ವಿದ್ಯಾತನಯ ವಿವೇಕ

Drama Romance Classics

4  

ವಿದ್ಯಾತನಯ ವಿವೇಕ

Drama Romance Classics

ನನ್ನವನವನು

ನನ್ನವನವನು

4 mins
417


ಮೇಘ...


ಕೆಂಪು ಬಣ್ಣದ ಬಟ್ಟೆಯೇ ಸರಿ ಎಂದುಕೊಳ್ಳುತ್ತಾ ಜೀನ್ಸ್ ಮೇಲೆ ಕೆಂಪು ಟಾಪ್ ಧರಿಸಿದೆ. ಕನ್ನಡಿಯಲ್ಲಿ ನನ್ನನ್ನು ನಾನು ನೋಡಿಕೊಂಡೆ, ರಾಮ್ ಕಣ್ಣುಗಳಿಗೆ ಕೂಡ ನಾನು ಇಷ್ಟೇ ಸುಂದರವಾಗಿ ಕಾಣುತ್ತೇನೆ ಅಲ್ಲವೇ ಎಂದುಕೊಂಡೆ. ಗಡಿಯಾರದ ಕಡೆಗೆ ನೋಡಿದೆ, ಸಿನೆಮಾಕ್ಕೆ ಇನ್ನೂ ಸಾಕಷ್ಟು ಸಮಯವಿತ್ತು. ಇಷ್ಟು ಬೇಗ ತಯಾರಾದರೆ ರಾಮ್ ನನ್ನು ಭೇಟಿಯಾಗುವ ಹೊತ್ತಿಗೆ ಮುಖ ಬಾಡುತ್ತದೆ, ಬಟ್ಟೆಯ ತಾಜಾತನ ಕಡಿಮೆಯಾಗುತ್ತದೆ. ಬಟ್ಟೆ ಬದಿಲಿಸಿ ಸುಮ್ಮನೆ ಕಿಟಕಿಯಿಂದ ಹೊರಗೆ ನೋಡುತ್ತಾ ಕುಳಿತೆ.


ಮೊದಮೊದಲಿಗೆ ರಾಮ್ ನಿಂದ ಸ್ವಲ್ಪ ಇರಿಟೇಟ್ ಆಗುತ್ತಿತ್ತು. ಹನ್ನೆರಡು ಜನ ಸ್ನೇಹಿತರ ಗುಂಪಿನಲ್ಲಿ ಅವನೂ ಒಬ್ಬನಾಗಿದ್ದರೂ ಸಹ ನನಗೆ ಅವನೊಂದಿಗೆ ಹೆಚ್ಚಿನ ಸಲಿಗೆ ಇರುತ್ತಿರಲಿಲ್ಲ. ಪ್ರತಿ ಮಾತಿನಲ್ಲೂ ಹಾಸ್ಯ ಮಾಡುತ್ತಿದ್ದ. ಲ್ಯಾಬ್ ತರಗತಿಗಳಿಗೆ ನಾವಿಬ್ಬರೇ ಜೊತೆಗಾರರಾದಾಗ ಬೇರೆ ಯಾರಾದರೂ ಸಿಗಬಾರದಿತ್ತೆನಗೇ ಎಂದು ಕೂಡ ಅನ್ನಿಸಿತ್ತು. ಅದೊಂದು ದಿನ ನಮಗೆ ನೀಡಿದ್ದ ಕೆಲಸದಲ್ಲಿ ಎಡವಟ್ಟಾಗಿತ್ತು. ವೀಕ್ಷಿಸಲು ಬಂದ ಪ್ರಾಧ್ಯಾಪಕರನ್ನು ಅದು ಹೇಗೋ ಮಾತಿನಲ್ಲಿ ಯಾಮಾರಿಸಿದ ಅವನು, ಅವರು ಹೊರಟು ಹೋಗುತ್ತಿದ್ದಂತೆಯೇ ನನ್ನ ಕಡೆ ನೋಡುತ್ತಾ ಎಡಗಣ್ಣು ಮಿಟುಕಿಸಿ ನಸುನಕ್ಕ.


ಅಷ್ಟೆ...


ಆ ಕ್ಷಣದಿಂದ ನಾನು ಕಳೆದುಹೋದೆ. ಅಂದು ತರಗತಿ ಮುಗಿಯುವವರೆಗೂ ಕದ್ದು ಕದ್ದು ಅವನನ್ನೇ ನೋಡುತ್ತಿದ್ದೆ. ಎಂತಹ ಸುಂದರ ಅವನು ಎಂದು ಅನಿಸಿತ್ತು. ಸಂಜೆ ಕಾಲೇಜಿನಿಂದ ಮರಳುವಾಗಲೂ ಸಹ ಅವನದೇ ಧ್ಯಾನದಲ್ಲಿ ಗಾಡಿ ಓಡಿಸಿ ಆಟೋ ಚಾಲಕನೊಬ್ಬನಿಂದ 'ನೋಡ್ಕೊಂಡ್ ವೋಗಮ್ಮೋ' ಎಂದು ಬೈಸಿಕೊಂಡಿದ್ದೆ. ಅಂದು ರಾತ್ರಿ ಮಲಗಿದಾಗ ಕಣ್ಣು ಮುಚ್ಚಿದರೆ ಸಾಕು ರಾಮ್ ನನ್ನ ಕಡೆ ಕಣ್ಣು ಮಿಟುಕಿಸುತ್ತಿದ್ದ ನಸುನಗುತ್ತಿದ್ದ. ಪ್ರತಿ ಬಾರಿಯೂ ನನ್ನಲ್ಲಿ ಪುಳಕವಾಗುತ್ತಿತ್ತು.


ಮರುದಿನದಿಂದ ನಾನವನನ್ನು ನೋಡುವ ರೀತಿಯೇ ಬದಲಾಗಿ ಹೋಯ್ತು. ಅವನು ಉಳಿದ ಹನ್ನೊಂದು ಜನ ಸ್ನೇಹಿತರಲ್ಲಿ ಒಬ್ಬನಾಗಿರಲಿಲ್ಲ. ಯಾವಾಗಲೂ ಅವನ ಜೊತೆಗಿರಲು ಪರಿತಪಿಸುತ್ತಿದ್ದೆ. ಆದರೆ ಇದು ಯಾರಿಗೂ ತಿಳಿಯಬಾರದು ಎಂಬಂತೆ ಜಾಗರೂಕತೆಯನ್ನು ಸಹ ವಹಿಸುತ್ತಿದ್ದೆ. ಪ್ರಯೋಗಾಲಯದಲ್ಲಿ ಅವನೆದುರಿಗೆ ಇದ್ದಾಗ ಮತ್ತೊಮ್ಮೆ ಅವನು ಹಾಗೆ ಕಣ್ಣು ಹೊಡೆಯಬಾರದೆ ಎಂದು ಕಾಯುತ್ತಿದ್ದೆ. ಅವನು ನೋಡದಿದ್ದಾಗ ಅವನನ್ನೇ ನೋಡುತ್ತಿದ್ದೆ. ನಾನೇ ಅವನಿಗೆ ಹಾಗೆ ಕಣ್ಣು ಹೊಡೆಯಲೇ ಎಂದುಕೊಳ್ಳುತ್ತಿದ್ದೆ.


ಆಗೀಗ ಅವನಿಗೆ ಹತ್ತಿರಾಗಲು ನಾಟಕವನ್ನು ಸಹ ಮಾಡುತ್ತಿದ್ದೆ. ಅದೊಂದು ದಿನ ಕಾಲೇಜು ಮುಗಿಸಿ ಮನೆಗೆ ಹೊರಡುವಾಗ ಸ್ಕೂಟಿ ನಿಲ್ಲಿಸಿ ಸುಮ್ಮನೆ ಅದರ ಪಕ್ಕ ನಿಂತಿದ್ದೆ. ಮನೆಗೆ ಹೊರಡುತ್ತಿದ್ದ ಇತರ ಸ್ನೇಹಿತರು ಏನಾಯ್ತು ಎಂದು ಕೇಳಿದರೆ 'ಏನಿಲ್ಲ' ಎಂದೆ. ರಾಮ್ ಬಂದು ಕೇಳಿದಾಗ "ಯಾಕೋ ಸ್ಟಾರ್ಟ್ ಆಗ್ತಾ ಇಲ್ಲ ಕಿಕ್ ಮಾಡಬೇಕು." ಎಂದು ಹೇಳಿದೆ. ಅವನು ಸ್ಕೂಟಿಯನ್ನು ಕಿಕ್ ಸ್ಟಾರ್ಟ್ ಮಾಡಿ ಕೊಟ್ಟು ನನ್ನ ಕಡೆ ನೋಡುತ್ತಾ ನಸುನಕ್ಕು 'ಬಾಯ್" ಎಂದು ಹೊರಟು ಹೋದ. ಮತ್ತೆ ಅವನ ಗುಂಗಿನಲ್ಲಿಯೇ ಮನೆ ತಲುಪಿದೆ. ಈ ಬಾರಿ ಯಾರಿಂದಲೂ ಸಹ ಬೈಸಿಕೊಳ್ಳದಂತೆ ಜಾಗರೂಕತೆಯನ್ನೂ ವಹಿಸಿದೆ.


ಆದರೆ ಪ್ರತಿದಿನ ಹೀಗೆ ಹೊಸ ಹೊಸ ನೆಪವನ್ನು ಹುಡುಕುವುದು ಕಷ್ಟ. ಜೊತೆಗೆ ಸುಳ್ಳೆಂದು ಗೊತ್ತಾಗಿ ಸಿಕ್ಕಿ ಬೀಳುವ ಸಾಧ್ಯತೆಯೂ ಹೆಚ್ಚಾಗಿರುತ್ತದೆ. ನಾವು ಹನ್ನೆರಡು ಸ್ನೇಹಿತರ ಗುಂಪು ಸದಾ ಜೊತೆಯಲ್ಲೇ ಇರುತ್ತೇವೆ, ಅದರಲ್ಲಿ ರಾಮ್ ಕೂಡ ಇರುತ್ತಾನೆ. ಆದರೂ ನಾನು ಅವನು ಏಕಾಂತದಲ್ಲಿ ಸಿಗೋದು ಪ್ರಯೋಗಾಲಯದಲ್ಲಿ ಮಾತ್ರ. ನಮ್ಮ ಗುಂಪು ಚಿಕ್ಕದಾಗಿಯಾದರೂ ಇರಬಾರದೆ ಎಂದು ಹಲವು ಬಾರಿ ಎನಿಸಿದೆ. ಕೆಲವೊಮ್ಮೆ ಈ ನಾಟಕವನ್ನೆಲ್ಲ ಬಿಟ್ಟು 'ರಾಮ್ ಐ ಲವ್ ಯೂ' ಎಂದು ನೇರವಾಗಿ ಹೇಳಿ ಬಿಡದೆ ಎನಿಸುತ್ತದೆ. ಅದರಿಂದ ಇರುವ ಸ್ನೇಹವೂ ಬದಲಾಗಿ ಹೋಗಬಹುದೇನೋ ಎಂದು ಭಯವಾಗುತ್ತದೆ. ಮೇಲಾಗಿ ಅವನಿಗೆ ನನ್ನ ಮೇಲೆ ಯಾವ ಭಾವನೆ ಇದೆ ಎಂದು ತಿಳಿದಿಲ್ಲ.


ಆದರೆ ಅವಳೊಬ್ಬಳಿದ್ದಾಳಲ್ಲ... ಮಾಲಾ... that bitch. ಏನೂ ಗೊತ್ತಾಗದವಳಂತೆ ನಾಟಕ ಮಾಡುತ್ತಾ ರಾಮ್ ಗೆ ಹತ್ತಿರವಾಗುತ್ತಿದ್ದಾಳೆ. ಯಾರಿಗೂ ತಿಳಿಯುತ್ತಿಲ್ಲ ಎಂದು ಕೊಳ್ಳುತ್ತಿದ್ದಾಳೆ. ಹಳ್ಳಿಯವಳು ಎಂದು ಮುಗ್ಧಳಂತೆ ನಾಟಕ ಮಾಡುತ್ತಾಳೆ. ಮಧ್ಯಾಹ್ನ ಊಟದ ಸಮಯದಲ್ಲಿ ನಿಧಾನವಾಗಿ ಜಾರಿಕೊಂಡು ಅದು ಹೇಗೋ ಅವನ ಪಕ್ಕದಲ್ಲಿ ಬಂದು ಕುಳಿತು ಬಿಡುತ್ತಾಳೆ. ಇವತ್ತು ಏನಾದರಾಗಲಿ ಅವಳು ರಾಮ್ ಪಕ್ಕ ಕುಳಿತುಕೊಳ್ಳದಂತೆ ನೋಡಿಕೊಳ್ಳಬೇಕು. ನಾನೇ ಅವನ ಪಕ್ಕ ಕುಳಿತುಕೊಳ್ಳಬೇಕು. ಇದು ಹಾರರ್ ಫಿಲ್ಮ್ ಬೇರೆ, ಭಯದಲ್ಲಿ ಬೆಚ್ಚಿ ಒಮ್ಮೆ ಅವನ ಕೈ ಹಿಡಿದುಕೊಳ್ಳಬೇಕು. ಹೌದು, ಹಾಗೆ ಮಾಡುವುದೇ ಸರಿ. ಇದರಿಂದ ಅವನ ಮನದಲ್ಲೇನಿದೆ ಎಂಬುದು ಸಹ ನನಗೆ ತಿಳಿಯುತ್ತದೆ. ಸ್ನೇಹಕ್ಕೂ ಯಾವುದೇ ಧಕ್ಕೆ ಬರುವುದಿಲ್ಲ.


ಯೋಚನೆಯಿಂದ ಹೊರಬಂದು ಗಡಿಯಾರ ನೋಡಿದೆ. ಅರೆ ! ಇಷ್ಟೊಂದು ಸಮಯವಾಗಿ ಹೋಗಿದೆ. ಕೂಡಲೇ ಹೊರಡಬೇಕು, ತಡವಾದರೆ ಅವಳು ರಾಮ್ ಪಕ್ಕ ಕುಳಿತುಕೊಳ್ಳುತ್ತಾಳೆ.


*****


ಮಾಲಾ...


ಸದ್ಯ ನಾನೇ ಮೊದಲು ಬಂದಿದ್ದೇನೆ. ಚಿತ್ರಮಂದಿರದ ಒಳಗಿದ್ದ ಕನ್ನಡಿಯಲ್ಲಿ ನನ್ನನ್ನು ನಾನೇ ಒಮ್ಮೆ ನೋಡಿಕೊಂಡೆ. ಕೆಂಪು ಚೂಡಿದಾರದಲ್ಲಿ ಎಷ್ಟು ಅಂದವಾಗಿ ಕಾಣುತ್ತಿದ್ದೇನೆ. ನನ್ನ ರಾಮ ಇನ್ನೂ ಬಂದಿಲ್ಲ. ಅವಳೂ ಬಂದಿಲ್ಲ ಬೇವರ್ಸಿ ರಂ...ಛೆ ಛೆ... ಬೆಳಿಗ್ಗೆ ಬೆಳಿಗ್ಗೆ ಯಾಕೆ ಕೆಟ್ಟ ಯೋಚನೆ. ಆದರೂ ಅವಳ ಆಟಗಳು ಯಾರಿಗೂ ತಿಳಿಯುತ್ತಿಲ್ಲ ಎಂದುಕೊಂಡಿದ್ದಾಳೆ. ನನಗೆ ಎಲ್ಲಾ ತಿಳಿದಿದೆ. ನನ್ನ ರಾಮನ ಪ್ರೀತಿ ನನ್ನ ಮೇಲಷ್ಟೇ ಇರುವುದು. ಮೈ ಮೇಲೆ ಬಿದ್ದೇ ಮಾತನಾಡುತ್ತಾಳೆ, ನಾಚಿಕೆಗೆಟ್ಟವಳು. ಅವಳೇನಾದರೂ ಮಾಡಲಿ ನನ್ನ ರಾಮ ರಾಮನೇ.


ಕಾಲೇಜಿಗೆ ಸೇರಿದ ಹೊಸತರಲ್ಲಿ ನನಗೆ ಸ್ನೇಹಿತರಿರಲಿಲ್ಲ. ರಾಮನೇ ನನಗೆ ಎಲ್ಲರನ್ನು ಪರಿಚಯಿಸಿದ್ದು. ಅದೆಷ್ಟು ಅಕ್ಕರೆಯಲ್ಲಿ ನನಗೆ ಸ್ವಲ್ಪವೂ ಮುಜುಗರವಾಗದಂತೆ ನೋಡಿಕೊಂಡ. ಅವನಿಲ್ಲದಿದ್ದರೆ ಎಲ್ಲರೊಂದಿಗೆ ಹೊಂದಿಕೊಳ್ಳುವುದು ಬಹಳ ಕಷ್ಟವಾಗುತ್ತಿತ್ತು. ನನ್ನ ಬಗ್ಗೆ ಪ್ರೀತಿ ಕಾಳಜಿ ಇಲ್ಲದೆ ಅವನಾದರೂ ಏಕೆ ಹೀಗೆ ಮಾಡಿಯಾನು ?


ನಾನು ಕೂಡ ಅವನ ಬಗ್ಗೆ ಅದೆಷ್ಟು ಕಾಳಜಿ ವಹಿಸಿದ್ದೇನೆ. ಎಲ್ಲರೂ ಹಂಚಿಕೊಂಡು ಒಟ್ಟಿಗೆ ಊಟ ಮಾಡುತ್ತೇವೆ, ಆದರೂ ನಾನು ಗಮನವಹಿಸಿ ಪ್ರತಿದಿನ ಅವನ ಪಕ್ಕದಲ್ಲೇ ಕುಳಿತುಕೊಳ್ಳುತ್ತೇನೆ. ಅವನಿಗಿಷ್ಟವಾದದ್ದನ್ನೇ ತೆಗೆದುಕೊಂಡು ಹೋಗುತ್ತೇನೆ. ನನ್ನ ಡಬ್ಬಿಯಲ್ಲಿ ಹೆಚ್ಚಿನ ಪಾಲು ಅವನದ್ದೇ. ಅದೊಂದು ಸಾರಿ ಊರಿನಿಂದ ಬರುವ ಅವನಿಗೋಸ್ಕರ ನಾನೇ ಅಮ್ಮನೊಂದಿಗೆ ಮಾಡಿ ಹೋಳಿಗೆ ತಂದಿದ್ದೆ.


"ನಿಂಗೆ ಇಷ್ಟ ಅಲ್ವಾ ಅದಕ್ಕೆ ತಂದೆ." ಎಂದು ಹೇಳಿ ಅವನಿಗೆ ನೀಡಿದಾಗ.


"ವಾವ್... ನೈಸ್... ಮಧ್ಯಾಹ್ನ ಎಲ್ಲರೂ ತಿನ್ನೋಣ." ಎಂದು ಹೇಳಿದ್ದ.  


"ಇಲ್ಲ ಇದು ನಿನಗೋಸ್ಕರ ಮಾತ್ರ. ನಿನಗೋಸ್ಕರ ನಾನೇ ಮಾಡಿದ್ದು." ಎಂಬ ಮಾತು ಮನದಲ್ಲಿಯೇ ಉಳಿಯಿತು. ಅದನ್ನು ಅವನಿಗಿಂತ ಹೆಚ್ಚಾಗಿ ಉಳಿದವರೇ ತಿಂದು ಮುಗಿಸಿದರು.


ಅದೊಂದು ದಿನ ಬಂದ ಬಸ್ ಹತ್ತದೆ ಸುಮ್ಮನೆ ಕಾಲೇಜಿನ ಎದುರಿನ ಬಸ್ ಸ್ಟಾಂಡ್ನಲ್ಲಿ ನಿಂತಿದ್ದೆ, ರಾಮ ಬರಲು ಕಾದು. ಅವನು ಮತ್ತು ಸುನೀಲ ಒಟ್ಟಿಗೆ ಒಂದೇ ಬೈಕಿನಲ್ಲಿ ಬರುವುದು. ಕಾಲೇಜಿನಿಂದ ಹೊರಬಂದ ರಾಮ "ಏನಾಯ್ತು ?" ಎಂದು ಕೇಳಿದ.


"ಲೈಬ್ರರಿಯಲ್ಲಿ ಬುಕ್ ತೊಗೊಳ್ಬೇಕಿತ್ತು. So ಬಸ್ ಮಿಸ್ ಆಗಿದೆ." ಎಂದು ಹೇಳಿದೆ. ಬೈಕಿನಲ್ಲಿ ನನ್ನನ್ನು ಹಾಸ್ಟೆಲ್ ವರೆಗೆ ಬಿಟ್ಟು ಬರುವನು ಎಂದುಕೊಂಡಿದ್ದೆ. ಆದರೆ ಅವನು ಹಾಗೇನೂ ಮಾಡಲಿಲ್ಲ. ಬೈಕಿನಿಂದ ಇಳಿಯುತ್ತಾ ಸುನಿಲನಿಗೆ.


"ಮಗ, ಇವಳನ್ನ ಬಸ್ ಹತ್ತಿಸಿ ಆಮೇಲೆ ಹೋಗೋಣ." ಎಂದ.


ಬಸ್ ಬರುವವರೆಗೆ ಅವರಿಬ್ಬರೂ ಕಾದರು. ಅದೆಷ್ಟು ಬಾರಿ ಮನದಲ್ಲೇ 'ಸುನೀಲನನ್ನು ಕಳಿಸಿಬಿಡು ನಾವಿಬ್ಬರೇ ಕಾಯೋಣ ಅಥವಾ ನಾವಿಬ್ಬರೇ ನಡೆದುಕೊಂಡು ಹಾಸ್ಟೆಲ್ ವರೆಗೆ ಹೋಗೋಣ' ಎಂದು ಹೇಳಿದೆ. ರಾಮನ ಮೇಲೆ ಅಂದು ಕೋಪ ಬಂದದ್ದು ಸುಳ್ಳಲ್ಲ. ಬಸ್ ಹತ್ತುವಾಗ ನಿರಾಸೆಯಲ್ಲಿ ಇಬ್ಬರಿಗೂ ಬಾಯ್ ಹೇಳಿದೆ.


"Waiting for someone ?" ಎಂದು ಯಾರೋ ಹೇಳಿದಂತಾಯಿತು. ತಿರುಗಿ ನೋಡಿದರೆ ವಿನೋದ್ ಕಾಣಿಸಿದ. "ಹಾಯ್ ವಿನೋದ್" ಎಂದು ಹೇಳಿದೆ.


"ಹಾಯ್"


"Where is everyone ?"


"You mean Ram."


"I mean everyone."


"ಬರ್ತಾ ಇದ್ದಾರೆ. No one has a reason to come early, you know. Maybe except Megha."


"What are you talking about ?"


"You know...What I am talking."


ನನ್ನ ಯೋಚನೆಯೆಲ್ಲಾ ಇವನಿಗೆ ತಿಳಿದಿದೆಯೇ ಎನಿಸಿತು. ನಾನು ಏನನ್ನಾದರೂ ಹೇಳುವ ಮೊದಲೇ "ಹಾ...ಯ್" ಎಂದು ಕಿರುಚುತ್ತಾ ಅನುಷಾ ಬಂದಳು. ಅವಳು ಬಂದ ನಂತರ ಮಾತು ಬೇರೆಲ್ಲಿಗೋ ತಿರುಗಿತು. ನಂತರ ಒಬ್ಬೊಬ್ಬರೇ ಬರಲು ಪ್ರಾರಂಭಿಸಿದರು. ಎಲ್ಲರೂ ಬಂದರು, ಮೂರು ಜನರನ್ನು ಹೊರತುಪಡಿಸಿ. ರಾಮ, ಸುನೀಲ ಮತ್ತು ಆ ಮೇಘ.


ಮೇಘಾ ಬಂದಿಲ್ಲ ಒಳ್ಳೇದೇ ಆಯ್ತು. ಅವಳ ಮೂಗಿನ ಪಕ್ಕ ವಿಕಾರವಾದ ಹೊಸ ಮೊಡವೆ ಮೂಡಿರಬೇಕು ಅಥವಾ ಅವಳ ಮನೆಯಲ್ಲಿ ಬೆಂಕಿ ಅಪಘಾತವಾಗಿ ಅವಳ ತುಂಡು ಬಟ್ಟೆಗಳನ್ನು ಸುಟ್ಟು ಹೋಗಿರಬೇಕು ಅಥವಾ ಬಿಳಿ ಬಟ್ಟೆ ಧರಿಸಿ ಬರುತ್ತಿದ್ದ ಅವಳಿಗೆ ಕೊಚ್ಚಿ ಸಿಡಿದಿರಬೇಕು, ಎಂದೆಲ್ಲಾ ಯೋಚಿಸಿದೆ. ಸಮಯವಾಗುತ್ತಿದೆ ಎಂದು ಎಲ್ಲರೂ ತವಕದಲ್ಲಿದ್ದಾಗ, ಸುನಿಲ ದೂರದಲ್ಲಿ ನಡೆದುಕೊಂಡು ಬರುವುದು ಕಾಣಿಸಿತು. ಅವನ ಜೊತೆ ನನ್ನ ರಾಮ ಯಾಕೆ ಬರುತ್ತಿಲ್ಲ ? ಎಂಬ ಯೋಚನೆ ಮೂಡುತ್ತಿದ್ದಂತೆಯೇ ಪಕ್ಕದಲ್ಲಿದ್ದ ವಿನೋದ್ "ಭೌಶಾ... ಮೇಘಾ ಮತ್ತೆ ರಾಮ್ ಒಟ್ಟಿಗೆ ಬರ್ತಾರೇನೊ ?" ಎಂದು ಹೇಳಿದ. "ಸಾಯಿಸ್ಬಿಡ್ತೀನಿ ನಿನ್ನನಾ" ಎಂದು ಗೊಣಗಿಕೊಂಡೆ.


ಬೇವರ್ಸಿ ರಂಡೆ... ಯಾವುದೋ ಹೊಸ ನಾಟಕ ಆಡಿದ್ದಾಳೆ ಎನಿಸಿತು. ರಾಮ ಅವಳ ಪುಟ್ಟ ಸ್ಕೂಟಿಯನ್ನು ಓಡಿಸುತ್ತಿರುವುದು ಹಿಂದೆ ಅವಳು ಅವನ ಮೇಲೊರಗಿ ಕುಳಿತಿರುವ ದೃಶ್ಯ ಕಣ್ಣ ಮುಂದೆ ಬಂತು. ಕೋಪ ಉಕ್ಕಿ ಹರಿಯಿತು. ಸುನೀಲ ಹತ್ತಿರ ಬರುತ್ತಿದ್ದಂತೆಯೇ "ರಾಮ್ ಎಲ್ಲಿ ?" ಎಂದು ತವಕದಲ್ಲಿ ಕೇಳಿದೆ. "He is busy. He won't come." ಎಂದು ಹೇಳಿ ಅವನು ದೂರ ಹೋದ. ನೆಮ್ಮದಿಯ ಜೊತೆಗೆ ನಿರಾಸೆಯೂ ಮೂಡಿತು.


ಸಮಯವಾಯಿತೆಂದು ಎಲ್ಲರು ಚಿತ್ರಮಂದಿರದ ಒಳಗೆ ಹೋದೆವು. ರಾಮನಿಲ್ಲದ ಮೇಲೆ ಇಲ್ಲಿ ಕುಳಿತು ಏನು ಫಲ ? ಯಾವುದೋ ಆಸನದ ಮೇಲೆ ಕುಳಿತುಕೊಂಡೆ. ಮನಸ್ಸಿಲ್ಲದ ಮನಸ್ಸಿನಲ್ಲಿ ಪರದೆಯನ್ನು ನೋಡಲಾರಂಭಿಸಿದೆ. ಎರಡು ನಿಮಿಷದ ನಂತರ ಸಾಲಿನ ಕೊನೆಯಲ್ಲಿ ಏನೋ ಕದಲಾಟವಾಯಿತು. ಅಸಹ್ಯಕರ ಬಿಗಿ ಉಡುಪು ಧರಿಸಿಕೊಂಡು ಮೇಘಾ ಬಂದಳು. ಬೇರೆಲ್ಲೂ ಜಾಗವಿರದ ಕಾರಣ ನನ್ನ ಪಕ್ಕ ಕುಳಿತಳು.


ಮೇಘಾ ಮಾಲಾ...


"ನನ್ನ ಕರ್ಮ... ಇವಳ ಪಕ್ಕ ಕುಳಿತುಕೊಂಡು ನಾನು ಸಿನಿಮಾ ನೋಡಬೇಕು."



Rate this content
Log in

Similar kannada story from Drama