manjula g s

Comedy Romance Tragedy

4  

manjula g s

Comedy Romance Tragedy

ಸುಂದರಾಂಗ ಜಾಣ

ಸುಂದರಾಂಗ ಜಾಣ

4 mins
355


ಪವೀ.... ಪಕ್ಕದ ಮನೆಯವರು ಪೂಜೆಗೆ ಬಿಡಿ ಹೂ ತಂದಿದ್ದಾರೆ, ತೆಗೆದುಕೋ.....

ಎಂದು ಹೇಳಿದ ಚಿಕ್ಕಮ್ಮನ ಕೂಗಿಗೆ ಮದುವೆ ಮನೆ ಸಂಭ್ರಮದಲ್ಲಿ ಮಕ್ಕಳಿಗೆ ಮೆಹೆಂದಿ ಹಾಕುತ್ತಿದ್ದ ನಾನು, ಎದ್ದು ಬಾಗಿಲ ಬಳಿ ಹೋದೆ.ಯಾರೋ ನನಗೆ ಹೊಸಬರು ಹೂ ತಂದಿರುತ್ತಾರೆ, ಗೊತ್ತಿಲ್ಲದಿದ್ದರೂ ಪರವಾಗಿಲ್ಲ; ಚಿಕ್ಕಮ್ಮ ಹೇಳಿದ್ದಾರಲ್ಲ.... ಎಂದು ಒಲ್ಲದ ಮನಸ್ಸಿನಿಂದಲೇ ಹೋದಾಗ, ಬಾಗಿಲ ಬಳಿ ಕಂಡದ್ದು ಮಾತ್ರ ಅತ್ಯಾಶ್ಚರ್ಯ!


ಅಷ್ಟಕ್ಕೂ ಹೂ ತಂದದ್ದು ಅವನೇ.... ನಮ್ಮ ಸುಂದರಾಂಗ ಜಾಣ!

ಒಂದು ಕ್ಷಣ ನನ್ನ ಕಣ್ಣುಗಳನ್ನು ನನಗೇ ನಂಬಲಾಗಲಿಲ್ಲ! ತಕ್ಷಣವೇ ಗೆಳತಿ ಸುನಿ ಅಲಿಯಾಸ್ ಸುನಿತಾ ನೆನಪಾದಳು. ಒಮ್ಮೆಲೇ ಕಾಲೇಜಿನ ನೆನಪುಗಳೆಲ್ಲವೂ ಅಲೆಅಲೆಯಾಗಿ ನನ್ನ ಮನದಲ್ಲಿ ಬಂದು ಹಾದುಹೋದವು.


ಅರೆ..... ಇವನೇನು ಇಲ್ಲಿ? ಇಷ್ಟು ವರ್ಷಗಳ ಬಳಿಕ ಕಾಣುತ್ತಿರುವ! ಇಷ್ಟು ದಿನ ಮರೆತುಹೋದಂತಿದ್ದರೂ, ಆಗಾಗ ನೆನಪಿಗೆ ಬರುತ್ತಿದ್ದ ಇವನಿಗೆ ನನ್ನ ಗುರುತು ಸಿಕ್ಕೀತೇ...? ಎಂಬೆಲ್ಲ ಗೊಂದಲಗಳಿಂದ ಅಲ್ಲೇ ಗರಬಡಿದಂತೆ ನಿಂತಿದ್ದ ನನ್ನ ಮುಂದೆ ಒಂದೆರಡು ಕ್ಷಣ ಸುಮ್ಮನಿದ್ದ ಅವನೇ ನಂತರ....

ತೆಗೆದುಕೊಳ್ಳಿ ಈ ಹೂವು ಆಂಟಿಗೆ ಕೊಟ್ಟು ಬಿಡಿ...! ಎಂದು ಹೇಳಿ ಹೂವಿನ ಬುಟ್ಟಿ ನನ್ನ ಕೈಗಿಟ್ಟು ಮಾಮೂಲಿನಂತೆ ಹಿಂತಿರುಗಿ ಹೋದ. ಬಹುಶಃ ಅವನಿಗೆ ನನ್ನ ಗುರುತು ಸಿಕ್ಕಿರಲಿಕ್ಕಿಲ್ಲ.


ಬುಟ್ಟಿ ಹಿಡಿದು ಒಳ ಬಂದವಳೇ ನಾನು, ಚಿಕ್ಕಮ್ಮನನ್ನು ಕುರಿತು "ಯಾರು ಚಿಕ್ಕಮ್ಮ ಈಗ ಹೂ ತಂದುಕೊಟ್ಟಿದ್ದು?" ಎಂದು ಕೇಳಿದೆ.


ಅದಕ್ಕೆ ಚಿಕ್ಕಮ್ಮ... "ಓ ಅವನಾ....ಪಕ್ಕದ ಮನೆ ವಿಶ್ವ! ಸುಜಾತಾಳ ಗಂಡ.... ಪಾಪದ ಪ್ರಾಣಿ!" ಎಂದು ಹೇಳಿ, ತಮ್ಮ ಗಡಿಬಿಡಿಯ ಕೆಲಸದಲ್ಲಿ ತಲ್ಲೀನರಾದರು.


ಅವನ ಹೆಸರು ವಿಶ್ವ ಎಂದು ನನಗೆ ತಿಳಿದಿದ್ದು ಆಗಲೇ! ಇಷ್ಟೂ ವರ್ಷಗಳ ಕಾಲ ನಮಗೆಲ್ಲಾ ಅವನು ಬರೀ ಸುಂದರಾಂಗಜಾಣ ಎಂದಷ್ಟೇ ಪರಿಚಯ. ಮೊದಲು ಈ ವಿಷಯ ಸುನಿಗೆ ಹೇಳಬೇಕು, ಎಂದು ಮೊಬೈಲ್ ನಿಂದ ಕರೆ ಮಾಡಿದೆ.


"ಹಲೋ....ಸುನಿ ನಿನಗೊಂದು ಎಕ್ಸೈಟಿಂಗ್ ನ್ಯೂಸ್! ನಿನ್ನ ಸುಂದರಾಂಗಜಾಣನನ್ನು ನಾನು ಈ ದಿನ ನೋಡಿದೆ"...... ಎನ್ನುವಷ್ಟರಲ್ಲಿ ಅವಳು ಹೌಹಾರಿ ಹೋಗಿದ್ದಳು!


"ಹಾ.... ಪವಿ.... ಎಲ್ಲಿ ನೋಡಿದೆ? ಹೇಗಿದ್ದಾನೆ ಅವನು? ನಿನ್ನ ಬಳಿ ಮಾತನಾಡಿದನಾ? ನನ್ನ ಬಗ್ಗೆ ಕೇಳಿದನಾ? ಅಷ್ಟಕ್ಕೂ ನೀನು ಚಿಕ್ಕಮ್ಮನ ಮನೆ ಮದುವೆಗೆ ಹೋದವಳು....! ಅವನನ್ನು ಎಲ್ಲಿ ಬೇಟಿಯಾದೆ? ಎಂದು ಒಂದೇ ಸಮನೆ ಪ್ರಶ್ನೆಗಳ ಸುರಿಮಳೆ ಕರೆಯತೊಡಗಿದಳು.


ಅವಳ ಉತ್ಸಾಹಕ್ಕೆ ತಣ್ಣೀರೆರಚುವ ರೀತಿ ನಾನು," ಇರಮ್ಮ.... ಅಷ್ಟು ಆತುರ ಬೇಡ! ಜಸ್ಟ್ ನಾನು ಅವನನ್ನು ನೋಡಿದೆ ಎಂದಷ್ಟೇ ಹೇಳಿದೆ. ಮಾತನಾಡಲು ಆಗಲಿಲ್ಲ. ಅಷ್ಟಕ್ಕೂ ಅವನಿಗೆ ನನ್ನ ನೆನಪೇ ಇದ್ದಂತಿಲ್ಲ! ಇಲ್ಲೇ ಚಿಕ್ಕಮ್ಮನ ಮನೆ ಪಕ್ಕದ ಮನೆಯಲ್ಲೇ ಇದ್ದಾನಂತೆ! ಮದುವೆಯಾಗಿದೆ" ಎಂದೆ.


"ಪವಿ ಪ್ಲೀಸ್ ಅವನ ಬಗ್ಗೆ ವಿಚಾರಿಸು....!" ಎಂದಳು.


"ಏನೇ ಎರಡು ಮಕ್ಕಳ ತಾಯಿಯಾಗಿದ್ದೀ.....ನಿನಗೆ ಇನ್ನೂ ಅವನ ಬಗ್ಗೆ ಆಸಕ್ತಿ ಇದ್ದಂತಿದೆ...!" ಎಂದು ಕೆಣಕಿದೆ.


ತುಸು ಮುನಿಸಿಕೊಂಡಂತೆ, "ನೀನು ಮಾತ್ರ ಏನು ಎರಡು ಮಕ್ಕಳ ತಾಯಿಯಾಗಿಯಲ್ಲವೇ...?.ಅಲ್ಲದೆ ಅವನ ಬಗ್ಗೆ ನನಗೆ ಮತ್ತೆ ಹೇಳಬಹುದೇ.....? ನಾನು ಜಸ್ಟ್ ವಿಚಾರಿಸುತ್ತಿರುವೆ ಅಷ್ಟೇ...." ಎಂದು ನಕ್ಕಳು.


"ಆಯ್ತು ಮಾರಾಯ್ತಿ.....ವಿಚಾರಿಸಿ ಹೇಳುತ್ತೇನೆ" ಎಂದು ಹೇಳಿ ಫೋನ್ ಇರಿಸಿದೆ.


ಗಡಿಬಿಡಿಯ ಮದುವೆ ಮನೆಯಲ್ಲಿಯೂ ಸುಂದರಾಂಗಜಾಣನ ಹಿಂದಿನ ನೆನಪುಗಳು ಕಾಡತೊಡಗಿತ್ತು.


ಹದಿನೈದು ವರ್ಷಗಳ ಹಿಂದೆ ನಮ್ಮ ಕಾಲೇಜು ದಿನಗಳಲ್ಲಿ ಇಡೀ ಕಾಲೇಜಿಗೇ ಅವನು ಸುರಸುಂದರ. ನಾವು ಪಿಯುಸಿ ಓದುತ್ತಿರುವಾಗ ಅವನು ಡಿಗ್ರಿ ಓದುತ್ತಿದ್ದ. ಅಂದಗಾರನಾದ ಅವನನ್ನು ಎಲ್ಲ ಹುಡುಗಿಯರು ಸುಂದರಾಂಗ ಜಾಣ ಎಂದೇ ಕರೆಯುತ್ತಿದ್ದರು.


ಅದರಲ್ಲೂ ನನ್ನ ಆಪ್ತ ಗೆಳತಿ ಸುನಿತಾಳಿಗೆ ಅವನೆಂದರೆ ಏನೋ ಹುಚ್ಚು.  ಅದು ಪ್ರೀತಿಯೋ ಆಕರ್ಷಣೆಯೋ ತಿಳಿಯದಾದರೂ, ಅವನೆಂದರೆ ತಿಳಿಯದ ಮೋಹ. ಮೊದಲನೇ ವರ್ಷದಿಂದಲೇ ಅವನನ್ನು ಆರಾಧಿಸುತ್ತಾ, ಮನದ ಭಾವನೆಯನ್ನು ಮುಚ್ಚಿಟ್ಟು, ಎರಡನೇ ವರ್ಷ ತಡೆಹಿಡಿಯಲಾಗಿದೆ ನನ್ನೊಂದಿಗೆ ಹಂಚಿಕೊಂಡಿದ್ದಳು. ಅಷ್ಟರಲ್ಲಿ ಅವನು ಅಂತಿಮ ವರ್ಷದ ಪದವಿಯಲ್ಲಿದ್ದ. ಓದಿನಲ್ಲಿ ಬಹು ಜಾಣ. ಕಾಲೇಜಿನ ಎಲ್ಲಾ ಕಾರ್ಯಕ್ರಮಗಳ ನಿರೂಪಣೆಯಿಂದ ಹಿಡಿದು ಅಂತರ್ ಕಾಲೇಜು ಸ್ಪರ್ಧೆಗಳಲ್ಲಿ ಬಹುಮಾನ ಪಡೆದು ಸದಾ ಎಲ್ಲಾ ಪ್ರಾಧ್ಯಾಪಕರ ಅಚ್ಚುಮೆಚ್ಚಿನ ಶಿಷ್ಯನಾಗಿದ್ದ ನಮ್ಮ ಸುಂದರಾಂಗಜಾಣ. ಅದೇ ಅಡ್ಡ ಹೆಸರು ಕರೆದು ಕರೆದೂ ಅವನ ನಿಜ ಹೆಸರು ನಮಗೆ ತಿಳಿದಿರಲಿಲ್ಲ. ಪ್ರತಿದಿನ ಸುನಿಗೆ ಅವನ ಹುಡುಕಾಟವೇ ಸರಿಹೋಗುತ್ತಿತ್ತು. ಒಮ್ಮುಖ ಪ್ರೀತಿ....! ಅಲ್ಲ...ಅಲ್ಲ ಅವಳ ಪ್ರಕಾರ ಲವ್ ಅಟ್ ಫಸ್ಟ್ ಸೈಟ್! ಆದರೆ ಅವನು ಇವಳೇ ಅಲ್ಲದೆ ಬೇರೆ ಯಾರ ಬಗ್ಗೆಯೂ ತಲೆ ಕೆಡಿಸಿಕೊಳ್ಳದೆ ಇದ್ದರೂ; ಇವಳೇ ಹಿಂದೆ ಹಿಂದೆ ಹೋಗುವುದು, ಮುಂದೆ ನಿಂತು ನೋಡುವುದು, ನಗುವುದು,ಮಾತನಾಡಲು ಪ್ರಯತ್ನಿಸುವುದು.... ನನಗೆ ಅತಿರೇಕ ಎನಿಸಿ ಎಷ್ಟೋ ಸಾರಿ ಬುದ್ಧಿ ಹೇಳಲು ಹೋಗಿ ಸೋತಿದ್ದೆ.


ನೋಡುತ್ತಿರು ಅವನನ್ನು ಹೇಗಾದರೂ ಮಾಡಿ ಒಲಿಸಿಕೊಂಡು, ನಾನು ಅವನನ್ನೇ ಮದುವೆಯಾಗುತ್ತೇನೆ ಎಂದು ಶಪಥ ಬೇರೆ ಮಾಡಿದ್ದಳು.

ಒಂದು ದಿನ ಅವನ ನೇತೃತ್ವದಲ್ಲಿ ಯಾವುದೋ ಕಾರ್ಯಕ್ರಮದಲ್ಲಿ ಇವಳು ಸೇರಿಕೊಳ್ಳಲು ಹೋದಾಗ, ಅವನು ನಿರಾಕರಿಸಿ ಕಳುಹಿಸಿದ್ದ. ಆ ದಿನವೆಲ್ಲ ಇವಳ ಅಳುವಿನ ಗೋಳು ಸಹಿಸುವಷ್ಟರಲ್ಲಿ ನನಗೆ ಸಾಕಾಗಿತ್ತು. ಮುಂದೆ ನಮ್ಮ ಪರೀಕ್ಷೆಗಳು ಮುಗಿದು ಬೇರೆ ಬೇರೆ ಕೋರ್ಸುಗಳಿಗೆ ಸೇರಿದಮೇಲೆ, ಹೆಚ್ಚುಕಡಿಮೆ ಸುಂದರಾಂಗಜಾಣ ನೆನಪು ಮಾತ್ರ ಉಳಿದಿತ್ತು. ಅವಳ ಮದುವೆಯ ವೇಳೆಯಲ್ಲಿ ಅವನ ಹೆಸರಿಡಿದು ನಮ್ಮ ಗೆಳತಿಯರೆಲ್ಲ ಅವಳನ್ನು ಸತಾಯಿಸಿದ್ದೆವು....!


ಅದಾದ ಬಳಿಕ ಈಗಲೇ ಅವನನ್ನು ನೋಡುತ್ತಿರುವುದು. ಇಷ್ಟು ವರ್ಷ ನಮ್ಮಿಂದ ಅಗೋಚರನಾಗಿಬಿಟ್ಟಿದ್ದ. ಚಿಕ್ಕಮ್ಮನ ಮನೆ ಮದುವೆ ಕಾರ್ಯಗಳೆಲ್ಲೆಲ್ಲಾ ಅವನೇ ಓಡಾಡಿದ್ದ. ಮದುವೆ ಮುಗಿದ ಮೇಲೆ ನಿಧಾನವಾಗಿ ಚಿಕ್ಕಮ್ಮನ ಬಳಿ ಅವನ ಬಗ್ಗೆ ವಿಚಾರಿಸಿದೆ. 


ವಿಶ್ವ ಅಲಿಯಾಸ್ ಸುಂದರಾಂಗ ಜಾಣ ಇದೇ ಊರಿನ ಕಾಲೇಜಿನಲ್ಲಿ ಪ್ರಾಧ್ಯಾಪಕನಾಗಿ ಕೆಲಸ ಮಾಡುತ್ತಿದ್ದಾನೆ. ಆದರೆ ಅವನ ಕುಟುಂಬ ವಿಷಯ ಮಾತ್ರ ಕೇಳಿ ಬಹಳ ಬೇಜಾರಾಯಿತು. ಅವನು ತನಗಿಂತ ಹಿರಿಯ ವಯಸ್ಸಿನ ಹೆಂಗಸನ್ನು ಮದುವೆಯಾಗಿದ್ದಾನೆ. ಅದೂ ಅವಳ ಕಾಯಿಲೆ ಪೀಡಿತ ಗಂಡ ತೀರಿಕೊಳ್ಳುವವರೆಗೂ ಕಾದಿದ್ದು, ನಂತರ ಸಮಾಜ ಮತ್ತು ಮನೆಯವರ ವಿರೋಧದ ನಡುವೆಯೂ ಅವಳನ್ನು ಮದುವೆಯಾಗಿ, ತಂದೆತಾಯಿಯಿಂದ ದೂರವುಳಿದು, ಸಂಸಾರ ಮಾಡುತ್ತಿದ್ದಾನೆ. ಆಕೆಗೆ ಮೊದಲ ಗಂಡನಿಂದ ಪಡೆದ ಒಂದು ಹೆಣ್ಣುಮಗುವೂ ಇದೆಯಂತೆ! ಅದರ ಜವಾಬ್ದಾರಿಯೂ ಇವನೇ ಹೊತ್ತಿದ್ದಾನೆ. ಆದರೆ ತನ್ನ ಹೆತ್ತವರು ಮತ್ತು ಅವನ ಜೊತೆ ಹುಟ್ಟಿದ ಅಕ್ಕತಂಗಿಯರನ್ನು ಮಾತ್ರ ದೂರವಿರಿಸಿ, ಲೋಕದ ಕೆಂಗಣ್ಣಿಗೆ ಗುರಿಯಾಗಿದ್ದಾನೆ. ಇವನ ಹೆಂಡತಿ ಸುಜಾತ ಇವನಿಗಿಂತ ಹಿರಿಯವಳು! ಆದರೆ ಬಜಾರಿ ಹೆಂಗಸು ಎಂದು ಚಿಕ್ಕಮ್ಮ ತಿಳಿಸಿದರು.

ಅದು ಯಾವ ಗ್ರಹಚಾರವೋ ಇವನಿಗೆ ಇಂತಹ ವ್ಯಾಮೋಹ ಉಂಟಾಗಿದೆ...... ಕಾರಣ ಗೊತ್ತಿಲ್ಲ...! ಎನ್ನುತ್ತಾ ನಿಟ್ಟುಸಿರು ಬಿಟ್ಟರು.

ಕ್ಷಣಕಾಲ ನನಗೆ ನಂಬಲೇ ಆಗಲಿಲ್ಲ. ವಿಷಯವನ್ನು ಸುನಿಗೆ ತಿಳಿಸಿದೆ. ವಿಷಯ ತಿಳಿದು ಬೇಜಾರಾಯ್ತೋ ಏನೋ..... "ಹಾಳಾಗಿಹೋಗಲಿ, ಏನಾದರೂ ಮಾಡಿಕೊಳ್ಳಲಿ, ನನಗೇನೂ ಹೇಳಬೇಡ!" ಎಂದು ಹೇಳಿ ಫೋನ್ ಇರಿಸಿದಳು. ಚಿಕ್ಕಮ್ಮನ ಮನೆಯಿಂದ ಹಿಂತಿರುಗುವಾಗ ಸುಂದರಾಂಗ ಜಾಣ ಎದುರು ಬಂದು ಮುಗುಳ್ನಕ್ಕ. ಅವನ ಹಣೆಬರಕ್ಕೆ ನಗುವುದೋ ಅಳುವುದೋ ಗೊತ್ತಾಗಲಿಲ್ಲ. ಅಂತೂ ಸುಂದರಾಂಗ ಜಾಣ.... "ದೂರದಿಂದ ಬಂದಂತ ಸುಂದರಂಗ ಜಾಣ..... ನೋಟದಲ್ಲಿ ಸೂರೆಗೊಂಡ ಅಂತರಂಗ ಪ್ರಾಣ"ನಾಗಿಯೇ ನೆನಪಲ್ಲಿ ಉಳಿದ! ಅಂದೂ ಇಂದೂ ಹೆಸರು ಆ ಕೇಳಿದೊಡನೆ ಯಾವುದು ಉಲ್ಲಾಸ ಚಿಗುರೊಡೆಯುತ್ತದೆ..... 🙂


Rate this content
Log in

Similar kannada story from Comedy