###ಸೆಂಟಿನಾವಾಂತರಾ. - ಭಾಗ-೯
###ಸೆಂಟಿನಾವಾಂತರಾ. - ಭಾಗ-೯
#ಸೆಂಟಿನಾವಾಂತರಾ# ಭಾಗ- ೯
ಸಂದೀಪ್ ಕುಮಾರ್ ಗೆ ಕುಳಿತುಕೊಳ್ಳಲು ಹೇಳಿದ. ಮೇಜಿನ ಮೇಲಿದ್ದ ಕಡತಗಳನ್ನು ಪಕ್ಕಕೆ ಸರಿಸುತ್ತ " ಎಲ್ಲಿಗೆ ಬಂತು ನಿಮ್ಮ ತನಿಖೆ?" ಕೇಳಿದ.
"ಹ್ಮ್ಮ್! ಇನ್ನು ಕೆಲವು ಮಾಹಿತಿಗಳು ಬೇಕಾಗಿದೆ ಸರ್. ನಿಮ್ಮ ಹಳೆಯ ಸೆಕ್ಯೂರಿಟಿ ಯಾ ವಿಳಾಸ, ಫೋನ್ ನಂಬರ್ ಬೇಕು. ಹಾಗು, ಅವನು ಯಾಕೆ ಕೆಲಸ ಬಿಟ್ಟದ್ದು ಅಂತ ಹೇಳ್ತೀರಾ?. ಕುಮಾರ್ ನ ಅಂಬೋಣ.
" ಹ್ಮ್ಮ್ಮ್! ಅದೇನು ಮಹಾ, ಇಲ್ಲೇ ಸಿಗುತ್ತೆ." ಎನ್ನುತ , ಅಲ್ಲೇ ಇದ್ದ ಫೈಲ್ ಅನ್ನು ಮುಂದೆ ಇಟ್ಟ ಸಂದೀಪ್. ತನಗೆ ಬೇಕಾದ ವಿವರಗಳನ್ನು ಕುಮಾರ್ ಡೈರಿ ಯಲ್ಲಿ ಗುರುತು ಹಾಕಿಕೊಂಡ. ಆ ಸೆಕ್ಯುಟಿರಿ, ಬೆಂಗಳೂರಿನ ಅಡ್ರೆಸ್ ಅನ್ನು ಆವಲಹಳ್ಳಿ ಎಂದು ತಿಳಿಸಿದ್ದ. ಫೋನ್ ನಂಬರ್ ಸಹ ಇತ್ತು.
ಸಂದೀಪ್ ರೀಟಾಗೆ ಫೋನ್ ಮಾಡಿ ಒಳಗೆ ಬರ ಹೇಳಿದ. ಅವಳು ಒಳಗೆ ಬರುತಿದ್ದಂತೆ ಸೆಂಟಿನ ಪರಿಮಳ ಕೋಣೆಯಲ್ಲಿ ಪಸರಿಸಿತು. ಸಂದೀಪ್ ನ ಮುಖ ಅರಳಿದ್ದು ಕುಮಾರ್ ನ ಗಮನಕ್ಕೆ ಬರದೇ ಇರಲಿಲ್ಲ.
" ರೀಟಾ, ಇವತ್ತಿನ ಮೀಟಿಂಗ್ ಮಿನಿಟ್ಸ್ ಅನ್ನು ಬೇಗ ರೆಡಿ ಮಾಡಿ. ಅದು ಅರ್ಜೆಂಟ್ ಇವತ್ತೆ ಎಲ್ಲರಿಗೂ ತಲುಪಬೇಕು. ಶ್ಯಾಮ್ ಗೆ ಆಲ್ರೆಡಿ ಹೇಳಿದ್ದೀನಿ. ನೀವು ಅವರಿಗೆ ಅಸಿಸ್ಟ್ ಮಾಡಿ ಸಾಕು" ಎಂದ ಸಂದೀಪ್.
" ಓಕೆ ಸರ್!" ಎಂದು, ಕುಮಾರ್ ನತ್ತ ಒಂದು ಸಣ್ಣ ನೋಟ ಬೀರಿದಳು. ಕಣ್ಣು ಮಿಟುಕಿಸಿದ ಕುಮಾರ್ ನನ್ನು ದುರುಗುಟ್ಟಿ ನೋಡಿ ಹೊರಹೋದಳು. ಮನಸಲ್ಲೇ ನಕ್ಕ ಕುಮಾರ್ .
" ಇನ್ನೊಂದು ಮಾಹಿತಿ ಬೇಕಿತ್ತು ಸರ್, ನಿಮ್ಮ ಹಳೆಯ ಪಿ. ಎ. ಇದ್ದರಲ್ಲ, ನಮಿತಾ ಅಂತ. ಅವರ ಡೀಟೇಲ್ಸ್ ಕೂಡ ಬೇಕು. ಕೊಡ್ತಿರಾ?.
ಇದ್ದಕಿದ್ದಂತೆ ಸಂದೀಪನ ಮುಖ ಚೆಹರೆ ಬದಲಾದದ್ದು ಕಂಡಿತು. ಈ ಪ್ರಶ್ನೆಯನ್ನು ಊಹಿಸಿರಲಿಲ್ಲ. ಕುಮಾರ್ ಗೆ ಏನೋ ಸಂಶಯ ಹುಟ್ಟಿತು. ನಮಿತಾ ಮತ್ತು ಸಂದೀಪ್ ನ ನಡುವೆ ಏನೋ ಇದೆ ಅನಿಸಿತು.
" ಓಕೆ, ಈ ವಿಲ್ ಕಾಲ್ ಶ್ಯಾಮ್. ಅವರಿಗೆ ಎಲ್ಲ ಗೊತ್ತು," ಎನ್ನುತ, ಫೋನಿನಲ್ಲಿ ಶ್ಯಾಮ್ ನನ್ನು ಬರಹೇಳಿದ.
ಆಫೀಸ್ ಬಾಯ್ ಅಷ್ಟರಲ್ಲಿ ಕಾಫೀ ತಂದಿತ್ತು ಹೋದ. ಇಬ್ಬರು ಕುಡಿದು ಮುಗಿಸುವಷರಲ್ಲಿ, ಶ್ಯಾಮ್ ಹಾಜರ್.
" ಹಲೋ ಸರ್, ಹೇಗಿದ್ದೀರ?" ಕುಶಲೋಪರಿ ಮಾತು. ಕೈ ಕುಲುಕಾಟ.
" ಶ್ಯಾಮ್ , ನಿಮ್ಮ ನಮಿತಾ ಬಗ್ಗೆ ಕಂಪ್ಲೀಟ್ ಡೀಟೇಲ್ಸ್ ಕೊಡಿ ನಂಗೆ. ಈ ಕೇಸ್ ಗೆ ಅದು ತುಂಬ ಇಂಪಾರ್ಟೆಂಟ್ ಆಗಿದೆ."
ನೇರ ವಿಷಯಕ್ಕೇ ಬಂದ ಕುಮಾರ್.
ಶ್ಯಾಮ್ ಸುಂದರ ಚೆಲುವ. ಸೌಮ್ಯ, ಮಾತು ಮೃದು. ಕುಮಾರ್ ಗೆ ಇಷ್ಟವಾದ ವ್ಯಕ್ತಿ ಆಗಿದ್ದ.
" ನಮಿತಾ ಳ ವಿವರ ಎಲ್ಲ ಹೇಳಿದ. ಅವಳಿಗೆ ಮದುವೆ ಸೆಟ್ ಆಗಿದ್ದು, ಹುಡುಗನ ಕಡೆಯವರು ಕೆಲಸಕ್ಕೆ ಕಳಿಸಲು ಇಷ್ಟವಿರಲಿಲ್ಲವಾದ್ದರಿಂದ , ಅವಳು ಕೆಲಸಕ್ಕೆ ರಿಸೈನ್ ಮಾಡಿದ್ದಳು. ಮದುವೆಗೆ ನಾನು ಮತ್ತು ಕೆಲವು ಸ್ಟಾಫ್ ಅಟೆಂಡ್ ಮಾಡಿದ್ದೆವು. ಊಟೋಪಚಾರ ಸಾಧಾರಣವಾಗಿತ್ತು. ಮತ್ತೇನು ವಿಶೇಷ ಕಾಣಲಿಲ್ಲ". ಪುಟ್ಟದಾಗಿತ್ತು ವಿವರಣೆ. ಕುಮಾರ್ ಗೆ ಬೇಕಾದ ಮಾಹಿತಿ ಸಿಗದೇ ನಿರಾಸೆ ಆಯಿತು.
" ನಮಿತಾ ಗೆ ಬೇರೆ ಯಾರಾದರೂ ಸಂಬಧಿಕರಿದ್ದಾರಾ?. ಏನಾದರು ಕ್ಲೂ ಸಿಗಬಹುದಾ?" ಕುಮಾರ್ ನ ಕೊನೆಯ ಪ್ರಯತ್ನ ಇದಾಗಿತ್ತು.
ಸ್ವಲ್ಪ ಹೊತ್ತು ಯೋಚಿಸಿ, ಶ್ಯಾಮ್ , "ಹಾಂ ! ಒಬ್ಬರು ಫ್ರೆಂಡ್ ಇದ್ದಾರೆ ನಮಿತಾ ಗೆ ತುಂಬ ಕ್ಲೋಸ್. ಅವರ ಹೆಸರು ಜೈಶ್ರೀ ಅಂತ. ಇಲ್ಲೇ ಪಕ್ಕದ ಅಪಾರ್ಟ್ಮೆಂಟ್ ನಲ್ಲಿ ವಾಸವಾಗಿದ್ದಾರೆ. ಈ ವಿಷಯ ನಮಿತಾ ನನಗೆ ಆಗಾಗ ಹೇಳಿದ್ದು ನೆನಪು".
"ಐ ಸೀ, ವಿಚ್ ಜೈಶ್ರೀ? "
" ಅದೇ ಸರ್, ಜಾಬ್ ಕನ್ಸಲ್ಟೆಂಟ್ ಆಗಿದ್ದಾರಲ್ಲಾ...."
"ಅವರಾ..ಗೊತ್ತು ಬಿಡಿ. ನನಗೆ ತುಂಬಾನೆ ಪರಿಚಯ ಅವರು. ತುಂಬಾ ಥ್ಯಾಂಕ್ಸ್. ನಾನಿನ್ನು ಹೊರಟೆ. ಮುಂದಿನ ತನಿಕೆ ಶುರು ಈಗ. ಈ ಕೇಸು ಬೇಗ ಇತ್ಯರ್ಥವಾಗಲಿದೆ ಅನಿಸುತ್ತೆ". ಅಂದ ಕುಮಾರ್ ನನ್ನು ನೇರವಾಗಿ ದಿಟ್ಟಿಸದೇ ಬೇರೇನೋ ಮಾಡುವ ನೆಪದಲ್ಲಿ, ಸಂದೀಪ್ ನುಣುಚಿಕೊಳ್ಳುತ್ತಿರುವುದನ್ನು ಸ್ಪಷ್ಟವಾಗಿ ಕಂಡ.
ತಾನು ಬಂದ ಕೆಲಸ ಆಯಿತೆಂದು ಕೈ ಮಿಲಾಯಿಸಿ ಇಬ್ಬರಿಂದಲೂ ಬೀಳ್ಕೊಂಡು ಹೊರಬಂದಾಗ, ಅಲ್ಲೇ ಕೂತಿದ್ದ ರೀಟಾಳತ್ತ ಕೈ ಬೀಸಿ,
" ಸಂಜೆ .....ಕಾಫೀ ಶಾಪ್..ಕಾಯ್ತಿರ್ತೀನಿ.. ಬಾಯ್.."
ಎನ್ನುತ್ತಾ ಕೂಗಿ ಹೇಳಿದ್ದ. ಇವಳು ನಕ್ಕು ತಲೆಯಾಡಿಸಿದ್ದಳು...
(ಮುಂದುವರಿಯುವುದು...)
