ದೀಪಾವಳಿಯ ಖುಷಿ ಭಾಗ 2
ದೀಪಾವಳಿಯ ಖುಷಿ ಭಾಗ 2
ದೀಪಾವಳಿ ಅಂದು ಇಂದು
ಇಂದಿನ ದೀಪಾವಳಿ
ಅಂದಿನ ದೀಪಾವಳಿ ಅದೆಷ್ಟು ಜೋರಾಗುತ್ತಿತ್ತೋ ಅಷ್ಟೇ ಜೋರಾಗಿಯೇ ಇವತ್ತು ಕೂಡ ಆಗುತ್ತೆ. ಅಂದಿನ ದೀಪಾವಳಿಯ ಹಬ್ಬದ ವಿಶೇಷ ಅಡುಗೆ ತಿನಿಸುಗಳು ಏನೆನಿದ್ದವೋ ಆ ಎಲ್ಲ ಅಡುಗೆಗಳ ಜೊತೆಗೆ ಇನ್ನಷ್ಟು ಹೊಸಬಗೆಯ ತಿನಿಸುಗಳು ಇವೆ, ಆದರೆ ಜನ ಮಾತ್ರ ಬೆರಳೆಣಿಕೆಗಿಂತಲೂ ಕಮ್ಮಿ. ನಾನು, ನಮ್ಮೆಜಮಾನರು, ಮತ್ತೆ ಮಗಳು ಅಷ್ಟೇ. ಹೀಗಾಗಿ ಮನೆಯಲ್ಲಿ ದೀಪಾವಳಿ ಹಬ್ಬದ ಸಡಗರವಿರುತ್ತೆ ಆದರೆ ಅಂದಿನ ಹಾಗೆ ದೀಪಾವಳಿ ಹಬ್ಬದ ಗದ್ದಲವಿರುವುದಿಲ್ಲ.
ಆಗೆಲ್ಲ ಬಟ್ಟೆ ತರುತ್ತಾರೋ ಇಲ್ಲವೋ ಎಂದು ಕಾಯುತ್ತಿದ್ದ ನಾನು ಈಗ ವಾರ ಮುಂಚೆಯೇ ಹೋಗಿ ನಮ್ಮೂವರಿಗೂ ಬಟ್ಟೆ ತೆಗೆದುಕೊಂಡು ಬಂದಿರುತ್ತೇನೆ.
ನೀರು ತುಂಬುವ ಹಬ್ಬದಂದು ಬಚ್ಚಲು ಮನೆ ತೊಳೆದು ಬಕೆಟಗಳನ್ನು ತೊಳೆದು ಅಂದಿನ ಹಾಗೆಯೇ ಇಂದು ಸಹ ಸುಣ್ಣದ ನೀರಿನಿಂದ ಚಿತ್ತಾರ ಬಿಡಿಸಿ ನೀರಿನ ನಲ್ಲಿಯನ್ನು ಪೂಜೆ ಮಾಡಿ ನೀರು ತುಂಬಿಸಿಡುತ್ತೇನೆ. ನರಕಚತುರ್ದಶಿಯ ದಿನ(ಇದಕ್ಕೆ ನಾವು ಬೋರೆ ಹಬ್ಬ ಎಂದೂ ಹೇಳುತ್ತೇವೆ) ಬೇಗ ಎದ್ದು ಬಾಗಿಲು ತೊಳೆದು ರಂಗೋಲಿ ಹಾಕಿ, ಹೊಸಿಲಿನ ಪೂಜೆ ಮಾಡಿ, ಬಾಗಿಲಿಗೆ ಎರಡು ದೀಪ ಹಚ್ಚಿಟ್ಟು ನಮಸ್ಕರಿಸಿ ಒಳಬಂದು ಮೊದಲು ಎಣ್ಣೆ ಬಿಸಿಮಾಡಿ ಅಪ್ಪ ಮಗಳಿಗೆ ಎಣ್ಣೆ ಹಚ್ಚಿ ಸುಡುಸುಡು ನೀರು ಹಾಕಿ ಇಬ್ಬರಿಗೂ ಆರತಿ ಮಾಡುವುದು.
ನಂತರ ನಮ್ಮ ಕಡೆ ಇಂದಿನ ದಿನ ಹಿರಿಯರ ಹಬ್ಬ ಎಂದು ಮಾಡುತ್ತಾರೆ.(ತೀರಿಕೊಂಡವರಿಗೆ ಪೂಜೆ ಮಾಡಿ ಲೋಬಾನ ಹಾಕಿ, ಎಡೆ ಇಡುವ ಪದ್ದತಿ)
ನನ್ನ ಅತ್ತೆ ಮಾವನವರಿಗೆ ಅಂದು ಪೂಜೆ ಮಾಡಿ, ಅವರ ಹೆಸರಿನ ಮೇಲೆ ಎರಡು ಚಿಕ್ಕ ಕೊಡ ಅಥವಾ ತಂಬಿಗೆ ತುಂಬಿಟ್ಟು, ಅವರ ಹೆಸರಿನಲ್ಲಿ ಹೊಸಬಟ್ಟೆ ಇಟ್ಟು, ಲೋಬಾನ ಹಾಕಿ ನಂತರ ಎಡೆ ಇಟ್ಟು ಪೂಜೆ ಮಾಡಿದರೆ ಆ ದಿನದ ಹಬ್ಬ ಮುಗಿದಂತೆ.
ಇನ್ನು ಎರಡನೇ ದಿನ ಅಮಾವಾಸ್ಯೆ ಇರುತ್ತದೆ. ಮನೆಯಲ್ಲಿ ಲಕ್ಷ್ಮಿ ಪೂಜೆ ಹಾಗೂ ಬೈಕ್ ಪೂಜೆ ಜೊತೆಗೆ ಮಗಳ ಸೈಕಲ್ ಪೂಜೆ ಮಾಡುವುದು. ನಮ್ಮೆಜಮಾನರು ಬೈಕ್ ತಿಕ್ಕಿ ತಿಕ್ಕಿ ತೊಳೆಯುತ್ತಿದ್ದರೆ ಅವರಂತೆಯೇ ಮಗಳು ಕೂಡ ತನ್ನ ಸೈಕಲನ್ನು ತಿಕ್ಕಿದ್ದೇ ತಿಕ್ಕಿದ್ದು, ತೊಳೆದದ್ದೇ ತೊಳೆದದ್ದು. ಆಮೇಲೆ ಅವಳೇ ಪೂಜೆ ಮಾಡುವುದು. ಒಟ್ಟಿನಲ್ಲಿ ಅಮವಾಸ್ಯೆಯಂದು ಖುಷಿಯಿಂದ ಸಡಗರದಿಂದ ಮಾಡುತ್ತೇವೆ.
ಇನ್ನು ಮೂರನೆಯ ದಿನ ಬಲಿ ಪಾಡ್ಯ. ಈಗಂತೂ ದನಕರುಗಳು ಕಮ್ಮಿಯಾಗುತ್ತಿವೆ. ಹಳ್ಳಿಯಲ್ಲಿ ಹೆಚ್ಚಿದ್ದರೂ ಕೂಡ ಕೆಲಸದ ನಿಮಿತ್ಯ ನಗರಗಳಿಗೆ ವಲಸೆ ಹೋಗಿರುವವರಿಗೆ ಪೂಜೆ ಮಾಡಲು ಸಹ ಶಗಣಿಯನ್ನು ದುಡ್ಡು ಕೊಟ್ಟೆ ತರಬೇಕಾದ ಅನಿವಾರ್ಯತೆ ಇರುತ್ತದೆ. ಇಲ್ಲವಾದಲ್ಲಿ ಆ ದಿನದ ಹಬ್ಬವನ್ನು ಲಕ್ಷ್ಮಿ ಪೂಜೆ ಮಾಡುವ ಮೂಲಕ ಸಮಾಪ್ತಿ ಮಾಡಬೇಕಾಗುತ್ತದೆ. ನಮಗೆ ನಮ್ಮ ಮಾಲಕರ ಮನೆಯಲ್ಲಿ ಪೂಜೆಗೆಂದು ಸ್ವಲ್ಪ ಹಸುವಿನ ಶಗಣಿಯನ್ನು ಕೊಡುವುದರಿಂದ ಪೂಜೆ ಮಾಡಿ ಸಂಭ್ರಮಿಸುತ್ತೇವೆ. ಎಲ್ಲ ಮುಗಿಸಿ ಸಾಯಂಕಾಲ ಮುತ್ತೈದೆಯರನ್ನು ಕರೆದು ಅರಿಶಿನ ಕುಂಕುಮ ಕೊಟ್ಟು ಕಳುಹಿಸಿ, ಕೊನೆಯದಾಗಿ ಉಳಿದೆಲ್ಲ ಪಟಾಕಿಯನ್ನು ಹೊಡೆದು ಮುಗಿಸಿ, ಬಳಿಕ ಊಟ ಮಾಡಿದರೆ ಆ ದಿನದ ಹಬ್ಬವೂ ಮುಗಿದಂತೆ.
ಹಬ್ಬದ ಮರುದಿನ ನಡುಮನೆಯಲ್ಲಿ ಕೂರಿಸಿದ ಲಕ್ಷ್ಮಿಯನ್ನು ಇಳಿಸಿ, ಲಕ್ಷ್ಮಿಗೆ ಉಡುಸಿದ ಆ ಹೊಸಸೀರೆಯನ್ನು ಮಗಳಿಗೆ ಉಡಿಸಿಯೋ, ಅಥವಾ ನಾನೇ ಉಟ್ಟೋ ಎತ್ತಿಡುವುದರ ಮೂಲಕ ನಾವು ದೀಪಾವಳಿಯನ್ನು ಮುಗಿಸುತ್ತೇವೆ.
ಇಂದಿನ ದೀಪಾವಳಿ ನನಗಂತೂ ಹಬ್ಬವೇ ಅನ್ನಿಸುವುದಿಲ್ಲ. ಮಕ್ಕಳು ಸಹ ಟಿವಿಯ ಕಾರ್ಯಕ್ರಮ ನೋಡುತ್ತಲೋ ಅಥವಾ ಮೊಬೈಲ್ನಲ್ಲಿ ಮತ್ತೇನನ್ನೋ ನೋಡುತ್ತಲೋ ಕಾಲ ಕಳೆದರೆ, ನಾವು ಅಡಿಗೆ ಮಾಡುವುದರಲ್ಲೊ ಅಥವಾ ಆಡಂಬರ ತೋರಿಸುವುದರಲ್ಲೊ ಸಮಯ ಹೋಗಿರುತ್ತದೆ. ಅಂದು ಕೇರಿಯವರೆಲ್ಲ ಸೇರಿ ಬಲಿಪಾಡ್ಯದಂದು ಎಲ್ಲರ ಮನೆಗೆ ತೆರಳಿ ಹಾಡುಹೇಳಿ ಮಾಡುತ್ತಿದ್ದ ಪೂಜೆ ಇಂದು ಕನಸಾಗಿದೆ, ಕೂಡಿ ನಲಿಯುತ್ತಿದ್ದ ಸಮಯ ಮುಗಿದಿದೆ, ಕೇಕೆ ಹರಟೆಯ ಧ್ವನಿ ಸಣ್ಣದಾಗಿದೆ, ನಾನು ನನ್ನದು ಎನ್ನುವ ಮನೋಭಾವ ಎಲ್ಲರಲ್ಲೂ ಬೇರೂರಿದೆ.ಹೀಗಾಗಿ ಈಗಿನ ಹಬ್ಬದ ಖುಷಿ ಅಂದಿನಂತಿಲ್ಲ.
