ನಂ. ೨೨೧ ಬುಲ್ ಟೆಂಪಲ್ ರೋಡ್
ನಂ. ೨೨೧ ಬುಲ್ ಟೆಂಪಲ್ ರೋಡ್


ನಂ. ೨೨೧ ಬುಲ್ ಟೆಂಪಲ್ ರೋಡ್ ಈ ಅಡ್ರೆಸ್ ಹಿಡ್ಕೊಂಡು ನವೀನನ್ನ ಹುಡುಕ್ಕೊಂಡು ಹೋರಟೆ. ನಾವಿಬ್ಬರು ಷರ್ಲಾಕ್ ಹೋಮ್ಸ್ ನ ಅಭಿಮಾನಿಗಳಾದ್ದರಿಂದ ಅವನು ಅಷ್ಟೇ ಅಡ್ರೆಸ್ ನೀಡಿದ್ದ. ರಿಯಲ್ ಲೈಫನಲ್ಲೂ ಸಲ್ಪ ಡಿಟೆಕ್ಟಿವ್ ಕೆಲಸ ಮಾಡು ಅಂತ ಅಂದಿದ್ದ. ಮಾಡಿದ್ದೇನು ಇಲ್ಲ, ಆಶ್ರಮ ಸರ್ಕಲನಿಂದ ಮನೆ ನಂಬರ್ ನೋಡುತ್ತಾ ಬಂದೆ, ನಂ. ೨೦೫ ಅಂತ ಕಾಣಿಸ್ತು. ಅಲ್ಲೇ ಪಕ್ಕದ ಅಂಗಡಿಯಲ್ಲಿ ಕೇಳಿದೆ "ಇಲ್ಲಿ ಬಾಯ್ಸ್ PG ಯಾವ್ದಾದ್ರು ಇದೆಯಾ ಅಂತ".
ಅವನು " ಓ ಅಲ್ಲಿ ಜೇನು ಗೂಡು ಕಾನಣಿಸ್ತಿದೆಯಲ್ಲ ಅದೇ ಬಿಲ್ಡಿಂಗ್" ಅಂದ.
ಅದು ಚಾಮರಾಜಪೇಟೆ ಉಮ ಟಾಕೀಸಿನ ಪಕ್ಕದ ಬಿಲ್ಡಿಂಗ್ ಆಗಿತ್ತು.
ಸಿಟಿಯಲ್ಲಿ ಏನು ಜೇನು ಗೂಡು ಎಂದುಕೊಂಡು ಬಿಲ್ಡಿಂಗ್ ಒಳಗೆ ಬಂದೆ. ನವೀನ ಅಂತ ಉದ್ದ ಇದಾನೆ ಇಂಜಿನಿಯರ್, ಅವನ ರೂಮ್ ಯಾವುದು ಅಂತ ಕೇಳಿದೆ. ಮೂರನೇ ಮಹಡಿ ಮೊದಲನೇ ರೂಮ್ ಅಂತ ಗೊತ್ತಾಯ್ತು. ಗೆಲುವಿನ ಉತ್ಸಾಹದಲ್ಲಿ ರೂಮ್ ಹೊಕ್ಕರೆ ನವೀನ ಇರಲಿಲ್ಲ.
"ನವೀನ ಸ್ನಾನಕ್ಕೆ ಹೋಗಿದ್ದಾನೆ" ಅಂತ ಅಲ್ಲಿದ್ದವನು ಹೇಳಿದ.
ಇವನು ರೋಮ್ ಮೇಟ್ ಇರಬೇಕು ಅಂದುಕೊಂಡೆ. ನನ್ನ ಇರುವನ್ನು ಅವನು ಪರಿಗಣನೆಗೆ ತೆಗೆದುಕೊಳ್ಳಲಿಲ್ಲ. ಮಂಚದಮೇಲೆ ಬಿದ್ದುಕೊಂಡಂತೆ ಕುಳಿತಿದ್ದ. ಎದೆ ಮೇಲೆ ಲ್ಯಾಪ್ಟಾಪ್ ಇಟ್ಟುಕೊಂಡು ಏನೋ ನೋಡುತ್ತಿದ್ದ. ಭಾನುವಾರದ ಎಲ್ಲಾ ಸೋಮಾರಿತನ ಇವನ ಮೈಹೊಕ್ಕಂತಿತ್ತು. ನಾನು ಅವನೊಡನೆ ಮಾತು ಬೇಡವೆನ್ನುವಂತೆ ನವೀನನ ಮಂಚದ ಮೇಲೆ ಕುಳಿತೆ. ಅವನ ಲ್ಯಾಪ್ಟಾಪ್ ನಿಂದ ಬಂದ ಮ್ಯೂಸಿಕ್ ಕೇಳಿ ಗೊತ್ತಾಯ್ತು ಇದು BBC Sherlock ಅಂತ.
ನನಗೆ ಅರಿವಿಲ್ಲದೆ ಉತ್ಸಾಹದಿಂದ ಕೇಳಿದೆ "Sherlock ತಾನೇ?".
ಅವನು ನಿಧಾನವಾಗಿ ಎದ್ದು "ನೋಡ್ತಿರಾ ಎಂದ ?".
ನಾನು ಎಚ್ಚೆತ್ತುಕೊಂಡು ನಿರುತ್ಸಾಹತೋರಿ "ಛೆ ಛೆ, ನನಗೆ ಪ್ರತಿ ಎಪಿಸೋಡ್ ನ ಪ್ರತಿ ಡೈಲಾಗ್ ಗೊತ್ತು"ಎಂದೆ.
ಅದಕ್ಕವನು "ನಾನು ಎಷ್ಟೋ ಸಾರಿ ನೋಡಿದೀನಿ" ಎಂದ.
ಅದಕ್ಕೆ ನಾನು "ನೀವೆಲ್ಲ ಈಗ ಸೀರೀಸ್ ನೋಡೋರು, ನಾವು ಯಾವ್ದೋ ಕಾಲದಲ್ಲಿ ಷರ್ಲಾಕ್ ಕತೆ ಕಾದಂಬರಿ ಓದಿದಿವಿ" ಎಂದೇ.
ಅವನು ಇನ್ನು ಹೆಚ್ಚಿನ ಉತ್ಸಾಹದಿಂದ ಲ್ಯಾಪ್ಟಾಪ್ ತೆಗೆದು ಟೇಬಲ್ ಮೇಲಿಟ್ಟ "ಹಾಗಾದರೆ ನಿಮಗೆ Science of Deduction ಬಗ್ಗೆ ಬಹಳ ಗೊತ್ತಿರತ್ತೆ" ಎಂದ.
"ಹೌದು ನಾನು ನವೀನ ಎಷ್ಟ್ ಸಾರಿ ಹಿಂಗೆ ಯಾರನ್ನಾರು ನೋಡಿ deduce ಮಾಡಿದಿವಿ ಗೊತ್ತ ?" ಸಲ್ಪ ಸಿಟ್ಟಿನಲ್ಲಿ ಹೇಳಿದೆ.
"ಹಾಗಾದರೆ ನನ್ನ ನೋಡಿ deduce ಮಾಡಿ" ನವೀನನ ಚಾಲೆಂಜ್ ಏನು ಅಲ್ಲ ಅನ್ನೊಥರ ಹೇಳಿದ.
ದೀರ್ಘವಾಗಿ ಒಂದು ಉಸಿರೆಳೆದುಕೊಂಡು ಗಮನವಿಟ್ಟು ಅವನನ್ನ, ಅವನ ಟೇಬಲ್, ಮಂಚ, ಕಬೋರ್ಡ್, ನೆತುಹಾಕಿರೋ ಬಟ್ಟೆ ಎಲ್ಲವನ್ನು ನೋಡಿದೆ.
"ನೀನು Chartered Accountant"
"ನವೀನ ಹೇಳಿರ್ತಾನೆ"
"ಹೇಳಿದ್ದು ನವೀನ ಅಲ್ಲ. ಟೇಬಲ್ ಮೇಲಿರೋ CA ಮ್ಯಾಗಜಿನ್"
"ಒಹ್, ಇದು ತುಂಬಾ ಸುಲಭ ಇತ್ತು "
"ನೀನು LLB ಕೂಡ ಮಾಡ್ತಿದೀಯ"
"ಲಕ್ಕಿ ಗೆಸ್"
"ಗೆಸ್ ಅಲ್ಲ, ನೆಲದ ಮೇಲೆ ಬಿದ್ದಿರೋ ಕೊಶ್ಚನ್ ಪೇಪರ್ June 2019 Cr.PC"
"ಹ್ಮ್.. you are good"
"ನಿಂದು ಸ್ವಂತ ಆಫೀಸ್ ಇದೆ ಚಾಮರಾಜಪೇಟೆಲ್ಲಿ"
" very good ಹೇಗ್ ಗೊತ್ತಾಯ್ತು"
"ನಿನ್ನ ಲ್ಯಾಪ್ಟಾಪ್ ನಲ್ಲಿ tally softwareಗೆ shortcut ಇದೆ. Desktopನಲ್ಲಿ ಬಹಳಷ್ಟು Excel ಫೈಲ್ಗಳಿವೆ. ಅಂದರೆ ಇದು ಕೆಲಸಕ್ಕೆ ಉಪಿಯೊಗಿಸೊ ಲ್ಯಾಪ್ಟಾಪ್. ಆದರೆ background ಹೀರೋಯಿನ್ ಫೋಟೋ"
"ok ಇದರಿಂದ ನಾನು Practice ಮಾಡ್ತಿರೋದು ಅಂತ ಹೇಗೆ ಗೊತ್ತಾಯ್ತು ?"
" Background ನಿನಗೆ ಬೆಕಾಧಂಗೆ, ಅಂದರೆ ಇದು ನಿನ್ನ ಸ್ವಂತದ ಲ್ಯಾಪ್ಟಾಪ್. ಇದರಲ್ಲೇ ಕೆಲಸ ಮಾಡ್ತಿಯ ಅಂದರೆ ಇದು ನಿನ್ನ ಸ್ವಂತ ಉದ್ಯೋಗ. ಈ PGಲ್ಲಿ
ಇದ್ದೀಯ ಅಂದರೆ ಇಲ್ಲೇ ಎಲ್ಲೋ ಆಫೀಸ್ ಇರತ್ತೆ "
"Awesome..... ಇನ್ನೇನಾದ್ರು ?"
"ನಿಂಗೆ ಯಾರು girlfriend ಇಲ್ಲ "
"ಇದು ಹೇಗೆ ಹೇಳಿದ್ರಿ ಅಂತ ನಂಗೆ ಗೊತ್ತು. ಲ್ಯಾಪ್ಟಾಪ್ ನಲ್ಲಿ ಹೀರೊಇನ್ ಫೋಟೋ ಇದೆ ಅಂತ ಅಲ್ವ ?"
"ಅಲ್ಲ, ನಿನ್ನ ಜೀವನದಲ್ಲಿ ಯಾವುದಾದರು ಹುಡುಗಿ ಇರೋದು ಹೌದಾದ್ರೆ ನಿನ್ನ ಹೀಗೆ ಇರೋಕ್ಕೆ ಬಿಡ್ತಿದ್ಲಾ ? ಗಡ್ಡ ತೆಗೆದು ಹದಿನೈದು ದಿನಾನಾದ್ರು ಆಗಿದೆ. ಕಟಿಂಗ್ ಮಾಡಿಸಿ ವರ್ಷಾನೇ ಆಗಿರ್ಭೋದು "
"ಕರ್ರೆಕ್ಟಾಗೆ ಹೇಳಿದ್ರಿ, ಆದರು ಒಂದು ಮಿಸ್ಟೇಕ್ "
" ಏನ್ ಮಿಸ್ಟೇಕ್, ನನ್ನ ಬಗ್ಗೆ ಒಂದೇ ಒಂದು ವಿಷ್ಯ ಹೇಳು ನೋಡಣ"
" ಬಾಸ್ ನೀವು ಇದನ್ನೆಲ್ಲಾ ನೋಡಿಕೊಂಡು ಹೇಳಿದ್ರಿ, ನಾನು ಹೇಗೆ ಹೇಳಲಿ ?"
" ಎಂಥ ಫ್ಯಾನ್ ನೀನು, ಷರ್ಲಾಕ್ ಕ್ರೈಂ ಸೀನ್ ನೋಡಿ ಕೊಲೆಗಾರನ ಹೈಟ್, ಮುಖಚರ್ಯೆ ಎಲ್ಲ ಹೇಳ್ತಾನೆ ನಾನೇ ನಿಂತಿಲ್ವ ನಿನ್ ಎದ್ರಿಗೆ ?"
"ಆಯ್ತು ಟ್ರೈ ಮಾಡ್ತೀನಿ"
ಅವನು ನನ್ನಂತೆ ದೀರ್ಘವಾದ ಉಸಿರೆನು ತೆಗೆದುಕೊಳ್ಳಲಿಲ್ಲ, ಏನೋ ಯೋಚಿಸಿ ಹೇಳಿದ "ನೀವು ನವೀನನ ಜೊತೆ 'ರಂಗಿತರಂಗ' ಫಿಲಂಗೆ ಹೋಗ್ತಿದೀರ".
"ಎಲ ಬಡ್ಡಿ ಮಗನೆ" ಎಂಬ ಉದ್ಗಾರ ಮನಸ್ಸಿನಲ್ಲಿ ಮೂಡಿತಾದರೂ ನಾಲಗೆಯನ್ನು ತಲುಪಲಿಲ್ಲ. ಆದ ಆಶ್ಚರ್ಯವನ್ನು ತೋರಿಸದೆ "ತಪ್ಪು, ಆದರು ಹೆಂಗೆ ಅಂತ ಹೇಳು" ಎಂದೆ.
"ನವೀನ ಭಾನುವಾರ ಹನ್ನೊಂದು ಘಂಟೆ ಮುಂಚೆ ಎದ್ದಿದ್ದಾನೆ ಅಂದರೆ ಎಲ್ಲಿಗೋ ಹೋಗ ಬೇಕು ಅಂತ. breakfast, lunch ಇದೆರಡರದ್ದು ಟೈಮ್ ಅಲ್ಲ. ದೂರ ಎಲ್ಲು ಹೋಗೋ ತಯ್ಯಾರಿನೂ ಇಲ್ಲ. Shopping ಹೊಗೊದಾಗಿದ್ರೆ ಎದ್ದ ತಕ್ಷಣ ಲೇಟ್ ಆಯ್ತು ಅಂತ ಸ್ನಾನಕ್ಕೆ ಓಡುತ್ತಿರಲಿಲ್ಲ,"
"ಆಯ್ತು ಮೂವಿಗೆ ಅನ್ನೋದು ಓಕೆ, ಆದರೆ ರಂಗಿತರಂಗ ಅಂತ ಹೇಗೆ ಹೇಳಿದ್ಯ?"
"ಊರತುಂಬ ಎಲ್ಲ ಟಾಕಿಸ್ನಲ್ಲೂ ಬಾಹುಬಲಿ. ಆದರೆ ನವೀನ ತಮಿಳ್ ತೆಲಗು ಫಿಲಂ ನೋಡೊದಿರ್ಲಿ, ಬೇರೆಯವರು ಇಷ್ಟಪಟ್ಟು ನೋಡಿದರು ಬೈಯ್ತಾನೆ ಕನ್ನಡ ನೋಡ್ರೋ ಅಂತ. ಇನ್ನು bollywood ಫಿಲಂ remake ಫಿಲಂ ಅವನು ನೋಡಲ್ಲ. ಇಂಗ್ಲಿಷ್ ಫಿಲಂ Terminator ಹೋದವಾರ ನೋಡಿದಾನೆ. ಹಂಗಾಗಿ ಬೇರೆ ಯಾವುದು ಅಲ್ಲ ರಂಗಿತರಂಗನೆ"
"ತಪ್ಪೇ ತಪ್ಪು. ನಾವು ಹೋಗ್ತಿರೋದು....... " ಎನ್ನುವಷ್ಟರಲ್ಲಿ ನವೀನ T - Shirt ಕೆಳಗೆ ಟವೆಲ್ ಸುತ್ತಿಕೊಂಡು ಬಂದ. ಅವನ ಎತ್ತರಕ್ಕೆ ಆ ಟವೆಲ್ ಮಂಡಿಯವರೆಗೂ ಬರುತ್ತಿರಲಿಲ್ಲ. "ಒಹ್, ಬಂದಿದಿಯಾ ಒಳ್ಳೇದು. ಲೆಟಾಗ್ಹೋಗಿದೆ" ಎಂದು ಲಗುಬಗೆ ಇಂದ ಟವೆಲ್ ಧರಿಸಿದ್ದಂತೆಯೇ ಪ್ಯಾಂಟ್ನೊಳಗೆ ಕಾಲು ತೋರಿಸಿದ. ಪ್ಯಾಂಟ್ ಮೇಲಕ್ಕೇರಿಸಿ ಟವೆಲ್ ಎಳೆದು ಮಂಚದ ಮೇಲೆ ಬಿಸಾಕಿದ. ಕೈಯಿಂದಲೇ ತಲೆ ಬಾಚಿ, ಜೇಬಿಗೆ ವಾಲೆಟ್ ತುರುಕಿ ಮೊಬೈಲ್ ಹಿಡಿದು ಹೊರಟ "ನಡಿ ನಡಿ ನಡಿ, ಸ್ಟಾರ್ಟಿಂಗ್ ಮಿಸ್ ಆಗತ್ತೆ"
ನವೀನನ ರೂಮ್ ಮೇಟ್ ಗೆ bye ಹೇಳಬೇಕೋ ಬೇಡವೋ ಅನ್ನೋ ಯೋಚನೆಯಲ್ಲೇ ಹೊರಗೆಬಂದೆ. ಅವನ ಮುಖವನ್ನು ನೋಡಲೇ ಇಲ್ಲ. ಏನೋ ಒಂಥರಾ ಸೋತ ಅನುಭವ ಆಯಿತು. ಮೆಟ್ಟಿಲು ಇಳಿಯುವಾಗ ನವೀನನಿಗೆ ಕೇಳಿದೆ "ನಿನ್ನ ರೋಮ್ ಮೇಟ್ ಗೆ ಹೇಳಿದ್ಯ ರಂಗಿತರಂಗಕ್ಕೆ ಹೋಗ್ತೀನಿ ಅಂತ ?"
"ಅವನಿಗೆ ಹೆಂಗ್ ಹೇಳಲಿ, ಅವನು ಶುಕ್ರವಾರನೇ ಊರಿಗೆ ಹೋದ"
"ಮತ್ತೆ ರೂಮಲ್ಲಿದ್ದೋನು ?"
"ಅವನಾ ? ಶ್ರೀವತ್ಸ ಅಂತ. ಪಕ್ಕದ ರೂಮಲ್ಲಿರ್ತಾನೆ."
"ನಿನ್ ರೂಮಲ್ಲಿ ಬಿದ್ಕೊಂಡಿದ್ದ"
"MD Entrance ಗೆ ಓದ್ತಿದಾನೆ. ಓದಿ ಓದಿ ತಲೆ ಕೆಟ್ರೆ ನಮ್ ರೂಮಿಗ್ ಬರ್ತಾನೆ ಅಷ್ಟೇ"
"ಹಂಗಾದ್ರೆ ಅವನು ಡಾಕ್ಟ್ರಾ ?" ಮತ್ತೊಮ್ಮೆ ಸೋತ ಅನುಭವವಾಯಿತು
"ಹು, ಮಜಾ ಕೇಳು. ಎಲ್ಲರು ಅವನಿಗೆ ವತ್ಸ ವತ್ಸ ಅಂತ ಕರೀತಾರೆ. ನಾನ್ ಮಾತ್ರ ಅವನಿಗೆ Watson ಅಂತ ಕರೀತೀನಿ"
"Watson ಅಲ್ಲ ಷರ್ಲಾಕ್ ಅಂತ ಕರೀ" ಮತ್ತೊಮ್ಮೆ ಮಾತು ಮನಸ್ಸಿನಲ್ಲಿ ಮೂಡಿದರು ನಾಲಗೆ ತಲುಪಲಿಲ್ಲ.