Madanmadhu Madhu

Classics Inspirational Others

5  

Madanmadhu Madhu

Classics Inspirational Others

ಯಶಸ್ಸಿನ ಹಾದಿ

ಯಶಸ್ಸಿನ ಹಾದಿ

18 mins
500


ಪರ್ವತಾರೋಹಣ - Starting the Journey


"ಶಿಷ್ಯ ಸಿದ್ದನಾದಾಗ ಗುರು ಪ್ರತ್ಯಕ್ಷನಾಗುತ್ತಾನೆ," ನಾಣ್ಣುಡಿ. ಒಂದು ದಿನ ನಾನು ಸಿದ್ದನಾಗಿದ್ದೇನೆ ಅನ್ನಿಸಿತ್ತು, ಅದರಿಂದ ಗುರುಶಿಖರ ಪರ್ವತವನ್ನು ಏರಲು ಆರಂಭಿಸಿದೆ. ನಾಣ್ಣುಡಿ ನಿಜವೆ? ನಿಜಕ್ಕೂ ಪರ್ವತದ ಮೇಲೆ ಹಿರಿಯ ವೃದ್ದ ಗುರು ಇದ್ದಾನ? ಇವೆಲ್ಲ ಬರಿಯ ದಂತಕಥೆಯ? ಅಂತೆಲ್ಲಾ ಮನಸ್ಸಿನಲ್ಲಿ ಯೋಚನೆಗಳು ಬರುತ್ತಿದ್ದವು. ಈ ಬಗ್ಗೆ ಖಚಿತ ಮಾಹಿತಿ ಯಾರಲ್ಲೂ ಇರದ್ದಿದ್ದರು, ಒಂದು ವಿಷಯ ಎಲ್ಲರಿಗೂ ಗೊತ್ತು, ಅದೇನೆಂದರೆ ಈ ಊರಿನ ಬಹಳಷ್ಟು ಮಹತ್ವಾಕಾಂಕ್ಷಿಗಳು ಒಮ್ಮೆ ಈ ಪರ್ವತವನ್ನು ಏರಿದವರೇ, ಆದರೆ ಅವರು ಮತ್ತೆಂದೂ ಕಾಣಿಸಿದವರಲ್ಲ.

 

ಒಂದು ರೀತಿಯ ಅನಿರ್ವಚನೀಯ ಸೆಳೆತ ನನ್ನನ್ನು ಪರ್ವತ ಶೃಂಗದತ್ತ ಎಳೆಯುತ್ತಿತ್ತು; ಹೀಗಾಗಿ ನಾನು ಮಂಡಿಗಳು ನೋವಿನಿಂದ ಕಿರುಗುಡುತಿದ್ದರೂ, ಕಾಲುಗಳು ಉದ್ವೇಗದಿಂದ ನಡುಗುತಿದ್ದರೂ ಶೃಂಗದತ್ತಲೇ ಗುರಿಯಿಟ್ಟು ನಡೆಯುತಿದ್ದೆ. ಇದು ನನ್ನ ಆಯ್ಕೆ ಅಲ್ಲ, ಇದು ನನ್ನ ಭವಿಷ್ಯ, ನನ್ನ ವಿಧಿ. ನನಗೆ ನನ್ನ ಸಾಮರ್ಥ್ಯದ ನಿಜ ದರ್ಶನವಾಗಬೇಕಿತ್ತು, ನನ್ನೋಳಗಿನ ಮಹತ್ವಾಕಾಂಕ್ಷಿ ಉತ್ತಿಷ್ಟಿತನಾಗುವುದು ಬೇಕಿತ್ತು.

 

ಶಿಖರವೇರುತ್ತಾ ಹೋದಂತೆ, ಭಾರಿ ಹಿಮ ವರ್ಷಧಾರೆ ಹಾಗು ಪರಮ ಅಹಿತಕರವಾದ ಚಳಿಗಾಳಿ ನನ್ನನ್ನು ಸ್ವಾಗತಿಸಿತು. ಏರು ದಾರಿಯಲ್ಲಿ ಹಲವು ಸಲ ನಿಲ್ಲಬೇಕೆನಿಸುತ್ತಾ ಬಂತು. ತಣ್ಣನೆಯ ಕುಳಿರ್ಗಾಳಿಯಲ್ಲಿ ಉಸಿರಾಡಲು ಕಷ್ಟವಾಗುತ್ತಿತ್ತು. ಬಹಳ ಕಷ್ಟಪಟ್ಟು ಶೃಂಗದೆಡೆಗೆ ಕಾಲೆತ್ತಿ ಹಾಕತೊಡಗಿದೆ. ನನಗೆ ನನ್ನ ದೇಹವನ್ನು ಅಲ್ಲಿಯವರೆಗೆ ನಡೆಸುವುದು ಸಾದ್ಯವೆ, ಗೊತ್ತಿರಲಿಲ್ಲ. ಆ ವೃದ್ದ ಗುರು ಇರುವುದು ನಿಜವೇ ಆಗಿದ್ದರೆ, ಖಂಡಿತ ಆತನನ್ನು ಕಾಣುವುದು ಸುಲಭ ಅಲ್ಲ ಅನ್ನುವ ಯೋಚನೆ ಬರತೊಡಗಿತು.

 

ಆದರೆ, ಒಮ್ಮೆ ಶಿಖರದ ಮೇಲೆ ತಲುಪಿದ ಕೂಡಲೆ ಎಲ್ಲವು ಬದಲಾಗಿದೆ ಎನ್ನಿಸತೊಡಗಿತು. ಭಾರಿ ಹಿಮದ ವರ್ಷ, ಆ ಚಳಿ ಎಲ್ಲವೂ ಸೂರ್ಯನ ಪ್ರಕರ ಕಿರಣದಿಂದ ಕಡಿಮೆಯಾಗಿ ಹಿತಕಾರಿಯಾದ ಬೆಚ್ಚನೆ ವಾತವರಣ ಅನುಭವಕ್ಕೆ ಬಂತು. ಶುಬ್ರವಾದ ಗಾಳಿ ಉಸಿರಾಡಲು ಬಹಳ ಹಾಯೆನಿಸುತ್ತಿತ್ತು.

 

ಹಕ್ಕಿ ಪಕ್ಷಿಗಳ ಚಿಲಿಪಿಲಿ, ದೂರದಲ್ಲಿ ಹರಿಯುತ್ತಿರುವ ನೀರಿನ ತೊರೆಯ ಜುಳು ಜುಳು ನಿನಾದ ಕಿವಿಗೆ ಕಂಪನ್ನೀಯುತ್ತಿದ್ದವು. ನನ್ನ ಮಂಡಿ ಕೀಲುಗಳಲ್ಲಿನ ನೋವು ಮಾಯವಾಗಿದ್ದವು. ಅರೆ, ಇದೇನು ನನಗೆ ಆಗುತ್ತಿರೊ ಅನುಭವ ನಿಜವೆ? ನನ್ನ ಮನಸ್ಸು ಇಲ್ಲಿಗೆ ಬಂದು, ನನ್ನ ದೇಹ ದಾರಿಯ ಬದಿಯಲ್ಲೇ ಎಲ್ಲಾದರು ನಿಶ್ಚಲವಾಗಿ ಬಿದ್ದಿರುವುದೆ? ನಾನೇನದರು ಸ್ವರ್ಗಕ್ಕೆ ಬಂದಿರುವೆನಾ? ಅಂತೆಲ್ಲಾ ಪ್ರಶ್ನೆಗಳು ಮೂಡಲಾರಂಬಿಸಿತ್ತು.

 

ಇಲ್ಲ, ಇದು ವಾಸ್ತವವೆ. ಇದು ನಿಜವಾದ ಅನುಭವವೆ. ನನಗೆ ನನ್ನ ಬಗೆಗಿನ ಪ್ರಜ್ಞೆ ಇನ್ನೂ ಇದೆ. ನಾನಿನ್ನೂ ಈ ಭೂಲೋಕದ ವಾತವರಣ ಬಿಟ್ಟಿಲ್ಲ ಅನ್ನೋ ಭಾವನೆ ಇದೆ. ಆದರೆ, ಇದು ತುಂಬಾ ವಿಶೇಷ ಜಾಗ. ಒಂದು ರೀತಿಯ ಅನಿರ್ವಚನೀಯ ಹಿತಕರ ಅನುಭವ ಇಡಿ ಶರೀರದಲ್ಲಿ ಹರಡುತ್ತಿದೆ. ಒಮ್ಮೆ ಸುತ್ತಲೂ ನೋಡಿ ಮುಂದೆ ನೋಡಿದಾಗ, ನನ್ನ ಮುಂದೆ ಆ ವೃದ್ದ ನಿಂತಿರುವುದು ಕಂಡು ಬಂತು, ಆದರೆ ಈಗ ನನಗೆ ಆಶ್ಚರ್ಯವೇನೂ ಆಗಲಿಲ್ಲ.

 

ಆ ವೃದ್ದ ತನ್ನ ನಿಲುವಂಗಿಯ ಮುಡಿಗೆಯನ್ನು ತೆಗೆದು ನಿಂತಾಗ, ಆತ ನನ್ನ ಕಣ್ಣುಗಳಿಗೆ ಸ್ಪಷ್ಟವಾಗಿ ಕಾಣಿಸತೊಡಗಿದ. ಏನಿಲ್ಲವೆಂದರೂ ನೂರು ದಾಟಿದ ವಯಸ್ಸಿನ ವ್ಯಕ್ತಿ ಎಂದು ಹೇಳಬಹುದಾದರೂ, ದಿಗ್ಬ್ರಮೆಗೊಳಿಸುವಂತ ಶಾರೀರಿತ ದೃಡತೆ ಮತ್ತು ಮಾನಸಿಕ ಸುಸ್ಥಿರತೆ ಅನುಭವಕ್ಕೆ ಸ್ಪಷ್ಟವಾಗಿ ಬರುವಂತಿತ್ತು. ಮುಖದಲ್ಲಿನ ಉದ್ದನೆಯ ದಾಡಿ ಮತ್ತು ಗಂಭೀರವಾದ ನೋಟ, ಒಂದು ರೀತಿಯ ಭಯ ಮಿಶ್ರಿತ ಗೌರವವನ್ನು ಉಂಟುಮಾಡುತ್ತಿತ್ತು.

 

ನನ್ನ ಬಗ್ಗೆ ಹೇಳಬೇಕು ಎಂದು ಬಹಳ ಪ್ರಯತ್ನದಿಂದ ಬಾಯಿ ತೆರೆದೆ, ಆದರೆ ತೊದಲ್ನುಡಿಗಳು ಬಂದುವು..

 

 "ನಾ.... ನಾನು....."

 

"ಹೌದು, ನೀನು ಯಾರು ಎಂದು ನನಗೆ ಗೊತ್ತು, ಮೂರ್ಖ," ಗಂಭೀರವಾಣಿ ವೃದ್ದನಿಂದ ಹೊರಟಿತು. "ಜೀವನದಲ್ಲಿ ಯಶಸ್ಸು ಪಡೆಯ ಬೇಕೆಂಬ ಆಕಾಂಕ್ಷೆ ನಿನ್ನನ್ನು ಇಲ್ಲಿಗೆ ತಂದು ನಿಲ್ಲಿಸಿದೆ. ಸ್ಪರ್ಧಾತ್ಮಕ ಪ್ರಪಂಚದಲ್ಲಿ ಯಶಸ್ವಿಯಾಗಿ ಬದುಕು ಹಸನಾಗಿಸಿಕೊಳ್ಳಬೇಕೆಂಬ ಹಂಬಲ ನಿನಗಿದೆ. ನಾನು ನಿನಗೆ ಸಹಾಯ ಮಾಡಬಲ್ಲೆ. ಇಂದಿನ ಸ್ಪರ್ದಾತ್ಮಕ ಯುಗದಲ್ಲಿನ ಅಡೆತಡೆಗಳನ್ನು ಎದುರಿಸುವ, ಕಷ್ಟಕೋಟಲೆಗಳನ್ನು ಎದುರಿಸಿ ಭವಿಷ್ಯ ರೂಪಿಸಿಕೊಳ್ಳುವ ಕೆಚ್ಚೆದೆಯ ವೀರನಾಗುವುದಕ್ಕೆ ಬೇಕಾದ ರಹಸ್ಯಗಳನ್ನು ನಿನಗೆ ಉಪದೇಶಿಸಬಲ್ಲೆ, ಯಶಸ್ಸುಗಳಿಸುವ ಸಾಧನೆಗಳನ್ನು ನಿನಗೆ ಕಲಿಸಬಲ್ಲೆ."

 

ಹೀಗೆ ಹೇಳುತ್ತಾ ಆ ವೃದ್ದ ತನ್ನ ಗಡ್ಡ ನೀವಿಕೊಳ್ಳುತ್ತಾ ಯೋಚಿಸತೊಡಗಿದ ಮತ್ತು ಸಾಲೋಚನೆಯಿಂದ "ಇಷ್ಟಾದರೂ, ನಿನಗೆ ನಿನ್ನಲ್ಲೆ ಸಂದೇಹ ಇರುವಂತೆ ತೋರುತ್ತಿದೆ. ನೀನು ಸಾಧಿಸಬಲ್ಲೆ ಎನ್ನುವ ದೃಡತೆ ನಿನ್ನಲ್ಲೆ ಇರುವಂತಿಲ್ಲ. ನೀನು ಸಾಧಿಸಲೇ ಬೇಕು ಎನ್ನುವ ಉತ್ಕಟತೆಯೂ ನಿನ್ನಲ್ಲಿ ಇದ್ದಂತಿಲ್ಲ."

 

"ಹೀಗಾದ್ರೆ ಆಗುವುದಿಲ್ಲ. ಸಂದೇಹ ಚಂಚಲತೆಗೆ ಈಡು ಮಾಡುತ್ತದೆ, ಚಂಚಲತೆ ಅವಿಶ್ವಾಸಕ್ಕೆ ಎಡೆ ಮಾಡುತ್ತದೆ. ನಿನ್ನ ಅವಿಶ್ವಾಸ ಯಶಸ್ಸಿನ ಸಾಧನೆಗೆ ಮಾರಕ."

 

ಹೀಗೆ ಹೇಳುತ್ತಾ ಆ ವೃದ್ದ ತನ್ನ ಸೊಂಟದ ಪಟ್ಟಿಯಿಂದ ಖಡ್ಗವನ್ನು ಹೊರಸೆಳೆದ. ಸೂರ್ಯನ ಕಿರಣಗಳು ಖಡ್ಗದ ಮೇಲೆ ಬಿದ್ದು ಪ್ರತಿಫಲಿಸುತ್ತಿದ್ದವು, ಇದರಿಂದ ಖಡ್ಗವು ಸುವರ್ಣಕಾಂತಿಯಿಂದ ಹೊಳೆಯುತ್ತಿತ್ತು.

 

ಬೆಟ್ಟದಲ್ಲಿ ಬಿದ್ದಿದ್ದ ಒಂದಷ್ಟು ಬಂಡೆಗಲ್ಲುಗಳತ್ತಾ ನಡೆದ ವೃದ್ದ, ಕ್ಷಣ ತಡೆದು ನಿಂತ. ಮುಂದಿನ ಕ್ಷಣದಲ್ಲಿ, ಮಿಂಚಿನ ವೇಗದಲ್ಲಿ ವೃದ್ದ ಖಡ್ಗದಿಂದ ಅಷ್ಟು ಕಠಿಣವಾದ ಬಂಡೆಯನ್ನು ಸೀಳಿಹಾಕಿದ. ನಂತರ ನನ್ನತ್ತ ತಿರುಗಿದ.

 

ನಿದಾನವಾಗಿ ನಾನು ಹಿಂದಕ್ಕಡಿಯಿಡತೊಡಗಿದೆ, ಆದರೆ ಕಾಲು ತೊಡರಿ ನೆಲದಲ್ಲಿ ಬಿದ್ದೆ. ಆತ ನನ್ನತ್ತ ಬಂದು ನಿಧಾನವಾಗಿ ಖಡ್ಗವನ್ನು ಮೇಲೆತ್ತಿದ. "ನಾನು ನಿನಗೆ ನಿರ್ಧಾರ ತೆಗೆದುಕೊಳ್ಳುವುದನ್ನು ಸುಲಭವಾಗಿಸುತ್ತೀನಿ." ಎಂದು ನುಡಿದ. "ನೀನು ಈ ಸ್ಪರ್ದಾತ್ಮಕ ಯುಗದಲ್ಲಿ ಯಶಸ್ಸುಗಳಿಸ ಬಯಸುತ್ತೀಯ ಎನ್ನುವುದೇ ಆದರೆ, ನಾನು ನಿನ್ನ ತಲೆಯನ್ನು ಕುತ್ತಿಗೆಯಿಂದ ಬೇರ್ಪಡಿಸುತ್ತೇನೆ. ಹಾಗೆಂದು ನೀನು ಯಶಸ್ಸು ಬೇಡ ಎಂದರೂ, ನಿನ್ನ ತಲೆಯನ್ನು ನಿನ್ನ ಕುತ್ತಿಗೆಯಿಂದ ಬೇರ್ಪಡಿಸುತ್ತೇನೆ." "ಈಗ ಹೇಳು ನೀನು ಯಶಸ್ಸಿನ ಮಾರ್ಗದ ಆಕಾಂಕ್ಷಿಯೇ?"

 

ನಾನು ನಿಶ್ಚಲವಾಗಿ ಮಾತಿಲ್ಲದೆ ಕುಳಿತು ಬಿಟ್ಟೆ. ಯಾವುದೋ ಒಂದು ರೀತಿಯ ಅಲೌಕಿಕ ಅನುಭವ ಆಗತೊಡಗಿತು. ನಿಶ್ಶಬ್ದದಲ್ಲಿ ಅನೇಕ ಶಬ್ದಗಳು ಕೇಳಿದಂತೆನಿಸತೊಡಗಿತು.

 

ವೃದ್ದ ಆಗ ತನ್ನ ಖಡ್ಗವನ್ನು ಇಳಿಸಿ, ತನ್ನ ಸೊಂಟದ ಪಟ್ಟಿಯಲ್ಲಿ ಸೇರಿಸಿದ. ಅಕ್ಕರೆಯಿಂದ ನನ್ನ ಬುಜ ತಟ್ಟಿದ ಮತ್ತು ಹೇಳಿದ "ಶಿಷ್ಯ ಈಗ ಸಿದ್ದನಿದ್ದಾನೆ."


******

ಮೊದಲನೆ  ದಿನ - ಸಾಧನೆಯ ಹಾದಿ, ಸಾಧಕರ ಜಾಡು


"ಇದು ಯಾವ ಸಮಯ?" ವೃದ್ದ ಕೇಳಿದ.

 

"ಇದು ಈಗಿನ ಪ್ರಸ್ತುತ ಸಮಯ." ಎಂದು ಉತ್ತರಿಸಿದೆ.

 

"ನೀನೆಲ್ಲಿರುವೆ?"

 

"ನಾನು ಇಲ್ಲೆ ಇರುವೆ."

 

"ನೀನು ಏಕೆ ಇಲ್ಲಿರುವೆ?"

 

"ಅರ್ಥ ಮಾಡಿಕೊಳ್ಳುವುದಕ್ಕೆ, ಕಲಿಯುವುದಕ್ಕೆ."

 

"ನೀನು ಯಾರು?"

 

"ನಾನು ಯಶಸ್ವೀ ಜೀವನ ಮಾರ್ಗದ ಕಲಿಕಾರ್ಥಿ."

 

"ನಾನು ಯಾರು?"

 

"ನೀವು ನನಗೆ ಮಾರ್ಗ ತೋರಿಸೋ ಗುರುಗಳು."

 

ಭೇಷ್, ಒಳ್ಳೆಯದು." ಎಂದ ವೃದ್ದ. "ಈಗ ನೀನು ನಿನ್ನ ಪಯಣ ಪ್ರಾರಂಬಿಸುತ್ತಿಯ. ನಿನಗೆ ಹೊಸದಾಗಿ ಗಾಲಿ ಕಂಡು ಹಿಡಿಯಬೇಕಾದ ಅಗತ್ಯವಿಲ್ಲ. ರಸ್ತೆ ಮಾಡಬೇಕಿಲ್ಲ, ಏಕೆಂದರೆ ನಿನಗಿಂತ ಮೊದಲು ನಡೆದವರು ದಾರಿ ಮಾಡಿದ್ದಾರೆ. ಆ ಹಾದಿಯನ್ನು ಪರಿಶೀಲಿಸೋಣ. ಹೀಗೆಂದು ಹೇಳಿ ಆ ವೃದ್ದ ದೊಡ್ದ ಕನ್ನಡಿಯಂತ ವಸ್ತು ಹೊರತೆಗೆದ, ಅದು ಟ್ಯಾಬ್ಲೆಟ್ ಕಂಪ್ಯುಟರ್ ರೀತಿ ಇತ್ತು, ಆದರೆ ವಿಬಿನ್ನವಾಗಿ ಕಾರ್ಯ ನಿರ್ವಹಿಸುತಿತ್ತು. ಆ ಕನ್ನಡಿಯಲ್ಲಿ ಸಮಕಾಲಿನ ಸಾಧಕರು, ಅವರು ನಡೆದು ಬಂದ ದಾರಿ ಎಲ್ಲವೂ ಗೋಚರಿಸುತ್ತಿದ್ದವು. ನನಗೆ ಅದೋಂದು ಮಾಯಾಲೋಕದ ವಸ್ತು ಎನಿಸತೊಡಗಿತು. ವೃದ್ದನು ಅದರಲ್ಲಿ ಈಗಿನ ಯಶಸ್ವಿ ವ್ಯಕ್ತಿಗಳ ವಿವರಣೆಗಳನ್ನು ಮೂಡುವಂತೆ ಮಾಡಿದ ಹಾಗು ಕನ್ನಡಿಯನ್ನ ನನ್ನ ಕೈಗೆ ಹಸ್ತಾಂತರಿಸಿದ.

 

"ಪ್ರಶ್ನೆಗಳಿಗೆ ಕೇವಲ ಎರಡು ಜಾಗಗಳಲ್ಲಿ ಉತ್ತರ ಕಂಡುಕೊಳ್ಳಬಹುದು."ಎಂದು ಉದ್ಗರಿಸಿದ ವೃದ್ದ. "ಅದರಲ್ಲಿ ಮೊದಲನೆಯದು ನಿನ್ನೊಳಗೆ ನಿನ್ನ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು, ಇನ್ನೊಂದು ಜಾಗ ಎಂದರೆ ಹೊರಗಿನ ಪ್ರಪಂಚದ ಅನುಭವಗಳಿಂದ ಅರಿತು ಉತ್ತರ ಕಂಡುಕೊಳ್ಳುವುದು. ಸದ್ಯದ ಸಮಯದಲ್ಲಿ ನಿನ್ನೊಳಗೆ ಉತ್ತರ ಇಲ್ಲದಿರುವ ಕಾರಣ, ನೀನು ಈ ಸಾಧಕರ ಹಾದಿ ಗಮನಿಸಲು ಶುರುಮಾಡು" ಎಂದು ಗಂಭೀರ ಸ್ವರದಲ್ಲಿ ವೃದ್ದ ಹೇಳಿದ. "ಆದರೆ ಒಂದು ವಿಷಯ, ನೀನು ಆಲಿಪ್ತತೆಯಿಂದ ಗಮನಿಸಬೇಕೇ ಹೊರತು ಅದರ ಬಗ್ಗೆ ಯೋಚಿಸುತ್ತಾ ಕೂಡಬಾರದು. ಮನಸ್ಸು ತಿಳಿಯಾಗಿಸಿಕೊಂಡು ಕೇವಲ ಗಮನಿಸುತ್ತಾ ಹೋಗು. ಈಗ ಶುರುಮಾಡು" ಎಂದು ಹೇಳಿ ವೃದ್ದ ಸ್ವಲ್ಪ ದೂರ ನಡೆದು ಹಿಂತಿರುಗಿದನು "ನೆನಪಿರಲಿ, ಸಾಧನೆ ಸಾಧಕನ ಸ್ವತ್ತು, ಸೋಮಾರಿಯದ್ದಲಾ" ಎಂದು ಹೇಳಿ ನಿರ್ಗಮಿಸಿದನು.

 

ನಾನು ಎಲ್ಲ ಪ್ರಸ್ತುತ ಯಶಸ್ವಿ ವ್ಯಕ್ತಿಗಳ ಹಿನ್ನಲೆ ಮತ್ತು ನಡೆದು ಬಂದ ಹಾದಿಯನ್ನು ಗಮನಿಸುತ್ತಾ ಏಕಾಗ್ರತೆಯಿಂದ ಅರಿತುಕೊಳ್ಳುತ್ತಾ ಕುಳಿತೆ. ರಾಜ್ಯದ ಹಾಗು ರಾಷ್ಟ್ರದ ಉನ್ನತ ನಾಗರೀಕ ಸೇವೆ, ಬ್ಯಾಂಕಿಂಗ್ ಮತ್ತು ವಿಮಾ ಕ್ಷೇತ್ರ, ಬಹುರಾಷ್ಟ್ರಿಯ ಕಂಪನಿಗಳ ಉದ್ಯೊಗಿಗಳ, ಯಶಸ್ವಿ ಉದ್ದಿಮೆಕಾರರ, ಸಹಕಾರಿ ಆಂದೋಲನದ ಸಾಧಕರ ಸಾಧನೆಯ ಹಾದಿಗಳೆಲ್ಲವು ಅಲ್ಲಿ ಪ್ರದರ್ಶಿತಗೊಳ್ಳುತ್ತಿದ್ದವು.

 

ನಿರ್ಭಾವುಕವಾಗಿ ಆಲಿಪ್ತತೆಯಿಂದ ಸಾಧನೆಗಳನ್ನು ಗಮನಿಸುತ್ತಿದಂತೆಲ್ಲಾ, ಆಳಕ್ಕೆ, ಒಂದು ಕನಸುಗಳೇ ಇಲ್ಲದ ಆದರೆ ಆಕಾಂಕ್ಷೆಗಳು ತುಂಬಿದ ನೈಜ ಸ್ಥಿತಿಯ ಅನುಭವ ಆಗತೊಡಗಿತು. ಇದೊಂದು ತಪಶ್ಚರ್ಯೆ ಎನ್ನಿಸಿ ಪುಳಕಗೊಳ್ಳತೊಡಗಿದೆ. ಒಂದು ಆತ್ಮವಿಶ್ವಾಸ ತುಂಬಿದ ಭಾವಕ್ಕೆ ಆಳಕ್ಕಿಳಿದಂತೆನಿಸತೊಡಗಿತು.

******


ಎರಡನೆಯ ದಿನ - ವೃತ್ತಿಯ ಆಯ್ಕೆ:

 

"ಇವತ್ತು ನೀನು ನಿನ್ನ ಸಾಮರ್ಥ್ಯ ಮತ್ತು ಕೌಶಲ್ಯದ ಹಾಗು ನಿನ್ನ ಸಾಮರ್ಥ್ಯಕ್ಕೆ ಸೂಕ್ತವಾದ ಯಾವ ವೃತ್ತಿಯಲ್ಲಿ ಪ್ರಕಾಶಿಸಬಲ್ಲೆ ಎಂದು ಕಲಿಯುತ್ತೀಯ" ಎಂದು ವೃದ್ದ ಹೇಳಿದ. "ಈ ಎಲ್ಲ ಯಶಸ್ವಿಗಳು ಆರಿಸಿಕೊಂಡ ವೃತ್ತಿ ಮತ್ತು ಅವರ ಕೌಶಲಗಳನ್ನು ನೋಡಿ ಏನು ಗಮನಿಸಿದೆ ಎಂದು ಹೇಳು" ಎಂದು ಕೇಳಿದ.

 

"ಇಲ್ಲಿ ಒಂದೇ ಸ್ಪರ್ದ್ದಾತ್ಮಕ ಪರೀಕ್ಶೆ ಬಹಳ ಜನ ಬರೆಯುತ್ತಿದಾರೆ. ಇದರಿಂದ ಬಹಳ ಸ್ಪರ್ಧೆ ಇರುತ್ತೆ. ಹೀಗಾಗಿ ಇಲ್ಲಿ ಯಶಸ್ಸು ಕಷ್ಟಸಾದ್ಯ. ಆದ್ದರಿಂದ ಇದು ವ್ಯರ್ಥದ ಕಸರತ್ತು ಅನ್ನಿಸುತ್ತಿದೆ, ನನ್ನ ಭಾವನೆ ಸರಿಯೆ? ಎಂದು ನಾನು ಕೇಳಿದೆ.

 

"ಹಾಗೇನು ಇಲ್ಲ, ಇದು ಖಂಡಿತ ಉಪಯುಕ್ತ ಪ್ರಯತ್ನ." ಎಂದು ವೃದ್ದ ಹೇಳಿದ. "ಕಡಿಮೆ ಹುದ್ದೆ ಇದೆ ಎಂದ ಮಾತ್ರಕ್ಕೆ ಸ್ಪರ್ಧಿಸದಿದ್ದರೆ, ಅನುಭವ ಆಗೋದು ಹೇಗೆ? ಆದ್ದರಿಂದ ಇದು ಉತ್ತಮ ಪ್ರಯತ್ನ" ಎಂದು ವಿವರಿಸಿ ಹೇಳಿದ ವೃದ್ದ.

 

"ಇಲ್ಲೊಂದಿಷ್ಟು ಜನ ಕೇವಲ ಒಂದೇ ವೃತ್ತಿಯ ಕಡೆಗೆ ಏಕಚಿತ್ತದ ಪ್ರಯತ್ನ ಮಾಡುತ್ತಿದ್ದಾರೆ, ಇದು ವಿಶೇಷವಾದ ವೃತ್ತಿಯಾಗಿದೆ, ಹೀಗಾಗಿ ಇಂತಹ ವೃತ್ತಿ ಇಲ್ಲವಾದಾಗ ಇವರ ಗತಿಯೇನು? ಇದೊಂದು ಕೆಟ್ಟ ಆಯ್ಕೆಯಲ್ಲವೆ?" ಎಂದು ನಾನು ಕೇಳಿದೆ.

 

"ಖಂಡಿತವಾಗಿ ಇದು ಒಳ್ಳೆಯ ಆಯ್ಕೆಯೆ, ಏಕೆಂದರೆ ಈ ವೃತ್ತಿಯಲ್ಲಿ ಇವರಿಗೆ ಒಲವಿದೆ, ಹೀಗಾಗಿ ಪ್ರಕಾಶಿಸುತ್ತಾರೆ ಮತ್ತು ಒಂದು ವೇಳೆ ಈ ವೃತ್ತಿಯೇ ಇಲ್ಲವಾದಾಗ, ಇವರ ಕೌಶಲ ವ್ಯರ್ಥವಾಗದೆ ಬೇರೊಂದು ವೃತ್ತಿಯಲ್ಲಿ ತೊಡಗಿಸಿಕೊಳ್ಳಬಹುದು" ಎಂದು ವೃದ್ದ ಹೇಳಿದ. ಮುಂದುವರೆಸುತ್ತಾ, "ನಿನಗೆ ಎಂತಹ ವೃತ್ತಿಯಲ್ಲಿ ಆಸಕ್ತಿ ಇದೆ, ಅಲ್ಲಿನ ಪರಿಸರ ನಿನ್ನ ವಿಕಸನಕ್ಕೆ ಸಹಕಾರಿಯೇ? ನಿನ್ನ ಸಾಮರ್ಥ್ಯದಿಂದ ಅಲ್ಲಿ ಪ್ರಕಾಶಿಸಲು ಸಾದ್ಯವೆ? ಎಂದು ವಿವೇಚನೆಯಿಂದ ನಿರ್ಧರಿಸಿದರೆ, ಮುಂದೆ ಸುಗಮವಾದ ದಾರಿ ಕಾಣುತ್ತದೆ" ಎಂದು ಸುಮ್ಮನಾದ.

 

ಇಲ್ಲೀಷ್ಟು ಜನರು ತಾಂತ್ರಿಕ ಶಿಕ್ಷಣವನ್ನು ಪಡೆದು ಆಡಳಿತ ಸೇವೆಗಳ ಆಕಾಂಕ್ಷಿಗಳಾಗಿದ್ದಾರೆ, ಇಲ್ಲಿ ಇನ್ನೊಂದಿಷ್ಟು ಜನರು ತಾಂತ್ರಿಕೇತರವಾದ ಪದವಿಗಳನ್ನು ಪಡೆದು ತಾಂತ್ರಿಕ/ನಿರ್ವಹಣ ಕ್ಷೇತ್ರದತ್ತ ಹಾದಿ ಬೆಳೆಸಿದ್ದಾರೆ. ಇನ್ನು ಕೆಲವರು ವಿಜ್ಞಾನದ ವಿಧ್ಯಾರ್ಥಿಗಳು ವ್ಯಾಪಾರ ವ್ಯವಹಾರ ನಿರ್ವಹಣೆಯ ಆಯ್ಕೆ ಮಾಡಿಕೊಂಡಿದಾರೆ. ಇವುಗಳು ಉತ್ತಮವಾದ ಆಯ್ಕೆಗಳಾಗಬಲ್ಲುದೆ ಹಾಗದರೆ" ಎಂದು ಕೇಳಿದ.

 

"ಈ ಪ್ರಶ್ನೆಯನ್ನು ಸದ್ಯಕ್ಕೆ ಕಾಯ್ದಿರಿಸಿಟ್ಟುಕೊ" ಎಂದು ಹೇಳಿದ ವೃದ್ದ. "ಮತ್ತು ಇದಕ್ಕೆ ಉತ್ತರವನ್ನು ಕಡೆಯ ದಿನ ನೀನೇ ಕೊಡುವೆಯಂತೆ" ಎಂದು ಹೇಳಿ ಮುಗಿಸಿದ.


*****

ಮೂರನೆಯ ದಿನ - ನಾಗರೀಕ ಸೇವೆಗಳು


"ಇವತ್ತು ನೀನು ನಾಗರೀಕ ಸೇವೆಗಳಲ್ಲಿ ಇರುವ ಅವಕಾಶಗಳ ಬಗ್ಗೆ ಕಲಿಯುತ್ತೀಯ" ಎಂದು ಹೇಳಿದ ವೃದ್ದ. ತನ್ನ ಕೈಲಿರುವ ಕನ್ನಡಿಯಲ್ಲಿ ನಾಗರೀಕ ಸೇವೆಗಳ ಬಗ್ಗೆ ವಿವರಗಳನ್ನು ಮೂಡಿಸಿದ.

 

ನಾಗರೀಕ ಸೇವಾವರ್ಗವು ವೃತ್ತಿ ನಿರತ ಅಧಿಕಾರಿಗಳಿಂದ ಕೂಡಿದೆ. ಇವರು ತಮ್ಮ ಕಾರ್ಯವ್ಯಾಪ್ತಿಯ ಬಗ್ಗೆ ತರಬೇತಿ ಪಡೆದವರು, ವೃತ್ತಿ ಕೌಶಲ ಹೊಂದಿರುವವರು. ಆಡಳಿತ ಸೇವೆಯನ್ನು ತಮ್ಮ ವ್ರ್‍ತ್ತಿಯಾಗಿ ಸ್ವೀಕರಿಸಿದವರೂ ಆಗಿರುತ್ತಾರೆ. ತಮ್ಮ ಕೆಲಸಕ್ಕಾಗಿ ಸರ್ಕಾರದಿಂದ ವೇತನ ಪಡೆಯುತ್ತಾರೆ ಹಾಗು ನಿರ್ದಿಷ್ಟ ವಯೋಮಿತಿಯವರೆಗೂ ಖಾಯಂ ಆಗಿ ವೃತ್ತಿಯಲ್ಲಿ ಮುಂದುವರೆಯುತ್ತಾರೆ.

 

ಕೇಂದ್ರ ಲೋಕಸೇವಾ ಆಯೋಗ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಅಖಿಲ ಭಾರತೀಯ ನಾಗರೀಕ ಸೇವೆಗಳಿಗೆ ಹಾಗು ರಾಜ್ಯಗಳ ಲೋಕಸೇವಾ ಆಯೋಗ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ರಾಜ್ಯ ಮಟ್ಟದ ನಾಗರೀಕ ಸೇವೆಗಳಿಗೆ ಬರ್ತಿ ಮಾಡಲಾಗುತ್ತದೆ. ಈ ಪರೀಕ್ಷೆಗಳು ಮೂರು ಹಂತಗಳಲ್ಲಿ ಇರುತ್ತದೆ. ಪೂರ್ವಭಾವಿ ಪರೀಕ್ಷೆಯು ಮುಖ್ಯ ಪರೀಕ್ಷೆಗೆ ಅಭ್ಯರ್ತಿಗಳ ಆಯ್ಕೆಗಾಗಿ ಹಾಗು ಮುಖ್ಯ ಪರೀಕ್ಷೆಯು ವ್ಯಕ್ತಿತ್ವ ಪರೀಕ್ಷೆಗಾಗಿ ಅಭ್ಯರ್ತಿಗಳ ಆಯ್ಕೆಗಾಗಿ ಇರುತ್ತದೆ. ಇಷ್ಟು ಮಾಹಿತಿ ಕನ್ನಡಿಯಲ್ಲಿ ತೋರಿಸಲ್ಪಟ್ಟಿತು.

 

"ಇಲ್ಲಿ ಮುಖ್ಯ ಪರೀಕ್ಷೆಗೆ ಐಚ್ಚಿಕ ವಿಷಯದ ಆಯ್ಕೆ ಬಹಳ ಮುಖ್ಯ. ಈಗ ನೀನು ಕೆಲವು ಅಭ್ಯರ್ಥಿಗಳ ಆಯ್ಕೆಗಳನ್ನು ಗಮನಿಸಿ ಏನು ತಿಳಿದೆ ಎಂದು ಹೇಳು" ವೃದ್ದ ಕೇಳಿದನು.

 

"ಇಲ್ಲಿ ಕೆಲವು ಜನ ತಾವು ಪದವಿಯಲ್ಲಿ ಕಲಿತಿರುವುದಕಿಂತ ಬಿನ್ನವಾದ ಐಚ್ಚಿಕ ವಿಷಯಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದರಿಂದ ಅವರಿಗೆ ಪರೀಕ್ಷೆಯಲ್ಲಿ ತಯಾರಾಗಲು ಕಷ್ಟವಾಗಬಹುದು, ಹೀಗಾಗಿ ಇದು ಉತ್ತಮವಾದ ಆಯ್ಕೆ ಅಲ್ಲ ಎನ್ನಬಹುದೆ?’ ಎಂದು ಕೇಳಿದೆ.

 

"ಹಾಗೆಂದು ತಿಳಿಯುವುದಕ್ಕೆ ಬರುವುದಿಲ್ಲ. ಪದವಿಯಲ್ಲಿ ಓದದ್ದಿದ್ದರೂ, ಆಸಕ್ತಿ ಇರುವ ವಿಷಯ ಆಗಿರಬಾರದೆಂದೇನು ಇಲ್ಲವಲ್ಲ. ಈ ವಿಷಯಗಳು ಅವರಿಗೆ ಬರೆಯಲು ಸುಲಭವೆನಿಸಿರಬಹುದಲ್ಲವೆ. ಆದ್ದರೀಂದ ಇದು ಸರಿಯಾದ ಆಯ್ಕೆಯೂ ಆಗಿರಬಹುದು" ಎಂದು ವೃದ್ದ ಉತ್ತರಿಸಿದ.

 

"ಇಲ್ಲಿ ಕೆಲವು ವಿಜ್ಞಾನದ ಪದವಿದರರು ತಮ್ಮ ಪದವಿಯಲ್ಲಿನ ವಿಷಯಗಳನ್ನೇ ಐಚ್ಚಿಕ ವಿಷಯವಾಗಿ ತೆಗೆದುಕೊಂಡಿದ್ದಾರೆ. ಇದರಿಂದ ಇವರಿಗೆ ಕ್ಲಿಷ್ಟವಾದ ಪರೀಕ್ಷೆ ಎದುರಾಗಬಹುದು. ಹೀಗಾಗಿ ಇದು ಅಷ್ಟು ಉತ್ತಮವಾದ ಅಯ್ಕೆ ಅಲ್ಲ ಎನ್ನಬಹುದೆ?" ಎಂದು ಕೇಳಿದೆ.

 

"ಇದು ಉತ್ತಮವಾದ ಆಯ್ಕೆಯೇ ಆಗಿರಬಹುದು. ಏಕೆಂದರೆ ಪದವಿಯಲ್ಲಿ ಅದ್ಯಯನ ನಡೆಸಿದ ಅನುಭವ ಇಲ್ಲಿ ಉಪಯೋಗ ಬಂದು ಇವರ ತಯಾರಿ ಸುಲಭ ಆಗಬಹುದು. ಸಮಯದ ಉಳಿತಾಯದಿಂದ ಇವರು ಸಾಮಾನ್ಯ ಅದ್ಯಯನದ ಕಡೆಗೆ ಗಮನಕೊಟ್ಟು, ಗೆಲವು ಸಾಧಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ." ಎಂದು ವೃದ್ದ ಉತ್ತರಿಸಿದ.

 

"ಹಾಗಾದರೆ, ಇಲ್ಲಿ ಕೆಲವರು ಸುಮ್ಮನೆ ಪರೀಕ್ಷೆಗಳನ್ನು ಕಟ್ಟಿ, ತಯಾರಿ ನಡೆಸದೆ ಹಾಗೆಯೇ ಬರೆಯುತ್ತಾರೆ. ಇವರು ಪರೀಕ್ಷೆ ಬರೆಯಬೇಕಾದರೂ ಬೇರೆ ವ್ಯಾಪಾರ ವ್ಯವಹಾರದ ಕಡೆ ಗಮನ ವಹಿಸಿ ಯೋಚನೆ ಮಾಡುತ್ತಿದ್ದಾರೆ. ಇವರು ಯಾವ ಗುಂಪಿಗೆ ಸೇರುತ್ತಾರೆ?" ಎಂದು ಕೇಳಿದೆ.

 

ಈ ಪ್ರಶ್ನೆಯನ್ನು ಸದ್ಯಕ್ಕೆ ಕಾಯ್ದಿರಿಸಿಟ್ಟುಕೊ" ಎಂದು ಹೇಳಿದ ವೃದ್ದ. "ಮತ್ತು ಇದಕ್ಕೆ ಉತ್ತರವನ್ನು ಕಡೆಯ ದಿನ ನೀನೇ ಕೊಡುವೆಯಂತೆ" ಎಂದು ಹೇಳಿ ಮುಗಿಸಿದ.

*****

 

ನಾಲ್ಕನೆಯ ದಿನ - ಇತರ ಕೇಂದ್ರ ಹಾಗು ರಾಜ್ಯ ಸರ್ಕಾರಿ ಉದ್ಯೋಗಗಳು

 

"ಇಂದು ನೀನು ಸರ್ಕಾರಿ ಮಟ್ಟದ ಇತರ ಹುದ್ದೆಗಳು ಮತ್ತು ಅವಕಾಶಗಳ ಬಗ್ಗೆ ತಿಳಿದುಕೋಳ್ಳುತ್ತೀಯ" ಎಂದು ವೃದ್ದ ಕನ್ನಡಿಯ ಫಲಕವನ್ನು ನನ್ನ ಕೈಗೆ ನೀಡಿದ.

 

ನನ್ನ ಕೈಗೆ ಬರುತ್ತಿದ್ದಂತೆ ಅದು ಮಾಹಿತಿ ತೋರಿಸಲಾರಂಬಿಸಿತು. ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ವಿವಿಧ ಇಲಾಖೆಗಳಿಗೆ ಗುಮಾಸ್ತ, ಲೆಕ್ಕಿಗ, ಅಧಿಕಾರಿ ಹುದ್ದೆಗಳಿಗೆ ನೇಮಕಾತಿಗಳು ನಿರಂತರವಾಗಿ ನಡೆಯುತ್ತಿದ್ದು; ಉದ್ಯೋಗಾಕಾಂಕ್ಷಿಗಳು ಇಲ್ಲಿ ಅವರ ವಿಧ್ಯಾರ್ಹತೆ ಹಾಗು ಸಾಮರ್ಥ್ಯಕ್ಕೆ ತಕ್ಕ ಹಾಗೆ ಅಭ್ಯರ್ಥಿತನವನ್ನು ತೋರಿಸಿ ಅರ್ಜಿ ಸಲ್ಲಿಸಬಹುದಾಗಿದೆ.

 

ಇದಲ್ಲ್ದೆ ಅರೆ ಸರ್ಕಾರಿ, ಸಾರ್ವಜನಿಕ ಉದ್ದಿಮೆಗಳು ಹಾಗು ಬ್ಯಾಂಕುಗಳಲ್ಲಿಯು ನೇಮಕಾತಿಗಳು ನಡೆಯುತ್ತಿದ್ದು, ಇಲ್ಲಿಯು ಪ್ರಯತ್ನಿಸಬಹುದು.

 

ದೇಶದ ಸೇನೆಗೆ ಕೂಡ ವಿವಿಧ ಹುದ್ದೆಗಳಿಗೆ ನೇಮಕಾತಿ ನಿರಂತರವಾಗಿ ನಡೆಯುತ್ತಿದ್ದು, ಸದೃಡ ದೇಹ ಮತ್ತು ಸ್ವಸ್ಥ ಮನಸ್ಸಿನವರಿಗೆ ದೇಶ ಸೇವೆಯಲ್ಲಿ ತೊಡಗಿಸಿಕೊಳ್ಳಲು ಒಂದು ಸದವಕಾಶವಾಗಿದೆ. ಸಾರ್ವಜನಿಕ ಉದ್ದಿಮೆಗಳಾದ ಕೈಗಾರಿಕೆಗಳು, ತಾಂತ್ರಿಕ ಕೌಶಲವಿರುವ ಅಭ್ಯರ್ಥಿಗಳನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿರುತ್ತದೆ.

 

ಮಾಹಿತಿ ನೋಡುತ್ತಿದ್ದಂತೆಯೇ, ವೃದ್ದನು "ತಮ್ಮ ವಿಧ್ಯಾರ್ಹತೆಗೆ ತಕ್ಕ ಹಾಗು ಅವರ ಕೌಶಲಗಳಿಗೆ ಹೊಂದುವ ಸಾಕಷ್ಟು ವೃತ್ತಿಗಳ ಮಾಹಿತಿ ಇಲ್ಲಿದೆ, ಇದನ್ನು ನೋಡಿ ನೀನು ಏನು ತಿಳಿದು ಹೇಳು" ಎಂದು ಕೇಳಿದ.

 

"ಇಲ್ಲಿ ಕೆಲವರು ತಮ್ಮ ವಿಧ್ಯಾರ್ಹತೆಗಿಂತ ಕಡಿಮೆ ಅಗತ್ಯ ವಿಧ್ಯಾರ್ಹ್ತತೆ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದಾರೆ. ಹೀಗೆ ಮಾಡುವುದರಿಂದ ಕಡಿಮೆ ವಿಧ್ಯಾರ್ಹ್ತತೆ ಇರುವವರಿಗೆ ಇವರೊಂದಿಗೆ ಸ್ಪರ್ಧಿಸಲು ಕಷ್ಟ ಅಲ್ಲವೆ. ಇದರಿಂದ ಇದು ತಪ್ಪು ನಡೆ ಎನ್ನಬಹುದೆ?" ಎಂದು ಕೇಳಿದೆ.

 

"ಕನಿಷ್ಟ ನಿಗದಿಪಡಿಸಿದ ವಿಧ್ಯಾರ್ಹತೆಗಿಂತಲೂ ಹೆಚ್ಚಿನ ವಿಧ್ಯಾರ್ಹತೆ ಇದ್ದರೂ, ಅವರ ಕೆಲಸದ ಅಗತ್ಯ ಮತ್ತು ಅನಿವಾರ್ಯ ಪ್ರಸಂಗಗಳನ್ನು ಗಮನಕ್ಕೆ ತೆಗೆದುಕೊಳಬೇಕಾಗುತ್ತದೆ. ಹೀಗಾಗಿ ಅವರಿಗೆ ನಿಜವಾಗಲೂ ಕೆಲಸದ ಅಗತ್ಯತೆ ಇದ್ದರೆ ಅರ್ಜಿ ಸಲ್ಲಿಸಲು ಅಡ್ಡಿ ಇಲ್ಲ" ಎಂದು ವೃದ್ದ ಉತ್ತರಿಸಿದ.

 

"ಹಾಗದರೆ ಇಲ್ಲಿ ಕೆಲವರು ಸಿಕ್ಕ ಕೆಲಸವನ್ನು ಮಾಡದೆ, ಪದೆ ಪದೆ ಅರ್ಜಿ ಸಲ್ಲಿಸಿ ಪರೀಕ್ಷೆ ಬರೆಯುತ್ತಿದ್ದಾರೆ. ಇದರಿಂದ ಬೇರೆ ಅಭ್ಯರ್ಥಿಗಳಿಗೆ ತೊಂದರೆ ಅಲ್ಲವೆ? ಹೀಗಾಗಿ ಇದು ತಪ್ಪು ನಡೆ ಎಂದು ತಿಳಿಯಬಹುದೆ?" ಎಂದು ಕೇಳಿದೆ.

 

ಈ ಪ್ರಶ್ನೆಯನ್ನು ಸದ್ಯಕ್ಕೆ ಕಾಯ್ದಿರಿಸಿಟ್ಟುಕೊ" ಎಂದು ಹೇಳಿದ ವೃದ್ದ. "ಮತ್ತು ಇದಕ್ಕೆ ಉತ್ತರವನ್ನು ಕಡೆಯ ದಿನ ನೀನೇ ಕೊಡುವೆಯಂತೆ" ಎಂದು ಹೇಳಿ ಮುಗಿಸಿದ.


*****

 

ಐದನೆಯ ದಿನ - ಬಹುರಾಷ್ಟ್ರೀಯ ಕಂಪನಿಗಳು

 

ಐದನೆಯ ದಿನವಾದ ಇಂದು, ನೀನು ಬಹುರಾಷ್ಟ್ರೀಯ ಕಂಪನಿಗಳಲ್ಲಿನ ಅವಕಾಶಗಳ ಬಗ್ಗೆ ತಿಳಿದುಕೊಳ್ಳುತ್ತೀಯ" ಎಂದು ಹೇಳಿ ತನ್ನ ಕೈಯಲ್ಲಿದ್ದ ಕನ್ನಡಿಯನ್ನ ಹಸ್ತಾಂತರಿಸಿದ.

 

ಅದರಲ್ಲಿ ಪ್ರತಿಫಲನಗೊಂಡಿದ್ದು - ಜಾಗತೀಕರಣವಾದ ಮೇಲೆ ಬಹುರಾಷ್ಟೀಯ ಕಂಪನಿಗಳು ಭಾರತಕ್ಕೆ ಬಂದು ಬಹಳಷ್ಟು ವೃತ್ತಿಪರ ಹಾಗು ಇತರ ಕ್ರಿಯಾಶೀಲ ಉದ್ಯೋಗಗಳ ಬಾಗಿಲು ತೆರೆದಿದೆ. ಇದು ಕೇವಲ ಮಾಹಿತಿ ತಂತ್ರಜ್ಞಾನವಷ್ಟೇ ಅಲ್ಲದೆ ಇತರ ಕೌಶಲಯುತ ಕಲಸಗಳಿಗೆ ಇಲ್ಲಿ ಅವಕಾಶವಿದೆ. ಮೋಟಾರು ವಾಹನ ತಯಾರಿಕಾ ಸಂಸ್ಥೆಯಿಂದ ಹಿಡಿದು ಸಾರ್ವಜನಿಕ ಜೀವನದ ಅಗತ್ಯ ವಸ್ತುಗಳ ಸೇವೆಯವರೆಗೂ ಎಲ್ಲ ರಂಗಗಳಲ್ಲಿ ಇಂದು ಉದ್ಯೋಗ ಅವಕಾಶ ತೆರೆದಿದೆ.

 

"ಮಾಹಿದಿ ಮತ್ತು ಇಲ್ಲಿನ ವ್ಯಕ್ತಿಗಳ ಚಿತ್ರಣವನ್ನು ಗಮನಿಸಿದಾಗ ನಿನಗೇನು ತೋರುತ್ತದೆ ಹೇಳು" ಎಂದು ವೃದ್ದ ಕೇಳಿದ.

 

"ಖಾಸಗಿ ಕ್ಷೇತ್ರದಲ್ಲಿ ಬಹಳಷ್ಟು ಅವಕಾಶಗಳಿದ್ದು, ಉತ್ತಮ ಕೌಶಲ್ಯಗಳಿರುವವರಿಗೆ ಇಲ್ಲಿನ ರಂಗದಲ್ಲಿ ಬಹಳ ಯಶಸ್ಸು ಕಾದಿದೆ. ಕೌಶಲ್ಯಗಳೆಂದರೆ ನಮಗೆ ವೃತ್ತಿಯಲ್ಲಿ ಮುಂದುವರೆಯಲು ಅಗತ್ಯವಾಗಿ ಬೇಕಿರುವ ಜ್ಞಾನ ಮತ್ತು ಅದರ ಸರಿಯಾದ ಬಳಕೆಯಾಗಿದೆ" ಎಂದು ಹೇಳಿದೆ.

 

ಮೆಚ್ಚುಗೆಯಿಂದ ತಲೆದೂಗುತ್ತ ವೃದ್ದ "ಇನ್ನು ಏನು ತಿಳಿದೆ ಹೇಳು" ಎಂದು ಕೇಳಿದ.

 

"ಇಲ್ಲಿ ಕೆಲವರು ತಾಂತ್ರಿಕ ಶಿಕ್ಷಣವನ್ನು ಪಡೆದು ಕಚೇರಿ ಆಡಳಿತದ ವೃತ್ತಿಯನ್ನು ಮಾಡುತ್ತಿದ್ದಾರೆ. ಇದರಿಂದ ಕಚೇರಿ ನಿರ್ವಹಣೆಯಲ್ಲಿ ತರಬೇತಿ ಹಾಗು ನೈಪುಣ್ಯತೆಯ ಶಿಕ್ಷಣವನ್ನು ಪಡೆದವರಿಗಿಂತಲೂ ಇವರು ಕೌಶಲ ಹೊಂದಿರುವುದು ಸಂಶಯ. ಹೀಗಾಗಿ ಇದು ಸೂಕ್ತ ಆಯ್ಕೆಯಲ್ಲ ಅಲ್ಲವೆ" ಎಂದು ಕೇಳಿದೆ.

 

ಈ ಪ್ರಶ್ನೆಯನ್ನು ಸದ್ಯಕ್ಕೆ ಕಾಯ್ದಿರಿಸಿಟ್ಟುಕೊ" ಎಂದು ಹೇಳಿದ ವೃದ್ದ. "ಮತ್ತು ಇದಕ್ಕೆ ಉತ್ತರವನ್ನು ಕಡೆಯ ದಿನ ನೀನೇ ಕೊಡುವೆಯಂತೆ" ಎಂದು ಹೇಳಿ ನಿರ್ಗಮಿಸಿದ.


*****

 

ಆರನೆಯ ದಿನ - ಖಾಸಗಿ ವ್ಯಾಪಾರ ಉದ್ಯಮ

"ಇವತ್ತು ನೀನು ಖಾಸಗಿಯಾಗಿ ವ್ಯಾಪಾರ ಮತ್ತು ಉದ್ದಿಮೆ ನಡೆಸುವುದರ ಬಗ್ಗೆ ತಿಳಿದುಕೊಳ್ಳುತ್ತಿಯೆ" ಎಂದು ಹೇಳುತ್ತ ಕನ್ನಡಿಗಾಗಿ ನೋಡುವಷ್ಟರಲ್ಲಿ, ನಾನು ಅದನ್ನು ತೆಗೆದು ಓದಲು ಆರಂಭಿಸಿದ್ದೆ.

 

ಎಲ್ಲರೂ ಉದ್ಯೋಗಿಗಳೇ ಆಗಲು ಬಯಸಿದರೆ, ಉದ್ಯೋಗದಾತರು ಅರ್ಥಾತ್ ಉದ್ಯೋಗ ಕೊಡುವವರು ಯಾರು ಆಗುತ್ತಾರೆ ಎನ್ನುವ ಪ್ರಶ್ನೆ ಬಂದೇ ಬರುತ್ತದೆ. ಸರ್ಕಾರವೇ ಎಲ್ಲರಿಗೂ ಉದ್ಯೋಗ ಕೊಡಲಾಗುವುದಿಲ್ಲ. ಒಂದು ಕಲ್ಯಾಣರಾಜ್ಯದ ಸ್ಥಾಪನೆಯಲ್ಲಿ ಖಾಸಗಿ ಉದ್ದೆಮೆ ಹಾತು ಸ್ವ್ಂತ ವ್ಯವಹಾರದ ಪಾತ್ರ ಪ್ರಮುಖವಾದದ್ದು.

 

ನಮ್ಮಲ್ಲಿ ಸ್ವಂತ ವ್ಯವಹಾರ ಹಾಗು ಉದ್ದಿಮೆ ಸ್ಥಾಪಿಸಲು ಪ್ರೋತ್ಸಾಹವಿದ್ದು, ಇದರ ಸದುಪಯೋಗ ಪಡೆದುಕೊಂಡು ಬಾಳು ಕಟ್ಟಿಕೊಂಡವನು ಬಹಳಷ್ಟು ಜನರಿದ್ದಾರೆ. ಉದ್ಯೋಗ ಸೃಷ್ಟಿ ಯೋಜನೆಯಡಿ ಆಕಾಂಕ್ಷಿ ಸಾಹಸಿ ಉದ್ಯಮಿಗಳಿಗೆ ಸೂಕ್ತ ಪ್ರೋತ್ಸಾಹವಿದೆ. ಇದರಿಂದ ಒಂದು ಉದ್ದಿಮೆ ಸೃಷ್ಟಿ ಹಾಗು ಅದರಿಂದ ಹತ್ತು ಜನರಿಗೆ ಉದ್ಯೋಗ ಸೃಷ್ಟಿ ಆಗುತ್ತದೆ. ಇದು ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಇದು ರಾಷ್ಟ್ರದ ಹಣಕಾಸಿನ ಅಭಿವೃದ್ದಿ ಹಾತು ಹರಿವಿಗೂ ಸಹಾಯಕಾರಿ.

 

"ಸೂಕ್ತ ಮಾಹಿತಿ ಮತ್ತು ಯೋಜನೆಯ ಸದುಪಯೋಗ ಪಡೆದುಕೊಂಡ ಯಶಸ್ವೀ ವ್ಯಕ್ತಿಗಳ ಪರಿಚಯವನ್ನು ಗಮನಿಸು, ನಿನ್ನ ಕಲಿಗೆ ಏನು ಎಂದು ಹೇಳು" ಎಂದು ವೃದ್ದ ಕೇಳಿದ.

 

"ಇದು ಮಹೋನ್ನತವಾದ ಅವಕಾಶಗಳ ಬಾಗಿಲಾಗಿದೆ. ಆದರೆ ಹಾಕಿದ ಬಂಡವಾಳವನ್ನು ಸರಿಯಾಗಿ ನಿಭಾಯಿಸಲು ಆಗದ ಕೆಲವರು, ಕಷ್ಟಪಡುತ್ತಿರುವುದನ್ನು ನೋಡಿದರೆ ಇತರರಿಗೆ ಈ ಹಾದಿ ತುಳಿಯಲು ಹೆದರಿಕೆ ಎನಿಸುತ್ತದೆ ಅಲ್ಲವೆ? ಎಂದು ಕೇಳಿದೆ.

 

"ಹೆದರಿಕೆ ಪಡುವುದಕ್ಕಿಂತಲೂ, ಆ ಹಾದಿಯಲ್ಲಿ ಅವರು ಎಲ್ಲಿ ತಪ್ಪು ಹೆಜ್ಜೆ ಇಟ್ಟರು ಎಂದು ಗಮನಿಸಿ ತಿಳಿದುಕೊಳ್ಳಬೇಕು. ತಪ್ಪುಗಳಿಂದ ಕಲಿಯಬೇಕು ಹಾಗು ಸೋಲನ್ನ ಗೆಲವಿನ ಸೋಪಾನವೆಂದು ಪರಿಗಣಿಸಿ ಮುನ್ನಡೆಯಬೇಕು. ಎಲ್ಲಿ ತಪ್ಪು ನಡೆಯಿತು, ಅದರ ಪರಿಣಾಮ ಹೇಗೆ ಬೀರಿತು ಎನ್ನುವ ವಿಶ್ಲೇಷಣೆ ನಡೆಸುವ ವಿವೇಚನೆ ಬೆಳೆಸಿಕೊಳ್ಳಬೇಕು. ಇದರಿಂದ ಗೆಲುವು ನಿಶ್ಚಿತ" ಎಂದು ವೃದ್ದ ಉತ್ತರಿಸಿದ.

 

"ಇನ್ನು ಕೆಲವರು ಅವರ ವಿದ್ಯೆ ಮತ್ತು ಅನುಬವಕ್ಕೆ ಹೊರತಾದ ಉದ್ದಿಮೆಗಳನು ಸ್ಥಾಪಿಸಿದ್ದಾರೆ. ಇದು ಅಪಾಯಕಾರಿ ನಡೆಯಲ್ಲವೆ?" ಎಂದು ಕೇಳಿದೆ.

 

ಈ ಪ್ರಶ್ನೆಯನ್ನು ಸದ್ಯಕ್ಕೆ ಕಾಯ್ದಿರಿಸಿಟ್ಟುಕೊ" ಎಂದು ಹೇಳಿದ ವೃದ್ದ. "ಮತ್ತು ಇದಕ್ಕೆ ಉತ್ತರವನ್ನು ಕಡೆಯ ದಿನ ನೀನೇ ಕೊಡುವೆಯಂತೆ" ಎಂದು ಹೇಳುತ್ತಿರುವಾಗಲೆ, "ಗುರುಗಳೆ, ನಾಳೆಯೇ ಕಡೆಯ ಹಾತು ಎಳನೆಯ ದಿನ ಅಲ್ಲವೆ" ಎಂದು ಕೇಳಿದೆ.

 

"ಹೌದು," ಎಂದು ಗಂಭೀರ ದ್ವನಿಯಲ್ಲಿ ಉದ್ಗರಿಸಿದ ವೃದ್ದ "ಆದ್ದರಿಂದ ಇಂದು ರಾತ್ರಿ ನೀನು ಉತ್ತಮವಾದ ನಿದ್ದೆಯನ್ನು ಮಾಡಿ, ನಾಳೆಗೆ ಸಿದ್ದನಾಗಿ ಬಾ" ಎಂದು ಹೇಳಿ ನಿರ್ಗಮಿಸಿದ.

 

*****

ಏಳನೆಯ ದಿನ - ಕಡೆಯ ದಿನ

 

"ಇದು ಯಾವ ಸಮಯ?" ವೃದ್ದ ಕೇಳಿದ.

 

"ಇದು ಈಗಿನ ಪ್ರಸ್ತುತ ಸಮಯ." ಎಂದು ಉತ್ತರಿಸಿದೆ.

 

"ನೀನೆಲ್ಲಿರುವೆ?"

 

"ನಾನು ಇಲ್ಲೆ ಇರುವೆ."

 

"ನೀನು ಏಕೆ ಇಲ್ಲಿರುವೆ?"

 

"ಅರ್ಥ ಮಾಡಿಕೊಳ್ಳುವುದಕ್ಕೆ, ಕಲಿಯುವುದಕ್ಕೆ."

 

"ನೀನು ಯಾರು?"

 

"ನಾನು ಯಶಸ್ವೀ ಜೀವನ ಮಾರ್ಗದ ಕಲಿಕಾರ್ಥಿ."

 

"ನಾನು ಯಾರು?"

 

"ನೀವು ನನಗೆ ಮಾರ್ಗ ತೋರಿಸೋ ಗುರುಗಳು."

 

"ಒಳ್ಳೆಯದು," ಎಂದ ವೃದ್ದ. "ಈಗ ನೀನು ನಿನ್ನ ವಿಧಿಗೆ ಮುಖಾಮುಖಿಯಾಗುವೆ. ಪ್ರತಿದಿನವು ನೀನು ಕೇಳಿದ ಪ್ರಶ್ನೆಗಳಲ್ಲಿ ಒಂದೊಂದು ಪ್ರಶ್ನೆಗಳಿಗೆ ನಾನು ಉತ್ತರಿಸಿರಲ್ಲಿಲ್ಲ. ನಿನಗೆ ಪ್ರಶ್ನೆಗಳನ್ನು ಕಾಯ್ದಿರಿಕೊಂಡು, ಉತ್ತರಗಳನ್ನು ನೀನೆ ನನಗೆ ಕಡೆಯ ದಿನ ಹೇಳಬೇಕು ಎಂದಿದ್ದೆ" ಎಂದು ನುಡಿದ. ನೇರ ಗಂಭೀರ ನೋಟದಿಂದ ನನ್ನನ್ನೇ ದೃಷ್ಟಿಸಿ ನೋಡುತ್ತಾ ವೃದ್ದ ಮುಂದುವರೆಸಿದ "ಈಗ ನೀನು ಉತ್ತರಿಸುವ ಸಮಯ ಬಂದಿದೆ. ನೀನು ಪ್ರಶ್ನೆಗಳಿಗೆ ಉತ್ತರ ಕೊಡು, ಇಲ್ಲವೆ ನಾನು ನನ್ನ ಖಡ್ಗದಿಂದ ನಿನ್ನ ತಲೆಯನ್ನ ದೇಹದಿಂದ ಬೇರ್ಪಡಿಸುತ್ತೇನೆ" ಎಂದು ಗಂಭೀರವಾಣಿಯಲ್ಲಿ ಹೇಳಿದ.

 

ನಾನು ಉತ್ತರಗಳಿಗೆ ಬಹಳಷ್ಟು ಹುಡುಕಿದ್ದರೂ, ನನಗೆ ಸೂಕ್ತ ಉತ್ತರಗಳು ಸಿಕ್ಕಿರಲಿಲ್ಲ. ಉತ್ತರಗಳಿಗಾಗಿ ನಾನು ಸಾಕಷ್ಟು ಪ್ರಯತ್ನ ಪಟ್ಟಿದ್ದರೂ ಅದು ವ್ಯರ್ಥವಾಗಿತ್ತು. ಮೌನದಿಂದ ಕುಳಿತು ಬಿಟ್ಟೆ. ಹೇಳಲು ನನ್ನಲ್ಲಿ ಏನೂ ಉಳಿದಿರಲ್ಲಿಲ್ಲ. ಹಾಗೆಯೇ ಆ ವೃದ್ದನ ಕಣ್ಣುಗಳನ್ನೇ ತದೇಕವಾಗಿ ನೋಡುತ್ತ ಮುಂದೊದಗಲಿರುವ ಮರಣಕ್ಕೆ ಕಾಯತೊಡಗಿದೆ.

 

ಆಗಲೇ, ಹಿಂದಿನ ದಿನಗಳ ಘಟನಾವಳಿಗಳು ಚಿತ್ರದಂತೆ ನನ್ನ ಮನ್ಃಪಟಲದಲ್ಲಿ ಮೂಡತೊಡಗಿತು. ಎಲ್ಲವೂ ಕನಸಿನಲ್ಲಿ ಇದ್ದಂತೆ ಮೂಡಿ ಬರತೊಡಗಿದವು. ಕನಸುಗಳು, ಹೌದು ದೃಶ್ಯ ಶ್ರವಣಗಳಿರುವ ಕನಸುಗಳು. ನನ್ನ ಮನಸ್ಸಿನಲ್ಲಿ ನದಿಯೊಂದು ಬೋರ್ಗರೆದು ಹರಿಯುವಂತೆ ಅನ್ನಿಸತೊಡಗಿತು. ನದಿಯು ಹರಿಯುತ್ತ ನನ್ನ ಆಲೋಚನೆಗಳಿಗೆ ಸ್ವಚ್ಚತೆ ಮತ್ತು ಸ್ಪಷ್ಟತೆ ಕೊಡಲಾರಂಬಿಸಿತು. ದುಗುಡವು ಕರಗಿ ಶಾಂತಿ ನೆಲೆಸಿತು. ಈಗ ನಾನು ಮುಗುಳ್ನಗೆ ನಕ್ಕೆ.

 

""ನನಗೆ ಹೆದರಿಕೆ ಇಲ್ಲ ಗುರುವರ್ಯ, ನನ್ನಲ್ಲಿ ಉತ್ತರವಿದೆ" ಎಂದೆ.

 

"ಏನು, ಒಂದೇ ಉತ್ತರವೆ? ಆದರೆ ಪ್ರಶ್ನೆಗಳವು ಬಹಳವಿದ್ದವು" ವೃದ್ದ ನಿಟ್ಟುಸಿರುಗರೆಯುತ್ತಾ ಅಸಂತೃಪ್ತಿಯಿಂದ ಖಡ್ಗದ ಹಿಡಿಕೆಗೆ ಕೈ ಹಾಕಿದ. "ನನ್ನ ತಾಳ್ಮೆ ಪರೀಕ್ಷಿಸಬೇಡ ಮೂರ್ಖ, ನಾನು ಒಬ್ಬ ಕಲಿಯಲಾರದವನಿಗೆ ಕಲಿಸಲು ಹೋದವನೆಂಬ ಕೊರಗು ನನ್ನ ಕಾಡಬಾರದು!" ಎಂದು ಹೇಳುತ್ತಿರುವಾಗ ಆಯಾಚಿತವಾಗಿ ಆತನ ತುಟಿಗಳು ಅರಳಿದವು. ಮೊಟ್ಟಮೊದಲ ಸಲ ಆತ ಮುಗುಳ್ನಗೆ ನಕ್ಕ. ಅವನಿಗೆ ಗೊತ್ತಾಗಿತ್ತು ನಾನು ಈ ಸಮಸ್ಯೆಗೆ ಪರಿಹಾರ ಕಂಡುಕೊಂಡೆ ಎಂದು.

 

ನಾನು ಉತ್ತರಿಸಲು ಶುರು ಮಾಡಿಗೆ. ಇಲ್ಲಿಯವರೆಗೂ ನಾನು ನನ್ನ ಮನಸ್ಸಿನಲ್ಲಿ ಅನೇಗ ಪ್ರಶ್ನೆಗಳನ್ನ ಇಟ್ಟುಕೊಂಡು ಉತ್ತರಕಾಗಿ ತೊಳಲಾಡಿಗೆ. ಆದರೆ ಈಗ ನನಗೆ ಗೊತ್ತಾಗಿದೆ ಅದು ಬೇರೆ ಬೇರೆ ಪ್ರಶ್ನೆಗಳಲ್ಲ, ಹೊರತಾಗಿ ಅದು ಒಂದೇ ಪ್ರಶ್ನೆ. ಆ ಪ್ರಶ್ನೆ ಏನೆಂದರೆ - ಏಕೆ ಬಹಳಷ್ಟು ಯಶಸ್ವಿ ವ್ಯಕ್ತಿಗಳು ಸಾಮನ್ಯ ಸಾಂಪ್ರದಾಯಿಗ ನಿಯಮಕ್ಕೆ ಕಟ್ಟು ಬಿದ್ದಿರುವುದಿಲ್ಲ?" ಉತ್ತರ: ಏಕೆಂದರೆ ಪ್ರತಿ ವ್ಯಕ್ತಿಯು ಇನ್ನೊಬ್ಬರಿಂದ ಬಿನ್ನ. ಪ್ರತಿಯೊಬ್ಬರೂ ಅವರದೆ ಆದ ಯೋಚನಾ ಲಹರಿ ಹೊಂದಿರುತ್ತಾರೆ. ಅವರು ಸ್ವತಂತ್ರವಾಗಿ ಆಲೋಚಿಸಿದಾಗ ಯಶಸ್ಸು ಹೊಂದುತ್ತಾರೆ. ಏಕೆಂದರೆ ಅವರವರ ಸಾಮರ್ಥ್ಯ ಅವರಿಗೆ ಮಾತ್ರ ಚೆನ್ನಾಗಿ ತಿಳಿದಿರುತ್ತದೆ. ಹೀಗಾಗಿ ಯಶಸ್ವಿ ವ್ಯಕ್ತಿಗಳು ಸೂಕ್ತವಾದ ಮಾರ್ಗವನ್ನು ಅವರೇ ತೀರ್ಮಾನಿಸಿ ಮುಂದುವರೆಯುತ್ತಾರೆ ಹೊರತು ಹಳೆಯ ನಿಯಮಗಳಿಗೆ ಕಟ್ಟುಬೀಳುವುದಿಲ್ಲ. ಅವರು ನಿಯಮ ಮುರಿಯುತ್ತಾರೆ ಏಕೆಂದರೆ ಅವರಿಗೆ ಅದರ ಹಿಂದಿನ ಆಗುಗಳ ಬಗ್ಗೆ ಸ್ಪಷ್ಟ ವಿವೇಚನೆ ಇರುತ್ತದೆ" ಎಂದು ಹೇಳಿದೆ.

 

"ಬೇಷ್, ಬಹಳ ಸಂತೋಷ!" ಎಂದು ಹೇಳಿದ ವೃದ್ದ "ಮತ್ತೆ ಇನ್ನೇನು?" ಎಂದು ಕೇಳಿದ.

 

"ಇಷ್ಟು ದಿನ ಯಶಸ್ಸಿನ ಮಾರ್ಗಗಳನ್ನು ಹುಡುಕುತ್ತಾ ಕಾಲ ಕಳೆದೆ, ಆದರೆ ಇಂದು ನನಗೆ ಒಂದು ಸತ್ಯದ ಅರಿವಾಯಿತು."

 

"ಯಾವ ಸತ್ಯ?" ಎಂದು ಕೇಳಿದ ವೃದ್ದ. ಈಗ ಮೊದಲಿಗಿಂತಲೂ ಹೆಚ್ಚಿಗೆ ನಗುತ್ತಿದ್ದ.

 

"ಅಸಲಿಗೆ ಯಶಸ್ಸಿಗೆ ಒಂದು ಮಾರ್ಗ ಎನ್ನುವುದೇ ಇಲ್ಲ. ಯಶಸ್ಸು ಎನ್ನುವುದಕ್ಕೆ ನಿರ್ದಿಷ್ಟ ಮಾನದಂಡಗಳೂ ಇಲ್ಲ. ಯಶಸ್ಸು ಎನ್ನುವುದಕಿಂತಲೂ ಇಲ್ಲಿ ಯಶಸ್ವೀ ವ್ಯಕ್ತಿಗಳಿದ್ದಾರೆ ಎನ್ನುವುದೇ ಸತ್ಯ. ಮುನ್ನಡೆಯಲು ಮನಸಿಲ್ಲದ ವ್ಯಕ್ತಿಗೆ ಯಾವ ದಾರಿ ತೋರಿದರೂ ಅದು ವ್ಯರ್ಥ. ಹೀಗಾಗಿ ಯಶಸ್ಸು ಎನ್ನುವುದು ವ್ಯಕ್ತಿತ್ವದಲ್ಲೇ ಮೂಡಿ ಬರಬೇಕು. ನಮ್ಮ ಒಳಗೆ ನಾವು ಮಾರ್ಗದ ಅನೇಷಣೆ ಮಾಡುವ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು. ಬೇರೆಯೆಲ್ಲವೂ ಕೇವಲ ಸಹಾಯಕಗಳು ಮತ್ತು ಪೂರಕಗಳು ಅಷ್ಟೆ" ಎಂದು ಉತ್ತರಿಸಿದೆ.

 

"ಅದ್ಭುತ!" ಎಂದು ವೃದ್ದ ಉದ್ಗರಿಸಿದ. "ನೀನು ಯಶಸ್ವೀ ಬದುಕಿನ ರಹಸ್ಯಗಳನ್ನು ಗುರುತಿಸಿದ್ದೀಯೆ, ಮತ್ತು ನಾನು ನಿನಗೆ ಇನ್ನೇನು ಕಲಿಸುವ ಅಗತ್ಯ ಇಲ್ಲ" ಎಂದು ಹೇಳಿದ.

 

ಕಡೆಗೆ, ನನ್ನ ಉದ್ದೇಶ ಸಂಪನ್ನವಾಗಿತ್ತು. ನನಗೇನು ಬೇಕು, ನಾನೇನು ಮಾಡಬೇಕು ಎಂಬ ಸ್ಪಷ್ಟತೆ ಉಂಟಾಗಿತ್ತು. ನಾನು ಮತ್ತು ವೃದ್ದ ಒಟ್ಟಾಗಿ ನಡೆಯಲು ಶುರುವಿಟ್ಟುಕೊಂಡೆವು. ಆಗ ವೃದ್ದ ಮತ್ತೆ ನಗುತ್ತಾ ಕೇಳಿದ "ಇಲ್ಲಿ ಇನ್ನೊಂದು ವಿಷಯವೂ ಇದೆ. ನೀನು ಆ ಅಂತಿಮ ಸತ್ಯವನ್ನು ಗುರುತಿಸಿದೆಯ? ಎಂದು ನನ್ನತ್ತ ನೋಡಿದ.

 

"ಯಾವ ಸತ್ಯ?" ಎಂದು ನಾನು ಕೇಳಿದೆ…..

 

ಮತ್ತು, ನನಗೆ ಎಚ್ಚರವಾಯ್ತು….

 *****

ಪರ್ವತ ಅವರೋಹಣ

ಎಚ್ಚರವಾದಾಗ, ನಾನು ಶಿಖರದ ಹಾದಿಯ ಒಂದು ಬದಿಯಲ್ಲಿ ಬಿದ್ದಿದ್ದೆ. ಹಿಮವು ಮೈಮೇಲೆ ಬಿದ್ದು ಚಳಿಗೆ ಮೈ ನಡುಗುತ್ತಿತ್ತು. ನಿದಾನವಾಗಿ ಎದ್ದು ಕುಳಿತೆ.

 

ಕೈಕಾಲುಗಳು ಚಳಿಗೆ ಮರಗಟ್ಟಿ ಹೋಗಿದ್ದವು. ಎಷ್ಟು ಸಮಯ ಅಲ್ಲಿ ಹಾಗೆ ಬಿದ್ದಿದ್ದೆನೋ ಗೊತ್ತಾಗುತ್ತಿಲ್ಲ. ಸುತ್ತಲೂ ನೋಡಿದರೆ ವೃದ್ದ, ಹಕ್ಕಿಗಳ ಚಿಲಿಪಿಲಿ, ನದಿ ತೊರೆಯ ಜುಳುಜುಳು ಯಾವುದೂ ಇಲ್ಲ.

 

ತೊಡರುತ್ತ ಎಡವುತ್ತಾ ಪರ್ವತದ ಬುಡದೆಡೆಗೆ ನಡೆಗೆ. ಬುಡದಲ್ಲಿ ಸ್ವಲ್ಪ ಬೆಚ್ಚನೆಯ ವಾತಾವರಣ ಇತ್ತು.

 

ಏನಾಯ್ತು? ನಾನು ಕಂಡಿದ್ದೆಲ್ಲಾ ಕನಸಾ? ಅಸಾದ್ಯ! ನಾನು ಏಳು ದಿನಗಳು ಆ ವೃದ್ದನಲ್ಲಿ ಕಲಿತ್ತಿದ್ದು ನೈಜವಾಗಿದೆ ಎನಿಸುತ್ತಿದೆ. ಅಥವಾ ಅದು ನೈಜ ಅಲ್ಲವೆ? ಹೇಗಾದರೂ ಆಗಲಿ, ನನಗೆ ಉತ್ತರವಂತು ಸಿಕ್ಕಿದೆ. ಅದು ಹೊರಗಿಂದ ಅಲ್ಲ, ನನ್ನೊಳಗಿಂದ ನನಗೆ ಉತ್ತರ ಸಿಕ್ಕಿದೆ. ನನಗಿನ್ನು ಅಲ್ಲಿರುವ ಮನಸ್ಸಾಗಲಿಲ್ಲ. ನಡೆಯತೊಡಗಿದೆ. ನನ್ನ ಯಶಸ್ಸಿನ ಹಾದಿಯಲ್ಲಿ ನನಗೆ ಯಾವ ತಡೆ ಇಲ್ಲ. ನಾನು ಏನಾಗಬೇಕೋ ಅದನ್ನ ಸಾದಿಸಬಲ್ಲೆ ಎಂಬ ವಿಶ್ವಾಸದಿಂದ ದೃಡವಾಗಿ ಹೆಜ್ಜೆ ಹಾಕತೊಡಗಿದೆ.


Rate this content
Log in

More kannada story from Madanmadhu Madhu

Similar kannada story from Classics