ಅವಳ ಸ್ವಾತಂತ್ರ್ಯ
ಅವಳ ಸ್ವಾತಂತ್ರ್ಯ


ರೀ ಈ ಶನಿವಾರ ಮಕ್ಕಳ ಸ್ಕೂಲ್ ನಲ್ಲಿ ಮೀಟಿಂಗ್ ಇದ್ಯಂತೆ..ನೀವು ಹೋಗ್ತೀರಾ ಅಲ್ವಾ..?
ಇಲ್ಲ ಪರಿ ಈ ವೀಕ್ ಪ್ರೆಂಡ್ಸ್ ಎಲ್ಲಾ ಗೆಟ್ ಟುಗೆದರ್ ಪ್ಲಾನ್ ಮಾಡಿದರೆ..ಮಿಸ್ ಮಾಡ್ಕೊಳೊ ಹಾಗ್ ಇಲ್ಲ..ನೀನೆ ಅಟೆಂಡ್ ಮಾಡು.. ಜೊತೆಗೆ ಒಂದಿಷ್ಟು ಪೇಮೆಂಟ್ ಇದೆ ದುಡ್ಡು ಕೊಡ್ತೀನಿ ಮಾಡಿ ಬಾ..
ನಾನು ಅಟೆಂಡ್ ಮಾಡಕ್ಕೆ ರೆಡಿ..ನೀವು ಹೇಳಿದ ಕೆಲಸ ಮಾಡೋಕೆ ರೆಡಿ ಇದೀನಿ.. ಆದ್ರೆ ಅತ್ತೆನ ಒಪ್ಪಿಸೋದು ಕಷ್ಟ..ನೀವೇ ಒಂದು ಮಾತು ಹೇಳ್ಬಿಡಿ..
ಓಕೆ ರಾತ್ರಿ ಊಟಕ್ಕೆ ಕೂತಾಗ ಹೇಳ್ತೀನಿ ಎಂದು ದಿನಕರ್ ತನ್ನ ಕೆಲಸದಲ್ಲಿ ತೊಡಗಿದ
ರಾತ್ರಿ ಊಟದ ವೇಳೆಯಲ್ಲಿ " ಅಮ್ಮ ಶನಿವಾರ ಶಾಲೆಯಲ್ಲಿ ಮೀಟಿಂಗಿದೆ.ಜೊತೆಗೆ ಒಂದಿಷ್ಟು ಪೇಮೆಂಟ್ ಮಾಡ್ಬೇಕು..ಪರಿ ಹೋಗ್ತಿದ್ದಾಳೆ.. ನಂಗೆ ಬೇರೆ ಒಂದು ಸ್ವಲ್ಪ ಕೆಲಸ ಇದೆ"
"ಮಕ್ಕಳ ಶಾಲೆಗಿಂತ ನಿನಗಿಂತ ಕೆಲಸ. ಅವಳೇನು ಹೋಗೋ ಅವಶ್ಯಕತೆ ಇಲ್ಲ ಅಲ್ ಏನ್ ಹೇಳ್ತಾರೆ ಅಂತ ಅವಳಿಗೆ ಏನು ಗೊತ್ತಾಗುತ್ತೆ ನೀನೆ ಹೋಗು ಅದೇನು ಅಂತ ನೋಡು..
"ಅಮ್ಮ ಪರಿ ಏನು ಓದಿದವಳಲ್ವಾ?ಅವಳದ್ದು ಡಿಗ್ರಿ ಆಗಿದೆ..ಇದನ್ನೆಲ್ಲಾ ಅವಳು ಆರಾಮ್ ಆಗಿ ಮ್ಯಾನೇಜ್ ಮಾಡಬಹುದು"
"ಅವಳು ಓದಿದವಳೇ.. ನಾನು ಇಲ್ಲ ಅಂತ ಹೇಳಿಲ್ಲ..ಏನು ಮಾಡೋದು ಆದರೆ ನಮ್ಮನೆತನದಲ್ಲಿ ಯಾವ ಹೆಣ್ಣು ಮಕ್ಕಳು ಈ ರೀತಿಯಾಗಿ ಹೊರಗಿನ ವ್ಯವಹಾರಕ್ಕೆ ತಲೆ ಹಾಕಿಲ್ಲ ಅವಳು ಹಾಕೋದು ಬೇಡ"
"ಯಾಕಮ್ಮ ಸುಳ್ಳು ಹೇಳ್ತೀಯಾ? ಅಪ್ಪ ಹೋದ್ಮೇಲೆ ನೀನೇ ತಾನೇ ತೋಟಗದ್ದೆ ವ್ಯವಹಾರ ನೋಡಿಕೊಂಡು ನಮ್ಮನ್ನೆಲ್ಲ ಓದಿಸಿರೋದು.. ಈಗ ಅವಳು ಹೋಗೋದ್ರಲ್ಲಿ ತಪ್ಪೇನಿದೆ?
"ನನಗೆ ಆಗ ಅನಿವಾರ್ಯತೆ ಇತ್ತು ಮಾಡಿದ್ದೆ..ಈಗ ಪರಿಣಿತ ಗೆ ಏನಂತ ಅನಿವಾರ್ಯತೆ ಇರೋದು? ಗಂಡ ಅಂತ ಅನ್ನಿಸಿಕೊಂಡವನು, ನೀನ್ ಇಲ್ವಾ? ನಾನು ಗಂಡು ದಿಕ್ಕಿಲ್ಲದೆ ನಿಭಾಯಿಸಬೇಕಾಯಿತು.. ಆದರೆ ಈ ಮನೆಗೆ ನೀನು ಇದ್ಯಲ್ಲ..
"ಅಂದ್ರೆ ನಿನ್ ಮಾತಿನ ಅರ್ಥ ಗಂಡು ದಿಕ್ಕಿಲ್ಲದಿದ್ದರೆ ಮಾತ್ರ
ಹೆಣ್ಣು ಹೊರಗಿನ ಜವಾಬ್ದಾರಿಯನ್ನು ಹೊರಬೇಕಾ?"
"ಹೌದು ಮತ್ತೆ ಗಂಡು ಹೊರಗೆ ದುಡಿಬೇಕು ಹೆಣ್ಣು ಒಳಗೆ ದುಡಿಬೇಕು ಆಗಲೇ ಸಂಸಾರದಲ್ಲಿ ನೆಮ್ಮದಿ ಇರುತ್ತದೆ..
"ಅದು ಹಾಗಲ್ಲ ಅಮ್ಮ ಎರಡು ಕೈ ಸೇರಿದರೆ ಚಪ್ಪಾಳೆ ಎಂಬ ಅರ್ಥದಲ್ಲಿ ಹಿಂದಿನವರು ಈ ರೀತಿಯಾಗಿ ಅದನ್ನು ಬಿಂಬಿಸಿದ್ದರು.. ಗಂಡು ಮನೆಯ ಹೊರಗೆ ದುಡಿದರೆ ಹೆಣ್ಣು ಒಳಗೆ ದುಡಿದಾಗ ಸಂಸಾರದ ಸಮತೋಲನ ಸಾಧ್ಯ ಎನ್ನುವುದು ಅವರ ಅಭಿಪ್ರಾಯ ಆಗಿತ್ತು. ಈಗ ಕಾಲ ಬದಲಾಗಿದೆ ಗಂಡು ಒಬ್ಬನೇ ಹೊರಗೆ ದುಡಿದರೆ ಜೀವನ ನಡೆಸುವುದು ಕಷ್ಟ ಹೆಣ್ಣೂ ಕೂಡ ಅವನೊಂದಿಗೆ ಕೈಜೋಡಿಸಿದರೆ ಸುಖವಾಗಿ ಬಾಳಬಹುದು..ಮನೆ ಒಳಗಿನ ಕೆಲಸದಲ್ಲಿ ಗಂಡು ಸಹಾಯ ಮಾಡಿದರೆ ಹೆಣ್ಣಿಗೂ ಹೆಚ್ಚು ಒತ್ತಡ ಇರೋಲ್ಲ ಅಲ್ವಾ..??"
"ಅದೆಲ್ಲ ನಂಗೊತ್ತಿಲ್ಲ ನಮ್ಮತ್ತೆನು ನನ್ ಗಂಡ ಇರುವಷ್ಟು ದಿವಸ ನನಗೆ ಯಾವ ನಿರ್ಧಾರವನ್ನು ತಗೊಳ್ಳೋಕೆ ಬಿಡ್ತಿರಲಿಲ್ಲ.. ಮನೆಯ ಎಲ್ಲಾ ಜವಾಬ್ದಾರಿ ಅವರದ್ದೇ ಆಗಿತ್ತು... ಈಗ ನನ್ನ ಸರದಿ ಮನೆಯ ಹಿರಿಯಳು ಎಂದು ನಾನಿರುವಾಗ ನಾನು ಹೇಳಿದಂತೆ ನಡೆಯಬೇಕು ಅಷ್ಟೇ.."
"ಇದೇ ನಿನ್ ಮಾಡ್ತಿರೋ ತಪ್ಪು. ನಿನ್ನ ಅತ್ತೆ ನಿನ್ನನ್ನ ಹೇಗೆ ನೋಡಿಕೊಂಡ್ರು ಅಂತ ನಿನಗೆ ಗೊತ್ತು..ನೀನು ಎಷ್ಟು ನೋವು ಅನುಭವಿಸಿದ್ದಿ ಅಂತ ನಿನಗೆ ಗೊತ್ತು.. ಅದೇ ನೋವು ಅದೇ ಹಿಂಸೆನಾ ನಿನ್ನ ಸೊಸೆಗೂ ನೀಡಬೇಕು ಅಂತ ಅನ್ಕೊಂಡಿದ್ದೀಯಾ..??ಅಷ್ಟಕ್ಕೂ ಪರಿ ಹೊರಗಡೆ ಕೆಲಸಕ್ಕೆ ಹೋಗ್ತಿಲ್ಲ ಬರೀ ಮಕ್ಕಳ ಶಾಲೆ ಹೋಗ್ತಿದ್ದಾಳೆ ಅಷ್ಟೇ..
"ಶಾಲೆಗಾದರೂ ಸರಿ ಎಲ್ಲಾದರೂ ಸರಿ ಮನೆ ಹೊರಗಿನ ವ್ಯವಹಾರಕ್ಕೆ ಹೆಂಡತಿ ತಲೆ ಹಾಕಲೇಬಾರದು.."
"ಅಮ್ಮ ಒಂದ್ ಮಾತ್ ಹೇಳು, ಅಪ್ಪ ನಿನ್ನನ್ನ ಹೊರಗಿನ ವ್ಯವಹಾರಕ್ಕೆ ಕಳಿಸೇ ಇರಲಿಲ್ಲ.. ಅಪ್ಪ ಹೋದ ನಂತರ ಒಮ್ಮೆಗೆ ನಿನಗೆ ಜವಾಬ್ದಾರಿ ನಿಭಾಯಿಸುವುದು ಸುಲಭ ಆಗಿತ್ತಾ?"
"ಅಯ್ಯೋ ಅದು ಯಾಕೆ ಕೇಳ್ತ್ಯಾ? ನನಗೆ ಮೋಸ ಮಾಡಿದವರೇ ಜಾಸ್ತಿ. ವ್ಯವಹಾರದಲ್ಲಿ ಬಹಳಷ್ಟು ಸಾರಿ ಮೋಸ ಹೋಗಿದ್ದೇನೆ.. ಅದೆಲ್ಲ ಹಳೆ ಕಥೆ ಈಗ ಬೇಡ ಬಿಡು.."
"ನೋಡ್ದ್ಯಾ ಅಮ್ಮ ನಿನಗೆ ಎಷ್ಟು ಕಷ್ಟ ಆಗಿತ್ತು.. ಹೊರಗಿನ ವಿಚಾರ ಮನೆಯ ಹೆಣ್ಣುಮಕ್ಕಳಿಗೆ ಹೇಳದಿದ್ದರೆ ಇದೇ ತರ ಆಗುತ್ತೆ.. ನೀ ಪಟ್ಟ ಕಷ್ಟ ನಾಳೆ ನನಗೆ ಹೆಚ್ಚು ಕಡಿಮೆ ಆದರೆ ನನ್ನ ಹೆಂಡತಿಗೂ ಆಗಬೇಕಾ?"
"ಥೂ ಬಿಡ್ತು ಅನ್ನು ಅದೇನು ಅಂತ ಮಾತಾಡ್ತೀಯಾ.."
"ನಾನು ಮಾತಿಗೆ ಹೇಳಿದೆ..ಆದರೆ ಮನೆಯ ಹೆಣ್ಣು ಮಕ್ಕಳಿಗೆ ಹೊರಗಿನ ವ್ಯವಹಾರ ತಿಳಿದುಕೊಳ್ಳುವ ಸ್ವಾತಂತ್ರ್ಯ ಇದೆ ..ಅವಳನ್ನು ಮನೆಯಲ್ಲಿಯೇ ಕೂಡಿಹಾಕಿ ಹೊರಗಿನ ಎಲ್ಲಾ ಕೆಲಸವನ್ನು ಮನೆಯ ಗಂಡಸರೇ ಮಾಡಬೇಕೆಂಬ ಯಾವುದೇ ಕಾನೂನಿಲ್ಲ.. ನೀನು ಒಂದು ಹೆಣ್ಣಾಗಿ ಇನ್ನೊಂದು ಹೆಣ್ಣಿನ ಸ್ವಾತಂತ್ರ್ಯಕ್ಕೆ ಅಡ್ಡಿಯಾಗ್ತಿದ್ದಿ ಅಂತ ನಿನಗೆ ಯಾವತ್ತೂ ಅನ್ನಿಸ್ಲಿಲ್ವಾ.. ಅವಳಿಗೂ ನಿನ್ನ ಹಾಗೆ ಸ್ವಾತಂತ್ರ್ಯ ಬೇಕು ಅಂತ ಇರೋಲ್ವಾ? ಅವಳಿಗೂ ಸ್ವಾತಂತ್ರ್ಯ ಬೇಕು ಅಲ್ವಾ?"
ಕ್ಷಣ ಕಾಲ ಸರೋಜಮ್ಮ ಮೌನವಾದರು.. ಪರಿಯ ಕಣ್ಣಂಚಲ್ಲಿ ನೀರು ಜಿನುಗುತ್ತಿತ್ತು ..ತನ್ನ ಸ್ವಾತಂತ್ರದ ಬಗ್ಗೆ ಮಾತನಾಡಿದ ಪತಿಯ ಬಗ್ಗೆ ಹೆಮ್ಮೆ ಎನಿಸಿತು.. ಅತ್ತೆಯ ಬಗ್ಗೆ ಮದುವೆಯಾದಾಗಿನಿಂದ ವಿಶೇಷವಾದ ಗೌರವವಿದ್ದರೂ ತನಗೆ ಯಾವುದೇ ವ್ಯವಹಾರದಲ್ಲಿ ಭಾಗಿಯಾಗಲು ಬಿಡುತ್ತಿಲ್ಲ .. ಯಾವುದೇ ತೀರ್ಮಾನದಲ್ಲಿ ನನ್ನ ಅಭಿಪ್ರಾಯ ಕೇಳುವುದಿಲ್ಲ..ನನ್ನನ್ನು ಮನೆಯಲ್ಲಿ ಬಂಧಿಯಾಗಿಸುತ್ತಾರೆ ಎಂಬ ಭಾವ ಸದಾ ಮೂಡುತಿತ್ತು. ಆದರೆ ಎಂದಿಗೂ ತೋರ್ಪಡಿಸಿಕೊಳ್ಳದೆ ಅತ್ತೆಯೊಂದಿಗೆ ಹೊಂದಿಕೊಂಡು ಬದುಕುತ್ತಿದ್ದಳು.. ಕೆಲಸ ಮಾಡಬೇಕೆಂಬ ಹಂಬಲವಿದ್ದರೂ ಎಂದಿಗೂ ಅದನ್ನು ಮನೆಯವರ ಮುಂದೆ ತೋರ್ಪಡಿಸಿಕೊಳ್ಳಲಿಲ್ಲ... ಎಲ್ಲದಕ್ಕೂ ಪತಿಯನ್ನು ಕಾಯದೆ ಒಂದಿಷ್ಟು ನಿರ್ಧಾರವನ್ನು ತಾನು ತೆಗೆದುಕೊಳ್ಳಲಾಗುವುದಿಲ್ಲವಲ್ಲ ಎಂಬ ಕೊರಗು ಸದಾ ಕಾಡುತ್ತಿತ್ತು.. ತೋರ್ಪಡಿಸಿಕೊಳ್ಳಲಿಲ್ಲ..
ಬಹಳ ಹೊತ್ತು ಯೋಚಿಸಿದ ಸರೋಜಮ್ಮನಿಗೆ ತಮ್ಮ ತಪ್ಪಿನ ಅರಿವಾಯಿತು..
"ನಿಜಾ ಮಗನೇ, ನಾನು ಒಂದು ಹೆಣ್ಣಾಗಿ ವ್ಯವಹಾರದ ಜ್ಞಾನವಿಲ್ಲದೆ ಬಹಳ ಕಷ್ಟಪಟ್ಟಿದ್ದರು ಸಮಾಜದ ಕಟ್ಟುಪಾಡು ಮನೆಯ ಸಂಪ್ರದಾಯವೆಂದು ಅಜ್ಜ ಹಾಕಿದ ಆಲದ ಮರಕ್ಕೆ ಜ್ಯೋತು ಬಿದ್ದಂತಹ ಕೆಲಸವನ್ನು ನಾನು ಮಾಡಿದೆ.. ನೀನು ನನ್ನ ಕಣ್ಣು ತೆರೆಸಿರುವೆ.. ಇನ್ನು ಮುಂದೆ ಪರಿಗೆ ಯಾವುದೇ ನಿರ್ಬಂಧವನ್ನು ಹೇಳುವುದಿಲ್ಲ.. ಅವಳು ಏನೇ ನಿರ್ಧಾರ ಕೈಗೊಂಡರು ಅದಕ್ಕೆ ನನ್ನ ಸಮ್ಮತಿ ಇರುತ್ತದೆ.. ಅವಳಿಗೆ ಆ ಸ್ವಾತಂತ್ರ್ಯವಿದೆ..ನಾನು ಅಡ್ಡಿಪಡಿಸಲಾರೆ"
ಅತ್ತೆಯ ಮಾತನ್ನು ಕೇಳುತ್ತಿದ್ದಂತೆ ಪರಿ ಓಡಿ ಬಂದು ಅವರ ಕಾಲಿಗೆ ನಮಸ್ಕರಿಸಿದಳು.. ಅವಳನ್ನು ಮೇಲೆತ್ತಿ ತಬ್ಬಿಕೊಂಡರು.
" ಕ್ಷಮಿಸು.. ಈ ಹಾಳು ಬುದ್ಧಿಗೆ ನಿನ್ನ ಸ್ವಾತಂತ್ರದ ಹಕ್ಕನ್ನು ಕಸಿಯುತ್ತಿರುವೆ ಎಂಬ ಆಲೋಚನೆಯೇ ಬರಲಿಲ್ಲ.. ಇನ್ನು ಮುಂದೆ ಮನೆಯ ವ್ಯವಹಾರಗಳನ್ನು ಜೊತೆಗೆ ನಿನ್ನಿಷ್ಟದ ಕೆಲಸಗಳನ್ನು ಮಾಡಲು ನೀನು ಸ್ವತಂತ್ರಳ.. ಆದರೆ ಸಮಾಜದಲ್ಲಿ ತಲೆತಗ್ಗಿಸುವಂತಹ ಅಥವಾ ಸಂಸಾರದಲ್ಲಿ ನೆಮ್ಮದಿಯನ್ನು ಹಾಳು ಮಾಡಿಕೊಳ್ಳುವಂತಹ ಕೆಲಸಗಳನ್ನು ಮಾಡಬೇಡ."
"ಇಲ್ಲತ್ತೆ ಎಂದಿಗೂ ಮನೆತನದ ಗೌರವಕ್ಕೆ ಧಕ್ಕೆ ತರಲಾರೆ ಹಾಗೆ ನನ್ನ ಸಂಸಾರದ ನೆಮ್ಮದಿಗೂ ತೊಂದರೆ ಮಾಡಲಾರೆ.. ಸೊಸೆಯ ಸ್ವಾತಂತ್ರ್ಯದ ಬಗ್ಗೆ ಅರಿತ ನಿಮ್ಮಂತ ಅತ್ತೆ ಎಲ್ಲರಿಗೂ ಸಿಗಬೇಕು ಹಾಗಿದ್ದಾಗ ಮಾತ್ರ ತವರಿನಲ್ಲಿ ಸ್ವತಂತ್ರವಾಗಿ ಇರುವ ಹೆಣ್ಣು ಗಂಡನ ಮನೆಯಲ್ಲಿ ಕಟ್ಟುಪಾಡುಗಳಿಲ್ಲದೆ ಸ್ವತಂತ್ರವಾಗಿ ಬದುಕಲು ಸಹಾಯವಾಗುತ್ತದೆ... ಹೆಣ್ಣು ಮಕ್ಕಳ ಅಭಿಪ್ರಾಯವನ್ನು ಕೇಳ ಬಯಸುವ ಮನೆಗೆ ಹೆಣ್ಣಿನ ಕಣ್ಣೀರಿನ ಶಾಪ ತಟ್ಟದು.." ಎನ್ನುತ್ತಾ ಪರಿಣಿತ ನೆಮ್ಮದಿಯ ಉಸಿರಿನ್ನು ಹೊರಹಾಕಿದಳು..
ಅತ್ತೆ ಸೊಸೆಯ ಮಾತುಕತೆ ಮುಗಿದಿದ್ದರೆ ಮಲಗೋಣ ಬೆಳಗ್ಗೆ ಆಫೀಸ್ಗೆ ಹೋಗಬೇಕು ಎಂದು ಚೇಡಿಸುತ್ತಾ ಹೆಂಡತಿಗೆ ಅಡುಗೆ ಮನೆಯ ಕೆಲಸದಲ್ಲಿ ಕೊಂಚ ಸಹಾಯ ಮಾಡಿ ಅವಳ ಬರುವಿಕೆಗಾಗಿ ಕಾಯುತ್ತಾ ದಿನಕರ್ ಮಲಗಿದ.. ತನ್ನ ತಪ್ಪಿಗೆ ಪಶ್ಚಾತಾಪ ಪಡುತ್ತಾ ಸರೋಜಮ್ಮ ಮನದಲ್ಲಿ ಮರುಗಿದರು.. ಹೆಣ್ಣಿನ ಸ್ವಾತಂತ್ರ್ಯದ ಬಗ್ಗೆ ಅರಿತಿರುವ ಗಂಡನನ್ನು ಜೊತೆಗೆ ಸ್ವಾತಂತ್ರ್ಯದ ಬಗ್ಗೆ ಅರಿವು ಮೂಡಿಸಿದ ಕೂಡಲೇ ಅದನ್ನು ಅರಿತು ತಿದ್ದಿಕೊಂಡ ಅತ್ತೆಯನ್ನು ಪಡೆದ ತಾನು ಧನ್ಯ ಎಂದು ಮನದಲ್ಲಿ ನೆನೆಯುತ್ತಾ ಪರಿ ದೇವರಿಗೆ ಕೃತಜ್ಞತೆ ಸಲ್ಲಿಸಿದಳು..