ನನ್ನ ಅಪ್ಪನೇ ನನ್ನ ಸೂಪರ್ ಹೀರೋ
ನನ್ನ ಅಪ್ಪನೇ ನನ್ನ ಸೂಪರ್ ಹೀರೋ


ನಾನ್ ಸ್ಟಾಪ್ ನವಂಬರ್ ಎಡಿಷೆನ್. ಆರಂಭಿಕ ಹಂತ. ಸೂಪರ್ ಹೀರೊ.
ಅಪ್ಪಾ ಐ ಲವ್ ಯು ಪಾ
ಪ್ರತಿ ಹೆಣ್ಣು ಮಗಳ ಮೊದಲ ಹೀರೋ ಅಪ್ಪ. ಹಾಗೆಯೇ ನನ್ನ ಸೂಪರ್ ಮ್ಯಾನ್, ನನ್ನ ಸೂಪರ್ ಹೀರೊ ನನ್ನ ಅಪ್ಪನೇ.
ನಿನ್ನಂತ ಅಪ್ಪ ಇಲ್ಲ.
ಒಂದೊಂದು ಮಾತು ಬೆಲ್ಲ.
ನೀನೆ ನನ್ನ ಜೀವ, ನೀನೆ ನನ್ನ ಪ್ರಾಣ..
ಯಾವ ದೇವ ತಂದ ವರವೋ ಇನ್ನು ನಾನು ಅರಿಯೆನು..
ಈ ಗೀತೆಯ ಸಾರವನ್ನು ನೋಡಿದಾಗ ನನ್ನಪ್ಪನಿಗೆ ಹೇಳಿ ಮಾಡಿಸಿದ ಹಾಗೆ ಒಪ್ಪುತ್ತದೆ.
ದೇವರು ನೀಡಿದ ವರವೇ ನನ್ನ ಅಪ್ಪ... ಅಪ್ಪ ನನ್ನ ದೈವವೇ ಸರಿ.. ಅಪ್ಪನ ಪ್ರೀತಿಗಿಂತ ಮಿಗಿಲಾದದ್ದು ಬೇರೆ ಏನಾದರೂ ಇದೆಯೇ... ಅವರ ಪ್ರೀತಿ ವಾತ್ಸಲ್ಯದಿಂದ ಬೆಳೆದು ಅವರ ಒಳ್ಳೆಯ ಸಂಸ್ಕಾರ , ಆದರ್ಶ ಗುಣಗಳನ್ನು ನಾನು ಮೈಗೂಡಿಸಿಕೊಂಡು ಉತ್ತಮ ಮಗಳಾಗಿ, ಶ್ರೇಯಾಳಿಗೆ ಉತ್ತಮ ತಾಯಿಯಾಗಿ, ಮುಖ್ಯವಾಗಿ ಉತ್ತಮ ಪ್ರಜೆಯಾಗಿ ಇರುವೆನೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ.
ಜಗತ್ತನ್ನು ಬೆಳಗುವ ಸೂರ್ಯ ಹೇಗೋ ಹಾಗೆಯೇ ಮನೆ ಬೆಳಗುವ ಸೂರ್ಯ ಅಪ್ಪ.... ಆ ಸೂರ್ಯ ಉರಿದು ಬೆಳಕು ನೀಡಿ ಸೃಷ್ಟಿಯನ್ನು ರಕ್ಷಿಸುವಂತೆ, ಅಪ್ಪನೂ ಕೂಡ ದುಡಿದು ದುಡಿದು ಮನೆಯ ಬೆಳಕಾಗಿ ಮನೆಯನ್ನು ಕಾಪಾಡುವ ಸೂರ್ಯನಾಗಿದ್ದಾನೆ.. ಸೂರ್ಯ ಮುಳುಗಿದರೆ ಜಗತ್ತೆಲ್ಲ ಕತ್ತಲು ಕವಿದಂತೆ ಅಪ್ಪ ಇಲ್ಲದ ಮನೆಯೂ ಸಹ ಕಗ್ಗತ್ತಲಲ್ಲೇ ಇದ್ದಂತೆ ಭಾಸವಾಗುತ್ತದೆ... ನನ್ನ ಅಪ್ಪ ನಮ್ಮ ಮನೆಯ ಆಧಾರ ಸ್ತಂಭ.. ಅಪ್ಪ ನಮ್ಮೆಲ್ಲರ ಶಕ್ತಿ,, ಅಪ್ಪ ನಮ್ಮೆಲ್ಲರ ಖುಷಿ,, ಅಪ್ಪ ನಮ್ಮೆಲ್ಲರ ನಾಯಕ.. ಅಪ್ಪ ಎಂದರೆ ನನ್ನ ಎಲ್ಲ ಖುಷಿಗೂ ಮೀರಿದ ನನ್ನ ಜೀವ.
ಅಪ್ಪನ ಬಗ್ಗೆ ಹೇಳುವುದಕ್ಕೆ, ಬರೆಯುವುದಕ್ಕೆ ಅದೇನೋ ಒಂತರಾ ಖುಷಿ, ಹೆಮ್ಮೆ, ಸಂತೋಷ..
ನನ್ನ ಅಪ್ಪ ಅಂತ ಮಾತು ಮಾತಿಗೂ ಹೇಳುವಾಗ ಒಳಗೊಳಗೇ ಅದೇನೋ ನೆಮ್ಮದಿಯ ಭಾವ, ಖುಷಿಯ ಅನುಭವ. ಇದು ಎಲ್ಲರಿಗೂ ಆಗಿಯೇ ಇರುತ್ತದೆ..
ನನ್ನ ಅಪ್ಪ ತಮ್ಮ ನಾಲ್ಕು ಜನ ಮಕ್ಕಳಿಗೆ ತಮ್ಮ ಪ್ರೀತಿ ವಾತ್ಸಲ್ಯವನ್ನು ಧಾರೆಯೆರೆದು, ನಮ್ಮ ಬೇಕು ಬೇಡಗಳನ್ನು ನಾವು ತಿಳಿಸುವ ಮೊದಲೇ ಈಡೇರಿಸಿ ನಮ್ಮ ಖುಷಿಯಲ್ಲಿ ತಮ್ಮ ಖುಷಿಯನ್ನು ಕಾಣುತ್ತಿದ್ದರು. ಈ ಖುಷಿಯನ್ನು ನಾನು ಅನೇಕ ಬಾರಿ ನನ್ನ ಅಪ್ಪನ ಕಣ್ಣಿನಲ್ಲಿ ಕಂಡಿದ್ದೇನೆ... ಆ ನಿಸ್ವಾರ್ಥ ಪ್ರೀತಿ ಖುಷಿಯಲ್ಲಿ ತಮ್ಮ ನೋವು, ಕಷ್ಟಗಳನ್ನೆಲ್ಲ ಮರೆತು ಮಕ್ಕಳೊಂದಿಗೆ ಮಕ್ಕಳಾಗಿ ಇರುವ ನನ್ನಪ್ಪನಿಗೆ ದೇವರು ಇನ್ನೂ ಹೆಚ್ಚಿನ ಆಯುಷ್ಯ ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಬೇಡಿಕೊಳ್ಳುತ್ತೇನೆ...
ಆಗ ನಮ್ಮ ಹುಟ್ಟಿದ ಹಬ್ಬಕ್ಕೆ ಅಪ್ಪ ಕೊಡಿಸಿದ ಬಟ್ಟೆ, ಮ್ಯಾಚಿಂಗ್ ಇನ್ನಿತರ ವಸ್ತುಗಳನ್ನು ಈಗಲೂ ಕಾಯ್ದಿಟ್ಟುಕೊಂಡಿದ್ದೇನೆ.. ಈಗ ಅವುಗಳನ್ನು ಪದೇ ಪದೇ ತೆಗೆದು ನೋಡಿದಾಗ ನಾನಿನ್ನು ಮದುವೆ ಆಗದೆ ಅವರ ಜೊತೆಯೇ ಇರಬೇಕಾಗಿತ್ತು,, ಎಷ್ಟು ಬೇಗ ಅವರಿಂದ ದೂರವಾದೇನಲ್ಲ ಎನ್ನುವ ಹಾಗೆ ಅನಿಸುತ್ತೆ.. ಈಗಲೂ ಎಲ್ಲವನ್ನು ಕೊಡಿಸುತ್ತಾರೆ. ಆದರೆ ಮೊದಲು ಪ್ರತಿ ವರ್ಷದ ಹುಟ್ಟುಹಬ್ಬ ಅವರೊಂದಿಗೆ ಆಗುತ್ತಿತ್ತು. ಈಗ ಹಾಗಲ್ಲ, ಅದಕ್ಕೆ ದೂರವಾಗಿದ್ದೇನೆ ಅಂತ ಹೇಳಿದ್ದು ಅಷ್ಟೇ. ಆದರೆ ಅಪ್ಪನ ಪ್ರೀತಿಯಿಂದಲ್ಲ,, ಈಗಲೂ ನಾನು ಅಪ್ಪನಿಗೆ ಮುದ್ದಿನ ಮಗಳು ಸಿರಿಯೇ.
ಇಷ್ಟೆಲ್ಲ ಮಾಡುವ ಅಪ್ಪನ ಹುಟ್ಟುಹಬ್ಬ ಇನ್ನೇನು ಬರುತ್ತದೆ ಎಂದರೆ ನಾವು ನಾಲ್ಕು ಜನ ಮಕ್ಕಳು ಅದೆಷ್ಟು ಖುಷಿಯಿಂದ ರಾತ್ರಿ ಕಾಡಿದ್ದು ಅವರಿಗೆ ವಿಶ್ ಮಾಡಿ ಉಡುಗೊರೆ ಕೊಟ್ಟು ಖುಷಿ ಪಡ್ತಿವಿ. ಆದರೆ ಅಪ್ಪ, ನನಗ್ಯಾಕಮ್ಮ ಈ ಹುಟ್ಟಬ್ಬ ಆಚರಣೆ, ಸಣ್ಣವರಿದ್ದಾಗ ಆಚರಿಸಿಕೊಂಡಿಲ್ಲ ಏನಿಲ್ಲ, ಈವಗ್ಯಾಕೆ ಅಂತಿರ್ತಾರೆ.. ಆದ್ರೆ ನಾವು ಬಿಡ್ಬೇಕಲ್ಲ, ಕೇಕ್ ತಂದು , ಒಮ್ಮೊಮ್ಮೆ ಹೊಸಬಟ್ಟೆ ಕೊಡಸಿ ಆಚರಣೆ ಮಾಡ್ತೀವಿ.. ಅಪ್ಪ ಅಮ್ಮನ ವಿವಾಹ ವಾರ್ಷಿಕೋತ್ಸವದ ಆಚರಣೆಯೂ ಹೀಗೆ ನಡೆದಿರುತ್ತದೆ..
ಇನ್ನು ನಾವೆಲ್ಲ ಮದುವೆಯಾಗಿ ಗಂಡನ ಮನೆಗೆ ಹೋದಮೇಲೆ, ಹಾಗೆಯೇ ತಮ್ಮನೂ ಬೆಂಗಳೂರಲ್ಲಿ ಇರುವುದರಿಂದ ಅಪ್ಪ ಅಮ್ಮ ಮಾತ್ರ ಊರಲ್ಲಿರುತ್ತಾರೆ.. ಸದಾ ಅವರೀಗ ಮಕ್ಕಳ ಮೊಮಕ್ಕಳ ಆಗಮನದ ನಿರೀಕ್ಷೆ ಮಾಡ್ತಾ ಇರ್ತಾರೆ..
ನಾವು ಬಸ್ಸಿಗೆ ಬರುವುದು ಗೊತ್ತಾದರೆ ಬಸ್ಟ್ಯಾಂಡಲ್ಲಿ ಅಪ್ಪ ನಮಗಿಂತ ಮುಂಚೆ ಬಂದು ಕೈಯ್ಯಲ್ಲೊಂದು ಚಾಕ್ಲೆಟ್ ಹಿಡಿದು ಕಾಯ್ತಾ ಇರ್ತಾರೆ..
ಈ ನನ್ನ ಅಪ್ಪ ಸಂಸಾರಕ್ಕೆ ತಮ್ಮ ಜೀವವನ್ನೇ ಸವೆಸಿದ್ದಾರೆ.. ಚಿಕ್ಕ ವಯಸ್ಸಲ್ಲೇ ಜವಾಬ್ದಾರಿ ಎನ್ನುವುದು ಅವರ ಹೆಗಲೇರಿ, ಅದೂ ಇಲ್ಲಿಯವರೆಗೂ ಕೆಳಗಿಳಿಯಲೇ ಇಲ್ಲ.. ಆದರೆ ಈಗ ಮಗ ಅಂದ್ರೆ ನನ್ನ ತಮ್ಮ ಅವರ ಜವಾಬ್ದಾರಿಗಳಿಗೆಲ್ಲ ತನ್ನ ಕೈ ಜೋಡಿಸಿದ್ದಾನೆ.. ಅಪ್ಪ ನೆಮ್ಮದಿಯ ನಿಟ್ಟುಸಿರು ಬಿಟ್ಟು ಮೊಮ್ಮಕ್ಕಳೊಂದಿಗೆ ಕಾಲ ಕಳೆಯುತ್ತಿದ್ದಾರೆ. ನಾಲ್ಕಾರು ಜನರಿಗೆ ನನ್ನ ಅಪ್ಪ ಸಹಾಯ ಮಾಡಿ, ಎಷ್ಟೋ ಜನರ ಕಂಬನಿ ಒರೆಸುವ ಕೈ ಇವರಾಗಿದ್ದಾರೆ..
ಅಪ್ಪ ಹಾಕಿಕೊಟ್ಟ ದಾರಿಯಲ್ಲಿ, ಅವರನ್ನೇ ಆದರ್ಶವಾಗಿಟ್ಟುಕೊಂಡು ನಾವು ಕೂಡ ಅವರಂತೆಯೇ ಸಾಗುತ್ತಿದ್ದೇವೆ.
ಕನಸಲ್ಲಾಗಲಿ, ಮನಸಲ್ಲಾಗಲಿ ಯಾರಿಗೂ ಕೇಡನ್ನು ಬಯಸದ ನನ್ನ ಅಪ್ಪ, ತಮಗೆ ಕೇಡು ಬಯಸಿದವರಿಗೂ ಒಳ್ಳೆಯದನ್ನು ಮಾಡಿದವರು ನನ್ನ ಅಪ್ಪ.. ಇಂತಹ ಒಳ್ಳೆಯ ಮನಸಿರೋ ನನ್ನ ಅಪ್ಪ ನನ್ನ ಹೆಮ್ಮೆ.. ಇವರ ಮಗಳಾಗಿ ಹುಟ್ಟಿದ್ದು ನನ್ನ ಪುಣ್ಯವೇ ಸರಿ...ಎಂತಹ ಸ್ವಾರ್ಥ ಇವಳದು ಅಂತ ಅನ್ಕೋಬೇಡಿ, ಏಳೇಳು ಜನ್ಮದಲ್ಲೂ ಇವರೇ ನನ್ನ ಅಪ್ಪನಾಗಿರಲೆಂದು ಬೇಡಿಕೊಳ್ಳುತ್ತೇನೆ..
ಎಲ್ಲ ದೇವರ ಆಶೀರ್ವಾದ ನನ್ನ ಅಪ್ಪನ ಮೇಲಿರಲಿ.. ಜಗತ್ತಿನ ಎಲ್ಲ ಖುಷಿಯು ನನ್ನ ಅಪ್ಪನಿಗೆ ಸಿಗಲಿ..
ಅವರ ಖುಷಿಯಲ್ಲಿ ನಮ್ಮೆಲ್ಲರ ಬದುಕು ಅಡಗಿದೆ. ಅಪ್ಪನ ನೆರಳಲ್ಲಿ ನಾವಿಂದು ತಂಪಾಗಿ ಜೀವನ ಮಾಡುತ್ತಿದ್ದೇವೆ. ನಿಮ್ಮ ಆಶೀರ್ವಾದ ಸದಾ ನಮ್ಮ ಮೇಲಿರಲಿ..
ಅಪ್ಪಾ ಐ ಲವ್ ಯು ಪಾ