ವಿದ್ಯಾತನಯ ವಿವೇಕ

Drama Romance Thriller

4  

ವಿದ್ಯಾತನಯ ವಿವೇಕ

Drama Romance Thriller

ನವೀನ ಕಾಣೆಯಾಗಿದ್ದು...

ನವೀನ ಕಾಣೆಯಾಗಿದ್ದು...

6 mins
332


ಪ್ರತಿ ಶನಿವಾರದಂತೆ ಅಂದು ಕೂಡ ನಾನು ಶ್ರೀಧರ ಆಶ್ರಮದಲ್ಲಿದ್ದೆ. ಮಂಗಳಾರತಿಯಲ್ಲಿ ಪಾಲ್ಗೊಂಡು ಹೊರಗೆ ಬರುವಾಗ ಗಂಟೆ ೭. ೪೫ ಆಗಿತ್ತು. ಮೊಬೈಲ್ ನೋಡಿದ್ರೆ ೮ ಮಿಸ್ ಕಾಲ್. ಅಷ್ಟೂ ಸುಶಾಂತನಿಂದ ಬಂದಿತ್ತು. ಏನು ವಿಷಯವಿರಬಹುದು ಅಂತ ತಕ್ಷಣ ಕಾಲ್ ಮಾಡಿದೆ.


" ಏನಮ್ಮ ನಮ್ಮನ್ನ ನೆನಪಿಸ್ಕೊಂಡಿದ್ದು ? "

" ಹೇಯ್, ನವೀನ ಸಿಕ್ಕಿದ್ನ ?"

" ಎರಡ ದಿನದ ಹಿಂದೆ ಆಫೀಸ್ ಹತ್ರ ಬಂದಿದ್ದ, ಯಾಕೆ ?"

" ಅಲ್ಲ, ಇವತ್ ಸಿಕ್ಕಿದ್ನ ? ಮಧ್ಯಾಹ್ನದಿಂದ ಕಾಣಿಸ್ತಾ ಇಲ್ಲ, ಮೊಬೈಲ್ ಬೇರೆ ಸ್ವಿಚ್ ಆಫ್ "

" ರೂಮಲ್ಲಿ ಇಲ್ವಾ "

" ಇಲ್ಲ, ನಾನು ಹೈದರಾಬಾದ್ ನಲ್ಲಿ ಇದೀನಿ ಕಣೋ. ಅವನ ತಂಗಿ ಫೋನ್ ಮಾಡಿದ್ಲು. ಮೊಬೈಲ್ ಸ್ವಿಚ್ ಆಫ್ ಅಂತೆ, ರೂಂ ಮೇಟ್ ಗೆ ಕೇಳಿದ್ರೆ ರೂಮಲ್ಲಿ ಇಲ್ಲ ಅಂದನಂತೆ "

" ಬಿಡು ಮಗ ಶನಿವಾರ ಅಲ್ವ ಯಾವುದಾರು ಫ್ರೆಂಡ್ ಮನೆಲ್ಲಿ ಕುತ್ಕೊಂಡು ಮಬ್ ಆಗಿರ್ತಾನೆ, ಡಿಸ್ಟರ್ಬೆನ್ಸ್ ಯಾಕೆ ಅಂತ ಮೊಬೈಲ್ ಸ್ವಿಚ್ ಆಫ್ ಅಷ್ಟೇ "

" ಇರ್ಭೋದು, ಆದರು ನಿಮ್ ಕಾಮನ್ ಫ್ರೆಂಡ್ಸ್ ಹತ್ರ ಒಂದ್ಸಾರಿ ವಿಚರ್ಸು ಮಗ "

" ಸರಿ, ಒಂದ್ ಅರ್ಧ ಘಂಟೆಲ್ಲಿ ಕಾಲ್ ಮಾಡ್ತೀನಿ ಬಿಡು "


ಮೋಟಾರ್ ಬೈಕ್ ಹತ್ತಿ ಶ್ರೀಧರ ಆಶ್ರಮದಿಂದ ಮನೆಯ ಕಡೆಗೆ ಹೊರಟೆ. ಮನಸ್ಸು ನವೀನನ ಬಗ್ಗೆನೇ ಯೋಚಿಸುತ್ತಿತ್ತು. ಸ್ಕೂಲ್ ಹೈ ಸ್ಕೂಲ್ ಒಟ್ಟಿಗೆ ಓದಿದ್ದದ್ರು ನಮ್ಮ ಮಧ್ಯ ಅಂಥ ಒಳ್ಳೆ ಗೆಳೆತನ ಏನು ಇರ್ಲಿಲ್ಲ. ಕಾಲೇಜ್ ನಲ್ಲೂ ಬೇರೆ ಬೇರೆಕಡೆ ಓದಿದ್ವಿ. ಆಮೇಲೆ ಅವನು ಸಿಕ್ಕಿದ್ದು CA ಕೋಚಿಂಗ್ ಕ್ಲಾಸ್ ನಲ್ಲಿ . "ಏನೋ ನೀನು CA ಮಾಡ್ತಿದಿಯ" ಅಂತ ಕೇಳಿದ್ದಕ್ಕೆ, " ಇಲ್ಲ, ಇಂಜಿನಿಯರಿಂಗ್ ಮಾಡ್ತಿದೀನಿ, ಅದಕ್ಕ್ಕೆ ಇಲ್ಲಿಗ್ ಬಂದಿದೀನಿ" ಅಂತ ಹೇಳಿದ್ದ, ಗಾಂಚಲಿ ನನ್ಮಗ. ನಮ್ಮಿಬ್ಬರ ಸ್ನೇಹ ಬೆಳಿಯಕ್ಕೆ ಒಂದೇ ಕಾರಣ. ಕನ್ನಡ ಸಿನೆಮಾಗಳು. ನನಗಿದ್ದದ್ದು ಎರಡೇ ರೀತಿಯ ಸ್ನೇಹಿತರು, ಕನ್ನಡ ಬರದ ಅನ್ಯ ಭಾಷಿಕರು ಮತ್ತು ಕನ್ನಡ ಫಿಲಂಸ್ ನೋಡೋದೇ ಅವಮಾನ ಅಂದುಕೊಂಡಿರೋ ಮೂರ್ಖ ಕನ್ನಡಿಗರು. ಅದಕ್ಕೆ ಅನಿವಾರ್ಯವಾಗಿ ಕನ್ನಡ ಫಿಲಂಸ್ ನೋಡೋಕ್ಕೆ ನವೀನನ ಜೊತೇನೆ ಹೋಗಬೇಕಾಗುತ್ತಿತ್ತು . ಆಮೇಲೆ ಕ್ಲಾಸ್ನಲ್ಲಿ ನಾವೇನ್ ಜೊತೆಗೆ ಇರ್ತಿರ್ಲಿಲ್ಲ, ಒಟ್ಟಿಗೆ ಇಬ್ಬರು ಇಂಟರ್ಮೀಡಿಯೇಟ್ ಪಾಸು ಮಾಡಿ, ಆರ್ಟಿಕಲ್ ಟ್ರೇನಿಂಗ ಕೂಡ ಮುಗ್ಸಿದ್ವಿ. ೬ ತಿಂಗಳ ಹಿಂದೆ ನಾನು ಫೈನಲ್ exam ಮುಗಿಸಿದೆ, ನಾವೀನಂದು ಮಾತ್ರ ಆಗ್ಲಿಲ್ಲ. ಒಂದು ವರ್ಷದಿಂದ ಯಾಕೋ ಅವನ ಗ್ರಹಚಾರ ಸರಿ ಇದ್ದಂಗಿಲ್ಲ. ಮೊದಲು ಅವನ ಹುಡುಗಿ ಕೈ ಕೊಟ್ಳು, ಆಮೇಲೆ ಫೈನಲ್ ನಲ್ಲಿ ಫೈಲ್ ಆದ. ಎರಡು ದಿನದ ಹಿಂದೆ ಸಿಕ್ಕಾಗೂ ತುಂಬಾ ಡಲ್ ಇದ್ದ. ಒಹ್, ಇವತ್ತು ರಿಸಲ್ಟ್ ದಿನ, ರಿಸಲ್ಟ್ ಬಂದಿದೆಯಾ ? ಅದಕ್ಕೆ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾನಾ ?


ಮನೆಗೆ ಬಂದ ತಕ್ಷಣ ಮೊದಲು ಫೋನ್ ಮಾಡಿದ್ದು ಕಿಶೋರನಿಗೆ.


"ಇಲ್ಲ ಅವ್ನು ೨ ಘಂಟೆಗೆ ಆಫೀಸಿನಿಂದ ಹೊರಟು ಬಿಟ್ಟ , ಆಮೇಲೆ ಸಿಕ್ಲಿಲ್ಲ" ಎಂಬ ಉತ್ತರ ಬಂತು.


ಆಮೇಲೆ ಪ್ರಭುಗೆ ಕಾಲ್ ಮಾಡಿದೆ "ಇಲ್ಲ ಮಗ, ಲಾಸ್ಟ್ ವೀಕ್ ಅಷ್ಟೇ ಸಿಕ್ಕಿದ್ದ, ನಮಗೆ ಮೀಟ್ ಆಗೋ ಐಡಿಯಾನೆ ಇರ್ಲಿಲ್ಲ " ಅಂದ.


ಇನ್ನು ನಾಲ್ಕು ಜನರಿಗೆ ಕಾಲ್ ಮಾಡಿದೆ. ಯಾರಿಂದಾನು ಉಪಯೋಗ ಆಗ್ಲಿಲ್ಲ.ಎಲ್ಲರಿಗು ಬೇರೆ ಯಾರಾದ್ರೂ ಫ್ರೆಂಡ್ಸ್ ಹತ್ರ ವಿಚಾರ್ಸಿ ಅಂತ ಹೇಳಿದೆ. ಇದನ್ನೆಲ್ಲಾ ಸುಶಂತನಿಗೆ ತಿಳಿಸೋ ಹೊತ್ತಿಗೆ ಘಂಟೆ ೯. ೩೦ ಆಗಿತ್ತು. ಇನ್ನು ನವೀನನ ಫೋನ್ ಸ್ವಿಚ್ ಆಫ್ ಅಂತಾನೆ ಬರ್ತಿತ್ತು. ಊಟ ಮಾಡೋ ಮನಸೇ ಆಗ್ಲಿಲ್ಲ. ಮನಸು ಮತ್ತೆ ನವೀನನ ಬಗ್ಗೆ ಯೋಚ್ಸೋಕೆ ಶುರು ಮಾಡಿತು. ಕೊನೆಸಾರಿ ಸಿಕ್ಕಿದ್ದಾಗ ಅದೆಷ್ಟು ಗಂಭೀರವಾಗಿದ್ದ " ಮುಂದಿನ ವರ್ಷ ಅಪ್ಪ ರಿಟೈರ್ ಆಗ್ತಾರೆ, ನಾನು ಇನ್ನು ಸೆಟ್ಲ್ ಆಗಿಲ್ಲ. ತಂಗಿ ಮದ್ವೆ ಬೇರೆ ಮಾಡ್ಬೇಕು " ಅಂತೆಲ್ಲ ಮಾತಾಡಿದ್ದ. ಅವನ ಬುದ್ಧಿವಂತಿಕೆಗೆ CA ಮುಗಿಸೋದು ಸುಲಭಾನೆ. ಮುಗಿಲಿಲ್ಲ ಅಂದ್ರು ಒಳ್ಳೆ ಕೆಲಸ ಸಿಗತ್ತೆ. ಚಿಂತೆ ಮಾಡೋ ಅಷ್ಟು ಸಮಸ್ಯೆ ಏನು ಇಲ್ಲ. ಆದರು ಯಾವತ್ತೂ ಇಲ್ಲದವನು ಇವತ್ತೇ ಯಾಕೆ ಫೋನಿಗೆ ಸಿಕ್ತಾ ಇಲ್ಲ ? ರಿಸಲ್ಟ್ ಬಂದಿದೆಯ ಅಂತ ನೋಡಿದೆ, 'to be announced shortly' ಅಂತ ಬರೆದಿತ್ತು, ಒಂಥರಾ ಸಮಾಧಾನ ಆಯ್ತು .


ಘಂಟೆ ೧೦. ೧೫ ಆಗಿತ್ತು. ನವೀನನ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಆವಾಗ ಸುಶಂತನ message ಬಂತು


"can check with Radha once".


ರಾಧಾ...ಅವಳ ಜೊತೆ ಮಾತಾ? ಅವಳ ಜೊತೆ ಮಾತಾಡಿ ಗೆಲ್ಲೋನ್ ಯಾರು. ನವೀನನ ಮಾಜಿ ಪ್ರೇಯಸಿ. ಅದು ಹೇಗಿದ್ನೋ ಅವನು ಅವಳ ಜೊತೆ. ಇವನಿಗೆ ಸೊಕ್ಕು ಅಂದ್ರೆ ಅವಳಿಗೆ ಇವನ ಹತ್ತರಷ್ಟು. ಒಟ್ಟಿಗೆ ಬರುತಿದ್ದರಲ್ಲ ಇಬ್ಬರು ಕೋಚಿಂಗ್ ಕ್ಲಾಸ್ ಗೆ. ಒಂದುವರೆ ವರ್ಷ ಇಬ್ಬರು ಒಟ್ಟಿಗೆ ಓಡಾಡಿಕೊಂಡಿದ್ದರು. ಆಮೇಲೊಂದು ದಿನ ಅವಳೇ " ಇದು ಸರಿಹೋಗ್ತಿಲ್ಲ ನಿನ್ನ ದಾರಿ ನೀ ನೋಡ್ಕೋ" ಅಂದು ಬಿಟ್ಟಳು. ಅವತ್ತೇ ಬಂದಿದ್ದನಲ್ಲ ಇವನು, ಮುಖ ಸಣ್ಣ ಮಾಡಿಕೊಂಡು " ಕೈ ಕೊಟ್ಳು ಮಗ, ಬರಿ timepass ಅಂತೆ. ನಿಂಗಿಂತ ಮುಂಚೇನು ನಂಗೆ boyfriends ಇದ್ರೂ, ಮುಂದೇನು ಇರ್ತಾರೆ. ನಾನೇನು ನಿಂಜೊತೆ lifelong ಇರ್ತೀನಿ ಅಂತ ಹೇಳಿರಲಿಲ್ಲ. ಬೇರೆ ಯಾರನ್ನಾದರು ನೋಡ್ಕೋ ಹೋಗ್, ಮುಖಕ್ಕೆ ಹೊಡದಂಗೆ ಹೇಳಿಬಿಟ್ಟಳು " ಅಂತ ಹೇಳಿದವ ಮುಖದಲ್ಲಿ ಮೊದಲ ಬಾರಿಗೆ ದುಖಃ ಕಾಣಿಸಿತ್ತು. ನಾನು ನನ್ನ ಕೈಯಲ್ಲಾದ ಸಮಾಧಾನ ಹೇಳಿದೆ. "ನೀನೊಂದ್ಸಾರಿ ಮಾತಾಡು ಮಗ, ನನ್ call pick ಮಾಡ್ತಾ ಇಲ್ಲ" ಅಂತ ಬಲವಂತ ಮಾಡಿ ನನ್ನ ಕೈಯಲ್ಲಿ call ಮಾಡಿಸಿದ.


ನನ್ನ ಗ್ರಹಚಾರ ಕೆಟ್ಟಿತ್ತು, ನವೀನನ ಮಾತು ಕೇಳಿ ನಾನು call ಮಾಡಿದೆ. ಎಷ್ಟೊಂದ್ ಬೈದಿದ್ಲು. " ಸುಮ್ಮನೆ ನಿನಗ್ಯಾಕೋ ಅಧಿಕ ಪ್ರಸಂಗ ? ಇರೋ friendship ಹಾಳ್ಮಾಡ್ಕೋಬೇಡ. ಅವನಿಗೆ ಸರಿಯಾಗ್ ಓದಿ exam clear ಮಾಡ್ಲಿಕ್ಕೆ ಹೇಳು. ಸುಮ್ಮನೆ ನನ್ನ ಬಗ್ಗೆ ಯೋಚನೆ ಮಾಡ್ತಾ ಇದ್ರೆ ಹಾಳಾಗೋದು ಅವನದ್ದೇ ಜೀವನ. ನಾನಿಲ್ಲಿ ಅರಾಮಾಗೇ ಇರ್ತೀನಿ. ನೀವು ಹಳ್ಳಿ ಹುಡುಗ್ರು ಹಿಂಗೇನೆ, ಒಂದು ಹುಡುಗಿ ಸಿಕ್ಕ ತಕ್ಷಣ ಮನಸ್ನಲ್ಲೇ ಮದುವೆ ಆಗೀ, ಮನೆ ಮಾಡಿ ಮಕ್ಕಳನ್ನು ಹೆತ್ತು ಬಿಡ್ತೀರಿ..... " ಇನ್ನು ಏನೇನೋ ಹೇಳಿದಳು. ಅದಕ್ಕೆ ಏನು ಉತ್ತರ ಕೊಡಬೇಕೊ ಗೊತ್ತಾಗಿಲ್ಲ " ಅವನು ನಿನ್ನನ್ನ ತುಂಬಾ ಹಚ್ಚಿಕೊಂಡಿದಾನೆ " ಅಂತಷ್ಟೇ ಹೇಳಿದೆ. ಅದಕ್ಕವಳು "ನೀನಾದ್ರು ಸರಿ ಇದ್ದೀಯ ಅಂದ್ಕೊಂಡಿದ್ದೆ. ಮತ್ತೆ ಮತ್ತೆ ಅದೇ ವಿಷಯ ಮಾತಾಡೋಹಾಗಿದ್ರೆ ನಂಗೆ ನಿಂದೂ friendship ಬೇಡ." ಅಂತ ಹೇಳಿ ಕಾಲ್ ಡಿಸ್ಕನೆಕ್ಟ್ ಮಾಡಿದವಳು ಮತ್ತೆ ಸಿಗಲಿಲ್ಲ. ಈಗ ಅವಳಿಗೆ ನಾನು ಕಾಲ್ ಮಾಡ್ಬೇಕು. ಅದೇ ನವೀನನ ಬಗ್ಗೆ ಕೇಳೋಕ್ಕೆ.


ಇದೆಲ್ಲ ಮುಗಿದು ಒಂದು ವರ್ಷನೆ ಆಯಿತು. ಬಹುಷಃ ಅವಳದ್ದು CA complete ಆಗಿರತ್ತೆ. ಸುಶಾಂತಂಗು ಇದೆಲ್ಲ ಗೊತ್ತಿದ್ದರು ರಾಧಾ ಪರಿಚಯ ಇಲ್ಲ. ಹಾಗಾಗಿ ನಾನೇ call ಮಾಡ್ಬೇಕು. ಧೈರ್ಯ ಮಾಡಿ ನಾನೇ call ಮಾಡಿದೆ.


"ಹಲೋ.....ಹಲೋ ರಾಧ..."


"ಒಹ್, ನೀನಾ.. ನವೀನನ ಬಗ್ಗೆ ಆಗಿದ್ರೆ call ಕಟ್ ಮಾಡ್ತೀನಿ"


"ಒಂದ್ ನಿಮಿಷ ಮಾತ್ ಕೇಳ್ತಿಯ"


"ಏನು ಬೇಗ ಹೇಳು"


"ನವೀನ ಮಧ್ಯಾಹ್ನದಿಂದ ಕಾಣಿಸ್ತಾ ಇಲ್ಲ, ಮೊಬೈಲ್ switchoff ಬರ್ತಿದೆ. ನಿಂಗೇನಾರು ಸಿಕ್ಕಿದ್ನಾ ಅಂತ"


"ಓಹ್, ಹೊಸ ನಾಟಕನ ನಿಮ್ಮಿಬ್ರದ್ದು ? ನಾನೇನು ಅಯ್ಯೋ ಪಾಪ ಅನ್ನಲ್ಲ, ಅಲ್ಲೇ ಪಕ್ಕದಲ್ಲೇ ಇರ್ತಾನೆ ಅವನು"


"ಮನುಷ್ಯತ್ವ ಇಟ್ಕೊಂಡ್ ಮಾತಾಡು, ತುಂಬಾ tensionನಲ್ಲಿ ಇದಿವಿ"


"ಇಲ್ಲ ಅಂತಾನೆ ಅನ್ಕೋ. ಹುಡುಗಿಗಾಗಿ ಲೈಫ್ ಹಾಳ್ ಮಾಡ್ಕೊಳೋನು ವೇಸ್ಟ್ ನನ್ಮಗ. ಅಂಥೋನಿಗೆ help ಮಾಡೋ ನಿನ್ನಂತೋನು ಇನ್ನು ದೊಡ್ಡವೇಸ್ಟ್"


"ನೀನು ಏನ್ ಬೇಕಾದ್ರೂ ತಿಳ್ಕೋ... ಅವನು ಸಿಕ್ತಿಲ್ಲ. ನಿಂಗೆ ಗೊತ್ತಾದ್ರೆ ಹೇಳು ಅಷ್ಟೇ."


"ಅವನು ನನ್ನ ಹೆಸರು ಬರೆದು suicide ಮಾಡ್ಕೊಂಡ್ರು ನಂಗೆ guilt ಕಾಡಲ್ಲ ತಿಳ್ಕೋ. ಅವನು ಎಲ್ಲಿ ಹಾಳಾಗ್ ಹೋದರು ನನಗೆ care ಇಲ್ಲ. bye "


ಏನು ಮಾಡಬೇಕೋ ತೋಚಲಿಲ್ಲ. ನವೀನ ಧೈರ್ಯವಂತ, ಅಂತಹ ದೊಡ್ಡ ಸಮಸ್ಯೆ ಏನು ಅವನ ಜೀವನದಲ್ಲಿ ಇಲ್ಲ. ಆದರು ಮಧ್ಯಾಹ್ನದಿಂದ ಕಾಣಿಸ್ತಾ ಇಲ್ಲ. ಒಂದು ದಿನಾನು ಮೊಬೈಲ್ ಬಿಟ್ಟು ಇರೋನೆ ಅಲ್ಲ. ಇನ್ನೇನು ತೋಚದೆ ಸುಶಂತನಿಗೆ ಕಾಲ್ ಮಾಡಿದೆ. " ಮಗಾ, ರಾಧಂಗು ಗೊತ್ತಿಲ್ವಂತೆ. ಅವಳಜ್ಜಿ.... "


" ಯಾಕೆ ಏನಂದಳು "


" ಏನಿಲ್ಲ ಬಿಡು. ಈವಾಗ ಯಾರಿದಾರೆ ರೂಮಲ್ಲಿ "


" ಯಾರು ಇಲ್ಲ. ಶಾಮಣ್ಣ ಐದು ಘಂಟೆಗೆ friend ರೂಮಿಗೆ ಹೋದ. ನಾನು ಇಲ್ಲಿದೀನಿ, ಯಾರು ಇರಲ್ಲ."


" ಹಾಗಾದರೆ ನಾನು ಒಂದು ಸಲ ನೋಡಿಕೊಂಡು ಬರ್ತೀನಿ ... last chance "


ಕುಮಾರಸ್ವಾಮಿ ಲೇಔಟ್ ಇಂದ ಇಟ್ಟುಮಡು ಎಷ್ಟು ಮಹಾ ದೂರ. ತಕ್ಷಣ ಬೈಕ್ ಹತ್ತಿ ಹೊರಟೆ. ದೇವೇಗೌಡ ಪೆಟ್ರೋಲ್ ಬಂಕ್ ನಲ್ಲಿ ಯಾವಾಗಿನಂತೆ traffic ಇರಲಿಲ್ಲ. ರಾತ್ರಿ 11.30, ಬೆಂಗಳೂರಿನಲ್ಲಿ ಎಲ್ಲು traffic ಇರೋದಿಲ್ಲ. ಸಲ್ಪ ಮುಂದೆ ಬಂದರೆ ಎಡಕ್ಕೆ ಈಶ್ವರಿ ಟಾಕೀಸ್. ಇಲ್ಲಿ ಅದೆಷ್ಟು film ನೊದಡಿದೇವೊ ಏನೋ, ನಾನು ನವೀನ ಮತ್ತೆ ಪಾಟೀಲ. ತಕ್ಷಣ ನೆನಪಾಯಿತು, ಪಾಟೀಲ. ಅವನಿಗೆ ಕೇಳಲೇ ಇಲ್ಲ. ಅದು ಹೇಗೆ ಮರೆತೆ, ಒಂದು ಸಾರಿ ಈಗಲೇ phone ಮಾಡಲ ಅನ್ನಿಸಿತು. ಬೇಡ ನವೀನನ ರೂಮಿನಲ್ಲಿ ನೋಡಿದ ನಂತರನೇ ಮಾಡೋಣ ಅಂದುಕೊಂಡೆ.

ನವೀನನ ರೂಮ್ ಇರೋದು 3rd floor ನಲ್ಲಿ. ಒಂದು ರೀತಿಯ ಭಯದಲ್ಲೇ ಮೆಟ್ಟಿಲು ಹತ್ತ ತೊಡಗಿದೆ. ಹಿಂದಿನಿಂದ ಯಾರೋ ನನ್ನ ಹೆಸರು ಕರೆದಂತಾಯಿತು. ನೋಡಿದರೆ ಪಾಟೀಲ. "ನೀನು ಬಂದ್ಯಾ, ನವೀನನ್ನ ನೋಡಕ್ಕೆ" ಎಂದೆ. "ಹೌದು ಮತ್ತೆ, 15 ನಿಮಿಷ ಹಿಂದೆ ಅಷ್ಟೇ ಗೊತ್ತಾಯ್ತು." ಎಂದ. ಬಾ ನೋಡೋಣ ಎಂದು ಇಬ್ಬರು ವೇಗವಾಗಿ ಮೇಲೆ ಹತ್ತಿದೆವು. ಬಾಗಿಲಿನಿಂದ tube light ಬೆಳಕು ಬರುತ್ತಿತ್ತು, ಬಾಗಿಲು ತಳ್ಳಿದರೆ TVಯಲ್ಲಿ ಯಾವುದೊ ಹಳೆ ರಾಜಕುಮಾರ್ ಫಿಲಂ, ನೆಲದ ಮೇಲೆ ಒಂದು laptop, ಅದರ screen ಮೇಲೆ " to be announced soon " ಅನ್ನೋ ಬರಹ, ಅದರ ಪಕ್ಕದಲ್ಲಿ ಒಂದು beer ಬಾಟಲಿ ಮತ್ತು ಯಾವುದೋ ಯೋಚನೆಯಲ್ಲಿ ಮುಳುಗಿದ ನವೀನ.

" ಥೂ... ನನ್ಮಗ್ನೇ... ಮೊಬೈಲ್ ಯಾಕೋ switch off ಮಾಡಿದಿಯ. " ಎಂದೆ.


"ಏನ್ ಇಬ್ರು ಈ ಹೊತ್ತಲ್ಲಿ ಬಂದಿದಿರಾ, result ಬಂತಾ ?" ಗಾಬರಿಯಿಂದ ಕೇಳಿದ.


"ಮೊಬೈಲ್ ಎಲ್ಲಿ ಹೇಳು first" ಪಾಟೀಲ ಕೇಳಿದ.


"ಮನೆಯಿಂದ 20 ಸಾರಿ call ಬರತ್ತೆ ಅಂತ, switch off ಮಾಡಿದಿನಿ." ನವೀನ ಅರ್ಧ ನಶೆಯಲ್ಲಿ ಹೇಳಿದ. ಅವನಿಗೆ ಆಗಿದ್ದೆಲ್ಲ ವಿವರಿಸಿ, ಇನ್ನು result ಬರೋಲ್ಲ ಮಲಗು ಅಂತ ಅವನಿಗೆ ಹೇಳಿ ಹೊರಟೆವು. "fail ಆಗಿ ಹೊಗೆ ಹಾಕ್ಸೊಂಡಿರ್ತೀನಿ ಅಂತ ಓಡೋಡಿ ಬಂದ್ರಾ" ಅಂತ ನವೀನ ಹೇಳಿ ಬಾಗಿಲು ಹಾಕಿಕೊಂಡ. ನಾವು ನವೀನನ ಮಾತಿಗೆ ನಗುತ್ತ ಕೆಳಗೆ ಇಳಿದೆವು.

"ನಾನೇ ನಿನಗೆ call ಮಾಡೋಣ ಅಂತಿದ್ದೆ, ಸುಶಾಂತ್ ಮಾಡಿದನ ?" ನಾನು ಬೈಕ್ ಹತ್ತಿ ಪಾಟೀಲನಿಗೆ ಕೇಳಿದೆ. "ನನಗೆ call ಮಾಡಿದ್ದು ಸುಶಾಂತ್ ಅಲ್ಲ ರಾಧ...!" ಒಂದು ನಗೆ ಬೀರಿ ಹೇಳಿದ ಪಾಟೀಲ

"ರಾಧನಾ ? ನಾನು ಫೋನ್ ಮಾಡಿದ್ರೆ ಕೆಟ್ಟದಾಗಿ ಮಾತಾಡಿದಳು ?"


"ಒಂದು secret ಹೇಳ್ತೀನಿ ಕೇಳು, study leave ಶುರು ಆಗತ್ತೆ ಅನ್ನೋವಾಗ ಅವಳು ಬೇಕಂತಲೇ breakup ಮಾಡ್ಕೊಂಡಿದ್ದು. ಈ ನನ್ಮಗ ಸರಿಯಾಗಿ ಓದಲಿ ಅಂತ."


"ಅಂದ್ರೆ ಅವಳು ಇನ್ನು ಇವನನ್ನು ಬಿಟ್ಟಿಲ್ಲ "


"ಅದು ಗೊತ್ತಿಲ್ಲ, ಬಂದ್ರು ಬರಬಹುದೇನೋ. ಆದರೆ breakup ಆಗಿದ್ದು ಇವನು ಸರಿಯಾಗಿ ಓದಲಿ ಅಂತಾನೆ. ಈ ವಿಷ್ಯ ಅವನಿಗೆ ಹೇಳಬೇಡ."


" ಎಲ್ಲಾದರು ಉಂಟಾ ಈಗಲೇ ಹೋಗಿ ಹೇಳಿಬಿಡ್ತೀನಿ."


" ಹೇಳು, ನಾನು ಈಗಲೇ ರಾಧಂಗೆ ಹೇಳ್ತಿನಿ."


" ಬೇಡ ಬಿಡು, ನಾಳೆ pass ಆಗ್ತನಲ್ಲ, ಅವಳೇ ಹೇಳಲಿ."


" ಹಂಗ್ ಬಾ ದಾರಿಗೆ."


" ಸರಿ, ಲೇಟ್ ಆಯ್ತು, ಗುಡ್ ನೈಟ್."


" ಗುಡ್ ನೈಟ್, ಯಾವುದೇ ಕಾರಣಕ್ಕೂ ನವೀನನಿಗೆ ಹೇಳಬೇಡ." ಎಂದು ಹೇಳಿ ಪಾಟೀಲ ಹೊರಟು ಹೋದ.

ನಾನು ನನ್ನ ಬೈಕ್ start ಮಾಡಿದೆ. ಕತ್ತಲೆಯಾಗಿದ್ದ ರಸ್ತೆಯಲ್ಲಿ ಬೆಳಕಾಯಿತು. accelerator ತಿರುವಿದೇ, ಬೈಕ್ ಮುಂದೆ ಚಲಿಸಿತು. ಮನಸಲ್ಲಿ ಒಂದು ಪ್ರಶ್ನೆ ಉಳಿಯಿತು.

"ನಾಳೆ ನವೀನನ ಬಾಳಲ್ಲಿ ಬೆಳಕು ಮುಡುತ್ತಾ ?"



Rate this content
Log in

Similar kannada story from Drama