Shridevi Patil

Classics Inspirational Others

4  

Shridevi Patil

Classics Inspirational Others

ಅವನು ನನ್ನ ಮಗನೇ,ನಾನು ಹೆತ್ತಿಲ್ಲ

ಅವನು ನನ್ನ ಮಗನೇ,ನಾನು ಹೆತ್ತಿಲ್ಲ

2 mins
301


ಅವನು ನನ್ನ ಮಗನೇ, ಆದರೆ ನಾನು ಹೆತ್ತಿಲ್ಲ. ಆದರೂ ಮಗನಿಗಿಂತ ಹೆಚ್ಚು. ನನ್ನ ಮುದ್ದಿನ ಮಗಳಿಗೆ ಪ್ರೀತಿಯ ಅಣ್ಣನೇ ಅವನು. ಅವನು ವಾರದಲ್ಲಿ ಒಮ್ಮೆ ಮನೆಗೆ ಬಾರದೆ ಇದ್ದಲ್ಲಿ ಮನಸ್ಸಿಗೆ ಬಹಳ ಸಂಕಟವಾಗುತ್ತದೆ. ಫೋನ್ ಮಾಡದೆ ಇದ್ದಲ್ಲಿ ಏನೋ ಅಸಮಾಧಾನವಾದಂತೆ ಆಗುತ್ತದೆ. ಯಾಕೋ ಗೊತ್ತಿಲ್ಲ ಅವನು ನನ್ನನ್ನು ಅಷ್ಟೊಂದು ಹಚ್ಚಿಕೊಂಡಿರುವನಾ? ಅಥವಾ ನಾನೇ ಅವನನ್ನು ಅಷ್ಟೊಂದು ಹಚ್ಚಿಕೊಂಡಿರುವೆನಾ? ಏನು ಅಂತ ತಿಳಿಯುತ್ತಿಲ್ಲ.ಆದರೂ ಅವನು ನನ್ನ ಮಗನೇ..


ಹೌದು ಆತ ನನ್ನ ಅಕ್ಕನ ಮಗ. ನನ್ನ ತಂದೆಯ ಅಮ್ಮ ಅಂದ್ರೆ ನನ್ನ ಅಜ್ಜಿಯ ಅಕ್ಕನ ಮಗನ ಮಗಳ ಮಗ. ಸರಳವಾಗಿ ಹೇಳುವುದಾದರೆ ನನ್ನ ದೊಡ್ಡಪ್ಪನ ಮಗಳ ಮಗ. ಮೊದಲಿಗೆ ನಾವು ಸಂಬಂಧಿಕರ ಊರಿಗೆ ಹೆಚ್ಚಾಗಿ ಹೋದವರಲ್ಲ. ಅಪ್ಪ ಚಿಕ್ಕಪ್ಪಂದಿರು ಹೋಗಿಬಂದು ಮಾಡ್ತಿದ್ದರು. ನಮ್ಮದು ಶಾಲೆಗೆ ರಜೆ ಆಗುತ್ತದೆಯೆಂದು ಎಲ್ಲಿಗೆ ಹೋದರೂ ಸಹ ಬಿಟ್ಟು ಹೋಗುತ್ತಿದ್ದುದೇ ಹೆಚ್ಚು.ಹೀಗಾಗಿ ಸಂಬಂಧಿಕರ ನಂಟು ನಮಗೆ ಸ್ವಲ್ಪ ಕಮ್ಮಿ. ನಾನಾದರೂ ಯಾರನ್ನಾದರೂ ಸ್ವಲ್ಪ ಗುರುತಿಸಬಲ್ಲೆ,ಆದರೆ ನನ್ನ ತಂಗಿಯರಿಬ್ಬರು ಸ್ವಲ್ಪ ದೂರವೇ ಇದ್ದಂಗೆ ಬಿಡಿ.


ಹೀಗಿರುವಾಗ ನಾನು ಮದುವೆಯಾದ ಮೇಲೆ ಕೆಲಸದ ನಿಮಿತ್ತ ಯಜಮಾನರೊಂದಿಗೆ ಬಾಗೇವಾಡಿಗೆ ಬಂದಾಗ ಯಾರು ಪರಿಚಯವಿಲ್ಲ. ಹೊಸ ಜಾಗ, ಹೊಸ ಜನ.ಸ್ವಲ್ಪ ಗಾಬರಿ ಜೊತೆಗೆ ಭಯ ಕೂಡ ಆಯ್ತು. ನಮ್ಮವರಿರದ ಆ ಊರಲ್ಲಿ ಇರುವುದು ಹೇಗೆಂದು ಚಿಂತೆಯಾಯ್ತು.


ಹೀಗೆಯೇ ಸ್ವಲ್ಪ ದಿನಗಳು ಕಳೆಯುವುದರೊಳಗೆ ನನ್ನ ಅಕ್ಕನ ಮಗ ಕೂಡ ನಮ್ಮವರು ಕೆಲಸ ಮಾಡುವ ಆಫೀಸಲ್ಲೇ ಕೆಲಸ ದೊರೆತು ಆತನೂ ಬಾಗೇವಾಡಿಗೆ ಬಂದನು. ಮೊದಲು ಆತನಿಗೆ ನಮ್ಮ ಬಗ್ಗೆ ಹೆಚ್ಚಾಗಿ ಏನೂ ಗೊತ್ತಿಲ್ಲ, ಹಾಗೆಯೇ ನಮಗೂ ಕೂಡ ಆತನ ಬಗ್ಗೆ ಏನೂ ಗೊತ್ತಿಲ್ಲ. ಇಬ್ಬರಿಗೂ ನಾವು ಸಂಬಂಧಿಕರು ಎನ್ನುವುದಷ್ಟೆ ಗೊತ್ತು. ಮೊದಮೊದಲು ತುಂಬಾ ಸಂಕೋಚದಿಂದ ಮನೆಗೆ ಹೋಗಿ ಬಂದು ಮಾಡುತ್ತಿದ್ದ. ಹೆಚ್ಚಿಗೆ ಮಾತು ಸಹ ಆಡುತ್ತಿರಲಿಲ್ಲ. ಆಗ ಶ್ರೇಯು ಇನ್ನು ಹುಟ್ಟಿರಲಿಲ್ಲ. ಆತ ಹೆಚ್ಚಾಗಿ ಮನೆಗೆ ಬರುತ್ತಿರಲಿಲ್ಲ. ಬಂದರೂ ಗೆಳೆಯರೊಟ್ಟಿಗೆ ಬಂದು ಹೋಗುತ್ತಿದ್ದ. ವರುಷಗಳು ಉರುಳಿದಂತೆ ಅವನ ನಮ್ಮ ನಡುವಿನ ಬಾಂಧವ್ಯ ಅದೆಷ್ಟು ಗಟ್ಟಿಯಾಗಿ ಬೆಸೆಯಿತೆಂದರೆ ಈಗಂತೂ ಆತನಿಲ್ಲದೆ ನಮ್ಮ ಮನೆಯಲ್ಲಿ ಹಬ್ಬ ಆಗದು, ಮಗಳ ಹುಟ್ಟು ಹಬ್ಬ ಆಗದು, ನಮ್ಮ ಅನಿವರ್ಸರಿ ಆಗದು. ಯಾಕೆಂದರೆ ಆತ ನನ್ನ ಮೊದಲ ಮಗನೇ ಆಗಿಬಿಟ್ಟಿದ್ದಾನೆ. ಶ್ರೇಯಾ ಎರಡನೇ ಮಗಳಾಗಿದ್ದಾಳೆ. ಹೌದು ನನಗೆ ಶ್ರೇಯಾ ಹುಟ್ಟಿದ ಮೇಲೆ ಆರೋಗ್ಯ ಏರುಪೇರಾಗಿ ಇನ್ನೊಂದು ಮಗು ಆಗುವುದಿಲ್ಲ ಎನ್ನುವುದು ಗೊತ್ತಾದಾಗ ಅದೆಷ್ಟು ಬೇಸರಿಸಿಕೊಂಡಿದ್ದೆವೋ ಅದನ್ನೆಲ್ಲ ಈ ನನ್ನ ಮಗ ದೂರ ಮಾಡಿದ್ದಾನೆ. ನನಗೀಗ ಒಬ್ಬಳೇ ಮಗಳು ಎಂದು ಹೇಳಲು ಆಗದಷ್ಟು ಈ ಮಗನನ್ನು ಹಚ್ಚಿಕೊಂಡಿದ್ದೇನೆ. ಈ ಮಗನ ಬಗ್ಗೆ ಎಷ್ಟು ಹೇಳಿದರೂ ಕಮ್ಮಿಯೇ ಬಿಡಿ.


ಈ ನನ್ನ ಮಗನ ಹೆಸರು ಬಸವರಾಜ. ನಾವೆಲ್ಲ ಪ್ರೀತಿಯಿಂದ ಬಸು ಎಂದು ಕರೆಯುತ್ತೇವೆ. ನನಗೆ ಮಗನಿಲ್ಲ ಎಂಬ ಕೊರತೆಯನ್ನು ನೀಗಿಸಿದವನಿಗೆ ನಾನೆಷ್ಟು ಪ್ರೀತಿಯನ್ನು, ಮಮತೆಯನ್ನು ನೀಡಿದರೂ ಕಮ್ಮಿಯೇ. ಆತನಂತೂ ನಮ್ಮಿಬ್ಬರನ್ನ ಆತನ ಅಪ್ಪ ಅಮ್ಮನ ಸ್ಥಾನದಲ್ಲಿಟ್ಟು ಗೌರವಿಸುತ್ತಾನೆ. ಶ್ರೇಯಾ ಮತ್ತೆ ಬಸು ಒಬ್ಬರನ್ನೊಬ್ಬರು ರೇಗಿಸುತ್ತ, ಜಗಳವಾಡುತ್ತ ಇರುವುದನ್ನು ಕಂಡಾಗ ನಿಜವಾಗ್ಲೂ ತುಂಬಾ ಖುಷಿಯಾಗುತ್ತೆ. ಒಬ್ಬಳೇ ಇದ್ದಾಳಲ್ಲ ಎನ್ನುವುದು ಮರೆತು ಹೋಗುತ್ತೆ. "ಬಸು ಅಣ್ಣ ಯಾಕ ಮನೆಗೆ ಬಂದಿಲ್ಲ, ಇವತ್ತ ಬರ್ತಿಯಾ" ಅಂತ ತಂಗಿ ಫೋನ್ ಮಾಡಿ ಕರೆದರೆ, ಅಣ್ಣ ಸಾಯಂಕಾಲ ಬರಲೇಬೇಕು. ಇಲ್ಲವಾದರೆ ಮತ್ತೆ ಫೋನಲ್ಲಿ ಜಗಳ ಶುರು. ಆದರೆ ಶ್ರೇಯಾಳ ಅಣ್ಣ ಜಗಳ ಆಗುವ ಮುನ್ನವೇ ಬಂದಿರುತ್ತಾನೆ. ಆದರೂ ಇಬ್ಬರದೂ ಕೋಳಿಜಗಳ ಇದ್ದೆ ಇರುತ್ತದೆ. ನಮಗಂತೂ ನೋಡಲು ಸಂತಸ.


ಈ ನನ್ನ ಮಗನ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ತನ್ನ ಸ್ವಂತ ತಂದೆ ತಾಯಿಯಂತೆ ನಮ್ಮನ್ನು ಕಾಣುವ ಒಳ್ಳೆಯ ಮನಸ್ಸಿನ ಈ ಮಗನ ಬದುಕು ಯಾವಾಗಲೂ ಸುಖವಾಗಿರಲಿ. ಆತ ಕಂಡ ಕನಸುಗಳೆಲ್ಲ ನನಸಾಗಲಿ. ಜೀವನದ ಎಲ್ಲ ಮೆಟ್ಟಿಲುಗಳನ್ನು ಹತ್ತಿ ಯಶಸ್ಸಿನ ಉತ್ತುಂಗಕ್ಕೆ ಏರಿ ಸಾಧನೆ ಎಂಬ ಕಿರೀಟ ನನ್ನ ಮಗನ ಮುಡಿಯೇರಲಿ. ದೇವರು ಹೆಚ್ಚಿನ ಆಯುಷ್ಯ ಆರೋಗ್ಯ ಕೊಟ್ಟು ಕಾಪಾಡಲಿ. ಜಗತ್ತಿನ ಎಲ್ಲ ಸುಖ ಸಂತೋಷಗಳು ನಿನ್ನದಾಗಲಿ ಬಸು, ಸದಾ ಖುಷಿಯಾಗಿರು.



Rate this content
Log in

Similar kannada story from Classics