*ಮದುವೆಯ ಮನೆಯಲ್ಲಿ*
*ಮದುವೆಯ ಮನೆಯಲ್ಲಿ*


ಅಂದ್ಹಂಗ, ಹ್ಯಾಂಗದೀರಿ ತಾವು?
ಎಲ್ಲಾ ಆರಾಂ ರೀ..ಮತ್ತ?
ನಾವೂ ನೀವೂ ಅಪರೂಪ ಆಗೀವ್ವಿ ನೋಡ್ರೀ..
ಒಂದ್ವಿಚಾರ ಇತ್ನೋಡ್ರೀ.
ನಿಮ್ಕೂಡ ಹೇಳ್ಕೋಳಾಕ ಬೇಕ್ರಿ.
ಮನ್ನೆ, ಇಲ್ಲೇ ಬೆಂಗಳೂರಾಗ,
ನಮ್ ಸಂಬಂಧಿಕರ ಮದ್ವೀಗೆ ಹೋಗಿದ್ನ್ಯಾ..
ಅಲ್ಲಿ, ಒಬ್ಬರು ನನ್ನ ಜೋಡಿ ಸಾಲಿ ಕಲ್ತ ಗೆಳೆಯಾರು ಸಿಕ್ಕರು. ನನಗಂತೂ ಕೂನ ಹಿಡೀಲಿಕ್ಕಾಗಿಲ್ರೀ.
ಅವಾ, ನಾನು ಐದನೇ ತರಗತ್ಯಾಗ ಕೂಡೇ ಓದೀವಿ ಅಂದ. ನನಗ ನೆನಪಿಲ್ಲ ತಗೀರಿ.
ಹೆಸರೇನು? ಅಂದೆ.
ದೌಲ್ಸಾಬ್ ಅಂದರು.
ನನಗಂತೂ ಡೌಲ್ಸಾಬ್ ಅಂದ್ಹಂಗ ಕೇಳಿಸ್ತು. ಆದರೂ ಭಾರಿ ಖುಷಿ ಆತು.
ಅದೂ ಖರೇನ ಆಗಿತ್ತು.
ಈಗ ನೋಡಿದ್ರ ನಲವತ್ತು ವರ್ಸಾತು, ಮುಖ ಹೆಂಗ್ಹೆಂಗೂ ಆಗಿರ್ತಾವು ಮತ್ತ.
ಗಾತ್ರ ಅಂತೂ ಕೇಳ್ಲೇಬ್ಯಾಡ್ರಿ..
ಅವು ಬ್ಯಾರೇನ ಆಗಿರ್ತಾವು.
ಈ ಸಹಪಾಟೀನ ಮಾತಾಡಿಸ್ಕೋತ ಕುಂತಿದ್ನ್ಯಾ...
ಆವಾಗ, ಇನ್ನೊಬ್ಬರು ನಮ್ಮ ಊರಿನವರು ಸಿಕ್ರು..
ಏನವ್ವಾ, ಜಯಕ್ಕಾ, ಗುರುತಾ ಸಿಗಾಂಗಿಲ್ಲ ಬಿಡು..ಏ ಭಾರಿ ಆಗಿರಿ ತಂಗೆವ್ವಾ...😊 ಅಂದ್ರು.
ಹೂಂನ್ರಿ ಮತ್ತ, ನಿಮ್ಮಂಗ ಹೊಲಮನಿ ಕೆಲಸ ಇಲ್ರಿ.
ಬರೇ ಕುರ್ಚಿದಾಗ ಕುಂಡ್ರೂದ ನಮ್ಮ ಕೆಲಸ. ಭಾರ ಭಾರೀ ಆಗಾಕಬೇಕಲ್ಲ ಮತ್ತ..
ನನ್ನ ಮಾತಿಗೆ ಹೌದೌದೆಂದರು..ನಂಗೂ ಭಾಳ ಖುಷಿ ಆತ್ರೀ...
ಇನ್ನೊಬ್ರು ಬಂದ್ರು.
ಜಯಕ್ಕಾ, ಅಂತೂ ಬಂದದ್ದು ಛೊಲೋ ಆತು. ನೀನು ಬರ್ತೀಯೋ ಇಲ್ಲೋ ಅಂತ ಅನಿಸಿತ್ತು. ನೋಡ್ತೀನೋ ಇಲ್ಲೋ ಅನಿಸಿಬಿಟ್ಟಿತ್ತು. ರಾತ್ರೀ ಪೂರಾ ನಿದ್ದೀನ ಹೋತ್ ನೋಡವ್ವಾ...ನಿನ್ನ ಚಿಂತ್ಯಾಗ...
ನನಗಂತೂ ನಗೂ ತಡೀಲಿಲ್ಲ. ಬಾಯಿ ಅಗಲಿಸಿ ನಕ್ಕಿದ್ದೇ ನಕ್ಕಿದ್ದು..
ಅವನನ್ನ ನೋಡಿ, ಮುಂದಕ್ಕ ಬಂದ ಡೊಳ್ಳ ಹೊಟ್ಟೀಗಿ ಗುದ್ದಿದೆ.
ನಿನಗಿಂತ, ನಿನ್ನ ಹೊಟ್ಟೀನ ಮುಂದ ಬಂದದ ನೋಡ
ು ಮತ್ತ. ಅದಕ್ಕ ಭಾರಿ ತಿನಸಲಿಕ್ಹತ್ತೀಯಲ್ಲ...😊😊😊
ಅಯ್ಯೋ , ಮಾರಾಯ್ತೀ, ಇದರ ಮ್ಯಾಲಿ ಬಿತ್ತಾ ನಿನ್ನ ಕಣ್ಣು.
ಮುಗೀತು ಬಿಡು ಇನ್ನ. ಈ ಮದ್ವೀ ಮನಿಯಾಗ ನಾ ಉಂಡ್ಹಂಗ ಇನ್ನ.. ನನ್ನ ನಸೀಬನ ಕೊಟ್ಟಿ ಐತಿ ಅಂತೀನಿ...😊
ಅಲೆಲೇ, ಜಯೂ, ಯಾವಾಗ ಬಂದೆವ್ವಾ? ನನ್ನ ಕೂನಾ ಸಿಕ್ತಾ.?
ಹೂಂ..ನೀ ಬಸವ್ವಾ ಹೌದಲ್ಲ..
ಕೂನಾ ಸಿಗೂದಿಲ್ಲೇನು ಮತ್ತ...
ಹೇ ಅಲ್ಲ ತಗೀ, ನಾ ಕಾಸವ್ವ ಇದ್ದೀನಿ. ನಿನ್ನ ಗೆಳತೀ ಕಾಸವ್ವಾ...ಕಥೀ ಹೇಳು, ಕಥೀ ಹೇಳು ಅಂತ ಗಂಟ ಬೀಳ್ತಿದ್ಯಲ್ಲಾ...ಆಕೀನ ನಾನು..
ಅವ್ವಾ!!!!!! ಹ್ಯಾಂಗಾಗೀಯಲ್ಲ ಕಾಸವ್ವಾ...
ನಾನಂತೂ ನಿನ್ನ ಗುರುತ ಹಿಡೀಲಿಲ್ಲ ನೋಡು.. ಛೊಲೋ ಆತು ನೀ ಬಂದಿದ್ದು. ನೀ ಹೇಳಿದ್ದ ಹರೀ ನಾರಾಯಣನ ಕಥೀ ನಾನು ಮುಖಪುಟದಲ್ಲಿ ಬರೆದಿದ್ದೆ. ಭಾರೀ ಚಂದ್ ಇತ್ತು. ಎಲ್ರೂ ಎಷ್ಟು ನಕ್ರು ಏನ್ ಕಥೀ...ನೀನೂ ಭಾರಿ ಹೇಳ್ತಿದ್ದಿ ಕಥೀ...ನನಗಂತೂ ನಿದ್ದೀನ ಬರ್ತಿರಲಿಲ್ಲ. ಅದೇ ಕಥೀ ಒಳಗ ನಂದ ಪಾತ್ರ ಹುಡುಕ್ಕೊಂಡು ಹೋಗ್ತಿದ್ದೆ ನೋಡು...
ಅರೇ, ಕಿಶೋರ, ಏನೋ , ಐವತ್ತಾದರೂ ಹಂಗೇ ಇದೀಯಲ್ಲೋ..ಹ್ಯಾಂಗಂತೀನಿ...
ಹಹಹ! ನಾವಂತೂ ಹಿಂಗ ಜಯಾ...
ಇನ್ನೊಂದು ಮದ್ವೀ ಮಾಡ್ಹಂಗ ಇದ್ದೀ ಬಿಡಪಾ...😊
ಇಲ್ಲೇ ಅದೀನಿ, ಕಿವಿ ಹಿಂಡ್ಹಾಂಗಿಲ್ಲೇನು ? ತಾಳೀ ಕಟ್ಟೀರಿ ನೆಪ್ಪಿರಲಿ...ಅಂತ, ಪಕ್ಕದಿಂದ ಬಂತು ದನಿ. ಎಲ್ರೂ ಗೊಳ್ಳಂತ ನಕ್ಕರು...😊😊😊😊
ತಂಗೀ, ಜಯಾ, ನಡೀ ನಮ್ಮೂರಿಗೆ. ಜೋಳದ ರೊಟ್ಟೀ, ಹೋಳಿಗಿ, ಊಟ ಮಾಡೂವಂತೀ. ಭಾಳ ದಿನ ಆತು ನೀ ನಮ್ಕಡೀ ಬಂದೇ ಇಲ್ಲ..ಅಂತ ಬುಲಾವ್...
ಹೌದ್ರೀ..ಬರ್ತೀನಿ ಮತ್ತೊಮ್ಮೆ..ಎಲ್ರನ್ನೂ ಕೇಳ್ದೇ ಅಂತ ಹೇಳ್ರೀ..ಛೊಲೋ ಆತು ನೀವೆಲ್ರೂ ಊರಿಂದ ಬೆಂಗ್ಳೂರಿಗೆ ಬಂದ್ರಿ. ಖುಷಿ ಆತು..ಮನೀಗೆ ಬಂದು ಹೋಗ್ರಿ. ಹಂಗ ಹೋದ್ರ ಚಂದಿಲ್ಲ . ಆತಾ..?
ಖರೇ ಅಂದ್ರ, ಮದ್ವೀ ಸಂಬ್ರಮಕಿಂತ, ಬಂದವರನ್ನು ಮಾತಾಡಿಸೋದೇ ಹೆಚ್ಚು ಖುಷಿ ತಂತು ನನಗೆ. ಇದುವೇ ಹಳ್ಳಿಯ ಸೊಗಡು. ಪಟ್ಟಣಗಳಲ್ಲಿ ಸಿಗದಂತಹ ಸುಂದರ ವಸ್ತು. ಸುಂದರ ಮನಸ್ಸುಗಳು..ಇಡೀ ದಿನ ನನ್ನ ಮನಸ್ಸೂ ಸಂತೋಷದ ವಾತಾವರಣದಲ್ಲಿತ್ತು..