STORYMIRROR

B K Hema

Classics Inspirational Others

4.8  

B K Hema

Classics Inspirational Others

ಮದರ್ಸ್ ಡೇ

ಮದರ್ಸ್ ಡೇ

5 mins
511


    ಮನೆ ಮೇಲೆ ಕುಳಿತ ಕಾಗೆ, ಬಿಟ್ಟೂ ಬಿಡದೆ ಕೂಗುತ್ತಿತ್ತು. ಎಷ್ಟು ಓಡಿಸಿದರೂ ಹೋದಂತೆ ಮಾಡಿ ಮತ್ತೆ ಮಾಡಿನ ಮೇಲೆ ಬಂದು ಕುಳಿತು ಕೂಗುತ್ತಿತ್ತು. ಇಂದು ಮದರ್ಸ್ ಡೇ. ಯಾರದೋ ಮನೆಯಲ್ಲಿ ತಾಯಿಗೆ ಜೋರಾಗಿ ಹ್ಯಾಪಿ ಮದರ್ಸ್ ಡೇ ಎಂದು ಕೂಗುತ್ತಿದ್ದರು. ಇನ್ನಾರದೋ ಮನೆಯಲ್ಲಿ ತಾಯಿಗೆ ಉಡುಗೊರೆ ನೀಡುವ ಸಂಭ್ರಮ ನಡೆದಿತ್ತು. ಇದನ್ನೆಲ್ಲ ನೋಡುತ್ತಿದ್ದ ನನಗೆ ನನ್ನ ಮಗ ಇಂದು ಬಂದೇ ಬರುವನೆಂಬ ವಿಶ್ವಾಸ ಗಟ್ಟಿಯಾಗತೊಡಗಿತು. ಇಂದು ಬಂದೇ ಬರುತ್ತೀನಿ ಎಂದು ಫೋನ್ ಮಾಡಿದ್ದ. ಮಗನಿಗೆ ಇಷ್ಟವಾದ ಅಡಿಗೆ ಮಾಡಿಟ್ಟು ಬಾಗಿಲ ಬಳಿಯೇ ಕಾಯುತ್ತಾ ಕುಳಿತೆ. ಮುಸ್ಸಂಜೆಯಾಗುತ್ತಿದ್ದರೂ ಅವನ ಸುಳಿವೇ ಇಲ್ಲ. ಮಗನ ಬರುವಿಕೆ ಉತ್ಸಾಹ ತುಂಬುತ್ತಿದ್ದರೂ ಮನಸ್ಸನ್ನೆಲ್ಲಾ ಯಾವುದೋ ಶೂನ್ಯ ಭಾವ ಆವರಿಸಿದಂತಿತ್ತು. ನನ್ನ ಬಾಲ್ಯ, ಯೌವ್ವನದ ನೆನಪು ಬೇಡ ಬೇಡವೆಂದರೂ ಸಮುದ್ರದ ತೆರೆಗಳಂತೆ ಬಂದು ಬಂದು ಅಪ್ಪಳಿಸುತಿತ್ತು.

   ನನ್ನ ಅಪ್ಪ ಅಮ್ಮನಿಗೆ ಹಿರಿಯ ಮಗಳಾಗಿ ನಾನು ಹಳ್ಳಿಯೊಂದರಲ್ಲಿ ಹುಟ್ಟಿದೆ. ವಂಶಕ್ಕೊಬ್ಬನಾದರೂ ಗಂಡು ಮಗು ಬೇಕೇ ಬೇಕೆಂಬ ಹಂಬಲದಲ್ಲಿ ನನ್ನ ಅಮ್ಮ ಹೆತ್ತಿದ್ದು ಸಾಲಾಗಿ ಐದು ಹೆಣ್ಣು ಮಕ್ಕಳನ್ನು. ಸಾಕಷ್ಟು ಸ್ಥಿತಿವಂತರ ಮನೆಯಾದ್ದರಿಂದ ನಮಗೆ ಹೆಚ್ಚೇನೂ ಕೊರತೆಯಾಗಿರಲಿಲ್ಲ. ತನ್ನ ಹಠದಲ್ಲಿ ಗೆಲುವು ಸಾಧಿಸಿದಂತೆ ಕೊನೆಗೊಮ್ಮೆ ಆರನೆಯದಾಗಿ ಗಂಡು ಮಗುವನ್ನು ಹೆತ್ತಳು ನನ್ನ ಅಮ್ಮ. ಅಂದಿನ ಅವಳ, ನನ್ನ ಅಪ್ಪನ ಸಂಭ್ರಮವನ್ನು ನೋಡಬೇಕಾಗಿತ್ತು. ಜಗತ್ತನ್ನೇ ಗೆದ್ದವರಂತೆ ಬೀಗುತ್ತಿದ್ದರು. ಮೇಲಿಂದ ಮೇಲೆ ಬಸಿರಾಗಿ ತನ್ನ ಆರೋಗ್ಯವನ್ನು ಕಳೆದುಕೊಂಡು ಹೈರಾಣಾಗಿದ್ದರೂ ಗಂಡು ಮಗುವನ್ನು ಹಡೆದ ತೃಪ್ತಿ, ಸಂಭ್ರಮ, ಸಂತೋಷಗಳು ಅವಳ ಮುಖದಲ್ಲಿ ಎದ್ದು ಕಾಣುತ್ತಿತ್ತು. ಬಹಳ ಅಧ್ಧೂರಿಯಿಂದ ತೊಟ್ಟಿಲ ಶಾಸ್ತ್ರ, ನಾಮಕರಣ ಶಾಸ್ತ್ರಗಳು ಮುಗಿದವು. ಹುಣ್ಣಿಮೆಯ ಚಂದ್ರನಂತೆ ಬೆಳ್ಳಗೆ, ಗುಂಡು ಗುಂಡಾಗಿದ್ದ ನನ್ನ ತಮ್ಮ. ಅಪರೂಪಕ್ಕೆ ಹುಟ್ಟಿದ್ದ ಅವನ ಆರೈಕೆಗೆ ನಾವೆಲ್ಲರೂ ದಾಸಿಗಳಾಗಿದ್ದೆವು. ಅವನನ್ನು ಆಡಿಸಲು, ಅವನ ಸೇವೆ ಮಾಡಲು ನಮ್ಮ ನಮ್ಮಲ್ಲಿಯೇ ಪೈಪೋಟಿಯೂ ಆಗುತ್ತಿತ್ತು. ಇಷ್ಟೆಲ್ಲ ಅಕರಾಸ್ಥೆಯಿಂದ ಸಾಕುತ್ತಿದ್ದರೂ ಆ ಮಗು ಬೆಳವಣಿಗೆಯನ್ನೇ ಕಾಣಲಿಲ್ಲ. ಅವನ ಉಪಚಾರಕ್ಕಾಗಿ ಮಾಡದ ಪೂಜೆ, ಹರಕೆಗಳಿರಲಿಲ್ಲ, ನೋಡದ ವೈದ್ಯರಿರಲಿಲ್ಲ. ಏನು ಮಾಡಿದರೂ ವಯಸ್ಸಿಗೆ ತಕ್ಕಂತೆ ಬೆಳವಣಿಗೆಯನ್ನೇ ಕಾಣದೆ ಕಡೆಗೊಂದು ದಿನ ಇಹಲೋಕದ ಯಾತ್ರೆಯನ್ನು ಮುಗಿಸಿದ. ಇದೇ ಕೊರಗಿನಲ್ಲಿ ಅಮ್ಮ ಸವೆಯುತ್ತಾ, ಪರಲೋಕದಲ್ಲೇ ಅವನ ಸೇವೆ ಮಾಡಲು ಅವನನ್ನೇ ಹಿಂಬಾಲಿಸಿದಳು.


      ನಾಲ್ಕು ಜನಕ್ಕೆ ಬೇಕಾದವನಾಗಿ ಕೈಯೆತ್ತಿ ದಾನ ಮಾಡುತ್ತಿದ್ದ ನಮ್ಮ ಅಪ್ಪ ನನ್ನ ತಮ್ಮನ ಉಪಚಾರಕ್ಕಾಗಿ ಖಚು೯ ಮಾಡುತ್ತಾ, ಮಾಡುತ್ತ ಭಿಕ್ಷೆ ಬೇಡುವ ಸ್ಥಿತಿಗೆ ಬಂದು ಬಿಟ್ಟಿದ್ದ. ಇದರ ವಿಪರೀತ ಪರಿಣಾಮ ಮೊದಲಿಗೆ ನನ್ನ ಮೇಲೆಯೇ ಆಗಿದ್ದು. ಮನೆಗೆ ಹಿರಿ ಮಗಳಾಗಿದ್ದ ನಾನು ಹದಿನೆಂಟು ತುಂಬುವ ಮೊದಲೇ ನನಗಿಂತ ಒಂದೂವರೆ ಪಟ್ಟು ವಯಸ್ಸಾದವನ ಕೈ ಹಿಡಿಯಬೇಕಾಯಿತು. ಇದರಿಂದ ಸಾಕಷ್ಟು ಕನ್ಯಾ ಶುಲ್ಕ ನನ್ನ ತಂದೆಗೆ ಸಿಕ್ಕಿತ್ತು.

      ಗಂಡನ ಮನೆಗೆ ಬಂದ ನನಗೆ ಇಲ್ಲಿಯೂ ದಾಸಿಯ ಪಟ್ಟ ಖಾಯಂ ಆಯಿತು. ನನ್ನ ಗಂಡನಿಗೆ ಒಬ್ಬ ಹೆಂಡತಿಗಿಂತ ಮನೆಗೆ ಒಬ್ಬ ಕೆಲಸದವಳಾಗಿ ಅವನ ಬೇಕು ಬೇಡಗಳನ್ನು ಪೂರೈಸುವ ಒಂದು ಹೆಣ್ಣು ಬೇಕಾಗಿತ್ತು. ಮೌನವಾಗಿ ಕೆಲಸ ಮಾಡಿ ಅಭ್ಯಾಸವಿದ್ದ ನಾನು ಇಲ್ಲಿಯೂ ಮೌನವಾಗೇ ದುಡಿಯುತ್ತಾ ಎಲ್ಲವನ್ನೂ ಸಹಿಸುತ್ತಿದ್ದೆ. ಈ ಮಧ್ಯೆ ನಾನು ಬಸಿರಾದರೂ ಯಾವ ಆರೈಕೆಯೂ ಸಿಗಲಿಲ್ಲ. ಆದರೆ ಚೊಚ್ಚಲ ಮಗುವೇ ಗಂಡು ಮಗುವಾದಾಗ ಇಲ್ಲಿಯೂ ಸಂಭ್ರಮ ಶುರುವಾಯಿತು. ಜೊತೆಗೇ ಗಂಡು ಮಗು ಹೆತ್ತದ್ದರಿಂದ ನನ್ನ ಸ್ಥಾನ ಸ್ವಲ್ಪ ಮೇಲಕ್ಕೇರಿತು. ಈ ಮಧ್ಯೆ ನನ್ನ ನಾದಿನಿಯರ ಮದುವೆ, ಬಾಣಂತನಗಳು ಕಳೆದು ನನ್ನ ಅತ್ತೆ ಮಾವನೂ ಪರಲೋಕ ಪ್ರಯಾಣ ಮಾಡಿದ್ದರಿಂದ ಈಗ ಮನೆಗೆ ನಾನೇ ಯಜಮಾನಿಯಾಗಿದ್ದೆ. ಆದರೇನು ನನ್ನ ಗಂಡ ಮಗನನ್ನು ಅತಿಯಾಗಿ ಮುದ್ದು ಮಾಡುತ್ತಾ ಹಾಳು ಮಾಡುತ್ತಿದ್ದ. ಅವನ ಕೈಗೆ ದುಡ್ಡು ಬೀಳುವುದು ಜಾಸ್ತಿಯಾಗುತ್ತಾ ಅವನ ಅಹಂಕಾರವೂ ಜಾಸ್ತಿಯಾಗುತ್ತಿತ್ತು. ತಾಯಿಯೆಂದರೆ ಸ್ವಲ್ಪವೂ ಗೌರವ ಇರಲಿಲ್ಲ. ಇವನ ಹಾಗೂ ಇವನ ಅಪ್ಪನ ದುಶ್ಚಟಗಳಿಗೆ ಮನೆಯ ಸಂಪತ್ತೆಲ್ಲ ಕರಗುತ್ತಿತ್ತು. ನನ್ನಮ್ಮನ ಬಸಿರು, ಬಾಣಂತನದ ಅಭ್ಯಾಸವಿದ್ದ ನಾನು ಊರಿನ ಹೆಣ್ಣು ಮಕ್ಕಳ ಹೆರಿಗೆ ಮಾಡಿಸುವ ಸೂಲಗಿತ್ತಿಯಾಗಿ ಸೇವೆ ಮಾಡುತ್ತಿದ್ದೆ. ನನ್ನ ಮಗ ನನ್ನನ್ನು ಪ್ರೀತಿಸದಿದ್ದರೂ ಊರ ಹೆಣ್ಣು ಮಕ್ಕಳು ನನ್ನನ್ನು ಅಮ್ಮನೆಂದೇ ಪ್ರೀತಿಸುತ್ತಿದ್ದರು. 

      ಹೀಗೇ ದಿನಗಳು ಉರುಳುತ್ತಾ ಹೋಯಿತು. ಅತಿಯಾದ ದುಶ್ಚಟಗಳ ದಾಸನಾಗಿದ್ದ ನನ್ನ ಗಂಡನೂ ನನ್ನನ್ನು ಬಿಟ್ಟು ಹೋದ. ನನ್ನ ಮಗನಿಗೆ ಅವನ ದುಶ್ಚಟಗಳೆಲ್ಲಾ ಬಳುವಳಿಯಾಗಿ ಬಂದಿದ್ದವು. ಮನೆ ಪೂತಿ೯ಯಾಗಿ ನನ್ನ ಹಿಡಿತಕ್ಕೆ ಬಂದದ್ದರಿಂದ ಅವನಿಗೆ ದುಡ್ಡು ಕೊಡುವುದನ್ನು ಕಡಿಮೆ ಮಾಡತೊಡಗಿದೆ. ದಿನೇ ದಿನೇ ಅವನ ಕೂಗಾಟ, ರೇಗಾಟ, ಜಗಳಗಳು ಜಾಸ್ತಿಯಾಗ ತೊಡಗಿದವು. ಆದರೆ ನಾನು ಮಾತ್ರ ಸೊಪ್ಪು ಹಾಕುತ್ತಿರಲಿಲ್ಲ. ಕೋಪದಿಂದ ಮನೆ ಬಿಟ್ಟು ಹೋಗುವುದು, ಎರಡು ಮೂರು ದಿನ ಮನೆಗೆ ಬರದೇ ಇರುವುದು ಎಲ್ಲ ಶುರುವಾಯಿತು. ಹಾಗೇ ಮನೆಗೆ ಬಂದಾಗ ಜಗಳವಾಡುವುದರ ಜೊತೆಗೇ ನನ್ನನ್ನು ಹೊಡೆಯವುದೂ ನಡೆಯತೊಡಗಿತು. ಹೀಗೇ ಒಮ್ಮೆ ಮನೆ ಬಿಟ್ಟು ಹೋದ ಅವನು ಸಂಜೆಯಾದರೂ ಮನೆಗೆ ಬರದಿದ್ದಾಗ ಇದು ಮಾಮೂಲು ಎಂದುಕೊಂಡು ನಾನು ಸುಮ್ಮನಾದೆ. ಅಷ್ಟರಲ್ಲಿ ಪಕ್ಕದ ಮನೆಯಿಂದ ಅಳು, ಗಲಾಟೆ ಕೇಳಿ ಬಂತು. ಏನೆಂದು ನೋಡಲು ಹೋದೆ. ಅವರ ಮನೆಯ ಚಿಕ್ಕ ಮಗುವಿಗೆ ಹಾಕಿದ್ದ ಚಿನ್ನದ ಸರ ಕಳೆದು ಹೋಗಿತ್ತು. ಆ ಮಗುವನ್ನು ವಿಚಾರಿಸಿದಾಗ ಅದು ನನ್ನ ಮಗನ ಕಡೆ ಬೆರಳು ಮಾಡಿತು. ನನಗೆ ಭಯವಾಯಿತು. ಅವನನ್ನು ಪೋಲೀಸರು ಹಿಡಿದುಕೊಂಡು ಹೋದರೇ ? ಎಷ್ಟೇ ಆದರೂ ನಾನು ತಾಯಿಯಲ್ಲವೇ, ಮಗನನ್ನು ಪೋಲೀಸರು ಹೊಡೆಯುವುದನ್ನು ನೆನೆಸಿಕೊಂಡು ನನ್ನ ಎದೆ ನಡುಗಿತು. ಚಿಂತೆಯಲ್ಲೇ ಮನೆಗೆ ಹೋದೆ.


      ಎರಡು ಮೂರು ದಿನದ ನಂತರ ಕೈಯಲ್ಲಿನ ದುಡ್ಡು ಖಚಾ೯ದ ಮೇಲೆ ಒಂದು ದಿನ ಮಧ್ಯ ರಾತ್ರಿಯಲ್ಲಿ ನನ್ನ ಮಗ ಮನೆಗೆ ಬಂದ. ಅವನನ್ನು ನೋಡಿ ಸಂತೋಷವಾದರೂ ಮರುಕ್ಷಣವೇ ಪೋಲೀಸರು ಹಿಡಿದುಕೊಂಡು ಹೋದರೆ ಎಂಬ ಚಿಂತೆ ಶುರುವಾಯಿತು. ಹೇಗಾದರೂ ಮಾಡಿ ಅವನಿಗೆ ಒಳ್ಳೆ ಬುಧ್ಧಿ ಕಲಿಸಲೇಬೇಕೆಂದು ಪಣ ತೊಟ್ಟೆ. ಅವನಿಗೆ ಕೊಡುವ ಊಟದಲ್ಲಿ ಸ್ವಲ್ಪ ನಿದ್ದೆ ಔಷಧಿಯನ್ನು ಬೆರೆಸಿ ಕೊಟ್ಟೆ. ಅವನಿಗೆ ಗಾಢವಾದ ನಿದ್ದೆ ಆವರಿಸಿಕೊಂಡಿತು. ಇದೇ ಸಮಯವೆಂದು ಅವನ ಕೈ ಕಾಲುಗಳನ್ನು ಬಲವಾದ ಹಗ್ಗದಿಂದ ಬಿಗಿದು ಮಂಚಕ್ಕೆ ಕಟ್ಟಿ ಹಾಕಿದೆ. ಬೆಳಗ್ಗೆ ಎಚ್ಚರಗೊಂಡ ಅವನು ಕಿರುಚಾಡಲು ಶುರು ಮಾಡಿದ. ಅವನ ಧ್ವನಿ ಕೇಳಿದ ಯಾರೋ ಪೋಲೀಸರಿಗೆ ಸುಳುಹು ಕೊಟ್ಟರು. ಪೋಲೀಸ

ರು ಬಂದಾಗ ನಾನು ಅವನು ಇಲ್ಲಿಗೆ ಬಂದೇ ಇಲ್ಲವೆಂದು ಹೇಳಿದೆ. ಪೋಲೀಸರ ಧ್ವನಿ ಕೇಳಿದ ಅವನು ಕಿರುಚುವುದನ್ನು ಬಿಟ್ಟು ತೆಪ್ಪಗಾದ. 


      ಒಂದೆರಡು ದಿನ ಊಟ ಮಾಡದೆ ಪ್ರತಿಭಟಿಸಿದ ಅವನು ನಂತರ ಹಸಿವು ತಾಳದೆ ಊಟ ಮಾಡತೊಡಗಿದ. ಅವನಿಗೆ ಊಟ ಮಾಡಿಸುವ ಸಮಯದಲ್ಲಿ ಒಳ್ಳೆಯ ಮಾತುಗಳಿಂದ ಅವನನ್ನು ನನ್ನ ಮಾತು ಕೇಳುವಂತೆ ಮಾಡಿದೆ. ಈಗ ದಿನವೂ ಅವನ ಮುಂದೆ ರಾಮಾಯಣ, ಮಹಾಭಾರತದ ಕಥೆ ಮತ್ತು ನೀತಿಗಳನ್ನು ಓದತೊಡಗಿದೆ ಮತ್ತು ಅವನ ಮನ ಮುಟ್ಟುವಂತೆ ವಿವರಣೆ ಕೊಡತೊಡಗಿದೆ. ಅಷ್ಟೇ ಅಲ್ಲ, ನಮ್ಮ ರಾಜ, ಮಹಾರಾಜರುಗಳ ಕಥೆಯನ್ನು ಮತ್ತು ಅವರ ದೇಶ ಭಕ್ತಿಯನ್ನು ಉಪದೇಶ ಮಾಡುತ್ತಿದ್ದೆ. ನಿಧಾನವಾಗಿ ಅವನ ಮನಸ್ಸು ಪರಿವತ೯ನೆಯಾಗತೊಡಗಿತು. ಅವನ ಕಣ ಕಣದಲ್ಲಿ ದೇಶ ಭಕ್ತಿ, ಮಾತೃ ಭಕ್ತಿಯನ್ನು ತುಂಬುವುದರಲ್ಲಿ ನಾನು ಯಶಸ್ವಿಯಾದೆ. ಒಂದು ದಿನ ಅವನು ತನ್ನ ಮನದಾಳದಿಂದ ನನ್ನ ಕ್ಷಮೆ ಕೇಳಿದ ಮತ್ತು ತಾನು ಇನ್ನು ಮುಂದೆ ಸೇನೆಗೆ ಸೇರಿ ದೇಶ ಸೇವೆ ಮಾಡವುದಾಗಿ ಹೇಳಿದ. ಅವನ ಮಾತುಗಳನ್ನು ಕೇಳಿ ನನಗೆ ಬಹಳ ಸಂತೋಷವಾಯಿತು. ಅಂದು ನಾನು ಅವನನ್ನು ಬಂಧನದಿಂದ ಬಿಡಿಸಿದೆ. ನನಗೆ ಚೆನ್ನಾಗಿ ನೆನಪಿದೆ, ಅಂದು ಹೀಗೆ ಮದರ್ಸ್ ಡೇ ಆಗಿತ್ತು. ದೇಶ ಸೇವೆ ಮಾಡಿ ಅವನು ನನ್ನ ಋಣ ತೀರಿಸುವುದಾಗಿ ಶಪಥ ಮಾಡಿ ಹೋದ. 


      ಇದೆಲ್ಲಾ ನಡೆದು ಇಂದಿಗೆ ಐದು ವಷ೯ಗಳೇ ಕಳೆದು ಹೋದವು. ಸೇನೆಗೆ ಸೇರಿದ ನನ್ನ ಮಗ ಶತ್ರುಗಳ ವಿರುಧ್ಧದ ಅನೇಕ ಕಾಯಾ೯ಚರಣೆಗಳಲ್ಲಿ ಭಾಗವಹಿಸಿ ಒಳ್ಳೆಯ ಹೆಸರನ್ನು ಗಳಿಸಿದ. ಅವನಿಂದಾಗಿ ಈಗ ಈ ಊರು ಪ್ರಸಿಧ್ಧಿಗೆ ಬಂದಿತ್ತು. ಆದರೆ ಕೆಲಸದ ಒತ್ತಡದಿಂದಾಗಿ ಅವನಿಗೆ ಈ ಐದು ವಷ೯ಗಳಲ್ಲಿ ಒಮ್ಮೆಯೂ ಊರಿಗೆ ಬರಲಾಗಿರಲಿಲ್ಲ. ಅವನ ದುಶ್ಚಟಗಳು ದೂರವಾದ ಮೇಲೆ ಅವನು ನನ್ನ ಹತ್ತಿರ ಇದ್ದದ್ದೇ ಕಮ್ಮಿ. ಹೀಗಾಗಿ ಅವನನ್ನು ನೋಡಲು ನಾನೂ ಕಾತರದಿಂದ ಕಾಯುತ್ತಿದ್ದೆ. 

      ಈ ಮದರ್ಸ್ ಡೇ ದಿನ ಖಂಡಿತವಾಗಿ ಬಂದೇ ಬರುವನೆಂದು ತಿಳಿಸಿದ್ದ. ಅದೂ ಅಲ್ಲದೆ ನನಗಾಗಿ ದೊಡ್ಡದೊಂದು ಉಡುಗೊರೆಯನ್ನು ತರುವುದಾಗಿಯೂ ಹೇಳಿದ್ದ. ಆ ಉಡುಗೊರೆಯನ್ನು ನಾನು ಊಹಿಸಿಕೊಳ್ಳವುದೂ ಸಾಧ್ಯವಿಲ್ಲವೆಂದೂ, ಅಂಥ ಅಪರೂಪದ ಉಡುಗೊರೆಯನ್ನು ಈ ವಷ೯ದ ಮದರ್ಸ್ ಡೇ ಗೆ ತಾನು ಕೊಡುವುದಾಗಿ ಹೇಳಿದ್ದ. ನಾನೂ ಕುತೂಹಲದಿಂದ ಕಾಯುತ್ತಿದ್ದೆ. 


      ಬೆಳಿಗ್ಗೆಯೇ ಎದ್ದು ಅವನಿಗಿಷ್ಟವಾದ ಅಡುಗೆ ಮಾಡಿ ಅವನ ದಾರಿ ಎದುರು ನೋಡುತ್ತಿದ್ದೆ. ಆದರೆ ಮುಸ್ಸಂಜೆಯಾದರೂ ಅವನ ಸುಳಿವೇ ಇಲ್ಲ. ಅವನ ಜೊತೆಯೇ ಊಟ ಮಾಡಬೇಕೆಂಬ ಹಂಬಲದಿಂದ ಊಟವೂ ಮಾಡಿರಲಿಲ್ಲ. ಬಾಗಿಲಲ್ಲಿಯೇ ಕುಳಿತಿದ್ದೆ. ಮಾಡಿನ ಮೇಲೆ ಕುಳಿತು ಕೂಗುತ್ತಿದ್ದ ಕಾಗೆ ಅವನ ಬರುವಿಕೆಯನ್ನು ಖಚಿತ ಪಡಿಸುವಂತಿತ್ತು. ಆದರೂ ನನಗೇ ಗೊತ್ತಿಲ್ಲದ ಯಾವುದೋ ಶೂನ್ಯ ಭಾವವೊಂದು ನನ್ನನ್ನು ಆವರಿಸಿತ್ತು. ಸ್ವಲ್ಪ ಹೊತ್ತಿನಲ್ಲಿ ಮನೆಯ ಮುಂದಿನ ರಸ್ತೆಯಲ್ಲಿ ಇದ್ದಕ್ಕಿದ್ದಂತಯೇ ಜನರ ಕೋಲಾಹಲ ಕೇಳಿಸಿತು. ಏನೆಂದು ನೋಡುತ್ತಿದ್ದಂತೆಯೇ ಯಾರೋ “ಅಜ್ಜಿ, ನಿನ್ನ ಮಗ ಬರುತ್ತಿದ್ದಾನೆ” ಎಂದರು. ಸಂತೋಷದಿಂದ ಓಡಿ ಹೋಗಿ ಆರತಿ ತಂದೆ. ರಸ್ತೆಯ ಕೊನೆಯಲ್ಲಿ ಐದಾರು ಜನ ಯಾವುದೋ ದೊಡ್ಡ ಪೆಟ್ಟಿಗೆಯೊಂದನ್ನು ಹೊತ್ತು ಕವಾಯದು ಮಾಡುತ್ತ ನಿಧಾನವಾಗಿ ನಡೆದು ಬರುತ್ತಿದ್ದರು. ನನ್ನ ಮಗ ನನಗಾಗಿ ಯಾವುದೋ ತುಂಬಾ ದೊಡ್ಡ ಉಡುಗೊರೆಯನ್ನೇ ತರುತ್ತಿದ್ದಾನೆಂದುಕೊಂಡೆ. ಹತ್ತಿರ ಬರುತ್ತಿದ್ದಂತೆ ಅದು ಶವದ ಪೆಟ್ಟಿಗೆಯಂತೆ ಕಾಣತೊಡಗಿತು. ಆ ಪೆಟ್ಟಿಗೆಯನ್ನು ಹೊತ್ತಿದ್ದವರು ಅದನ್ನು ಅಂಗಳದಲ್ಲಿ ಇಳಿಸಿದರು. ನಾನು ನನ್ನ ಮಗನಿಗಾಗಿ ಹುಡುಕಿದೆ. ಆದರೆ ಅವನು ಎಲ್ಲೂ ಕಾಣಲಿಲ್ಲ. ನಾನು ಆ ಸೇನೆಯವರನ್ನು ನನ್ನ ಮಗನ ಬಗ್ಗೆ ಕೇಳಿದೆ. ಆಗ ಮುಂದೆ ಬಂದ ಸೇನೆಯವನೊಬ್ಬ “ಚೀನಾದ ಜೊತೆ ಮೊನ್ನೆ ನಡೆದ ಯುಧ್ದದಲ್ಲಿ ನಿಮ್ಮ ಮಗ ವೀರ ಮರಣ ಹೊಂದಿದ” ಎಂದು ಹೇಳಿದ ಮತ್ತು ಅವನು ನನಗಾಗಿ ಬರೆದಿದ್ದ ಕಾಗದ ಒಂದನ್ನು ಕೊಟ್ಟ.


       ಆ ಕಾಗದದಲ್ಲಿ ನನ್ನ ಮಗ ಹೀಗೆ ಬರೆದಿದ್ದ. “ಅಮ್ಮ, ನಾನು ಹುಟ್ಟಿದಂದಿನಿಂದಲೂ ನಿನಗೆ ಯಾವ ಸುಖವನ್ನೂ ಕೊಡಲಿಲ್ಲ. ದುಶ್ಚಟಗಳ ದಾಸನಾಗಿ ನಿನ್ನ ನೆಮ್ಮದಿಯನ್ನು ಕಿತ್ತುಕೊಂಡೆ. ಆದರೆ ನೀನು ಎಲ್ಲವನ್ನೂ ಸಹಿಸಿಕೊಂಡೆ. ಹಠ ತೊಟ್ಟು ನನ್ನನ್ನು ಒಳ್ಳೆ ಮನುಷ್ಯನನ್ನಾಗಿ ಮಾಡಿದೆ. ನಿನ್ನ ಮಮತೆಯ ಕಾರಣದಿಂದ ಇಂದು ನಾನು ಒಬ್ಬ ಒಳ್ಳೆ ಮನುಷ್ಯನಾಗಿ ನನ್ನ ತಾಯಿಗಷ್ಟೇ ಅಲ್ಲ, ಕೋಟ್ಯಾಂತರ ಜನರ ಜೀವದುಸಿರಾಗಿರುವ, ಎಲ್ಲರ ತಾಯಾಗಿರುವ ಭಾರತ ಮಾತೆಯ ಸೇವೆ ಮಾಡುವ ಅದೃಷ್ಟವನ್ನು ಸಂಪಾದಿಸಿಕೊಂಡೆ. ಎಷ್ಟು ಜನರಿಗೆ ಇಂಥ ಅದೃಷ್ಟ ಸಿಕ್ಕುತ್ತದೆ. ಅಮ್ಮ, ನನಗೆ ಚೆನ್ನಾಗಿ ನೆನಪಿದೆ, ಒಂದು ಮದರ್ಸ್ ಡೇ ದಿನ ನೀನು ಅಕ್ಕ ಪಕ್ಕದ ಮನೆಗಳಲ್ಲಿ ಮಕ್ಕಳು ತಾಯಂದಿರನ್ನು ಅಭಿನಂದಿಸುವುದು, ಉಡುಗೊರೆ ತಂದುಕೊಡುವುದು ಎಲ್ಲವನ್ನೂ ನೋಡುತ್ತ ಬೇಜಾರಾಗಿದ್ದೆ, ನಿನ್ನ ಮಗನಿಗೆ ತಾಯಿಯ ಬಗ್ಗೆ ಗೌರವವೇ ಇಲ್ಲವಲ್ಲ ಎಂದು. ನಿನ್ನಿಂದ ದೂರವಿರುವಾಗ ನನಗೆ ಇಂದು ನಿನ್ನ ಬೆಲೆ ಗೊತ್ತಾಗುತ್ತಿದೆ. ಆದರೆ ನನಗೆ ಒಂದು ತೃಪ್ತಿ, ಏನೆಂದರೆ ನಾನು ಕೇವಲ ನಿನಗಷ್ಟೇ ಅಲ್ಲ, ಕೋಟ್ಯಾಂತರ ಜನಗಳಿಗೆ ತಾಯಿಯಾಗಿರುವ ನನ್ನ ತಾಯ್ನಾಡಿನ ಸೇವೆ ಮಾಡುತ್ತಿದ್ದೇನೆ ಎಂದು. ನಾನು ನಿನಗೆ ಹೇಳಿದ್ದೆ, ಈ ಮದರ್ಸ್ ಡೇ ಗೆ ಖಂಡಿತ ಊರಿಗೆ ಬಂದೇ ಬರುತ್ತೇನೆ ಎಂದು. ಆದರೆ ಈಗಷ್ಟೇ ನಮಗೆ ಚೀನಾದ ಗಡಿ ಪ್ರದೇಶಕ್ಕೆ ಹೋಗುವ ಆದೇಶ ಬಂದಿದೆ. ಅಮ್ಮ, ನಾನು ಅಲ್ಲಿಗೆ ಹೋದರೆ ಖಂಡಿತವಾಗಲೂ ಭಾರತ ಮಾತೆಯ ಮೇಲೆ ಆಕ್ರಮಣ ಮಾಡಿದವರನ್ನು ಸುಮ್ಮನೆ ಬಿಡುವುದಿಲ್ಲ, ಸರಿಯಾದ ಪಾಠ ಕಲಿಸಿಯೇ ಬರುತ್ತೇನೆ.  ಈ ಪ್ರಯತ್ನದಲ್ಲಿ ನನ್ನ ಜೀವ ಹೋದರೂ ಪರವಾಗಿಲ್ಲ. ನಾನು ನಿನಗೆ ಹೇಳಿದಂತೆ ಮದರ್ಸ್ ಡೇಗೆ ದೊಡ್ಡ ಉಡುಗೊರೆಯನ್ನು ತರುತ್ತೇನೆ. ಭಾರತ ಮಾತೆಯ ಗೆಲುವು, ಭಾರತ ಮಾತೆಗಾಗಿ ನನ್ನ ಪ್ರಾಣ.  ತಾಯಿಗಾಗಿ, ತಾಯ್ನೆಲಕ್ಕಾಗಿ ಇದಕ್ಕಿಂತ ದೊಡ್ಡ ಉಡುಗೊರೆ ಏನು ಕೊಡಲು ಸಾಧ್ಯ. ಅಮ್ಮ, ಇದನ್ನು ನೀನು ಖಂಡಿತ, ಹೆಮ್ಮೆಯಿಂದ ಸ್ವೀಕರಿಸುತ್ತೀಯ ಎಂದು ತಿಳಿದಿದ್ದೇನೆ. ನನ್ನನ್ನು ಹರಸಿ ಕಳುಹಿಸಿಕೊಡು.”

      ಹೇಗೆ ಪ್ರತಿಕ್ರಿಯಿಸಬೇಕೆಂಬುದೇ ತಿಳಿಯದೆ ಹಾಗೇ ಹೊಸಿಲಲ್ಲಿ ಕುಸಿದು ಕುಳಿತೆ. ನನ್ನ ಮಗ ದೊಡ್ಡ ಉಡುಗೊರೆಯನ್ನೇ ಕೊಟ್ಟಿದ್ದ.  ಅವನು ಕೇವಲ ನನಗಷ್ಟೇ ಅಲ್ಲ, ಕೋಟ್ಯಂತರ ಜನರ ತಾಯಿಯಾದ ಭಾರತ ಮಾತೆಗೆ ತನ್ನ ಪ್ರಾಣವನ್ನೇ  ಮದರ್ಸ್ ಡೇಯ ಉಡುಗೊರೆಯಾಗಿ  ಕೊಟ್ಟಿದ್ದ.  ಊರಿನ ಜನರೆಲ್ಲಾ ಅವನಿಗೆ ಜಯಕಾರ ಹಾಕುತ್ತಿದ್ದರು. ನನ್ನ ಮನಸ್ಸನ್ನು ಮಾತ್ರ ಶೂನ್ಯ ಭಾವ ಆವರಿಸಿಕೊಂಡಿತ್ತು.



Rate this content
Log in

Similar kannada story from Classics