ದ್..ಯಾ..? ಬಿ..ಬಿಡು ನಮ್..ನಮ್ಮನ್ನು. ನಿ..ನಿನಗೆ ಗ್..ಗೊತ್..ತ್ತಿಲ್..ಲ ನಾ..ನಾವು ಯಾ..ಯಾರೆಂದು?' ಅದರ ನಡುವೆಯೂ ಬೆದರಿಸುವ ಪ್ರಯತ್ನ ಆ ಯುವಕನದು.


ಡ್ರೈವ್ ಮಾಡುತ್ತಿದ್ದವನು ಸೋರುತ್ತಿರುವ ರಕ್ತವನ್ನು ತಡೆ ಹಿಡಿಯುವ ಪ್ರಯತ್ನ ಮಾಡುತ್ತಾ ನರಳುತ್ತಿದ್ದಾನೆ.


'ಏ...ಏಯ್ ಬಿ..ಬಿಡೇ ಅ..ಅವ..ನನ್ನು, ಬಿಡೇ..' ಕೈಯ್ಯಿಂದ ಗಾಯವನ್ನು ಒತ್ತಿ ಹಿಡಿದು ಬೊಬ್ಬೆ ಹಾಕಿದ.


'ಜಾಸ್ತಿ ಬೊಬ್ಬೆ ಹಾಕಿದ್ಯೋ ರಕ್ತ ಇನ್ನೂ ಹೆಚ್ಚು ಸೋರಿ, ನಿನಗೆ ಸಾಯೋದಿಕ್ಕೆ ತುಂಬಾ ಸಮಯ ಬೇಕಾಗುವುದಿಲ್ಲ..?' ಇನ್ನೊಬ್ಬನ ಕುತ್ತಿಗೆಗೆ ಸುತ್ತಿದ್ದ ವಯರನ್ನು ಇನ್ನೂ ಗಟ್ಟಿಯಾಗಿ ಎಳೆಯುತ್ತಾ ಶಾಂತವಾಗಿ ನುಡಿದಳು ಯುವತಿ.


ನೋಡು ನನ್ನ ತಂದೆ ಪೊಲೀಸ್, ನಿನ್ನನ್ನು ಇಲ್ಲಿಂದ ಮಾಯ ಮಾಡಲು ನಮಗೆ ತುಂಬಾ ಸಮಯ ಬೇಡ.. ಹಾಗೇ ಹೀಗೇ ಎಂಬಂತೆ ವಿಧವಿಧವಾಗಿ ಹೆದರಿಸತೊಡಗಿದರೂ ಆ ಯುವತಿ ಜಗ್ಗಲಿಲ್ಲ. ಕೊನೆಗೆ ನಮ್ಮಲ್ಲಿ ಏನೂ ಇಲ್ಲ, ಯಾರು ನೀನು? ಯಾಕೆ ಹೀಗೆ ಮಾಡ್ತಿದ್ದೀಯಾ? ಹಣ ಬೇಕಿದ್ದರೆ ಕೊಡುತ್ತೀವಿ. ನಮ್ಮನ್ನು ಬಿಡು, ನಿನ್ನ ಬಗ್ಗೆ ಯಾರಲ್ಲೂ ಹೇಳೋದಿಲ್ಲ ನಾವು ಎಂದು ಬೇಡಿಕೊಂಡಿದ್ದರು.


'ನಿಜವಾಗಿಯೂ ಯಾರಿಗೂ ಹೇಳೋದಿಲ್ವಾ..?' ವ್ಯಂಗ್ಯವಾಗಿ ನಕ್ಕು ಕೇಳಿದಳು ಯುವತಿ.

ಒಬ್ಬ ಆಗಿರೋ ಗಾಯದ ಕಾರಣ ಏನೂ ಮಾಡಲು ಅಸಫಲನಾಗಿದ್ದರೆ, ಇನ್ನೊಬ್ಬ ಉಸಿರು ಕಟ್ಟುತ್ತಿರುವುದರಿಂದ ನರಳ ತೊಡಗಿದ್ದ. 


'ಹೇ...ಏಯ್ ಬಿಡೇ ಅವನನ್ನು, ಇಲ್ಲದಿದ್ದರೆ...?'


'ಏಯ್ ಚುಪ್..' ಎಂದವಳು ಇನ್ನೊಬ್ಬನ ಕಡೆ ತಿರುಗಿ,

'ಏಯ್ ನಾಯಿ.. ಡ್ಯಾಷ್ ಬೋರ್ಡ್ ಓಪನ್ ಮಾಡು' ನುಡಿದಳು.


'ಆ.. ಆಹ್.. ಮಾಡು..ಮಾಡುತ್ತೇನೆ'


'ಬೇಗಾ..' ಅಬ್ಬರಿಸಿದಳು.


'ಮೆ..ಮೆಲ್ಲ ಸಿ..ಸಿಸ್..ಟ..ರ್, ಕ..ಕ..ಕತ್ತು ಮು..ರಿಬೋ.ದು' ಕುತ್ತಿಗೆ ಮೇಲೆ ಕೈಯಿಡುತ್ತಾ ಡ್ಯಾಷ್ ಬೋರ್ಡ್ ಕಡೆ ಬಗ್ಗಿದ.


'ಸಿಸ್ಟರ್...?' ಅವನ ಬಾಯಿಯಿಂದ ಹೊರ ಬಂದ ಮಾತಿಗೆ ಅಚ್ಚರಿಯಿಂದ ವ್ಯಂಗ್ಯವಾಗಿ ಕೇಳಿದಳು.


ಹೇಗೋ ಕಷ್ಟಪಟ್ಟು ಓಪನ್ ಮಾಡಿದ. ಅವಳ ಗಮನ ಪೂರ್ತಿಯಾಗಿ ಅವರಿಬ್ಬರ ಮೇಲಿದ್ದವು. ಅದರಲ್ಲಿರುವ ಮೊಬೈಲ್ ಕಣ್ಣಿಗೆ ಕಾಣಿಸುತ್ತಿದ್ದಂತೆ ಕೈ ಅದರತ್ತ ಓಡಿದ್ದವು.


'ಫೋನ್ ಅಲ್ಲ... ವಾಲೆಟ್ ತೆಗೆದು ಕೋ..' ಮತ್ತಷ್ಟು ಬಿಗಿ ಮಾಡಿದ್ದಳು ವಯರ್ ಹಿಡಿತ.


'ಕೊ..ಕೊಡು ಬೇಗ ಕೊಡು. ಎಲ್ಲಾ ಹಣವನ್ನೂ ಕೊಡು' ನುಡಿದ ಡ್ರೈವ್ ಮಾಡುತ್ತಿದ್ದವನು. 


'ಅ... ಅಹ್.. ಅಹ್.. ಓ...ಕೆ ಓಕೆ' ವಾಲೆಟ್ ಎತ್ತಿಕೊಂಡಿದ್ದ.


'ಓಪನ್ ಮಾಡು...' ಅವನಲ್ಲೇ ಹೇಳಿದಳು.


'ಮಾಡು....' ಮತ್ತಷ್ಟು ಬಿಗಿಗೊಳಿಸಿದಳು.


'ಅಹ್... ಆ..' ಓಪನ್ ಮಾಡಿದವನ ನೋಟ ಅಲ್ಲೇ ಸ್ಥಗಿತಗೊಂಡಿತು. ಯಾವುದೋ ನೋಡಬಾರದನ್ನು ನೋಡಿದಂತೆ ಬಿಳಿಚಿಕೊಂಡಿತು ಮುಖ.


'ಏ...ಏನಾಯಿತು? ಯಾಕೆ ಮಾ..ಮಾತನಾ..ಡ್..ತಿಲ್ಲ? ಏನಾ..ದರೂ.. ಹೇ...ಳ್..ತೀಯಾ?' ಕೇಳಿದ ಡ್ರೈವ್ ಮಾಡುತ್ತಿದ್ದವ. ಆದರೆ ಇವನಿಂದ ಯಾವುದೇ ಪ್ರತಿಕ್ರಿಯೆ ಇಲ್ಲ.


'ಏ..ಏನಾಯ್..ತೋ? ಹಾವು ನೋಡಿದಂ..ತೆ....' ಅವನ ಗಮನ ವಾಲೆಟ್ ಕಡೆ ಹರಿಯುತ್ತಿದ್ದಂತೆ ಅವನ ಮಾತೂ ಗಂಟಲಲ್ಲೇ ಉಳಿಯಿತು.


'ಪ್..ಪೋಲಿಸ್...??' ಇಬ್ಬರ ಮುಖವೂ ಕಳಾಹೀನವಾಗಿತ್ತು. ಅವರು ಎಲ್ಲಿ ಎಡವಿದ್ರು ಎಂಬುದು ಅವರಿಗೂ ಅರಿವಾಗಲಿಲ್ಲ..!! 


'ಆ್ಯಕ್ಚುಯಲಿ ಇದು ನನ್ನದೇ ಕಾರು. ನೀವು ನನ್ನ ಕಾರಿನ ಬಳಿ ನಿಂತು ನನ್ನ ಬಗ್ಗೆ ಮಾತನಾಡ್ತಿದ್ರಲ್ವಾ.. ಕೆಟ್ಟದಾಗಿ? ಆಗಲೇ ನಿಮ್ಮ ಮಾತು ಕೇಳಿಸಿಕೊಂಡಿದ್ದೆ ನಾನು. ಅದಿಕ್ಕೆ ನೀವು ಏನು ಮಾಡ್ತೀರಿ ನೋಡೋಣ ಅನ್ಕೊಂಡೆ,


ನನ್ನ ಕಾರನ್ನೇ ಕಳ್ಳತನ ಮಾಡಿದ್ದೂ ಅಲ್ಲದೇ, ನನ್ನನ್ನೇ ಕಿಡ್ನ್ಯಾಪ್ ಮಾಡಿ ನಿಮ್ಮ ದಾಹ ತೀರಿಸ್ಕೋಬೇಕು ಅಂತಿದ್ರಿ ಅಲ್ವಾ..? ಅದಿಕ್ಕೆ ಬಿದ್ದು ಕಾಲು ಉಳುಕಿದಂತೆ ನಟಿಸಿ, ನಿಮ್ಮಲ್ಲೇ ಸಹಾಯಕ್ಕಾಗಿ ಕೈ ಚಾಚಿದೆ. ಒಬ್ಬಳು ಹುಡುಗಿ, ಒಂಟಿಯಾಗಿ ಸಿಕ್ಳು ಅಂದ್ರೆ ನಿಮ್ಮಂತಹ ಷಂಡರಲ್ಲೂ ಬಲ ಉಕ್ಕಿ ಬರುತ್ತೆ ಅಲ್ವಾ..?' ಅವಳ ಪ್ರಶ್ನೆಗೆ ಉತ್ತರವಿಲ್ಲದೆ ತಲೆ ತಗ್ಗಿಸಿದರು ಇಬ್ಬರೂ.


'ತಗೋ ನನ್ ಮೊಬೈಲ್..

ಡಯಲ್ ಲೀಸ್ಟಿನಲ್ಲಿ ಇರೋ ಮೊದಲ ನಂಬರಿಗೆ ಕಾಲ್ ಮಾಡಿ ಸ್ಪೀಕರಿಗೆ ಹಾಕು' ಅವನಲ್ಲೇ ಮಾಡಿಸಿದ್ದಳು. ಡ್ರೈವ್ ಮಾಡುತ್ತದ್ದವನಿಗೆ ಕಾರು ನಿಲ್ಲಿಸುವಂತೆ ಆದೇಶ ನೀಡಿದ್ದರಿಂದ ತುಂಬಾ ದೂರ ಕ್ರಮಿಸಿ ಬಂದಿದ್ದರಿಂದ ಎಲ್ಲೋ ಒಂದು ಕಡೆ ಮಾರ್ಗ ಮಧ್ಯದಲ್ಲಿ ನಿಲ್ಲಿಸಿದ್ದ.



'ಹೆಲೋ ಕಂಟ್ರೋಲ್ ರೂಮ್...' ವಿಷಯ ತಿಳಿಸಿ ಕರೆ ಕಡಿತಗೊಳಿಸಿದಳು. ಐದು ನಿಮಿಷದ ಅಂತರದಲ್ಲಿ ಬಂದ ಪೋಲಿಸರು ಅವರಿಬ್ಬರನ್ನೂ ಅರೆಸ್ಟ್ ಮಾಡಿ ಕರೆದೊಯ್ದರು. ಅವರಲ್ಲಿ ಒಬ್ಬನಿಗೆ ಆ ಯುವತಿ ಗಾಯ ಮಾಡಿದ್ದರಿಂದ ಅವನಿಗೆ ಮೊದಲು ಚಿಕಿತ್ಸೆ ಕೊಡಿಸುವಂತೆ ಸೂಚಿಸಲಾಯಿತು. 


'ಮಿಸ್ ನೇಹಾ..' ತನ್ನ ಮುಂದೆ ನಿಂತ ಅಧಿಕಾರಿಗೆ ಸೆಲ್ಯೂಟ್ ಮಾಡಿದಳು ಯುವತಿ. 


'ವೆಲ್ ಡನ್. ಟ್ರಾನ್ಸ್ ಫರ್ ಆಗುತ್ತಲೇ...?' ಮೆಚ್ಚುಗೆ ವ್ಯಕ್ತಪಡಿಸಿದರು. 


'ಥ್ಯಾಂಕ್ಯೂ ಸರ್..' ಮುಗುಳ್ನಕ್ಕಳು ಯುವತಿ.


ಅಷ್ಟರಲ್ಲಿ ಆ ದಿನಕರನೂ ತನ್ನ ಹೊನ್ನ ಪ್ರಭೆಯ ಬೀರುತ್ತಾ ನಗುತ್ತಾ ಬಂದಿದ್ದ ಮೆಲ್ಲನೇ.. ಕತ್ತಲು ಕಳೆದು ಬೆಳಕು ಹರಿದಿತ್ತು.




Rate this content
Log in

Similar kannada story from Crime