Ashritha G

Classics Inspirational Others

3.7  

Ashritha G

Classics Inspirational Others

ಹರೆಯದ ಪ್ರೀತಿ

ಹರೆಯದ ಪ್ರೀತಿ

4 mins
292



      ಆಗಷ್ಟೇ ಪಿ ಯು ಮುಗಿಸಿ ಪದವಿಗೆ ಸೇರಿದ ಮಕ್ಕಳಿಗೆ ಹೊಸ ಹುರುಪು..ಹೊಸ ಕಾಲೇಜು ಹೊಸ ಸ್ನೇಹಿತರನ್ನು ಭೇಟಿಯಾಗುವ ಸಂತಸ ಒಂದೆಡೆಯಾದರೆ ಮನದ ಮೂಲೆಯಲ್ಲಿ ಹೊಸ ವಾತಾವರಣದ ಬಗ್ಗೆ ಸ್ವಲ್ಪ ಭಯವೂ ಇರುತ್ತದೆ.. ಹಳ್ಳಿಯಿಂದ ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಭೂಮಿಯನ್ನು ಅವಳ ಮನೆಯವರು ಹಾಸ್ಟೆಲ್ ನಲ್ಲಿ ಬಿಡಲು ನಿರ್ಧರಿಸುತ್ತಾರೆ.ಅದರಂತೆ ಭೂಮಿ ಪಟ್ಟಣದ ಕಾಲೇಜೊಂದರಲ್ಲಿ ವಿದ್ಯಾಭ್ಯಾಸ ಆರಂಭಿಸುತ್ತಾಳೆ..

      

      ಕಾಲೇಜು ಶುರುವಾಗಿ ಅದಾಗಲೇ ಮೂರು ತಿಂಗಳು ಕಳೆದಿತ್ತು. ಕಾಲೇಜಿಗೆ ಸೇರಿಸುವಾಗಲೇ ಮೂರು ತಿಂಗಳಿಗೊಮ್ಮೆ ಮನೆಗೆ ಬಿಡುತ್ತೇವೆ ಎಂದು ಹಾಸ್ಟೆಲ್ನ ವಾರ್ಡನ್ ತಿಳಿಸಿದ್ದ ಕಾರಣ ಪ್ರತಿ ತಿಂಗಳು ಭೂಮಿ ಅಪ್ಪ ಹಾಸ್ಟೆಲಿಗೆ ಬಂದು ಮಗಳನ್ನು ನೋಡಿ ಮಾತನಾಡಿಸಿಕೊಂಡು ಹೋಗುತ್ತಿದ್ದರು. ಆರಂಭದಲ್ಲಿ ಭೂಮಿಗೆ ಹಾಸ್ಟೆಲ್ ಜೀವನ ಕಷ್ಟವೆನಿಸಿದರು ವಾರ ಕಳೆಯುತ್ತಿದ್ದಂತೆ ಅಭ್ಯಾಸವಾಯಿತು. ಜೊತೆಗೆ ಒಂದಷ್ಟು ಹುಡುಗಿಯರ ಜೊತೆ ಸ್ನೇಹವೂ ಬೆಳೆಯಿತು. ಮೂರು ತಿಂಗಳಾದ ನಂತರ ಮನೆಗೆ ಬಂದ ಮಗಳನ್ನು ಬಂದ ಅತಿಥಿಯಂತೆ ತಂದೆ ತಾಯಿ ಉಪಚರಿಸಿದರು. ಕಾಲೇಜಿನ ವಿಷಯ ಓದಿನ ವಿಷಯ ಎಲ್ಲವನ್ನು ಏನನ್ನು ಮುಚ್ಚಿಡದೆ ಹೇಳುತ್ತಿದ್ದ ಮಗಳ ಬಗ್ಗೆ ಹೆಮ್ಮೆ ಮೂಡಿತು.ತನ್ನ ಗೆಳತಿಯರ ಬಗ್ಗೆ ಅವರ ಊರು ಅವರ ಮನೆಗಳ ಬಗ್ಗೆ ಅಲ್ಲಿನ ಊಟ ತಿಂಡಿಯ ಬಗ್ಗೆ ಭೂಮಿಗೆ ಹೇಳಿದಷ್ಟು ಮುಗಿಯದು. ನಾಲ್ಕು ದಿವಸದ ರಜೆ ಕಳೆದಿದ್ದೆ ತಿಳಿಯಲಿಲ್ಲ. ಭೂಮಿ ಪುನಹ ಹಾಸ್ಟೆಲ್ ಗೆ ಹೊರಟು ನಿಂತಳು.ಈ ಬಾರಿ ಪರೀಕ್ಷೆ ಮುಗಿದ ನಂತರ ಮನೆಗೆ ಬರುವುದಾಗಿ ತಿಳಿಸಿದಳು. ಅಂದುಕೊಂಡಂತೆ ಉತ್ತಮ ರೀತಿಯಲ್ಲಿ ಓದಿ ಪರೀಕ್ಷೆಯನ್ನು ಉತ್ತಮವಾಗಿ ಬರೆದು ಒಳ್ಳೆಯ ಶ್ರೇಣಿಯಲ್ಲಿ ಪಾಸಾದಳು. ಎರಡು ವರ್ಷದ ಪದವಿ ಮುಗಿದಿದ್ದೆ ತಿಳಿಯಲಿಲ್ಲ. ಎರಡು ವರ್ಷವೂ ಯಾವುದೇ ವ್ಯತ್ಯಾಸ ಕಾಣದ ತಂದೆ ತಾಯಿ ಭೂಮಿಯ ವಿಚಾರದಲ್ಲಿ ತಲೆಕೆಡಿಸಿಕೊಳ್ಳದೆ ನೆಮ್ಮದಿಯಾಗಿದ್ದರು. ಎರಡನೇ ವರ್ಷದ ವಾರ್ಷಿಕ ಪರೀಕ್ಷೆ ಮುಗಿದು ಮನೆಗೆ ಬಂದ ಮಗಳಲ್ಲಿ ಅವಳ ವರ್ತನೆಯಲ್ಲಿ ಕೊಂಚ ಬದಲಾವಣೆ ಗಮನಿಸಿದ್ದರು. ಪ್ರತಿ ಬಾರಿ ಹಾಸ್ಟೆಲಿನಿಂದ ಮನೆಗೆ ಬಂದಾಗ ಗಂಟೆಗಟ್ಟಲೆ ಕೂತು ಅಪ್ಪ ಅಮ್ಮನೊಂದಿಗೆ ಮಾತನಾಡುತ್ತಿದ್ದವಳು ಈ ಬಾರಿ ಇಡೀ ದಿನ ಫೋನಿನಲ್ಲೇ ಕಳೆಯುವುದನ್ನು ಗಮನಿಸಿದ್ದರು. ಈ ಕೂಡಲೇ ಕೇಳುವುದು ಸರಿಯಲ್ಲವೆಂದು ತಿಳಿದು ತಾಯಿ ಸ್ವಲ್ಪ ದಿನ ಸುಮ್ಮನೆ ಇದ್ದು ಒಂದು ದಿನ ಸಂಜೆ ನಿಧಾನವಾಗಿ ವಿಷಯವನ್ನು ತೆಗೆದರು.."ಭೂಮಿ ನಿನ್ನ ಬಳಿ ಒಂದು ಪ್ರಶ್ನೆ ಕೇಳುತ್ತೇನೆ ತಪ್ಪು ತಿಳಿಯಬೇಡ ನಿನ್ನ ಮೇಲೆ ನನಗೆ ನಂಬಿಕೆ ಇದೆ.ಆದರೆ ಈ ಬಾರಿ ನೀನು ಎಂದಿನಂತೆ ಇಲ್ಲ. ಸದಾ ಫೋನಿನಲ್ಲಿರುವೆ. ನಿನ್ನಷ್ಟಕ್ಕೆ ನೀನು ನಗುತ್ತಾ ಮಾತನಾಡುತ್ತಿರುತ್ತೀ.. ಏನು ವಿಷಯ ನನ್ನನ್ನು ನಿನ್ನ ಗೆಳತಿ ಎಂದು ತಿಳಿ ಯಾವುದನ್ನು ಮುಚ್ಚಿಡದೆ ಸಂಕೋಚ ಪಡೆದ ಹಂಚಿಕೋ"ಎಂದರು..

ಮೊದಲು ಏನಿಲ್ಲವೆಂದು ತೇಲಿಕೆಯ ಉತ್ತರ ಕೊಟ್ಟು ಹೊರಟ ಭೂಮಿಗೆ ಮನಸ್ಸಿನಲ್ಲಿ ಪಾಪಪ್ರಜ್ಞೆ ಕಾಡತೊಡಗಿತ್ತು. ಅಮ್ಮನ ಬಳಿ ಎಲ್ಲವನ್ನು ಹಂಚಿಕೊಳ್ಳುತ್ತಿದ್ದೆ . ಆದರೆ ತಾನು ಪ್ರೀತಿ ಮಾಡುತ್ತಿರುವ ವಿಷಯವನ್ನು ಹೇಳಲಾಗದೆ ಒಳಗೊಳಗೆ ಕೊರಗುತ್ತಿದ್ದಳು. ಇರುವ ಧೈರ್ಯವನ್ನೆಲ್ಲ ಒಗ್ಗೂಡಿಸಿ ಹಾಸ್ಟೆಲಿಗೆ ಹೊರಡುವ ಎರಡು ದಿನ ಮೊದಲು ಅಪ್ಪ ಅಮ್ಮನ ಮುಂದೆ ನಿಂತು" ನಾನು ನನ್ನ ಕಾಲೇಜಿನಲ್ಲಿ ಓದುತ್ತಿರುವ ನನ್ನ ಸೀನಿಯರ್ ಒಬ್ಬನನ್ನು ಪ್ರೀತಿಸುತ್ತಿರುವೆ. ಅವನನ್ನೇ ಮದುವೆಯಾಗಬೇಕೆಂದು ನಿಶ್ಚಯಿಸಿರುವೆ. ನೀವು ಅಡ್ಡಿ ಪಡಿಸಿದ್ದೇ ಹೌದಾದರೆ ನಾನು ಜೀವಂತ ಇರಲಾರೆ" ಎಂದು ಅಳಲಾರಂಭಿಸಿದಳು.ವಿಷಯ ತಿಳಿದು ಭೂಮಿಯ ತಂದೆ ತಾಯಿ ಗಾಬರಿಗೊಂಡರು.ಊಹಿಸಿದ ವಿಷಯವಾಗಿದ್ದ ಕಾರಣ ರೋಷ ಆವೇಶಗಳನ್ನೆಲ್ಲ ಹತೋಟಿಯಲ್ಲಿಟ್ಟುಕೊಂಡು ಜಾಗೃತವಾಗಿ ಈ ವಿಚಾರವನ್ನು ನಿಭಾಯಿಸಬೇಕೆಂದು ನಿರ್ಧರಿಸಿದರು. ಏನನ್ನು ಮಾತನಾಡದೆ ಮೌನವಾಗಿ ಮಗಳ ಬಳಿ ಕುಳಿತು "ಈಗಿನ್ನು ಓದುತ್ತಿರುವೆ ಓದು ಮುಗಿಸಿಕೊ.ನಂತರದಲ್ಲಿ ಮಾತನಾಡೋಣ"ಎಂದು ತಿಳಿ ಹೇಳಿ ಹಾಸ್ಟೆಲ್ ಗೆ ಕಳುಹಿಸಿದರು..


       ಭೂಮಿಗೆ ತನ್ನ ತಂದೆ ತಾಯಿಗಳ ಮಾತಿನ ಮೇಲೆ ನಂಬಿಕೆ ಬರಲಿಲ್ಲ. ಇತ್ತ ಅವಳ ತಂದೆ ತಾಯಿಗೂ ಮಗಳು ಎಲ್ಲಿ ಓಡಿ ಹೋಗುವಳೋ ಎಂಬ ಭಯ ಶುರುವಾಗಿತ್ತು. ಪ್ರತಿ ತಿಂಗಳು ಹೋಗಿ ನೋಡಿ ಬರುತ್ತಿದ್ದ ಅಪ್ಪ 15 ದಿನಕ್ಕೊಮ್ಮೆ ಮಗಳ ಕ್ಷೇಮ ಸಮಾಚಾರಕ್ಕಾಗಿ ಹಾಸ್ಟೆಲ್ ಗೆ ಹೋಗಿ ಬರುತ್ತಿದ್ದರು. ಇನ್ನೊಮ್ಮೆ ರಜಕ್ಕೆಂದು ಮನೆಗೆ ಬಂದ ಭೂಮಿಗೆ ಮೊದಲನಂತೆ ಅಪ್ಪ-ಅಮ್ಮನ ಬಳಿ ಸಲುಗೆಯಿಂದ ಇರಲಾಗುತ್ತಿರಲಿಲ್ಲ. ತಪ್ಪು ಮಾಡುತ್ತಿರುವೆನೇನೋ ಎಂದು ಕೊರಗುತ್ತಿದ್ದಳು. ಮಗಳ ಒದ್ದಾಟ ನೋಡಲಾಗದೆ ಭೂಮಿಯ ತಂದೆ ಅವಳು ಪ್ರೀತಿಸುತ್ತಿದ್ದ ತರುಣ್ ನನ್ನು ಭೇಟಿಯಾಗಲು ನಿರ್ಧರಿಸಿದರು. ಆದರೆ ಈ ವಿಚಾರವನ್ನು ಭೂಮಿಯಿಂದ ಅವಳ ತಾಯಿಂದ ಮರೆಮಾಚಿದ್ದರು. ತರುಣ್ ನನ್ನ ಭೇಟಿಯಾಗಿ ಭೂಮಿಯ ತಂದೆ ಹೇಳಿದ್ದಷ್ಟೇ"ನಿನ್ನನ್ನು ನೋಡಿದರೆ ಒಳ್ಳೆಯವನಂತೆ ಅನಿಸುತ್ತದೆ. ಆದರೆ ಓದುವ ವಯಸ್ಸಿನಲ್ಲಿ ಓದಬೇಕು .ನೀನು ಇನ್ನೇನು ಓದು ಮುಗಿಸಿ ಒಳ್ಳೆಯ ಕೆಲಸವನ್ನು ಹಿಡಿಯಬೇಕಿದೆ.ಆ ಕೆಲಸವನ್ನು ಮೊದಲು ಮಾಡು. ನಿನ್ನ ಕಾಲು ಮೇಲೆ ನೀನು ನಿಂತು ಯಶಸ್ವಿಯಾದ ನಂತರ ನನ್ನ ಮಗಳನ್ನು ನಿನಗೆ ಕೊಡುತ್ತೇನೆ.ಅಲ್ಲಿಯವರೆಗೂ ನನ್ನ ಮಗಳಿಗೆ ಯಾವುದೇ ವರನನ್ನು ನೋಡಲಾರೆ.ಅವಳಿಗೆ ನೋವು ಮಾಡುವ ಇಚ್ಛೆ ನನಗಿಲ್ಲ. ಅವಳನ್ನು ಸುಖವಾಗಿ ಬೆಳೆಸಿದ್ದೇನೆ. ಮುಂದೆಯೂ ಅವಳು ಸುಖವಾಗಿ ಇರಬೇಕೆಂದರೆ ಅವಳು ಪ್ರೀತಿಸಿದವನೊಂದಿಗೆ ಮದುವೆ ಮಾಡಬೇಕು. ಆದರೆ ಪ್ರೀತಿಸಿದವನ ಕೈಯಲ್ಲಿ ದುಡ್ಡಿಲ್ಲವೆಂದರೆ ಬದುಕು ನಡೆಸುವುದು ಕಷ್ಟ. ಮೊದಲು ನೀನು ದುಡಿಮೆಯನ್ನು ಆರಂಭಿಸಿ ಸ್ವಲ್ಪ ಹಣಕಾಸು ಮಾಡಿಕೋ.ಆನಂತರವೇ ಅವಳನ್ನು ನಿನಗೆ ಕೊಟ್ಟು ಮದುವೆ ಮಾಡುತ್ತೇನೆ. ಅಲ್ಲಿಯವರೆಗೆ ಈ ಪ್ರೀತಿ ಪ್ರೇಮ ಅಲೆದಾಟದಿಂದ ಕೊಂಚ ದೂರವಿದ್ದು ಗೌರವವಾಗಿ ಜೀವನವನ್ನು ನಡೆಸುವ ಬಗ್ಗೆ ಆಲೋಚಿಸು. ನಿನ್ನ ತಂದೆ ತಾಯಿಯು ಕೂಡ ನಿನ್ನ ಬಗ್ಗೆ ಹಲವಾರು ಕನಸುಗಳನ್ನು ಕಂಡಿರುತ್ತಾರೆ ಅವರ ಕನಸು ನನ್ನ ಮಗಳ ಕಾರಣದಿಂದ ಹಾಳಾಗುವುದು ನನಗೆ ಇಷ್ಟವಿಲ್ಲ...ನಿನ್ನೊಬ್ಬ ಒಳ್ಳೆಯ ಗೆಳೆಯನ ಜಾಗದಲ್ಲಿ ನಿಂತು ಇಷ್ಟು ಮಾತ್ರ ನಾನು

ಹೇಳಬಲ್ಲೆ" ಎಂದು ಹೇಳಿ ಅಲ್ಲಿಂದ ಹೊರಟರು..

   

     ಸಮಯ ಯಾರಿಗೂ ಕಾಯದು. ಭೂಮಿ ಅಪ್ಪ ತರುಣ್ ನನ್ನು ಭೇಟಿಯಾಗಿ ಅದಾಗಲೇ ಮೂರು ವರ್ಷ ಕಳೆದಿತ್ತು.ತರುಣ್ ಓದು ಮುಗಿಸಿ ಸಾಲ ಮಾಡಿ ತನ್ನದೇ ಒಂದು ಸ್ವಂತ ಬಿಸ್ನೆಸ್ ಅನ್ನು ಓಪನ್ ಮಾಡಿ ಸ್ವಲ್ಪ ಮಟ್ಟಿನ ಯಶಸ್ಸು ಕಾಣುತ್ತಿದ್ದ. ಅವನ ಜೊತೆಯಲ್ಲಿ ಓದುತ್ತಿದ್ದ ಸ್ನೇಹಿತರು ಅವರ ಪ್ರೀತಿಯನ್ನು ಕಳೆದುಕೊಂಡು ಅದಾಗಲೇ ಹಲವಾರು ತರಹದ ನೋವುಗಳನ್ನು ಅನುಭವಿಸಿದ್ದರು. ಕೆಲವರಂತೂ ಜೀವವನ್ನು ಕಳೆದುಕೊಂಡಿದ್ದನ್ನು ಕೂಡ ಕಣ್ಣಾರೆ ನೋಡಿದ್ದ. ಭೂಮಿಯ ಅಪ್ಪ ಹೇಳಿದ ಮಾತುಗಳನ್ನು ಮರೆಯದೆ ಛಲದಿಂದ ದುಡಿಯಲಾರಂಭಿಸಿ ಒಂದು ದಿನ ಅವಳ ಮನೆಯ ಬಾಗಿಲು ಬಡಿದ..

    

      ಮೂರು ವರ್ಷಗಳ ಕಾಲ ತನ್ನ ಫೋನ್ ಸ್ವಿಚ್ ಆಫ್ ಮಾಡಿದ್ದ ತರುಣ್ ಭೂಮಿಯ ಯಾವುದೇ ಕರೆಗಳನ್ನಾಗಲಿ ಮೆಸೇಜ್ ಗಳನ್ನು ಆಗಲಿ ನೋಡುತ್ತಿರಲಿಲ್ಲ.. ಭೂಮಿ ತನಗೆ ಮೋಸವಾಯಿತೆಂದು ತರುಣ್ ಮೋಸಗಾರನೆಂದು ತಿಳಿದು ಆತ್ಮಹತ್ಯೆಗೆ ಮುಂದಾದಾಗ ಅವಳ ಅಪ್ಪ ಅವಳನ್ನು ತಡೆದು ತಿಳಿ ಹೇಳಿ ತರುಣ್ ನಡುವೆ ನಡೆದ ಮಾತುಕತೆಗಳನ್ನು ವಿವರಿಸಿದರು. ನಿನ್ನ ಪ್ರೀತಿ ನಿಜವಾಗಿದ್ದರೆ ಅವನು ನಿನ್ನ ಹುಡುಕಿ ಜೀವನದಲ್ಲಿ ಗೆದ್ದು ಬರುತ್ತಾನೆ..ಮೂರು ವರುಷ ಕಾಯೋಣ.ಅವನು ಅಷ್ಟರಲ್ಲಿ ಬರದಿದ್ದರೇ ನಾವು ನೋಡಿದ ವರನೊಂದಿಗೆ ವಿವಾಹಕ್ಕೆ ಒಪ್ಪಬೇಕು ಎಂದು ಸಂತೈಸಿದರು..ಓದು ಮುಗಿಸಿದ ನಂತರ ಅವಳು ಉದ್ಯೋಗಕ್ಕೆ ಸೇರಿ ದುಡಿಯುತ್ತಿದ್ದಳು.. ಭೂಮಿ ದಿಢೀರನೆ ಮನೆಯ ಮುಂದೆ ನಿಂತ ತರುಣ್ ನನ್ನ ನೋಡಿ ಅಳುತ್ತಾ ಹೋಗಿ ಅಪ್ಪಿಕೊಂಡಳು.. ಮೂರು ವರ್ಷಗಳ ಕಾಲ ಒಬ್ಬರನ್ನೊಬ್ಬರು ನೋಡದೆ ಮಾತನಾಡದೆ ಇಬ್ಬರಿಗೂ ಏನು ಮಾತನಾಡಬೇಕೆಂದು ತೋಚದೆ ಮೌನವಾಗಿದ್ದರು.. ಹರಯದಲ್ಲಿ ಹುಟ್ಟಿದ ಪ್ರೀತಿ ದುರಂತವಾಗದೆ ಯಶಸ್ವಿಯಾಗಿ ಮದುವೆಯಲ್ಲಿ ಸುಖಾಂತ್ಯ ಕಂಡಿತು.. ಭೂಮಿಯ ತಂದೆಯ ತಾಳ್ಮೆ ಮತ್ತು ಬುದ್ಧಿಶಕ್ತಿಯಿಂದ ಪರಿಸ್ಥಿತಿಯನ್ನು ನಿಭಾಯಿಸುವುದರಲ್ಲಿ ಯಶಸ್ವಿಯಾದರು..

     

      ಈ ಹದಿಹರೆಯವೇ ಹಾಗೆ.. ಸ್ವಲ್ಪ ಕಾಳಜಿ ತೋರಿಸಿದರು ಅಥವಾ ನಗಾಡಿದರೂ ಪ್ರೀತಿ ಎಂದು ತಿಳಿಯುವ ಹುಚ್ಚು ಮನಸದು. 17 ವರ್ಷ ಸಾಕಿಸಲುಹಿದ ಅಪ್ಪ ಅಮ್ಮನ ಪ್ರೀತಿ ಈ ಹರೆಯದಲ್ಲಿ ಬಂಧನವೆನಿಸುತ್ತದೆ. ಸೂಕ್ಷ್ಮವಾಗಿ ಅರಿತು ತಂದೆ ತಾಯಿಗಳು ಮಕ್ಕಳ ಹರೆಯವನ್ನು ಅವರಿಗಿಷ್ಟ ಬಂದಂತೆ ಬದುಕಲು ಬಿಡದೆ ಹೆಚ್ಚಿನ ಪ್ರೀತಿ ಕಾಳಜಿಯನ್ನು ತೋರಿ ಮಕ್ಕಳ ಜೀವನದಲ್ಲಿ ನಡೆಯುತ್ತಿರುವ ಆಗುಹೋಗುಗಳ ಬಗ್ಗೆ ಗಮನಹರಿಸಿ ತಾಳ್ಮೆಯಿಂದ ಬುದ್ಧಿವಂತಿಕೆಯಿಂದ ವಿಷಯವನ್ನು ಅರಿತು ಸಂಭಾಳಿಸಿದರೆ ಬಹುಶಹ ಓಡಿ ಹೋಗಿ ಮದುವೆಯಾಗುವುದು ಮದುವೆಯಾದ ಮೇಲೆ ಬದುಕಲಾರದೆ ಸಾಯುವುದನ್ನು ತಪ್ಪಿಸಬಹುದು. ಮಕ್ಕಳನ್ನು ಅತಿಯಾಗಿ ಮುದ್ದಿಸಿ ಸಡಿಲವಾಗಿ ಬಿಟ್ಟು ಹರೆಯದಲ್ಲಿ ಹಾದಿ ತಪ್ಪುವರೆಂದು ಸ್ಟ್ರಿಕ್ಟ್ ಮಾಡಲು ಹೋದರೆ ಮಕ್ಕಳು ಸುಳ್ಳು ಹೇಳಿ ಕಣ್ಣು ತಪ್ಪಿಸುವ ಕೆಲಸವನ್ನು ಮಾಡುತ್ತಾರೆ. ಹರೆಯದಲ್ಲಿ ಮಕ್ಕಳಿಗೆ ಮುಖ್ಯವಾಗಿ ಅವರನ್ನು ಅವರ ಹೃದಯದ ಮಾತುಗಳನ್ನು ಪ್ರೀತಿಯಿಂದ ಆಲಿಸುವವರು ಬೇಕಾಗಿರುತ್ತಾರೆ.. ಮನೆಯಲ್ಲಿ ತಂದೆ ತಾಯಿಗಳು ಮಕ್ಕಳ ಹರೆಯದಲ್ಲಿ ಸ್ನೇಹಿತರಾಗಿ ಅವರ ಮಾತುಗಳನ್ನು ಆಲಿಸಿದರೆ ಮುಂದಾಗುವ ನೋವು ದುರಂತವನ್ನು ತಪ್ಪಿಸಬಹುದು.. ಪ್ರೀತಿಸುವುದು ತಪ್ಪಲ್ಲ ಪ್ರೀತಿಯ ಆಯ್ಕೆ ತಪ್ಪಾಗಿರಬಾರದು.. ತಂದೆ ತಾಯಿಗಳು ಪ್ರೀತಿಯ ವಿರೋಧಿಗಳಲ್ಲ ಆದರೆ ಮಕ್ಕಳ ಭವಿಷ್ಯ ಹಾಳಾಗಬಾರದೆಂಬ ದೃಷ್ಟಿಯಲ್ಲಿ ಪ್ರೀತಿಯನ್ನು ವಿರೋಧಿಸುತ್ತಾರೆ ಅಷ್ಟೇ.... ಜೀವನದ ಜವಾಬ್ದಾರಿ ಹೊರುವ ಶಕ್ತಿ ಇದೆ ಎಂದಾದರೆ ಸುಖವಾಗಿ ಬಾಳುತ್ತಾರೆ ಎಂಬ ನಂಬಿಕೆ ತಂದೆ ತಾಯಿಯರಲ್ಲಿ ಮೂಡಿದ್ದರೆ ಪ್ರೀತಿಯನ್ನು ವಿರೋಧಿಸದೆ ಅವರೇ ಮುಂದೆ ನಿಂತು ಮದುವೆ ಮಾಡಿದ ಉದಾಹರಣೆಗಳು ನಮ್ಮ ಮುಂದೆ ಸಾಕಷ್ಟು ಇದೆ. ಓದುವ ವಯಸ್ಸಿನಲ್ಲಿ ಓದಬೇಕು ದುಡಿಯುವ ವಯಸ್ಸಿನಲ್ಲಿ ದುಡಿಯಬೇಕು ಎಂಬುದನ್ನು ಮಕ್ಕಳಿಗೆ ಅವರ ಹರೆಯದಲ್ಲಿ ಜೊತೆನಿಂತು ಮನಸ್ಸಿನಲ್ಲಿ ಆಗುವ ತಳಮಳಗಳನ್ನು ಹಿಡಿತದಲ್ಲಿಟ್ಟುಕೊಳ್ಳುವ ಬಗ್ಗೆ ಹೇಳುತ್ತಾ ಜೊತೆ ನಿಲ್ಲುವುದರ ಮೂಲಕ ಹಾಗೆಯೇ ಮಕ್ಕಳಿಗೆ ಆಕರ್ಷಣೆ ಹಾಗೂ ಪ್ರೀತಿಯ ನಡುವಿನ ವ್ಯತ್ಯಾಸವನ್ನು ತಿಳಿಸುವ ಮೂಲಕ ಬದುಕನ್ನು ಭದ್ರವಾಗಿಸಬಹುದು ಅಲ್ಲವೇ...? ಮಕ್ಕಳ ಹರೆಯದಲ್ಲಿ ತಂದೆ ತಾಯಿ ಇಬ್ಬರೂ ಕೂಡ ಅವರ ಮೇಲೆ ಗಮನವಿಟ್ಟು ಅವರೊಂದಿಗೆ ನಿಂತಾಗ ಹರೆಯದಲ್ಲಿ ಹುಟ್ಟುವ ನಿಜವಾದ ಪ್ರೀತಿಯನ್ನು ನೋವಿರದ ರೀತಿಯಲ್ಲಿ ಬಗೆಹರಿಸಿಕೊಳ್ಳಬಹುದು ಏನಂತೀರಾ??


    


Rate this content
Log in

Similar kannada story from Classics