ನಾನು ನನ್ನೊಳಗಿನ ಭಾವ
ನಾನು ನನ್ನೊಳಗಿನ ಭಾವ
ನಾನು ಸುಭಾಷ್. ವೃತ್ತಿಯಲ್ಲಿ ನಾನೊಬ್ಬ ವೈದ್ಯ. ವೈದ್ಯ ಅಂದ್ರೆ ನಾನೇನು ಅಲೋಪತಿ ಹೊಮಿಯೋಪತಿ ವೈದ್ಯ ಅಲ್ಲ, ನಾನೊಬ್ಬ ನಾಟಿ ವೈದ್ಯ. ನಾನು ಈ ವೃತ್ತಿಗೆ ಬರಲು ಒಂದು ಕಾರಣವಿದೆ. ಅದಕ್ಕಿಂತ ಮುಂಚೆ ನನ್ನ ಕಥೆ ಶುರು ಮಾಡ್ತೇನೆ ಕೇಳಿ.
≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥
ನಾನು ಹುಟ್ಟಿದ್ದು ಹಳ್ಳಿಯ ರೈತಾಪಿ ಮನೆಯಲ್ಲಿ. ಹಿರಿ ಮಗನಾಗಿ ಹುಟ್ಟಿದ ನನ್ನ ಬೆನ್ನ ಮೇಲೆ 4 ಜನ ತಂಗಿಯರು ಹಾಗೂ ಇಬ್ಬರು ತಮ್ಮಂದಿರು ಹುಟ್ಟಿದರು. ಒಟ್ಟು 7 ಮಕ್ಕಳ ತುಂಬಿದ ಸಂಸಾರ ನಮ್ಮದು. ರೈತಾಪಿ ಮನೆತನ ಅಂದ್ರೆ ಅದೇನು ಸ್ಥಿತಿವಂತರ ಕುಟುಂಬ ಅಲ್ಲ. ವರ್ಷ ಪೂರಾ ಶೆಟ್ಟರ ಅಂಗಡಿಯಲ್ಲಿ ಉದ್ರಿಯಲ್ಲಿ ಸಾಮಾನು ತಂದು ಅಡಿಗೆ ಮಾಡೋದು ಪೀಕು ಕೈಗೆ ಬಂದು ಮಾರಿದಾಗ ಶೆಟ್ಟರಂಗಡಿಯ ಸಾಲ ತೀರ್ಸೋದು. ಇದು ಎಷ್ಟೋ ಜನ ರೈತರ ನಿತ್ಯ ಬವಣೆ.
ಅದೇನೋ ತಿಳಿಯದು ನನ್ನನ್ನ ದೂರದ ನನ್ನ ಸೋದರ ಮಾವನ ಮನೆಯಲ್ಲಿ ಬಿಟ್ಟು ಬಂದರು. ವಿದ್ಯಾಭ್ಯಾಸದ ಮುಂದುವರಿಕೆ ಅಲ್ಲಿಯೇ ಆಯಿತು. SSLC ನಂತರ ನಮ್ಮೂರಿಗೆ ಹಿಂದಿರುಗಿ ಅಪ್ಪನ ಕಷ್ಟಕ್ಕೆ ಆಸರೆ ಆದೆ. ಸಂಸಾರದ ನೋಗಕ್ಕೆ ಹೆಗಲಾದೆ. ಅಪ್ಪನೊಟ್ಟಿಗೆ ವ್ಯವಸಾಯ ಮಾಡಿದೆ. ಆದರೂ ಮನದಲ್ಲಿ ಸೋದರ ಮಾವನ ಊರಿನ ಮೇಲಿನ ವ್ಯಾಮೋಹ ಕಳೆಯಲೇ ಇಲ್ಲ. ಬಾಲ್ಯದಿಂದ ಅಲ್ಲೇ ಬೆಳೆದದ್ದರಿಂದ ಅಲ್ಲಿಯ ವಾತಾವರಣಕ್ಕೆ ಒಗ್ಗಿದವನಿಗೆ ಇಲ್ಲಿ ದಿನ ದೂಡುವುದೇ ಕಷ್ಟ ಸಾಧ್ಯವಾಯಿತು.
ಒಬ್ಬ ತಂಗಿಯ ಮದುವೆ ಮಾಡಿ ನಂತರ ಒಂದೆರೆಡು ವರ್ಷದ ನಂತರ ನನ್ನದು ಮತ್ತು ನನ್ನ ಇನ್ನೊಬ್ಬ ತಮ್ಮನದು ಒಟ್ಟಿಗೇ ಮದುವೆ ಆಯಿತು. ಸಂಸಾರವು ಶುರು ಆಯಿತು. ಹೆಂಡತಿ ಗರ್ಭಿಣಿ ಆಗಿದ್ದು ಬಾಣಂತನಕ್ಕೆ ತವರಿಗೆ ಹೋಗಿದ್ದಳು. ಈಗ ನನ್ನ ಮೊದಲ ತಮ್ಮ ವ್ಯವಸಾಯವನ್ನೇ ಮಾಡುತ್ತಿದ್ದದ್ದರಿಂದ ನನ್ನ ಮನಸ್ಸು ಮತ್ತೆ ಮಾವನ ಊರಿನ ಕಡೆ ಎಳೆಯಿತು. ಹೇಗೂ ಅಪ್ಪನಿಗೆ ತಮ್ಮ ಆಸರೆ ಆಗುತ್ತಾನೆ ಎಂದು ಯೋಚಿಸಿ ಅಪ್ಪ ಅವ್ವನಲ್ಲಿ ನನ್ನ ವಿಚಾರ ಹೇಳಿದಾಗ ಅಪ್ಪ ಅವ್ವ ಇಬ್ಬರೂ ಸಂಪೂರ್ಣ ಒಪ್ಪಿಗೆ ಕೊಟ್ಟರು.
≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥
ಹೆಂಡತಿ ಮಗನೊಟ್ಟಿಗೆ ನನ್ನದೇ ಪುಟ್ಟ ಗೂಡು ಮಾಡಿಕೊಂಡು ಪುಟ್ಟ ಸಂಸಾರದ ಬಂಡಿ ಎಳೆಯುತ್ತ ಪ್ರೀತಿಯಲ್ಲಿ ಜೀವನ ನಡೆದಿತ್ತು. ಬದುಕಿನ ನಿರ್ವಹಣೆಗಾಗಿ ಸೋದರ ಮಾವನಲ್ಲೇ ಕೆಲಸಕ್ಕೆ ಸೇರಿದೆ. ಕೂಲಿ ಕೆಲಸ ಮಾಡಿದೆ. ಎಂದೂ ಸಣ್ಣ ಮಕ್ಕಳನ್ನು ಎತ್ತಿ ಅಭ್ಯಾಸ ಇರದ ನಾನು ಕೆಲಸ ಮುಗಿಸಿ ಮನೆಗೆ ಬಂದಾಗ ನನ್ನ ಪುಟ್ಟ ಮಗನ ಆಟ ತುಂಟಾಟ ನೋಡುತ್ತಾ ದಿನದ ಆಯಾಸವನ್ನೆಲ್ಲ ಮರೆಯುತ್ತಿದ್ದೆ.
ಮಗ ಹುಟ್ಟಿದ ನಂತರ ಹೊಸ ಜವಾಬ್ದಾರಿ ಹೆಗಲೇರಿದ ಕಾರಣ, ದುಡಿಮೆಯು ಸಾಲದು ಎಂಬ ಕಾರಣಕ್ಕೆ ಇಬ್ಬರ ಕೆಲಸ ಒಬ್ಬನೇ ಮಾಡಲು ಶುರು ಮಾಡಿದೆ. ಆಗ ಎರೆಡು ಕೂಲಿ ನನ್ನ ಪಾಲಿಗೆ ಒದಗಿತು. ನನ್ನ ಹೆಂಡತಿಯು ದೇವತೆಯಂತವಳು. ಎಂದಿಗೂ ಅವಳು ಮೊಳ ಹೂವು ಬೇಕೆಂದು ಕೂಡಾ ಪೀಡಿಸಿದವಳಲ್ಲ. ಊಟದ ಡಬ್ಬಿ ತೊಳೆಯಲೆಂದು ತೆಗೆದಾಗ ಅದರಲ್ಲಿದ್ದ ಮಲ್ಲಿಗೆ ಗುಲಾಬಿ ನೋಡಿ ಅವಳ ಮೊಗ ಆ ಹೂವಿಗಿಂತ ಹೆಚ್ಚು ಅರಳುತ್ತಿತ್ತು.
ನನ್ನ ಕಷ್ಟಕ್ಕೆ ಹೆಗಳಾದವಳು. ತನಗೆ ತಿಳಿದಿದ್ದ ಟೈಲರಿಂಗ್ ಅನ್ನು ವೃತ್ತಿಯಾಗಿ ಶುರು ಮಾಡಿದಳು. ಅವಳ ಚಾಕಚಖ್ಯತೆ ಎಷ್ಟಿತ್ತು ಅಂದರೆ, ಬರಬರುತ್ತಾ ಅವಳಲ್ಲಿ ಬಟ್ಟೆ ಹೋಲಿಸಲು ಬರುವ ಎಷ್ಟೋ ಹೆಂಗಸರು ಇವಳೇ ಹೊಲೆದುಕೊಡಬೇಕು, ತಡವಾದರೂ ಚಿಂತೆ ಇಲ್ಲ ಕಾಯುವೆವು ಎಂಬಷ್ಟರ ಮಟ್ಟಿಗೆ ಪರಿಣಿತಿ ಪಡೆದಿದ್ದಳು
≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥
ಮಗನ ಮುದ್ದು ಮಾತು ಕೇಳುತ್ತಾ ಅವನೊಟ್ಟಿಗೆ ಆಡುತ್ತ ಕಾಲ ಕಳೆಯುತ್ತಿದ್ದವರಿಗೆ ನನ್ನ ಶ್ರೀಮತಿ ಮತ್ತೊಮ್ಮೆ ಗರ್ಭಿಣಿ ಆಗಿ ಸಿಹಿ ಸುದ್ದಿ ಕೊಟ್ಟಳು. ಹೆಣ್ಣು ಮಗು ಅಂದ್ರೆ ಅದೇನೋ ಮಮತೆ ನನ್ನಲ್ಲಿ. ಮೊದಲ ಮಗು ಗಂಡು ಆದಾಗ ಹೆಣ್ಣು ಹುಟ್ಟಿದ್ದರೆ ಚೆನ್ನೀತ್ತೇನೋ ಎಂದೂ ಮನ ಒಮ್ಮೆ ಅನಿಸಿದ್ದು ಇದೆ. ಆದರೆ ನನ್ನದೇ ಕುಡಿ ಎಂದಾಗ ಯಾವ ಮಗು ಆದರೆ ಏನು ಎಲ್ಲಾ ಒಂದೇ, ನಮ್ಮ ಮಕ್ಕಳೇ ಎಂದು ಸಮಾಧಾನಗೊಂಡವನಿಗೆ ನನ್ನ ಶ್ರೀಮತಿ ಗರ್ಭಿಣಿಯಾದ ವಿಷಯ ನನ್ನ ಸುಪ್ತ ಮನದಲ್ಲಿ ಹುದುಗಿದ್ದ ಹೆಣ್ಣು ಮಗುವಿನ ಆಸೆಯನ್ನು ಮತ್ತೆ ಚಿಗುರಿಸಿತು.
ನನ್ನವಳ ಅರೋಗ್ಯ ಚೆನ್ನಾಗಿದ್ದು ಗರ್ಭಾವಸ್ಥೆಯಲ್ಲಿಯೇ ಮಗು ದಷ್ಟ ಪುಷ್ಟವಾಗಿ ಬೆಳೆದಿತ್ತು. ಎಲ್ಲರೂ ಎರೆಡು ಮಕ್ಕಳಿರಬೇಕು ಎಂದು ಊಹೆ ಮಾಡುತ್ತಿದ್ದರು. ಆದರೆ ಇರೋದು ಒಂದೇ ಮಗು ಅಂತ ಡಾಕ್ಟರ್ ಕನ್ಫರ್ಮ್ ಮಾಡಿ ಆಗಿತ್ತು. ಹಾಗೇ ಮಗು ಬೆಳವಣಿಗೆ ಚೆನ್ನಾಗಿ ಆಗಿರೋದ್ರಿಂದ ಡೆಲಿವರಿ ಸ್ವಲ್ಪ ಕಷ್ಟ ಆಗಬಹುದು ಎಂದಿದ್ದರು. ಹಾಗಾಗಿ ನಾನು ಅವಳನ್ನು ಹೆರಿಗೆಗೆ ಊರಿಗೂ ಕಳಿಸಲಿಲ್ಲ.
ನನ್ನವಳ ಆರೈಕೆಯನ್ನು ನಾನೇ ಮುತುವರ್ಜಿ ವಹಿಸಿ ಮಾಡಿದೆ. ಡೆಲಿವೆರಿ ದಿನ ಹತ್ತಿರ ಬಂದಂತೆ ಆತಂಕ ಮನೆ ಮಾಡಿತು. ಆಸ್ಪತ್ರೆಗೆ ದಾಖಲಿಸಿ ಆಗಿತ್ತು. ಮಧ್ಯಾಹ್ನ ಅವಳನ್ನೊಮ್ಮೆ ಪರೀಕ್ಷಿಸಿದ ಡಾಕ್ಟರ್ ಊಟ ಮುಗಿಸಿ ಬರುವುದಾಗಿ ತಿಳಿಸಿ ಮನೆಗೆ ಹೋದರು. ಡ್ಯೂಟಿ ನರ್ಸ್ ಒಬ್ಬರೇ ಇದ್ದರು. ಡಾಕ್ಟರ್ ಅತ್ತ ಹೋಗುತ್ತಲೇ ನನ್ನವಳಿಗೆ ಹೆರಿಗೆ ನೋವು ಕಾಣಿಸಿಕೊಂಡಿತು. ಮೊದಲೇ ಹೆರಿಗೆಯ ಸಮಯದಲ್ಲಿ ಕಷ್ಟ ಇದೆ ಅಂತ ಡಾಕ್ಟರ್ ಹೇಳಿದ್ದರು. ಈ ಸಮಯದಲ್ಲಿ ಡಾಕ್ಟರ್ ಕೂಡಾ ಇಲ್ಲ. ನನ್ನ ಕೈಕಾಲೇ ಆಡದಂತಹ ಪರಿಸ್ಥಿತಿ. ದೇವರ ಮೊರೆ ಹೋಗುವುದರ ಹೊರತಾಗಿ ನಂಗೆ ಯಾವ ದಾರಿಯು ಕಾಣದೇ ಕುಳಿತವನ ಕಣ್ಣಿಂದ ಅಶ್ರು ಬಿಂದುಗಳು ಜಾರುತ್ತಲೇ ಇದ್ದವು.
ಸ್ವಲ್ಪ ಸಮಯದ ನಂತರ ಹೊರ ಬಂದ ನರ್ಸ್ ಕಂಗ್ರಾಟ್ಸ್ ಸರ್. ನಿಮ್ಗೆ ಹೆಣ್ಣು ಮಗು ಆಗಿದೆ. ನಾರ್ಮಲ್ ಡೆಲಿವರಿ ಆಗಿದೆ. ಅಮ್ಮಾ ಮಗು ಆರೋಗ್ಯದಿಂದ ಇದ್ದಾರೆ. ಸ್ವಲ್ಪ ಹೊತ್ತಿಗೆ ಡಾಕ್ಟರ್ ಬಂದು ಪರೀಕ್ಷಿಸುತ್ತಾರೆ. ನಿಮ್ಮ ಹೆಂಡತಿ ಸುಸ್ತಿಗೆ ನಿದ್ದೆ ಹೋಗಿದಾರೆ ಎಂದು ಹೇಳಿ ನನ್ನ ಕಂದನನ್ನು ನನ್ನ ಕೈಗಿಟ್ಟು ಕ್ಷಣದಲ್ಲಿ ಒಳ ಹೋದರು.
≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥
ಜೀವಮಾನದಲ್ಲೇ ಪುಟ್ಟ ಮಗುವನ್ನು ಎಂದು ಕೈಯಲ್ಲಿ ಹಿಡಿದು ಎತ್ತಿದವನಲ್ಲ ನಾನು. ಮಗನನ್ನು ಕೂಡಾ ಕೇವಲ ದೂರದಿಂದಲೇ ಆಟ ಆಡಿಸುತ್ತಿದ್ದೆ. 6-7 ತಿಂಗಳ ನಂತರವೇ ಅವನನ್ನು ಎತ್ತಿಕೊಂಡಿದ್ದು. ಆದರೆ ಇಂದು ನರ್ಸ್ ಒಬ್ಬರೇ ಇದ್ದ ಕಾರಣ ಬೇರೆ ವಿಧಿ ಇಲ್ಲದೇ ಮಗಳನ್ನು ನನ್ನ ಕೈಗೆ ಕೊಟ್ಟು ಹೋಗಿದ್ದರು ಆ ನರ್ಸ್.
ಆ ಪುಟ್ಟ ಪುಟ್ಟ ಕೈಗಳು, ಕಾಲುಗಳು, ಮುದ್ದು ಮುಖ, ನಾ ಬಯಸಿದ ನನ್ನ ಭಾಗ್ಯ ದೇವತೆಯೇ ಜನಿಸಿ ಬಂದಂತ ಭಾವ. ಅವಳ ಆಗಮನಕ್ಕಾಗಿಯೇ ಅಲ್ಲವೇ ನನ್ನ ಮನ ಇಷ್ಟು ವರುಷ ಕಾತರಿಸಿದ್ದು. ಆ ಪುಟ್ಟ ಮಗುವನ್ನು ಕೈಲಿ ಹಿಡಿದಾಗ ಇಡೀ ಜಗತ್ತನ್ನೇ ಅಂಗೈಯಲ್ಲಿ ಹಿಡಿದಿಟ್ಟ ಅನುಭವ. ಅದು ನಿಜವೇ ಅಲ್ಲವೇ, ನನ್ನ ಪುಟ್ಟ ಕಂದ ಇವಳು. ನಮ್ಮ ಮಕ್ಕಳೇ ನಮ್ಮ ಪ್ರಪಂಚ ಅಲ್ಲವೇ. ಆ ಕಂದನ ಮುಖ ನೋಡುತ್ತಾ ಇದ್ದರೆ ಬದುಕಲ್ಲಿ ಬೇಡಲು ಇನ್ನೇನು ಬಾಕಿ ಇರದು ಎನಿಸುತ್ತಿದೆ. ಹೊಸ ಜವಾಬ್ದಾರಿ ಅಲ್ಲದೇ ಹೋದರು ಮಗಳೆಂಬ ಪುಟ್ಟ ದೇವತೆಯ ನಿರ್ವಹಣೆಯ ಜವಾಬ್ದಾರಿ ಹೆಗಲೇರಿತು.
≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥
ಮಕ್ಕಳ ಲಾಲನೆ ಪಾಲನೆಯಲ್ಲಿ ದಿನಗಳು ಕಳೆದವು. ಮಕ್ಕಳು ಬೆಳೆಯುವುದು ತಡವಾಗದು. ಹೆಚ್ಚಿದ ಖರ್ಚಿನ ನಿರ್ವಹಣೆಗೆ ಹೆಚ್ಚಿನ ದುಡಿಮೆಯ ಅಗತ್ಯ ಇತ್ತು. ಎಷ್ಟೇ ಬಯಸಿದರು ಮಕ್ಕಳ ಜೊತೆ ಸಮಯ ಕಳೆಯುವುದು ಕಷ್ಟವೇ ಆಗುತ್ತಿತ್ತು. ನಾನು ಬೆಳಗ್ಗೆ ದುಡಿಮೆಗೆ ಹೋಗುವಾಗ ಮಕ್ಕಳಿಬ್ಬರಿಗೂ ನಿದ್ದೆಯ ಮಂಪರು. ಹಿರಿಯವನಾದ ಮಗ ಕೆಲವೊಮ್ಮೆ ಎಚ್ಚರವಾಗಿದ್ದರೆ ಅವನನ್ನು ಮುದ್ದಿಸಿ ಹೊರಡುತ್ತಿದ್ದೆ. ಆದರೆ ಚಿಕ್ಕ ಮಗುವಾಗಿದ್ದರಿಂದ ಮಗಳ ನಿದ್ದೆ ಮುಗಿಯುತ್ತಿರಲಿಲ್ಲ. ದುಡಿಮೆ ಮುಗಿಸಿ ಮನೆ ಸೇರುತ್ತಿದ್ದದ್ದು ರಾತ್ರಿಗೆ. ಅಷ್ಟರಲ್ಲೇ ಮಕ್ಕಳು ಮಲಗಿಬಿಡುತ್ತಿದ್ದರು.
ನಿರಾಸೆ, ಬೇಸರ ಮನ ಹೊಕ್ಕರೂ, ಮಕ್ಕಳ ಭವಿಷ್ಯಕ್ಕೆ ಪರಿಧಿ ಇಲ್ಲದ ದುಡಿಮೆಯ ಅಗತ್ಯ ಸಾಕಷ್ಟಿತ್ತು. ಮಕ್ಕಳು ಬೆಳೆದಂತೆ ಮತ್ತೆ ನನ್ನ ಕಷ್ಟಕ್ಕೆ ಸಂಸಾರದ ಬಂಡಿ ಸಾಗಿಸಲು ಜೊತೆಯಾದವಳು ನನ್ನ ಶ್ರೀಮತಿ. ಅವಳ ಟೈಲರಿಂಗ್ ಕೆಲಸ ಮತ್ತೆ ಶುರು ಮಾಡಿದ್ದಳು. ಇಬ್ಬರ ದುಡಿಮೆಯಿಂದ ಮನೆ ಸ್ವಲ್ಪ ತಕ್ಕ ಮಟ್ಟಿಗೆ ಸುಧಾರಣೆ ಕಂಡಾಗ, ಮಕ್ಕಳ ಜೊತೆ ಸಮಯ ಕಳೆಯುವ ಮನಸ್ಸಾದರೂ ಮನಸ್ಸಿನ ಭಾವನೆಗಳಿಗೆ ಕಡಿವಾಣ ಹಾಕಿ ದುಡಿಮೆಯನ್ನೇ ಮೈಗೂಡಿಸಿಕೊಂಡೆ.
ಕೆಲ ವರ್ಷಗಳ ನಂತರ ಕೂಡಿಟ್ಟ ಪುಡಿಗಾಸಲ್ಲಿ ಸಣ್ಣದೊಂದು ಅಂಗಡಿ ಶುರು ಮಾಡಿದೆ. ನನ್ನದೇ ಸ್ವಂತ ಅಂಗಡಿ ಆಗಿದ್ದಿದ್ದರಿಂದ ಮಕ್ಕಳೊಂದಿಗೆ ಸಮಯ ಕಳೆಯುವ ಬಯಕೆ ಮತ್ತೆ ಚಿಗುರೊಡೆಯಿತು. ಆದರೆ ಮಕ್ಕಳು ಶಾಲೆಗೆ ಹೋಗುತ್ತಿದ್ದದ್ದರಿಂದ ಮತ್ತೆ ನಿರಾಸೆ.
≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥
ಒಂದು ಹಂತದ ವಿದ್ಯಾಭ್ಯಾಸದ ನಂತರ ಮಗನನ್ನು ಅವನ ಮುಂದಿನ ಭವಿಷ್ಯಕ್ಕಾಗಿ ಹೆಚ್ಚಿನ ಕಲಿಕೆಯ ಕಾರಣದಿಂದ ಬೇರೆ ಊರಿನಲ್ಲಿ ಹಾಸ್ಟೆಲ್ ಅಲ್ಲಿ ಬಿಟ್ಟು ಬಂದೆ. ಬರುವಾಗ ಮಗನ ಮೊಗದಲ್ಲಿ ಕಂಡ ಬೇಸರದ ಛಾಯೆ ಕಂಡು ಮನ ಕುಗ್ಗಿತು. ಆದರೆ ಅವನ ಭವಿಷ್ಯಕ್ಕೆ ಇದರ ಅಗತ್ಯ ಅವಶ್ಯಕ ಎಂದು ಭಾವಿಸಿ, ಮೆತ್ತಗೆ ಹೇಳಿದರೆ ಮತ್
ತಷ್ಟು ಅತ್ತಾನು ಎಂದು ಅವನಿಗೆ ಗದರಿಸಿ ಬಿಟ್ಟು ಬಂದೆ. ದಾರಿಯುದ್ಧಕ್ಕೂ ಮಗನ ದುಃಖದ ಮೊಗವೊಂದೇ ಸ್ಮೃತಿಪಟದಲ್ಲಿ ಉಳಿದಿದ್ದು.
ಕಿರಾಣಿ ಅಂಗಡಿ ಮುಚ್ಚಲೇಬೇಕಾದ ಅನಿವಾರ್ಯ ಒದಗಿ ಬಂದು ನನ್ನ ಸ್ವಲ್ಪ ಧೈರ್ಯವನ್ನೇ ಕಸಿದಿತ್ತು. ಮಕ್ಕಳ ಭವಿಷ್ಯ ಕಣ್ಣ ಮುಂದೆ ಬಂದಾಗ ಚಿಂತೆ ಕಾಡಿತ್ತು. ಸ್ನೇಹಿತರೊಬ್ಬರ ಸಲಹೆಯ ಮೇರೆಗೆ ನಾಟಿ ಔಷಧಿ ಮಾಡುವುದನ್ನು ಅಭ್ಯಾಸ ಮಾಡಲು ಶುರು ಮಾಡಿದೆ. ಸತತ ಪ್ರಯತ್ನ ನನ್ನ ಕೈ ಬಿಡಲಿಲ್ಲ. ನಾ ಕೊಟ್ಟ ಮದ್ದು ಯಾವುದೂ ಫೇಲ್ ಆಗಿದ್ದೇ ಇಲ್ಲ. ಮಾಡಿದ ಔಷಧಗಳೆಲ್ಲ ಒಳ್ಳೆ ಪರಿಣಾಮ ಬೀರಿ ರೋಗ ವಾಸಿಯಾಗುವುದು ಸಾಮಾನ್ಯ ಆಯಿತು. ಹೆಚ್ಚಿನ ಅಭ್ಯಾಸ ಮಾಡಿ, ಸಂಸ್ಥೆ ಒಂದರಲ್ಲಿ ತರಬೇತಿ ಪಡೆದು, ಅಧಿಕೃತವಾಗಿ ಇದನ್ನೇ ವೃತ್ತಿಯಾಗಿಸಿಕೊಂಡೆ.
ಮೊದಮೊದಲು ನಾ ಆಯ್ದುಕೊಂಡಿದ್ದ ವೃತ್ತಿಗೆ ಪ್ರಚಾರದ ಅಗತ್ಯ ಇದ್ದಿದ್ದರಿಂದ ನಾನು ಮನೆ ಇಂದ ಹೊರಗೆ ಸುತ್ತಾಡುವುದು ಹೆಚ್ಚಾಯಿತು. ಮನೆ ಮಗನೂ ದೂರದೂರಿನಲ್ಲಿ ಇರುವಾಗ ಮನೆಯಲ್ಲಿ ಮಗಳು ಹಾಗೂ ಶ್ರಿಮತಿ ಇಬ್ಬರನ್ನೇ ಬಿಟ್ಟು ಹೋಗುವುದು ಚಿಂತೆ ಮೂಡಿಸಿತು. ಆದರೂ ಅನಿವಾರ್ಯ ಇದ್ದಿದ್ದರಿಂದ ಹೆಂಡತಿಯ ಧೈರ್ಯದ ಮಾತು ಕೇಳಿ ಸ್ವಲ್ಪ ಸಮಾಧಾನಗೊಂಡು ಹೊರಟೆ. ತಿಂಗಳಲ್ಲಿ ಹೆಚ್ಚು ದಿನ ಊರೂರು ಸುತ್ತುವುದೇ ಕಾಯಕ ಆಯಿತು.
≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥
ಇದೇ ಸಮಯದಲ್ಲಿ ಊರಲ್ಲಿ ಬರಗಾಲ ಬಿದ್ದು ನೀರಿನ ಅಭಾವ ಹೆಚ್ಚಾಗಿ ಹೋಗಿತ್ತು. ಗಂಡಸರ ಅನುಪಸ್ಥಿತಿಯಲ್ಲಿ ಮನೆ ಗಂಡಸಿನ ಜಾಗ ತುಂಬಿದ್ದು ನನ್ನ ಪುಟ್ಟ ಪೋರಿ. ನಿಜಕ್ಕೂ ಅವಳು ಮಗಳಷ್ಟೇ ಅಲ್ಲದೇ, ಮಗನ ಸ್ಥಾನವನ್ನು ತುಂಬಿದ್ದಳು. ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡವಳು ತನ್ನ ತಾಯಿಗೂ ಧೈರ್ಯ ಹೇಳಿ ನನಗೂ ನಿಶ್ಚಿಂತೆಯಿಂದ ಕೆಲಸ ಮುಂದುವರೆಸಲು ತಿಳಿಸಿದಳು.
ಪ್ರತಿ ಕೆಲಸಗಳನ್ನು ಗಂಡು ಮಕ್ಕಳೇ ನಾಚುವಂತೆ ಮಾಡುವ ನನ್ನ ಮಗಳೆಂದರೆ ಏನೋ ಹೆಮ್ಮೆ ಸಂತೃಪ್ತ ಭಾವ. ಪ್ರತಿ ತಂದೆ ಬಯಸುವುದು ಇದನ್ನೇ ಅಲ್ಲವೇ. ಕಣ್ಣ ಮುಂದೆ ಬೆಳೆಯುವ ಮಕ್ಕಳು ನಮಗೆ ಧೈರ್ಯ ಹೇಳಿದಾಗ ಆ ಸಮಯದಿ ಹೃದಯದಲ್ಲಾಗುವ ಹರ್ಷಕ್ಕೆ ಕೊನೆಯೇ ಇಲ್ಲ.
≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥
ಮಗನ ಓದು ಮುಗಿದು ಕೆಲಸಕ್ಕೆಂದು ಹೊರಗೇ ಉಳಿದಾಗ ಮಗನ ಅನುಪಸ್ಥಿತಿಯನ್ನು ಮರೆಸಿದವಳು ಮಗನಾಗಿ ಸಂಸಾರದ ನೊಗಕ್ಕೆ ಹೆಗಲು ಕೊಟ್ಟಳು. ಊರ ಜನರೆಲ್ಲಾ ಮಗಳನ್ನು ಅವಳ ಕೆಲಸ ಕಾರ್ಯದ ವೈಖರಿಯನ್ನು ಹಾಡಿ ಹೊಗಳುವಾಗ ಒಬ್ಬ ತಂದೆಗೆ ಇದಕ್ಕಿಂತ ಹೆಚ್ಚು ಬೇರೇನು ಬೇಕು. ನನ್ನ ಮಗಳೇ ನನ್ನ ಹೆಮ್ಮೆ.
ನಾನಾಯ್ದ ವೃತ್ತಿ ನನ್ನ ಕೈ ಹಿಡಿದಿತ್ತು. ಸ್ವಂತದ್ದು ಒಂದು ಸೂರು ಓಡಾಡಲು ಬೈಕ್ ಹಾಗೂ ಕಾರ್ ಮನೆಯ ಅಂಗಳ ಸೇರಿದ್ದವು. ಹೆಣ್ಣು ಮಗು ಬೆಳೆಯುವುದು ತಡವಾಗದು. ಮಗಳು ಋತುಮತಿಯಾದಾಗ ಅದೆಷ್ಟು ಸಂಭ್ರಮಿಸಿತ್ತು ತಂದೆಯ ಮನ. ಎಲ್ಲವೂ ಇಂದಿಗೂ ಕಣ್ಣಿಗೆ ಕಟ್ಟಿದಂತ ಸುಖ ಕೊಡುತ್ತೆ.
≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥
ನನ್ನ ಮಗಳ ಓದು ಮುಗಿದಿತ್ತು. ಮಗ ಒಳ್ಳೆ ಕೆಲಸಕ್ಕೆ ಸೇರಿದ್ದ. ಎಲ್ಲಾ ಒಳ್ಳೆಯದೇ ನಡೆಯುವಾಗ ಮಗಳ ಮದುವೆಯ ಸುದ್ದಿ ಹೆಂಡತಿ ನೆನಪಿಸಿದಾಗ ಮಗಳ ಆಗಲಿದ ಬದುಕು ಸಾಧ್ಯವೇ ಎಂಬ ಯೋಚನೆಯೇ ದುಃಖ ಕೊಟ್ಟಿತು. ಆದರೆ ಪ್ರತಿ ಹೆಣ್ಣು ವಿವಾಹದ ನಂತರ ತವರು ತೊರೆದು ಹೋಗುವುದು ಸ್ವಾಭಾವಿಕವಾದರೂ ತಂದೆ ಆಗಿ ಅವಳನ್ನು ತೊರೆಯುವುದು ಕಷ್ಟವೇ ಆಗಿತ್ತು.
ಯಾವೊಂದು ಬೇಡಿಕೆ ಇಲ್ಲದೇ ನಾವು ನೋಡಿದ ಹುಡುಗನ ಜೊತೆ ಮಗಳು ಮದುವೆಗೆ ಒಪ್ಪಿಗೆ ಕೊಟ್ಟಾಗ ಮತ್ತೊಮ್ಮೆ ಮಗಳ್ ಬಗ್ಗೆ ಹೆಮ್ಮೆ ಎನಿಸಿತು. ಅವಳೊಂದು ಅದ್ಭುತ. ಅವಳ ಪ್ರಪಂಚದಲ್ಲಿ ಇದ್ದಿದ್ದು ತಂದೆ ತಾಯಿ ಹಾಗೂ ಅಣ್ಣಾ ಎಂಬ ಸಂಭಂದಗಳು ಮಾತ್ರ. ಆದರೆ ಹೊಸ ಸಂಬಂಧಗಳ ನಿರ್ವಹಣೆ ನನ್ನ ಮಗಳಿಂದ ಸಾಧ್ಯವೇ? ಅವಳಿನ್ನು ಚಿಕ್ಕವಳು ಎಂಬ ನನ್ನ ಯೋಚನೆಗೆ ನನಗೇ ನಗು ಬಂದಿತ್ತು. ಚಿಕ್ಕವಳಿದ್ದಾಗಲೇ ಅತೀ ಪ್ರೌಡಿಮೆಯಿಂದ ನನ್ನ ಅನುಪಸ್ಥಿತಿಯಲ್ಲಿ ಮನೆ ಜವಾಬ್ದಾರಿ ತೆಗೆದುಕೊಂಡವಳಿಗೆ ಈಗ ಕಷ್ಟವೇ, ಅಲ್ಲದೇ ಹೆಣ್ಣು ಮಕ್ಕಳಿಗೆ ಇದು ಹುಟ್ಟಿನಿಂದಲೇ ಬಂದ ವರ. ಆದರೆ ಅವರನ್ನು ಕಳಿಸಿಕೊಡುವ ಹೆತ್ತವರ ಒಡಲಿಗೆ ಮಾತ್ರ ಬೆಂಕಿಯ ಉಡುಗೊರೆ.
ನಾ ನೊಂದರೆ ನನ್ನ ಪುಟ್ಟ ಕೂಸು ನೊಂದೀತು ಎಂಬ ಭಯಕ್ಕೆ ಅವಳ ಎದುರಿಗೆ ಎಷ್ಟೇ ಧೈರ್ಯ ಪ್ರದರ್ಶನ ಮಾಡಿದರೂ, ರಾತ್ರಿ ಎದ್ದು ಕೂತು ಅತ್ತಿದ್ದು ಇದೆ. ಅವಳ ಅಗಲಿಕೆಯ ನೋವು ನನ್ನ ದೇಹದ ಒಂದು ಭಾಗವನ್ನೇ ಕತ್ತರಿಸಿ ಕೊಟ್ಟಿದ್ದರು ಆಗುತ್ತಿದ್ದ ನೋವಿಗಿಂತ ಹೆಚ್ಚಾಗಿತ್ತು. ಮದುವೆಯ ದಿನ ಹತ್ತಿರ ಬರುತ್ತಿದ್ದಂತೆ ನನ್ನೊಳಗೆ ಒಂಟಿತನ ಕಾಡತೊಡಗಿತ್ತು. ಶ್ರೀಮತಿ ಎಷ್ಟೇ ಸಮಾಧಾನ ಮಾಡಿದರೂ ಮಗಳ ಆಗಲುವಿಕೆಯ ನೋವು ಪ್ರತಿಕ್ಷಣ ನನ್ನನ್ನು ಪಾತಾಳಕ್ಕೆ ತಳ್ಳುತ್ತಿತ್ತು.
≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥
ಮದುವೆಯ ಅಲಂಕಾರದಲ್ಲಿ ನನ್ನ ಮಗಳ ಮೊಗ ಕಂಡಾಗ ಮೊದಲ ಬಾರಿ ಕೈಯಲ್ಲಿ ಹಿಡಿದ ಪುಟ್ಟ ಮಗುವಿನ ನೆನಪು ಕಣ್ಣ ಮುಂದೆ ಹಾದು ಹೋಯಿತು. ಮೊನ್ನೆ ಮೊನ್ನೆ ಆ ಕೂಸನ್ನು ಕೈಯಲ್ಲಿ ಹಿಡಿದಂತಿದೆ, ಹೆಗಲ ಮೇಲೆ ಹೊತ್ತು ಊರ ಸುತ್ತಿದ ನೆನಪು, ಬೆರಳ ಹಿಡಿದು ನಡೆದ ನೆನಪು. ಇಂದು ಆ ಪುಟ್ಟ ಬೊಂಬೆಯ ಮದುವೆ. ನನ್ನ ಕಣ್ಣೇ ನನ್ನ ನಂಬದಂತೆ ಅನಿಸುತ್ತಿದೆ.
ಮದುವೆಯ ನಂತರ ಮಗಳನ್ನು ಮತ್ತೊಂದು ಮನೆಗೆ ಒಪ್ಪಿಸುವಾಗ ಹೆತ್ತೊಡಲಲ್ಲಿ ಆಗುವ ಸಂಕಟವನ್ನು ಬೇರೆಯವರು ಅರ್ಥೈಸಿಕೊಳ್ಳಲು ಸಾಧ್ಯವೇ ಇಲ್ಲ. ನಾನು ನನ್ನ ಮನೆಯ ದೀಪವನ್ನೇ ಬೇರೆಯವರ ಮನೆ ಬೆಳಗಲು ಕಳಿಸಿಕೊಟ್ಟು ನನ್ನ ಮನೆಯನ್ನು ಕತ್ತಲು ಮಾಡಿದಂತೆ ಅನಿಸುತ್ತಿದೆ.
ಮಗಳ ಮದುವೆಯ ನಂತರ ಅವಳಿಷ್ಟದ ಅಡಿಗೆ ತಿನಿಸು ಮನೆಯಲ್ಲಿ ವರ್ಜವಾಯಿತು. ಐಸ್ಕ್ರೀಂ ಹಾಗೂ ಜ್ಯೂಸ್ ನೋಡಿದ್ರೆ ನನ್ನ ಮುದ್ದು ಮಗಳ ನೆನಪು ಅತಿಯಾಗಿ ಕಾಡುವುದು ಎಂದು ಅವು ಕೂಡಾ ಮನೆಗೆ ನಿಶಿದ್ದವಾಗಿದ್ದವು. 'ನಗು ಕಳೆದುಕೊಂಡ ಮನೆಯಲ್ಲಿ ಇದ್ದವರೆಲ್ಲಾ ಒಬ್ಬಂಟಿಗರು ನಾವಲ್ಲಿ.'
≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥
ಮೊದಲ ಬಾರಿ ಮಗಳು ಮದುವೆಯಾಗಿ ಗಂಡನ ಜೊತೆ ಮನೆಗೆ ಬರುವ ದಿನ ನನ್ನ ಸಡಗರಕ್ಕೆ ಕೊನೆಯೇ ಇಲ್ಲ. ನನ್ನ ಪುಟ್ಟ ಮಗಳು ಇಂದು ದೊಡ್ಡ ಹೆಂಗಸಿನಂತೆ ಕಂಗೊಳಿಸುವಾಗ ಹೆಣ್ಣಿನ ಈ ವಿಶಿಷ್ಟ ಗುಣಕ್ಕೆ ಮನದಲ್ಲೇ ಅಭಿನಂದಿಸಿದ್ದೆ.
≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥
ನನ್ನ ಪುಟ್ಟ ಕೂಸು ಇನ್ನೊಂದು ಕೂಸಿನ ಜನ್ಮಕ್ಕೆ ಮುನ್ನುಡಿ ಬರೆದಾಗ ತಂದೆ ಇಂದ ಅಜ್ಜನ ಪೋಸ್ಟ್ ಗೆ ಬಡ್ತಿ ಪಡೆದಾಗ ಮಗಳಿಗೆ ಮನದಲ್ಲೇ ಧನ್ಯವಾದ ತಿಳಿಸಿದ್ದೆ. ಅವಳು ಹುಟ್ಟುವಾಗಿನ ಕಠಿಣ ಸಂಧರ್ಭ ನೆನೆದವನ ಮನ ಕಂಪಿಸಿತ್ತು. ಅತೀ ಮುಚ್ಚಟೆ ಇಂದ ಮಗಳ ಆರೈಕೆ ಮಾಡಿದೆವು.
ಹೆರಿಗೆಯ ದಿನ ಆಸ್ಪತ್ರೆ ಸೇರಿಸಿದಾಗ ಡಾಕ್ಟರ್ ಬಂದು ಕಂಡೀಶನ್ ಕ್ರಿಟಿಕಲ್ ಇದೆ. ತಾಯಿ ಮಗು ಉಳಿಯುವುದು ಅನುಮಾನ, ನಮ್ಮ ಪ್ರಯತ್ನ ನಾವು ಮಾಡುತ್ತೇವೆ. ದೇವರ ಮೇಲೆ ಭಾರ ಹಾಕಿ ಎಂದಾಗ ನನ್ನ ಜಂಗಾಭಲವೇ ಉಡುಗಿ ಹೋಗಿತ್ತು. ನಿಂತ ನೆಲವೇ ಕುಸಿದಂತಾಗಿ ಕುಸಿದು ಕೆಳಗೆ ಬಿದ್ದಿದ್ದೆ. ಮತ್ತೊಮ್ಮೆ ದೇವರ ಮೊರೆ ಹೋಗುವುದೊಂದೇ ನನ್ನ ಪಾಲಿಗೆ ಉಳಿದಿದ್ದು. ಎಂದೂ ದೇವರಿಗೆ ಕೈ ಮುಗಿಯದ ನಾನು ಅಲ್ಲೇ ಇದ್ದ ದೇವರ ಬಳಿ ಕೈ ಮುಗಿದು ಅಂಗಲಾಚಿ ಬೇಡಿದ್ದೆ. ಕಣ್ಣ ಹನಿಗಳು ಯಾರಪ್ಪಣೆ ಕೇಳದೇ ಕಣ್ಣಿಂದ ಜಾರಿ ನೆಲ ಸೇರುತ್ತಿದ್ದವು.
ದೇವರ ಮುಂದೆ ಕೈ ಮುಗಿದು ಕುಳಿತವನಿಗೆ ಹೆಗಲ ಮೇಲೆ ಚಿರಪರಿಚಿತ ಕೈಯ ಸ್ಪರ್ಶದ ಅನುಭವ ಆದಾಗ ಕಣ್ಬಿಟ್ಟು ನೋಡಿದಾಗ ಕಣ್ ತುಂಬಿಕೊಂಡು ಮುಖದಲ್ಲಿ ನಗು ಹೊದ್ದು ನಿಂತ ನನ್ನ ಶ್ರೀಮತಿ. ಅವಳ ಸಂತೃಪ್ತ ಮೊಗ ಕಂಡೇ ಪರಿಸ್ಥಿತಿಯ ಅರಿವಾಗಿತ್ತು. ಯಾರ ಬಾಯಿ ಇಂದಲೂ ಪದಗಳು ಹೋರಡುತ್ತಿಲ್ಲ. 4 ತಾಸಿನ ಹಿಂದೆ ಮನೆಮಂದಿ ಎಲ್ಲರೂ ನಿರ್ಜಿವವಾಗಿ ಯಾವ ಭಾರವಸೆಯೂ ಇಲ್ಲದೇ ದೇವರಿಗೆ ಕೈ ಮುಗಿದ ನೆನಪು.
≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥≥
ಅಜ್ಜ ನಂಗೆ ವಾಟರ್ ಗನ್ ಬೇಕು. ಇಲ್ಲ ಅಂದ್ರೆ ನಿನ್ನ ಕನ್ನಡಕ ಕೊಡಲ್ಲ. ರಿಮೋಟ್ ಕಾರ್ ಕೂಡಾ ಬೇಕು. ನಂಗೆ ನೀನು ಚಾಕಿ ಕೊಡ್ಸೆ ಇಲ್ಲ ಎಂದು ಹಠ ಮಾಡುವ ಪುಟ್ಟ ಪೋರನನ್ನು ಎತ್ತಿಕೊಂಡು ಕಾಲ ಮೇಲೆ ಕೂರಿಸಿಕೊಂಡು ಅವನ ಕೆನ್ನೆಗೆ ಮುತ್ತು ಕೊಟ್ಟಾಗ ತನ್ನ ಪುಟ್ಟ ಕೈಗಳಿಂದ ಕೆನ್ನೆ ವರೆಸಿಕೊಂಡು ನಿನ್ನ ಗಡ್ಡ ಚುಚ್ಚುತ್ತೆ ಎಂದು ಸಣ್ಣ ಮುಖ ಮಾಡಿ ನುಡಿದವನ ವರಸೆ 30 ವರ್ಷದ ಹಿಂದೆ ಇದೆ ಮಾತು ಹೇಳಿದ ಮಗಳ ನೆನಪು ತರಿಸಿತ್ತು. ಮುಖದಲ್ಲಿ ತಂತಾನೆ ನಗು ಮೂಡಿತು. ಎಲ್ಲಾ ಅವಳಮ್ಮನ ತದ್ರೂಪೆ ಎಂದು ಮನ ಹರ್ಷಿಸಿತು.
ನನ್ನ ಕನ್ನಡಕದೊಂದಿಗೆ ಆಡುತ್ತಿದ್ದವನಿಗೆ ಬೈಯುತ್ತಾ ಹೊರ ಬಂದ ಮಗಳಿಗೆ ಅವಳ ಮಗ ಹೇಳಿದ ಮಾತು ಹೇಳಿ ನಕ್ಕಾಗ ಅವಳ ಮೊಗದಲ್ಲೂ ಮಾಸದ ನಗು. ಈ ಮನೆಯ ಜೀವಾಳವೇ ಅವಳ ನಗು. ನಮಗೆ ಜೊತೆ ಆದದ್ದು ನನ್ನ ಶ್ರೀಮತಿ ಮಗ ಹಾಗೂ ಅಳಿಯ. ಅವನಿಗೂ ತಂಗಿ ಅಂದ್ರೆ ಅದೇ ಅಕ್ಕರೆ ಪ್ರೀತಿ. ಅವಳಿಗೂ ಅಣ್ಣಾ ಅಂದ್ರೆ ಅಷ್ಟೇ ಮಮಕಾರ. ಅವರ ಬಾಂಧವ್ಯ ಸದಾ ಹೀಗೇ ಇರಲಿ ಎಂದು ಮನ ಹಾರೈಸಿತು.
ಮುಕ್ತಾಯ.....
ಧನ್ಯವಾದಗಳು....