Shridevi Patil

Classics Inspirational Others

4.2  

Shridevi Patil

Classics Inspirational Others

ನನ್ನ ಕಲ್ಪನಾ ಲೋಕದ ಭಾವಿ ಅತ್ತೆ

ನನ್ನ ಕಲ್ಪನಾ ಲೋಕದ ಭಾವಿ ಅತ್ತೆ

2 mins
388


ಅತ್ತೆ ಎನ್ನುವ ಪದದಲ್ಲಿಯೇ ಒಂದು ಗತ್ತು ಇರುತ್ತದೆ. ಅದೇನೋ ನಾನೇ ಎಲ್ಲ, ನನ್ನಿಂದಲೇ ಇಷ್ಟೆಲ್ಲ ಆಗಿದ್ದು, ನಾನು ಹೇಳಿದ್ದೆ ನಡೀಬೇಕು ಹಾಗೆ ಹೀಗೆ ಎನ್ನುವ ಗತ್ತಿನ ಕೆಲ ಮಾತುಗಳು ಸುತ್ತುವರೆದು ಅತ್ತೆ ಎನ್ನುವ ಆ ಪಟ್ಟ ಒಂದು ಗತ್ತಿನತ್ತ ಸಾಗಿಸುತ್ತದೆ. ಎಲ್ಲ ಅತ್ತೆಯರೂ ಗತ್ತಿನಲ್ಲೇ ಇರುತ್ತಾರೆ ಎಂದಲ್ಲ, ಎಲ್ಲರೂ ಸಮಾಧಾನಿಗಳಾಗಿಯೇ ಇರುತ್ತಾರೆ ಎಂದಲ್ಲ. ಒಟ್ಟಿನಲ್ಲಿ ಅತ್ತೆ ಎನ್ನುವ ಲಕ್ಷಣಗಳು ಎದ್ದು ಹೊಡಿಯುತ್ತಿರುತ್ತವೆ.

ಇನ್ನು ನನ್ನ ವಿಷಯಕ್ಕೆ ಬಂದರೆ, ನಾನು ಮದುವೆಗೆ ಮುನ್ನ ನನ್ನ ಅತ್ತೆಯಾಗುವವರ ಕುರಿತು ಒಂದಿಷ್ಟು ಕಲ್ಪನೆಗಳನ್ನು ಇಟ್ಟುಕೊಂಡಿದ್ದೇನು. ಅವರು ಹೇಗಿರ್ತಾರೆ,ಹೇಗಿರಬಹುದು ಎನ್ನುವ ಕಲ್ಪನಾಲೋಕದ ನನ್ನ ಕಲ್ಪನೆಗಳಲ್ಲಿ ಮದುವೆಯಾದ ಮೇಲೆ ಒಂದಿಷ್ಟು ನಿಜವಾದವು, ಒಂದಿಷ್ಟು ಹುಸಿಯಾದವು.


ನಾನು ನನ್ನ ಭಾವಿ ಅತ್ತೆಯ ಕುರಿತು, ಅವರು ತುಂಬಾ ಗಟ್ಟಿಗಿತ್ತಿ ಆಗಿರುತ್ತಾರೆ, ನನ್ನ ಮಕ್ಕಳಿವರು ನಾನು ಬೆಳೆಸಿ ಈ ರೀತಿ ಒಂದು ಹಂತಕ್ಕೆ ತಂದಿರುವೆ, ಅವನಿಗೆ ಇದಿಷ್ಟ, ಇವನಿಗೆ ಅದು ಬೇಕು ಇದು ಬೇಕು, ನೀನು ಈಗ ಬಂದವಳು, ನಿನಗೆ ಎಲ್ಲವೂ ತಿಳಿದಿಲ್ಲ, ಸ್ವಲ್ಪ ನೋಡಿಕೊಂಡು ತಿಳಿದುಕೊಂಡು ಮಾಡು, ಜೊತೆಗೆ ನನ್ನ ಮಾತೇ ಕೊನೆ, ನನ್ನ ನಿರ್ಧಾರವೇ ಅಂತಿಮ, ನೀನು ಎಲ್ಲದರಲ್ಲಿಯೂ ಮೂಗು ತೂರಿಸುವ ಆವಶ್ಯಕತೆ ಇರುವುದಿಲ್ಲ, ನಿನ್ನ ಅಭಿಪ್ರಾಯ ಹೇಳಬಹುದು ಆದರೆ ಅದೇ ಆಗಬೇಕು ಎಂದು ಹೇಳುವುದಲ್ಲ, ಅಡುಗೆ ಏನು ಮಾಡಬೇಕೆಂದು ಕೇಳಿಯೇ ಮಾಡಬೇಕು, ಹಾಗೆ ಹೀಗೆ ಎಂದು ನನ್ನ ಭಾವಿ ಅತ್ತೆಯ ಕುರಿತು ಏನೇನೋ ಕಲ್ಪಿಸಿಕೊಂಡು ಬಿಟ್ಟಿದ್ದೇನು. ಯಾಕೆಂದರೆ ಚಿಕ್ಕವರಿದ್ದಾಗ ಅಮ್ಮ ಚಿಕ್ಕಮ್ಮಂದಿರ ಅತ್ತೆಯರನ್ನು ನೋಡಿದ್ದು, ಅವರಿವರ ಅತ್ತೆಯರ ಕುರಿತು ಕೇಳಿದ್ದು,ಜೊತೆಗೆ ಈ ಧಾರಾವಾಹಿಯ ಅತ್ತೆಯಂದಿರ ಪಾತ್ರ ನೋಡಿದ್ದು ಎಲ್ಲವೂ ಸೇರಿ ನನ್ನ ತಲೆಯಲ್ಲಿ ಅತ್ತೆ ಎನ್ನುವ ಜೀವದ ಕುರಿತು ಈ ಕಲ್ಪನೆಗಳು ಆಳವಾಗಿ ಬೇರು ಬಿಟ್ಟಂತಾಗಿದ್ದವು.


ನನ್ನ ಮದುವೆ ನಿಶ್ಚಯವಾದಾಗ ನನ್ನ ಹುಡುಗನ ಅಮ್ಮ ತೀರಿರುವರು,ಎರಡನೇ ಅಮ್ಮ ಇದ್ದಾರೆ ಎಂದು ತಿಳಿದುಬಂತು. ಎಲ್ಲರಿಗೂ ಒಂದು ಕಲ್ಪನೆ ಇದ್ದೆ ಇರುತ್ತದೆ ಮಲತಾಯಿ ಅಂದರೆ. ಹಾಗೆ ನನಗೂ ಕೂಡ ಇತ್ತು. ಅತ್ತೆಯೇ ಬೇರೆ, ಮಲಅತ್ತೆಯೇ ಬೇರೆ ಅಲ್ಲವೇ?


ಆದರೆ, ನಾನು ಅಂದುಕೊಂಡ ಹಾಗೆ ಇಲ್ಲಿ ನನ್ನ ಅತ್ತೆ ಕಾಣಲಿಲ್ಲ. ನನ್ನೊಂದಿಗೆ ಅವರೂ ಕೆಲಸ ಮಾಡುತ್ತಿದ್ದರು. ಏನಾದರೂ ಕೇಳಿದರೆ ಇಷ್ಟವಿದ್ದರೆ ಚೆನ್ನಾಗಿ, ಇಲ್ಲವೆಂದರೆ ಸುಮ್ಮನೆ ಏನೋ ಒಂದು ಹೇಳಿ ಇರುತ್ತಿದ್ದರು. ಮನಸ್ಸಲ್ಲಿ ಇರುವುದನ್ನು ಹೇಳುವುದು ಕಷ್ಟವಲ್ಲವೇ ಹಾಗೆಯೇ ನನಗೂ ಅತ್ತೆಯ ಮನಸ್ಸಲ್ಲಿರುವುದು ತಿಳಿಯುತ್ತಿರಲಿಲ್ಲ. ನಾನು ಒಮ್ಮೊಮ್ಮೆ ಸುಮ್ಮನಿರುತ್ತಿದ್ದೆ. ಇವರನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ. ಆದರೂ ನನಗೆ ಅತ್ತೆಯೇ ಅಲ್ಲವೇ,ಹಾಗೆಯೇ ಇದ್ದರು. ನನ್ನತ್ತೆ ಒಳ್ಳೆಯವರು ಎಂದು ಹೇಳುತ್ತೇನೆ, ಹಾಗಂದ ಮಾತ್ರಕ್ಕೆ ತಾಯಿಯಲ್ಲ. ಏನೋ ಒಂದು ಮಟ್ಟಿಗೆ ಓಕೆ ಓಕೆ ಎನ್ನುವ ಹಂತದಲ್ಲಿ ಕಾಣಿಸಿದರು. ಒಂದು ವರ್ಷ ಅಷ್ಟೇ ನಾನು ಅವರೊಟ್ಟಿಗೆ ಇದ್ದಿದ್ದು, ಆಮೇಲೆ ಗಂಡನೊಡನೆ ಅವರು ಕೆಲಸ ಮಾಡುತ್ತಿದ್ದ ಊರಿಗೆ ಬಂದೆವು. ಹೀಗಾಗಿ ಅವರೊಡನೆ ಇರುವ ಅವಕಾಶವೇ ಇಲ್ಲದಾಯಿತು. ಅವರೆಂದು ನಮ್ಮೊಡನೇ ಇರಲು ಬರಲೇ ಇಲ್ಲ. ನಮ್ಮೊಡನೆ ಇರುವ ಆಸೆಯೂ ಅವರಲ್ಲಿ ಇಲ್ಲವೇನೋ ಎನ್ನುವಂತೆ ನನಗನಿಸಿತು. ಒಟ್ಟಿನಲ್ಲಿ ಈಗಂತೂ ಅವರು ನಾವು ದೂರ ಇದ್ದೇವೆ. ಸಿಕ್ಕಾಗ ಒಂದು ಮಾತು, ನಾನೇ ಮೊದಲು ಮಾತಾಡಿಸುವೆ,ನಂತರ ಸುಮ್ಮನಾಗುವೆ. ಹಾಗೂ ಹೀಗೂ ಅತ್ತೆ ಸೊಸೆಯ ಬಂಡಿ ಸಾಗಿದೆ. ಒಮ್ಮೆಯೂ ಜಗಳವಾಗಿಲ್ಲ, ಆದರೂ ಏನೋ ಒಂದು ಮೌನ ಆವರಿಸಿದ ಹಾಗೆ, ನಾವು ಫೋನ್ ಮಾಡಲ್ಲ ಅವರಂತೂ ಫೋನ್ ಮಾಡುವ ಸುದ್ದಿಗೆ ಬರಲ್ಲ. ಅವರಷ್ಟಕ್ಕೆ ಅವರೇ ಸುಮ್ಮನಿದ್ದಾರೆ.


ನನ್ನ ಕಲ್ಪನಾಲೋಕದ ಭಾವಿ ಅತ್ತೆಯ ಕೆಲವು ಗುಣಗಳು ಹೊರಗಡೆ ಇಲ್ಲವೆಂದು ಅನಿಸಿದರೂ, ಕೆಲವೊಮ್ಮೆ ನನಗೆ ಗೋಚರಿಸಿವೆ. ಅತ್ತೆಯ ಪಾತ್ರವನ್ನು ನಿಭಾಯಿಸಿದ್ದಾರೆ. ಅತ್ತೆ ಯಾವತ್ತಿದ್ದರೂ ಅತ್ತೆಯೇ.ಆ ಗತ್ತು ಆ ಸ್ಥಾನಕ್ಕೆ ಹೋದಾಗ ಉಚಿತವಾಗಿ ಮೈತುಂಬ ಆವರಿಸುತ್ತದೆಯೇನೋ ನಾ ಕಾಣೆ. ಒಟ್ಟಿನಲ್ಲಿ ಅತ್ತೆ ಅತ್ತೆಯೇ ಎನ್ನುವುದು ಮಾತ್ರ ಸತ್ಯ.


Rate this content
Log in

Similar kannada story from Classics