ಒಂಭತ್ತು ತಿಂಗಳಿನ ಸಿಹಿ ನೆನಪುಗಳು.
ಒಂಭತ್ತು ತಿಂಗಳಿನ ಸಿಹಿ ನೆನಪುಗಳು.


ಈ ಪ್ರಪಂಚದಲ್ಲಿ ಒಂದು ಹೆಣ್ಣಿಗೆ ಅತ್ಯಂತ ಸೌಭಾಗ್ಯದ ಕ್ಷಣ ಎಂದರೆ ಅದುವೇ ಆಕೆ ತಾಯಿಯಾಗುವುದು. ಆಕೆ ತಾಯಿಯಾದಾಗ ತನ್ನ ಮಗುವನ್ನು ಸ್ಪರ್ಶಿಸಿ ಅದೆಷ್ಟು ಸಂತಸ ಪಡುವಳೋ, ಅದಕ್ಕಿಂತ ಹೆಚ್ಚಿನ ಸಂತಸವನ್ನು ಆಕೆ ತಾನು ಮೊದಲ ಬಾರಿಗೆ ಗರ್ಭಿಣಿಯಾದಾಗ ಪಡುತ್ತಾಳೆ. ಪದೇ ಪದೇ ತನ್ನ ಹೊಟ್ಟೆಯನ್ನು ಸ್ಪರ್ಶಿಸುತ್ತ ಸಂತಸ ಪಡುತ್ತಾಳೆ. ತನ್ನ ಹೊಟ್ಟೆಯಲ್ಲಿ ಯಾವ ಮಗುವಿದೆ ಎಂದು ತಿಳಿದಿರುವುದಿಲ್ಲ, ಆದರೂ ಅದು ತನ್ನಾಸೆಯ ಕೂಸೆಂದು ಮತ್ತೆ ಮತ್ತೆ ನೆನೆದು ಸಂಭ್ರಮಿಸುವಳು. ಖುಷಿಯಿಂದ ಲೋಕವನ್ನೇ ಮರೆಯುವಳು. ಆಕೆಗೆ ತಾನು ಗರ್ಭಿಣಿಯಾಗುವುದಕ್ಕಿಂತ ಮೊದಲಿನ ಜೀವನವೇ ಬೇರೆ, ಗರ್ಭಿಣಿ ಆದ ನಂತರದ ಜೀವನವೇ ಬೇರೆ ಏನೋ ಎಂಬಂತೆ ಸಂಭ್ರಮಿಸುವಳು. ಯಾರು ಎಷ್ಟೇ ಕಾಳಜಿ ಮಾಡಲಿ, ಅಥವಾ ಕಾಳಜಿ ಮಾಡದೆ ಇರಲಿ, ತನ್ನ ಗರ್ಭದಲ್ಲಿನ ಕಂದನ ಆರೈಕೆಯ ಜೊತೆಗೆ ತನ್ನ ಆರೋಗ್ಯದ ಕುರಿತಾಗಿಯೂ ವಿಶೇಷ ಕಾಳಜಿ ವಹಿಸುವಳು. ಗರ್ಭದೀ ಬೆಳೆಯುತ್ತಿರುವ ಕಂದನ ಕುರಿತು ಕನಸು ಕಾಣುತ್ತಾ ತಾನು ತಾಯಿಯಾಗುತ್ತಿರುವುದಕ್ಕೆ ಹೆಮ್ಮೆ ಪಡುತ್ತ, ತನ್ನ ಗರ್ಭಾವಸ್ಥೆಯ ಆ ಒಂಭತ್ತು ತಿಂಗಳು, ಒಂಭತ್ತು ದಿನಗಳನ್ನು ಖುಷಿಯಿಂದ ಕಳೆಯಲು ಪ್ರಯತ್ನ ಪಡುತ್ತಾಳೆ.
ಎಲ್ಲ ಹೆಣ್ಣುಮಕ್ಕಳು ಕೂಡ ಗರ್ಭಿಣಿಯಾಗಿ ತಾಯಿಯಾಗುವರೆಗೆ ಅವರ ಜೀವನದ ಪ್ರತಿಯೊಂದು ದಿನಗಳು ಸಹ ಹೂವಿನ ಹಾಸಿಗೆ ಆಗಿರುವುದಿಲ್ಲ. ಕೆಲವೊಮ್ಮೆ ಎಷ್ಟೋ ಗರ್ಭಿಣಿಯರು ತುಂಬಾ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಅನೇಕ ತುಮುಲಗಳಿಗೆ ಒಳಗಾಗುತ್ತಾರೆ. ಕಾರಣ ಅವರಿಗೆ ಆ ಬಗ್ಗೆ ಸರಿಯಾಗಿ ಮಾಹಿತಿ ಇರದೇ ಇರಬಹುದು, ಸರಿಯಾದ ಪೌಷ್ಟಿಕಾಂಶ ಸಿಗದೇ ಇರಬಹುದು, ಮಾನಸಿಕ ಒತ್ತಡಗಳಿರಬಹುದು, ಮನೆಯ ವಾತಾವರಣ ಸರಿಯಿಲ್ಲದೆ ಇರಬಹುದು. ಹೀಗಿದ್ದಾಗ ಗರ್ಭಿಣಿಯು ಅನೇಕ ತುಮುಲಗಳಿಗೆ ಒಳಗಾಗುತ್ತಾಳೆ. ಆದರೆ ಎಷ್ಟೇ ತುಮುಲಗಳಿದ್ದರೂ ಸಹ ಆ ಹೆಣ್ಣು ಗರ್ಭಿಣಿಯಾದಾಗ ತುಂಬಾ ಸಂತಸವನ್ನು ಅನುಭವಿಸಿಯೇ ಇರುತ್ತಾಳೆ.
ನನ್ನ ಮದುವೆ ಆದಮೇಲೆ ನಾನು ಮಗುವನ್ನು ಮಾಡಿಕೊಳ್ಳಲು ಎರಡು,ಮೂರು ವರ್ಷ ಆಗಲಿ ಎಂದವಳಲ್ಲ. ನಾನು ಬೇಗನೆ ತಾಯಿಯಾಗುವ ತವಕ ನನ್ನದಾಗಿತ್ತು. ಅದೇನೋ ಗೊತ್ತಿಲ್ಲ ನನಗೆ ಮದುವೆಯಾದ ವರುಷವೇ ಮಗು ಮಾಡಿಕೊಳ್ಳುವ ಬಯಕೆ ಇದ್ದಿತು. ಆದರೆ ಅದೇಕೋ ಗೊತ್ತಿಲ್ಲ, ಒಂದೂವರೆ ವರುಷ ಕಳೆದರೂ ತಾಯಿಯಾಗುವ ಸೂಚನೆಗಳೇ ಕಾಣಲಿಲ್ಲ. ನನ್ನ ಮನಸ್ಸಲ್ಲಿ ಬೇಡವಾದ ಆ ನಕಾರಾತ್ಮಕ ವಿಚಾರಧಾರೆಗಳು ಹರಿದಾಡತೊಡಗಿದ್ದವು. ನನ್ನ ಗಂಡನ ಊರಂತೂ ಅತೀ ಚಿಕ್ಕ ಹಳ್ಳಿ. ಕೇವಲ 30 ಮನೆಗಳಿರುವ ಸುಂದರ ಹಸಿರಿನ ಮಡಿಲಲ್ಲಿ ಕಂಗೊಳಿಸುವ ಮಲೆನಾಡಿನ ಒಂದು ಪುಟ್ಟ ಹಳ್ಳಿ. ಹಳ್ಳಿಯೆಂದ ಮೇಲೆ ಇರುವ ನಾಲ್ಕಾರು ಜನರು ನಾಲ್ಕಾರು ರೀತಿಯಲ್ಲಿ ಮಾತಾಡಿಯೇ ಮಾತಾಡುವರು. ಹೀಗಾಗಿ ನನ್ನ ತಲೆಯಲ್ಲಿ ಮಕ್ಕಳಾಗದೆ ಇದ್ದರೆ ಯಾರಾದರೂ ನನಗೆ ಏನಾದರೂ ಅನ್ನುವರೇನೋ ಎನ್ನುವ ಭಯ ಒಂದು ಕಡೆಯಾದರೆ, ಎರಡು ವರುಷ ಕಳೆದರೂ ನನ್ನ ಗಂಡನಿಗೆ ನಾನು ಒಂದು ಮಗುವನ್ನು ಹೆತ್ತುಕೊಡಲಿಲ್ಲ ಎನ್ನುವ ಬೇಸರ ಮತ್ತೊಂದೆಡೆ. ನಮ್ಮವರಿಗಂತೂ ಮಕ್ಕಳೆಂದರೆ ತುಂಬಾ ಪ್ರೀತಿ. ಅಕ್ಕತಂಗಿಯರ ಹಾಗೂ ಅಣ್ಣನ ಮಕ್ಕಳನ್ನು ಅದೆಷ್ಟು ಪ್ರೀತಿ ಮಾಡುತ್ತಿದ್ದರೆಂದರೆ ತಮ್ಮ ಇಡೀ ದಿನದ ಸುಸ್ತು ಮಕ್ಕಳೊಂದಿಗೆ ಆಡಿದಾಗ,ಆ ಸುಸ್ತು ಆಗ ಕಳೆದೆ ಹೋಗುತ್ತದೆ ಎನ್ನುತ್ತಿದ್ದರು. ನಾನು ಮನಸ್ಸಿನಲ್ಲಿ ತುಂಬಾ ಖುಷಿ ಪಡುತ್ತಿದ್ದೆ. ಆ ಮಕ್ಕಳನ್ನು ಇಷ್ಟೊಂದು ಪ್ರೀತಿಸುವ ಅವರು ನಮ್ಮದೇ ಮಗುವಾದಾಗ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ ಅಂತ ಬೀಗುತ್ತಿದ್ದೆ. ಹೀಗಿರುವಾಗ ನನಗೆ ತಿಂಗಳ ಮೇಲೆ ತಿಂಗಳು ಕಳೆಯುತ್ತಿತ್ತು ವಿನಃ ನಿಲ್ಲುವ ಸೂಚನೆಯೇ ಇಲ್ಲದಾಗಿತ್ತು. ಎರಡು ಮೂರು ಸಲ ತಿಂಗಳ ಮೇಲೆ ಹದಿನೈದು ದಿನಗಳಾದಾಗ ಈ ಬಾರಿ ನಾನು ಗರ್ಭಿಣಿ ಆಗಿರಬಹುದೇನೋ ಅಂತ ಅಂದುಕೊಂಡು ಮನೆಯಲ್ಲಿಯೇ ಚೆಕ್ ಮಾಡಿಕೊಂಡಾಗ ಅದು ಖುಷಿಯನ್ನು ಹಾಳುಮಾಡುತ್ತಿತ್ತು. ಮತ್ತದೇ ಕಾಯುವಿಕೆ.
ಈ ಕಾಯುವಿಕೆ ಯಾವಾಗ ಪೂರ್ಣಗೊಳ್ಳುವುದೋ ಎಂದು ನಾವಿಬ್ಬರು ದೇವರ ಮೊರೆ ಹೋಗಿದ್ದೂ ಆಯ್ತು, ವೈದ್ಯರ ಮೊರೆ ಹೋಗಿದ್ದೂ ಆಯ್ತು. ಕೊನೆಗೆ ಇಬ್ಬರು ಒಂದು ನಿರ್ಧಾರಕ್ಕೆ ಬಂದೆವು. ನಮಗಿನ್ನು ವಯಸ್ಸಿದೆ, ಚಿಂತೆ ಮಾಡುವುದು ಬೇಡ. ಯಾವಾಗ ಮಗು ಆಗುವುದೋ ಆಗಲಿ ನೋಡೋಣ ಎಂದು ಸುಮ್ಮನಾದೆವು.
ಹೀಗೆ ಕಳೆಯಲು ಒಮ್ಮೆ ಜ್ವರ ಬಂದು ಹುಷಾರಿಲ್ಲದೆ ಎರಡು ದಿನವಾಗಿತ್ತು. ಆಗ ನಮ್ಮನೆಯವರ ಜೊತೆಯಲ್ಲಿ ಕೆಲಸ ಮಾಡುವ ಸಹುದ್ಯೋಗಿಯ ಮಡದಿ ಬಂದು ಆಸ್ಪತ್ರೆಗೆ ಹೋಗಿಬರುವಂತೆ ಹೇಳಿದರು. ನಾನು ಹೋಗದೆ ಇದ್ದಾಗ ಮರುದಿನ ಬಂದು ಬನ್ನಿ , ನಾನೇ ಕರೆದುಕೊಂಡು ಆಸ್ಪತ್ರೆಗೆ ಹೋಗುತ್ತೇನೆ ಎಂದು ಹೇಳಿದರು. ಆಗ ಆಗಲ್ಲ ಎನ್ನಲು ಮನಸ್ಸ
ು ಬಾರದೆ, ಸುಮ್ಮನೆ ಆಸ್ಪತ್ರೆಗೆ ಹೋದೆನು. ಅಲ್ಲಿ ವೈದ್ಯರು ನನಗೆ ಒಂದೆರಡು ಟೆಸ್ಟ್ ಮಾಡಿಸಲು ಹೇಳಿದರು. ಜ್ವರ ಬಂದಿದ್ದಕ್ಕೆ ಇದೆಲ್ಲ ಟೆಸ್ಟ್ ಇರಬಹುದು ಎಂದು ಆ ಟೆಸ್ಟ್ ಮಾಡಿಸಿದೆ. ಯುರಿನ್ ಟೆಸ್ಟ್ ರಿಪೋರ್ಟ್ ಬಂದು, ವೈದ್ಯರು ನಾನು "ಗರ್ಭಿಣಿ" ಎಂದು ಹೇಳಿದರು. ಅಯ್ಯೋ ಆಗಿನ ನನ್ನ ಖುಷಿ ಎಷ್ಟಿತ್ತು ಎಂದು ಹೇಳಲು ಮಾತ್ರ ಈಗ ಸಾಧ್ಯ ಇಲ್ಲ. ಅದೇನೋ ಗೊತ್ತಿಲ್ಲ, ಆವತ್ತಿನ ಆ ದಿನ ನನ್ನ ಬಾಳಲ್ಲಿ ಮರೆಯದ ದಿನ.. ಆಗಸ್ಟ್ 8, 2013 ನನ್ನ ಬಾಳಲ್ಲಿ ಖುಷಿ ತಂದ ದಿನ. ಎಲ್ಲರಿಗೂ ಫೋನ್ ಮಾಡಿ ಹೇಳಿದ್ದಾಯ್ತು, ಯಜಮಾನರಿಗೆ ಬಂದು ಸಿಹಿ ತಿನ್ನಿಸಿ ವಿಷಯ ಹೇಳಿದಾಗ, ಅವರಂತೂ ಮಗುವಿನಂತೆ ಕುಣಿದು ಕುಪ್ಪಳಿಸಿದರು. ಅವರ ಆರೈಕೆ ಅವತ್ತಿನಿಂದಲೇ ಶುರುವಾಯಿತು. ಮರುದಿನದಿಂದ ತಮ್ಮ ಬಟ್ಟೆಯನ್ನು ತಾವೇ ತೊಳೆದುಕೊಳ್ಳಲು ಶುರು ಮಾಡಿದರು. ಹೆಚ್ಚು ಕೆಲಸ ಮಾಡಲು ಬಿಡುತ್ತಿರಲಿಲ್ಲ. ನನ್ನನ್ನು ಮಗುವಿನಂತೆ ನೋಡಿಕೊಳ್ಳಲು ಶುರು ಮಾಡಿದರು.ಹಣ್ಣುಗಳನ್ನು ತಾವೇ ತೊಳೆದು ಹೆಚ್ಚಿ ತಿನ್ನಲು ಕೊಡುತ್ತಿದ್ದರು.
ಈ ಮಧ್ಯೆ ನನ್ನ ಅಜ್ಜಿ(ಅಮ್ಮನ ಅಮ್ಮ)ಗೆ ಫೋನ್ ಮಾಡಿ ವಿಷಯ ತಿಳಿಸಿದಾಗ, ಆಗ ಅಜ್ಜಿ ಖುಷಿಪಟ್ಟರು. ಜೊತೆಗೆ ಸಲಹೆ ಕೂಡ ಕೊಟ್ಟರು. ಈಗಲೇ ಎಲ್ಲರಿಗೂ ಹೇಳಬೇಡ, ಎರಡು ತಿಂಗಳು ಪೂರ್ಣಗೊಳ್ಳಲಿ, ಒಮ್ಮೊಮ್ಮೆ ಇದು ಸುಳ್ಳಾಗುವುದು ಇರುತ್ತದೆ, ಯಾವುದಕ್ಕೂ ಹುಷಾರಾಗಿರು ಎಂದು ಹೇಳಿದರು. ಅವರು ಹೇಳಿದ್ದು ನಿಜವೇ ಇದ್ದರೂ ಅದು ನನ್ನ ತಲೆಯಲ್ಲಿ ನೂರೆಂಟು ವಿಚಾರಗಳನ್ನು ಹುಟ್ಟುಹಾಕಿತು. ಎಲ್ಲಿ ನನ್ನ ಗರ್ಭ ಜಾರುವುದೋ ಏನೋ ಎಂಬ ಯೋಚನೆಗಳು ಸುಳಿದಾಡಿದವು. ಹೇಗಾದರೂ ಮಾಡಿ ಇದನ್ನು ಕಾಪಾಡಿಕೊಳ್ಳಬೇಕು ಎನ್ನುವ ಒತ್ತಡದ ಜವಾಬ್ದಾರಿ ತಲೆಯಲ್ಲಿ ಕೊರೆಯುತ್ತಿತ್ತು.
ಇದನ್ನು ನೋಡಿದ ಯಜಮಾನರು ನನಗೆ ತಲೆ ನೇವರಿಸುತ್ತ, ಸಮಾಧಾನ ಮಾಡಿದರು. ಹುಷಾರಾಗಿರುವಂತೆ ತಿಳಿಸಿದರು.
ನನಗಂತೂ ತಿನ್ನುವ ವಿಚಾರದಲ್ಲಿ ಭಯವೇ ತುಂಬಿ ಹೋಗಿತ್ತು. ಏನನ್ನು ತಿನ್ನುವುದೋ , ಏನನ್ನು ತಿನ್ನದೆ ಇರುವುದೋ ಎಂದು ತಿಳಿಯದೆ ಗೊಂದಲವೊಂದೇ ತುಂಬಿತ್ತು.
ಏನು ಮಾಡುವುದು, ಹೇಗೆ ಇರುವುದು ಎನ್ನುವುದು ಒಂದು ಕಡೆಯಾದರೆ, ಯಜಮಾನರು ನೈಟ್ ಶಿಫ್ಟ್ ಕೆಲಸಕ್ಕೆ ಹೋದಾಗ ಒಬ್ಬಳೇ ಇರುವ ಭಯ ಒಂದು ಕಡೆ.
ಬೈಕ್ ಹತ್ತಲು ಭಯ, ಮಾತ್ರೆ ತೆಗೆದುಕೊಳ್ಳಲು ಭಯ, ಹೆಚ್ಚು ತಿನ್ನಲು ಭಯ.
ಹಾಗಿರು, ಹೀಗಿರು ಎನ್ನುವ ಅಕ್ಕಪಕ್ಕದವರ ಸಲಹೆಯ ಜೊತೆಗೆ ಅವರಿಗೆ ಹೀಗಾಗಿತ್ತಂತೆ, ಹಾಗಾಗಿತ್ತಂತೆ ಎನ್ನುವ ಹೆದರಿಸುವ ಮಾತುಗಳು.
ಹೀಗೆ ಹತ್ತು ಹಲವು ಭಯ, ಚಿಂತೆ, ತುಮುಲಗಳ ನಡುವೆ ಇದ್ದೆನು. ಕಾರಣ ಮನೆಯಲ್ಲಿ ಹಿರಿಯರು ಇಲ್ಲದೆ ಇರುವುದು. ಅತ್ತೆ ಇದ್ದಿದ್ದರೆ ಸ್ವಲ್ಪ ಧೈರ್ಯವಾದರೂ ಇರುತ್ತಿತ್ತು. ಆದರೆ, ನನ್ನ ಅಮ್ಮ ಬಂದು ಧೈರ್ಯ ತುಂಬಿ, ಸಲಹೆ ನೀಡಿದರು. ಚಿಂತೆ ಬಿಟ್ಟು ಇರಲು ತಿಳಿಹೇಳಿದರು. ಒಳ್ಳೆಯ ಪುಸ್ತಕ ಓದುವಂತೆ ಹೇಳಿದರು. ಇಂಪಾದ ಸಂಗೀತ ಕೇಳುವಂತೆ ಸಲಹೆ ನೀಡಿದರು. ಮನೆಯಲ್ಲಿ ಯಾವಾಗಲೂ ಸಮಾಧಾನದಿಂದ ಇರಲು , ಯಾವುದೇ ಒತ್ತಡಗಳಿದ್ದರೂ ಸಮಾಧಾನವಾಗಿರಲು ಹೇಳಿದರು.ಪ್ರತಿಯೊಂದನ್ನು ತಿಳಿಸಿಹೇಳಿದರು. ಗೊತ್ತಿಲ್ಲದೆ ಇರುವುದರ ಬಗ್ಗೆ ಪ್ರತಿಯೊಂದನ್ನು ತಿಳಿಸಿಹೇಳಿ ಧೈರ್ಯ ತುಂಬಿದವರು ನನ್ನಮ್ಮ.
ಈ ಎಲ್ಲ ತುಮುಲಗಳ ಮಧ್ಯ ಒಂಬತ್ತು ತಿಂಗಳು ಮುಗಿದು ಹತ್ತು ದಿನಗಳ ನಂತರ ಮುದ್ದಾದ, ಗುಂಡು ಗುಂಡಾದ ,ಮಗಳು ಜನಿಸಿದಳು. ನಾವಿಬ್ಬರು ಅಪ್ಪ ಅಮ್ಮನ ಪದವಿ ಪಡೆದು ಆ ಖುಷಿಯಲ್ಲಿ ಮೈ ಮರೆಯುವಂತೆ ಮಾಡಿದವಳು ನನ್ನ ಮುದ್ದಿನ ಮಗಳು ಶ್ರೇಯಾ. ಖಾಲಿ ಮನೆಯಲ್ಲಿ ಖುಷಿ ತುಂಬಿದವಳು ಮುದ್ದಿನ ಮಗಳು ಶ್ರೇಯಾ.
ಒಟ್ಟಿನಲ್ಲಿ ಗರ್ಭಿಣಿಯಾಗಿ ತಾಯಿಯಾಗುವರೆಗೆ ಒಳ್ಳೆಯ ವಾತಾವರಣದ ಜೊತೆಗೆ ಮನೆಯಲ್ಲಿ ನೆಮ್ಮದಿಯ, ಸಂತಸದ ವಾತಾವರಣವಿರಲಿ. ಗರ್ಭಿಣಿಯರನ್ನು ವಿಶೇಷವಾಗಿ ನೋಡಿಕೊಳ್ಳುವುದರಿಂದ ತಾಯಿ ಮತ್ತು ಹೊಟ್ಟೆಯಲ್ಲಿಯ ಮಗುವಿನ ಬೆಳವಣಿಗೆಯೂ ಚೆನ್ನಾಗಿ ಆಗುತ್ತದೆ.
ದಯವಿಟ್ಟು ಯಾರೂ ಯಾವ ಗರ್ಭಿಣಿಗೂ ಭಯವಾಗುವಂತಹ ಸಲಹೆಗಳನ್ನು ನೀಡಬೇಡಿ,
ಒತ್ತಡದ ವಿಷಯಗಳನ್ನು ತಿಳಿಸಬೇಡಿ. ಪ್ರತಿಕೂಲ ವಾತಾವರಣ ನಿರ್ಮಿಸಬೇಡಿ. ಊಟದ ವಿಷಯದಲ್ಲಿ ಒತ್ತಾಯ ಮಾಡಬೇಡಿ. ಅವರ ಇಷ್ಟಕ್ಕೂ ಬೆಲೆ ಕೊಡಿ. ಅವರ ಬೇಕುಬೇಡಗಳನ್ನು ಗೌರವಿಸಿ, ಜೊತೆಗೆ ಈಡೇರಿಸಲು ಪ್ರಯತ್ನಿಸಿ.
ಎಲ್ಲ ತಾಯಂದಿರಿಗೂ ನನ್ನ ನಮನಗಳನ್ನು ತಿಳಿಸಲು ತುಂಬಾ ಖುಷಿಯಾಗುತ್ತಿದೆ ಜೊತೆಗೆ ಹೆಮ್ಮೆ ಕೂಡ ಆಗುತ್ತಿದೆ.