Shridevi Patil

Tragedy Crime Others

4.0  

Shridevi Patil

Tragedy Crime Others

ನಗುವಿನ ಗೂಡಲ್ಲಿ ಸ್ಮಶಾನ ಮೌನ

ನಗುವಿನ ಗೂಡಲ್ಲಿ ಸ್ಮಶಾನ ಮೌನ

3 mins
396


ಹತ್ತನೆಯ ತರಗತಿಯಲ್ಲಿ ತುಂಬಾ ಚೆನ್ನಾಗಿ ಅಂಕಗಳನ್ನು ಪಡೆದು ಪ್ರಥಮ ದರ್ಜೆಯಲ್ಲಿ ಪಾಸಾದ ಮಾನಸಾ, ಪಿ.ಯು.ಸಿ ಯಲ್ಲಿ ವಿಜ್ಞಾನ ವಿಭಾಗ ಆಯ್ಕೆ ಮಾಡಿಕೊಂಡು ಕಾಲೇಜು ಮೆಟ್ಟಿಲು ಏರಿದಳು. ಸಹಜವಾಗಿ ಯಾರಿಗೆ ಆದರೂ ಮೊದಲ ದಿನ ಕಾಲೇಜಿಗೆ ಹೋಗುವುದೆಂದರೆ ಎಲ್ಲಿಲ್ಲದ ಉತ್ಸಾಹ,ಏನೋ ಒಂಥರಾ ಖುಷಿ. ಹಾಗೆಯೇ ಮಾನಸಾ ಕೂಡ ಉತ್ಸಾಹ ಹಾಗೂ ಹೊಸ ಆಸೆ ಕನಸುಗಳೊಂದಿಗೆ ಕಾಲೇಜು ಪ್ರವೇಶ ಮಾಡಿದಳು. ಮೊದ ಮೊದಲು ಬಣ್ಣ ಬಣ್ಣದ ಬಟ್ಟೆ ತೊಟ್ಟು ಬರುವ ಗೆಳೆಯ ಗೆಳತಿಯರು, ಅವರ ಬಣ್ಣ ಬಣ್ಣದ ಮಾತುಗಳು, ಕೈಯಲ್ಲಿನ ದುಬಾರಿ ಬೆಲೆಯ ಮೊಬೈಲ್ ಫೋನ್ ಗಳು, ಎಲ್ಲವೂ ಮಾನಸಾಳನ್ನು ಅತೀವವಾಗಿ ಆಕರ್ಷಿಸಿದವು. ಆಕರ್ಷಣೆಗೆ ಒಳಗಾದ ಮಾನಸಾ ಮನೆಯಲ್ಲಿ ಮೊದಲು ಮೊಬೈಲ್ ಗಾಗಿ ಬೇಡಿಕೆ ಇಟ್ಟಳು. ಮಾನಸಾಳಿಗೆ ಫೋನ್ ಕೊಡಿಸುವುದು ಆಕೆಯ ತಂದೆಗೆ ಒಂಚೂರು ಇಷ್ಟವಿರಲಿಲ್ಲ. ಪ್ರಾಥಮಿಕ ಶಾಲೆಯ ಸಹ ಶಿಕ್ಷಕರಾಗಿದ್ದ ಅವರು ತುಂಬಾ ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದವರಾಗಿದ್ದರು. ಇಂತಹ ಫಾಸ್ಟ್ ಫಾರ್ವಾರ್ಡ್ ಕಾಲದಲ್ಲಿಯೂ ಮನೆಯ ಲ್ಯಾಂಡ್ ಫೋನೆ ಸಾಕೆಂದುಕೊಂಡು ಒಂದು ಸಾಧಾರಣ ಹ್ಯಾಂಡ್ ಸೆಟ್ ನ್ನು ತೆಗೆದುಕೊಳ್ಳದೆ, ತುಂಬಾ ಸರಳ ಜೀವನ ನಡೆಸುತ್ತಿದ್ದರು.ಬರುವ ಆ ಚಿಕ್ಕ ಪಗಾರದಲ್ಲಿ ಹೆಂಡತಿ ಭಾಗ್ಯ, ಮಗಳು ಮಾನಸಾಳೊಂದಿಗೆ ಸುಖವಾಗಿದ್ದರು.


ಮಗಳೆಂದರೆ ಎಲ್ಲಿಲ್ಲದ ಪ್ರೀತಿ, ಮಮತೆ. ಮದುವೆಯಾಗಿ ತುಂಬಾ ವರುಷಗಳ ನಂತರ ಹುಟ್ಟಿದವಳು ಈ ಮಾನಸಾ. ಒಂದು ಪೆಟ್ಟು ಹಾಕದೇ, ಪೆಟ್ಟಿರಲಿ ಒಮ್ಮೆಯೂ ಜೋರಾಗಿ ಗದರಿಸಿದೆ ತುಂಬಾ ಪ್ರೀತಿಯಿಂದ ಬೆಳೆಸಿದ್ದರು. ಅವಳು ಕೂಡ ಅಪ್ಪ ಅಮ್ಮನ ಮುದ್ದಿನಲ್ಲಿ ಮುದ್ದಿನ ಮಗಳಾಗಿ, ಅಕ್ಕರೆಯ ಕೂಸಾಗಿ ಎಲ್ಲರಿಗೂ ಬೇಕಾದವಳಾಗಿ ಬೆಳೆದಳು.



ಈ ರೀತಿ ಬೆಳೆದ ಮಗಳು ಕಾಲೇಜಿಗೆ ಹೋರಾಟ ಕೆಲ ದಿನಗಳಲ್ಲಿಯೇ ಅಪ್ಪನೊಂದಿಗೆ ಫೋನಿಗಾಗಿ ಜಗಳ ತೆಗೆದಿದ್ದಳು. ಯಾವಾಗಲೂ ಹೀಗೆ ಮಾಡದ ಆಕೆ ಈ ಬಾರಿ ಮಾತ್ರ ತುಂಬಾ ಹಠ ಮಾಡಿದ್ದಳು. ಎಷ್ಟು ಬೇಡವೆಂದರೂ, ಕೊನೆಗೆ ಮಗಳ ಮೇಲಿನ ಪ್ರೀತಿಗೆ ಸೋತ ಮೇಷ್ಟು ಮಗಳಿಗಾಗಿ ಒಂದು ಫೋನ್ ಕೊಡಿಸಿಯೇ ಬಿಟ್ಟರು. ಮಾನಸಾ ಈಗ ಖುಷಿಯಲ್ಲಿ ತೇಲಿದ್ದಳು. ಈಗಂತೂ ಸದಾ ಫೋನಿನಲ್ಲಿಯೇ ಮಗ್ನಳಾದಂತೆ ಮಾನಸ, ಕೈಯಿಂದ ಫೋನನ್ನು ಕೆಳಗಿಳಿಸದೆ ಅದಕ್ಕೆ ಅಂಟಿಕೊಂಡಂತೆಯೇ ಇರುತ್ತಿದ್ದಳು. ಅದರ ಪರಿಣಾಮ ಅವಳ ಫಲಿತಾಂಶದ ಮೇಲೆ ಬರೆ ಕೊಟ್ಟಿತ್ತು. ಯಾವಾಗಲೂ ಫಸ್ಟ್ ರ್ಯಾಂಕ್ ಹುಡುಗಿಯಾಗಿರುತ್ತಿದ್ದವಳು ಪ್ರಥಮ ಪಿ. ಯೂ. ಸಿ ಪರೀಕ್ಷೆಯಲ್ಲೇ ಫೇಲಾಗಿದ್ದಳು. ಇದನ್ನು ನೋಡಿದ ಅವಳ ಅಪ್ಪ ಅಮ್ಮ ತುಂಬಾ ಸಂಕಟ ಪಟ್ಟರು. ಮತ್ತೆ ಮೊದಲಿನಂತೆ ಓದಮ್ಮ ಎಂದು ಬುದ್ಧಿ ಹೇಳಿದರು. ಹೊಡೆದು ಬೈಯ್ದು ಮಾಡಿದರೆ ಮಗಳೇನಾದರೂ ಮಾಡಿಕೊಂಡಾಳೆಂಬ ಭಯ ಬೇರೆ.ಮೊದಲೇ ಒಬ್ಬಳೇ ಮಗಳು. ಹೀಗಾಗಿ ಬೈಯದೆ ಸಮಾಧಾನದಿ ಬುದ್ಧಿ ಹೇಳಿ ಮತ್ತೆ ಪರೀಕ್ಷೆ ಬರೆಯುವಂತೆ ಹೇಳಿದರು.


ಆದರೆ, ಅವಳ ಗೆಳೆಯ ಗೆಳತಿಯರ ಹಿಂಡು ಹೇಗಿತ್ತೆಂದರೆ,ಆಕೆ ಅವರನ್ನು ಬಿಡಬೇಕೆಂದರೂ ಅವರು ಬಿಡಲಾರರು ಎನ್ನುವಂತಿತ್ತು. ಮಾನಸಾ ಅವರೊಂದಿಗೆ ತನ್ನ ಅಪ್ಪ ಅಮ್ಮನ ಕಾಳಜಿ, ಪ್ರೀತಿ, ಜೊತೆಗೆ ತನ್ನ ಓದನ್ನು ಪಕ್ಕಕ್ಕಿಟ್ಟಳು. ಇದೆಲ್ಲದರ ಮಧ್ಯೆ ರಾಹುಲ್ ಎಂಬ ಹುಡುಗನ ಪ್ರೇಮತೆಕ್ಕೆಯಲ್ಲಿ ಬಿದ್ದಳು. ಮನೆಯಲ್ಲಿ ಗೊತ್ತಾಗದಂತೆ ಅವನ ಸಂಗಡ ಊರೂರು ಸುತ್ತುತ್ತ, ದಾರಿ ತಪ್ಪಿದ ಮಗಳಾದಳು. ಊರೂರು ಸುತ್ತುತ್ತ ಹೊಟ್ಟೆಯನ್ನು ತುಂಬಿಸಿಕೊಂಡು ಬಂದಳು ಇದು ಗೊತ್ತಾಗುವಷ್ಟರಲ್ಲಿ ಅಬಾರ್ಷನ್ ಮಾಡಿಸಲೂ ಬಾರದಷ್ಟು ಸಮಯ ಮಿಂಚಿ ಹೋಗಿತ್ತು.


ಮಾನಸಾ, ರಾಹುಲ್ ಹತ್ತಿರ ಹೋಗಿ ಇರುವ ವಿಷ್ಯವನ್ನು ಹೇಳಿ,ಮದುವೆ ಮಾಡಿಕೊಳ್ಳೋಣವಾ ಎಂದು ಕೇಳಿದರೆ, ಆತ ಈಕೆ ಯಾರು ಗೊತ್ತೇ ಇಲ್ಲವೇನೋ ಎಂಬಂತೆ ಮಾತಾಡಿ,ವಾಪಸ್ ಕಳಿಸಿದ್ದಾನೆ.


ಮತ್ತೆರಡು ದಿನ ಬಿಟ್ಟು ಮತ್ತೆ ಮಾನಸಾ ರಾಹುಲ್ ಹತ್ತಿರ ಹೋಗಿ ಮತ್ತೆ ಗೋಗರಿದ್ದಾಳೆ, ಆದರೂ ಆತ ಈಕೆಯನ್ನು ತಿರಸ್ಕರಿಸಿ ಅದೇ ಕಾಲೇಜಿನ ನಿಶಾ ಎನ್ನುವವಳೊಂದಿಗೆ ಹೋಗಿದ್ದನ್ನು ಕಂಡ ಮಾನಸಾ ಮನೆಗೆ ಬಂದು ಅಳುತ್ತಾ ಬಾಗಿಲು ಮುಚ್ಚಿಕೊಂಡಿದ್ದಾಳೆ. ಇಡೀ ದಿನ ಮುಚ್ಚಿದ ಬಾಗಿಲು ಮುಚ್ಚಿದಂತೆಯೇ ಇದೆ. ಅಮ್ಮ ಎಷ್ಟೇ ಕರೆದರೂ ಊಟಕ್ಕೂ ಬಂದಿಲ್ಲ. ಬಾಗಿಲು ಕೂಡಾ ತೆಗೆದಿಲ್ಲ. ಇರಲಿಬಿಡು ಗೆಳತಿಯರೊಂದಿಗೆ ಏನಾದರೂ ಗಲಾಟೆ ಮಾಡಿಕೊಂಡಿರಬೇಕು, ಇಲ್ಲ ಮೊನ್ನೆ ನಡೆದ ಟೆಸ್ಟ್ ನಲ್ಲಿ ಕಡಿಮೆ ಅಂಕ ಬಂದಿರಬೇಕೆಂದು ಅವಳ ಅಮ್ಮ ಊಟ ಮಾಡಿ ಮಲಗಿದಳು. ಮಕ್ಕಳ ಕಲಿಕಾ ತರಬೇತಿಗೆ ಬೆಂಗಳೂರಿಗೆ ಹೋಗಿದ್ದ ಮಾನಸಾ ಅಪ್ಪ ಲೇಟಾಗಿ ಬಂದು, ಸುಸ್ತಾಗಿದ್ದರಿಂದ ಸ್ವಲ್ಪ ಊಟ ಮಾಡಿ, ಮಗಳ ಬಗ್ಗೆ ಕೇಳುತ್ತ ಮಲಗಿಯೇಬಿಟ್ಟರು. ಬೆಳಿಗ್ಗೆ ಹತ್ತು ಗಂಟೆಯಾದರೂ, ಮಗಳ ರೂಮಿನ ಬಾಗಿಲು ತೆಗೆಯದಿದ್ದರಿಂದ ಭಾಗ್ಯಾ ಏನೇ,ನಮ್ಮ ಪಾಪು ಇನ್ನೂ ಎದ್ದೇ ಇಲ್ವಾ,ಗಂಟೆ ಹತ್ತಾಯ್ತು, ಕಾಲೇಜಿಗೆ ಹೋಗಲ್ವಂತಾ ಎಂದು ಕೇಳಿದರು.



ಆಗ ಭಾಗ್ಯ ಏನೋ ಗೊತ್ತಿಲ್ರಿ, ನಿನ್ನೆ ಊಟಕ್ಕೂ ರೂಮಿನಿಂದ ಆಚೆ ಬರಲಿಲ್ಲ ನಿಮ್ಮ ಮಗಳು. ಮುಚ್ಚಿದ ಬಾಗಿಲನ್ನು ಸಹ ತೆಗೆದಿಲ್ಲ. ಕರೆದು ಕರೆದು ಸಾಕಾಗಿ ಹಸಿವಾದರೆ ತಾನೇ ಬಂದು ತಿಂತಾಳೆ ಅಂತ ಅನ್ಕೊಂಡು ನಾನು ಊಟ ಮಾಡಿ ಮಲಗಿದೆ. ಆದ್ರೆ,ಅವಳು ಊಟಕ್ಕೂ ಏಳಲಿಲ್ಲ ಈಗಲೂ ಬಾಗಿಲು ತೆಗೆದಿಲ್ಲ ನೀವೇ ಅವಳನ್ನ ಎಬ್ಬಸ್ರಿ, ನಾನು ರೊಟ್ಟಿ ಮಾಡ್ತೀನಿ ಇಬ್ಬರೂ ಊಟ ಮಾಡುವಿರಂತೆ ಎನ್ನುತ್ತಾ ಭಾಗ್ಯ ಅಡುಗೆ ಮನೆಯತ್ತ ಹೆಜ್ಜೆ ಹಾಕಿದಳು.


ಒಮ್ಮೆಲೇ ಮೇಷ್ಟ್ರ ಭಯಾನಕ ಅರುಚಿದ ಧ್ವನಿ ಕೇಳಿದ ಭಾಗ್ಯ ಗಾಬರಿಯಿಂದ ಓಡಿ ಬಂದು ನೋಡಿದರೆ, ಮೇಷ್ಟ್ರು ಕೆಳಗಡೆ ಬಿದ್ದಿದ್ದಾರೆ. ನೋಡಿದರೆ ಉಸಿರೆ ಆಡುತ್ತಿಲ್ಲ.ಮುಂದೆ ನೋಡಿದರೆ ಮಗಳು ಹಗ್ಗದಲ್ಲಿ ಅಲುಗಾಡುತ್ತಿದ್ದಾಳೆ.ಅಲ್ಲೂ ಉಸಿರು ನಿಂತಿದೆ ಇಲ್ಲೂ ಉಸಿರು ನಿಂತಿದೆ. ಪಾಪಾ ಭಾಗ್ಯಾಳ ಪರಿಸ್ಥಿತಿ ಯಾರಿಗೂ ಬೇಡ.


ಮಾನಸಾ ಹಿಂದಿನ ದಿನ ಸಾಯಂಕಾಲ ಮನೆಗೆ ಬಂದವಳೇ ರೂಮಿಗೆ ಹೋಗಿ ಬಾಗಿಲು ಮುಚ್ಚಿಕೊಂಡವಳೇ ನೇಣಿಗೆ ತಲೆ ಕೊಟ್ಟಿದ್ದಳು. ಮಗಳ ಅವಸ್ಥೆ ಕಂಡ ಅಪ್ಪ ಹೃದಯಾಘಾತದಿಂದ ಜೀವ ಬಿಟ್ಟಿದ್ದರು. ಇದನ್ನೆಲ್ಲ ಕಂಡ ಭಾಗ್ಯ ಹುಚ್ಚಿಯಾದಳು. ಮಗಳು ಮತ್ತೆ ಗಂಡನನ್ನು ಕಳೆದುಕೊಂಡು ಭಾಗ್ಯ ಈಗ ಹುಚ್ಚಾಸ್ಪತ್ರೆಯಲ್ಲಿ ನನ್ನ ಗಂಡ ಮಗಳು ಊರಿಗೆ ಹೋಗಿದಾರೆ, ನಾಳೆ ಬರ್ತಾರೆ,ನಾಡಿದ್ದು ಬರ್ತಾರೆ ಅಂತ ತಲೆ ಕೆರೆದುಕೊಳ್ಳುತ್ತ ಚಿಕಿತ್ಸೆ ಪಡೆಯುತ್ತಿದ್ದಾಳೆ.


ಸದಾ ನಗುವಿನ ಗೂಡಾಗಿದ್ದ ಮಾನಸಾ ಮನೆ ಅಂದಿನಿಂದ ಮುಚ್ಚಿದ ಬಾಗಿಲು ತೆಗೆಯದೇ, ಸ್ಮಶಾನ ಮೌನದಲ್ಲಿ ಪಾಳು ಬಿದ್ದಿದೆ.



Rate this content
Log in

Similar kannada story from Tragedy