STORYMIRROR

Harish Bedre

Tragedy Action Others

4  

Harish Bedre

Tragedy Action Others

ದಶರಥ ರಾಮ

ದಶರಥ ರಾಮ

5 mins
396

ದಶರಥರಾಯರು ತುರ್ತು ಕೆಲಸಕ್ಕಾಗಿ ಮನೆಯಿಂದ ಬೈಕಲ್ಲಿ ಸ್ವಲ್ಪ ವೇಗವಾಗಿ ಬರುತ್ತಿದ್ದರು. ಅದು ಮುಖ್ಯರಸ್ತೆಯಾದರೂ ಅಂದು ಹೆಚ್ಚು ವಾಹನ ಸಂಚರವಿರಲಿಲ್ಲ. ಹಾಗಾಗಿ ಬೈಕನ್ನು ವೇಗವಾಗಿ ಓಡಿಸುತ್ತಿದ್ದರು. ಅವರ ನೋಟ ಎದುರು ರಸ್ತೆಯ ಮೇಲಿದ್ದರೂ ಮನಸ್ಸು ಹೊರಟ ಕೆಲಸದ ಆಗುಹೋಗುಗಳ ಬಗ್ಗೆ ಯೋಚಿಸುತ್ತಿತ್ತು. ತಾವು ಅಂದುಕೊಂಡ ಕೆಲಸವಾಗಲಿ ಎಂದು ದೇವರನ್ನು ಮನಸ್ಸಲ್ಲೇ ಪ್ರಾರ್ಥಿಸುತ್ತ ಸಾಗುವಾಗ ಇದಕ್ಕಿದ್ದಂತೆ ಪುಟ್ಟ ಹುಡುಗನೊಬ್ಬ ರಸ್ತೆಯ ಮಧ್ಯಕ್ಕೆ ಓಡಿಬಂದ. ಅವನನ್ನು ನೋಡಿ ಬ್ರೇಕ್ ಹಾಕುವ ಮುನ್ನವೇ ಇವರ ಬೈಕ್ ಬಡಿದು ಅಷ್ಟು ದೂರ ಹೋಗಿಬಿದ್ದ. ದಶರಥರಾಯರು ಆಯಾ ತಪ್ಪಿ ಕೆಳಗೆ ಬಿದ್ದರು.


ದಶರಥರಾಯರಿಗೆ ಒಬ್ಬನೇ ಮಗ. ಅವನ ಹೆಸರು ರಾಘುರಾಮ. ಬಹಳ ಮುದ್ದಾದ ಹುಡುಗ. ಆಟ ಪಾಠ ಎರಡರಲ್ಲೂ ಮುಂದು. ಒಬ್ಬನೇ ಮಗನೆಂದ ಮೇಲೆ ತಂದೆತಾಯಿಯರ ಪ್ರೀತಿಗೆ ಬರವೇ? ರಾಘುರಾಮ ಏನಾದರೂ ನೋಡಿ ಅವನಿಗೆ ಇಷ್ಟವಾಗಿ ಇವರಿಗೆ ಕೇಳುವ ಮುನ್ನವೇ ಆ ವಸ್ತು ಅವನ ಕೈಯಲ್ಲಿ ಇರುತ್ತಿತ್ತು. ಹಾಗೆಂದು ರಾಘುರಾಮ ಒಂದೇ ಒಂದು ದಿನವು ಅನಾವಶ್ಯಕವಾದದ್ದನ್ನು ಕೇಳಲೇ ಇಲ್ಲ. ಪ್ರತಿಯೊಂದರಲ್ಲೂ ಹಿತಮಿತವಾದ ಬಯಕೆ ಅವನದು.


ಅವನ ನಯವಿನಯದ ನಡುವಳಿಕೆಗೆ, ಬುದ್ದಿವಂತಿಕೆಗೆ, ಯಾವಾಗಲೂ ಎಲ್ಲರಲ್ಲಿ ಒಂದಾಗಿ ನಗುನಗುತ್ತಾ ಬೆರೆವ ಅವನ ಗುಣಕ್ಕೆ ಮಾರು ಹೋಗದವರೇ ಇಲ್ಲ. ಒಂದನೇ ತರಗತಿಯಿಂದ ಅವನು ಬಿ.ಇ. ಮುಗಿಸುವರೆಗೆ ಇವನಿಗೆ ಪಾಠ ಹೇಳಿಕೊಟ್ಟ ಪ್ರತಿಯೊಬ್ಬರಿಗೂ ಅಚ್ಚುಮೆಚ್ಚಿನ ಶಿಷ್ಯ. ಹಾಗೇ ಗೆಳೆಯರೆಲ್ಲರಿಗೂ ಬೇಕಾದವನು. 


ತಂದೆತಾಯಿಗೆ ಎಲ್ಲೂ ಹೊರೆಯಾಗದಂತೆ ಕಂಪ್ಯೂಟರ್ ಸೈನ್ಸನಲ್ಲಿ ತಾಂತ್ರಿಕ ಪದವಿ ಪಡೆದು ಅಂತರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸವನ್ನು ಪಡೆದ. ಅವನ ಬುದ್ದಿವಂತಿಕೆ ಗಮನಿಸಿದ ಕಂಪನಿಯವರು, ತಮ್ಮದೇ ಖರ್ಚಿನಲ್ಲಿ ಹೆಚ್ಚಿನ ಓದಿಗೆ ಅಮೆರಿಕಕ್ಕೆ ಕಳಿಸಿದರು. ಅದರಲ್ಲೂ ಅವನು ಅತೀ ಹೆಚ್ಚು ಅಂಕಗಳೊಂದಿಗೆ ತೇರ್ಗಡೆಯಾಗಿದ್ದಲ್ಲದೇ ಅತ್ಯಂತ ಉನ್ನತ ಹುದ್ದೆಯನ್ನು ಪಡೆದ. ಇದು

 ದಶರಥರಾಯರಿಗೂ ಮತ್ತು ಅವರ ಮಡದಿಗೆ ಇನ್ನಿಲ್ಲದ ಸಂತೋಷ ತಂದ್ದಿತ್ತು. ಬಂಧು ಬಳಗದವರೆಲ್ಲಾ ಇವನ ಬಗ್ಗೆ ಮಾತನಾಡಿದಾಗ ಇನ್ನೂ ಹೆಚ್ಚಿನ ಖುಷಿ ಅವರಿಗಾಗುತ್ತಿತ್ತು.


ರಾಘುರಾಮ ಎಷ್ಟೇ ಎತ್ತರಕ್ಕೆ ಬೆಳೆದಿದ್ದರೂ ಅವನಲ್ಲಿ ಕಿಲುಬುಕಾಸಿನಷ್ಟು ಬದಲಾವಣೆ ಬಂದಿರಲಿಲ್ಲ. ಗೆಳೆಯರಾಗಲಿ, ಇತರರೇ ಆಗಲಿ ಇವನನ್ನು ಕಂಡಾಗ ಮಾತನಾಡಲು ಹಿಂಜರಿದರೆ, ಇವನೇ ಹೋಗಿ ಅವರನ್ನು ಮೊದಲಿನಂತೆ ಮಾತನಾಡಿಸುತ್ತಿದ್ದ. ಅವರ ಕಷ್ಟಸುಖಗಳಿಗೆ ತನ್ನ ಕೈಲಾದ ಮಟ್ಟಿಗೆ ಸಹಾಯ ಮಾಡುತ್ತಿದ್ದ. 

ಉನ್ನತ ಹುದ್ದೆಯಲ್ಲಿ ಇದ್ದ ಕಾರಣ ಪದೇಪದೆ ಅನ್ಯದೇಶಗಳಿಗೂ ಹೋಗಿಬರಬೇಕಿತ್ತು. ಅದರಲ್ಲೂ ಅಮೆರಿಕಕ್ಕೆ ಎರಡುಮೂರು ತಿಂಗಳಲ್ಲಿ ಒಮ್ಮೆ ತಪ್ಪದೆ ಹೋಗಿಬರಬೇಕಿತ್ತು. ಹೀಗೆ ಹೋದಾಗ ಬಿಡುವಿದ್ದರೆ ತನ್ನೊಂದಿಗೆ ಅಲ್ಲಿ ಓದಿದ ಗೆಳತಿಯ ಮನೆಗೆ ಹೋಗಿಬರುತ್ತಿದ್ದ. ಅವಳ ಹೆಸರು ಜಾಹ್ನವಿ, ತಂದೆತಾಯಿಯ ಒಬ್ಬಳೇ ಮುದ್ದಿನ ಮಗಳು. ಅವಳೂ ವಿನಯವಂತೆ, ಬುದ್ದಿವಂತೆ ಜೊತೆಗೆ ಚಂದುಳ್ಳಿ ಚೆಲುವೆ. ಮೂಲ ಭಾರತದವರೇ ಆದರೂ ಅವರಿಗೆ ಅಲ್ಲಿನ ಪೌರತ್ವ ದೊರೆತದ್ದರಿಂದ ಅಲ್ಲೇ ನೆಲೆಸಿದ್ದರು. ತೀರಾ ಅಪರೂಪಕ್ಕೊಮ್ಮೆ ಭಾರತಕ್ಕೆ ಬಂದು ತಮ್ಮವರೊಂದಿಗೆ ಇದ್ದು ಹೋಗುತ್ತಿದ್ದರು.

ಇಬ್ಬರಲ್ಲೂ ಗೆಳೆತನದ ಹೊರತಾಗಿ ಬೇರೆ ಯಾವುದೇ ಭಾವನೆಗಳಿರಲಿಲ್ಲ. ಆದರೆ ಅದೊಂದು ದಿನ ಜಾಹ್ನವಿಯ ತಾಯಿ ಇವರಿಬ್ಬರು ಮಾತನಾಡುತ್ತಾ ಕುಳಿತಿರುವಾಗ, ರಾಘು ತಪ್ಪು ತಿಳಿಯಬೇಡ, ನೀನು ನಮ್ಮ ಜಾಹ್ನವಿಯ ಮದುವೆ ಆಗುತ್ತಿಯಾ ಎಂದು ಕೇಳಿದರು. ಇದು ಅವರಿಬ್ಬರಿಗೂ ತಲೆತಿರುಗುವಂತೆ ಮಾಡಿತು. ಇದಕ್ಕೆ ರಾಘುರಾಮ ಸ್ವಲ್ಪಹೊತ್ತು ಯೋಚಿಸಿ, ನನಗೆ ಕಾಲಾವಕಾಶ ಕೊಡಿ ಹೇಳುವೆ ಎಂದ.


ಅವರ ಮನೆಯಿಂದ ಬಂದ ರಾಘುರಾಮನಿಗೆ, ಜಾಹ್ನವಿಯ ತಾಯಿ ಕೇಳಿದ ಮಾತು ಇನ್ನಿಲ್ಲದಂತೆ ಕಾಡತೊಡಗಿತು. ಕೊನೆಗೊಂದು ನಿರ್ಧಾರಕ್ಕೆ ಬಂದು ಜಾಹ್ನವಿಯನ್ನು ಭೇಟಿಯಾಗಲು ಹೇಳಿದ. ಅದೂ ಇದೂ ಮಾತನಾಡುತ್ತಾ ಅವಳಿಗೆ, ನಿನ್ನ ತಾಯಿ ಹೇಳಿದ್ದರ ಬಗ್ಗೆ ನಿನ್ನ ಅಭಿಪ್ರಾಯ ಏನೆಂದು ಕೇಳಿದ. ಅವಳೂ ಆ ಕ್ಷಣದಿಂದ ಯೋಚಿಸಿ, ಇವನು ಒಪ್ಪುವುದಾದರೆ ಯಾಕಾಗಬಾರದೆಂಬ ನಿರ್ಧಾರಕ್ಕೆ ಬಂದಿದ್ದಳು. ಅದನ್ನೇ ಅವನಿಗೆ ಹೇಳಿದಳು. ಅದಕ್ಕೆ ರಾಘುರಾಮ, ನೀನು ಒಪ್ಪಿದ್ದು ನನಗೆ ತುಂಬಾ ಸಂತೋಷ. ಆದರೆ ಇದನ್ನು ಅಪ್ಪ ಅಮ್ಮನಿಗೆ ತಿಳಿಸುವೆ. ಅವರು ಒಪ್ಪಿದರಷ್ಟೇ ಮುಂದುವರೆಯುವ, ಇಲ್ಲವೆಂದರೆ ಈಗಿರುವಂತೆಯೇ ಒಳ್ಳೆಯ ಸ್ನೇಹಿತರಾಗಿ ಇರುವ ಎಂದ. ಇದು ಅವಳಿಗೂ ಸರಿ ಎನಿಸಿ ಸಂತೋಷದಿಂದಲೇ ಆಗಲೆಂದಳು.


ಅಲ್ಲಿಂದ ಹಿಂದಿರುಗಿ ಬಂದ ರಾಘುರಾಮನಿಗೆ ತನ್ನ ಮದುವೆ ವಿಚಾರವನ್ನು ಹೆತ್ತವರೊಂದಿಗೆ ಹೇಗೆ ಹೇಳಬೇಕೆಂದು ತಿಳಿಯದೆ ತುಂಬಾ ಒದ್ದಾಡಿದ. ಇದಕ್ಕಾಗಿ ಗೆಳೆಯರ ಅಥವಾ ಯಾರಾದರೂ ಹಿರಿಯರ ಸಹಾಯ ಪಡೆದರೆ ಹೇಗೆಂದು ಯೋಚಿಸಿದನಾದರೂ ಸರಿ ಕಾಣದೆ ಒಳಗೇ ಒದ್ದಾಡತೊಡಗಿದ. ಹೊತ್ತು ಹೆತ್ತವರಿಗೆ ತಮ್ಮ ಮಕ್ಕಳ ಒದ್ದಾಟ ಅರಿಯಲು ಕಷ್ಟವೆ, ಒಂದು ದಿನ ತಿಂಡಿಯ ಸಮಯದಲ್ಲಿ ತಾಯಿ, ಯಾಕೆ ಮಗ ಏನಾದರೂ ಸಮಸ್ಯಯೇ ನಾಲ್ಕು ದಿನದಿಂದ ತುಂಬಾ ಮಂಕಾಗಿರುವೆ ಎಂದು ಕೇಳಿದರು. ಇದನ್ನೇ ಕಾಯುತ್ತಿದ್ದವನಂತ್ತಿದ್ದ ರಾಘುರಾಮ, ಎಲ್ಲವನ್ನೂ ಅವರಿಗೆ ಹೇಳಿದ.

ಅದನ್ನು ಕೇಳಿದ ಅವರು, ಅಯ್ಯೋ ಇಷ್ಟೇನಾ ಚೀಂತಿಸಬೇಡ ನಿನ್ನ ತಂದೆಗೆ ನಾನೇ ಹೇಳುವೆ ಎಂದು ಆ ದಿನ ರಾತ್ರಿಯೇ ವಿಚಾರ ತಿಳಿಸಿದರು. ವಿಚಾರ ತಿಳಿದ ದಶರಥರಾಯರಿಗೆ ತಮ್ಮ ಮೇಲೆ ತಮಗೆ ಬೇಸರವಾಯಿತು. ಏಕೆಂದರೆ ಮಗ ಓದು ಮುಗಿಸಿ ಒಳ್ಳೆಯ ಕೆಲಸದಲ್ಲಿದ್ದರೂ, ಅವನ ಮದುವೆ ಬಗ್ಗೆ ಯೋಚಿಸಲಿಲ್ಲವೆಂದು. ಅವರು ರಾಘುವನ್ನು ಕರೆದು, ನೀವಿಬ್ಬರೂ ಮದುವೆಯಾಗಿ ಸುಖವಾಗಿರುತ್ತೇವೆ ಎಂದರೆ ನನ್ನದೇನೂ ಅಭ್ಯಂತರವಿಲ್ಲ ಎಂದರು. ಇವರು ಹೀಗೇ ಹೇಳುವರೆಂದು ರಾಘುರಾಮನಿಗೆ ತಿಳಿದಿತ್ತು. ಆದರೂ ಎಲ್ಲಿ ಹೆತ್ತವರು ತಪ್ಪಾಗಿ ಭಾವಿಸುವರೆಂದು ಹೆದರಿದ್ದ. ತಂದೆ ತಾಯಿ ಇಬ್ಬರ ಒಪ್ಪಿಗೆ ಸಿಕ್ಕಮೇಲೆ ಜಾಹ್ನವಿಗೆ ವಿಚಾರ ತಿಳಿಸಿದ. ಅವಳೂ, ಅವಳ ತಂದೆತಾಯಿಗೆ ಇದನ್ನು ಹೇಳಿದಳು. ಇದಾದ ಕೆಲವೇ ತಿಂಗಳಲ್ಲಿ ರಾಘುರಾಮನ ಮನೆಯವರ ಸಂಪ್ರದಾಯದಂತೆ ಭಾರತದಲ್ಲೇ ಮದುವೆಯಾಯಿತು. 


ಕೆಲವು ದಿನ ರಾಘುವಿನೊಂದಿಗೆ ಅವನ ತಂದೆತಾಯಿಯ ಜೊತೆಗೇ ಇದ್ದ ಜಾಹ್ನವಿ ತನ್ನ ಕೆಲಸಕ್ಕಾಗಿ ಮತ್ತೆ ಅಮೆರಿಕಕ್ಕೆ ಹೋದಳು. ಅವಳು ಕೆಲಸ ಮಾಡುವುದು ಅಥವಾ ಬಿಡುವುದು ಅವರಿಬ್ಬರ ಇಚ್ಛೆಗೆ ಬಿಟ್ಟಿದ್ದರು ರಾಯರು. ರಾಘುರಾಮ ತೀರ್ಮಾನವನ್ನು ಜಾಹ್ನವಿಗೆ ಬಿಟ್ಟಿದ್ದ. ಅದಕ್ಕವಳು ತಾನು ಒಪ್ಪಿಕೊಂಡಿದ್ದ ಅಲ್ಲಿನ ಕೆಲಸ ಮುಗಿಸಿ ನಂತರ ಇಲ್ಲಿಗೇ ಬಂದಿರುವ ನಿರ್ಧಾರ ಮಾಡಿದಳು. ಅವಳು ಅಲ್ಲಿ ಒಪ್ಪಿಕೊಂಡಿದ್ದ ಕೆಲಸ ಮುಗಿಸಲು ಇನ್ನೂ ಒಂದುವರೆ ವರ್ಷ ಬಾಕಿಯಿತ್ತು. ಅದೇನು ಆಗೋ ಇಗೋ ಅನ್ನುವುದರಲ್ಲಿ ಆಗುತ್ತದೆ. ಅಲ್ಲಿಯವರೆಗೆ ತಾನೇ ಅಲ್ಲಿಗೆ ಹೋಗಿಬರುತ್ತಿದ್ದಾರೆ ಆಗುತ್ತದೆಯೆಂದು ಇವನೂ ಒಪ್ಪಿಕೊಂಡ.


ಮೊದಲು ಎಲ್ಲಾಕಡೆ ಹೋಗಿಬರುತ್ತಿದ್ದ ರಾಘುರಾಮ, ಅದನ್ನು ಬಿಟ್ಟು ಹೆಚ್ಚು ಹೆಚ್ಚು ಅಮೆರಿಕಕ್ಕೆ ಹೋಗಿಬರತೊಡಗಿದ. ಇದನ್ನು ಗಮನಿಸಿದ ಅವನ ಕಂಪನಿಯವರು, ರಾಘುರಾಮ ಅಲ್ಲೇ ಇದ್ದು ಕೆಲಸ ಮಾಡುವ ಅವಕಾಶ ಕೊಟ್ಟರು. ಮಗಸೊಸೆ ಜೊತೆಯಾಗಿರಲಿ, ಸುಖವಾಗಿರಲಿ ಎಂಬ ಕಾರಣಕ್ಕೆ ಮನೆಯಲ್ಲಿ ಸಂತೋಷದಿಂದಲೇ ಒಪ್ಪಿಗೆ ಕೊಟ್ಟರು. 


ಜಾಹ್ನವಿಯ ಕೆಲಸ ಮುಗಿದರೂ ರಾಘುರಾಮ ಅಲ್ಲೇ ಇರಬೇಕಾದ ಪರಿಸ್ಥಿತಿ ಬಂತು. ಆಗ ದಶರಥರಾಯರು ಅವಳೊಬ್ಬಳು ಇಲ್ಲಿ ಬಂದು ಇರುವುದು ಬೇಡ, ಅವಳು ಅಲ್ಲೇ ಜೊತೆಯಾಗಿರಲಿ ಎಂದರು. ಸಾಧ್ಯವಾದಾಗಲೆಲ್ಲಾ ಇಬ್ಬರೂ ಬಂದು ಸ್ವಲ್ಪ ದಿನ ಇದ್ದು ಹೋಗುತ್ತಿದ್ದರು. ಹೀಗಿರುವಾಗ ಒಂದು ದಿನ ರಾಘುರಾಮನ ತಾಯಿ ಮಲಗಿದ್ದವರು ಏಳಲೇ ಇಲ್ಲ. ಆಗ ಊರಿಗೆ ಬಂದ ರಾಘುರಾಮ ಕಾರ್ಯಗಳೆಲ್ಲಾ ಮುಗಿದಮೇಲೆ, ತಂದೆಯನ್ನು ತಮ್ಮ ಜೊತೆಗೆ ಹೊರಡಲು ಬೇಡಿದ. ಆದರೆ ದಶರಥರಾಯರು ಸಧ್ಯಕ್ಕೆ ಬೇಡ ಮುಂದೆ ನೋಡುವ ಎಂದರು.

ತಾಯಿಯ ವರ್ಷದ ಕಾರ್ಯ ಮುಗಿದ ಮೇಲೆ ರಾಘುರಾಮ, ತಂದೆಯನ್ನು ಬಿಡದಂತೆ ಕಾಡಿ ಅಮೆರಿಕಕ್ಕೆ ಕರೆದುಕೊಂಡು ಹೋದ. ಒಲ್ಲದ ಮನಸ್ಸಿನಿಂದಲೇ ಹೋಗಿದ್ದ ರಾಯರಿಗೆ ಅಲ್ಲಿ ಹೆಚ್ಚು ದಿನ ಇರಲು ಸಾಧ್ಯವಾಗಲಿಲ್ಲ. ಮಗ ಸೊಸೆ ಕೆಲಸಕ್ಕೆ ಹೋದ ಮೇಲೆ ಮನೆಯಲ್ಲಿ ಒಬ್ಬರೇ ಇರುವುದು ಅವರಿಂದ ಆಗಲಿಲ್ಲ. ಅದೇ ನೆಪ ಮಾಡಿಕೊಂಡು ಎರಡೇ ತಿಂಗಳಿಗೆ ಮತ್ತೆ ಭಾರತಕ್ಕೆ ಬಂದರು. 

ರಾಘುರಾಮ ಕೆಲಸದ ನೆಪದಲ್ಲಿ ಅಲ್ಲೇ ಉಳಿಯುವಂತಾಯಿತು. ಹಾಗಾಗಿ ಗಂಡ ಹೆಂಡತಿ ಆಗಾಗ ಬಂದು ಹೋಗುತ್ತಿದ್ದರು. ಇಲ್ಲಿ ರಾಯರನ್ನು ನೋಡಿಕೊಳ್ಳಲು ತಮ್ಮ ಹತ್ತಿರದ ಸಂಬಂಧಿಗಳನ್ನು ಕರೆದು ಮನೆಯಲ್ಲಿ ಉಳಿಸಿದ. ಅಲ್ಲದೆ ಆರೋಗ್ಯದ ಏರುಪೇರುಗಳನ್ನು ನೋಡಲು ಒಬ್ಬ ವೈದ್ಯರನ್ನು ನೇಮಿಸಿದ. ಹೀಗೆ ದಿನಗಳು ಉರುಳುವಾಗ, ಅವನದೇ ಕಂಪನಿಯಿಂದ ದೊಡ್ಡ ಕೆಲಸದ ಅವಕಾಶವೊಂದು ಒದಗಿಬಂತು. ಆ ಕೆಲಸ ಮುಗಿಸಲು ಕನಿಷ್ಟ ಅಂದರೂ ಒಂದೂವರೆ ವರ್ಷ ಬೇಕಾಗಿತ್ತು. ಇದು ಮುಗಿಯುವವರೆಗೂ ಸಾಮಾನ್ಯ ರಜೆಯ ಹೊರತಾಗಿ ಅನ್ಯ ರಜೆಗಳನ್ನು ಹಾಕುವಂತಿರಲಿಲ್ಲ. ಹಾಗಾಗಿ ರಾಘುರಾಮ ಏನು ಮಾಡಬೇಕೆಂದು ತಿಳಿಯದೆ ರಾಯರನ್ನು ಕೇಳಿದಾಗ, ಒಪ್ಪಿಕೊಳ್ಳುವಂತೆ ಹೇಳಿದರು. 


ರಾಘುರಾಮ ಒಪ್ಪಿಕೊಂಡ ಕೆಲಸ ಆರಂಭಿಸಿ ಒಂದು ತಿಂಗಳಾಗಿರಬೇಕು, ದಶರಥರಾಯರು ಮನೆಯಲ್ಲೇ ಜಾರಿಬಿದ್ದು, ತಲೆ ಹಾಗೂ ಕಾಲಿಗೆ ಸರಿಯಾಗಿ ಪೆಟ್ಟು ಮಾಡಿಕೊಂಡರು. ತಕ್ಷಣವೇ ಮನೆಯಲ್ಲಿ ನೋಡಿಕೊಳ್ಳಲು ಇದ್ದ ಸಂಬಂಧಿಕರು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದರು. ಅಂದಿನಿಂದ ರಾಯರ ಆರೋಗ್ಯ ಕ್ಷೀಣಿಸುತ್ತಾ ಬಂತು. ಇದೆ ಸಂದರ್ಭದಲ್ಲಿ ಜಾಹ್ನವಿ ಮೊದಲ ಬಾರಿಗೆ ತಾಯಿಯಾಗುವ ಸೂಚನೆ ಸಿಕ್ಕಿತು. ಆದರೆ ಅವಳ ದೇಹ ಪರಿಸ್ಥಿತಿ ಮಗುವಾಗುವವರೆಗೂ ಎಲ್ಲೂ ಎದ್ದು ಒಡಾಡದೆ ಸೂಕ್ಷ್ಮವಾಗಿರಬೇಕಿತ್ತು.


ರಾಘುರಾಮನಿಗೆ ಎರಡೂ ಕಡೆಯಿಂದ ಒತ್ತಡ ಆರಂಭವಾಗಿ ಒದ್ದಾಡ ತೊಡಗಿದ. ಮನೆಯಲ್ಲಿ ಹೆಂಡತಿಯ ಜೊತೆ ಅವಳ ತಾಯಿ ಬಂದು ಇರತೊಡಗಿದರು. ಆದರೆ ತಂದೆಯ ಬಳಿ ಸಂಬಂಧಿಕರನ್ನು ಬಿಟ್ಟಿರುವುದು, ತಾನು ಅಲ್ಲಿಗೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಕೊರಗುತ್ತಿದ್ದ. ಪ್ರತಿದಿನ ತಪ್ಪದೆ ತಂದೆಯ ಜೊತೆ ವಿಡಿಯೋ ಕರೆಮಾಡಿ ಮಾತನಾಡುತ್ತಿದ್ದ. ಹಾಗೆಯೇ ಅಲ್ಲಿದ್ದವರಿಂದ ಅವರ ಆರೋಗ್ಯದ ಬಗ್ಗೆ ವಿಚಾರಿಸಿಕೊಳ್ಳುತ್ತಿದ್ದ. ಡಾಕ್ಟರಿಗೂ ಕರೆಮಾಡಿ ತನ್ನ ತಂದೆಯನ್ನು ಜೋಪಾನ ಮಾಡುವಂತೆ ಬೇಡಿಕೊಳ್ಳತ್ತಿದ್ದ. ಇದು ಬಿಟ್ಟು ಬೇರೇನೂ ಮಾಡುವ ಪರಿಸ್ಥಿತಿಯಲ್ಲಿ ಅವನಿರಲಿಲ್ಲ.

ಒಂದು ದಿನ ಮಲಗಿದಿಂದಲೇ ಟಿವಿಯಲ್ಲಿ ಶ್ರವಣಕುಮಾರನ ಕತೆಯ ಚಿತ್ರವನ್ನು ರಾಯರು ನೋಡಿದರು. ಅದು ನೋಡುವಾಗಲೇ ಅವರ ಮನಸ್ಸು ತುಂಬಾ ವರ್ಷಗಳ ಕೆಳಗೆ ತಾವು ಅಪಘಾತ ಮಾಡಿದ ಕಡೆ ಜಾರಿತು. ಅಂದು ಅವರದೇನೂ ತಪ್ಪಿರದಿದ್ದರೂ ಆ ಮಗು ಓಡಿಬಂದು ಅಪಘಾತವಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿತ್ತು. ಆ ಮಗುವಿನ ತಂದೆತಾಯಿಯರೇ ನಿಮ್ಮ ತಪ್ಪಿಲ್ಲ ಎಂದರೂ, ಆ ಆಘಾತದಿಂದ ಹೊರಬರಲು ಇವರಿಗೆ ತುಂಬಾ ದಿನಗಳೇ ಬೇಕಾಯಿತು. ಅಂದಿನಿಂದ, ಇದರ ಫಲವಾಗೇ ತನ್ನ ಮಗ ಮತ್ತು ಸೊಸೆ ಇಬ್ಬರೂ ತಮ್ಮಿಂದ ಬೇರೆ ಬೇರೆ ಕಾರಣಕ್ಕೆ ದೂರ ಇರುವಂತಾಗಿದೆ ಎಂದು ರಾಯರಿಗೆ ಬಲವಾಗಿ ಅನಿಸತೊಡಗಿತು. ಎಷ್ಟೇ ಬೇಡ ಬೇಡ ಅಂದುಕೊಂಡರು ರಾಘುರಾಮ ಬಂದು ತಮ್ಮ ಜೊತೆಗಿರಲಿ ಅನಿಸತೊಡಗಿತು. ಆದರೆ ಅಪ್ಪಿತಪ್ಪಿಯೂ ಅವನನ್ನು ಬಾ ಎಂದು ಕರೆಯಲಿಲ್ಲ. ಹಾಗೆ ಕರೆದರೆ ಎಲ್ಲಿ ಅವನ ಕೆಲಸಕ್ಕೆ ತೊಂದರೆ ಆಗುವುದೋ ಮತ್ತು ಸೊಸೆಯ ಚೊಚ್ಚಲ ಬಾಣಂತನ ಬೇರೆ ಇದ್ದು ಅವಳಿಗೂ ತೊಂದರೆಯಾಗಬಹುದೆಂದು ಯಾರಲ್ಲಿಯೂ ಹೇಳಿಕೊಳ್ಳದೆ ಒಳಗೆ ನರಳತೊಡಗಿದರು. 


ಈ ಮಾನಸಿಕ ಚಿಂತೆ ದಶರಥರಾಯರನ್ನು ದಿನದಿಂದ ದಿನಕ್ಕೆ ಸೊರಗುವಂತೆ ಮಾಡಿತು. ಯಾವ ಔಷಧೀಯೂ ಅವರಿಗೆ ನಾಟುತ್ತಿರಲ್ಲಿಲ್ಲ. ಹೀಗಿರುವಾಗ, ಅಂದು ಜಾಹ್ನವಿ ಗಂಡು ಮಗುವಿಗೆ ಜನ್ಮ ನೀಡಿದಳು. ಅದನ್ನು ಮೊದಲಿಗೆ ತನ್ನ ತಂದೆಗೇ ತಿಳಿಸಬೇಕೆಂದು ಕರೆ ಮಾಡಿದ. ಕರೆ ಸ್ವೀಕರಿಸಿದ ಸಂಬಂಧಿಗಳು ಮಲಗಿದ್ದ ದಶರಥರಾಯರಿಗೆ ಕೊಡಲು ಎಷ್ಟು ಏಳಿಸಿದರೂ, ಅವರು ತನ್ನೊಂದಿಗೆ ಮಗನಿಲ್ಲದ ಕೊರಗಿನಲ್ಲಿ ಮರಳಿಬಾರದ ಲೋಕಕ್ಕೆ ಹೋಗಿದ್ದರು......



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada story from Tragedy