ಪ್ರೇಮ... ಪ್ರೇಮ... ಪ್ರೇಮ
ಏ ಹೋಗೆ, ನೋಡ್ಲಿಕ್ಕೆ ಚೆನ್ನಾಗಿದ್ದಾನೆ, ಚೆನ್ನಾಗಿ ಓದಿದಾನೆ ಅಂದ್ರೆ ಸಾಕಾ? ಇರ್ಲಿಕ್ಕೆ ಮನೆ, ಓಡಾಡೋಕೆ ಗಾಡಿ, ಖರ್ಚು ಮಾಡೋಕೆ ಹಣನೂ ಇರ್ಬೇಕು. ನಾನು ಅವನಷ್ಟು ನೋಡೋಕೆ ಚೆನ್ನಾಗಿ ಇಲ್ಲ ಅಂದ್ರು ಅವನು ಮನಸಾರೆ ಇಷ್ಟ ಪಡ್ತಾನೆ ಅಂತ ನಾನು ಇಷ್ಟಪಟ್ಟು ಮದುವೆ ಆದ್ರೆ ಬದುಕೋದು ಕಷ್ಟ ಆಗುತ್ತೆ. ಅವನು ಹೂಂ ಅಂದ್ರೆ ನೀನೇ ಅವನನ್ನು ಮದುವೆಯಾಗು, ನಾನು ಖುಷಿಯಿಂದ ಬಂದು ಗಿಫ್ಟ್ ಕೊಟ್ಟು ಊಟಮಾಡಿ ಹೋಗ್ತೀನಿ.
ನೋಡ್ರೆ ಯಾರು ಎಷ್ಟೇ ಹೇಳಿದ್ರೂ ನನ್ನ ಉತ್ರ ಒಂದೇ, ಅವನು ನನಗೆ ಬೇಡ. ನಾನು ಸಿಗೋಲ್ಲ ಅಂತ ಅವನು ಸಾಯೋದಾದ್ರೆ ಸಾಯ್ಲಿ ನಂಗೇನೂ ಬೇಜಾರಿಲ್ಲ.
ಏನಾಯ್ತೆ ? ಹೇಗಾಯ್ತು? ಇದೆಲ್ಲಾ ಏನು.....!? ಅಯ್ಯೋ ನಿನ್ನ ಕಾಲಿಗೆ ಏನಾಯ್ತು...... ಪಾಪ ಸೈಡಲ್ಲೇ ನಡೆದುಕೊಂಡು ಹೋಗುತ್ತಿದ್ದ ನಿನಗೆ ಹಿಂದಿನಿಂದ ಕಾರಲ್ಲಿ ಬಂದು ಗುದ್ದಿದ ರಾಕ್ಷಸನಿಗೆ ದೇವರು ಸರಿಯಾದ ಶಿಕ್ಷೆ ಕೊಡಲಿ..
ಏ ನಿಂಗೊತ್ತಾ.....!? ಅವಳಿಗೆ ಆಕ್ಸಿಡೆಂಟ್ ಆಗಿ ಕಾಲು ತೆಗೆದಿರುವುದರಿಂದ ಫಿಕ್ಸ್ ಆಗಿದ್ದ ಅವಳ ಮದ್ವೆ ಮುರಿದು ಬಿತ್ತಂತೆ... ಈಗ ಅವಳಿಗೆ ಯಾರೂ ಮದುವೆ ಆಗಲ್ಲ. ಛೇ ಪಾಪ ಹೀಗೆ ಆಗಬಾರದಿತ್ತು.
ನೋಡ್ಲಿಕ್ಕೆ ಚೆನ್ನಾಗಿ ಇದ್ದಾನೆ, ತುಂಬಾ ಒಳ್ಳೆ ಕೆಲಸದಲ್ಲಿ ಇದ್ದಾನೆ, ಅಂತವನು ನನ್ನನ್ನು ಮದುವೆಯಾಗುವ ಸಲುವಾಗಿ ನೋಡಲು ಬರುತ್ತಿದ್ದಾನೆ ಅಂದ್ರೆ ಅವನಿಗೂ ಏನೋ ಸಮಸ್ಯೆ ಇರಬೇಕು. ಇಲ್ಲಾಂದ್ರೆ ಕುಂಟಿ ಅಂತ ಗೊತ್ತಿದ್ದೂ ಮನೆಗೆ ಯಾಕೆ ಬರ್ತಾನೆ.....
ನೀನಾ....!? ಈ ಕುಂಟಿನ ಮದ್ವೆ ಆಗ್ತೀಯಾ? ನೀನು ಸತ್ರೂ ನಂಗೆ ಬೇಜಾರಾಗಲ್ಲ ಎಂದು ನಿನ್ನ ನೋಯಿಸಿದ್ದೆ.......
ನಿನ್ನ ನೋಡಿದ ಮೊದಲ ದಿನವೇ ಇಷ್ಟಪಟ್ಟಿದ್ದೆ. ಮದ್ವೆ ಅಂತ ಅದ್ರೆ ನಿನ್ನನ್ನೇ ಎಂದು ನಿರ್ಧರಿಸಿದ್ದೆ. ಈಗ ನಿನಗೆ ಸಮಸ್ಯೆ ಆಗಿದೆ ಎಂದು ಬಿಟ್ಟರೆ ಅದು ನಿಜ ಪ್ರೀತಿ ಆಗುತ್ತಾ. ಅಂದಿಗಿಂತ ಹೆಚ್ಚು ಪ್ರೀತಿ ಈಗ ಇದೆ, ಅದು ಎಂದಿಗೂ ಕಡಿಮೆ ಆಗೋಲ್ಲ. ನೀನು ಮನಸಾರೆ ಒಪ್ಪಿ ಹೂಂ ಅಂದರೆ ನಿನ್ನ ಬಾಳ ಸಂಗಾತಿಯಾಗಿ ಬಾಳಿನೂದ್ದಕ್ಕೂ ಜೊತೆಗೇ ನಡಿವೆ.....
ಸ್ಸಾರಿ ಕಣೋ, ತಪ್ಪಾಯ್ತು.... ಕ್ಷಮಿಸಿಬಿಡು....
ನಿಂಗೋತ್ತಿಲ್ವಾ ಪ್ರೀತಿಲಿ ನೋ ಸ್ಸಾರಿ, ನೋ ಥ್ಯಾಂಕ್ಸ್....
ಜಿ. ಹರೀಶ್ ಬೇದ್ರೆ