ವಿದ್ಯಾತನಯ ವಿವೇಕ

Drama Romance Classics

4.5  

ವಿದ್ಯಾತನಯ ವಿವೇಕ

Drama Romance Classics

ಸಂತೃಪ್ತಿಯಿಂದ....

ಸಂತೃಪ್ತಿಯಿಂದ....

5 mins
485


ಶ್ರಾವಣಿಗೆ ಎಚ್ಚರವಾಯ್ತು. ಮೇಲೆ ಏಳಲು ಮನಸ್ಸಾಗಲಿಲ್ಲ. ಸುಮ್ಮನೆ ಕಿಟಕಿಯತ್ತ ನೋಡಿದಳು, ಹೆಚ್ಚು ಬೆಳಕಾದಂತೆ ಕಾಣಲಿಲ್ಲ. ಇಂದಿರುವ ತರಗತಿಗಳನ್ನು ನೆನೆಯುತ್ತ ಮತ್ತೆ ಕಣ್ಣು ಮುಚ್ಚಿದಳು. ಮತ್ತೆ ನಿದ್ದೆ ಹತ್ತಿತು.

ಕಣ್ಣು ಬಿಟ್ಟಾಗ ಎಲ್ಲೆಡೆ ಬೆಳಕು. ತಕ್ಷಣ ಪಕ್ಕದಲ್ಲಿದ್ದ ಮೊಬೈಲ್ ನೋಡಿದಳು. ಗಂಟೆ 7:40 ಆಗಿತ್ತು. ಒಂದಷ್ಟು ಕರೆಗಳು ಮತ್ತು ಸಂದೇಶಗಳು ಬಂದಿರುವುದು ಕಂಡರು ಅದನ್ನು ನೋಡಲಿಲ್ಲ. ಬೆಳಿಗ್ಗೆ ಮೋಡ ಇದ್ದಿರಬೇಕು ಅದಕ್ಕೇ ಯಾಮಾರಿದ್ದೇನೆ ಎಂದುಕೊಳ್ಳುತ್ತಾ ಮಂಚದಿಂದ ಇಳಿದಳು. ಸರಿಯಾದ ಸಮಯಕ್ಕೆ ಬಸ್ ಸಿಗದಿದ್ದರೆ ಮೊದಲನೇ ತರಗತಿ ತಪ್ಪಿಸಿಕೊಳ್ಳುತ್ತೇನೆ. ಇದು ಶ್ರಾವಣಿಗೆ ಬಹಳ ಕಿರಿಕಿರಿಯುಂಟು ಮಾಡುವ ವಿಚಾರ. ಓದಿನ ಬಗ್ಗೆ ನಿರಾಸಕ್ತಿ ಆಗಲಿ ಅಥವಾ ಅಶ್ರದ್ಧೆಯಾಗಲಿ ಅವಳಲ್ಲಿ ಎಂದು ಮೂಡುವುದಿಲ್ಲ.

ಕೋಣೆಯಿಂದ ಹೊರಬಂದು "ಅಮ್ಮ ತಿಂಡಿ ಏನು ?" ಎಂದು ಕೇಳಿದಳು.

"ಇನ್ನೂ ರೆಡಿಯಾಗಿಲ್ಲವೇನೇ ? ಕಾಲೇಜ್ ಇಲ್ವಾ ಇವತ್ತು ?"

"ಕಾಲೇಜಿದೆ, ತಿಂಡಿ ಏನು ಹೇಳು."

"ದೋಸೆ."

"ಎರಡು ದೋಸೆ ಮಾಡಿಡು, ಸ್ನಾನ ಮಾಡಿ ಬರ್ತೀನಿ."

"ಬಿಸಿ ಬಿಸಿ ಮಾಡಿ ಹಾಕ್ತಿನಿ, ಮಾಡಿಡೋದು ಯಾಕೆ ?"

"ಲೇಟ್ ಆಗಿದೆ ಅಮ್ಮ. ಪ್ಲೀಸ್ ಮಾಡಿಡು." ಎಂದು ಹೇಳಿದ ಶ್ರಾವಣಿ ಬೇಗನೆ ಸ್ನಾನ ಮುಗಿಸಿದಳು. ಕೈಗೆ ಸಿಕ್ಕ ಚೂಡಿದಾರವನ್ನು ಧರಿಸಿ, ಹಣೆಗೆ ಅದಕ್ಕೊಪ್ಪುವ ಬೊಟ್ಟಿಟ್ಟು, ಕೂದಲನ್ನು ಸರಿಪಡಿಸಿಕೊಂಡು ಗಂಟು ಹಾಕಿಕೊಂಡಳು. ಎಡಗೈ ಮಣಿಕಟ್ಟಿಗೆ ಮತ್ತು ಗಂಟಲ ಕೆಳಗೆ ಸುಗಂಧ ದ್ರವ್ಯವೊಂದನ್ನು ಸಿಂಪಡಿಸಿ ಕೊಂಡಳು. ಪುಸ್ತಕಗಳನ್ನು ಚೀಲಕ್ಕೆ ತುಂಬಿಕೊಂಡು ಕೈಗಡಿಯಾರ ಕಟ್ಟುತ್ತಾ ಹೊರಬಂದಳು.

"ದೋಸೆ ಎಲ್ಲ ಆರಿ ತಣ್ಣಗಾಗಿದೆ."

"ಇರ್ಲಿ ಒಂದಿನ...." ಎನ್ನುತ್ತಾ ದೋಸೆ ಇದ್ದ ತಟ್ಟೆಯೆದುರು ಕುಳಿತಳು. ಕರೆಗಳು ಮತ್ತು ಸಂದೇಶಗಳ ನೆನಪಾಗಿ ಚೀಲದಿಂದ ಮೊಬೈಲ್ ತೆಗೆದಳು. ಏಳೆಂಟು ಬಾರಿ ಸಿದ್ಧಾರ್ಥ ಕರೆ ಮಾಡಿದ್ದ, ಶ್ರಾವಣಿಯ ಇಬ್ಬರು ಜೀವದ ಗೆಳತಿಯರೂ ಸಹಾ ಎರಡು ಮೂರು ಬಾರಿ ಕರೆ ಮಾಡಿದ್ದರು. ಸಿದ್ಧಾರ್ಥನ ಇಪ್ಪತ್ತು ಸಂದೇಶಗಳು ಬಂದಿದ್ದವು. ಎಲ್ಲವು ಕೇವಲ ಮಿಸ್ ಯೂ, ಲವ್ ಯೂ ಎಂಬುದೇ ಆಗಿರುತ್ತದೆಂದು ಅವಳು ಅಂದುಕೊಂಡಳು. ಕೊನೆಯ ಸಂದೇಶ ಮಾತ್ರ "Please don't go to college today." ಎಂದು ಬರೆದಿತ್ತು. ಅದನ್ನು ಓದಿ ಮುಗಿಸುತ್ತಿದ್ದಂತೆ ಕಣ್ಣಂಚಿನಲ್ಲಿ ಶ್ರಾವಣಿಯ ಅಮ್ಮ ಅವಳ ಕಡೆ ಬರುತ್ತಿರುವುದು ಗಮನಿಸಿದಳು. ಕೂಡಲೇ ಮೊಬೈಲ್ ನ ಪಕ್ಕದಲ್ಲಿದ್ದ ಗುಂಡಿಯನ್ನು ಒತ್ತಿ ಅದನ್ನು ಮಲಗಿಸಿದಳು.

"ನೆಮ್ಮದಿಯಾಗಿ ಆದರೂ ತಿನ್ನು." ಎನ್ನುತ್ತಾ ಶ್ರಾವಣಿ ಅಮ್ಮ ಅವಳ ಕೈಯಿಂದ ಮೊಬೈಲ್ ಕಸಿದರು. ಅದನ್ನು ದೂರದರ್ಶನದ ಮುಂಭಾಗದಲ್ಲಿ ಇರಿಸಿ ಮಗಳನ್ನೇ ನೋಡುತ್ತ ಕುಳಿತರು. ಶ್ರಾವಣಿ ಕೋಪದಲ್ಲಿ ಅಮ್ಮನ ಕಡೆಗೆ ಒಮ್ಮೆ ಮುಖ ಮಾಡಿ ಅಣಕಿಸಿದಳು.

"ಏನು ಮುಖಾನಾದ್ರೂ ಮಾಡು, ಊಟ ತಿಂಡಿ ಮಾಡುವಾಗ ಮೊಬೈಲ್ ನೋಡ್ಬಾರ್ದಷ್ಟೆ."

ಉಳಿದ ದೋಸೆಯನ್ನು ಬೇಗಬೇಗನೆ ಮುಗಿಸಿ ಶ್ರಾವಣಿ ಕೈ ತೊಳೆದು ತನ್ನ ಚೀಲವನ್ನು ಹೆಗಲಿಗೇರಿಸಿಕೊಂಡು ದೇವರ ಪೂಜೆ ಮಾಡುತ್ತಿದ್ದ ಅಪ್ಪನಿಗೆ ದೇವರ ಕೋಣೆಯ ಬಾಗಿಲು ಬಡಿಯುತ್ತ ಹೋಗಿಬರುತ್ತೇನೆ ಎಂದಳು. ಅವರು ಮಂತ್ರ ಹೇಳುತ್ತಲೇ ಆಯಿತು ಎನ್ನುವಂತೆ ತಲೆ ಅಲ್ಲಾಡಿಸಿದರು. ಸೋಫಾದ ಮೇಲೆ ಕುಳಿತಿದ್ದ ಅಮ್ಮನಿಗೆ "ಮಾತೃಶ್ರೀ, ಹೋಗಿ ಬರುತ್ತೇನೆ." ಎಂದು ಕೈ ಮುಗಿದು ನಾಟಕೀಯವಾಗಿ ಹೇಳಿದಳು. ಅಮ್ಮ ಏನೋ ಭಾರಿ ವಿನೋದವನ್ನು ಬಿಟ್ಟುಕೊಡದಂತೆ ಮುಗುಳ್ನಗುತ್ತಿದ್ದರು.

ಶ್ರಾವಣಿ ತನ್ನ ಬಟ್ಟೆಗೆ ಹೋಲುವ ಚಪ್ಪಲಿಯನ್ನು ಧರಿಸಿಕೊಂಡು ಬಸ್ ಸ್ಟಾಪ್ ಕಡೆಗೆ ವೇಗದ ಹೆಜ್ಜೆ ಹಾಕಿದಳು. ಬಸ್ಸಿನಲ್ಲಿ ಕುಳಿತು ಕಾಲೇಜಿನ ಕಡೆಗೆ ಪ್ರಯಾಣಿಸುವಾಗ ಸಿದ್ಧಾರ್ಥನ ಸಂದೇಶಗಳನ್ನು ಓದಬೇಕೆಂಬ ಕೊಂಡಳು. ಆದರೆ ಬಸ್ಸಿನಲ್ಲಿ ಕುಳಿತಾಗ ಮೊಬೈಲ್ ತರಲಿಲ್ಲವೆಂದು ನೆನಪಾಯಿತು. ಅಮ್ಮನ ಮುಗುಳ್ನಗೆಗೆ ಇದೇ ಕಾರಣ ಎಂದುಕೊಂಡಳು. ಮನಸ್ಸು ಮತ್ತೆ ಸಿದ್ಧಾರ್ಥನ ಕಡೆಗೆ ಯೋಚಿಸಿತು. ಅವನೊಂದಿಗಿದ್ದರೆ ಅದೆಂತಹ ಸುರಕ್ಷತಾ ಭಾವ ಮೂಡುತ್ತದೆ, ಅಂತಹ ಹುಡುಗ ಸಿಕ್ಕಿದ್ದು ನನ್ನ ಅದೃಷ್ಟವೇ ಸರಿ ಎಂದುಕೊಂಡಳು.

ಬಸ್ಸು ಕಾಲೇಜು ತಲುಪುವಷ್ಟರಲ್ಲಿ ಆಗಲೇ ಮೊದಲನೇ ತರಗತಿಗೆ ಸಮಯವಾಗಿತ್ತು. ಪ್ರಾಧ್ಯಾಪಕರು ತಲುಪುವ ಮೊದಲೇ ತರಗತಿಯಲ್ಲಿರಬೇಕೆಂದುಕೊಂಡು ಅತಿವೇಗದಲ್ಲಿ ಹೆಜ್ಜೆಯಿಟ್ಟಳು. ಅವಳು ಹಾದು ಹೋಗುತ್ತಿದ್ದಂತೆಯೇ ಎಲ್ಲರೂ ಇವಳನ್ನೇ ಗಮನಿಸುತ್ತಿದ್ದಾರೆ ಎಂದೆನಿಸಿತು. ತನ್ನ ವೇಗ ತಗ್ಗಿಸಿದಳು, ಆದರೂ ನೋಟುಗಳೆಲ್ಲವೂ ಇವಳ ಕಡೆಗೇ ಇದೆ. ಏಕೆ ಎಲ್ಲರೂ ತನ್ನನ್ನು ನೋಡುತ್ತಿದ್ದಾರೆ ಎಂಬ ಗೊಂದಲದಲ್ಲೇ ತರಗತಿಯನ್ನು ತಲುಪಿದಳು. ಪ್ರಾಧ್ಯಾಪಕರಾಗಲೇ ಬಂದಾಗಿತ್ತು. ಬಾಗಿಲಲ್ಲಿ ನಿಂತು 'ಮೆ ಐ ಕಮಿನ್ ಸರ್' ಎಂದು ಕೇಳಿದಳು. ಇವಳ ಆಗಮನ ಅನಿರೀಕ್ಷಿತವೇನೋ ಎನ್ನುವಂತೆ ಅವರು ಒಂದಷ್ಟು ಹೊತ್ತು ಏನು ಹೇಳಲೂ ತೋಚದೆ ಹಾಗೇ ನಿಂತರು. ನಂತರ ಒಳಗೆ ಬರುವಂತೆ ಕಣ್ಣಿನಲ್ಲೇ ಸೂಚಿಸಿದರು. ಅವಳು ಒಳಗೆ ಹೆಜ್ಜೆ ಇಡುತ್ತಿದ್ದಂತೆಯೇ ಅವಳ ಎಲ್ಲ ಸಹಪಾಠಿಗಳು ತಮ್ಮತಮ್ಮಲ್ಲೇ ಗುಸುಗುಸು ಮಾತಾಡಿಕೊಂಡರು. ಶ್ರಾವಣಿಯ ಇಬ್ಬರು ಗೆಳತಿಯರು ತರಗತಿಯಲ್ಲಿ ಕಾಣಲಿಲ್ಲ. ಹುಡುಗನೊಬ್ಬನೇ ಕುಳಿತಿದ್ದ ಕೊನೆಯ ಬೆಂಚಿನಲ್ಲಿ ಹೋಗಿ ಕುಳಿತಳು. ಅವನು ಇವಳ ಕಡೆ ನೋಡುತ್ತಾ ಮೆಚ್ಚುಗೆ ಸೂಚಿಸಿದ.

ಅಂದಿನ ಪಾಠವನ್ನು ಕೇಳುವುದರಲ್ಲಿ ತಲ್ಲೀನಳಾದಳು. ಆದರೆ ಆಗೀಗ ಸಹಪಾಠಿಗಳು ಹಿಂತುರುಗಿ ಇವಳ ಕಡೆ ನೋಡುತ್ತಿದ್ದರು, ನಗುತ್ತಿದ್ದರು, ಏನೋ ಮಾತನಾಡುತ್ತಿದ್ದರು. ಇದರಿಂದ ಕಿರಿಕಿರಿಗೊಂಡ ಶ್ರಾವಣಿ ತನ್ನ ನೋಟ್ ಪುಸ್ತಕದ ಮೇಲೆ 'Why is everyone acting so weird ?' ಎಂದು ಬರೆದು ಪಕ್ಕದಲ್ಲಿ ಕುಳಿತಿದ್ದವನಿಗೆ ತೋರಿಸಿದಳು. ಅದನ್ನು ಓದಿದ ಅವನು ತನ್ನ ಪುಸ್ತಕದ ಮೇಲೆ 'Because they are weird. Don't you worry." ಎಂದು ಬರೆದು ಇವಳಿಗೆ ತೋರಿಸಿದ. ಇದರಿಂದ ಶ್ರಾವಣಿಯ ಗೊಂದಲ ದೂರವಾಗಲಿಲ್ಲ. ಮತ್ತೆ ಪಾಠ ಕೇಳುವ ಪ್ರಯತ್ನ ಮಾಡಿದಳು. ಅವನು ಮತ್ತೊಮ್ಮೆ ತನ್ನ ಪುಸ್ತಕದ ಮೇಲೆ ಏನೇನೋ ಬರೆದು ಇವರಿಗೆ ತೋರಿಸಿದ. 'Its really brave of you to have come today to college." ಎಂದು ಬರೆದಿತ್ತು. ಶ್ರಾವಣಿ ಮುಗ್ಧತೆಯಿಂದ 'Why ?' ಎಂದು ಬರೆದು ತೋರಿಸಿದಳು. ಅವನಿಗೆ ಆಶ್ಚರ್ಯದೊಂದಿಗೆ ದಿಗಿಲಾಯಿತು. 'Oh... you don't know..'‍ ಎಂದು ತನ್ನ ಪುಸ್ತಕದ ಮೇಲೆ ಬರೆದು ಪ್ರಾಧ್ಯಾಪಕರಿಗೆ ಕಾಣದಂತೆ ತನ್ನ ಮೊಬೈಲ್ ಹೊರತೆಗೆದು ಅದನ್ನು ಶಾಂತಗೊಳಿಸಿ, ಅದರಲ್ಲಿ ವಿಡಿಯೋವೊಂದನ್ನು ಇವಳಿಗೆ ತೋರಿಸಿದ.

ಅದನ್ನು ನೋಡುತ್ತಿದ್ದಂತೆಯೇ ಶ್ರಾವಣಿಗೆ ಭಯ ಆವರಿಸಿ ಗಂಟಲು ಒಣಗಿ ಹೋಯ್ತು. ಕೆಲವು ತಿಂಗಳ ಹಿಂದೆ ಅವಳು ತನ್ನಿಬ್ಬರು ಸ್ನೇಹಿತೆಯರೊಂದಿಗೆ, ಸ್ನೇಹಿತೆಯ ಮನೆಯಲ್ಲಿ ಪಾನಮತ್ತರಾಗಿ ಮಾಡಿದ ಸಂಭಾಷಣೆ ಅದರಲ್ಲಿತ್ತು. ಅವರು ಮೂವರು ಕಾಲೇಜಿನ ಪ್ರಾಂಶುಪಾಲರ ಬಗ್ಗೆ, ಪ್ರಾಧ್ಯಾಪಕರುಗಳ ಬಗ್ಗೆ ಬೈದಾಡಿದ್ದರು. ಮೊಬೈಲ್ ಹಿಂತಿರುಗಿಸಿ ತಲೆ ತಗ್ಗಿಸಿದಳು. ಉಮ್ಮಳಿಸಿ ಬಂದ ದುಃಖವನ್ನು ತಡೆ ಹಿಡಿದಳು. ಪಕ್ಕದಲ್ಲಿ ಕುಳಿತಿದ್ದವನು 'Dont worry... relax...' ಎಂದೆಲ್ಲ ಬರೆದು ತೋರಿಸಿದ. ಶ್ರಾವಣಿಗೆ ಸಮಾಧಾನವಾಗುವ ಮಾತೇ ಇರಲಿಲ್ಲ.

ಬೆಳಿಗ್ಗೆ ಮೊಬೈಲ್ ನಲ್ಲಿ ಕಂಡ ಕರೆಗಳು ಮತ್ತು ಸಂದೇಶಗಳಿಗೆ ಕಾರಣ ಈಗ ತಿಳಿಯಿತು. ಅವರಿಬ್ಬರೂ ಇದೇ ಕಾರಣಕ್ಕೆ ಇಂದು ಕಾಲೇಜಿಗೆ ಬಂದಿಲ್ಲ ಎಂಬುದು ಅರ್ಥವಾಯಿತು. ಆ ಮಾತುಗಳನ್ನು ರೆಕಾರ್ಡ್ ಮಾಡಿದ ತನ್ನ ಗೆಳತಿಯ ಬಗ್ಗೆ ಎಲ್ಲಿಲ್ಲದ ಕೋಪ ಮೂಡಿತು. ಮೊಬೈಲ್ ನೋಡಲು ಬಿಡದ ಅಮ್ಮನ ಬಗ್ಗೆಯೂ ಕೋಪ ಮೂಡಿತು. ದೊಡ್ಡ ಪ್ರಪಾತವೊಂದಕ್ಕೆ ಹಾರಿ ಎಲ್ಲರಿಂದ ದೂರಾಗಿ ಬಿಡಬೇಕೆಂಬ ಯೋಚನೆ ಮನದಲ್ಲಿ ಮೂಡಿತು. ಕಾಲೇಜಿನಲ್ಲಿ ಓದಿನಲ್ಲಿ ಮುಂದಿದ್ದು ಎಲ್ಲ ಪ್ರಾಧ್ಯಾಪಕರಿಗೆ ಪ್ರಿಯಳಾಗಿದ್ದ ನಾನು ಇನ್ನು ಮುಂದೆ ಪ್ರತಿಯೊಬ್ಬರ ತಮಾಷೆಯ ವಸ್ತುವಾಗಿ ಬಿಡುತ್ತೇನೆ ಎಂದೆನಿಸಿತು. ಯಾರಿಗೆ ಏನು ಉತ್ತರಿಸಲಿ ? ನನ್ನ ಈ ವರ್ತನೆಗೆ ಯಾವ ಕಾರಣ ನೀಡಲಿ ? ಎಂಬ ಚಿಂತೆಗಳು ಅವಳನ್ನು ಬಂಧಿಸಿದ್ದವು.

ಸಿದ್ಧಾರ್ಥನಿಗೆ ಏನು ಹೇಳಲಿ ? ನನ್ನ ಬಗ್ಗೆ ಏನೇನು ಕಲ್ಪಿಸಿಕೊಂಡಿದ್ದಾನೋ ಏನೋ. ಇದೇ ಕಾರಣಕ್ಕಾಗಿಯೇ ತನಗೆ ಅಷ್ಟು ಬಾರಿ ಕರೆ ಮಾಡಿದ್ದಾನೆ. ತರಗತಿ ಮುಗಿಯಲು ಇನ್ನೂ ಐದು ನಿಮಿಷವಿತ್ತು. ತನ್ನ ಪುಸ್ತಕವನ್ನೆಲ್ಲಾ ಚೀಲದಲ್ಲಿ ತುಂಬಿಕೊಂಡಳು. ಪಕ್ಕದಲ್ಲಿ ಕುಳಿತಿದ್ದ ಹುಡುಗ ಇವಳಿಗೆ ಏನು ಹೇಳಬೇಕೆಂದು ತೋಚದೆ ಸುಮ್ಮನಾಗಿದ್ದ. ಪ್ರಾಧ್ಯಾಪಕರು ಹೊರ ಹೋಗುತ್ತಿದ್ದಂತೆಯೇ ಎಲ್ಲಾದರೂ ದೂರ ಹೋಗಿಬಿಡಬೇಕು ಎಂದುಕೊಳ್ಳುತ್ತಾ ಸಿದ್ದಳಾದಳು.

ಪ್ರಾಧ್ಯಾಪಕರು ಹೊರಟು ಹೋಗುತ್ತಿದ್ದಂತೆಯೇ ಚೀಲ ಹಿಡಿದು ಓಡು ನಡುಗೆಯಲ್ಲಿ ತರಗತಿಯಿಂದ ಹೊರ ಬಂದಳು. ತಲೆಯೆತ್ತಿ ಯಾರನ್ನೂ, ಏನನ್ನೂ ನೋಡದೆ ಹೆಜ್ಜೆ ಹಾಕಿದಳು. ಕಾಲೇಜಿನ ಮುಖ್ಯ ಕಟ್ಟಡದಿಂದ ಹೊರ ಬಂದು ಗೇಟಿನ ಕಡೆಗೆ ನಡೆದಳು. ಕಾಲೇಜಿನ ಗೇಟನ್ನು ದಾಟುವಾಗ ಹಿಂದಿನಿಂದ ಯಾರೋ "ಶ್ರಾವ್ಸ್...ಶ್ರಾವ್ಸ್..." ಎಂದು ಕರೆದಂತಾಯಿತು.ಹಿಂತಿರುಗಿ ನೋಡಿದರೆ ದೂರದಲ್ಲಿ ಸಿದ್ಧಾರ್ಥ ಇವಳ ಕಡೆ ಬರುತ್ತಿದ್ದ.

ಅವನಿಗೆ ಈಗ ಏನೂ ಉತ್ತರಿಸಲಾರೆ ಎಂದುಕೊಳ್ಳುತ್ತಾ ವೇಗವಾಗಿ ಹೆಜ್ಜೆ ಇಟ್ಟಳು. ಇವಳ ಹೆಸರನ್ನು ಕರೆಯುತ್ತಲೇ ಅವನು ಓಡುತ್ತಾ ಬಂದ. ನೂರು ಮೀಟರ್ ಹೋಗುವಷ್ಟರಲ್ಲಿ ಎದುರುಸಿರು ಬಿಡುತ್ತ ಇವಳೆದುರು ಬಂದು ನಿಂತ. ಶ್ರಾವಣಿಗೆ ತಲೆಯೆತ್ತಿ ಅವನ ಮುಖ ನೋಡುವ ಧೈರ್ಯ ಬರಲಿಲ್ಲ. ಸಿದ್ಧಾರ್ಥ ಏದುಸಿರು ಬಿಡುತ್ತಲೇ "ನಿಮ್ಮ ಕಾಲೇಜು ವಾಚ್ ಮನ್ ಗೆ ಇನ್ನುರು ರುಪಾಯಿ ಲಂಚ ಕೊಟ್ಟು ಒಳಗೆ ಬಂದಿದ್ದೀನಿ. ನನ್ನ ಮಾತನಾಡಿಸದೆ ಹಾಗೆ ಕಳಿಸುತ್ತೀಯಾ ?" ಎಂದು ಹೇಳಿದ. ಶ್ರಾವಣಿ ಏನೂ ಮಾತನಾಡದೆ ತಲೆತಗ್ಗಿಸಿಯೇ ನಿಂತಿದ್ದಳು.

"ಏನ್ ಬಂಕ್ ಮಾಡಿದೆಯಾ ?"

"....."

"ಐಸ್ ಕ್ರೀಂ ತಿನ್ನೋಕೆ ಹೋಗೋಣ್ವಾ ?"

"...."

""ಮೂವಿಗೆ ಹೋಗೋಣ್ವಾ ?"

"...."

"ಏನಾದರೂ ಮಾತನಾಡ ಬೇಕಪ್ಪ. ಬಾಯ್ ಫ್ರೆಂಡ್ ಇರೋದೇ ಬೇಜಾರ್ ಹೇಳ್ಕೊಳಕ್ಕೆ ಅಲ್ವಾ ?"

ಶ್ರಾವಣಿ ನಿಧಾನವಾಗಿ ತಡವರಿಸುತ್ತ ಸಣ್ಣ ದನಿಯಲ್ಲಿ ಹೇಳಿದಳು "ನಾನೇನು ಕುಡುಕಿ ಅಲ್ಲ. ಅವತ್ತು ಒಂದು ದಿನ ಮಾತ್ರ"

"ಅದು ಗೊತ್ತಲ್ವಾ ನಂಗೆ ?"

"ಏನೂ ಆಗದೆ ಇರೋರ ಥರಾ ನಾಟ್ಕ ಆಡ್ಬೇಡ."

"ಆ ವೈರಲ್ ವಿಡಿಯೋನಾ ? ಆಗಲಿ ಬಿಡು."

"ನಿಜ ಹೇಳು ನಿಂಗೆ ಚೂರು ಡಿಫರೆನ್ಸ್ ಮಾಡಲ್ವಾ ?"

"ನಿಜ್ವಾಗ್ಲೂ ಮಾಡಲ್ಲ. ನೀನೇನು ಅಂತ ನಂಗೆ ಗೊತ್ತು ತಾನೆ."

"ಆದರೆ ಎಲ್ಲರೂ ಹಾಗಿರಲಿಲ್ಲವಲ್ಲ."

"ಇನ್ಯಾರದ್ದೋ ಈ ಥರ ವೀಡಿಯೋ ಬಂದ್ರೆ ನೀನ್ ನೋಡಿ ಮಜಾ ಮಾಡಲ್ವಾ. ಹಂಗೆ ಇದು ಅವರಿಗೆ ಅಷ್ಟೆ."

"ನಾನೊಂದು ತಮಾಷೆಯ ವಸ್ತು ಆಗ್ಬಿಟ್ನಾ ?"

"ಎರಡೇ ಕ್ಷಣದಲ್ಲಿ ಇನ್ನೊಬ್ಬ ಮನುಷ್ಯನಿಗೆ ನಾವು ದುಃಖ ಕೊಟ್ಟುಬಿಡಬಹುದು. ಆದರೆ ನಗು ಬರಿಸೊದಿದೆಯಲ್ಲ ಅದು ತುಂಬಾ ಕಷ್ಟ. ಎಷ್ಟೋ ಜನ ತಮ್ಮ ಎಲ್ಲಾ ನೋವು ಮರೆತು ಮೂವತ್ತು ಸೆಕೆಂಡು ನಿನ್ನ ಮಾತು ಕೇಳಿ ನಗ್ತಾರಲ್ಲ, ಅದಕ್ಕೆ ನೀನು ಸಂತೋಷಪಡಬೇಕು."

ಶ್ರಾವಣಿ ಅಳುತ್ತಾ ಕುಸಿದು ಬೀಳುವಂತೆ ಸಿದ್ಧಾರ್ಥನನ್ನು ಆಲಂಗಿಸಿದಳು. ಅವನು ಅವಳನ್ನು ಸಮಾಧಾನ ಪಡಿಸುತ್ತಾ "ನಿಂಗೆ ಆ ಬೈಗುಳ ಎಲ್ಲ ಗೊತ್ತಿದೆ ಅಂತ ನಂಗೆ ಗೊತ್ತೇ ಇರ್ಲಿಲ್ಲ."

"ಪ್ಲೀಸ್ ಅದರ ಬಗ್ಗೆ ಮತ್ತೆ ಮಾತಾಡ್ಬೇಡ."

"ಸರಿ ಬಿಡು. ನಿಮ್ಮನೇಲಿ ಹೆಂಗೆ ?"

"ಹೆಂಗೆ ಅಂದ್ರೆ ?"

"ಏನಿಲ್ಲಾ, ನಿನ್ನನ್ನ ಹುಡುಕ್ಕೊಂಡು ಒಂದು ಹುಡುಗ ಬಂದಿದ್ದ ಅಂತ ನಿಂಗೇನಾದ್ರೂ ಕೇಳ್ತಾರೆ ಅಂತ."

"ಮನೆಗ್ ಹೋಗಿದ್ಯಾ ?"

"ಹೂ... I was worried.ನೀನು ಫೋನ್ ಬೇರೆ ಆನ್ಸನ್ ಮಾಡ್ತಿರ್ಲಿಲ್ಲ, ಮೆಸೇಜಿಗೂ ರಿಪ್ಲೆ ಇರಲಿಲ್ಲ. ನೀನು ಹಂಗೆಲ್ಲಾ ಏನೂ ಮಾಡಲ್ಲ ಅಂತ ಗೊತ್ತು, ಆದ್ರೂ ಒಂದ್ಸಾರಿ ಟೆನ್ಷನ್ ಆಗಿತ್ತು. ನಿಮ್ಮಮ್ಮ ನನ್ನತ್ತ ದುರುಗುಟ್ಟಿ ನೋಡುತ್ತಾ ಕಾಲೇಜಿಗೆ ಹೋಗಿದಾಳೆ ಅಂತ ಹೇಳಿದಾಗಲೇ ಸಮಾಧಾನ ಆಯ್ತು."

"ಪರ್ವಾಗಿಲ್ಲ ಬಿಡು, ಅಮ್ಮನ್ನ ಮ್ಯಾನೇಜ್ ಮಾಡ್ತೀನಿ."

"ಜಾಸ್ತಿ ತಲೆ ಕೆಡಿಸ್ಕೋಬೇಡ. ಈ ಚಿಕ್ಕ ವಿಷಯದಿಂದ ನಿನಗೆ ನಿಜವಾಗಿ ನಿನ್ನವರು ಯಾರು ಬೇರೆಯವರು ಯಾರು ಅಂತ ಗೊತ್ತಾಗತ್ತೆ."

"ಆದ್ರೂ ಇದು ಕೊನೆವರೆಗೂ ನನಗೆ ಅಂಟಿಕೊಂಡಿರುತ್ತೆ ಅಲ್ವಾ ?"

"ಇದು ಇರತ್ತೋ ಇಲ್ವೋ ಗೊತ್ತಿಲ್ಲ, ಆದರೆ ನಾನಂತೂ ನಿನ್ನ ಜೊತೆ ಕೊನೆವರೆಗೂ ಇರುತ್ತೀನಿ."

ಶ್ರಾವಣಿಯ ಕಣ್ಣಲ್ಲಿ ಮತ್ತೊಮ್ಮೆ ನೀರು ತುಂಬಿತು. ಈ ಬಾರಿ ದುಃಖದಿಂದಲ್ಲ, ಸಂತೃಪ್ತಿಯಿಂದ.



Rate this content
Log in

Similar kannada story from Drama