Shridevi Patil

Classics Inspirational Others

4  

Shridevi Patil

Classics Inspirational Others

ದೀಪಾವಳಿಯ ಖುಷಿ ಭಾಗ 1

ದೀಪಾವಳಿಯ ಖುಷಿ ಭಾಗ 1

2 mins
262


ದೀಪಾವಳಿ ಅಂದು ಇಂದು


ಅಂದಿನ ದೀಪಾವಳಿ


ದಸರಾ ಹಬ್ಬದಂದು ಎಲ್ಲರ ಕಾಲಿಗೆ ಬಿದ್ದು ನಮಸ್ಕಾರ ಮಾಡಿ ಬನ್ನಿ ಕೊಟ್ಟು "ಬನ್ನಿ ತಗೊಂಡು ನಾವು ನೀವು ಬಂಗಾರದಂಗ ಇರೋಣು" ಎಂದು ಹೇಳಿ ಹಬ್ಬ ಮುಗಿಸುವಷ್ಟರಲ್ಲಿ ಶೀಗೆಹುಣ್ಣಿಮೆ ಬಂದಿರುತ್ತಿತ್ತು. ಅದನ್ನು ಕೂಡ ಮಾಡಿ ಮುಗಿಸುವಲ್ಲಿ ನಮ್ಮ ಅಮ್ಮಂದಿರು ಸುಸ್ತಾಗಿರುತ್ತಿದ್ದರು.ಆದ್ರೂ ಹದಿನೈದೆ ದಿನ ಇರೋದು ಅಷ್ಟರಲ್ಲಿ ಮನೆ ಸ್ವಚ್ಛ ಮಾಡಿಬಿಡಬೇಕು.ಆಮೇಲೆ ಉಳಿದದ್ದು ನೋಡಿದ್ರಾಯ್ತು ಅಂತ ಅಮ್ಮಂದಿರು ಅವಸರವಾಸರವಾಗಿ ಮನೆ ಸಾರಿಸುತ್ತಿದ್ದರು. ನಾವು ಆಗ ದೀಪಾವಳಿ ಹಬ್ಬ ಎಂದು ಕುಣಿದಿದ್ದೆ ಕುಣಿದಿದ್ದು. ಯಾಕೆಂದರೆ ಹೊಸ ಬಟ್ಟೆ ಜೊತೆಗೆ ಪಟಾಕಿ ಹಾರಿಸೋ ಖುಷಿ ಮತ್ತೆ ಮೂರು ದಿನ ಶಾಲೆಗೆ ರಜೆ ಅಂತೆಲ್ಲ ಕುಣಿತಿದ್ವಿ. ವರ್ಷಕ್ಕೆ ಎರಡೂ ಅಥವಾ ಮೂರು ಜೊತೆ ಬಟ್ಟೆ ತಂದರೆ ಹೆಚ್ಚು ಆಗೆಲ್ಲ. ಹಾಗಾಗಿ ದೀಪಾವಳಿಗೆ ಮಾತ್ರ ತಪ್ಪದೆ ತರುತ್ತಿದ್ದ ಕಾರಣ ಅದೇನೋ ದೀಪಾವಳಿ ಅಂದ್ರೆ ತುಂಬಾ ಇಷ್ಟ.


ಆಗ ನಮ್ಮದು ತುಂಬಿದ ಕುಟುಂಬ.ಮನೆಯಲ್ಲಿ ಅಜ್ಜಿ, ಅಪ್ಪಾಜಿ ಅಮ್ಮ, ಇಬ್ಬರು ಕಾಕಾರು(ಚಿಕ್ಕಪ್ಪಂದಿರು), ಇಬ್ಬರು ಚಿಕ್ಕಮ್ಮಂದಿರು, ನಾವು ಏಳು ಜನ ಹೆಣ್ಣು ಮಕ್ಕಳು, ನಾಲ್ಕು ಜನ ಗಂಡು ಮಕ್ಕಳು, ಜೊತೆಗೆ ಹಬ್ಬಕ್ಕೆಂದು ಬರುತ್ತಿದ್ದ ಸೋದರತ್ತೆಯರು ಹಾಗೂ ಅವರ ಮಕ್ಕಳು, ಹೀಗೆ ಪಟ್ಟಿ ಮಾಡಿದರೆ ಸುಮಾರು ಇಪ್ಪತ್ತರಿಂದ ಇಪ್ಪತ್ತೈದು ಜನರು ಇರುತ್ತಿದ್ದೆವು. ಆಗ ಈಗಿನಂತೆ ಮನೆಮನೆಗೂ ನೀರು ಬರುತ್ತಿರಲಿಲ್ಲ. ಊರಲ್ಲಿರುವ ಒಂದೇ ಟ್ಯಾಂಕಲ್ಲಿ ಪಾಳೆ ಹಚ್ಚಿ ನೀರು ತರುವುದಿತ್ತು.


ಆಗ ಹಬ್ಬ ನಾಳೆಯೆಂದರೆ ಇಂದಿನ ದಿನವನ್ನು ನೀರು ತುಂಬುವ ಹಬ್ಬ ಎಂದು ಮಾಡುತ್ತಿದ್ದರು. ಬಚ್ಚಲು ಮನೆಯನ್ನು ಸ್ವಚ್ಛವಾಗಿ ತೊಳೆದು ಸುಣ್ಣ ಹಚ್ಚಿ, ನೀರು ತುಂಬುವ ಹಂಡೆಯನ್ನು ತೊಳೆದು ಆ ಹಂಡೆಯ ಮೇಲೆ ಸುಣ್ಣದ ನೀರಿಂದ ತರತರಹದ ಚಿತ್ರಗಳನ್ನು ಬರೆದು ಪೂಜೆ ಮಾಡಿ ಆಮೇಲೆ ನೀರು ತುಂಬಿಸುತ್ತಿದ್ದರು. ಹಾಗೆ ಮಾಡಿದ ಮೇಲೆ ಅಲ್ಲಿ ಆಗ ಯಾರೂ ಕೂಡ ಕೈ ಸಹ ತೊಳೆಯುವಂತಿರಲಿಲ್ಲ. ಯಾಕೆಂದರೆ ಅಲ್ಲಿ ಮಾರನೆಯ ದಿನ ಅಂದರೆ ನರಕ ಚತುರ್ದಶಿ ದಿನ ಮೊದಲು ಮನೆಯ ಗಂಡು ಮಕ್ಕಳಿಗೆ ಸ್ನಾನ ಮಾಡಿಸುತ್ತಿದ್ದರು. ಅಲ್ಲಿಯವರೆಗೆ ಅಲ್ಲಿ ಕೈತೊಳೆಯುವುದು ಮುಖ ತೊಳೆಯುವುದಾಗಲಿ ಮಾಡುವಂತಿರಲಿಲ್ಲ.



ಬೆಳಗಾಗುತ್ತಲೇ ಅಮ್ಮ ಅಥವಾ ಚಿಕ್ಕಮ್ಮ ಯಾರಾದರೊಬ್ಬರು ಒಂದು ದೊಡ್ಡ ಬೌಲ್ ನಲ್ಲಿ ಕೊಬ್ಬರಿ ಎಣ್ಣೆಯನ್ನು ಕಾಯಿಸಿ ಆರಿಸಿ ಉಗುರುಬೆಚ್ಚಗೆ ಬಿಸಿಯಿರುವಾಗ ನಮಗೆಲ್ಲ ಕಿವಿಗೆ, ನೆತ್ತಿಗೆ, ಮೈಗೆಲ್ಲ ಚೆನ್ನಾಗಿ ಹಚ್ಚಿ ಸುಡುಸುಡು ನೀರನ್ನು ಹಾಕಿ ಚೆನ್ನಾಗಿ ತಲೆಸ್ನಾನ ಮಾಡಿಸಿ, ಹೊಸಬಟ್ಟೆ ಹಾಕಿ, ಆಮೇಲೆ ಶ್ಯಾವಿಗೆ ಉಣ್ಣಿಸಿ ನಮ್ಮನ್ನೆಲ್ಲ ಆಡಲಿಕ್ಕೆ ಬಿಡುತ್ತಿದ್ದರು.ಹಾ ಮತ್ತೊಂದು ವಿಷಯ ಏನಂದ್ರೆ ಆಗ ಹಾಕಿದ ಆ ಹೊಸ ಅಂಗಿಯನ್ನು ಸ್ವಲ್ಪ ಹೊತ್ತಿನ ಮೇಲೆ ತೆಗೆದಿರಿಸುತ್ತಿದ್ದರು.ಅದನ್ನೇ ನಾವು ದೀಪಾವಳಿಯ ಮೂರನೇ ದಿನ ಅಂದರೆ ಬಲಿಪಾಡ್ಯದಂದು ಹಾಕಿಕೊಳ್ಳಬೇಕಿತ್ತು.


ನಮ್ಮನ್ನೆಲ್ಲ ಉಣ್ಣಿಸಿ, ಹೊರಹಾಯ್ದ ನಂತರ ಅಮ್ಮಂದಿರದು ಕರಚಿಕಾಯಿ ಮಾಡುವ ಕಾರ್ಯಕ್ರಮ. ಒಂದೆರಡು ದೊಡ್ಡ ಬುಟ್ಟಿಯಷ್ಟು ಕರಚಿಕಾಯಿ ಮಾಡುವುದರಲ್ಲಿ ನಾವು ಮತ್ತೆ ಊಟಕ್ಕೆ ರೆಡಿಯಾಗುತ್ತಿದ್ದೆವು.ಅಮ್ಮಂದಿರು ಕರಚಿಕಾಯಿ ಮಾಡಿ ಸುಸ್ತಾಗಿರುತ್ತಿದ್ದರು. ಬೈಯುತ್ತಲೇ ಊಟ ಕೊಟ್ಟು ಮತ್ತೆ ಹೊರಕಳಿಸಿ ಮರುದಿನ ಅಮಾವಾಸ್ಯೆ ಲಕ್ಷ್ಮಿ ಪೂಜೆಗೆ ತಯಾರಿ ಮಾಡಿಕೊಳ್ಳುತ್ತಿದ್ದರು.


ನಮ್ಮದು ಟ್ರಾಕ್ಟರ್, ಬೈಕು, ಗಿರಣಿ ಇದ್ದಿದ್ದರಿಂದ ಬೇರೆ ಬೇರೆ ಲಕ್ಷ್ಮಿ ಕೂರಿಸಿ ಪೂಜೆ ಮಾಡಿ ತಡರಾತ್ರಿಯವರೆಗೆ ಹರಟೆ ಹೊಡಿಯುವುದು ನಡೆಯುತ್ತಿತ್ತು.


ಇನ್ನು ಮೂರನೆಯ ದಿನ ಬಲಿಪಾಡ್ಯ. ಅಂದು ಬೆಳಿಗ್ಗೆ ಶಗಣಿಯಿಂದ ಹಬ್ಬ ಶುರು ಮಾಡುವುದು.ಅಂದರೆ ಬಾಗಿಲು ತೊಳೆದು ಪೂಜೆ ಮಾಡಿದ ಮೇಲೆ ಬಾಗಿಲಿಗೆ ಆಕಡೆ,ಈಕಡೆ ಎರಡು ಕಡೆಗೆ ಶಗಣಿಯಿಂದ ಪಾಂಡವರನ್ನು ಮಾಡಿ ಇಟ್ಟು ಅದಕ್ಕೆ ವಿವಿಧ ಬಗೆಯ ಹೂಗಳನ್ನು ಚುಚ್ಚಿ ಅಲಂಕರಿಸುತ್ತಿದ್ದೆವು. ಆಮೇಲೆ ಮತ್ತೆ ಶಗಣಿಯಿಂದ ಹಟ್ಟಿ ಲಕ್ಕವನನ್ನು ಮಾಡಿ ಅದಕ್ಕೆ ಸೀರೆ ಉಡಿಸಿ, ಆಭರಣ ಹಾಕಿ ವಡೆ,ಕರಚಿಕಾಯಿ, ಅಕ್ಕಿಹುಗ್ಗಿ, ಚಕ್ಕುಲಿಚೂಡಾ ಮಾಡಿ ನೈವೇದ್ಯ ಮಾಡಿ, ಸಾಯಂಕಾಲ ಆಕಳಿನಿಂದ ಆ ಹಟ್ಟಿಯನ್ನು ತುಳಿಸಿ ಪೂಜೆ ಮಾಡುವುದು ನಮ್ಮ ವಾಡಿಕೆ.


ಏನೇ ಹೇಳಿ, ಅಂದಿನ ಹಬ್ಬ ಮಾಡುವ ಖುಷಿಯೇ ಬೇರೆಯಿತ್ತು.ತಿನ್ನುವ ಖುಷಿ ಒಂದೆಡೆಯಾದರೆ ಆಡುವ ಖುಷಿ ಮತ್ತೊಂದೆಡೆ, ಹೊಸಬಟ್ಟೆಯ ಖುಷಿ ಇನ್ನೊಂದೆಡೆ. ಒಟ್ಟಿನಲ್ಲಿ ಮೂರು ದಿನದ ದೀಪಾವಳಿ ಹಬ್ಬ ಹೇಗೆ ಮುಗಿದು ಹೋಗುತ್ತಿತ್ತೋ ಗೊತ್ತೇ ಆಗುತ್ತಿರಲಿಲ್ಲ. ನಾವು ಮತ್ತೆ ಮುಂದಿನ ದೀಪಾವಳಿ ಯಾವಾಗ ಬರುತ್ತದೋ ಎಂದು ಕಾಯುತ್ತಿದ್ದೆವು.


Rate this content
Log in

Similar kannada story from Classics