ಆಂತರಿಕ ಸೌಂದರ್ಯ
ಆಂತರಿಕ ಸೌಂದರ್ಯ


ನಾನ್ ಸ್ಟಾಪ್ ನವಂಬರ್ ಎಡಿಶನ್. ಆರಂಭಿಕ ಹಂತ.
*ಸೌಂದರ್ಯ.
ಹೊರಗಡೆ ಸುತ್ತಾಡುತ್ತಿರುವಾಗ ಸುಂದರವಾದ ಹುಡುಗನೋ, ಅಥವಾ ಹುಡುಗಿಯೋ ಕಣ್ಮುಂದೆ ಹಾದು ಹೋದರೆ ಮನಸ್ಸಲ್ಲಿ ಅದೇನೋ ಒಂತರ ಭಾವನೆ ಮೂಡುತ್ತದೆ.. ಪ್ರತಿಯೊಬ್ಬರಿಗೂ ಸಹ ಈ ಅನುಭವ ಆಗಿಯೇ ಇರುತ್ತದೆ.. ಹೊರಗಿನಿಂದ ಅತೀ ಚೆಂದವಾಗಿ ಕಾಣುವ ಈ ಸೌಂದರ್ಯ ಎಲ್ಲರನ್ನು ತನ್ನತ್ತ ಆಕರ್ಷಿಸಿಕೊಳ್ಳುವುದರಲ್ಲಿ ಎತ್ತಿದ ಕೈ ಅಲ್ಲವೇ.?
ಹೀಗಿದ್ದು ಈ ಬಾಹ್ಯ ಸೌಂದರ್ಯಕ್ಕೆ ಸರಿಸಾಟಿ ಎನ್ನುವಂತೆ ಆಂತರಿಕ ಸೌಂದರ್ಯವೂ ಸಹ ಒಂದು ಕೈ ಮುಂದೆಯೇ ಅನ್ನಿ.. ಮನಸ್ಸಿನ ಕಣ್ಣನ್ನು ತೆರೆದು ನೋಡಿದರೆ ಆಂತರಿಕ ಸೌಂದರ್ಯದ ದರ್ಶನವಾಗುವುದು.. ಮತ್ತು ಆಂತರಿಕ ಸೌಂದರ್ಯದ ಸುಂದರತೆಯೂ ಗೋಚರಿಸುತ್ತದೆ.
ಇನ್ನೂ ಮನೆಯಲ್ಲಿ ಮದುವೆ ವಯಸ್ಸಿಗೆ ಬಂದಿರುವ ಮಗನೋ, ಅಥವಾ ಮಗಳೋ ಇದ್ದರಂತೂ ಮುಗಿತು ನೋಡಿ,, ಹೊರಗಡೆ ಎಲ್ಲಿಗಾದರೂ ಹೋಗಿರಲಿ, ಅಲ್ಲಿ ಯಾರಾದರೂ ಅತೀ ಸುಂದರವಾದ ಮದುವೆ ಆಗದ ಹುಡುಗ, ಹುಡುಗಿಯರು ಓಡಾಡುತ್ತಿದ್ದರೆ ಮುಗಿತು, ವಧು,ವರ ಅನ್ವೇಷಣೆಯಲ್ಲಿರುವವರಂತೂ ಬಿಟ್ಟ ಕಣ್ಣು ಬಿಟ್ಟ ಹಾಗೆಯೇ ಇರುತ್ತವೆ. ತಮ್ಮ ಮಗ/ ಮಗಳಿಗೆ ಮ್ಯಾಚ್ ಆಗುತ್ತಾರೆಯೇ ಎಂದು ತಮ್ಮಷ್ಟಕ್ಕೆ ತಾವು ಲೆಕ್ಕ ಹಾಕ್ತಿರ್ತಾರೆ.. ಅದೇ ಆ ಜಾಗದಲ್ಲಿ ಕಪ್ಪು ವರ್ಣದವರೋ, ಉಬ್ಬು ಹಲ್ಲಿದ್ದು ಸ್ವಲ್ಪ ಅಂದ ಚೆಂದ ಕಮ್ಮಿ ಇರುವವರಿದ್ದರೆ ಅವರನ್ನು ತಿರುಗಿಯೂ ಸಹ ನೋಡುವುದೂ ಇಲ್ಲ. ಇಲ್ಲಿ ಆಂತರಿಕ ಸೌಂದರ್ಯಕ್ಕೆ ಯಾರೂ ಕೂಡ ಬೆಲೆ ಕೊಡುವುದಿಲ್ಲ..
ಸೌಮ್ಯ ಸ್ವಭಾವದ ಹುಡುಗಿ ಸೌಮ್ಯಾ, ಸೌಮ್ಯಾಳ ತಂದೆ ಕೇಂದ್ರ ಸರ್ಕಾರಿ ನೌಕರ, ಅಮ್ಮ ಗೃಹಿಣಿ. ಸೌಮ್ಯಾಳಿಗೆ ತಮ್ಮ ತಂಗಿ ಇದ್ದು ಸ್ವಲ್ಪ ಅನೂಕೂಲಸ್ಥ ಕುಟುಂಬ ಸೌಮ್ಯಾಳದು.
ತಂದೆ ಮೂವರು ಮಕ್ಕಳನ್ನು ಯಾವುದೇ ಕೊರತೆ ಇರದಂತೆ, ಅವರು ಇಷ್ಟ ಪಟ್ಟಿದ್ದನ್ನು ಓದಿಸಿ ತಮ್ಮ ಕರ್ತವ್ಯ ಮೆರೆದಿದ್ದರು.ಜೊತೆಗೆ ಪ್ರೀತಿ ಮಮತೆಯಲ್ಲಿಯೂ ಸಹ ಯಾವೂದೆ ಕೊರತೆ ಆಗದಂತೆ ನೋಡಿಕೊಂಡಿದ್ದರು.
ಸೌಮ್ಯಾ ಚೆನ್ನಾಗಿ ಓದುತ್ತ, ತಮ್ಮ ತಂಗಿಯರಿಗೆ ಪ್ರೀತಿಯ ಅಕ್ಕನಾಗಿ, ಜೊತೆಗೆ ಎರಡನೇ ಅಮ್ಮನಾಗಿ ನೋಡಿಕೊಳ್ಳುತ್ತಿದ್ದಳು.. ಅಕ್ಕ ಪಕ್ಕದವರಿಗೂ ಸಹ ಬಹಳ ಬೇಕಾದವಳಾಗಿ ಕೇರಿಯವರೆಲ್ಲರ ಮಗಳಂತೆ ಇರುತ್ತಿದ್ದಳು ಸೌಮ್ಯ.. ಇಷ್ಟೆಲ್ಲ ಒಳ್ಳೆಯವಳೆಂದು ಹೇಳುತ್ತಿರುವ ಸೌಮ್ಯಳ ಬಣ್ಣ ಕಡು ಕಪ್ಪು..ಸ್ವಲ್ಪೇ ಸ್ವಲ್ಪ ಹಲ್ಲು ಮುಂದು, ಅದಿಷ್ಟು ಬಿಟ್ಟರೆ ನೋಡಲು ಕೂರುಪಿಯೇನು ಅಲ್ಲದ ಸೌಮ್ಯಾಳಿಗೆ ಇಪ್ಪತ್ತು ವರ್ಷ ತುಂಬುತ್ತಿದ್ದಂತೆ ಅಪ್ಪ ಅಮ್ಮ ಅವಳಿಗೆ ಗಂಡು ಹುಡುಕುವ ಯೋಚನೆ ಮಾಡಿದರು.. ತಮಗೆ ಗೊತ್ತಿರುವ ನಾಲ್ಕಾರು ಕಡೆ ಮಗಳ ಫೋಟೋ ಕೊಟ್ಟು ಗಂಡಿನ ಬಗ್ಗೆ ವಿಚಾರಿಸತೊಡಗಿದರು.
ಸಂಬಂಧಗಳು ಬರತೊಡಗಿದವು.
ಮೊದ ಮೊದಲು ತಿಂಗಳಿಗೊಂದು ಎರಡು ವರನ ಕಡೆಯವರು ಬಂದು ಸೌಮ್ಯಳನ್ನು ನೋಡಿಕೊಂಡು ಹೋಗುತ್ತಿದ್ದರು..
ಹಾಗೆ ಬರು ಬರುತ್ತಾ ವಾರಕ್ಕೆರಡು, ಮೂರು, ನಾಲ್ಕಯಿತು ನೋಡಲು ಬರುವವರವ ಸಂಖ್ಯೆ. ಬಂದವರು ಮನೆಗೆ ಹೋಗಿ ತಮ್ಮ ಒಪ್ಪಿಗೆಯನ್ನು ತಿಳಿಸುತ್ತೇವೆ ಅಂತ ಹೇಳಿ ಹೋದವರ ಸುಳಿವೇ ಇರುತ್ತಿರಲಿಲ್ಲ..
ಸೌಮ್ಯ ಒಳಗೊಳಗೇ ನೋಂದುಕೊಳ್ಳುತ್ತಿದ್ದಳು. ಕನ್ನಡಿಯ ಮುಂದೆ ನಿಂತು ತನ್ನನ್ನು ತಾನು ನೋಡಿಕೊಂಡು, ತನಗೆ ತಾನೇ ಬೈದುಕೊಳ್ಳುತ್ತಿದ್ದಳು, ರಾತ್ರಿ ಕೋಣೆಯ ಬಾಗಿಲು ಹಾಕಿಕೊಂಡು ಸಾಕಾಗುವಷ್ಟು ಅತ್ತು ಸಮಾಧಾನ ಪಟ್ಟುಕೊಳ್ಳುತ್ತಿದ್ದಳು..
ಆಮೇಲಂತೂ ನೋಡಲಿಕ್ಕೆ ಬರುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗತೊಡಗಿತು. ಜೊತೆಗೆ ವಯಸ್ಸು ಕೂಡ ಹೆಚ್ಚಾಗತೊಡಗಿತು.. ಅಪ್ಪ ಅಮ್ಮನ
ಿಗೆ ಚಿಂತೆ ಶುರುವಾಯಿತು. ಇವಳ ಹಿಂದೆ ಇನ್ನೊಬ್ಬ ಮಗಳಿದಾಳೆ, ಇವಳ ಮದುವೆಯಾಗಿ ಅವಳಿಗೂ ಮದುವೆ ಮಾಡಬೇಕು ಅಂತ ಚಿಂತಿಸತೊಡಗಿದರು..
ಮನುಷ್ಯನ ಸೌಂದರ್ಯಕ್ಕೆ ಚಿಂತೆಗೂ ಸಂಬಂಧವಿದೆ.ಅತಿಯಾಗಿ ಚಿಂತೆ ಮಾಡುತ್ತಿದ್ದರೆ ಮುಖದ ಮೇಲಿನ ಸೌಂದರ್ಯ ಕೂಡ ಮಾಸುತ್ತದೆ. ಇದು ಸೌಮ್ಯಾಳಿಗೆ ಹೆಚ್ಚು ಪರಿಣಾಮ ಬೀರಿತ್ತು..ಮುಖದ ಮೇಲೆ ಕಪ್ಪು ಕಲೆಗಳು, ಜೊತೆಗೆ ಮಾಸಿಕ ಚಕ್ರದ ಮೊದಲೆರಡು ದಿನ ದೊಡ್ಡ ದೊಡ್ಡ ನೀರುಗುಳ್ಳೆಯಂತ ಮೊಡವೆಗಳು ಅವಳನ್ನು ಇನ್ನಷ್ಟು ಅಂದಗೆಡುವಂತೆ ಮಾಡಿದ್ದವು.
ನೋಡಲು ಬರುವ ಗಂಡಿನ ಕಡೆಯವರೆಗೆ ಚಹಾ ಅವಲಕ್ಕಿ, ಉಪ್ಪಿಟ್ಟು ಕೇಸರಿಬಾಥ್ ಕೊಟ್ಟು ಕೊಟ್ಟು ಬೇಸತ್ತು ಹೋಗಿದ್ದಳು. ಬರು ಬರುತ್ತ ರೂಢಿಯಾಗುತ್ತ ಹೋಯಿತು. ಮನಸ್ಸಲ್ಲಿ ದೇವರಿಗೆ ಹಿಡಿ ಶಾಪ ಹಾಕಿದ್ದಳು..
ದೇವರು ಅವಳ ಶಾಪಕ್ಕೆ ಹೆದರಿದನೋ ಏನೋ ಗೊತ್ತಿಲ್ಲ, ಒಬ್ಬ ಹುಡುಗನನ್ನು ಅವಳಿಗಂತಲೆ ಹುಟ್ಟಿಸಿದ್ದನೇನೋ ಅನ್ನುವಂತೆ ಒಂದು ವರನ ಕಡೆಯ ಪ್ರಪೋಸಲ್ ಬಂದಿತು.. ಹುಡುಗ ವ್ಯವಸಾಯ ಮಾಡುತ್ತಾನೆ , ಹತ್ತು ಎಕರೆ ಹೊಲ ಅನ್ನತಮ್ಮಂದಿರಿಬ್ಬರು ಇದ್ದಾರೆ ಅಂತ ಹೇಳಿದರು. ಮೊದಲೇ ಬೇಸತ್ತಿದ್ದ ಸೌಮ್ಯ ಹುಡುಗ ತನ್ನನ್ನು ಒಪ್ಪಿದರೆ ತಾನು ಸಹ ಮದುವೆಗೆ ಸಿದ್ಧ ಎಂದು ಹೇಳಿದಳು.. ಹುಡುಗಿ ನೋಡುವುದು ಮುಗಿಯಿತು. ಹುಡುಗ ಒಪ್ಪಿಗೆ ಸೂಚಿಸಿದ್ದ. ಮನೆಯಲ್ಲಿ ಎಲ್ಲರೂ ಖುಷಿಯಿಂದ ಕುಣಿದಾಡಿದ್ದರು.. ಸೌಮ್ಯಾಳ ತಂಗಿ ಅಕ್ಕನಿಗೆ ಒಪ್ಪಿಗೆ ಇದೆಯಾ?ಅಥವಾ ಬೇಸತ್ತು ಸುಮ್ನೆ ಎಲ್ಲರ ಖುಷಿಗೆ ಒಪ್ಪಿಕೊಂಡಿಯಾ ಹೇಗೆ ಎಂದು ನೂರು ಬಾರಿ ಕೇಳಿದ್ದಳು.. ಸೌಮ್ಯ ತಾನು ಮನಸಾರೆ ಒಪ್ಪಿರುವುದಾಗಿ ತಂಗಿಗೆ ಹೇಳಿದ್ದಳು.
ಆದರೂ ಸೌಮ್ಯಾಳಿಗೆ ತುಸು ಭಯವಿತ್ತು. ಹುಡುಗ ಒಪ್ಪಿದರೆ ಮುಗಿತಾ, ಹುಡುಗನ ಮನೆಯವರು ಸಹ ತನ್ನನ್ನು ಒಪ್ಪಿಕೊಳ್ಳಬೇಕಲ್ಲ ಎಂದು ಅನುಮಾನಿಸಿದ್ದಳು. ಅವಳ ಅನುಮಾನ ನಿಜ ಆಗಿತ್ತು. ಗಂಡಿನ ಮನೆಯಲ್ಲಿ ಅವನ ಅಕ್ಕ , ಅಮ್ಮ ಹುಡುಗಿ ಬಹಳ ಕಪ್ಪಾಗಿದ್ದಾಳೆ ಬೇಡ ಎನ್ನುವ ನಿರ್ಧಾರ ಮಾಡಿದ್ದರಂತೆ..
ಆದರೆ ಹುಡುಗ ಮಾತ್ರ ಸೌಮ್ಯಳ ಮನೆಯ ಸಂಸ್ಕಾರ, ಅಪ್ಪ ಅಮ್ಮನ ನಡುವಳಿಕೆ ಹಾಗೂ ಸೌಮ್ಯಳ ಸೌಮ್ಯತನಕ್ಕೆ ಇಷ್ಟಪಟ್ಟಿದ್ದ.. ಯಾರು ಏನು ಹೇಳಿದರೂ ಕೇಳದೇ ಸೌಮ್ಯಳನ್ನು ಮದುವೆ ಆಗಲು ಒಪ್ಪಿಗೆ ಕೊಟ್ಟಿದ್ದ..
ಅಂತೂ ಇಂತೂ ಸೌಮ್ಯಳ ಮದುವೆ ಚೆನ್ನಾಗಿಯೇ ಆಯಿತು..ಈಗ ಗಂಡನ ಮನೆಯಲ್ಲಿ ಗಂಡನಿಗೆ ಮೆಚ್ಚಿನ ಮಡದಿಯಾಗಿ, ಮಗಳಿಗೆ ಮುದ್ದಿನ ಪ್ರೀತಿಯ ಅಮ್ಮನಾಗಿ, ತನ್ನ ಪುಟ್ಟ ಸಂಸಾರ ಎನ್ನುವ ಸುಂದರವಾದ ಲೋಕದಲ್ಲಿ ಆರಾಮಾಗಿದ್ದಾಳೆ..
ಸೌಮ್ಯಾ ತನ್ನ ಗಂಡನಿಗೆ ಒಮ್ಮೆ ತಾನು ನೋಡಲು ಕಪ್ಪಿದ್ದರೂ ತನ್ನನ್ನು ಹೇಗೆ ಮದುವೆಯಾಗಲು ಒಪ್ಪಿದಿರಿ ಎಂದು ಕೇಳಿದಾಗ, ಅವಳ ಗಂಡ ನಾನು ನಿನ್ನ ಮನಸ್ಸಿನ ಸೌಂದರ್ಯ ನೋಡಿದೆ,, ಜೀವನ ಮಾಡಲು ಹೊಂದಾಣಿಕೆ, ಪ್ರೀತಿ ನಂಬಿಕೆ ಅವಶ್ಯಕ, ಅದೆಲ್ಲವನ್ನು ನೀನು ಪ್ರಾಮಾಣಿಕವಾಗಿ ನನಗೆ ಕೊಟ್ಟಿದೀಯಾ. ಸಾಕಲ್ಲವೇ ಇಷ್ಟು ಸುಖ ಸಂಸಾರಕ್ಕೆ ಎಂದು ನಕ್ಕನು. ಹೊರಗಿನ ಮುಖದ ಸೌಂದರ್ಯಕ್ಕಿಂತ ನಾನು ಆಂತರಿಕ ಸೌಂದರ್ಯಕ್ಕೆ ಹೆಚ್ಚು ಬೆಲೆ ಕೊಡುತ್ತೇನೆ ಎಂದು ಪ್ರೀತಿಯ ಮಡದಿಯನ್ನು ಪ್ರೀತಿಯಿಂದ ತಲೆ ಮೇಲೆ ಕೈ ಸವರಿ ಅಪ್ಪಿಕೊಂಡನು.. ಸೌಮ್ಯ ಭಾವುಕಳಾದಳು....
ನಿಜ ಹೇಳಬೇಕೆಂದರೆ ನಾನು ಕಪ್ಪಗೆ ಇದ್ದೀನಿ. ನನ್ನ ಗಂಡ ಶ್ವೇತ ವರ್ಣದವರು.. ಅವರು ನನ್ನನ್ನು ಒಪ್ಪಿಕೊಂಡು ಮದುವೆ ಆದಮೇಲೆ ನಾನು ಇದೇ ಸೌಮ್ಯಳಂತೆಯೇ ಪ್ರಶ್ನೆ ಮಾಡಿದ್ದೆ. ಅವರ ಉತ್ತರವೂ ಇದೇ ಆಗಿತ್ತು..
ಆದ್ದರಿಂದ ಬಾಹ್ಯ ಸೌಂದರ್ಯಕ್ಕೆ ಮಾರು ಹೋಗದೇ ಹೃದಯದಿಂದ ನೋಡಿ, ಆಂತರಿಕ ಸೌಂದರ್ಯ ಬಹಳ ಸುಂದರವಾಗಿ ಕಾಣುತ್ತದೆ....