ನೋಡ ಬನ್ನಿ ನಮ್ಮೂರ ದಸರಾ ಹಬ್ಬ
ನೋಡ ಬನ್ನಿ ನಮ್ಮೂರ ದಸರಾ ಹಬ್ಬ


ಭಾದ್ರಪದ ಮಾಸದಲ್ಲಿ ಬರುವ ಹುಣ್ಣಿಮೆ ಕಳೆದರೆ ಸಾಕು , ನಮ್ಮ ಭಾಗದ ಜನರಿಗೆ ಮತ್ತೊಂದು ಹಬ್ಬದ ಸಡಗರ ಶುರುವಾಗುತ್ತದೆ. ಇನ್ನು ಮುಂದಿರುವ ಹಬ್ಬದ ತಯಾರಿ ಹದಿನೈದು ದಿನಗಳ ಮೊದಲೇ ಶುರುವಾಗುತ್ತದೆ. ನಮ್ಮ ಮನೆಯಲ್ಲಿ ಒಂಭತ್ತು ದಿನಗಳ ದೀಪ ಇದೆ ಎಂದು ಕೆಲವರು , ನಮ್ಮ ಮನೆಯಲ್ಲಿ ಐದು ದಿನಗಳ ದೀಪ ಇದೆ ಎಂದು ಕೆಲವರು , ಕೆಲವೊಬ್ಬರು ಮೂರು ದಿನದ್ದು ಇದೆ , ಇನ್ನೊಂದಿಷ್ಟು ಜನ ಅಯ್ಯೋ ಇಲ್ರಿ ನಮ್ಮನ್ಯಾಗ ಮೂರು ಹೊತ್ತಿಂದು ಮಾತ್ರ ದೀಪ ಇದೆ ಎಂದು ಮಾತಾಡ್ತಿರ್ತಾರೆ. ನಮ್ಮ ಭಾಗದಲ್ಲಿ ಬೊಂಬೆಗಳನ್ನು ಕೂರಿಸುವ ಪದ್ದತಿ ಇಲ್ಲ , ಬದಲಾಗಿ ದೇವರನ್ನು ಘಟ್ಟಕ್ಕೆ ಕೂರಿಸುವ ಪದ್ದತಿ ಅಂದರೆ ಘಟ ಸ್ಥಾಪನಾ ಮಾಡುವ ಪದ್ಧತಿ ಚಾಲ್ತಿಯಲ್ಲಿದೆ. ಹೀಗಾಗಿ ಮಹಾಲಯ ಅಮಾವಾಸ್ಯೆ ಬರುವ ಒಂದು ವಾರ ಇಲ್ಲವೇ ಹದಿನೈದು ದಿನಗಳ ಮೊದಲೇ ಮನೆ ಸಾರಿಸುವುದು , ಸ್ವಚ್ಛಗೊಳಿಸುವುದು , ಬಾಂಡೆ , ಡಬ್ಬಿಗಳನ್ನು ತಿಕ್ಕುವುದು , ಹಾಸಿಗೆ ಮಡಿ ಮಾಡುವುದು , ಹಬ್ಬಕ್ಕೆ ಬೇಕಾದ ಕಿರಾಣಿ ಸಾಮಾನು ತರುವುದು ಅದನ್ನೆಲ್ಲ ಸ್ವಚ್ಛಗೊಳಿಸುವುದು ಇನ್ನು ಮುಂತಾದ ಕೆಲಸಗಳಲ್ಲಿ ಬ್ಯುಸಿ ಆಗಿರುತ್ತಾರೆ. ಇದು ಒಂದು ಮನೆ ಕತೆಯಲ್ಲ , ಹೆಚ್ಚು ಕಮ್ಮಿ ಊರಿಗೆ ಊರೇ ಈ ಕೆಲಸಗಳಲ್ಲಿ ತೊಡಗಿರುತ್ತದೆ. ಇನ್ನು ಇದೆಲ್ಲ ಮುಗಿದ ನಂತರ ಅಮವಾಸ್ಯೆಯನ್ನು ಮಧ್ಯಾಹ್ನದ ಹೊತ್ತಿಗೆ ಮಾಡಿ ಮಗಿಸುತ್ತಾರೆ.
ಸಾಯಂಕಾಲ ಕೇರಿಯ ಹುಡುಗಿಯರು , ಹೆಣ್ಣುಮಕ್ಕಳು ಅಮವಾಸ್ಯೆಯ ಮರುದಿನದಿಂದ ಬನ್ನಿಗಿಡದ ಪೂಜೆಗೆ ತೆರಳಲು ತಮ್ಮ ಜೊತೆ ಯಾರ್ಯಾರು ಬರುತ್ತಾರೆಂದು ಮೊದಲೇ ಮಾತಾಡಿಕೊಂಡು ರೆಡಿ ಆಗುತ್ತಾರೆ. ಬೆಳಿಗ್ಗೆ ಮೂರು ಗಂಟೆಗೆಲ್ಲ ಎದ್ದು ಮನೆ ಕಸ ನೆಲ ಮಾಡಿಕೊಂಡು , ಮನೆದೇವರ ಪೂಜೆ ಮಾಡಿ , ನಾಲ್ಕು ಅಥವಾ ನಾಲ್ಕೂವರೆಗೆ ಬನ್ನಿ ಗಿಡದ ಪೂಜೆಗೆ ತೆರಳುತ್ತಾರೆ. ಅಲ್ಲಿ ಪೂಜೆ ಆರತಿ ಮುಗಿಸಿಕೊಂಡು ಮನೆಗೆ ಬರುವಷ್ಟರಲ್ಲಿ ಐದು ಗಂಟೆ ಆಗಿರುತ್ತದೆ. ನಾ ಮುಂದು , ನಿ ಮುಂದು ಎಂದು ಬನ್ನಿಗಿಡದ ಪೂಜೆಗೆ ತೆರಳುತ್ತಾರೆ. ಊರಿನ ಹೆಣ್ಣುಮಕ್ಕಳೆಲ್ಲ ಬನ್ನಿ ಗಿಡದ ಸುತ್ತ , ನಮ್ಮೂರ ಹುಡುಗರ ಹಿಂಡು ಆ ಹುಡುಗಿಯರ ಸುತ್ತ ಎಂದು ಖಾಲಿ ಕುಳಿತವರು ಹಾಸ್ಯ ಮಾಡಿ ನಗುತ್ತಿರುತ್ತಾರೆ. ಹೀಗೆ ಒಂಬತ್ತು ದಿನ ಬನ್ನಿ ಗಿಡದ ಪೂಜೆ ಮಾಡಿದವರು ಹತ್ತನೆಯ ದಿನ , ವಿಜಯದಶಮಿಯಂದು ಬನ್ನಿಗಿಡಕ್ಕೆ ಬನ್ನಿಮಹಾಕಾಳಿ ತಾಯಿಗೆ ಸೀರೆ ಉಡಿಸಿ , ಉಡಿ ತುಂಬಿ , ಹೋಳಿಗೆ ಮಾಡಿ ನೈವೇದ್ಯ ಮಾಡಿ ,ಅಲ್ಲಿ ಬಂದ ಮುತ್ತೈದೆಯರಿಗೆ ಅರಿಶಿನ ಕುಂಕುಮ ಕೊಟ್ಟು ಉಡಿ ತುಂಬಿ ಪೂಜೆಯ ವಿಸರ್ಜನೆ ಮಾಡುವರು.
ಇದು ಬನ್ನಿ ಗಿಡದ ಪೂಜೆಯದಾದರೆ , ಮನೆಯಲ್ಲಿ ದೇವಿಯ ಪುರಾಣ ಓದುವುದು ಇನ್ನೊಂದು ಈ ಹಬ್ಬದ ವೈಶಿಷ್ಯ. ದೇವಿಯ ಪುರಾಣದಲ್ಲಿ ಹದಿನೆಂಟು ಅಧ್ಯಾಯಗಳಿದ್ದು ಬೆಳಿಗ್ಗೆ ಒಂದು ಅಧ್ಯಾಯ , ಸಾಯಂಕಾಲ ಒಂದು ಅಧ್ಯಾಯ ,ಓದಿ ಪ್ರತಿದಿನವೂ ಕಡುಬು ,ಅಥವಾ ಹೋಳಿಗೆ(ಒಬ್ಬಟ್ಟು) ಮಾಡಿ ನೈವೇದ್ಯ ಮಾಡುತ್ತಾರೆ. ಅದರಲ್ಲಿ ಬರುವ ಅಧ್ಯಾಯದ ಪ್ರಕಾರ ಶುಂಭ ನಿಶುಂಭರ ಸಂಹಾರದ ದಿನ ದೊಡ್ಡ ಕುಂಬಳಕಾಯಿ ಒಡೆದು ಪೂಜೆ ಮಾಡುತ್ತಾರೆ . ಇಲ್ಲಿಯೂ ಸಹ ಕೊನೆಯ ದಿನ ಮುತ್ತೈದೆಯರನ್ನು ಕರೆದು ಅರಿಶಿನ ಕುಂಕುಮ ಹಚ್ಚಿ, ಉಡಿ ತುಂಬಿ ,ಊಟ ಮಾಡಿಸಿ ಬಟ್ಟೆ ಬರೆ ಕೊಟ್ಟು ಕಳುಹಿಸುತ್ತಾರೆ. ಹೀಗೆ ಒಂಬತ್ತು ದಿನ ಆದಮೇಲೆ ಹತ್ತನೆಯ ದಿನ ವಿಜಯದ ಸಂಕೇತವಾದ ವಿಜಯದಶಮಿ ಆಚರಿಸಿ ಬನ್ನಿ ಕೊಟ್ಟು ಹಬ್ಬದ ಸಂಭ್ರಮ ಪಡುತ್ತಾರೆ.
ಇನ್ನು ನಮ್ಮ ಮನೆಯಲ್ಲಿ ದಸರಾ ಹಬ್ಬದ ಆಚರಣೆ ಬಗ್ಗೆ ಹೇಳಲೇಬೇಕು..ಬಹಳ ವಿಭಿನ್ನವಾಗಿ,ಬಹಳ ವಿಶೇಷವಾಗಿ ಈ ಹಬ್ಬವನ್ನು ಆಚರಿಸುತ್ತೇವೆ...
ಹಾವೇರಿ ಜಿಲ್ಲೆಯ ಒಂದು ಪುಟ್ಟ ಹಳ್ಳಿ ನನ್ನೂರು..ಇಲ್ಲಿ ಬಹಳ ಚನ್ನಾಗಿ ನವರಾತ್ರಿ ಹಬ್ಬ ಮಾಡಲಾಗುತ್ತೆ...ಅಮವಾಸ್ಯ ಪ್ರಾರಂಭವಾಗುವ ಮೊದಲೇ ಮನೆ ಧೂಳು ಹೊಡೆಯುವುದು,ಸುಣ್ಣ-ಬಣ್ಣ ಮಾಡುವುದು,ಹಾಸಿಗೆ ಮಡಿ ಮಾಡುವುದು,ಪಾತ್ರೆಪಗಡ ತೊಳೆಯುವುದು,ಈ ಎಲ್ಲ ತಯಾರಿ ಮಾಡುವುದರೊಳಗಾಗಿ ಅಮವಾಸ್ಯ ಬಂದೆಬಿಡುತ್ತೆ...ಈವಾಗ ಶುರು ನೋಡಿ ನಮ್ಮ ನವರಾತ್ರಿ ಹಬ್ಬ....ಒಂಬತ್ತು ದಿನಗಳ ಕಾಲ ಅಕ್ಕಪಕ್ಕದ ಮನೆಯ ಹೆಣ್ಣುಮಕ್ಕಳು ಬನ್ನಿ ಗಿಡದ ಪೂಜೆ ಮಾಡುತ್ತಾರೆ.. ೯ ದಿನಗಳು ಆ ಹೆಣ್ಣುಮಕ್ಕಳಿಗೆ ನಿದ್ದೆನೇ ಇರಲ್ಲ...ನಸುಕಿನ ಜಾವ ಮೂರುವರೆ,ನಾಲ್ಕು ಗಂಟೆಗೆ ಎದ್ದು ಮನೆ ಮಡಿ ಮಾಡಿ,ಮನೆದೇವರ ಪೂಜೆ ಮಾಡಿ ಆಮೇಲೆ ನಮ್ಮೂರಲ್ಲಿ ನಮ್ಮ ಮನೆದೇವರಾದ ಗುಡುದಯ್ಯನ ಶಿವಭಾರದ ಹತ್ತಿರವಿರುವ ಬನ್ನಿಗಿಡಕ್ಕೆ ಪೂಜೆ ಮಾಡಲು ಹೋಗುತ್ತಾರೆ..ಒಂಬತ್ತು ದಿನಗಳ ನಂತರ ಹತ್ತನೇ ದಿವಸ ವಿಜಯದಶಮಿ ದಿನ ಬನ್ನಿ ಗಿಡಕ್ಕೆ(ಬನ್ನಿಮಹಾಕಾಳಿ)ಸೀರೆ,ರವಿಕೆ ಏರಿಸಿ ಹೋಳಿಗೆ ತುಪ್ಪದ ನೈವೇಧ್ಯ ಮಾಡಿಕೊಂಡು ಬರುತ್ತಾರೆ...ಆಮೇಲೆ ಸಾಯಂಕಾಲ ಎಲ್ಲರೂ ಎಲ್ಲರ ಮನೆಗೆ ಬನ್ನಿ ಕೊಡಲು ಸುಂದರವಾಗಿ ರೆಡಿಯಾಗಿ ಓಡಾಡುತ್ತಾರೆ.. ಇನ್ನು ನಮ್ಮ ಅಮ್ಮನ ಮನೆಯಲ್ಲಿ ಬಹಳ ವಿಭಿನ್ನವಾಗಿ ನವರಾತ್ರಿ ಹಬ್ಬದ ಆಚರಣೆ ಇದೆ ಕಣ್ರಿ..... ನವರಾತ್ರಿಯ ಆಯುಧಪೂಜೆಗೆ ನಾವು ಖಂಡೆ ಪೂಜೆ ಅಂತಾ ಹೇಳ್ತೇವಿ.ಕಂಡ ದೇವರುಗಳೆಲ್ಲದರ ಪೂಜೆ ಅಂತಾ....ನಮ್ಮದು ಗೌಡಕಿ ಮನೆತನ.. ನನ್ನ ಅಜ್ಜನವರು ಗೌಡಕಿ ಮಾಡಿದ್ದರು..ಅದರ ಫಲವಾಗಿ ನಮ್ಮ ಮನೆಯಲ್ಲಿ ಗೌಡಕಿ ತಲವಾರ್( ಖಡ್ಗ ) ಇದೆ..ಅದೇ ಈ ಹಬ್ಬದ ವಿಶೇಷ ..
ನನ್ನಪ್ಪ ಬೆಳಿಗ್ಗೆ ಖಡ್ಗವನ್ನು ಕವಚದಿಂದ ಹೊರತೆಗೆದು ನಿಂಬೆಹಣ್ಣಿಂದ ತಿಕ್ಕಿತೊಳೆದು ಅದನ್ನು ಪೂಜೆ ಮಾಡಲು ಇಡುತ್ತಾರೆ. ಇದರ ಜೊತೆಗೆ ಒಂದು ಪಾಟಿಯಲ್ಲಿ ಅಂದರೆ ಸ್ಲೇಟಲ್ಲಿ ಸರಸ್ವತಿ ಚಿತ್ರ ಬರೆದು ಅದನ್ನು ಪೂಜೆಗಿಡುತ್ತಾರೆ..ಪುಸ್ತಕಗಳನ್ನು,ಲೆಕ್ಕದ ಪುಸ್ತಕಗಳನ್ನು, ಇಡಲಾಗುತ್ತದೆ..ಕುಡಗೋಲನ್ನು ಸಹ ಇಟ್ಟು ಪೂಜೆ ಮಾಡಲಾಗುತ್ತದೆ....ಅಂದು ಕರಿಗಡಬಿನ ಊಟ ಮನೆಯಲ್ಲಿ..... ಇನ್ನೂ ಮರುದಿವಸ ವಿಜಯದಶಮಿ.. ಅಂದು ನಮ್ಮ ಮನೆಯಲ್ಲಿ ಬಹಳ ಸುಂದರವಾಗಿ ಬನ್ನಿಹಬ್ಬವನ್ನು ಆಚರಿಸುತ್ತೇವೆ..ನನ್ನ ಅಪ್ಪ ಗುಡುದಯ್ಯನ ಭಕ್ತರು. ಕುದುರೆಕಾರರು. ವಿಜಯದಶಮಿಯ ದಿನ ನಮ್ಮನೆ ದೇವರಿಗೆ ದೀಪ ಬೆಳಗುವುದರ ಮೂಲಕ ಪೂಜೆ ಮಾಡುತ್ತೇವೆ.ಅಂದು ಹೋಳಿಗೆ,ಅಕ್ಕಿಹುಗ್ಗಿ,ಅನ್ನ ಸಾಂಬಾರ್, ಶಾಂಡಿಗೆ,ಕರಿದ ಮೆಣಸಿನಕಾಯಿ ನೈವೇದ್ಯ ಮಾಡುತ್ತೇವೆ. ಸಾಯಂಕಾಲ ವಾಧ್ಯ ಸಮೇತರಾಗಿ ನಮ್ಮನೆಗೆ ಊರಿನಜನರು ಬಂದು ಖಡ್ಗವನ್ನು ತೆಗೆದುಕೊಂಡು ಹೋಗಿ ಬನ್ನಿಗಿಡದ ಪಕ್ಕಕ್ಕಿಟ್ಟು ಪೂಜೆ ಮಾಡ್ತಾರೆ ಆಮೇಲೆ ಯಥಾಪ್ರಕಾರ ಮನೆಗೆ ವಾದ್ಯಸಮೇತರಾಗಿ ಅಷ್ಟೆ ಗೌರವದಿಂದ ವಾಪಸ್ ಕೊಟ್ಟು ಹೋಗುತ್ತರೆ. ತದನಂತರ ಬನ್ನಿ ಕೊಟ್ಟು ಬಂಗಾರದ ಹಾಗೆ ಇರೋಣ ಅಂತಾ ಹೇಳುತ್ತ ಒಬ್ಬರಿಗೊಬ್ಬರು ಬನ್ನಿ ಕೊಡುವುದು ನಮ್ಮ ವಾಡಿಕೆ.ಕೊನೆಯಲ್ಲಿ ಗಣಪತಿಯ ವಿಸರ್ಜನೆ ಇರುತ್ತದೆ. ಗಣೇಶ ಚತುರ್ಥಿಯ ದಿನ ತಂದಂತಹ ಗಣೇಶನನ್ನು ವಿಜಯದಶಮಿಯ ದಿನ ವಿಸರ್ಜನೆ ಮಾಡುವ ಸಂಪ್ರದಾಯ ನಮ್ಮ ಮನೆಯಲ್ಲಿದೆ ಅದರೊಂದಿಗೆ ಈ ನವರಾತ್ರಿ ಹಬ್ಬ ಮುಕ್ತಾಯಗೊಳ್ಳುತ್ತದೆ.... ಸಹೋದರಿಯರೇ, ಈ ನವರಾತ್ರಿಯ ಸಡಗರದಲ್ಲಿ ನಾವು ನೀವೆಲ್ಲರು ಬನ್ನಿ ಕೊಟ್ಟು,ಬನ್ನಿ ತೆಗೆದುಕೊಂಡು ನಾವು ನೀವೆಲ್ಲರು ಬಂಗಾರದಂಗ ಇರೋಣ.
ಜೈ ದುರ್ಗಾಮಾತಾ, ಜೈ ಮಾತಾದಿ.