ನಂಬಿಕೆ ಎಂಬ ಮಂತ್ರ
ನಂಬಿಕೆ ಎಂಬ ಮಂತ್ರ


ತಮ್ಮ ಕಚೇರಿಯಲ್ಲೇ ಇದ್ದ ಒಬ್ಬನನ್ನು ಬಹಳ ಇಷ್ಟ ಪಟ್ಟು ಮದುವೆಯಾದ ಒಬ್ಬ ಹೆಂಗಸಿಗೆ ಮದುವೆಯ ನಂತರವೇ ತಿಳಿದದ್ದು ಪತಿ ಪಕ್ಕ ನಾಸ್ತಿಕ ಅಂತ. ಮೊದಲೆಲ್ಲಾ ದೇವಸ್ಥಾನಕ್ಕೆ ಹೆಂಡತಿ ಹೊರಟರೆ ನಾನು ಬರಕ್ಕೆ ಆಗಲ್ಲ ನೀನು ಬೇಕಾದರೆ ಹೋಗು ನನಗೆ ದೇವರಲ್ಲಿ ನಂಬಿಕೆ ಇಲ್ಲ ಎಂದು ಹೇಳಿದಾಗ ಆಯ್ತು ನಾನೇ ಹೋಗ್ತೀನಿ ಅಂತ ಹೇಳುತ್ತಿದ್ದವಳು ಕೆಲವು ದಿನಗಳು ಕಳೆದ ನಂತರ ಒಂದು ದಿನ ನಿಮ್ಮನ್ನ ದೇವಸ್ಥಾನಕ್ಕೆ ಬನ್ನಿ ಅಂತ ಎಂದೂ ಬಲವಂತ ಮಾಡಲ್ಲ ಆದರೆ ದೇವಸ್ಥಾನದ ಹತ್ತಿರ ಬನ್ನಿ ನಾನು ಒಳಗೆ ಹೋಗಿ ಬರ್ತೀನಿ ಆಮೇಲೆ ನಿಮ್ಮ ಅಮ್ಮನ ಮನೆಗೆ ಹೋಗೋಣ ಅಂದಾಗ ಆಯ್ತು ಅಂತ ರೆಡಿಯಾಗಿ ಬಂದ. ಇಬ್ಬರೂ ದೇವಸ್ಥಾನಕ್ಕೆ ಬಂದರು ಅಲ್ಲಿ ಚಪ್ಪಲಿ ನೋಡಿಕೊಳ್ಳವವನು ಇರಲಿಲ್ಲ .ಹೇಗಿದ್ದರೂ ನೀವು ಹೊರಗೆ ಇರ್ತಿರಿ ಇಲ್ಲೇ ಚಪ್ಪಲಿ ಬಿಟ್ಟು ಹೋಗ್ತೀನಿ, ಹತ್ತೇ ನಿಮಿಷ ಬಂದು ಬಿಡ್ತೀನಿ ಅಂತ ಅಲ್ಲೇ ಬಿಟ್ಟು ಹೋದಳು. ಆಗ ಚಪ್ಪಲಿಯ ಹತ್ತಿರ ನಿಂತು ಕಾವಲು ಕಾಯುತ್ತಿದ್ದಾಗ ಮತ್ತೆ ಇಬ್ಬರು ಬಂದು ಚಪ್ಪಲಿ ಬಿಟ್ಟು ಟೋಕನ್ ಕೊಡಿ ಅಂತ ಕೇಳಿದಾಗ ಇವನಿಗೆ ಬಹಳ ಕೋಪ ಬಂದು ಬೈದುಬಿಟ್ಟ. ಹೆಂಡತಿ ಬಂದೊಡನೆ ವಿಷಯ ತಿಳಿಸಿ ಇನ್ನೆಂದೂ ಬರುವುದಿಲ್ಲವೆಂದು ಹೇಳಿದ.
ಹೀಗೆ ಕೆಲವಾರು ದಿನ ಕಳೆದು ಒಂದುದಿನ ಹೊರಗೆ ನಿಂತರೆ ನಿಮಗೆ ಅವಮಾನ ಆಗಬಹುದು ದೇವರಲ್ಲಿ ನಿಮಗೆ ನಂಬಿಕೆ ಇಲ್ಲದಿದ್ದರೆ ಬೇಡ .ಒಳಗೆ ಬಂದು ನಿಮ್ಮ ಪಾಡಿಗೆ ನೀವು ಸುಮ್ಮನೆ ಕೂತಿರಿ . ನಮಸ್ಕಾರ ಹಾಕಿ ಬರ್ತೀನಿ ಅಲ್ಲಿಂದ ಸಿನಿಮಾಗೆ ಹೋಗೋಣ ಅಂದದ್ದಕ್ಕೆ ಒಪ್ಪಿ ಬಂದ. ಒಳಗೆ ಬಂದು ಒಂದು ಕಡೆ ಸುಮ್ಮನೆ ಕುಳಿತಾಗ ಯಾರೋ ಎಲ್ಲರಿಗೂ ಪ್ರಸಾದ ಕೊಡುವಾಗ ಇವನಿಗೂ ಕೊಟ್ಟರು ಬೇಡ ಎನ್ನಲು ಆಗದೆ ತಿಂದ . ತುಂಬ ರುಚಿಯಾಗಿತ್ತು ಹೆಂಡತಿಗೆ ಹೇಳಲಿಲ್ಲ.ಮತ್ತೊಂದು ದಿನ ಇದೇರೀತಿ ಬಂದಾಗ ಹೇಳಿದಳು ನಿಮಗೆ ದೇವರಲ್ಲಿ ನಂಬಿಕೆ ಇಲ್ಲ ಅಂತ ಗೊತ್ತಿದೆ, ನೀವು ಎಲ್ಲರಂತೆ ಬೆಳಗ್ಗೆ ವಾಕ್ ಹೋಗಲ್ಲ ಮೂರು ಪ್ರದಕ್ಷಿಣೆ ಹಾಕಿ ನಮಸ್ಕಾರ ಮಾಡಿ. ನಮ್ಮಂತ
ೆ ನೀವು ದೇವರಲ್ಲಿ ಏನು ಬೇಡಬೇಡಿ ಅಂದಳು. ಅದೂ ಸರಿ ಅಂತ ಒಪ್ಪಿ ಬೆಳಗ್ಗೆ ಬಂದು ದಿನಾ ಪ್ರದಕ್ಷಿಣೆ ನಮಸ್ಕಾರ ಮಾಡ್ತಿದ್ದ. ಒಂದುದಿನ ಒಳಗೆ ಉತ್ಸವ ಹೊರಲು ಜನ ಬೇಕಿತ್ತು ಅಲ್ಲಿದ್ದ ಒಬ್ಬರು ಬಂದು ಬನ್ನಿ ಅಂತ ಕರೆದರು.ಆಗಲ್ಲ ಅಂತ ಹೇಳಲಾಗದೆ ಮುಂದುಗಡೆ ನಿಂತು ಉತ್ಸವ ಹೊತ್ತ . ಯಾರೋ ಹಣೆಗೆ ವಿಭೂತಿ ಹಚ್ಚಿದರು. ಕಸಿವಿಸಿಯಾದರೂ ಸುಮ್ಮನಿದ್ದ .ಕಾರ್ಯಕ್ರಮದ ನಂತರ ಪ್ರಸಾದ ಕೊಟ್ಟರು .ಅಷ್ಟೊಂದು ತಿನ್ನಲು ಆಗದೆ ಮನೆಗೆ ತಂದ. ಹೆಂಡತಿ ಅವನ ಹಣೆಯಲ್ಲಿ ವಿಭೂತಿ ಕೈಯ್ಯಲ್ಲಿ ಪ್ರಸಾದ ನೋಡಿ ನಕ್ಕು ಸುಮ್ಮನಾದಳು.
ಮಾರನೇ ದಿನ ಎಂದೂ ದೇವರನ್ನ ನೊಡದವನು ಅಂದು ಯಾಕೆ ಇಷ್ಟು ಜನ ಈ ಒಂದು ಕಲ್ಲಿನ ಮೂರ್ತಿಗೆ ನಮಸ್ಕಾರ ಮಾಡ್ತಾರೆ, ಏನೋ ಬೇಡ್ಕೋತಾರೆ ಅಂತ ಕುತೂಹಲವಾಗಿ ತಾನೂ ಎಲ್ಲರಂತೆ ನೋಡುತ್ತಾ ನಿಂತ.ಏನೂ ಅನಿಸಲಿಲ್ಲ. ಒಂದು ದಿನ ಅವನ ತಂದೆಗೆ ರಸ್ತೆ ಆಫಗಾತದಲ್ಲಿ ಬೆನ್ನುಮೂಳೆ ಮುರಿದ ವಿಷಯ ತಿಳಿಯಿತು.ಹೆಂಡತಿಗೆ ತಿಳಿಸಿ ಆಸ್ಪತ್ರೆಗೆ ಹೋಗಿ ಬರೋಣವೆಂದ. ಹೋಗೋಣ ಅದಕ್ಕೆ ಮೊದಲು ನಾನು ನಂಬಿರುವ ದೇವರ ಹತ್ತಿರ ಹೋಗಿ ಬರ್ತೀನಿ . ನಿಮ್ಮ ತಂದೆಗೆ ಒಳ್ಳೆಯದಾಗುತ್ತೆ ಅಂದಳು. ಆಯ್ತು ನೀನು ಹೊರಡು ನಾನು ಅಲ್ಲಿಗೆ ಬರ್ತೀನಿ ಅಂದ . ದೇವರ ಬಳಿ ಕೂತು ಎದ್ದು ಬಂದು. ಹೊರಗೆ ಬಂದಾಗ ಹೆಂಡತಿಯನ್ನ ಕೇಳಿದ ನಿನಗೆ ಅಷ್ಟೊಂದು ನಂಬಿಕೆ ಇರೋದು ಬಹಳ ಆಶ್ಚರ್ಯ. ನನಗೇಕೋ ಆರೀತಿ ನಂಬಿಕೆ ಬರ್ತಿಲ್ಲ ಅಂದ. ಅದಕ್ಕವಳು ಪರವಾಗಿಲ್ಲ ನನ್ನ ನಂಬಿಕೆಯಿಂದಲೇ ನಿಮಗೂ ನಿಮ್ಮ ಮನೆಯವರಿಗೂ ಒಳ್ಳೆಯದಾದರೆ ಅಷ್ಟೇ ಸಾಕು ಅಂದಾಗ ಅವನ ಮನಸ್ಸಿನಲ್ಲಿ ಒಂದು ಬದಲಾವಣೆ ಗೋಚರವಾಯಿತು. ಜೀವನದಲ್ಲಿ ನಂಬಿಕೆ ಎನ್ನುವುದು ಎಷ್ಟು ಮುಖ್ಯ ಅಂತ ಯೋಚಿಸ ತೊಡಗಿದ. ಆಸ್ಪತ್ರೆಗೆ ಬಂದರು .ತಂದೆ ಮಗನನ್ನ ನೋಡಿ ಸಂತೋಷಪಟ್ಟರು. ತಮ್ಮನ್ನ ನೋಡಲು ಬಂದಿದ್ದಕ್ಕೆ ಅಲ್ಲ ಅವನ ಹಣೆಯಲ್ಲಿನ ವಿಭೂತಿ ನೋಡಿ.ಅಂದಿನಿಂದ ನಂಬಿಕೆ ಬೆಳೆಸಿಕೊಂಡು ಆ ದೇವರ ಪರಮ ಭಕ್ತನಾದ.