manjula g s

Abstract Romance Others

4  

manjula g s

Abstract Romance Others

ಅವನು ಇನಿಯನಲ್ಲ...!

ಅವನು ಇನಿಯನಲ್ಲ...!

3 mins
381


ಧೈರ್ಯ ಬೇಕಿದೆ ಗೆಳತಿ! ಧೈರ್ಯ ಬೇಕಿದೆ!.......


ನನ್ನ ಪ್ರತಿಕ್ಷಣದಲ್ಲೂ ಮನಸ್ಸು ತರ್ಕಿಸುವ ಆಲೋಚನಾ ಲಹರಿಗಳಿಗೆ ಅಕ್ಷರರೂಪ ನೀಡಿ, ಸಮಾಜದ ಮುಂದೆ ಹಾಗಿರಲಿ....... ನನ್ನ ಮುಂದೆ ನಾನೇ ಹಿಡಿದು ಓದಲು ಧೈರ್ಯ ಬೇಕಿದೆ! 


ಕೆಲವೊಮ್ಮೆ ಭಾವನೆಗಳ ತೂಗುಗತ್ತಿಯ ಕೆಳಗೆ ನನ್ನದೇ ತಲೆ ಇರುತ್ತದೆ. ಭಾವನೆಗಳು ಹೊರಬಿದ್ದರೆ ಮೊದಲ ಹೊಡೆತ ನನಗೇ..........! 

ಇದರ ಸುಪ್ತ ಅರಿವು, ನನ್ನ ವಾಸ್ತವ ಪ್ರಜ್ಞೆಯೂ ಮನಸ್ಸಿನಲ್ಲಿರುತ್ತದೆ. ಆದ್ದರಿಂದಲೇ ಅವನ ಬಗ್ಗೆ ನಾನು ಎಲ್ಲಿಯೂ ಹೇಳಿಲ್ಲ.ಅವನನ್ನು ನನ್ನ ಆಸೆಯ ಅತೃಪ್ತ ಭಾವನೆಗಳನ್ನು ಅಂತರಂಗದ ಆಳದ ಲೋಕಕ್ಕೆ ತಳ್ಳಿ ಹೊರಬರದಂತೆ, ಬೇಸರದ ಬೀಗ ಜಡಿದುಬಿಟ್ಟಿದ್ದೆ. 


ಆದರೂ ಅವನು ಇನಿಯನಲ್ಲ,

ನನ್ನಸನಿಹ ಬರಲೂ ಇಲ್ಲ,

ಆಸೆಗಳ ವಿನಿಮಯವಾಗಲಿಲ್ಲ, 

ಆದರೂ ಪ್ರೇಮ ಎಂದಿಗೂ ಸಾಯಲಿಲ್ಲ!

ನಿಜ ಅವನು ಎಂದಿಗೂ ನನ್ನ ಇನಿಯನಲ್ಲ.

ನಾನು ಅವನನ್ನು ಆ ದೃಷ್ಟಿಯಿಂದ ನೋಡಲೇ ಇಲ್ಲ.....


ಆದರೂ ಅವನ ಮೇಲೆ ಇದ್ದುದು ಮಾತ್ರ ಕೇವಲ ಆಕರ್ಷಣೆಯಲ್ಲ....! ಅದಕ್ಕೂ ಮೀರಿದ ಯಾವುದೋ ಮೋಹ, ನಂಬಿಕೆ, ಸೆಳೆತ ಇದ್ದುದು ಮಾತ್ರ ಸುಳ್ಳಲ್ಲ...!


ಅದುವೆ ನನ್ನ ಮೊದಲಪ್ರೀತಿ....

ನಾ ಅನುಭವಿಸಿದ ಅನುಭೂತಿ.....

ನಾ ವರ್ಣಿಸಲಾಗದು ಕವಿಯ ರೀತಿ..... 

ಈಗ ಹೇಳಲೂ ಸಮಾಜದ್ದೇ ಭೀತಿ.....!


ಏಕೆಂದರೆ ಅವನು ಇನಿಯನಲ್ಲ! ನನ್ನ-ಅವನ ಭೇಟಿ ಬಹುತೇಕ ನಮ್ಮ ಕನಸುಗಳಲ್ಲಿಯೇ ಆಗಿದ್ದಿರಬಹುದು. ಅವನು ಬಹುವಾಗಿ ನನ್ನ ಕಾಡಿರಲೂಬಹುದು.......ನಾ ಬಯಸಿದಂತೆ ನನ್ನ ಭಾವನೆಗಳಿಗೆ ತನ್ನ ಭಾವನೆಗಳ ಮೇಳೈಸಲು ಅವನೂ ಸಹ ನನ್ನ ಕನಸುಗಳನ್ನೇ ಅವಲಂಬಿಸುತ್ತಾನೆ. ನಮ್ಮ ನಡುವೆ ಮೊದಲ ನೋಟ, ಮೊದಲ ಮುಗುಳುನಗೆ, ಮೊದಲ ಮಾತು, ಮೊದಲ ಸ್ಪರ್ಶ, ಮೊದಲ ಚುಂಬನ, ಮೊದಲ ಆಲಿಂಗನದಿಂದ ಹಿಡಿದು ಪ್ರತಿಬಾರಿಯ ಎಲ್ಲ ಸರಸಗಳೂ ನನ್ನ ಕಲ್ಪನೆಯಲ್ಲಿಯೇ ಕಳೆದು ಬಿಟ್ಟಿವೆ. ದೂರದ ಹುಣ್ಣಿಮೆಯ ಚಂದಿರನಾದ ಅವನು, ನನ್ನ ಬಾಳಿನ ಪ್ರತಿಮಾಸದಲ್ಲಿ ದಿನಕಳೆದಂತೆ ಮರೆಯಾದರೂ, ಮತ್ತೆ ವೃದ್ಧಿಸುತ್ತಾ ನೆನಪಿನ ಆಗಸದಲ್ಲಿ ಕಾಣತೊಡಗುವ.


ತುಡಿತಗಳು ಹಲವಾರು, 

ಮಿಡಿತಗಳು ನೂರಾರು, 

ಹಿಡಿತದಲ್ಲಿಸಾವಿರಾರು, 

ಕಳೆದುಹೋಗಿದೆ ಕಾಲ ಸರಿಸುಮಾರು! 


ಎಷ್ಟೇ ಕಾಲ ಸರಿದರೂ ಅವನು ಇನಿಯನಲ್ಲ ! ಕಾರಣ ಲೋಕದ ಹಲವಾರು ಪ್ರೇಮಿಗಳ ರೀತಿ ನಾವು ಬಾಳಬೇಕಿತ್ತು ಎಂದು ನನಗೆ ಅನ್ನಿಸಲೇ ಇಲ್ಲ. ಎಲ್ಲೇ ಇದ್ದರೂ....ಹೇಗೇ ಇದ್ದರೂ....ಅವನು ಸುಖವಾಗಿರಬೇಕು. ಅವನ ಇಚ್ಛೆಯ ಬದುಕು ಅವನಿಗೆ ಸಿಗಬೇಕು.......ಅವನ ನೆನಪಿನ ಪುಳಕ ಮಾತ್ರ ನನ್ನ ಪಾಲಿಗೆ ಇರಬೇಕು....

ಹಾಗಿದ್ದರೂ ಅವನೇ ನನ್ನ ಮೊದಲ ಪ್ರೇಮಿಯಾಗಿರಲಿ...!


ಈ ಜೀವನವೂ ಶಾಶ್ವತವಲ್ಲ, ,

ಕಳೆದ ವಾಸ್ತವವೂ ಇಚ್ಛೆಯದಲ್ಲ,

ತಿರುಗಿ ನೋಡಿದರೆ ನೆನಪೇ ಎಲ್ಲ, 

ಕಳೆದುಹೋಗುತ ಕಾಲ ತೃಪ್ತಿ ಉಳಿಸಿಲ್ಲ! 


ಅವನಿಗೂ ನನ್ನ ಬಗ್ಗೆ ಹಾಗೆಯೇ ಅನಿಸಿರಬಹುದು ಅಲ್ಲವೇ? ಅವನೂ ನನ್ನ ಸುಖವನ್ನೇ ಬಯಸುತ್ತಿರುವವ. ಮತ್ತು ಎಂದಿಗೂ ನನ್ನ ಪ್ರಸ್ತುತ ಬದುಕಿಗೆ ಅವನು ಅಡ್ಡಿ ಆಗಲಾರ............ಏಕೆಂದರೆ ಅವನು ನನ್ನ ಜೀವನದಲ್ಲಿ ಖಳನಾಯಕನ ಪಾತ್ರ ವಹಿಸುವುದೇ ಇಲ್ಲ. ಎಂದೆಂದಿಗೂ ಅವನದು ನಾಯಕನ ಪಾತ್ರವೇ....!


ಈ ನಂಬಿಕೆಯೇ ನನ್ನನ್ನು ಜೀವಂತವಾಗಿರಿಸಿದೆ ಗೆಳತಿ, ಜೀವಂತವಾಗಿರಿಸಿದೆ....! ಜೀವಕ್ಕಿಂತ ಮಿಗಿಲಾಗಿ ಮೆಚ್ಚಿಕೊಂಡಿದ್ದ ಅವನನ್ನು ಏನೆಂದು ಕರೆಯಬೇಕೊ ಸರಿಯಾಗಿ ಗೊತ್ತಿಲ್ಲವಾದ್ದರಿಂದ, ಅವನನ್ನು ಎಲ್ಲರ ಮುಂದೆ ಸ್ಮರಿಸುವ ಗೋಜಿಗೇ ಹೋಗುವುದಿಲ್ಲ. ಮತ್ತು ಅದು ಈಗ ಉಚಿತವೂ ಅಲ್ಲ....!


ಸರಾಗವಾಗಿ ಸಾಗುವ ಬದುಕನ್ನು ಅನುಮಾನದ ಪೆಡಂಭೂತದ ಮರಕ್ಕೆ ಹತ್ತಿಸುವ ಬಯಕೆ ನನಗಿಲ್ಲ! ಆದರೂ ಬಿಡದೆ ಮನದಲ್ಲಿ ಕುಳಿತಿರುವ ಅವನನ್ನು ಏನೆಂದು ಸಮೀಕರಿಸಬೇಕೆಂದು ಗೊತ್ತಾಗದಾಗ.......ಇಷ್ಟು ಮಾತ್ರ ಹೇಳಬಲ್ಲೆ!


ಅವನು ಇನಿಯನಲ್ಲ. . ... 

ಏಕೆಂದರೆ ಎಲ್ಲೂ ಅವನ ಬಗ್ಗೆ ಹೇಳಲು ನನಗೆ ಧೈರ್ಯವಿರಲಿಲ್ಲ. ಇಷ್ಟು ದಿನ ಈ ಹೇಡಿಯ ಒಳಗೆಯೇ ಕುಳಿತಿದ್ದ ಅವನನ್ನು ಇಂದು ಹೊರಹಾಕಲು ಧೈರ್ಯ ಮಾಡಿರುವೆ ಗೆಳತಿ........ ಕಾರಣವಿಷ್ಟೇ........ 

ನನಗೆ ಗೊತ್ತಿದೆ ಗೆಳತಿ.! ನಿನ್ನ ಹಾಗೂ ನಮ್ಮಂತಹ ಎಲ್ಲರೊಳಗೂ ಒಬ್ಬ ಕಲ್ಪನೆಯ ಅನಾಮಿಕ ಪ್ರೇಮಿ ಕುಳಿತಿರುವ. ಸದಾ ಅವನು ನಮ್ಮ ಕನಸುಗಳಲ್ಲಿಯೇ ನಮ್ಮನ್ನು ರಮಿಸುತ್ತಿರುವವ. ನಿತ್ಯದ ಬದುಕಲ್ಲಿ ಅವನ ಅನಿವಾರ್ಯತೆ ಇಲ್ಲದಿದ್ದರೂ....... ಸನ್ನಿವೇಶಗಳ ಸುಳಿಯಲ್ಲಿ ಸಿಕ್ಕಿ ಇದ್ದಕ್ಕಿದ್ದಂತೆ ಒಂಟಿಯಾಗುವ ಮನಸ್ಸಿಗೆ ಸಾಂತ್ವನ ನೀಡಲು ಅವನು ಬಂದೇ ಬರುವ! ಏಕೆಂದರೆ ಅವನು ಅವರವರ ಮೊದಲ ಪ್ರೇಮಿಯಾಗಿರುವವ...!

ಹೇಳಲು ಮಾತ್ರ ಯಾರಿಗೂ ನನ್ನಂತೆಯೇ ಧೈರ್ಯವಿಲ್ಲ........ಏಕೆಂದರೆ ಕಣ್ಣ ಮುಂದೆ ಕಾಣುವ ಬದುಕಿನಲ್ಲಿ..


      ಅವನು ಇನಿಯನಲ್ಲ.....! ಎಲ್ಲರಿಗೂ ಇದೇ ನಿಜ ಹೇಳು ಗೆಳತಿ......! ಇದೇ ನಿಜ ಹೇಳು......


Rate this content
Log in

Similar kannada story from Abstract