ಭವಿಷ್ಯ
ಭವಿಷ್ಯ


ಆಕೆ ಆತುರಾತುರವಾಗಿ ಒಳ ನುಗ್ಗಿದಳು. ಕಾರಣ ಇಲ್ಲದಿಲ್ಲ. ಇತ್ತೀಚಿನ ದಿನಗಳಲ್ಲಿ ಅವಳಿಗೆ ಕೆಟ್ಟ ಕನಸು ಕಾಡುತ್ತಿತ್ತು. ಕನಸಿಗೆ ಪರಿಹಾರ ಬೇಕಿತ್ತು. ನಿದ್ದೆಯಿಲ್ಲದ ಹಲವಾರು ರಾತ್ರಿಗಳನ್ನು ಕಳೆದು ಹೈರಾಣಾಗಿದ್ದಳು. ಜ್ಯೋತಿಷಿಗಳಲ್ಲದೇ ಮತ್ತಾರು ತಾನೆ ಪರಿಹಾರ ನೀಡಲು ಸಾಧ್ಯ. ಅದಕ್ಕಾಗಿ ಯಾರಿಗೂ ಕಾಣದಂತೆ ಆಕೆ ಒಳಗೆ ನುಗ್ಗಿದ್ದು.
ಮಂದವಾದ ಬೆಳೆಕು. ಮಿನುಗುತ್ತಿರುವ ಕೆಂಪು ದೀಪ. ದೊಡ್ಡ ಚೇರಿನ ಮೇಲೆ ಕೂತು ಭೂತ ಕನ್ನಡಿ ಹಿಡಿದು ಏನೋ ಲೆಕ್ಕಾಚಾರ ಮಾಡುತ್ತಿರುವ ಜ್ಯೋತಿಷಿ. ಇವಳ ಬರುವನ್ನು ಗಮನಿಸಿದರೂ ಬಿಗುಮಾನದಿಂದ ತನ್ನ ಕೆಲಸದಲ್ಲಿ ನಿರತರಾಗಿದ್ದರು ಅವರು. ಈಕೆಯೇ ಅವರ ಗಮನವನ್ನು ಸೆಳೆದಳು,
ತ್ರಿಕಾಲ ಜ್ಞಾನಿಗಳಾದ ಜ್ಯೋತಿಷಿಗಳು ಕಣ್ಣು ತೆರೆಯುತ್ತಿದ್ದಂತೆ ಇವಳನ್ನು ನೋಡಿ “ನಿಮ್ಮ ಮುಖ ನೋಡಿದ ಕೂಡಲೆ ತಿಳಿಯಿತು. ನೀವು ಇದೇ ಮೊದಲ ಬಾರಿ ನನ್ನ ಬಳಿ ಬರುತ್ತಿರುವುದು. ನಿಮ್ಮ ಮುಖದಲ್ಲಿ ಆತಂಕವಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಭವಿಷ್ಯದ ಬಗ್ಗೆ ಚಿಂತೆಯಿದ್ದಂತೆ ಇದೆ. ನಿಮ್ಮ ಭವಿಷ್ಯದಲ್ಲಿ ಕರಾಳ ದಿನಗಳು ಎದುರಾಗುವ ಎಲ್ಲಾ ಲಕ್ಷಣಗಳೂ ಇದೆ. ಅದನ್ನು ನಿಮಗೆ ಹೇಗೆ ಹೇಳಬೇಕೋ ನನಗೆ ತಿಳಿಯುತ್ತಿಲ್ಲ. ಹೇಳಬೇಕಾದ್ದು ನನ್ನ ಕರ್ತವ್ಯ. ನೇರವಾಗಿ ಹೇಳುತ್ತೇನೆ. ಮನಸ್ಸು ಗಟ್ಟಿ ಮಾಡಿಕೊಳ್ಳಿ, ನಿಮ್ಮ ಜೀವನದಲ್ಲಿ ಬರ ಸಿಡಿಲು ಬಡಿಯುವ ಕಾಲ ಹತ್ತಿರ ಬರುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ನೀವು........ನೀವು...... ವಿಧವೆಯಾಗುತ್ತಿದ್ದೀರಿ”
ಜ್ಯೋತಿಷಿಯ ದೃಷ್ಟಿಯೆಲ್ಲಾ ಆಕೆಯ ಮೇಲೆ ನೆಟ್ಟಿತ್ತು. ವಿಷಯದ ಅಗಾಧತೆಯಿಂದ ಆಕೆಯ ಮನಸ್ಥಿತಿ ವಿಚಲವಾಗಿ ಕ್ಷಣಕಾಲ ಉದ್ವೇಗಕ್ಕೊಳಗಾಗುತ್ತಾಳೆ ಎಂದು ಅವರಿಗೆ ಅನ್ನಿಸಿತ್ತು. ನೀರಿನ ಲೋಟವನ್ನು ಆಕೆಯ ಮುಂದೆ ಸರಿಸಿದರು.
ಆಕೆ ವಿಚಲಿತಲಾದಂತೆ ಮೇಲ್ನೋಟಕ್ಕೆ ಕಂಡುಬಂದರೂ ಗಟ್ಟಿ ಹೃದಯದ ಹೆಣ್ಣು. ಯಾವ ರೀತಿಯಲ್ಲಿ ಪ್ರತಿಕ್ರಿಯಿಸಬೇಕೆಂಬುದರ ಬಗ್ಗೆ ಕೊಂಚ ಕಾಲ ತನ್ನಲ್ಲೇ ಚಿಂತಿಸಿದಳು. ಹಣೆಯ ಮೇಲೆ ಸಾಲು ಸಾಲು ಬೆವರಿನ ಹನಿ ಮೂಡಿತು. ಜ್ಯೋತಿಷಿಯನ್ನು ಒಮ್ಮೆ, ಕೆಂಪು ಬಣ್ಣದ ದೀಪವನ್ನು ಒಮ್ಮೆ, ತನ್ನ ಕೈಗಳನ್ನೇ ಒಮ್ಮೆ ನೋಡಿ ನಿಟ್ಟುಸಿರು ಬಿಟ್ಟು ಮುಖ ಒರೆಸಿಕೊಂಡು ಸೆರೆಗನ್ನು ಮತ್ತೊಮ್ಮೆ ಸರಿಯಾಗಿ ಹೊದ್ದು, ಗಂಟಲು ಸರಿಪಡಿಸಿಕೊಂಡು ಯಾವುದೇ ಉದ್ವೇಗವಿಲ್ಲದೆ,
“ಗುರುಗಳೇ ಆ ವಿಷಯ ಒತ್ತಟ್ಟಿಗಿರಲಿ. ನಾನು ತಮ್ಮ ಬಳಿಗೆ ಬಂದಿದ್ದು ಬೇರೆಯದೇ ವಿಷಯಕ್ಕೆ. ನನ್ನ......... ನನ್ನ ಪ್ರಶ್ನೆ.........ಏನೆಂದರೆ”
ಮಾತನ್ನು ನಿಲ್ಲಿಸಿದಳು. ಆಕಡೆ ಈಕಡೆ ತಿರುಗಿ ದೃಷ್ಟಿ ಹಾಯಿಸಿ ನೋಡಿ ಯಾರೂ ಇಲ್ಲದ್ದನ್ನು ಖಾತ್ರಿ ಪಡಿಸಿಕೊಂಡು, ತಾನು ಕುಳಿತಿದ್ದ ಸೀಟಿನಿಂದ ಕೊಂಚ ಮುಂದೆ ಬಾಗಿ, ಮೊಣಕೈಗಳನ್ನು ಟೇಬಲ್ ಮೇಲೆ ಊರಿ, ಅಂಗೈಯನ್ನು ಬಾಯಿಗೆ ಅಡ್ಡಲಾಗಿ ಹಿಡಿದು ಮೆಲುದನಿಯಲ್ಲಿ
“ನನ್ನ ಗಂಡನ ಕೊಲೆ ಕೇಸಿನಿಂದ ನಾನು ಆರೋಪ ಮುಕ್ತಳಾಗುತ್ತೇನೆಯೆ? ಎಂಬುದೇ ನನ್ನ ಪ್ರಶ್ನೆ?” ಎಂದಳು.