STORYMIRROR

manjula g s

Abstract Classics Inspirational

4  

manjula g s

Abstract Classics Inspirational

ಎಲ್ಲಿದೆ ಸಂತೋಷ??

ಎಲ್ಲಿದೆ ಸಂತೋಷ??

3 mins
272

ಶಾಂತಾಕಾರಂ ಭುಜಗಶಯನಂ ಪದ್ಮನಾಭಂ ಸುರೇಶಂ

ವಿಶ್ವಾಧಾರಂ ಗಗನಸದ್ರಿಶಂ, ಮೇಘವರ್ಣಂ ಶುಭಾಂಗಂ! 

ಲಕ್ಷ್ಮೀಕಾಂತಂ ಕಮಲನಯನಂ, ಯೋಗಿಭಿರ್ಧ್ಯಾನಗಮ್ಯಂ

ವಂದೇ ವಿಷ್ಣುಂ ಭವಭಯಹರಂ, ಸರ್ವಲೋಕೈಕನಾಥಂ! 


ಸರ್ವೇ ಜನಾಃ ಸುಖಿನೋ ಭವಂತು!.... 


ಎಂದು ಉಚ್ಚರಿಸುತ್ತಾ ರಾಮಾ ಭಟ್ಟರು ಗರ್ಭಗುಡಿಯ ಬಾಗಿಲನ್ನು ಹಾಕಿ ಹೊರಟಾಗ,  ಪ್ರತಿದಿನ ಗೋಧೂಳಿ ಸಮಯಕ್ಕೆ ದೇವಾಲಯಕ್ಕೆ ಬಂದು ಒಂದೆರಡು ಪ್ರದಕ್ಷಿಣೆ ನಮಸ್ಕಾರಗಳನ್ನು ಹಾಕಿ ಕ್ಷಣಮಾತ್ರವೂ ನಿಲ್ಲದೆ ಹೊರಟು ಹೋಗುತ್ತಿದ್ದ ಭಾಗ್ಯಮ್ಮನವರು ದೇವಸ್ಥಾನದ ಪ್ರಾಂಗಣದ ಒಂದು ಕಂಬಕ್ಕೆ ಒರಗಿ ತಾವೂ ಕಲ್ಲಿನಂತೆ ಕುಳಿತುಬಿಟ್ಟಿರುವುದನ್ನು ಕಂಡು ಅರೆಕ್ಷಣ ಅವಕ್ಕಾದರು! 



"ಅರೇ.....! ಭಾಗ್ಯಮ್ಮನವರೇ, ಏನು ಇನ್ನೂ ಇಲ್ಲೇ ಕುಳಿತಿದ್ದೀರಿ.... ಏನಾಯ್ತು? ಮಗ ಬಂದು ಕರೆದುಕೊಂಡು ಹೋಗುವನೇ..... ಬಹಳ ತಡವಾಯಿತಲ್ಲವೇ....??" ಎಂದರು. 


ಯಾವುದಕ್ಕೂ ಮಾತನಾಡದೆ ಮೌನವಾಗಿ ಕುಳಿತಿದ್ದ ಅವರ ಬಳಿ ತಾವೇ ಸಾಗಿ, "ಭಾಗ್ಯಮ್ಮನವರೇ ನಿಮ್ಮನ್ನೇ ಮಾತನಾಡಿಸುತ್ತಿರುವುದು..... ಆರಾಮಾಗಿದ್ದೀರಲ್ಲವೇ??" ಎಂದರು.  ಅನಂತದಲ್ಲಿ ದೃಷ್ಟಿ ನೆಟ್ಟು ಕುಳಿತಿದ್ದ ಭಾಗ್ಯಮ್ಮನವರ ಕಣ್ಣುಗಳಲ್ಲಿ ನೀರು ಜಿನುಗಿತ್ತು.


 ಪಾಪ! ಏನೋ ತೊಂದರೆ ಆಗಿರಬಹುದು ಎಂದು ಊಹಿಸಿದ ರಾಮಾ ಭಟ್ಟರು ಅವರ ಮುಂದೆ ಕುಳಿತು, "ತಾಯಿ ಏನಾಯಿತು? ಯಾಕೆ ಕಣ್ಣೀರು?" ಎಂದರು. 


ಅದಕ್ಕೆ ಭಾಗ್ಯಮ್ಮನವರು "ಸ್ವಾಮಿ ನನ್ನ ಬಗ್ಗೆ ನಿಮಗೆಲ್ಲ ಗೊತ್ತು.... ನಾನು ಒಂಟಿ ಜೀವನದಲ್ಲಿ ಬಹಳ ಕಷ್ಟಪಟ್ಟು ಮಗನನ್ನು ಸಾಕಿ ಬೆಳೆಸಿ ದೊಡ್ಡವನನ್ನಾಗಿ ಮಾಡಿದೆ. ಏನೂ ಅರಿಯದೆ ಹಳ್ಳಿಯಲ್ಲಿ ಬೆಳೆದವಳು; ಈ ಪಟ್ಟಣಕ್ಕೆ ಬಂದು ಪ್ರತಿನಿತ್ಯ ಹೊಸ ಹೊಸ ವಿಚಾರಗಳನ್ನು ಕಲಿತು,ಇಲ್ಲಿಗೆ ಹೊಂದಿಕೊಂಡೆ. ಮಗನಿಗೆ ವಿದ್ಯಾಭ್ಯಾಸ ಕೊಡಿಸಿ ಅವನಿಗೆ ಒಳ್ಳೆಯ ಉದ್ಯೋಗ ಬಂದ ಮೇಲೆ ಸೊಸೆಯನ್ನೂ ತಂದೆ. ಇಷ್ಟೆಲ್ಲಾ ಮಾಡಿದರೂ ಮಗ ಸೊಸೆಯ ಕಣ್ಣಿಗೆ ನಾನು ಹಳೆಯ ಕಾಲದವಳು! ಏನಾದರೂ ಹೇಳಲು ಹೋದರೆ ನನ್ನ ಮಾತಿಗೆ ಎಳ್ಳಿನಷ್ಟೂ ಬೆಲೆ ಕೊಡುವುದಿಲ್ಲ. ತಮಗೆ ಹೇಗೆ ಬೇಕೋ ಹಾಗೆ ಇರಲು ನಾನು ಬಿಡಬೇಕಂತೆ..... ! ಒಂದು ವೇಳೆ ಹಾಗೆ ಬಿಟ್ಟರೆ ಮನೆಯಲ್ಲಿ ನನ್ನ ಸ್ಥಾನವೇನು? ಅಷ್ಟಕ್ಕೂ ತಿಳುವಳಿಕೆಯ ವಿಚಾರಗಳನ್ನು ನಾನು ಹೇಳುವುದಾದರೂ ಅವರ ಒಳ್ಳೆಯದಕ್ಕಾಗಿ ಅಲ್ಲವೇ..?. ನನ್ನ ಮಾತಿಗೆ ಗೌರವ ಸಿಗದ ಜಾಗದಲ್ಲಿ ನನಗೆ ನೆಮ್ಮದಿ ಇಲ್ಲ! ಅಂತಹ ಮನೆಗೆ ನಾನೇಕೆ ಹೋಗಬೇಕು....?? ನೆಮ್ಮದಿ ಅರಿಸಿ ಇಲ್ಲೇ ಕುಳಿತಿರುತ್ತೇನೆ.... ಎಲ್ಲಾ ಆ ಭಗವಂತನೇ ನೋಡಿಕೊಳ್ಳಲಿ! ನನಗೆ ಸಂತೋಷವೇ ಬರೆಯಲಿಲ್ಲ ಅವನು"...ಎಂದು ಒಂದೇ ಉಸಿರಿಗೆ ಹೇಳಿಬಿಟ್ಟರು. 


 ಬಹಳ ವರ್ಷಗಳಿಂದ ಭಾಗ್ಯಮ್ಮನವರನ್ನು ನೋಡಿದ್ದ ರಾಮಾ ಭಟ್ಟರಿಗೆ ಅವರ ಗುಣಸ್ವಭಾವಗಳು ತಿಳಿದಿದ್ದವು. ಸ್ವಲ್ಪ ತನ್ನದೇ ನಡೆಯಬೇಕೆಂಬ ಹಠ ಅವರದ್ದು. ಒಂದು ಕಾಲಕ್ಕೆ ಒಂಟಿಯಾಗಿ ಎಲ್ಲಾ ನಿಭಾಯಿಸುವಾಗ ಅಂತಹ ಧೈರ್ಯ ಅವಶ್ಯವಾಗಿತ್ತು ನಿಜ! ವಿಪರ್ಯಾಸವೆಂದರೆ ಅವರ ದಿಟ್ಟತನ ಎಲ್ಲರೂ ಮೆಚ್ಚಿದುದರ ಫಲವಾಗಿ ಸ್ವಲ್ಪ ಅಹಂ ಬೆಳೆದು ಬಿಟ್ಟಿತ್ತು. ಅದು ಈಗ ತನ್ನ ಸಂಸಾರದಲ್ಲಿ ಹೊಂದಾಣಿಕೆಯಾಗದೆ ತನ್ನದೇ ನೋವಿಗೆ ಕಾರಣವಾಗಿಯೂ ಇತ್ತು. ತಮ್ಮ ವರ್ತನೆಯಿಂದಲೇ ನೆಮ್ಮದಿ ಹಾಳು ಮಾಡಿಕೊಂಡಿದ್ದರು! 


ಹತಾಶೆಯಿಂದ ಕುಳಿತ ಇಂತಹ ಪರಿಸ್ಥಿತಿಯಲ್ಲಿ ನೇರವಾಗಿ ಭಾಗ್ಯಮ್ಮನವರನ್ನು ಮತ್ತೆ ನೋಯಿಸುವುದು ಬೇಡ ಎಂದುಕೊಂಡ ರಾಮಾ ಭಟ್ಟರು

" ತಾಯಿ ನೀವು ಬಹಳ ಬುದ್ಧಿವಂತರು...... ಲೋಕ ಕಂಡವರು, ನೀವೇ ಹೇಳಿದಂತೆ ಏನೂ ಗೊತ್ತಿಲ್ಲದ ನೀವು ಇಂತಹ ಮಹಾನಗರದಲ್ಲಿ ಬದುಕು ಕಟ್ಟಿಕೊಳ್ಳಲು ಎಷ್ಟೆಲ್ಲಾ ಬದಲಾದಿರಿ! ಪ್ರತಿದಿನ ಇಲ್ಲಿನ ಹೊಸ ಅನುಭವಗಳು ಯಾವ ನಾಲ್ಕು ಗೋಡೆಯ ಶಾಲೆಯೂ ಕಲಿಸದ ಪಾಠಗಳನ್ನು ನಿಮಗೆ ಕಲಿಸಿರಬೇಕಲ್ಲವೇ?? ಅಂತೆಯೇ ನಾವು ಕಾಲದಿಂದ ಕಾಲಕ್ಕೆ ಬದಲಾಗಬೇಕಾದ್ದು ಅನಿವಾರ್ಯ ಎಂಬುದನ್ನು ಮನಗಂಡಿರುವಿರಿ ಕೂಡ! ಈಗ ನೋಡಿ; ನಿಮ್ಮ ಮಗ ಬೆಳೆದು ಒಳ್ಳೆಯ ಉದ್ಯೋಗ ಸಂಪಾದಿಸಿಕೊಂಡು ಉತ್ತಮ ಸ್ಥಾನಮಾನಕ್ಕೆ ಹೋದಾಗ ನಿಮ್ಮ ಅಂತಸ್ತೂ ಬದಲಾವಣೆಯಾಗಿದೆ. ಅದಕ್ಕೆ ತಕ್ಕುದಾದ ಶ್ರೀಮಂತ ಮನೆತನದ ಹೆಣ್ಣನ್ನೇ ಸೊಸೆಯಾಗಿ ತಂದಿರುವಿರಿ. ಅವಳು ಬೆಳೆದ ವಾತಾವರಣದ ಪ್ರಭಾವದಿಂದ ಆಕೆ ಸ್ವಲ್ಪ ಸ್ವತಂತ್ರವಾಗಿ ವರ್ತಿಸಬಹುದು.... ಆದರೆ ಖಂಡಿತವಾಗಲೂ ನಿಮ್ಮ ಮೇಲೆ ಗೌರವ ಇಲ್ಲ ಎಂದಲ್ಲ; ಅಷ್ಟೇ ಅಲ್ಲದೆ ಅವರು ಈಗಿನ ಕಾಲದ ಮಕ್ಕಳು.... ಹೊರಗೆ ನಾಲ್ಕು ಜನ ಹೇಗಿದ್ದಾರೋ, ಇವರೂ ಅವರ ಹಾಗೆಯೇ ಇರ ಬಯಸುವವರು! ಜೀವನದುದ್ದಕ್ಕೂ ಎಷ್ಟೊಂದು ಕಷ್ಟದ ಪರಿಸ್ಥಿತಿಗಳಿಗೆ ಹೊಂದಾಣಿಕೆ ಮಾಡಿಕೊಂಡ ನೀವು, ಇಂತಹ ಸರಳ ವಿಷಯಕ್ಕೆ ಚಿಂತಿಸುವುದು ಸರಿಯೇ?? ನಿಮ್ಮ ನಡವಳಿಕೆಯ ಬಗ್ಗೆ ನೀವೇ ಒಮ್ಮೆ ಯೋಚಿಸಿ ನೋಡಿ..... ಆಗ ನಿಮಗೇ ಅರ್ಥವಾಗುತ್ತದೆ! ಅಷ್ಟಕ್ಕೂ ನೀವು ಹೀಗೆ ಆಡುವಾಗ ಎಲ್ಲಿಯದು ಸಂತೋಷ?? ಯಾರಿಗಿರುವುದು ಸಂತೋಷ!? ಎಂದರು.


ಭಾಗ್ಯಮ್ಮ ನವರು ಮೌನ ತಳೆದಿದ್ದು ಕಂಡು ಮತ್ತೆ....


"ಈ ನಮ್ಮ ಬಾಳೊಂದು ನಿತ್ಯ ಕಲಿಯುವ ಶಾಲೆ. ಸದಾ ನಿಮ್ಮ ಸಾಧನೆಗಳ ಸ್ಮರಿಸುವ ಜೊತೆಗೆ ನಿಮ್ಮ ತಪ್ಪುಗಳನ್ನೂ ನೀವೊಮ್ಮೆ ಮನಗಂಡರೆ ಸಾಕು...ಈ ಚಿಂತೆಗಳೆಲ್ಲಾ ಕರಗಿ ನೆಮ್ಮದಿ ಮೂಡುತ್ತದೆ! ಮನೆಯಲ್ಲಿ ಶಾಂತಿ ಸಂತೋಷ ಸುಖ ನೆಲೆಸುತ್ತದೆ. ನಿಮ್ಮಂತಹವರಿಗೆ ಹೆಚ್ಚಿಗೆ ಹೇಳಬೇಕಾಗಿಲ್ಲ ನಾನು" ಎಂದರು. 


ಅದೇನು ಜ್ಞಾನೋದಯವಾಯಿತೋ ಗೊತ್ತಿಲ್ಲ! ಕಣ್ಣನ್ನು ಒರೆಸಿಕೊಂಡ ಭಾಗ್ಯಮ್ಮನವರು ಎದ್ದು ದೇವರಿಗೊಂದು ನಮಸ್ಕಾರ ಹಾಕಿ ಮನೆಯ ಕಡೆ ನಡೆದರು. ನಂತರ ಪ್ರತಿದಿನ ಅದೇ ಸಮಯಕ್ಕೆ ದೇವಾಲಯಕ್ಕೆ ಬರುವ ಅವರು, ಒಂದೆರಡು ಸುತ್ತು ಪ್ರದಕ್ಷಣೆ ಹಾಕಿ ಬಿರಬಿರನೆ ನಡೆದುಬಿಡುತ್ತಾರೆ. ಅಪ್ಪಿ ತಪ್ಪಿಯೂ ಕಂಬಕ್ಕೊರಗಿ ಕೂರುವುದಿಲ್ಲ! 

ಅದಕ್ಕೂ ಮಿಗಿಲಾಗಿ ಮೊದಲಿಗಿಂತಾ ಲವಲವಿಕೆ ಅವರ ಹೆಜ್ಜೆಗಳಲ್ಲಿ ಕಾಣುತ್ತದೆ. ಸಂತೋಷದಿಂದ ಎಲ್ಲರನ್ನೂ ಮಾತನಾಡುತ್ತಾರೆ.


ಬಹುಶಃ ಎಲ್ಲಿದೆ ಸಂತೋಷ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿರಬೇಕು!


Rate this content
Log in

Similar kannada story from Abstract