ಮರೆತರು ಮರೆಯಾಗದ ಒಲವು
ಮರೆತರು ಮರೆಯಾಗದ ಒಲವು
ಅಂದು ಫೆಬ್ರುವರಿ 13. ಇಡೀ ಜಗತ್ತಿನ ಪ್ರೀತಿಸೋ ಹೃದಯಗಳು ನಾಳೆ ಬರೋ ಪ್ರೇಮಿಗಳ ದಿನಾಚರಣೆ ಹಬ್ಬ ಆಚರಿಸಲು ಕಾತುರದಿ ಕಾಯುತ್ತಿದ್ದಾರೆ. ಪ್ರೀತಿಸೋ ಪ್ರೇಮಿಗೆ ಪ್ರತಿ ದಿನವೂ ಪ್ರೀತಿಯ ಹಬ್ಬವೇ. ಪ್ರೀತಿಸೋ ಹೃದಯಕ್ಕೆ ಅನು ಕ್ಷಣವೂ ಅನುರಾಗದ ರಸದೌತಣವೆ. ಆದರೆ, ವ್ಯಕ್ತ ಪಡಿಸದ ಭಾವಗಳನ್ನು ಮನ ಬಿಚ್ಚಿ ಪ್ರೀತಿಸೋ ಹೃದಯಕ್ಕೆ ತಂಪೆರೆಯಲು ಹವಣಿಸುವ ಶುಭ ದಿನ. ಎಲ್ಲ ಪ್ರೇಮಿಗಳು ವರ್ಷದಿಂದ ಈ ದಿನಕ್ಕಾಗಿ ಜಾತಕ ಪಕ್ಷಿ ಅಂತೆ ಕಾಯ್ತಾ ಕೂತಿರುತ್ತಾರೆ. ಹೊಸದಾಗಿ ಪ್ರೇಮ ನಿವೇದನೆ ಮಾಡುವವರೂ ಕೂಡಾ ತಮ್ಮ ಪ್ರೇಮ ನಿವೇದನೆ ಮಾಡಲು ತಯಾರಿ ನಡೆಸುತ್ತಾರೆ.
ನಾನು ಕೂಡ ಇದಕ್ಕೆ ಹೊರತಲ್ಲ. ನಮ್ಮ ಪ್ರೀತಿಯ ಶುಭಾರಂಭವಾಗಿ ನವ ವಸಂತಗಳೇ ಕಳೆದವು. ನಮ್ಮ ಬಾಳಲ್ಲಿ ಕೋಗಿಲೆಯ ಇಂಪು ಗಾನವೂ, ಸುಮಧುರ ವೀಣೆಯ ತಂತಿ ಇಂದ ಹೊಮ್ಮುವ ಮಾಧುರ್ಯ ಅಲೆಗಳಂತೆ, ನಮ್ಮ ಬದುಕು ಸುಂದರ ತಿಳಿನೀರ ಸಾಗರದಂತೆ, ಶಾಂತವಾಗಿ ಸ್ವಚ್ಛಂದವಾಗಿ ಎಗ್ಗಿಲ್ಲದೆ ನಡೆದಿರಲು ನಾನೂ ಕೂಡಾ ಈ ಪ್ರೇಮಿಗಳ ದಿನಾಚರಣೆ ಹಬ್ಬ ನಿಮ್ಮೊಂದಿಗೆ ಕಳೆಯಲು ನನ್ನ ಮನ ತುಡಿಯುತ್ತಿತ್ತು. ನವ ವರುಷದ ನಮ್ಮ ದಾಂಪತ್ಯ ಜೀವನದಲ್ಲಿ ಈ ದಿನ ನಮಗೆ ವಿಶೇಷ. ಕಾರಣ, ಈ ವರ್ಷ ನಮ್ಮ ಬಾಳಲ್ಲಿ ಇನ್ನೊಂದು ಜೀವದ ಉಗಮದ ಸಿಹಿ ಹೊತ್ತು ಬಂದಿದೆ. ನಿನ್ನ ಕುರುಹು ನನ್ನ ಒಡಲ ತುಂಬಿದೆ. ನಿನ್ನ ಪ್ರತಿರೂಪ ನನ್ನ ಮಡಿಲಲ್ಲಿ ಮಲಗಲು ತಯಾರಿ ನಡೆಸಿದೆ ನಮ್ಮ ಪ್ರೀತಿಯ ಕುರುಹು ನನ್ನೊಡಲ ತೇರಲ್ಲಿ ಪ್ರತಿಷ್ಠಾಪನೆ ಆಗಿ ತಂದೆ ಎಂಬ ದೈವದ ಬರುವಿಕೆಗೆ ಎದುರು ನೋಡುತ್ತಿದೆ ಎಂದು ನಿನಗೆ ಹೇಳಲು ಮನ ಕಾತರಿಸಿಹುದು.
ನೀನು ಬರುವ ಹಾದಿಯ ಕಾಯುತ್ತಾ ಕುಳಿತ ನನಗೆ ಸಮಯವೇ ಮುಂದೆ ಸರಿಯದು ಎನಿಸುತ್ತಿದೆ. ಮನ ನಿನಗೆ ತಂದೆಯ ಪ್ರಮೋಶನ್ ದೊರೆತದ್ದು ಹೇಳಿ ನಿನ್ನಲ್ಲಿ ಆಗುವ ಖುಷಿಯ ರಸ ನಿಮಿಷಗಳ ಸೆರೆ ಹಿಡಿಯಲು ನನ್ನ ಕಣ್ಣುಗಳು ಹಾತೊರೆದು ಕಾಯುತ್ತಿವೆ. ನಾಳೆಯ ಸೂರ್ಯ ರಶ್ಮಿ ಯಾವಾಗ ತನ್ನ ಕೆಲಸಕ್ಕೆ ಹಾಜರಾಗುವನೋ ಎಂಬ ಕಾತುರ.
ಆದರೆ ಎಂದಿನಂತೆ ಸೂರ್ಯನೂ ಬಂದ. ತನ್ನ ಕೆಲಸ ಪ್ರಾರಂಭಿಸಿದ. ಆದರೆ, ನನ್ನೊಲವಿನ ದೈವವೇ, ನೀನು ಕೊಟ್ಟ ಮಾತು ತಪ್ಪಿದ್ದೇಕೆ??? ಇಲ್ಲ ನೀನು ಮಾತು ತಪ್ಪಿಲ್ಲ. ನೀನು ಹೇಳಿದಂತೆ ಬಂದೆ. ಆದರೆ ನಾ ಹೇಳುವ ಸುದ್ದಿ ಕೇಳಿ ಖುಷಿ ಇಂದ ಕುಣಿದು ಕುಪ್ಪಳಿಸಿ ನನ್ನೋಡಲ ಮೇಲೆ ಚುಂಬಿಸಿ, ನಿನ್ನ ಪ್ರತಿರೂಪವ ನೋಡಲು ಕಾಟರಿಸಬೇಕಾದ ನೀನು, ಬಂದೆ. ನಾ ಹೇಳುವ ಸುದ್ದಿ ಕೇಳಲು ಅಲ್ಲ. ನೀ ನೀಡುವ ಸುದ್ದಿ ನನಗೆ ತಲುಪಿಸಲು. ಭಾರತ ಮಾತೆಯ ವೀರ ಪುತ್ರ ಎಂಬ ಬಿರುದನ್ನು (ಕಿರೀಟವನ್ನು) ಹೊತ್ತು ಮೈ ಮೇಲೆ ದೇಶದ ಹೆಮ್ಮೆಯ ತ್ರಿವರ್ಣ ಧ್ವಜ ಹೊತ್ತು ಬಾಗಿಲಿಗೆ ಬಂದ ಕ್ಷಣ ಮರೆತೇನೆಂದರೂ ಮರೆಯಲಿ ಹೇಗೆ?????????
ಮುಕ್ತಾಯ..
