ಚಂದ್ರವಳ್ಳಿ
ಚಂದ್ರವಳ್ಳಿ
ಜಯಪ್ರಕಾಶ್ ಎಂದಿನಂತೆ ಬೆಳಿಗ್ಗೆ ಬೇಗನೆ ಎದ್ದು ತನ್ನ ನಿತ್ಯಕರ್ಮಗಳನ್ನು ಮುಗಿಸಿ ವಾಕಿಂಗ್ ಹೋಗಿ ಬಂದರು ಹೆಂಡತಿ ವಾಣಿ ಇನ್ನೂ ಮಲಗಿಯೇ ಇದ್ದಳು. ಇದನ್ನು ನೋಡಿ ಪಾಪ ಹುಷಾರು ತಪ್ಪಿರಬೇಕು ಎಂದುಕೊಂಡು ರೂಂ ಒಳಗೆ ಹೋಗಲು ಹೆಜ್ಜೆ ಹಾಕಿದವನು, ರಾತ್ರಿ ಬಹಳ ಹೊತ್ತಿನವರೆಗೂ ಯಾರೊಂದಿಗೊ ಮಾತನಾಡುತ್ತಿದ್ದದ್ದು ನೆನಪಾಗಿ ಸ್ನಾನ ಮಾಡಿದ ಮೇಲೆ ಏಳಿಸಿದರಾಯಿತೆಂದು ಸ್ನಾನಕ್ಕೆ ಹೊರಟ. ಮಕ್ಕಳಿಬ್ಬರೂ ಹಾಲಿನಲ್ಲಿ ಕುಳಿತು ಓದಿಕೊಳ್ಳುತ್ತಿದ್ದರು. ಜಯಪ್ರಕಾಶ್ ಬಚ್ಚಲು ಮನೆಗೆ ಬಂದು ಎರಡು ಚೊಂಬು ನೀರನ್ನು ಮೈಮೇಲೆ ಹಾಕಿಕೊಂಡಿರಲಿಲ್ಲ, ಮಕ್ಕಳಿಬ್ಬರೂ ಅಮ್ಮ ಎಂದು ಚೀರಿದ್ದು ಕಿವಿಗೆ ಬಿದ್ದು, ತಕ್ಷಣ ಟವೆಲ್ ಸುತ್ತಿಕೊಂಡು ಹೊರಬಂದ. ಆಗಲೇ ಮಕ್ಕಳು ಅಮ್ಮನ ರೂಂನಲ್ಲಿ ಇದ್ದರು. ವಾಣಿ ವಿಚಿತ್ರವಾಗಿ ಕೈಕಾಲು ಬೀಸುತ್ತಾ, ಬಹಳ ಕೆಟ್ಟದಾಗಿ ಚೀರುತ್ತಿದ್ದಳು. ಜಯಪ್ರಕಾಶ್, ಅವಳು ಮುಖಕ್ಕೆ ನೀರನ್ನು ಸಿಂಪಡಿಸಿ ಜೋರಾಗಿ ಅಲ್ಲಾಡಿಸಿದಾಗ ಕಣ್ಣು ಬಿಟ್ಟಳು.
---- * -----
ವಾಣಿ, ಉಮಾ, ಇಂದಿರಾ, ರಾಜಿ, ವಿಜಯ ಹಾಗೂ ಮತ್ತೆ ನಾಲ್ಕು ಹುಡುಗಿಯರು ಪ್ರಥಮ ಪಿಯುಸಿಯಿಂದ ಅಂತೀಮಾ ಬಿ.ಕಾಂ.ವರೆಗೆ ಜೊತೆಗೆ ಚಿತ್ರದುರ್ಗದಲ್ಲಿ ಓದಿದವರು. ಇಂದಿರಾಗೆ ಕೆಲಸ ಸಿಕ್ಕಮೇಲೆ ಸ್ಥಳೀಯ ಉಪನ್ಯಾಸಕರನ್ನು ಮದುವೆಯಾಗಿ ಅಲ್ಲೇ ವಾಸವಾಗಿದ್ದಾರೆ. ವಾಣಿ, ರಾಜಿ ಮತ್ತು ಉಮಾ ಮದುವೆಯಾಗಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ವಿಜಯ ಕೇಂದ್ರ ಸರ್ಕಾರದ ಕೆಲಸದಲ್ಲಿರುವವನನ್ನು ಮದುವೆಯಾಗಿ ಅಸ್ಸಾಂ ಕಡೆ ಹೋದ ವಿಚಾರ ಗೊತ್ತಿತ್ತು, ನಂತರ ಅವಳ ಸಂಪರ್ಕ ತಪ್ಪಿಹೋಗಿತ್ತು. ಇನ್ನೂಳಿದ ನಾಲ್ವರು ಸಹಪಾಠಿಗಳ ಸಂಪರ್ಕ ಇರದೆ ಅವರು ಎಲ್ಲಿದ್ದಾರೆ ಎಂದು ಯಾರಿಗೂ ತಿಳಿಯದು.
ವಾಣಿ, ಉಮಾ, ರಾಜಿ ಎಂದೇ ಚಿತ್ರದುರ್ಗಕ್ಕೆ ಬಂದರೂ ತಪ್ಪದೇ ಇಂದಿರಾಳನ್ನು ಭೇಟಿಯಾಗುತ್ತಿದ್ದರು. ಕೊನೆಯ ಪಕ್ಷ ಪೋನಿನಲ್ಲಾದರೂ ಮಾತನಾಡುತ್ತಿದ್ದರು. ಇಂದಿರಾ ಕೂಡ ಬೆಂಗಳೂರಿಗೆ ಹೋದಾಗ ಇವರನ್ನು ಭೇಟಿಯಾಗುತ್ತಿದ್ದಳು. ಅಲ್ಲದೆ ಬಿ.ಕಾಂ.ವರೆಗೆ ಜೊತೆಗೆ ಓದಿದವರು ಸ್ನೇಹ ಕೂಟವನ್ನು ಚಿತ್ರದುರ್ಗದಲ್ಲಿ ಏರ್ಪಡಿಸಿದಾಗ ತಪ್ಪದೇ ಹೋಗಿ ಬರುತ್ತಿದ್ದರು. ಆದರೆ ವಿಜಯವನ್ನು ನೋಡದೆ, ಮಾತನಾಡದೆ ಹೆಚ್ಚು ಕಮ್ಮಿ ಇಪ್ಪತ್ತು ವರುಷಗಳೇ ಕಳೆದಿದ್ದವು. ಅದೊಂದು ದಿನ ಇಂದಿರಾ ಕೆಲಸದಲ್ಲಿರುವಾಗ ಕಛೇರಿಗೆ ಬಂದವರೊಬ್ಬರು ನೀವು ಇಂದಿರಾ ಅಲ್ಲವೇ ಎಂದು ಕೇಳಿದರು. ಅದಕ್ಕವಳು ಹೌದು, ನಾನು ಇಂದಿರಾ ನೀವು ಎಂದಳು. ನೀವೇ ಹೇಳಿ ನೋಡುವ ಎಂದು ಅವರೆದುರಿಗೆ ನಗುತ್ತಾ ನಿಂತರು. ಅವರನ್ನೇ ದಿಟ್ಟಿಸಿ ನೋಡಿದೆ ಇಂದಿರಾ, ನೀವು ನನ್ನ ಬಿ.ಕಾಂ.ಮೇಟ್ ವಿಜಯ ಅಲ್ಲವೇ ಎಂದಳು. ಅವರು ಹೌದೆನ್ನುವಂತೆ ನಗುತ್ತಾ ತಲೆ ಹಾಕುತ್ತಿದ್ದಂತೆ, ಧಡಕ್ಕನೆ ಕುರ್ಚಿಯಿಂದ ಎದ್ದು ಅವಳ ಕೈ ಹಿಡಿದು, ಹೇ ವಿಜಿ ಹೇಗಿದ್ದೀಯಾ, ಎಲ್ಲಿರೋದು ಮುಂತಾಗಿ ಒಂದೇ ಉಸಿರಲ್ಲಿ ಪ್ರಶ್ನೆ ಕೇಳತೊಡಗಿದಳು. ಅದಕ್ಕೆ ವಿಜಯ, ಸ್ವಲ್ಪ ಹೊತ್ತು ಬಿಡುವು ಮಾಡಿಕೊಂಡರೆ ಹತ್ತಿರದ ಹೊಟೇಲಿನಲ್ಲಿ ಕುಳಿತು ಕಾಫಿ ಕುಡಿಯುತ್ತಾ ಮಾತನಾಡುವ ಎಂದಳು. ಆಗಲಿ ಎಂದು ಇಂದಿರಾ ಪಕ್ಕದವರಿಗೆ, ಇಪ್ಪತ್ತು ವರ್ಷಗಳ ನಂತರ ಗೆಳತಿ ಬಂದಿದ್ದಾಳೆ, ಅವಳು ಜೊತೆ ಹೋಗಿ ಕಾಫಿ ಕುಡಿದು ಬರುವುದಾಗಿ ಹೊರಬಂದಳು.
ಇಬ್ಬರೂ ಬಂದು ಹೊಟೇಲಿನಲ್ಲಿ ಕುಳಿತರೂ ಎಲ್ಲಿಂದ ಮಾತು ಆರಂಭಿಸಬೇಕೆಂದು ತಿಳಿಯದೆ ಪರಸ್ಪರ ಮುಖ ನೋಡುತ್ತಿರುವಾಗ ವಿಜಯಳೇ ಮಾತು ಆರಂಭಿಸಿದಳು.
ಅವರೆಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ, ಹೇಗಿದ್ದಾರೆ ಮುಂತಾಗಿ ತನಗೆ ನೆನಪು ಬಂದವರು ಬಗ್ಗೆ ವಿಚರಿಸಿದಳು. ಹಾಗೆಯೇ, ತನ್ನ ಬಗ್ಗೆ ಇಂದಿರಾ ಕೇಳಿದ್ದಕ್ಕೆಲ್ಲಾ ಹೇಳಿ ಊರಿಗೆ ಹೋಗಲು ವೇಳೆವಾಗುತ್ತದೆ ಎಂದು ಎದ್ದಳು. ಇಂದಿರಾ ಇಂದು ನಮ್ಮಲ್ಲಿ ಉಳಿದುಕೋ ಎಂದಾಗ ಬೇಡವೆಂದಳು. ಕೊನೆಯ ಪಕ್ಷ ಊಟ ಮಾಡಿಯಾದರೂ ಹೊರಡು ಎಂದಾಗ, ಬೇಡ ನಿನಗೂ ಆಫೀಸಿಗೆ ಲೇಟ್ ಆಗುತ್ತದೆ ಮತ್ತೆ ನಾನು ನಾಳೆ ಬೆಳಿಗ್ಗೆಯೇ ಬೆಂಗಳೂರಿನಿಂದ ದೆಹಲಿಗೆ ವಿಮಾನದಲ್ಲಿ ಹೋಗಲು ಟಿಕೆಟ್ ರಿಸರ್ವ್ ಆಗಿದೆ. ಮುಂದಿನ ತಿಂಗಳು ಖಂಡಿತಾ ಬರುವೆ ಎಂದು ತನ್ನ ಮೊಬೈಲ್ ನಂಬರನ್ನು ಅವಳಿಗೆ ಕೊಟ್ಟು, ಅವಳು ನಂಬರನ್ನು ತಾನು ಪಡೆದು ಹೊರಟಳು.
ಇಪ್ಪತ್ತು ವರ್ಷಗಳ ನಂತರ ಇದ್ದಕ್ಕಿದ್ದಂತೆ ಬಂದು ಮಾತನಾಡಿಸಿ ಹೋಗಿದ್ದು ಇಂದಿರಾಳಿಗೆ ಕನಸಿನಂತೆ ಅನಿಸತೊಡಗಿತು. ಅಂದು ಪೂರ್ತಿ ಅವಳು ಅದೇ ಗುಂಗಿನಲ್ಲಿ ಇದ್ದಳು. ಮಾರನೇ ದಿನ ವಾಣಿ, ಉಮಾರವರಿಗೆ ವಿಚಾರ ತಿಳಿಸಿ, ಅವರಿಗೆ ವಿಜಯಾಳ ನಂಬರ್ ಕೊಟ್ಟಳು. ಅವರು ಪರಸ್ಪರ ಮಾತನಾಡಿಕೊಂಡು, ಬಿ.ಕಾಂ. ಗೆಳೆಯರ ವಾಟ್ಸಪ್ ಗುಂಪಿಗೂ ಸೇರಿಸಿದರು. ಮತ್ತೆ ತಮ್ಮ ಗೆಳತಿ ಸಂಪರ್ಕಕ್ಕೆ ಸಿಕ್ಕಿದ್ದು ಎಲ್ಲರಿಗೂ ಖುಷಿ ತಂದಿತು.
------*----
ವಿಜಯಳ ಗಂಡನಿಗೆ ದೆಹಲಿಗೆ ವರ್ಗವಾಗಿ ಹಲವು ವರ್ಷಗಳಾಗಿವೆ. ಈಗ ಅವರು ವಾಸವಾಗಿರುವುದು ದೆಹಲಿಯಲ್ಲಿಯೆ. ವಯಸ್ಸಾದ ವಿಜಯಳ ತಾಯಿ ಬೆಂಗಳೂರಿನಲ್ಲಿ ವಾಸವಾಗಿದ್ದು, ಅವರನ್ನು ನೋಡಲು ಸಾಧ್ಯವಾದಾಗಲೆಲ್ಲಾ ಅವಳು ಬಂದು ಹೋಗುತ್ತಿದ್ದಳು. ಸಮಯದ ಅಭಾವ, ಯಾರ ವಿಳಾಸವೂ ಗೊತ್ತಿರದ ಕಾರಣ ಯಾರನ್ನು ಭೇಟಿಯಾಗದೆ ಹೋಗಬೇಕಿತ್ತು. ಈ ಬಾರಿ ಬರುವಾಗಲೇ ಚಿತ್ರದುರ್ಗಕ್ಕೆ ಹೋಗಿ ಯಾರನ್ನಾದರೂ ಮಾತನಾಡಿಸಿಯೇ ಬರಬೇಕೆಂದು ತೀರ್ಮಾನ ಮಾಡಿಯೇ ಬಂದಿದ್ದಳು. ತಾನು ಓದಿದ ಕಾಲೇಜಿನ ಹತ್ತಿರವೇ ಇಂದಿರಾಳ ಮನೆಯಿದ್ದು ಸಾಕಷ್ಟು ಬಾರಿ ಹೋಗಿ ಬಂದಿದ್ದರಿಂದ ಸೀದಾ ಅವಳ ಮನೆಗೇ ಹೋಗುವುದೆಂದು ಬಂದಿದ್ದಳು. ಆದರೆ ಆ ಮನೆಯಲ್ಲಿ ಬೇರೆಯವರಿದ್ದರೂ, ಇಂದಿರಾ ಕೆಲಸ ಮಾಡುತ್ತಿದ್ದ ಕಛೇರಿ ವಿಳಾಸ ಕೊಟ್ಟರು. ಹಾಗಾಗಿ ಹೆಚ್ಚು ಒದ್ದಾಟ ಇಲ್ಲದೆ ಗೆಳತಿಯನ್ನು ಭೇಟಿಯಾಗುವಂತಾಯಿತು. ನಂತರ ಇತರ ಗೆಳೆಯರು ಸಂಪರ್ಕವು ಸಿಕ್ಕಿ, ಆದಷ್ಟು ಬೇಗನೇ ಎಲ್ಲರನ್ನೂ ಭೇಟಿಯಾಗುವ ಆಸೆ ಮೂಡಿತ್ತು.
ತಾನು ಬೆಂಗಳೂರಿಗೆ ಬರುವ ದಿನ ನಿಗದಿಯಾದ ಕೂಡಲೇ ವಾಣಿಗೆ ಪೋನ್ ಮಾಡಿ, ಎಲ್ಲಾ ಗೆಳೆಯರು ಒಂದೆಡೆ ಸೇರುವಂತೆ ಮಾಡಲು ಸಾಧ್ಯವೇ ಎಂದು ಕೇಳಿದಳು. ಅವಳು ಖುಷಿಯಿಂದ ಬೆಂಗಳೂರಲ್ಲೇ ಇರುವ ಅರವಿಂದನಿಗೆ ಕರೆ ಮಾಡಿ ಕೇಳಿದರೆ, ಎಲ್ಲರಿಗೂ ಮಾತನಾಡು ಅವರೆಲ್ಲ ಬರುತ್ತಾರೆಂದರೆ ನಾನು ಪ್ರಯತ್ನಿಸುವೆ ಎಂದ. ಇವನು ಯಾವಾಗಲೂ ಅಡ್ಡ ಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡುವುದು, ಮೊದಲು ಇವನಿಗೆ ಕರೆ ಮಾಡಬಾರದಿತ್ತೆಂದು ಮನದಲ್ಲಿ ಶಾಪ ಹಾಕುತ್ತಾ ಮತ್ತೊಬ್ಬ ಗೆಳೆಯ ವಾಹಿದನಿಗೆ ಕರೆ ಮಾಡಿದಳು. ಅವನು ಅದೇ ದಿನ ತನ್ನ ಸಂಸ್ಥೆಯವರು ಕೊಡುವ ಫೋರೆನ್ಸಿಕ್ ಆಡಿಟ್ ತರಬೇತಿಗೆ ಪೂನಾ ಹೋಗಬೇಕು ಸ್ಸಾರಿ ಎಂದ. ನಂತರ ಲೋಕು, ರಾಘು, ವೆಂಕಟೇಶನಿಗೆ ಕರೆ ಮಾಡಿದಾಗಲೂ ಅವರು ಬರುವುದು ಅನುಮಾನ ಎಂದಾಗ, ಮತ್ತೆ ಬೇರೆಯವರಿಗೆ ಕರೆ ಮಾಡುವೆ ಮನಸ್ಸಾಗದೆ ಉಮಾ ಮತ್ತು ರಾಜಿಗೆ ಕರೆ ಮಾಡಿ ವಿಷಯ ತಿಳಿಸಿದಾಗ, ಈ ಬಾರಿ ಹುಡುಗರಿಗೆ ಕರೆಯುವುದು ಬೇಡ, ನಾವೇ ಐದು ಜನ ಚಿತ್ರದುರ್ಗಕ್ಕೆ ಹೋಗಿ ಬರೋಣ ಎಂದರು. ಇದೇ ಅಂತಿಮ ನಿರ್ಧಾರವಾಗಿ, ತಾವು ಸೇರಬೇಕು ಅಂದುಕೊಂಡಿದ್ದ ಹಿಂದಿನ ದಿನ ಸಂಜೆಯೇ ವಾಣಿಯ ಕಾರಲ್ಲಿ ನಾಲ್ಕು ಜನ ಇಂದಿರಾ ಮನೆಗೆ ಬಂದು ಉಳಿದುಕೊಂಡರು.
ಅಂದು ಅವರು ಏನು ಮಾತನಾಡಿದರು, ಏನು ಊಟ ಮಾಡಿದರು, ಎಷ್ಟು ಹೊತ್ತಿಗೆ ಮಲಗಿದರು ಅವರಿಗೇ ಗೊತ್ತಿಲ್ಲ. ಮುಂಜಾನೆ ಅಲಾರಾಂ ಹೊಡೆದಾಗಲೇ ಎಲ್ಲರಿಗೂ ಎಚ್ಚರ. ಎಲ್ಲರೂ ಲಘುಬಗನೆ ಎದ್ದು ಸಿದ್ದರಾಗಿ ಮೊದಲೇ ಮಾತನಾಡಿಕೊಂಡಂತೆ ಲಕ್ಷ್ಮಿ ಟಿಫಿನ್ ರೂಂನಲ್ಲಿ ಬೆಣ್ಣೆ ಖಾಲಿ ದೋಸೆ ತಿನ್ನಲು ಹೋದರು. ಇವರ ಸಡಗರ ನೋಡಿ ಮನೆಯ ಜನರಿಗೆ ಆಶ್ಚರ್ಯವಾಗಿತ್ತು.
ಲಕ್ಷ್ಮಿ ಟಿಫಿನ್ ರೂಂನಲ್ಲಿ ತಿಂಡಿ ತಿಂದು ಸೀದಾ ಕೋಟೆ ನೋಡಲು ಬಂದರು. ಮೊದಲು ಬೆಟ್ಟವನ್ನು ಅದೆಷ್ಟು ಬಾರಿ ಹತ್ತಿ ಇಳಿದಿದ್ದರೋ ಅವರಿಗೇ ಗೊತ್ತಿಲ್ಲ. ಆದರೆ ಇಪ್ಪತ್ತು ವರ್ಷಗಳ ನಂತರ ಮತ್ತೆ ಭೇಟಿಯಾದ ಆತ್ಮೀಯ ಗೆಳತಿಯೊಂದಿಗೆ ಬೆಟ್ಟ ನೋಡುವ ಪರಿಯೇ ಬೇರೆಯಾಗಿತ್ತು. ಐದು ಜನರು ಅಕ್ಷರಶಃ ಆ ಕ್ಷಣಕ್ಕೆ ಕಾಲೇಜು ಹುಡುಗಿಯರೇ ಆಗಿದ್ದರು. ಮದ್ದು ಬೀಸುವ ಕಲ್ಲು, ಬನಶಂಕರಿ ದೇವಸ್ಥಾನ, ಗೊಂಬೆ ಮಂಟಪ, ಕಸ್ತೂರಿ ರಂಗಪ್ಪನ ಬಾಗಿಲು, ಗಣಪತಿ ದೇವಸ್ಥಾನ, ಅದರ ಎದುರಿನ ಗರಡಿ ಮನೆ, ಏಕನಾಥೇಶ್ವರಿ ದೇವಸ್ಥಾನ, ಉಯ್ಯಾಲೆ ಕಂಬ, ಗಾಳಿ ಮಂಟಪ, ಮುರುಘ ಮಠ, ಗೋಪಾಲ ಸ್ವಾಮಿ ಹೊಂಡ, ಓಬವ್ವನ ಕಿಂಡಿ, ಎಲ್ಲಾ ಕಡೆಯುವ ಕೈಕೈ ಹಿಡಿದು ನಡೆಯುತ್ತಾ, ಕುಣಿಯುತ್ತಾ, ಬಾಯಿಗೆ ಬಂದದ್ದು ಹರಟುತ್ತಾ ಸಿಕ್ಕಸಿಕ್ಕಲ್ಲಿ ಪೋಟೋ, ಸೆಲ್ಫಿಗಳನ್ನು ತೆಗೆದುಕೊಳ್ಳುತ್ತಾ ಅವರು ಸಾಗುವ ಸಂಭ್ರಮ ನೋಡಲು ಎರಡು ಕಣ್ಣು ಸಾಲದಾಗಿತ್ತು.
ಎಲ್ಲಾ ನೋಡಿ ಬೆಟ್ಟ ಇಳಿದಾಗ ಹನ್ನೆರಡು ಗಂಟೆ. ಇನ್ನೂ ಹೊಟ್ಟೆ ಹಸಿದಿಲ್ಲವೆಂದು ಸೀದಾ ರಂಗಯ್ಯನ ಬಾಗಿಲಿನ ಮೂಲಕ ತಾವು ಓದಿದ ಕಾಲೇಜಿನ ಬಳಿ ಬಂದರು. ಈಗ ಅದು ಬದಲಾಗಿದ್ದ ಕಾರಣ ಪರಿಚಯದವರು ಯಾರೂ ಇರಲಿಲ್ಲ. ಇವರೇ ತಮ್ಮ ನೆನಪಿಗಾಗಿ ಒಂದಷ್ಟು ಫೋಟೋಗಳನ್ನು ತೆಗೆದುಕೊಂಡು, ಬಾಳೆ ಎಲೆ ಊಟದ ಹೋಟೆಲಿಗೆ ಊಟಕ್ಕೆ ಬಂದರು. ಅಲ್ಲಿ ಊಟವಾದ ತಕ್ಷಣ ಚಂದ್ರವಳ್ಳಿಯತ್ತ ಪ್ರಯಾಣ ಬೆಳೆಸಿದರು. ಅಲ್ಲಿಗೆ ಬಂದಾಗ ಮಧ್ಯಾಹ್ನ ಎರಡು ಗಂಟೆಯಾಗಿತ್ತು. ಒಂದೆರಡು ಯುವ ಪ್ರೇಮಿಗಳ ಜೋಡಿ ಬಿಟ್ಟರೆ ಯಾರೂ ಇರಲಿಲ್ಲ. ಇವರು ಕೆರೆಯನ್ನು ನೋಡುತ್ತಾ ಅಂಕಳಿಸ್ವಾಮಿ ಗುಹೆ ಇರುವ ಸಣ್ಣ ಗುಡ್ಡವನ್ನು ಹತ್ತಿದರು. ಅಲ್ಲಿ ಸುತ್ತಮುತ್ತ ಇರುವ ಈಶ್ವರ ದೇವಾಲಯ, ಪಾಂಡವರು ವನವಾಸಕ್ಕೆ ಬಂದಾಗಿನ ಸ್ಥಳ ಮುಂತಾದ್ದನ್ನು ನೋಡಿ ಗುಹೆಯ ಬಳಿ ಬಂದರು.
ವಾಣಿ, ಒಳಗೆ ಹೋಗಿ ಬರೋಣವೇ ಎಂದಳು. ಅದಕ್ಕೆ ವಿಜಯ ಸಮ್ಮತಿಸಿದ್ದಾರೆ, ಉಮಾ ಮತ್ತು ರಾಜೇಶ್ವರಿ ಒಳಗೆ ತುಂಬಾ ಕತ್ತಲು, ಬಾವಲಿಗಳು ಇರುತ್ತವೆ. ಅಲ್ಲದೆ ಸರಿಯಾಗಿ ದಾರಿ ಗೊತ್ತಿಲ್ಲದೆ ನಾವುಗಳೇ ಹೋಗುವುದು ಬೇಡ ಎಂದರು. ಅದಕ್ಕೆ ವಾಣಿ, ಒಳಗೆ ಹೋಗಿ ಬರಲು ಎಲ್ಲಾ ಕಡೆ ಬಾಣದ ಗುರುತು ಹಾಕಿದ್ದಾರೆ. ಅದನ್ನು ನೋಡಿಕೊಂಡು ಆರಾಮವಾಗಿ ಹೋಗಿ ಬರಬಹುದು. ಮತ್ತೆ ಎಲ್ಲರ ಬಳಿ ಮೊಬೈಲ್ ಇರುವುದರಿಂದ ಅದರ ಟಾರ್ಛ ಬೆಳಕು ಸಾಕು ಎಂದಳು. ಇವರಿಗೆ ಮನಸ್ಸಿಲ್ಲದಿದ್ದರೂ ವಿಜಯಾಳಿಗಾಗಿ ಒಪ್ಪಿಕೊಂಡು ಕೆಳಗಿಳಿದರು.
ವಾಣಿ ತನ್ನ ಮೊಬೈಲ್ ಬೆಳಕಿನಲ್ಲಿ ದಾರಿ ನೋಡುತ್ತಾ ಮುಂದೆ ಸಾಗಿದರೆ ಉಳಿದವರು ಅವಳನ್ನು ಹಿಂಬಾಲಿಸಿದರು. ಅಲ್ಲಿ ಸ್ವಾಮೀಜಿಯೊಬ್ಬರು ಕುಳಿತು ಧ್ಯಾನ ಮಾಡುತ್ತಿದ್ದ ಜಾಗ, ಮಯೂರವರ್ಮನ ಕಾಲದಲ್ಲಿ ಬಿಡಿಸಲಾದ ಚಿತ್ರ ಎನ್ನುವ ನವಿಲಿನ ಚಿತ್ತಾರವನ್ನು ನೋಡಿ ಗುಪ್ತಾ ಸಮಾಲೋಚನಾ ಗೃಹಕ್ಕೆ ಬಂದರು. ಅದು ತುಂಬಾ ಆಳದಲ್ಲಿದ್ದರೂ, ಒಂದಷ್ಟು ಜನ ಕೂರಲು ನಿಲ್ಲಲು ಅನುಕೂಲವಾಗುವಂತ್ತಿತ್ತು. ಒಬ್ಬೊಬ್ಬರು ಒಂದೊಂದು ಕಡೆ ನಿಂತು, ಕುಳಿತು ಖುಷಿ ಖುಷಿಯಾಗಿ ಮಾತನಾಡುವಾಗ, ರಾಜಿಯ ಬೆನ್ನಿನ ಹಿಂದಿನಿಂದ ಬಂದ ಮುಸುಕುಧಾರಿಯೊಬ್ಬ ಸರ್ರನೆ ಅವಳ ಕುತ್ತಿಗೆಗೆ ಚಾಕು ಇಟ್ಟು ಜೋರಾಗಿ ನಿಮ್ಮ ಬಳಿ ಇರುವ ವಡವೆ, ದುಡ್ಡು ಎಲ್ಲಾ ತೆಗೆದು ಈ ಕಟ್ಟೆಯ ಮೇಲಿಡಿ. ಇಲ್ಲವೆಂದರೆ ಒಬ್ಬೊಬ್ಬರನ್ನೇ ಕೊಂದು ಬಿಡುವೆ ಎಂದ. ವಿಜಯ, ಉಮಾ, ಇಂದಿರಾಗೆ ಹೆದರಿಕೆಯಿಂದ ಗಂಟಲು ಒಣಗಿ ನಡುಗ ತೊಡಗಿದರು. ಆದರೆ ವಾಣಿ ಮಾತ್ರ ಧೈರ್ಯದಿಂದ ಅವನನ್ನೇ ಗಮನಿಸುತ್ತಾ, ಅವನಿಗಿಂತ ಜೋರಾಗಿ ಜ್ಯೋತಿ, ಬಿಂದು ಹಿಂದೆ ನಿಂತು ಏನು ನೋಡುತ್ತಿದ್ದಿರಿ, ಕೈಯಲ್ಲಿ ಇರುವ ಕೋಲಿನಿಂದ ನಾಲ್ಕು ಬಡಿಯಿರಿ ಎಂದು ಕೂಗಿದಳು. ಆ ಮುಸುಕುಧಾರಿ ಗಾಬರಿಯಿಂದ ಹಿಂದೆ ನೋಡುವಾಗ, ಅದೇ ಸಮಯವೆಂದು ವಾಣಿ, ಅವನು ಮೇಲೆ ಚಿರತೆಯಂತೆ ಹಾರಿ ಬಲವಾಗಿ ದೂಡಿದಳು. ಅವಳು ದೂಡಿದ ರಭಸಕ್ಕೆ ಆತ ಆಯಾ ತಪ್ಪಿ ಕೆಳಗೆ ಬಿದ್ದ. ಬೀಳುವಾಗ ಅವನ ತಲೆ ಕುಳಿತುಕೊಳ್ಳಲು ಮಾಡಿದ ಕಟ್ಟೆಗೆ ಬಡಿದು ರಕ್ತ ಬರತೊಡಗಿತು. ಅವನು ನೋವಿನಿಂದ ತಲೆ ಹಿಡಿದುಕೊಂಡು ಏಳುವ ಮೊದಲೆ ವಾಣಿ ಕಾಲಿನಿಂದ ಜಾಡಿಸಿ ಪಕ್ಕೆಗೆ ಹೊಡೆದಳು. ಇದನ್ನು ನಿರೀಕ್ಷೆ ಮಾಡದ ಆತ ಹೆದರಿಕೆಯಿಂದ ಒದ್ದಾಡುವಾಗಲೇ ಇವಳು, ಅವನು ಬೆನ್ನಿನ ಮೇಲೆ ಕುಳಿತು, ಅವನು ಎರಡೂ ಕೈಗಳನ್ನು ಹಿಂದಕ್ಕೆಳೆದು ಹಿಡಿದುಕೊಂಡು, ಏಯ್ ವಿಜಿ ನಿನ್ನ ವೇಲ್ ಕೊಡು ಇವನನ್ನು ಕಟ್ಟಿ ಹಾಕೋಣ ಎಂದು, ಉಳಿದವರಿಗೆ ನೀವೇನು ಫ್ರೀ ಸಿನಿಮಾ ನೋಡ್ತಾ ಇದೀರಾ, ಬನ್ನಿ ಸಹಾಯ ಮಾಡಿ ಎಂದಳು. ಇವರಿಗೆ ಧೈರ್ಯ ಸಾಲದೆ ನಿಂತಲ್ಲೇ ನಿಂತಿರುವಾಗ, ನೀವೆಂತಾ ಹುಡುಗಿಯರು, ಹೆದರಿಕೊಂಡು ಸಾಯ್ತಿರಾ. ಒಬ್ಬ ಓಬವ್ವ ನೂರಾರು ಶತ್ರುಗಳ ರುಂಡ ಚೆಂಡಾಡಿರು. ಊರಲ್ಲಿ ಹುಟ್ಟಿದ ನಾವು ಇಷ್ಟೂ ಜನ ಸೇರಿ ಒಬ್ಬನನ್ನು ಹೊಡೆಯಲು ಸಾಧ್ಯವಿಲ್ಲವೇ. ಧೈರ್ಯದಿಂದ ಬನ್ನಿ ನಾನೀರುವಾಗ ಚಿಂತಿಸಬೇಡಿ ಎಂದಳು ವಾಣಿ. ಅವಳು ಮಾತಿನಿಂದ ಧೈರ್ಯ ಬಂದಾಂತಾಗಿ ನಾಲ್ವರು ಮುಂದೆ ಹೋಗಿ ಅವನ ಕೈಗಳನ್ನು ಹಿಮ್ಮುಖವಾಗಿ ಕಟ್ಟಿದರು. ಹಾಗೆ ಕಟ್ಟಿದ ನಂತರ ಅವನನ್ನು ಬಲವಂತವಾಗಿ ಮೇಲಕ್ಕೆ ಎಳೆದುಕೊಂಡು ಬರತೊಡಗಿದರು.
ಅಲ್ಲಿ ಒಬ್ಬೊಬ್ಬರೇ ಹತ್ತಿ ಬರುವಂತಹ ಜಾಗ ಬಂದಾಗ, ಆತ ತಪ್ಪಿಸಿಕೊಳ್ಳುವ ಸಲುವಾಗಿ ತನ್ನ ಹಿಂದಿದ್ದ ಉಮಾಳನ್ನು ಕಾಲಿನಿಂದ ಒದ್ದು ಓಡಲು ನೋಡಿದ. ಇದನ್ನು ಮೊದಲೇ ನಿರೀಕ್ಷೆ ಮಾಡಿದ್ದ ವಾಣಿ, ಅವನನ್ನು ತನ್ನತ್ತಾ ಎಳೆದದ್ದಲ್ಲದೆ, ಸಿನಿಮಾ ನಾಯಕ ಖಳನ ಮೂಗಿಗೆ ಡಿಚ್ಚಿ ಹೊಡೆಯುವಂತೆ ತಾನು ಹೊಡೆದಳು. ಅವಳು ಹೊಡೆದ ರಭಸಕ್ಕೆ ಅವನು ಅಲ್ಲಿಯೇ ಕುಸಿದುಬಿದ್ದ. ಆಸಾಮಿ ಹತ್ತು ಹದಿನೈದು ನಿಮಿಷವಾದರೂ ಏಳಲೇ ಇಲ್ಲ. ಆಗ ಅನುಮಾನವಾಗಿ ವಿಜಯ ಅವನ ಮೂಗಿನ ಬಳಿ ಕೈ ತಂದು ನೋಡಿದರೆ ಉಸಿರಾಟ ನಿಂತಿರುವಂತೆ ಅನಿಸಿತು. ಅವಳು ಅದನ್ನೇ ಹೆದರಿಕೆಯಿಂದ ಹೇಳಿದಾಗ, ಉಳಿದವರಿಗೂ ಹೆದರಿಕೆ ಆಯಿತು. ಅವರೆಲ್ಲ ಮುಂದೇನು ಎಂದು ಯೋಚಿಸುವಾಗ ವಾಣಿ, ಅವನು ಸಾಯಲು ಸಾಧ್ಯವೇ ಇಲ್ಲ, ನಾಟಕ ಆಡುತ್ತಿದ್ದಾನೆ ಹೆಚ್ಚೆಂದರೆ ಮೂರ್ಚೆ ಹೋಗಿರಬೇಕು ಅಷ್ಟೇ. ಯಾರು ಬಳಿ ನೀರಿನ ಬಾಟಲ್ ಇದೆ ತೆಗೆದು ಅವನ ಮುಖಕ್ಕೆ ಹಾಕಿ ಎಂದಳು. ಇಂದಿರಾ ತನ್ನ ಬ್ಯಾಗಿನಲ್ಲಿದ್ದ ಬಾಟಲ್ ತೆಗೆದು ಅದರ ಮುಚ್ಚಳ ಬಿಚ್ಚಲು ನೋಡಿದಳು. ಅದು ಬಹಳ ಗಟ್ಟಿಯಾಗಿ ಕುಳಿತ್ತಿತ್ತು. ಹಾಗಾಗಿ ಶಕ್ತಿ ಮೀರಿ ಪ್ರಯತ್ನಿಸುವಾಗ ಉಮಾ ಕೊಡಿಲ್ಲಿ ಎಂದು ಅವಳ ಕೈಯಿಂದ ಬಾಟಲ್ ತೆಗೆದುಕೊಳ್ಳಲು ಹೋದಾಗ, ಮುಚ್ಚುಳ ತೆರೆದುಕೊಂಡು ಅದರಲ್ಲಿದ್ದ ನೀರು ವಾಣಿಯ ಮುಖಕ್ಕೆ ಸಿಡಿಯಿತು. ಅದಕ್ಕೆ ವಾಣಿ, ನನ್ನ ಮುಖಕ್ಕೆ ಅಲ್ಲಾ ಅವನ ಮುಖಕ್ಕೆ ಹಾಕು ಎಂದು ಹೇಳುತ್ತಾ, ತನ್ನ ಮುಖ ಒರೆಸಿಕೊಂಡು ಕಣ್ಣು ಬಿಟ್ಟಳು. ಎದುರಿಗೆ ಗಂಡ ಮತ್ತು ಮಕ್ಕಳು ಹೆದರಿಕೆಯಿಂದ ಇವಳನ್ನೇ ನೋಡುತ್ತಿದ್ದರು.
