ಚದುರಂಗ
ಚದುರಂಗ
ಸರ್ ನಮಸ್ತೆ, ನಾನು ಮೂರ್ತಿ....
ನಮಸ್ತೆ ಮೂರ್ತಿಯವರೆ, ಹೇಗಿದ್ದೀರಿ?
ಚೆನ್ನಾಗಿದ್ದೀನಿ ಸರ್, ನಿನ್ನೆ ನೀವು ರಿಟೈರ್ ಆದ ವಿಷಯ ತಿಳಿಯಿತು, ಅದಕ್ಕೆ ವಿಶ್ ಮಾಡೋಣ ಅಂತ ಕಾಲ್ ಮಾಡಿದೆ...
ಹೌದು, ತುಂಬಾ ಥ್ಯಾಂಕ್ಸ್ ಮೂರ್ತಿ ನಿಮ್ಮ ಸಹೃದಯತೆಗೆ.
ಸರ್, ಇವತ್ತು ಏನಾದ್ರೂ ನಿಮಗೆ ಮುಖ್ಯವಾದ ಕೆಲಸ ಇದೆಯಾ?
ಇಲ್ಲ, ಯಾಕೆ ಮೂರ್ತಿ?
ಸರ್, ಹಾಗಿದ್ರೆ ಸಂಜೆ ನಾಲ್ಕು ಗಂಟೆಗೆ ಸಂಜೀವಿನಿ ಕಮ್ಯೂನಿಟಿ ಹಾಲಿಗೆ ತಪ್ಪಿಸದೆ ಬಂದು ಬಿಡಿ.
ಏಕೆ?
ನೀವು ಬನ್ನಿ ಎಲ್ಲಾ ಅಲ್ಲೇ ತಿಳಿಯುತ್ತೆ, ತಪ್ಪಿಸಬೇಡಿ ಪ್ಲೀಸ್ ಬನ್ನಿ ಆಯ್ತಾ, ಬಾಯ್ ಎನ್ನುತ್ತಾ ಪೋನ್ ಇಟ್ಟೆ ಬಿಟ್ಟ.
ಮೂರ್ತಿ ನಮ್ಮ ಮನೆಯ ಏರಿಯಾದಲ್ಲೇ ಇರುವವನು. ಊರಲ್ಲಿ ಅವನಿಗೆ ತಂದೆ ಮಾಡಿದ ತೋಟವಿದೆ. ಅಲ್ಲಿ ಇರಲು ಇಷ್ಟಪಡದೆ ಇಲ್ಲಿಗೆ ಬಂದು ಎರಡು ದಶಕಗಳೇ ಕಳೆದಿವೆ. ಹೆಸರಿಗೆ ಮನೆಯ ಮುಂದೆ ಸಣ್ಣ ದಿನಸಿ ಅಂಗಡಿ ಇಟ್ಟುಕೊಂಡಿದ್ದಾನೆ. ಹಾಗೆಯೇ ಸ್ಥಳೀಯ ರಾಜಕೀಯದಲ್ಲಿ ಸ್ವಲ್ಪ ಆಸಕ್ತಿಯೂ ಇದ್ದು ಅವರಿವರ ಕೆಲಸಕ್ಕೆ ಓಡಾಡಿ ಸಾಧ್ಯವಾದಷ್ಟು ಮಾಡಿಸಿಕೊಡುವ ವ್ಯಕ್ತಿ. ನನ್ನ ಮನೆಯ ಸುತ್ತಮುತ್ತ ನೀರಿನ ಸಮಸ್ಯೆ ಆಗಿದ್ದಾಗ ಇದೇ ವ್ಯಕ್ತಿ ಮುಂದೆ ನಿಂತು ಸಮಸ್ಯೆ ಬಗೆಹರಿಸಿ ಕೊಟ್ಟಿದ್ದ. ಆಗಿನಿಂದ ಪರಿಚಯವಾದವನು ಎಲ್ಲೇ ಸಿಕ್ಕರೂ ನಿಂತು ಮಾತನಾಡಿಸುತ್ತಾನೆ. ಇವನು, ನನ್ನನ್ನು ಏಕೆ ಕಮ್ಯೂನಿಟಿ ಹಾಲಿಗೆ ಕರೆದ ಎಂದು ತಿಳಿಯದೆ ಗೊಂದಲವಾಯಿತು. ಆದರೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ಸಂಜೆ ಹೋಗಿಬಂದರಾಯಿತು ಎಂದು ಸುಮ್ಮನಾದೆ.
ಮೊದಲಿನಿಂದಲೂ ಮಧ್ಯಾಹ್ನದ ಹೊತ್ತು ಮಲಗಿ ಅಭ್ಯಾಸವಿಲ್ಲ. ಅಲ್ಲದೆ ನಿವೃತ್ತಿಯಾಗಿ ಮನೆಯಲ್ಲಿ ಉಳಿದ ಮೊದಲ ದಿನ, ಏನೂ ಮಾಡಲು ತೋಚದೆ ಟಿವಿ, ಪೇಪರಿನ ಸಹವಾಸಗಳು ಸಾಕಾಗಿ ಮನೆಯ ಒಳಹೊರಗೆ ಓಡಾಡುವಾಗ ಮತ್ತೆ ಮೂರು ಗಂಟೆಯ ಸಮಯದಲ್ಲಿ ಮೂರ್ತಿಯಿಂದ ಬರುತ್ತಿದ್ದಿರಲ್ಲವೆ ಎಂದು ಫೋನ್ ಕರೆ ಬಂತು. ನನಗೂ ಮನೆಯಲ್ಲಿ ಹೊತ್ತು ಕಳೆಯುವುದು ಕಷ್ಟವಾಗಿತ್ತು, ಹಾಗಾಗಿ ಬರುತ್ತೇನೆ ಎಂದು ಸಿದ್ಧನಾಗಿ ಹೊರಟೆ. ಅಲ್ಲಿ ಸಾಕಷ್ಟು ಜನ ಪರಿಚಯದವರ ಜೊತೆಗೆ ಒಂದಷ್ಟು ಅಪರಿಚಿತ ಮುಖಗಳು ಇದ್ದವು. ನನ್ನನ್ನು ನೋಡುತ್ತಿದ್ದಂತೆ ಮೂರ್ತಿ ಓಡೋಡಿ ಬಂದು, ಸರ್ ಬಂದ್ರಲ್ಲ ಬಹಳ ಖುಷಿಯಾಯಿತು ಬನ್ನಿ ಎಂದು ಕೈಹಿಡಿದು ಒಳಗೆ ಕರೆದೊಯ್ದ. ಅಲ್ಲಿ ಎಲ್ಲರೂ ಸಧ್ಯದಲ್ಲೇ ಬರುವ ಸ್ಥಳೀಯ ಚುನಾವಣೆಗೆ ನಮ್ಮ ವಾರ್ಡಿನಿಂದ ಯಾರನ್ನು ನಿಲ್ಲಿಸಬೇಕು ಎನ್ನುವುದನ್ನು ಚರ್ಚೆ ಮಾಡಲು ಸೇರಿದ್ದರು. ನನಗೆ ರಾಜಕೀಯ ಎಂದರೆ ಮಾರು ದೂರ ಇದ್ದು ಅಭ್ಯಾಸ. ಅಂತಹುದರಲ್ಲಿ ಎಲ್ಲಾ ಬಿಟ್ಟು ನನ್ನನ್ನು ಈ ಮೂರ್ತಿ ಏಕೆ ಕರೆದ ಎಂದು ಯೋಚಿಸುವಾಗಲೇ ಅದೇ ಮೂರ್ತಿ ಎದ್ದು ನಿಂತು, ಎಲ್ಲರೂ ಒಪ್ಪುವುದಾದರೆ ನಾನೊಬ್ಬ ಒಳ್ಳೆಯ ಅಭ್ಯಾರ್ಥಿಯನ್ನು ಸೂಚಿಸುತ್ತೇನೆ. ಇವರು ಮನಸ್ಸು ಮಾಡಿದ್ದರೆ ಸಂಬಳವನ್ನು ಬಿಟ್ಟು ಬರೀ ಲಂಚದಲ್ಲೇ ಕೋಟಿ ಸಂಪಾದಿಸಿ ಮಹಾರಾಜನಂತೆ ಇರಬಹುದಿತ್ತು. ಆದರೆ ಅನ್ಯರ ಬಿಡಿಗಾಸಿಗೂ ಆಸೆ ಪಡದೆ ತುಂಬಾ ನಿಯತ್ತಾಗಿ ಕೆಲಸ ಮಾಡಿ ನಿವೃತ್ತಿ ಪಡೆದಿದ್ದಾರೆ. ಇಂತಹ ವ್ಯಕ್ತಿಯನ್ನು ನಮ್ಮ ವಾರ್ಡಿನಲ್ಲಿ ನಿಲ್ಲಿಸಿ ಗೆಲ್ಲಿಸಿದರೆ ಖಂಡಿತಾ ಅಭಿವೃದ್ಧಿ ಹೊಂದುವುದರಲ್ಲಿ ಯಾವ ಸಂಶಯವೂ ಇಲ್ಲ ಎಂದ. ಗೊತ್ತಿದ್ದವರು ನನ್ನ ಕಡೆ ನೋಡಿದರೆ ಗೊತ್ತಿಲ್ಲದವರು ಅಂತಹ ವ್ಯಕ್ತಿ ಯಾರು ಎಂದು ಕೇಳಿದರು. ಆಗ ಮೂರ್ತಿ ಸೀದಾ ನನ್ನ ಬಳಿಬಂದು ಇವರೇ ಆ ವ್ಯಕ್ತಿ, ನಿನ್ನೆಯಷ್ಟೇ ಕೆಲಸದಿಂದ ನಿವೃತ್ತಿ ಯಾಗಿದ್ದಾರೆ. ಇವರ ಮೂವತ್ತೈದು ವರ್ಷಗಳ ಸೇವೆಯಲ್ಲಿ ಒಂದೇ ಒಂದು ಕಪ್ಪು ಚುಕ್ಕೆಯೂ ಇಲ್ಲ ಎಂದು ಮುಂತಾಗಿ ಏನೇನೋ ಹೇಳುತ್ತಿದ್ದ ಆದರೆ ಅವನ ಮಾತು ಕೇಳಿ ನನ್ನ ತಲೆ ತಿರುಗುವಂತೆ ಆಗಿತ್ತು. ಎಂದೂ ಕನಸು ಮನಸ್ಸಿನಲ್ಲೂ ಯೋಚಿಸದಂತ ವಿಷಯಕ್ಕೆ ಮೂರ್ತಿ ನನ್ನನ್ನು ಒಂದು ಮಾತೂ ಕೇಳದೆ ಹರಕೆಯ ಕುರಿಯಂತೆ ಬಲಿ ಕೊಡಲು ತಯಾರಿ ಮಾಡಿದಂತೆ ಕಂಡಿತು. ನನ್ನ ಸುತ್ತಮುತ್ತ ಇದ್ದ ಜನ ಏನೇನೋ ಮಾತನಾಡುತ್ತಿದ್ದರೂ ನನಗಂತೂ ಏನೂ ಕೇಳದಂತ ಪರಿಸ್ಥಿತಿ. ಮೊದಲು ಅಲ್ಲಿಂದ ಎದ್ದು ಹೊರಡುವ ಮನಸು. ಆದರೆ ಸಾಧ್ಯವಾಗದೆ ಏಕೆ ಕುಳಿತ್ತಿದ್ದೆನೊ ನನಗೇ ಗೊತ್ತಿಲ್ಲಾ. ಅಲ್ಲಿದ್ದ ಎಲ್ಲರೂ ಚಪ್ಪಾಳೆ ತಟ್ಟಿ ನಂತರ ಒಂದಷ್ಟು ಜನ ಹತ್ತಿರ ಬಂದು ಏನೇನೋ ಹೇಳುತ್ತಾ ಕೈಕುಲುಕಿದ್ದು, ಮತ್ತೊಂದಷ್ಟು ಜನ ದೂರದಿಂದಲೇ ನಗುತ್ತಾ ಕೈ ಬೀಸಿದ್ದು ಎಲ್ಲವೂ ಕನಸಿನಲ್ಲಿ ನಡೆಯುತ್ತಿರುವಂತೆ ಭಾಸವಾಗುತ್ತಿತ್ತು. ಅಲ್ಲಿ ಯಾರು ಏನು ಮಾತನಾಡಿದರೊ, ಮಾತನಾಡಿಸಿದರೊ, ಅವರಿಗೆ ನಾನೇನು ಹೇಳಿದೆನೋ ಒಂದೂ ಅರಿಯದೆ ಮನೆಗೆ ಹೇಗೆ ಬಂದೆನೋ ಗೊತ್ತಿಲ್ಲ.
ಆಮೇಲೆ ಮೂರ್ತಿಯಿಂದಲೇ ತಿಳಿದಿದ್ದು ಏನೆಂದರೆ, ಅಂದು ಮೊದಲೇ ಹೇಳಿದಂತೆ ನಮ್ಮ ವಾರ್ಡಿನಲ್ಲಿ ಒಬ್ಬ ಅರ್ಹ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಸಲುವಾಗಿ ಸಭೆ ಕರೆದು, ನನ್ನ ಕುರಿತು ಎಲ್ಲಾ ವಿಷಯಗಳನ್ನು ತಿಳಿದುಕೊಂಡು ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದ್ದರಂತೆ, ಆದರೆ ಅದಕ್ಕೆ ನಾನು ತಕ್ಷಣ ಒಪ್ಪಿಕೊಳ್ಳದೆ ಯೋಚಿಸಲು ಎರಡು ದಿನಗಳ ಅವಕಾಶ ಕೇಳಿದ್ಧೆನಂತೆ. ನಾಲ್ಕು ದಿನವಾದರೂ ನಾನೇನೂ ಹೇಳದಿದ್ದಕ್ಕೆ ಮತ್ತೆ ಮೂರ್ತಿ ಹುಡುಕಿಕೊಂಡು ಬಂದಿರುವುದಾಗಿ ಹೇಳಿದ. ಈಗ ಎಲ್ಲಾ ವಿಷಯಗಳು ಸ್ಪಷ್ಟವಾಗಿ, ಬೇಡ ಮೂರ್ತಿ ನನಗೆ ಇದರಲ್ಲಿ ಆಸಕ್ತಿ ಇಲ್ಲ ಎಂದೆ. ಆದರೆ ನನ್ನ ಯಾವುದೇ ಸಬೂಬಿಗೂ ಸೊಪ್ಪು ಹಾಕದೆ, ಮನೆಯಾಕೆಗೂ ಬಿಡದೆ, ನಿವೃತ್ತಿಯಾದ ಮೇಲೆ ಮನೆಯಲ್ಲೇ ಕುಳಿತು ಏನು ಮಾಡುವಿರಿ. ಅದರ ಬದಲು ಸಮಾಜಸೇವೆ ಎಂದು ಈ ಕೆಲಸ ಮಾಡಿ. ಇದರಿಂದ ಸಮಾಜಕ್ಕೂ ಒಳ್ಳೆಯದಾಗುತ್ತದೆ ನಿಮಗೂ ಒಳ್ಳೆಯದಾಗುತ್ತೆ. ಎಷ್ಟೋ ಜನ ಕೋಟಿ ಕೊಡುತ್ತೇವೆ ಎಂದರೂ ಟಿಕೆಟ್ಟು ಸಿಗುವುದಿಲ್ಲ. ವಿಷಯ ಹೀಗಿರುವಾಗ, ಇಡೀ ವಾರ್ಡಿನವರೇ ಒಪ್ಪಿ ನಿಮ್ಮ ಬೆಂಬಲಕ್ಕೆ ನಿಂತಿರುವಾಗ ನೀವು ಬೇಡ ಎನ್ನುವುದು ಎಷ್ಟು ಸರಿ? ನೀವು ಬೇರೆಯವರಂತೆ ಒಂದು ಬಿಡಿಗಾಸನ್ನು ಖರ್ಚು ಮಾಡುವ ಅಗತ್ಯವಿಲ್ಲ. ಅಷ್ಟೇ ಅಲ್ಲ, ನೀವು ಪ್ರಚಾರ ಮಾಡುವುದೂ ಬೇಡ ನೀವು ಆರಾಮವಾಗಿ ಮನೆಯಲ್ಲಿಯೇ ಇರಿ. ಎಲ್ಲವನ್ನೂ ನಾವು ನೋಡಿಕೊಳ್ಳುತ್ತೇವೆ, ಆದರೆ ಗೆದ್ದ ಮೇಲೆ ಮಾತ್ರ ಒಂದು ಕ್ಷಣವೂ ಮನೆಯಲ್ಲಿ ಇರದೆ ನಿಮ್ಮನ್ನು ಅನಾಯಾಸವಾಗಿ ಗೆಲ್ಲಿಸಿದ ಜನರ ಭಾವನೆಗಳಿಗೆ ತಕ್ಕಂತೆ ಕೆಲಸ ಮಾಡಿ. ಆಗ ನೀವು ಸತ್ತ ಮೇಲೂ ನಿಮ್ಮ ಹೆಸರು ಶಾಶ್ವತವಾಗಿ ಉಳಿಯುತ್ತದೆ ಮುಂತಾಗಿ ಹತ್ತು ಹಲವಾರು ಬಾರಿ ಭೇಟಿಯಾಗಿ ಹೇಳಿ ಬಿಡದೇ ಚುನಾವಣೆಯಲ್ಲಿ ಸ್ಪರ್ಧಿಸಲು ಒಪ್ಪಿಸಿಬಿಟ್ಟ.
ಚುನಾವಣೆ ದಿನಾಂಕ ಘೋಷಣೆಯಾಗಿ ನಾಮಪತ್ರ ಸಲ್ಲಿಸಲು ಮನೆಯಿಂದ ಹೊರಟಾಗ ಸಹಸ್ರಾರು ಜನ ಸೇರಿ ತೆರೆದ ಜೀಪಿನಲ್ಲಿ ಮೆರವಣಿಗೆ ಮೂಲಕ ಕರೆದುಕೊಂಡು ಹೋದರು. ಎಲ್ಲದರ ಮುಂದಾಳತ್ವ ಮೂರ್ತಿಯದೆ ಇತ್ತು. ಅವನು ನನ್ನ ಪಕ್ಕದಲ್ಲೇ ಇದ್ದು ಎಲ್ಲಾ ಕೆಲಸಗಳು ಸುಗಮವಾಗಿ ನಡೆಯುವಂತೆ ನೋಡಿಕೊಂಡ. ನೀರಿಗೆ ಇಳಿದ ಮೇಲೆ ಕೈ ಕಾಲು ಬಡಿಯದಿದ್ದರೆ ಹೇಗೆ, ನಾನೂ ಎಲ್ಲರ ಮನೆ ಮನೆಗೂ ಹೋಗಿ ಏನು ಮಾಡುತ್ತೇನೆ, ಏತಕ್ಕಾಗಿ ಚುನಾವಣೆಯಲ್ಲಿ ಸ್ಪರ್ಧಿಸಿರುವೆ ಎಂದು ಖುದ್ದಾಗಿ ಹೇಳಬೇಕು ಎಂದು ಒಂದಷ್ಟು ವಿಚಾರಗಳ ಬಗ್ಗೆ ಮಾತನಾಡಲು ಸಿದ್ಧನಾಗಿದ್ದೆ. ಆದರೆ ಮೂರ್ತಿ ಮಾತ್ರ, ಸರ್ ನಾನು ಅವತ್ತೇ ನಿಮಗೆ ಹೇಳಿದ್ದೆ, ನೀವು ಪ್ರಚಾರ ಮಾಡಲು ಬರುವುದು ಬೇಡ, ನಿಮಗೆ ವಾರ್ಡಿನ ಜನರೇ ಬಯಸಿ ನಿಲ್ಲಿಸಿರುವುದರಿಂದ ಮತ್ತು ನಿಮ್ಮ ಬಗ್ಗೆ ಅವರಿಗೆ ಎಲ್ಲಾ ವಿಷಯಗಳು ತಿಳಿದಿರುವುದರಿಂದ ಅದರ ಅವಶ್ಯಕತೆ ಇಲ್ಲ. ಹಾಗೊಂದು ವೇಳೆ ಬೇಕೆಂದರೆ ನಾನೇ ಬಂದು ನಿಮ್ಮನ್ನು ಕರೆದೊಯ್ಯುವೆ. ನೀವು ಆರಾಮವಾಗಿ ಮನೆಯಲ್ಲಿಯೇ ಇದ್ದು ಈ ವಾರ್ಡಿನ ಸಮಸ್ಯೆಗಳ ಬಗ್ಗೆ ಅಧ್ಯಯನ ಮಾಡಿ ಅದನ್ನು ಪರಿಹರಿಸಲು ಬೇಕಾದ ಸಿದ್ಧತೆ ಮಾಡಿಕೊಳ್ಳಿ ಎಂದು ಸುಮ್ಮನಾಗಿಸಿಬಿಟ್ಟ.
ನಾನು ಮನೆಯಿಂದ ಹೊರಬಂದಾಗ ನೋಡಿದ ಜನ ನಗುತ್ತಾ ಮಾತನಾಡಿಸುವುದು, ಕೈಕುಲುಕಿ ಶುಭ ಹಾರೈಸುವುದು ಎಲ್ಲಾ ನೋಡಿದಾಗ ಮೂರ್ತಿ ಹೇಳಿದ್ದು ನೂರಕ್ಕೆ ನೂರು ಸತ್ಯ ಎನಿಸಿ ಯಾರೇ ಮಾತನಾಡೀಸಿದರೂ ಅವರ ಬಳಿ ವಾರ್ಡಿನ ಸಮಸ್ಯೆಗಳ ಬಗ್ಗೆ ಕೇಳಿ ತಿಳಿದುಕೊಂಡು ಪಟ್ಟಿ ಮಾಡಿಕೊಳ್ಳುವುದರ ಜೊತೆಗೆ ಅದಕ್ಕೆ ಯಾವ ರೀತಿಯ ಪರಿಹಾರ ನೀಡಬಹುದು ಎನ್ನುವುದರ ಬಗ್ಗೆಯೂ ಹಗಲು ರಾತ್ರಿ ಯೋಚಿಸತೊಡಗಿದೆ.
ಚುನಾವಣೆ ಮುಗಿದು ಮತ ಎಣಿಕೆಯಾಗಿ ಫಲಿತಾಂಶ ಹೊರಬಿದ್ದಾಗ ಸರ್ವಾನುಮತದಿಂದ ಗೆಲ್ಲುವೆ ಎಂದುಕೊಂಡವನಿಗೆ ಮತ್ತೊಮ್ಮೆ ತಲೆ ತಿರುಗುವಂತೆ ಆಗುವ ಸಂದರ್ಭ. ಏಕೆಂದರೆ ಗೆಲ್ಲುವ ಮಾತಿರಲಿ ಠೇವಣಿಯನ್ನು ಕಳೆದುಕೊಂಡಿದ್ಧೆ. ಮನೆಗೆ ಬಂದ ಮೂರ್ತಿಯನ್ನು, ಏನಪ್ಪಾ ಇದು ಎಂದಾಗ, ಸರ್ ವೋಟಿಂಗ್ ಹಿಂದಿನ ದಿನದವರೆಗೂ ನೀವು ಗೆಲ್ಲುವುದರಲ್ಲಿ ಯಾವುದೇ ಅನುಮಾನನೂ ಇರಲಿಲ್ಲ. ಆದರೆ ಅವತ್ತು ರಾತ್ರಿ, ಈಗ ಗೆದ್ದಿರುವ ವ್ಯಕ್ತಿ ಒಂದೊಂದು ಓಟಿಗೆ ಐದು ಸಾವಿರದಂತೆ ಹಂಚಿ, ನಿಮಗೆ ಈಗಾಗಲೇ ವಯಸ್ಸಾಗಿದೆ, ಓಡಾಡಲು ಸಾಧ್ಯವಾಗದೆ ಅವರು ಪ್ರಚಾರಕ್ಕೂ ಬಂದಿಲ್ಲ. ಅಂತಹ ವ್ಯಕ್ತಿ ಗೆದ್ದರೆ ವಾರ್ಡಿನ ಅಭಿವೃದ್ಧಿ ಆಗಲು ಸಾಧ್ಯವೇ ಇಲ್ಲ. ನಾನು ಎಲ್ಲ ಕೆಲಸ ಮಾಡದಿದ್ದರೂ ಸಾಧ್ಯವಾದ ಮಟ್ಟಿಗಂತೂ ಖಂಡಿತಾ ಮಾಡುತ್ತೇನೆ. ಹಾಗಾಗಿ ನನಗೆ ಮತ ಹಾಕಿ ಗೆಲ್ಲಿಸಿ ಎಂದು ನಿಮ್ಮ ಬಗ್ಗೆ ಅಪಪ್ರಚಾರ ಮಾಡಿದ್ದಾನೆ. ನನಗೆ ಗೊತ್ತಾಗುವ ವೇಳೆಗೆ ಪರಿಸ್ಥಿತಿ ಕೈಮೀರಿ ಹೋಗಿತ್ತು. ನನ್ನಿಂದ ಪಾಪ ನಿಮಗೆ ತೊಂದರೆ ಆಯಿತು ಸಾರಿ ಎಂದ. ರಾಜಕೀಯದ ಹೊಲಸುಗಳ ಬಗ್ಗೆ ಓದಿ, ಕೇಳಿ ತಿಳಿದಿದ್ದರಿಂದ ಒಂದು ರೀತಿ ಒಳ್ಳೆಯದೇ ಆಯಿತೆಂದು ಸಮಾಧಾನವಾಗಿದ್ದೆ. ಆದರೆ ಎರಡೇ ದಿನದಲ್ಲಿ ಹತ್ತಿರದವರಿಂದ ಸಿಕ್ಕ ಮಾಹಿತಿ ಎಂದರೆ, ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳಿಗೆ ಭಯ ಹುಟ್ಟಿಸಿ ಹಣ ಕೀಳುವ ಸಲುವಾಗಿ ಬಿಡದೆ ನನ್ನನ್ನು ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಮಾಡಿದ್ದಲ್ಲದೆ, ತನ್ನ ಇಷ್ಟಾರ್ಥ ಸಾಧಿಸಿದ ಮೇಲೆ ಜನರ ಬಳಿ, ಮನುಷ್ಯ ಏನೋ ತುಂಬಾ ಒಳ್ಳೆಯವನು, ಪಾಪ ಅವರಿಗೆ ಪ್ರಚಾರ ಮಾಡಲಿಕ್ಕೆ ಬರಲು ಆಗುತ್ತಿಲ್ಲ. ನಮ್ಮ ಒತ್ತಾಯಕ್ಕೆ ನಿಂತಿದ್ದಾರೆ, ಓಡಾಡಿ ಕೆಲಸ ಮಾಡಲು ಅವರಿಂದ ಆಗೋಲ್ಲ. ಅವರು ಗೆದ್ದರೆ ಈಗ ಆದಷ್ಟು ಕೆಲಸ ಆಗುವುದು ಅನುಮಾನ. ಹಾಗಾಗಿ .... ಇವರಿಗೆ ಮತ ಹಾಕಿ ಗೆಲ್ಲಿಸಿ ಎಂದು ಹೇಳಿದನಂತೆ. ಈ ವಿಷಯ ತಿಳಿದು ಮೋಸ ಹೋದೆನಲ್ಲ ಎಂದು ರಕ್ತ ಕುದಿಯ ತೊಡಗಿತು. ಅವನಿಗೆ ಸರಿಯಾದ ಪಾಠ ಕಲಿಸಬೇಕು, ಬಿಡಬಾರದು ಎಂದು ಯೋಚಿಸುತ್ತಾ ಮನೆಯಲ್ಲೇ ಬೋನಿನೊಳಗೆ ಸಿಕ್ಕ ಸಿಂಹದಂತೆ ಅಲ್ಲಿಂದ ಇಲ್ಲಿ, ಇಲ್ಲಿಂದ ಅಲ್ಲಿಗೆ ಸಿಟ್ಟಿನಿಂದ ಓಡಾಡುವುದನ್ನು ನೋಡಿದ ಹೆಂಡತಿ, ಜಾಸ್ತಿ ಯೋಚಿಸಿ ಆರೋಗ್ಯ ಹಾಳುಮಾಡಿ ಕೊಳ್ಳಬೇಡಿ. ಆಗಿದ್ದು ಒಳ್ಳೆಯದೇ ಆಗಿದೆ, ಇಷ್ಟು ದಿನ ಬಿಡುವಿಲ್ಲದೆ ದುಡಿದಿದ್ದೀರಿ ಇನ್ನೂ ಮುಂದೆ ನೆಮ್ಮದಿಯಿಂದ ನಮ್ಮೊಂದಿಗೆ ಇರಿ. ಬನ್ನಿ ಒಳ್ಳೆ ಕಾಫಿ ಕೊಡುತ್ತೇನೆ ಎಂದು ಕರೆದಳು........