e - ಸಂಭಾಷಣೆ
e - ಸಂಭಾಷಣೆ
e - ಸಂಭಾಷಣೆ1
ಎಂದಿನಂತೆ ರಾತ್ರಿ ಮಲಗುವ ಮುನ್ನ ಮುಂಬಾಗಿಲು ಚಿಲಕ ಹಾಕಿದೆಯಾ ಎಂದು ನೋಡಿ ಬರುವಾಗ ಮಾಮೂಲಿನಂತೆ ಮಗನ ಕೋಣೆಯತ್ತ ನೋಡಿದರೆ ಬಾಗಿಲು ಹಾಕಿತ್ತು ಆದರೆ ಲೈಟ್ ಉರಿಯುತ್ತಿತ್ತು. ಇದನ್ನು ನೋಡಿ ಬೆಳಿಗ್ಗೆ ಮನೆಯಲ್ಲಿ ನಡೆದ ಘಟನೆ ನೆನಪಾಯಿತು. ಪಾಪ ಚಿಕ್ಕ ಹುಡುಗ, ತನ್ನ ತಾಯಿಯ ಮಾತಿನಿಂದ ಬೇಸರಗೊಂಡು ಹಾಗೆ ಕುಳಿತಿರಬೇಕು, ಸಮಾಧಾನ ಮಾಡುವ ಎಂದು ಬಾಗಿಲವರೆಗೂ ಬಂದವರು, ಒಂದೊಮ್ಮೆ ಲೈಟ್ ಆರಿಸುವುದು ಮರೆತ್ತಿದ್ದರೆ ತೊಂದರೆಯಾದೀತೂ ಎಂದು ಸುಮ್ಮನೆ ಹಿಂದಿರುಗಿ ಬಂದರು.
ರಾತ್ರಿ ತಾವು ಮಲಗುವ ಮುನ್ನ, ತಮ್ಮ ವಾಟ್ಸಪಿಗೆ ಯಾರು ಯಾವ ಮೆಸೆಜ್ ಹಾಕಿದ್ದಾರೆ ಎಂದು ನೋಡಿ, ಉತ್ತರಿಸುವಂತ್ತದ್ದಕ್ಕೆ ಉತ್ತರಿಸಿ ನೆಟ್ ಆಫ್ ಮಾಡುವುದು ವಾಡಿಕೆ. ಹಾಗೆ ನೋಡುವಾಗ, ಮಗ ಆನ್ ಲೈನ್ ಇರುವುದು ನೋಡಿ, ಅವನಿಗೆ ಹೇಳಬೇಕು ಅಂದುಕೊಂಡಿದ್ದನ್ನು ವಾಟ್ಸಪಿನಲ್ಲಿ ಮೆಸೆಜ್ ಹಾಕಿದರು.
ಪುಟ್ಟ,
ಅಮ್ಮ ಬೈದರೆಂದು ಬೇಸರವಾಯಿತೇ? ಅವಳು ಒಂದೇ ಸಮನೇ ನಿನ್ನನ್ನು ಬೈಯುವಾಗ ನಾನು ಮಧ್ಯೆ ಬರಲಿಲ್ಲ ಎಂದು ನನ್ನ ಮೇಲೂ ಕೋಪ ಬಂದಿದೆಯೇ? ಯಾರಾದರೂ ನಡುವೆ ಸಮಾಧಾನ ಮಾಡಲು ಬಂದರೆ ಅವಳು ಮತ್ತಷ್ಟು ರಂಪಾಟ ಮಾಡುವುದು ನಿನಗೆ ಗೊತ್ತಿಲ್ಲದ ವಿಚಾರವಲ್ಲ ಅಲ್ಲವೇ. ಅದಕ್ಕಾಗಿ ನಾನು ಮಧ್ಯೆ ಬರಲಿಲ್ಲ. ಅಲ್ಲದೆ ಅವಳಿಗೆ ನೀನೆಂದರೆ ಪ್ರಾಣ, ನಿನಗೆ ಎದುರಾಗುವ ಸಣ್ಣದೊಂದು ಸೋಲು ಅವಳನ್ನು ಅಧೀರಳಾಗಿಸುತ್ತದೆ. ನೀನು ಚೆನ್ನಾಗಿ ಓದಿ, ಮುಂದೊಂದು ದಿನ ಉನ್ನತ ವ್ಯಕ್ತಿ ಆಗಲೆಂದು ಹಗಲಿರುಳು ಆಸೆ ಪಡುತ್ತಾಳೆ. ಅದಕ್ಕಾಗಿಯೇ ನಿನ್ನ ಸಣ್ಣಪುಟ್ಟ ವಿಚಾರಕ್ಕೂ ಅವಳು ಅತ್ಯಂತ ಶ್ರದ್ಧೆ ವಹಿಸುತ್ತಾಳೆ. ಇಂದು ನೀನು ಏನೇ ಸಾಧನೆ ಮಾಡಿದ್ದರೂ ಅದರಲ್ಲಿ ಅವಳ ಶ್ರಮವೂ ಇರುವುದು ಖಂಡಿತಾ ಸುಳ್ಳಲ್ಲ. ಇಲ್ಲಿಯವರೆಗೂ ಎಲ್ಲಾ ಸರಾಗವಾಗಿ ನಡೆದುಕೊಂಡು ಬಂದು ಈಗ ನಿನ್ನ ಬದುಕಿನ ಮಹತ್ವದ ತಿರುವು ಇರುವ ಕಾಲದಲ್ಲಿ ಉಂಟಾಗಿರುವ ಸಣ್ಣ ಹಿನ್ನಡೆ ಅವಳಿಗೆ ಆತಂಕ ಮೂಡಿಸಿ ಕೂಗಾಡುವಂತೆ ಮಾಡಿದೆ ಅಷ್ಟೇ. ಈಗ ಆಗಿರುವುದರಲ್ಲಿ ನಿನ್ನದೇನೂ ತಪ್ಪಿಲ್ಲದಿರಬಹುದು, ಆದರೆ ಈಗ ಬಂದಿರುವ ಫಲಿತಾಂಶದಿಂದ ನಿನ್ನ ಹಾಗೂ ನಮ್ಮ ಕನಸು ಸಕಾರವಾಗಲು ಮತ್ತೊಂದು ವರ್ಷ ಕಾಯಲೇಬೇಕು ಅಥವಾ ಬೇರೆ ದಾರಿ ಹುಡುಕಬೇಕು. ಖಂಡಿತಾ ನಾಳೆಯೊಳಗೆ ನಿನ್ನ ಅಮ್ಮ ಸಮಾಧಾನ ಆಗೇ ಆಗುತ್ತಾರೆ. ಆಗ ಮೂವರೂ ಕುಳಿತು ಮಾತನಾಡಿ ನಿರ್ಧಾರ ಮಾಡೋಣ. ಈಗ ಹೆಚ್ಚಾಗಿ ಚಿಂತಿಸದೆ ಹಾಯಾಗಿ ಮಲಗು. ಎಲ್ಲಾ ಸರಿ ಹೋಗುತ್ತದೆ, ಜೊತೆಗೆ ನಾವಿದ್ದೇವೆ. ಲೈಟ್ ಆರಿಸಿ ಮಲಗು, ಶುಭರಾತ್ರಿ.
ಅವನಿಗೆ ಮೆಸೆಜ್ ಹೋದ ಎರಡು ನಿಮಿಷಗಳಲ್ಲೇ ತೆರೆದು ನೋಡಿದ್ದಾನೆ ಎನ್ನುವುದಕ್ಕೆ ಎರಡು ನೀಲಿ ರೈಟ್ ಮಾರ್ಕ್ ಬಂತು. ನಂತರ ಬಹಳ ಹೊತ್ತಿನವರೆಗೂ ಅವನು ಆನ್ಲೈನ್ನಲ್ಲಿ ಇದ್ದು ಟೈಪಿಂಗ್ ಅಂತ ಬರುತ್ತಿತ್ತು.
ತಾವು ಕಳಿಸಿದ್ದು ಓದಿ ಉತ್ತರಿಸುತ್ತಿದ್ದಾನೆ ಎಂದು ಖಚಿತವಾಗಿ ಇವರು ಕಾಯತೊಡಗಿದರು. ಸ್ವಲ್ಪ ಸಮಯದ ನಂತರ ಅಂದುಕೊಂಡಂತೆ ಮಗನಿಂದ ಮೆಸೆಜ್ ಬಂತು.
ಅಪ್ಪ,
ಅಮ್ಮನ ಮೇಲೆ ಬೇಸರವಾಗಲಿ, ನಿಮ್ಮ ಮೇಲೆ ಸಿಟ್ಟಾಗಲಿ ಖಂಡಿತಾ ಇಲ್ಲ. ನನ್ನಾಸೆಗೆ ನೀರೆರೆದು ಅದಕ್ಕೆ ಬೇಕಾದ ತಯಾರಿಗಳಿಗೆ ಸದಾ ನನ್ನ ಜೊತೆಗೆ ಇದ್ದು ಸಹಕರಿಸಿದ ನಿಮಗೆ, ಕೇವಲ ಒಂದೇ ಒಂದು ಅಂಕ ಕಡಿಮೆ ತೆಗೆದು ಐ.ಐ.ಟಿ. ಕಾಲೇಜಿನಲ್ಲಿ ಪ್ರವೇಶ ಕಳೆದುಕೊಂಡಿದ್ದು ಎಂತಹಾ ಆಘಾತವಾಗಿರುತ್ತದೆ ಎಂದು ಊಹಿಸಬಲ್ಲೆ.
ಯಾವತ್ತೂ ಎಲ್ಲಾ ತಂದೆ ತಾಯಿಯರಂತೆ ನೀನು ಇದನ್ನೇ ಓದಬೇಕು, ಅದನ್ನೇ ಓದಬೇಕು ಎಂದು ಒತ್ತಾಯಿಸದೆ, ನಾನು ಇಷ್ಟಪಟ್ಟಿದ್ದನ್ನೇ ಓದು ಎಂದು ಒತ್ತಾಸೆಯಾಗಿ ನಿಂತ ನಿಮಗೆ ನಿರಾಸೆ ಮಾಡಿದೆ ಎಂಬ ನೋವು ತುಂಬಾ ಕಾಡುತ್ತಿದೆ. ಖಂಡಿತವಾಗಿಯೂ ಹೇಳುವೆ ಅಪ್ಪ, ನನಗೆ ಇನ್ನೂ ಹೆಚ್ಚಿನ ಅಂಕ ಬರಬೇಕಿತ್ತು. ಆದರೆ ಎಲ್ಲಿ ಏನಾಗಿದೆ ತಿಳಿಯುತ್ತಿಲ್ಲ. ನನ್ನನ್ನು ನಂಬಿ ಅಪ್ಪ, ಐಐಟಿ ಪ್ರವೇಶಕ್ಕಾಗಿ ನನ್ನೆಲ್ಲಾ ಸಮಯ ಮೀಸಲಿಟ್ಟಿದ್ದೆ. ಆದರೂ ಹೀಗಾಗಿದೆ, ದಯವಿಟ್ಟು ಅಮ್ಮನಿಗೆ ನೀವೇ ಸಮಾಧಾನ ಮಾಡಿ. ಸಾಧ್ಯವಾದರೆ ಇಬ್ಬರೂ ನನ್ನನ್ನು ಕ್ಷಮಿಸಿಬಿಡಿ.
ಪುಟ್ಟ,
ನಮಗೆ ಗೊತ್ತು ನೀನು ಏನೂ ಅಂತಾ. ನೀನು ಸರಿಯಾಗಿ ಓದಿ ಬರೆಯದಿದ್ದರೆ, ಹತ್ತನೇ ತರಗತಿಯಲ್ಲಿ ಹತ್ತಕ್ಕೆ ಹತ್ತು ಸಿ.ಜಿ.ಪಿ. ಮತ್ತು ಈಗ ಪಿ.ಯು.ನಲ್ಲಿ ಶೇಕಡಾ 98 ಅಂಕ ಬರುತ್ತಿರಲಿಲ್ಲ. ಹಾಗಾಗಿ ಹೆಚ್ಚು ಚಿಂತಿಸಬೇಡ,
ಅಮ್ಮ ನಿನ್ನ ಮೇಲಿನ ಅತಿಯಾದ ಪ್ರೀತಿಯಿಂದ ಹಾಗೆ ಮಾತನಾಡಿದ್ದಾರೆ ಅಷ್ಟೇ. ಅದು ನಿಜವಾದ ಸಿಟ್ಟಲ್ಲ. ಅವರೂ, ನಿನಗೆ ಅಷ್ಟೆಲ್ಲ ಅನ್ನಬಾರದಿತ್ತು ಎಂದು ತುಂಬಾನೇ ನೊಂದುಕೊಂಡಿದ್ದಾರೆ. ಅವರೂ ಇನ್ನೂ ನಿದ್ದೆ ಮಾಡಿಲ್ಲ, ಬಂದು ಮಾತನಾಡಿಸುವ. ಇಬ್ಬರಿಗೂ ಸಮಾಧಾನ ಆಗುತ್ತದೆ.
ಇಲ್ಲಾ ಅಪ್ಪ, ಭಯ ಆಗುತ್ತೆ....
ಅಮ್ಮನ ಹತ್ತಿರ ಬರಲು ಭಯ ಏಕೆ ಪುಟ್ಟ?
ಅವರು ನನ್ನ ಮೇಲೆ ಇಟ್ಟ ನಂಬಿಕೆ ಕಳೆದುಕೊಂಡಿರುವೆ.
ಅಯ್ಯೋ ದಡ್ಡ, ಈಗ ಪ್ರಪಂಚ ಏನೂ ಮುಳುಗಿ ಹೋಗಿಲ್ಲ. ಐಐಟಿ ಇಲ್ಲದಿದ್ದರೆ ಏನಾಯ್ತು, ಎನ್.ಐ.ಟಿ. ಇದೆ. ಅದೂ ಇಲ್ಲ ಅಂದ್ರೆ, ಎಂ.ಐ.ಟಿ., ಬಿಟ್ಸ್, ಪೆಸ್, ಇನ್ನೊಂದು ಮತ್ತೊಂದು ನೂರು ಅವಕಾಶಗಳಿವೆ. ಅಲ್ಲಿ ಬಿ.ಟೆಕ್. ಮುಗಿಸಿ ಐಐಟಿಯಲ್ಲಿ ಎಂ.ಎಸ್. ಮಾಡುವೆಯಂತೆ, ಈಗ ಇಲ್ಲಿಗೆ ಬಾ.
ಬರಲೇ....
ಹಾಂ, ಬಂದು ಮಾತನಾಡಿಸು ಅವಳಿಗೂ ಸಮಾಧಾನ ಆಗುತ್ತೆ.
ಆಗಲಿ ಅಪ್ಪ, ಬಂದೆ.
----- ****-----
ನಾಲ್ಕು ವರ್ಷದ ನಂತರ.
ಅಪ್ಪ, Are you free.
ಹಾಂ.
Good news.
ಹೇಳು.
Any guess.
ಇಲ್ಲಾ, ನೀನೇ ಹೇಳು.
Really?
ಖಂಡಿತಾ, ಬೇಗ ಹೇಳು...
ಅಪ್ಪ, ನಾನು ಎಂ.ಎಸ್. ಐಐಟಿ ಖರಗ್ಪುರದಲ್ಲಿ ಮಾಡಲೆ, ಅಮೇರಿಕಾ ಹೋಗಲೆ, ಯು.ಕೆ. ಹೋಗಲೆ ಅಥವಾ.....
ಹೇ ಮಗನೇ ಕಂಗ್ರಾಟ್ಸ್,, ಇದನ್ನು ಪೋನ್ ಮಾಡಿ ಹೇಳೊದಲ್ವಾ?
ಹಾಗೆ ಮಾಡಿದ್ದರೆ ನೀನು ಭಾವುಕನಾಗಿ, ಊರಿಗೆಲ್ಲಾ ಕೇಳುವಂತೆ ಮಾತನಾಡುವೆ .
ಆದ್ರೆ ಏನಾಯ್ತು?
ನಾನೇನೂ ದೊಡ್ಡ ಸಾಧನೆ ಮಾಡಿಲ್ಲ, ನಾಲ್ಕು ವರ್ಷದ ನಂತರ ನಿಮ್ಮ ಶ್ರಮಕ್ಕೆ , ಹಿಂದೆ ಕೊಟ್ಟ ನೋವಿಗೆ ಸಮಾಧಾನ ತಂದಿರುವೆ ಅಷ್ಟೇ.
ತುಂಬಾ ಖುಷಿ ಆಯ್ತು ಮಗ, ಇದು ಅಮ್ಮನಿಗೆ ಗೊತ್ತಾ....
