Ashwini Desai

Abstract Tragedy Others

5  

Ashwini Desai

Abstract Tragedy Others

ನೀನು ಮರೆಯಾದ ಮರುಘಳಿಗೆ

ನೀನು ಮರೆಯಾದ ಮರುಘಳಿಗೆ

24 mins
507


'ಹಲೋ ಅಮ್ಮ ಕೇಳ್ತಾ ಇದಿಯ? ಹಲೋ.. ಹಲೋ.. ನೆಟ್ವರ್ಕ್ ಪ್ರಾಬ್ಲಮ್ ಅನ್ಸುತ್ತೆ ಮಾ. ನಂಗೇನು ಕೇಳಿಸ್ತಾ ಇಲ್ಲ. ಹಲೋ... ಅಮ್ಮ... ನಾಳೆ ಹೋಸ್ಪಿಟಲ್ಗೆ ಬರ್ತಾ ಇದೀನಿ. ನಿಂಗೆ ಆಪರೇಷನ್ ಎಷ್ಟು ಗಂಟೆಗೆ ಇರೋದು ನಾಳೆ? ಅಮ್ಮ ನಿಂಗೆ ಏನ್ ಮಾಡ್ಕೊಂಡು ಬರ್ಲಿ ಊಟಕ್ಕೆ? ಅಣ್ಣಂಗೆ ಅಥವಾ, ಅತ್ತಿಗೆಗೆ ಹೊರಗಡೆ ಬಂದು ಫೋನ್ ಮಾಡೋಕೆ ಹೇಳಮ್ಮ. ನಂಗೆ ಏನು ಕೇಳಿಸ್ತಾ ಇಲ್ಲ. ವಾರ್ಡ್ ಅಲ್ಲಿ ನೆಟವರ್ಕ್ ಸಿಗಲ್ಲ ಅನ್ಸುತ್ತೆ...' ಒಂದೇ ಸಮನೆ ನಾನು ಮಾತಾಡ್ತಾನೆ ಇದ್ದೆ. ಆದ್ರೆ ಆ ಕಡೆ ಇಂದ ಮಮ್ಮಿ ದನಿ ಕೇಳ್ತಾನೆ ಇಲ್ಲ.


ಛೇ ಮಮ್ಮಿ ಜೊತೆ ಸರಿಯಾಗಿ ಮಾತಾಡೋಕೆ ಆಗ್ಲಿಲ್ಲ ಅಂತಾ ಬೇಜಾರ್ ಮಾಡ್ಕೊಂಡೆ ಮಲ್ಕೊಳ್ಳೋಕೆ ಬಂದೆ. 'ಚಿನ್ನು ಬೇಗ ಮಲ್ಗು ಪುಟ್ಟ. ನಾಳೆ ಮಂಡೆ. ಸ್ಕೂಲ್ ಇದೆ. ನಿನ್ನ ಶಾಲೆಗೆ ಕಳ್ಸಿ ನಾನು ಅಜ್ಜಿ ನೋಡೋಕೆ ಹಾಸ್ಪಿಟಲ್ ಹೋಗಿ ಬರ್ತೀನಿ. ನಾಳೆ ಅಜ್ಜಿಗೆ fistula ಆಪರೇಷನ್ ಇದೆ' ಅಂತಾ ನನ್ನ ಮಗ ಆರುಷ್ ಗೆ ಹೇಳಿ ಅವನನ್ನ ಮಲಗ್ಸೋಕೆ ನೋಡಿದೆ.


ಆದ್ರೆ ಅಜ್ಜಿ ಸುದ್ದಿ ಕೇಳ್ತಿದ್ದ ಹಾಗೆ ಎದ್ದು ಕೂತವನು, 'ನಾನು ಬರ್ತೀನಿ ಮಮ್ಮಿ ಅಜ್ಜಿ ನೋಡೋಕೆ ಪ್ಲೀಸ್..' ಅಂತಾ ಗೋಗರಿಯೋಕೆ ಶುರು ಮಾಡಿದ.


'ಬೇಡ ಬಂಗಾರ, ಹಾಸ್ಪಿಟಲ್ ಅಲ್ಲಿ ಕೊರೋನ ಕೇಸ್ ಜಾಸ್ತಿ ಇರುತ್ತೆ. ಮಕ್ಕಳನ್ನ ಒಳಗೆ ಬಿಡಲ್ಲ. ಅಜ್ಜಿ ಕ್ಯೂರ್ ಆಗಿ ಮನೆಗೆ ಹೋದ ಕೂಡ್ಲೆ ಇಬ್ಬರು ಹೋಗಿ ಸ್ವಲ್ಪ ದಿನ ಅಜ್ಜಿ ಜೊತೇಲೇ ಇದ್ದು ಬರೋಣ ಆಯ್ತಾ.' ಅಂತಾ ಸಮಾಧಾನ ಮಾಡೋ ಪ್ರಯತ್ನ ಮಾಡಿದೆ.


ಮಮ್ಮಿ ಹಾಸ್ಪಿಟಲ್ ಸೇರಿ ಅದಾಗಲೇ ತಿಂಗಳಾಗ್ತಾ ಬಂತು. ಮೊದ್ಲು 15 ದಿನ ನಾನಿದ್ದೆ. ಆಮೇಲೆ ಅತ್ತಿಗೆ ಬಂದು ನನ್ನ ಮನೆಗೆ ಕಳ್ಸಿದ್ರು. ಇಷ್ಟ ಇಲ್ಲ ಅಂದ್ರು ಅನಿವಾರ್ಯವಾಗಿ ನಾನು ಮನೆಗೆ ಬರೋ ಹಾಗೆ ಆಗಿತ್ತು. ಎರೆಡು ದಿನಕ್ಕೊಮ್ಮೆ ಹೋಗಿ ಮಮ್ಮಿನ ನೋಡಿ ಬರ್ತಾ ಇದ್ದೆ.


ಆಗಿನಿಂದ ನನ್ನ ಮಗ ಅಜ್ಜಿ ನೋಡೋಕೆ ಬರ್ತೀನಿ ಅಂತಾ ಕೇಳ್ತಾನೆ ಇದ್ದಾನೆ. ಆದ್ರೆ ಹಾಸ್ಪಿಟಲ್ ವಾತಾವರಣ ಮಕ್ಕಳಿಗೆ ಒಳ್ಳೇದಲ್ಲ ಅಂತಾ ನಾನೇ ಕರ್ಕೊಂಡು ಹೋಗಿಲ್ಲ.


'ಸರಿ ಮಮ್ಮಿ. ನಂಗೆ ಅಜ್ಜಿ ನೋಡೋ ಆಸೆ ಆಗಿತ್ತು. ಅಲ್ದೇ ಅಜ್ಜಿ ಜೊತೆ ಮಾತಾಡಿ ಕೂಡಾ ಎಷ್ಟೊಂದು ದಿನ ಆಯ್ತು. ನಾನು ಅಜ್ಜಿನ ಮಿಸ್ ಮಾಡ್ಕೋತ ಇದೀನಿ ಮಮ್ಮಿ.' ಎಂದು ಬೇಸರದಲ್ಲಿ ಹೇಳಿದನು.


'ನನ್ನ ಮುದ್ದಮ್ಮ, ನಾನ್ ಕೂಡಾ ಅಜ್ಜಿನ ಮಿಸ್ ಮಾಡ್ಕೋತ ಇದೀನಿ ಕಣೋ ಪುಟ್ಟ. ಆದ್ರೆ ಅಜ್ಜಿ ಹಾಸ್ಪಿಟಲ್ ಅಲ್ಲಿ ಇದಾರಲ್ವ, ಅಲ್ಲಿ ನೆಟ್ವರ್ಕ್ ಸಿಗಲ್ಲ. ನಿನ್ನಷ್ಟೇ ಅಜ್ಜಿ ಕೂಡಾ ನಿನ್ನ ಮಿಸ್ ಮಾಡ್ಕೋತ ಇದಾರೆ. ಅವ್ರಿಗೆ ಫೋನ್ ಮಾಡೋಕೆ ನೆಟ್ವರ್ಕ್ ಪ್ರಾಬ್ಲಮ್ ' ಅಂದೆ.


'ಮಮ್ಮಿ ಅಜ್ಜಿ ಹಾಸ್ಪಿಟಲ್ ಸೇರಿ ಎಷ್ಟೊಂದು ದಿನ ಆಯ್ತು ಅಲ್ವಾ, ಇನ್ನು ಅಲ್ಲೇ ಎಷ್ಟು ದಿನ ಇರ್ತಾರೆ?' ಎಂದು ಕೇಳಿದ.


'ನಾಳೆ ಆಪರೇಷನ್ ಮುಗಿದ ಮೇಲೆ ನಾಡಿದ್ದೇ ಡಿಸ್ಚಾರ್ಜ್ ಮಾಡ್ತೀವಿ ಅಂದಿದಾರಂತೆ ಪುಟಾಣಿ ಡಾಕ್ಟರ್, ಮಾಮ ಹೇಳ್ತಾ ಇದ್ದ.' ಎಂದೆ.


'ಒಹ್ ಹಾಗಾದ್ರೆ ನಾವು ಅಜ್ಜಿ ಊರಿಗೆ ಅಜ್ಜಿ ನೋಡೋಕೆ ಹೋಗ್ತಿವ ಹಾಗಿದ್ರೆ?' ಅಂತಾ ಖುಷಿಲಿ ಕೇಳ್ದ.


'ಹ್ಮ್, ಹೇಗೂ ನಿನ್ನ ಎಕ್ಸಾಮ್ಸ್ ಹತ್ರದಲ್ಲೇ ಇವೆ ಅಲ್ವಾ, ಎಕ್ಸಾಮ್ ಮುಗಿದ ಕೂಡಲೇ ಸಮ್ಮರ್ ಹಾಲಿಡೇಸ್ ಇವೆ. ಆಗ ಹೋಗೋಣ.' ಅಂದೆ 


'ಓಕೆ ಮಮ್ಮಿ. ಗುಡ್ ನೈಟ್.' ಎಂದು ಹೇಳಿ ಮಲಗಿದ.


'ಗುಡ್ ನೈಟ್ ಕಂದ..' ಎಂದು ಮುತ್ತಿಕ್ಕಿ ಮಲಗಿದೆ.


🔅


ಬೆಳಗ್ಗೆ ಅಣ್ಣ ಫೋನ್ ಮಾಡಿದ್ದ,


'ಹಲೋ... ಹಾ ಅಣ್ಣ ಕೇಳ್ತಾ ಇದೇನಾ?'


'ಹ ಕೇಳ್ತಿದೆ ಹೇಳು.'


'ಮಮ್ಮಿ ಹೆಂಗಿದಾರೆ?'


'ಹ್ಮ್ ಆರಾಮಿದ್ದಾರೆ.'


'ಆಪರೇಷನ್ ಎಷ್ಟು ಗಂಟೆಗೆ?'


'ಆಲ್ರೆಡಿ ಕರ್ಕೊಂಡು ಹೋಗಿದಾರೆ.'


'ನೆನ್ನೆ ಫೋನ್ ಮಾಡಿ ಟೈಮಿಂಗ್ಸ್ ಹೇಳೋದಲ್ವಾ, ನಾನು ಅಷ್ಟರಲ್ಲೇ ಬರ್ತಿದ್ದೆ. ಇವಾಗ ಫೋನ್ ಮಾಡಿದೀಯ.'


'ಕೋಪ ಯಾಕ್ ಮಾಡ್ಕೊತೀಯ, ಪಾಪುನ್ನ ಸ್ಕೂಲ್ ಕಳ್ಸಿ ಆರಾಮಾಗಿ ಬಾ. ಹೇಗೂ ಅಲ್ಲಿ ತಡ ಆಗುತ್ತೆ. ಇವತ್ತು ತುಂಬಾ ಸರ್ಜರಿ ಇದಾವಂತೆ.'


'ಸರಿ, ನಾನು ಆದಷ್ಟು ಬೇಗ ಬರೋ ಪ್ರಯತ್ನ ಮಾಡ್ತೀನಿ. ಅದ್ಸರಿ ಮಮ್ಮಿಗೆ ಊಟ ಕೊಡೋಕೆ ಹೇಳಿದಾರೆ ಅಲ್ವಾ ಆಪರೇಷನ್ ಆದ ಮೇಲೆ?'


'ಹ್ಮ್ ಕೊಡಬಹುದು ಅಂದಿದಾರೆ.'


'ಮಮ್ಮಿಗೆ ಏನ್ ತಿನ್ನೋ ಹಾಗ್ ಆಗ್ತಿದೆ ಕೇಳಿ ಹೇಳ್ತೀಯಾ? ಅದನ್ನೇ ಮಾಡ್ಕೊಂಡು ಬರೋಣ ಅಂತಿದ್ದೆ....'


'ಅವ್ರಿಗೆ ನಿನ್ನ ಕೈ ಬಿಸಿಬೇಳೆ ಬಾತ್ ತಿನ್ನೋ ಹಾಗ್ ಆಗ್ತಿದೆ ಅಂತೆ ಕಣೆ. ಅದನ್ನೇ ಮಾಡ್ಕೊಂಡು ಬರೋಕ್ ಹೇಳು ಅಂತಾ ಹೇಳಿದ್ರು ಅದಕ್ಕೆ ಫೋನ್ ಮಾಡಿದೆ.'


'ಒಹ್ ಹೌದಾ, ಮತ್ತೆ ಇವಾಗ ಹೇಳ್ತಾ ಇದಿಯಲ್ಲೋ, ಅದೆಲ್ಲಾ ಮುಗ್ಸಿ ನಾನ್ ಇನ್ಯಾವಾಗ ಬರೋದು. ಆಗ್ಲೇ ತಡ ಆಗ್ತಾ ಬಂತು.'


'ಪರ್ವಾಗಿಲ್ಲ ಕಣೆ, ಆರಾಮಾಗಿ ಬಾ. ನೀನು ಬರೋ ಅಷ್ಟರಲ್ಲಿ ಮಮ್ಮಿನು ಆಪರೇಷನ್ ಮುಗ್ಸಿ ಬರ್ತಾರೆ.'


'ಸರಿ ಆಯ್ತು. ನಾನು ಹೋರಟ ಮೇಲೆ ಫೋನ್ ಮಾಡ್ತೀನಿ. ಏನಾದ್ರೂ ಇದ್ರೆ ಫೋನ್ ಮಾಡು.'


🔅


ನಾನು ಅಣ್ಣ ಹೇಳಿದಂತೆ ಮಮ್ಮಿಗೆ ಬಿಸಿಬೇಳೆ ಬಾತ್ ಮಾಡ್ತಾ ಇದ್ದೆ. ನನ್ನ ಮಗ ಬಂದು,


'ಮಮ್ಮಿ ಇವತ್ತು ತಿಂಡಿಗೆ ಏನ್ ಮಾಡ್ತಾ ಇದಿಯ?' ಅಂತಾ ಕೇಳ್ದ.


'ಅಜ್ಜಿಗೆ ಇಷ್ಟದ ಅಡಿಗೆ ಮಾಡ್ಕೊಂಡು ತಗೊಂಡು ಹೋಗ್ತೀನಿ ಬಂಗಾರ. ಅವ್ರು ಬಿಸಿಬೇಳೆ ಬಾತ್ ಬೇಕು ಅಂದಿದಾರೆ. ನಿಂಗೂ ಅದೇ ಮಾಡ್ಲಾ ಇವತ್ತು.' ಅಂತಾ ಕೇಳ್ದೆ.


'ಸರಿ ಮಮ್ಮಿ ಅಜ್ಜಿ ಏನ್ ಹೇಳಿದಾರೆ ಅದೇ ಮಾಡು.' ಅಂತಾ ಒಪ್ಪಿಗೆ ಕೊಟ್ಟ.


'ಸರಿ ಪಪ್ಪ ಹತ್ರ ಬಿಸಿನೀರು ಹಾಕಿಸ್ಕೊಂಡು ಬೇಗ ಸ್ನಾನ ಮಾಡಿ ಬಾ. ನಾನು ಅಷ್ಟರಲ್ಲಿ ಟಿಫಿನ್ ರೆಡಿ ಮಾಡ್ತೀನಿ.' ಅಂತಾ ಹೇಳಿ ಅವನನ್ನು ಕಳಿಸಿ ನನ್ನ ಕೆಲಸ ಮುಂದುವರೆಸಿದೆ.


🔅


ಹಾಸ್ಪಿಟಲ್ ಹೋಗುತ್ತಿದ್ದಂತೆ ಅಣ್ಣ ಎದುರಾದ. ನಾನು ಬರ್ತೀನಿ ಅಂತಾ ಗೇಟ್ ಹತ್ರ ಬಂದಿದ್ದ..


'ಮಮ್ಮಿ ಆಪರೇಷನ್ ಮುಗೀತಾ ಅಣ್ಣ?'


'ಜಸ್ಟ್ ಮುಗೀತು. ಇನ್ನು ವಾರ್ಡ್ ಶಿಫ್ಟ್ ಮಾಡಿಲ್ಲ.' ಅಂದ. ಇಬ್ಬರು ಮಾತಾಡ್ತಾ ಒಳಗೆ ಹೋದ್ವಿ. ಅಷ್ಟರಲ್ಲಿ ಮಮ್ಮಿನ ಕರ್ಕೊಂಡು ಬಂದ್ರು.


🔅


'ಅಮ್ಮ ಹೆಂಗಿದೀಯ?'


'ಚನ್ನಾಗಿದೀನಿ ಕಣೆ. ಮೊನ್ನೆ ಇನ್ನು ಬಂದು ಹೋಗಿದೀಯ, ಪದೇ ಪದೇ ಯಾಕ್ ಬರ್ತಿಯಾ, ಸುಮ್ನೆ ಖರ್ಚು. ಅದೇ ದುಡ್ಡಲ್ಲಿ ಇಲ್ಲೇ ಊಟ ಸಿಗುತ್ತೆ ಅಂದ್ರು ಕೇಳಲ್ಲ. ಮನೇಲಿ ಎಲ್ಲಾ ಮುಗ್ಸಿ ಮತ್ತೆ ಇಲ್ಲಿಗೂ ಅಡಿಗೆ ಮಾಡ್ಕೊಂಡು ಬರ್ಬೇಕು. ಸುಮ್ನೆ ನಿಂಗೆ ಕಷ್ಟ.' ಅಂದ್ರು. ಎಷ್ಟೇ ಆದ್ರು ಅಮ್ಮ ಅಲ್ವಾ, ಮಗಳಿಗೆ ಕಷ್ಟ ಆಗ್ಬಾರ್ದು ಅಂತಾನೇ ಯೋಚಿಸೋದು ಯಾವಾಗ್ಲೂ.


'ಕಷ್ಟ ಏನಿಲ್ಲ ಅಮ್ಮ. ಹತ್ರದಲ್ಲೇ ಇದೀರಾ ಅಂತಾ ಬರ್ತೀನಿ. ನಿಮ್ಮೂರಲ್ಲೇ ಇದ್ದಿದ್ರೆ ನಂಗೆ ಬರೋಕಾದ್ರೂ ಎಲ್ಲಿ ಆಗ್ತಿತ್ತು ಹೇಳು.'


'ಸರಿ ಸರಿ ನಿನ್ನ ಮಾತಿಗೆ ಜವಾಬು ಕೊಡೋಕ್ ಆಗುತ್ತಾ ನಂಗೆ' ಎಂದು ನಕ್ಕರು. ಅವರಿಗೂ ನಾನು ಹೋಗ್ಬೇಕು ಅಂತಾನೇ ಆಸೆ. ಆದ್ರೆ ನಂಗೆ ಕಷ್ಟ ಆಗುತ್ತೆ ಅಂತಾ ಬೇಡ ಅಂತಾರೆ ಅಷ್ಟೆ. ದಿನ ಬರ್ತೀನಿ ಅಂದ್ರೆ ಬೇಡ ಅಂತಾ ಸ್ಟ್ರಿಕ್ಟ್ ಆಗಿ ಹೇಳಿದ್ದಕ್ಕೆ ಎರೆಡು ದಿನಕ್ಕೊಮ್ಮೆ ಬರ್ತಿದೀನಿ.


'ನನ್ನ ಮುದ್ದು ಅಮ್ಮ, ಕೈ ನೋವು ಹೇಗಿದೆ, ತುಂಬಾ ನೋಯ್ತಾ ಇದಿಯ?' ಅಂತಾ ಕೇಳಿದೆ.


'ಇಲ್ವೆ ಅನಸ್ತೇಷಿಯ ಕೊಟ್ಟಿದಾರಲ್ಲ, pain ಇಲ್ಲ. ನಾಳೆ ಗೊತ್ತಾಗುತ್ತೆ.' ಅಂದ್ರು.


'ಸರಿ ಇವಾಗ ಊಟ ಮಾಡ್ತೀಯ?' ಅಂತಾ ಕೇಳ್ದೆ. ಯಾಕೆ ಅಂದ್ರೆ ಅವರು ಶುಗರ್ ಪೇಷಂಟ್. ಹಸಿವು ತಡಿಯಲ್ಲ.


'ಮೊದ್ಲು ಈ ಓಟಿ ಗೌನ್ ತೆಗೆದು ನಂಗೆ ಸೀರೆ ಉಡ್ಸು ಮಾರಾಯ್ತಿ. ಈ ಡ್ರೆಸ್ ಅಲ್ಲಿ ಕಂಫರ್ಟ್ ಅನ್ಸಲ್ಲ. ಆಮೇಲೆ ಊಟ ಮಾಡ್ಸುವಂತೆ.' ಅಂದ್ರು.


'ಸರಿ ನಂದೇ ಸೀರೆ ತಂದಿದೀನಿ. ಅದನ್ನೇ ಉಡಿಸ್ತೀನಿ ತಾಳು.' ಎಂದು ಹೇಳಿ ನನ್ನ ಬ್ಯಾಗ್ ಇಂದ ಅಮ್ಮ ಇಷ್ಟ ಪಡ್ತಾ ಇದ್ದ ನನ್ನದೊಂದು ಸೀರೆ ತೆಗೆದೆ.


'ಅಣ್ಣ, ಅತ್ತಿಗೆ, ನೀವಿಬ್ರು ಹೋಗಿ ಊಟ ಮಾಡ್ಕೊಂಡು ಬನ್ನಿ. ನಾನು ಮಮ್ಮಿಗೆ ಡ್ರೆಸ್ ಚೇಂಜ್ ಮಾಡ್ಸಿ ಊಟ ಮಾಡಿಸ್ತೀನಿ.' ಅಂದೆ.


'ಸರಿ. ಹುಷಾರು. ಬೇಗ ಬರ್ತೀವಿ.' ಅಂದ್ರು ಇಬ್ಬರು.


'ಅರ್ಜೆಂಟ್ ಏನಿಲ್ಲ. ನಾನ್ ಇಲ್ಲಿ ಇರ್ತೀನಿ. ನೀವು ಆರಾಮಾಗಿ ಬನ್ನಿ. ಕಾರಲ್ಲಿ ಊಟದ ಡಬ್ಬಿ ಇದೆ ನೋಡಿ.' ಎಂದೆ. ಇಡೀ ದಿನ ಆಸ್ಪತ್ರೆಲೆ ಇರ್ತಾರೆ. ಕನಿಷ್ಠ ನಾನು ಬಂದಾಗ ಹೊರಗೆ ಕೂತು ಬರ್ಲಿ ಅನ್ನೋದು ನನ್ನ ಅಭಿಪ್ರಾಯ.


'ಸರಿ ನಾವಿನ್ನು ಹೊರಡ್ತೀವಿ.' ಎಂದು ಹೇಳಿ ಇಬ್ಬರೂ ಹೊರಟರು.



🔅


'ಪಾಪುಗು ಇದೆ ಕಟ್ಟಿಕೊಟ್ಯ? ಎಷ್ಟೊಂದು ಖಾರ ಆಗಿದೆ. ಆ ಹುಡುಗ ಅದು ಹೇಗ್ ತಿಂತಾನೋ ಇದನ್ನ. ಸ್ವಲ್ಪ ಖಾರ ಕಡಿಮೆ ಹಾಕಿ ಮಾಡೋದಲ್ವ,' ಅಂತಾ ಅಮ್ಮ ಬಿಸಿಬೇಳೆ ಬಾತ್ ತಿಂತಾ ಆಕ್ಷೇಪಿಸಿದ್ರು.


'ಅಯ್ಯೋ ಅಮ್ಮ, ನಿನ್ನ ಮೊಮ್ಮಗ ಖಾರ ಕಡಿಮೆ ಆಗಿದೆ ಅಂತಾ ಗಲಾಟೆ ಮಾಡ್ಕೊಂಡು ಹೋಗಿದಾನೆ. ಅವನ ಅಪ್ಪನ ಹಾಗೆ ಅವನಿಗೂ ಸಿಕ್ಕಾಪಟ್ಟೆ ಖಾರ ಬೇಕು.' ಎಂದೆ. ಅದು ನಿಜ ಕೂಡಾ. ನನ್ನ ಮಗನಿಗೆ ಅಡಿಗೆ ಸಿಕ್ಕಾಪಟ್ಟೆ ಖಾರವಾಗಿ ಬೇಕು. ಎಷ್ಟೇ ಆದ್ರು ಬಯಲುಸೀಮೆ ರಕ್ತ ಅಲ್ವಾ..


🔅


'ಯಾಕೋ ನಂಗೆ ವಾಂತಿ ಬಂದ ಹಾಗೆ ಆಗ್ತಿದೆ ಕಣೆ. ಅಲ್ಲಿ ವಾಶ್ರೂಮ್ ಹತ್ರ ಕರ್ಕೋಂಡು ಹೋಗ್ತಿಯ ಸ್ವಲ್ಪ,' ಅಂದ್ರು ಅಮ್ಮ. 


'ಯಾಕಮ್ಮ? ಇನ್ನು ತಿಂತಾ ಇದ್ದಂಗೆ ವಾಂತಿ ಮಾಡ್ತೀನಿ ಅಂತಿದೀಯ? ಇದು ಬೇಡ ಅಂದ್ರೆ ಬೇರೆ ಏನಾದ್ರೂ ತಿನ್ನಿಸಲಾ?' ಅಂತಾ ಕೇಳ್ದೆ. ಖಾರ ಅಂದಿದ್ರಲ್ಲ ಅದಕ್ಕೆ.


'ಬೇಡ ಬೇಡ ಇದೆ ಚೆನಾಗಿದೆ. ಸ್ವಲ್ಪ ಖಾರ ಅನ್ನೋದು ಬಿಟ್ರೆ ಬಿಸಿಬೇಳೆ ಬಾತ್ ಸೂಪರ್. ನೆನ್ನೆ ನಾಲಿಗೆಗೆ ಏನೂ ರುಚಿನೇ ಹತ್ತಿರಲಿಲ್ಲ. ಇವತ್ತು ನೋಡು ನಿನ್ನ ಬಿಸಿಬೇಳೆ ಬಾತ್ ಖಾರ ಅಂತಾ ರುಚಿ ಗೊತ್ತಾಗ್ತಿದೆ..' ಎಂದು ನಕ್ಕರು.


'ನಿಂಗೆ ಯಾವಾಗ್ಲೂ ತಮಾಷೆನೆ. ತಾಳು ಇಲ್ಲೇ ಬುಟ್ಟಿ ತಗೋತೀನಿ. ನೀನು ಅಷ್ಟು ದೂರ ನಡಿಯೋದೇನು ಬೇಡ.' ಎಂದು ಹತ್ತಿರದಲ್ಲಿದ್ದ ಬುತ್ತಿ ತಂದು ಅಮ್ಮನ ಮುಂದೆ ಹಿಡಿದೆ.


🔅


'ಅಮ್ಮ ಜ್ಯುಸ್ ಏನಾದ್ರೂ ತಂದುಕೊಡ್ಲಾ? ಬಿಸಿಬೇಳೆ ಬಾತ್ ಪೂರಾ ವಾಂತಿ ಮಾಡಿದೆ. ಹೊಟ್ಟೆ ಎಲ್ಲಾ ಖಾಲಿ ಆಯ್ತು.' ಅಂತಾ ಕೇಳ್ದೆ.


'ಇವಾಗ ಸದ್ಯಕ್ಕೆ ಏನು ಬೇಡ ಕಣೆ. ಆಪಲ್ ಇದ್ರೆ ಕಟ್ ಮಾಡಿ ಕೊಡು ಸಾಕು. ತಿಂದು ಸ್ವಲ್ಪ ಹೊತ್ತು ಮಲಗ್ತೀನಿ.' ಎಂದರು.


🔅


'ಪಾಪುನ್ನ ನೋಡ್ಬೇಕು ಅನ್ನಿಸ್ತಾ ಇದೆ ಕಣೆ. ಕರ್ಕೊಂಡು ಬರ್ಬೇಕಿತ್ತು.' ಎಂದರು.


'ಹಾಸ್ಪಿಟಲ್ ಅಲ್ವಾ ಅಮ್ಮ. ಅದಕ್ಕೆ ಬೇಡ ಅಂತಾ ಸುಮ್ನಾದೆ. ನಿಂಗೆ ಇನ್ನೆರೆಡು ದಿನಕ್ಕೆ ಡಿಸ್ಚಾರ್ಜ್ ಮಾಡಬಹುದು. ಮುಂದಿನ ವಾರ ಅವನ ಎಕ್ಸಾಮ್ ಇವೆ. ಮುಗಿದ ಕೂಡಲೇ ರಜೆಗೆ ಬರ್ತೀವಿ ಬಿಡು' ಎಂದೆ. ನನ್ನ ಮಾತಿಗೆ ಹ್ಮ್ ಎಂದು ಸುಮ್ಮನಾದರು.


🔅


'ನಿಂಗೆ ತಡ ಆಗುತ್ತೆ. ಮತ್ತೆ ಕತ್ತಲಾಗೊ ಮುಂಚೆ ಮನೆ ಸೇರು. ನೀನಿನ್ನು ಹೊರಡು. ಒಬ್ಳೆ ಹೋಗೋದು ಲೇಟ್ ಮಾಡ್ಕೋಬೇಡ.' ಎಂದು ನನ್ನ ಅವಸರಿಸಿದರು.


'ಸರಿ ನೀನು ಹುಷಾರು. ಅಮ್ಮ ನಾಳೆ ಡೆಂಟಲ್ ಹೋಸ್ಪಿಟಲ್ಗೆ ಬರೋದಿದೆ ನಾನು. ಅಪ್ಪೋಯಿಂಟ್ಮೆಂಟ್ ಇದೆ. ಬೇಗ ಮುಗುದ್ರೆ ನಿನ್ನ ಬಂದು ಒಮ್ಮೆ ನೋಡ್ಕೊಂಡು ಹೋಗ್ತೀನಿ' ಎಂದೆ.


'ದಿನ ದಿನ ಬರೋದು ಬೇಡ. ಇವತ್ತು ಬಂದಿದೀಯಾ ನಾಳೆ ಮತ್ತೆ ಬಂದ್ರೆ ಇದ್ದಂಗೆ ಆಗಲ್ಲ. ಅದರ ಬದ್ಲು ನಾಡಿದ್ದೇ ಬಾ. ಸ್ವಲ್ಪ ಹೊತ್ತು ಇದ್ದಂಗಾದ್ರೂ ಆಗುತ್ತೆ' ಅಂದ್ರು.


ಬೇಡ ಅಂತಾ ಬಾಯಲ್ಲಿ ಹೇಳಿದ್ರು, ನಾನು ಹೆಚ್ಚು ಹೊತ್ತು ಅವಳ ಜೊತೆ ಇರಬೇಕು ಅನ್ನೋ ಆಸೆ ಕಳ್ಳಿ ಅಮ್ಮ ಎಂದುಕೊಂಡು ಮನದಲ್ಲೇ ನಕ್ಕೆ.


'ಸರಿ ಮಾ. ನಾನಿನ್ನು ಹೊರಡ್ತೀನಿ' ಎಂದು ಹೇಳಿ ಆಸ್ಪತ್ರೆ ಇಂದ ಹೊರಟೆ.


🔅


ರಾತ್ರಿ ಅಣ್ಣನಿಗೆ ಫೋನ್ ಮಾಡಿದೆ.


'ಮಮ್ಮಿ ಹೇಗಿದ್ದಾರೆ ಅಣ್ಣ?'


'ಹ್ಮ್ ನೀನು ಹೋದ ಮೇಲೆ ಮತ್ತೆ ಒಮ್ಮೆ ವಾಂತಿ ಮಾಡಿದ್ರು. ಸ್ವಲ್ಪ ಸುಸ್ತ್ ಇದಾರೆ. ಡಾಕ್ಟರ್ ನಾಳೆ ಬರ್ತಾರೆ. ಏನ್ ಹೇಳ್ತಾರೆ ನೋಡ್ಬೇಕು.' ಅಂದ 


'ಸರಿ ಅಣ್ಣ ಬೈ' ಅಂತಾ ಹೇಳಿ ಫೋನಿಟ್ಟೆ.


🔅


ಬೆಳಗ್ಗೆ ಡೆಂಟಲ್ ಹಾಸ್ಪಿಟಲ್ ಹೋಗೋದಿತ್ತು. ಹೋಗಿ ಅಲ್ಲಿ ನನ್ನ ಟ್ರೀಟ್ಮೆಂಟ್ ಎಲ್ಲಾ ಮುಗಿಯುತ್ತಲೇ 4 ಗಂಟೆ ಮೇಲೆ ಆಗಿತ್ತು. ಅಣ್ಣನಿಗೆ ಕರೆ ಮಾಡಿದ್ದೆ,


'ಹಲೋ.. ಅಣ್ಣ ಕೇಳಿಸ್ತಾ ಇದಿಯ? ಮಮ್ಮಿ ಜೊತೆ ಮಾತಾಡ್ಬೇಕಿತ್ತು. ಕೊಡ್ತೀಯಾ?' ಅಂದೆ.


'ಅಲ್ಲಿ ವಾರ್ಡ್ ಅಲ್ಲಿ ಕೇಳಲ್ಲ ಕಣೆ. ನಾನು ಹೊರಗಡೆ ಬಂದಿದ್ದೆ' ಅಂದ.


'ಒಹ್ ಹೌದಾ, ಸರಿ ಬಿಡು ಹಾಗಾದ್ರೆ ನಾನು ಇನ್ನು ಸ್ವಲ್ಪ ಹೊತ್ತಿಗೆ ಬರ್ತೀನಿ' ಅಂದೆ.


'ಆಗ್ಲೇ ತಡ ಆಗಿದೆ. ನಾಳೆ ಬೆಳಗ್ಗೆ ಬರುವಂತೆ. ಈಗ ಮನೆಗೆ ಹೋಗು. ನೀನಿಲ್ಲಿ ಇವಾಗ ಬಂದ್ರು ಕೂಡಾ, ಕತ್ತಲಾಗುತ್ತೆ ಅಂತಾ ಬರಿ 10 ನಿಮಿಷಕ್ಕೆ ವಾಪಸ್ ಹೋಗ್ಬೇಕು. ಅದರ ಬದ್ಲು ನಾಳೆ ಬಾ' ಅಂದ.


ಅವನು ಹೇಳಿದ್ದು ನಿಜಾನೆ ಆಗಿತ್ತು. 'ಸರಿ ಆಯ್ತು. ಮಮ್ಮಿ ಹುಷಾರು.... ನಾನು ನಾಳೆ ಬೇಗ ಬರ್ತೀನಿ' ಅಂತಾ ಹೇಳಿ ಫೋನಿಟ್ಟು ಮನೆ ಕಡೆ ಹೊರಟೆ.


🔅


'ರೀ, ಮಮ್ಮಿಗೆ ಮಜ್ಜಿಗೆ ಸಾರು, ಬಿಸಿ ಅನ್ನ ಅಂದ್ರೆ ತುಂಬಾ ಆಸೆ. ಇವತ್ತು ಅದನ್ನೇ ಮಾಡ್ಕೊಂಡು ಹೋಗ್ತೀನಿ. ನಿಮ್ಗೆ ಅದೇ ನಡಿಯುತ್ತೆ ಅಲ್ವಾ? ಅಥವಾ ಅಣ್ಣ ಅತ್ತಿಗೆಗೆ ಬೇರೆ ಅಡಿಗೆ ಮಾಡ್ತಿದಿನಿ. ಅದನ್ನೆ ಮಾಡ್ಲಾ?' ಎಂದು ಕೇಳಿದ.


'ಅದೇ ಆಗುತ್ತೆ ಮಾರಾಯ್ತಿ. ಮತ್ತೇನು ಮಾಡೋಕ್ ಹೋಗ್ಬೇಡ. ನೀನು ಬೇಗ ಹೊರಡು. ಆ ಕಡೆ ಇಂದ ಬರೋವಾಗ ಹೊತ್ತು ಮಾಡ್ಕೋಬೇಡ. ಒಬ್ಳೆ ಬರೋದು' ಅಂದ್ರು.


'ಸರಿ ಸರಿ ಆಯ್ತು' ಅಂದು ಹೊರಡೋ ತಯಾರಿ ಮಾಡಿದೆ.


🔅


ಮನೆ ಎಷ್ಟು ಬೇಗ ಬಿಟ್ರು, ಎರೆಡೆರೆಡು ಬಸ್ ಕ್ಯಾಚ್ ಮಾಡಿ ಬರೋ ಅಷ್ಟರಲ್ಲಿ 11 ಗಂಟೆ ಆಗೇಬಿಡ್ತು. ಛೇ, ಪಾಪ ಮಮ್ಮಿ ಅದೆಷ್ಟು ಕಾತರಿಸಿ ನನ್ನ ದಾರಿ ಕಾಯ್ತಾ ಇರ್ತಾರೆ. ಇವತ್ತೇ ಬಸ್ ಕಾಡ್ಬೇಕಾ, ಎಂದು ಸ್ವಗತ ನುಡಿದುಕೊಳ್ಳುತ್ತಾ ಹಾಸ್ಪಿಟಲ್ ಒಳಗೆ ಹೋಗುತ್ತಿದ್ದಂತೆ ಅಣ್ಣ ಎದುರಾದ.


'ಅಣ್ಣ ಮಮ್ಮಿ ಹೇಗಿದ್ದಾರೆ?' ಎಂದು ಕೇಳಿದೆ.


'ಹ್ಮ್ ಹಾಗೆ ಇದಾರೆ ಕಣೆ. ಸ್ವಲ್ಪ ಸುಸ್ತ್ ಇದಾರೆ. ಉಮೇಶ್ ಮಾಮ ಬಂದಿದಾನೆ. ಮಮ್ಮಿನ ನೋಡೋಕೆ ಹೋಗಿದಾರೆ. ICU ಅಲ್ವಾ ಒಬ್ಬೊಬ್ಬರನ್ನೇ ಬಿಡೋದು. ಮಾಮ ಬಂದ ಕೂಡ್ಲೆ ನೀನು ಹೋಗುವಿಯಂತೆ ಬಾ' ಎಂದನು. 


'ಸರಿ ಕಣೋ. ತಗೋ ಬ್ಯಾಗ್ ಕಾರಲ್ಲಿಡು. ಇದ್ರಲ್ಲಿ ನಿಮ್ಗೆ ಚಪಾತಿ, ಬೀನ್ಸ್ ಪಲ್ಯ, ಅನ್ನ, ಸಾಂಬಾರ್ ಇದೆ. ಮಮ್ಮಿಗೆ ಮಜ್ಜಿಗೆ ಪಳದೆ ಮಾಡ್ಕೊಂಡು ಬಂದಿದೀನಿ. ನೀನು ಅದು ತಿನ್ನಲ್ವಲ್ಲ ಅದಕ್ಕೆ ಬೇರೆ ಬೇರೆ ಮಾಡಿದೆ' ಎಂದೆ. 


'ನಡೀತಿತ್ತು. ಏನಾದ್ರೂ ಒಂದೇ ತರ ಮಾಡೋದ್ ಬಿಟ್ಟು ಸುಮ್ನೆ ಯಾಕ್ ಒಬ್ಳೆ ಪೇಚಾಡ್ತೀಯ.' ಎನ್ನುತ್ತಾ ಕೈಲಿದ್ದ ಬ್ಯಾಗ್ ಪಡೆದು ಮುಂದೆ ಹೊರಟ.


'ಪರ್ವಾಗಿಲ್ಲ ಕಣೋ ಅಣ್ಣ. ಊರಿಗೆ ಬಂದಾಗ ಅತ್ತಿಗೆ ಹತ್ರ ಇದರ ಎರೆಡರಷ್ಟು ಉಪಚಾರ ಮಾಡಿಸ್ಕೊತಿನಿ' ಎಂದು ತಮಾಷೆ ಮಾಡಿದೆ. ಅಷ್ಟರಲ್ಲಿ ನಮ್ಮತ್ತೆ ಮಗ ಉಮೇಶ್ ಮಮ್ಮಿ ವಾರ್ಡ್ ಇಂದ ಹೊರಗೆ ಬಂದ್ರು. ಅವರನ್ನ ಮಾತಾಡ್ಸಿ, 'ಸರಿ ನಾನು ಒಳಗೆ ಹೋಗ್ತೀನಿ' ಎಂದು ಇಬ್ಬರಿಗೂ ಹೇಳಿ ಹೊರಟೆ.


🔅


ಅತ್ತಿಗೆ ಅಲ್ಲೇ ಮಮ್ಮಿ ಹತ್ರಾನೆ ನಿಂತಿದ್ರು. ಅವರನ್ನ ನೋಡಿ ಒಂದು ಸಣ್ಣ ನಗು ರವಾನಿಸಿ, 'ಅತ್ತಿಗೆ ಮಮ್ಮಿ ಏನಾದ್ರು ತಿಂದ್ರಾ?' ಅಂತಾ ಕೇಳಿದೆ.


'ಬೆಳಗ್ಗೆ ಗಂಜಿ ಕುಡ್ಸಿದ್ದೆ. ಇವಾಗ ಉಮೇಶ್ ಅಣ್ಣ ಗಂಜಿ ಕುಡ್ಸೋಣ್ವಾ ಅಂತ ಕೇಳಿದ್ದಕ್ಕೆ, ಬೇಡ ಅಂದ್ರು. ಬಹುಷಃ ನಿಮ್ಮ ದಾರಿನೇ ಕಾಯ್ತಾ ಇರ್ಬೇಕು' ಅಂತಾ ತಮಾಷೆ ಮಾಡಿದ್ರು.


'ಸರಿ ಬಿಡಿ. ನಾನು ಪಳದೆ ತಂದಿದೀನಿ. ಅದನ್ನೇ ಊಟ ಮಾಡಿಸ್ತೀನಿ' ಎಂದು ಅಮ್ಮನ್ನ ಎದ್ದೇಳ್ಸೊಕೆ ಮುಂದಾದೆ.


'ಅಮ್ಮ.... ಅಮ್ಮ... ಅಮ್ಮ....' ಊಹ್ಮ್ ಅಮ್ಮ ಯಾಕೋ ಮಾತಾಡ್ತಾ ಇಲ್ಲ. ಗಾಭರಿಯಾಗಿ ಅತ್ತಿಗೆ ಕಡೆ ತಿರುಗಿ ನೋಡಿ, 'ಯಾಕ್ ಅತ್ತಿಗೆ ಮಮ್ಮಿ ಮಾತಾಡ್ತಾ ಇಲ್ಲ?' ಅಂತಾ ಕೇಳಿದೆ.


'ಇವಾಗ ಉಮೇಶಣ್ಣನ ಜೊತೆ ಮಾತಾಡ್ತಾ ಇದ್ರು. ನಿದ್ದೆ ಹತ್ತಿರಬೇಕು' ಅಂದ್ರು.


ಅವರ ಮಾತು ನಂಗೆ ಯಾಕೋ ಸಮಾಧಾನ ನೀಡಲಿಲ್ಲ. 'ಅಮ್ಮ.... ಅಮ್ಮ.... ಅಮ್ಮ.... ಎದ್ದೇಳು. ಸ್ವಲ್ಪ ಅನ್ನ ಪಳದೆ ಊಟ ಮಾಡಿಸ್ತೀನಿ ಅಮ್ಮ.. ಅಂತಾ ಮತ್ತೆ ಮಾತಾಡಿಸಿದೆ. ಈಗ್ಲೂ ಅಮ್ಮ ಎಚ್ಚರ ಆಗ್ತಿಲ್ಲ.


'ನಿದ್ದೆ ಮಾಡ್ತಾ ಇರ್ಬೇಕು ಅವರು. ಆಮೇಲೆ ಎದ್ದ ಮೇಲೆ ನೀನೇ ಊಟ ಮಾಡ್ಸುವಂತೆ ಬಿಡು. ರಾತ್ರಿ ಪೂರಾ ನಿದ್ದೆ ಮಾಡಿಲ್ಲ. ಇವಾಗ ನಿದ್ದೆ ಹತ್ತಿದೆ' ಅಂದ್ರು ಅತ್ತಿಗೆ.


'ಇಲ್ಲ ಅತ್ತಿಗೆ ಮಮ್ಮಿ ಯಾವಾಗ್ಲೂ ಇಷ್ಟೊಂದು ಡೀಪ್ ಸ್ಲೀಪ್ ಮಾಡಲ್ಲ. ಸಣ್ಣ ಶಬ್ಧ ಆದ್ರೂ ಅವ್ರಿಗೆ ತಕ್ಷಣ ಎಚ್ಚರ ಆಗುತ್ತೆ. ನಾನ್ ಪಕ್ಕದಲ್ಲಿ ಮಲಗಿದ್ದಾಗ ಮಗ್ಗಲು ಬದಲಾಯಿಸಿದ್ರೆ ಸಾಕು ಅವ್ರು ಎಚ್ಚರ ಆಗ್ತಾರೆ ಅತ್ತಿಗೆ. ನನ್ನಮ್ಮನ ಬಗ್ಗೆ ನಂಗೆ ಗೊತ್ತಿಲ್ವ, ಮಮ್ಮಿ ಯಾಕೆ ನಾನೆಷ್ಟು ಮಾತಾಡ್ಸಿದ್ರು ಮಾತಾಡ್ತಾ ಇಲ್ಲ? ಮಮ್ಮಿಗೆ ಏನಾಗಿದೆ ನಿಜ ಹೇಳಿ ಅತ್ತಿಗೆ' ಅಂತಾ ಅವರನ್ನು ಪ್ರಶ್ನಿಸಿದೆ. ಪಾಪ ಅವರಿಗೂ ಈಗ ಗಾಬರಿ ಶುರು ಆಯ್ತು.


'ನಿಜ್ವಾಗ್ಲೂ ನಂಗೂ ಏನೂ ಗೊತ್ತಾಗ್ತಾ ಇಲ್ಲ ಕಣೆ. ಇಷ್ಟು ಹೊತ್ತು ಮಾತಾಡಿದಾರೆ. ಆದ್ರೆ ಮಾತು ಸ್ಪಷ್ಟ ಇರ್ಲಿಲ್ಲ. ಸ್ವಲ್ಪ ತೊದಲ್ತಾ ಇದ್ರು. ಬೆಳಗ್ಗೆ ಇಂದ ಮಾತಾಡೋಕೆ ಕಷ್ಟ ಆಗ್ತಿದೆ. ಆಗ್ತಿಲ್ಲ ಅಂದಿದ್ರು. ನಾಲಗೆ ದಪ್ಪ ಅನ್ನಿಸ್ತಾ ಇದೆ ಅಂದ್ರು. ಡ್ಯೂಟಿ ಡಾಕ್ಟರ್ಗೆ ಇನ್ಫಾರ್ಮ ಮಾಡಿದ್ದೆ. ಅವ್ರು ಸೀನಿಯರ್ ಡಾಕ್ಟರ್ ಬರ್ಲಿ ನೋಡೋಣ ಅಂದಿದಾರೆ' ಅಂದ್ರು ಅತ್ತಿಗೆ.


ಅತ್ತಿಗೆ ಮಾತು ಕೇಳುತ್ತಿದ್ದಂತೆ ನಂಗೆ ದುಃಖ ಒತ್ತರಿಸಿ ಬಂದಿತು. 'ಅಮ್ಮ.... ಪ್ಲೀಸ್ ಎದ್ದೇಳಮ್ಮ. ನಿನ್ನ ಮಗಳು ಬಂದಿದೀನಿ. ನನ್ನ ಜೊತೆ ಯಾಕ್ ಮಾತಾಡ್ತಾ ಇಲ್ಲ ನೀನು? ಪ್ಲೀಸ್ ಮಾ...' ಎಂದು ಅಮ್ಮನ್ನ ಅಲುಗಾಡಿಸಿದೆ.


ಅಮ್ಮ ನಿಧಾನಕ್ಕೆ ಕಣ್ಣು ತೆರೆದರು. ಅದನ್ನ ನೋಡಿ ನಮಗಿಬ್ಬರಿಗೂ ಖುಷಿ ಆಯ್ತು. ನಾನು ತಕ್ಷಣ ಕಣ್ಣೊರೆಸಿಕೊಂಡು ಅಮ್ಮ... ಅಮ್ಮ... ಅಂದೆ. ಆದ್ರೆ ಯಾವುದೇ ಪ್ರತಿಕ್ರಿಯೆ ಇಲ್ಲ. ಕೂಡ್ಲೆ ಮತ್ತೆ ಕಣ್ಣು ಮುಚ್ಚಿದ್ರು.


ಅಲ್ಲೇ ಇದ್ದ ಅತ್ತಿಗೆ, 'ಅಶು ಅತ್ತೆಗೆ ಸ್ವಲ್ಪ ನೀರು ಕುಡಿಸು' ಅಂತಾ ಗ್ಲಾಸ್ ಅಲ್ಲಿ ಸ್ವಲ್ಪ ನೀರು ಕೊಟ್ರು. ಅಳ್ತಾನೆ ಅವರಿಗೆ ಸ್ವಲ್ಪ ಸ್ವಲ್ಪ ನೀರು ಕುಡಿಸ್ತಾ ಇದ್ರೆ ನೀರು ಸ್ವಲ್ಪ ಮಾತ್ರ ಹೊಟ್ಟೆ ಸೇರಿ ಮಿಕ್ಕಿದ್ದು ಬಾಯಿಯಿಂದ ಹೊರಬಿದ್ದಿತ್ತು.


ನನ್ನ ಅಳು ಇನ್ನೂ ಹೆಚ್ಚಾಯ್ತು. ಅತ್ತಿಗೆ ಅದೆಷ್ಟು ಸಮಾಧಾನ ಪಡಿಸಲು ಪ್ರಯತ್ನಿಸಿದರು, ಸಾಧ್ಯವಾಗಲಿಲ್ಲ. ಅಷ್ಟರಲ್ಲಿ ನನ್ನ ಅತ್ತೆ ಅತ್ತಿಗೆ ಮೊಬೈಲ್ಗೆ ಫೋನ್ ಮಾಡಿದ್ರು. ಅತ್ತಿಗೆ ಮಾತಾಡಿ ನನ್ನ ಕಡೆ ಮೊಬೈಲ್ ಕೊಟ್ರು. ಆದ್ರೆ ನನ್ನಿಂದ ಒಂದೇ ಒಂದು ಮಾತು ಮಾತಾಡೋಕು ಸಾಧ್ಯ ಆಗದೆ ಮೊಬೈಲ್ ಕಿವಿ ಮೇಲೆ ಹಿಡಿದು ಕೇವಲ ಬಿಕ್ಕಿ ಬಿಕ್ಕಿ ಅಳುತ್ತಿದ್ದೆ. ನನ್ನ ಅಳು ನೋಡಿ ಅತ್ತಿಗೆ ಫೋನ್ ಇಸ್ಕೊಂಡು 'ಅಶ್ವಿನಿ ತುಂಬಾ ಅಳ್ತಿದಾಳೆ' ಅಂತಾ ಹೇಳಿ ಫೋನ್ ಇಟ್ಟು, ಅಣ್ಣನಿಗೆ ಕರೆ ಮಾಡಿ ಅಲ್ಲಿಯ ಪರಿಸ್ಥಿತಿ ವಿವರಿಸಿದರು.


🔅


ತಕ್ಷಣ ಅಣ್ಣ ಓಡಿ ಒಳಗೆ ಬಂದ. ಬಂದವ ಡಾಕ್ಟರ್ ಹತ್ರ ಹೋಗಿ ಪರಿಸ್ಥಿತಿ ಹೇಳಿದಾಗ, ಕೂಡ್ಲೆ ಮಮ್ಮಿನ ಡಯಾಲಿಸಿಸ್ ಕೋಣೆಗೆ ಶಿಫ್ಟ್ ಮಾಡಿ ಡಯಾಲಿಸಿಸ್ ಶುರು ಮಾಡಿದ್ರು. ರೆಗ್ಯುಲರ್ ಆಗಿ 2 ಗಂಟೆಗಳ ಕಾಲ ಮಾಡುತ್ತಿದ್ದ ಡಯಾಲಿಸಿಸ್ ಇವತ್ತು ಹೆಚ್ಚು ಕಮ್ಮಿ 5-6 ತಾಸುಗಳ ಕಾಲ ನಡೆಯಿತು. ಆದ್ರೆ ನನ್ನಮ್ಮನಲ್ಲಿ ಯಾವುದೇ ಚಲನೆ ಇರಲಿಲ್ಲ.


ಜೀವಂತ ಶವದಂತೆ ಬೆಡ್ ಮೇಲೆ ಮಲಗಿದ್ದ ತಾಯಿಯ ಮುಖವನ್ನೇ ದಿಟ್ಟಿಸುತ್ತಾ ಕುಳಿತಿದ್ದ ನನ್ನ ಕಣ್ಣೀರು ಸ್ವಲ್ಪವೂ ಕಡಿಮೆ ಆಗಿರಲಿಲ್ಲ. ಪ್ರತಿ ಕ್ಷಣ ಅಮ್ಮನ ಕೈ ನನ್ನ ಕೈಯ್ಯಲ್ಲಿ ಹಿಡಿದು ಅವರನ್ನು ಮಾತನಾಡಿಸಲು ಪ್ರಯತ್ನಿಸುತ್ತಲೇ ಇದ್ದೆ.


ದೂರದಲ್ಲಿ ವಾರ್ಡ್ ಹೊರಗೆ ಅಸಹಾಯಕತೆಯಿಂದ ಕುಳಿತಿದ್ದ ಪಪ್ಪ , ಅಣ್ಣ, ಹಾಗೂ ಅತ್ತಿಗೆಯ ಮುಖವನ್ನು ನೋಡುತ್ತಿದ್ದವಳಿಗೆ ದುಃಖ ಹೆಚ್ಚುತ್ತಲೇ ಇತ್ತು.


ಸಂಜೆ 6 ಗಂಟೆ ಹೊತ್ತಿಗೆ ಡಯಾಲಿಸಿಸ್ ಮುಗಿದು ಮಮ್ಮಿನ ಎಮರ್ಜೆನ್ಸಿ ವಾರ್ಡ್ಗೆ ಶಿಫ್ಟ್ ಮಾಡಿದ್ರು.


ವಾರ್ಡ್ ಒಳಗಡೆ ಯಾರನ್ನೂ ಬಿಡದೇ ಡಾಕ್ಟರ್ ಟ್ರೀಟ್ಮೆಂಟ್ ಶುರು ಮಾಡಿದ್ರು. ಹೊರಗಡೆ ಕಾಯ್ತಾ ಇದ್ದ ನಮ್ಮೆಲ್ಲರ ದುಃಖದ ಕಟ್ಟೆ ಒಡೆದಿತ್ತು. ಎಲ್ಲರೂ ಸಮಾನ ದುಃಖಿಗಳೇ ನಾವು. ಹೆತ್ತ ತಾಯಷ್ಟೇ ಕಾಳಜಿ ಮಾಡುತ್ತಿದ್ದ ಅತ್ತೆಯ ಸ್ಥಿತಿ ಕಂಡು ಅತ್ತಿಗೆ ಕೂಡಾ ಕಣ್ಣೀರಿಡುತ್ತ ನಿಂತಿದ್ದಳು.


🔅


ಡಾಕ್ಟರ್ ಅಸಿಸ್ಟೆಂಟ್ ಒಬ್ರು ಹೊರಗೆ ಬಂದವರು 'ಶ್ರೀದೇವಿ ಪೇಷಂಟ್ ಕಡೆಯವರು ಒಬ್ರು ಒಳಗೆ ಬನ್ನಿ ಡಾಕ್ಟರ್ ಕರೀತಾ ಇದಾರೆ' ಅಂತಾ ಬಂದು ಕರೆದರು. ಆದ್ರೆ ಒಳಗೆ ಹೋಗೋ ಧೈರ್ಯ ಮಾತ್ರ ಯಾರಲ್ಲಿಯೂ ಇರಲಿಲ್ಲ. ಡಾಕ್ಟರ್ ಏನ್ ಹೇಳ್ತಾರೋ ಅನ್ನೋ ಆತಂಕ ಎಲ್ಲರಲ್ಲಿಯು ಮನೆ ಮಾಡಿತ್ತು. ಯಾವುದೇ ಕಹಿ ಸುದ್ದಿ ಕೇಳೋ ಶಕ್ತಿ ನಮಗೆ ಯಾರಿಗೂ ಇರಲಿಲ್ಲ. ಕೊನೆಗೆ ಅಣ್ಣ ಮತ್ತು ಪಪ್ಪ ಇಬ್ಬರು ಒಳಗೆ ಹೋದರು.


ಇತ್ತ ಹೊರಗೆ ನಿಂತಿದ್ದ ಅತ್ತಿಗೆ ಹಾಗೂ ನಾನು ಪರಸ್ಪರ ಒಬ್ಬರ ಮುಖ ಒಬ್ಬರು ನೋಡುತ್ತಾ ಅಳುತ್ತಲೇ ನಿಂತಿದ್ದೆವು. ನಮ್ಮಿಬ್ಬರ ಮೊಬೈಲ್ ಫೋನಿಗೆ ಸಂಬಂಧಿಕರ ಕರೆಗಳು ಅದೆಷ್ಟು ಬಂದಿದ್ದವೋ, ನಮಗಿಬ್ಬರಿಗೂ ಅದರ ಪರಿವಿಲ್ಲ. ಸೈಲೆಂಟ್ ಆಗಿದ್ದ ಮೊಬೈಲ್ಗಳು ನಮ್ಮ ಬ್ಯಾಗ್ ಅಲ್ಲಿ ಅನಾಥವಾಗಿ ಬಿದ್ದಿದ್ದವು.


ಸ್ವಲ್ಪ ಹೊತ್ತಿನ ನಂತರ ಹೊರಗೆ ಬಂದ ಅಣ್ಣನ ಕಣ್ಣುಗಳು ಕೆಂಪಾಗಿದ್ದವು. ಅವನು ಅತ್ತಿದ್ದಾನೆ ಅನ್ನೋದಕ್ಕೆ ಅವನ ಕಣ್ಣುಗಳೇ ಸಾಕ್ಷಿ ಆಗಿದ್ದವು.


ನಿಧಾನಕ್ಕೆ ಭಾರವಾದ ಹೆಜ್ಜೆ ಹಾಕುತ್ತ ಬಂದವನು ನನ್ನ ತಲೆ ಸವರಿ 'ಸ್ವಲ್ಪ ಧೈರ್ಯ ತಂದ್ಕೋ' ಅಂದ. ನನ್ನ ಹೃದಯ ಅದಾಗಲೇ ಭಯಕ್ಕೆ ವೇಗವಾಗಿ ಹೊಡ್ಕೊಳ್ಳೋಕೆ ಶುರು ಆಯ್ತು. ನನ್ನ ಪರಿಸ್ಥಿತಿ ಕಂಡು ಅಣ್ಣ ಧೈರ್ಯ ಮಾಡಿ ವಿಷಯ ಶುರು ಮಾಡಿದ.


'ಮಮ್ಮಿ ಬ್ರೈನ್ ಡೆಡ್ ಆಗಿದೆ, ಆಕ್ಸಿಜೆನ್ ಸಪ್ಲೈ ಆಗ್ತಾ ಇಲ್ಲ. ಮಮ್ಮಿ ಕೋಮಾ ಹೋಗಿದಾರೆ' ಎಂದು ಅವನು ಎನ್ನುತ್ತಿದ್ದಂತೆ, ನಾನು ಅಲ್ಲೇ ಕುಸಿದು ಕುಳಿತಿದ್ದೆ.


ಜೋರಾಗಿ ಅಳೋಕೆ ಶುರುವಿಟ್ಟೆ. ಬೆಳಗ್ಗೆ ಇಂದ ಹಿಡಿದಿಟ್ಟಿದ್ದ ದುಃಖದ ಕಟ್ಟೆ ಒಡೆದಿತ್ತು. ಅಲ್ಲೇ ಇದ್ದ ಸೆಕ್ಯೂರಿಟಿ ಹಾಗೂ ಆಸ್ಪತ್ರೆ ಸಿಬ್ಬಂದಿಗಳು ಬೇರೆ ಪೇಷಂಟ್ಗೆ ತೊಂದ್ರೆ ಆಗುತ್ತೆ ಅಂತಾ ನಮ್ಮಿಬ್ಬರನ್ನು ಹೊರ ಕಳಿಸಿದರು.


ಪಪ್ಪ ನಮ್ಮ ದುಃಖ ಕಂಡು, ತಮ್ಮ ಬಾಳ ಸಂಗಾತಿಯ ಪರಿಸ್ಥಿತಿ ಕಂಡು ಮಾನಸಿಕವಾಗಿ ಬಳಲಿ ಹೋಗಿದ್ದರು. ತಮ್ಮ ಕಣ್ಣೀರು ಕಂಡರೆ ಮಕ್ಕಳು ಇನ್ನೂ ಅಳುತ್ತಾರೆ ಎಂದು ಕಷ್ಟ ಪಟ್ಟು ನೋವು ನುಂಗುವ ಪ್ರಯತ್ನ ಮಾಡುತ್ತಿದ್ದರು. ಯಾರೂ ಇಲ್ಲದ ಕಡೆ ಹೋಗಿ ಅತ್ತು ಹಗುರಾಗುತ್ತಿದ್ದರು. ಆದರೆ ಅದೆಷ್ಟೇ ಕಣ್ಣೀರು ಸುರಿಸಿದರು ಆರದ ಬೆಂಕಿ ಅವರ ಎದೆಯಲ್ಲಿ ಹತ್ತಿ ಉರಿಯುತ್ತಿತ್ತು.


ಒಳಗೆ ಮಮ್ಮಿಗೆ ವೆಂಟಿಲೇಟರ್ ಕನೆಕ್ಟ್ ಮಾಡಿ, ಅದರ ಮೂಲಕ ಆಕ್ಸಿಜನ್ ಸಪ್ಲೈ ಆಗೋ ಹಾಗೆ ಮಾಡಿದ್ರು. ಸ್ವಲ್ಪ ಹೊತ್ತಿಗೆ ಮಮ್ಮಿಗೆ ಪ್ರಜ್ಞೆ ಮರುಕಳಿಸಿತು.


ಹೊರಗಡೆ ಬಂದ ಅಣ್ಣ , ಅಳುತ್ತಾ ಕುಳಿತಿದ್ದ ನನ್ನ ಹಾಗೂ ಅತ್ತಿಗೆ ಹುಡುಕಿ ನಮ್ಮ ಕಡೆ ಬಂದು 'ಮಮ್ಮಿಗೆ ಪ್ರಜ್ಞೆ ಬಂದಿದೆ. ನೀವಿಬ್ರು ಅಳಲ್ಲ, ಅತ್ತು ಗಲಾಟೆ ಮಾಡಲ್ಲ ಅಂದ್ರೆ, ಇಬ್ಬರನ್ನೂ ಒಳಗೆ ಬಿಡೋಕೆ ಡಾಕ್ಟರ್ ಹತ್ರ ಪರ್ಮಿಷನ್ ಕೇಳ್ತೀನಿ. ನೀವು ಅಲ್ಲಿ ಅತ್ತು ಕರೆದು ಮಾಡಿದ್ರೆ ಡಾಕ್ಟರ್ ಒಳಗೆ ಬಿಡಲ್ಲ' ಎಂದು ತಾಕೀತು ಮಾಡಿದ.


ಅಣ್ಣನ ಮಾತು ಕೇಳಿದವಳೇ, ಕಣ್ಣೀರು ಒರೆಸಿಕೊಂಡು, ಬೀಳುವ ಯೋಚನೆಯು ಇಲ್ಲದಂತೆ ಎಮರ್ಜೆನ್ಸಿ ವಾರ್ಡ್ ಕಡೆ ಒಂದೇ ಉಸಿರಿಗೆ ಓಡಿ ಹೋದೆನು.


ಒಳಗೆ ಮಮ್ಮಿಗೆ ಪ್ರಜ್ಞೆ ಬಂದಿತ್ತು. ಅಮ್ಮನ ಮುಖ ನೋಡಿದವಳೇ ಖುಷಿ ಇಂದ ಅಮ್ಮನ ಕೈ ಹಿಡಿದು ಅಮ್ಮ.... ಎಂದೆ. ಜಾತ್ರೆಯಲ್ಲಿ ಕಳೆದುಹೋದ ಎಳೆ ಕಂದ, ತನ್ನಮ್ಮನಿಗಾಗಿ ಹುಡುಕಿ ಹುಡುಕಿ, ಅತ್ತು ಸುಸ್ತಾದಾಗ, ತನ್ನಮ್ಮ ಸಿಕ್ಕಂತೆ ಆಗಿತ್ತು ನನ್ನ ಪರಿಸ್ಥಿತಿ.


ಅಷ್ಟರಲ್ಲಿ ಒಳಗೆ ಬಂದ ಅತ್ತಿಗೆ ಹಾಗೂ ಅಣ್ಣ ಕೂಡಾ ಮಮ್ಮಿ ಬಳಿ ಬಂದು ನಿಂತರು.


ಬಾಯಲ್ಲಿ ವೆಂಟಿಲೇಟರ್ ಹಾಕಿದ್ದ ಕಾರಣ, ಮಮ್ಮಿಗೆ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ. ಸನ್ನೆ ಮಾಡಿ ನನ್ನನ್ನು ಅವರ ಬಳಿ ಕರೆದು ಏನನ್ನೋ ಸನ್ನೆ ಮಾಡಿದರು.


ಅವರ ಸನ್ನೆ ಅರ್ಥ ಮಾಡಿಕೊಂಡವಳು 'ಹುಡುಗ್ರ?' ಎಂದು ಪ್ರಶ್ನಿಸಿದೆ.


ತಕ್ಷಣ ಅವರು 'ಹ್ಮ್' ಎಂದು ಕತ್ತು ಆಡಿಸಿದರು.


ಅವರು ಕೇಳಿದ್ದು ನನ್ನ ಮಗ ಹಾಗೂ ಅಣ್ಣನ ಮಗನನ್ನು. ಅಂದ್ರೆ ಅವರ ಮೊಮ್ಮಕ್ಕಳನ್ನು. ಮೊಮ್ಮಕ್ಕಳು ಅಂದ್ರೆ ಮಮ್ಮಿಗೆ ಎಲ್ಲಿಲ್ಲದ ಪ್ರೀತಿ.


'ನಾಳೆ ಬರ್ತಾರೆ ಮಮ್ಮಿ. ಇವತ್ತು ತಡ ಆಗಿದೆ. ಆಗ್ಲೇ ರಾತ್ರಿ ಆಗಿದೆ' ಎಂದಾಗ ಸರಿ ಎಂದು ಕತ್ತು ಆಡಿಸಿ ಒಪ್ಪಿಗೆ ಸೂಚಿಸಿದರು.


ಹೊಟ್ಟೆ ಹಸಿವು ಎಂದು ತಮ್ಮ ಹೊಟ್ಟೆ ಮುಟ್ಟಿ ಸನ್ನೆ ಮಾಡಿದಾಗ ಅಲ್ಲಿದ್ದವರ ಕರುಳು ಕಿವುಚಿದಂತೆ ಆಗಿತ್ತು. ಮೂರು ಹೊತ್ತು ರುಚಿ ರುಚಿ ಅಡಿಗೆ ಮಾಡಿ ಮನೆ ಮಂದಿಯ ಹೊಟ್ಟೆ ತುಂಬಿಸಿ ತೃಪ್ತಿ ಪಡುತ್ತಿದ್ದ ಜೀವ ಇಷ್ಟು ವರ್ಷದಲ್ಲಿ ಎಂದೂ ತನ್ನ ಹಸಿವಿನ ಬಗ್ಗೆ ಹೇಳಿದ್ದೆ ಇಲ್ಲ. ಮೊದಲ ಬಾರಿ ಆ ಜೀವ ಹಸಿವು ಎಂದಾಗ ನಮ್ಮೆಲ್ಲರ ಕರುಳಿಗೆ ಕಿಚ್ಚು ಹತ್ತಿತ್ತು.


ಅಸಿಸ್ಟೆಂಟ್ನ ಕರೆದು, ಅವರ ಹಸಿವಿನ ಬಗ್ಗೆ ಹೇಳಿದಾಗ ಅವರು ಮೂಗಿನಲ್ಲಿ ಪೈಪ್ ಹಾಕ್ತೀವಿ, ಗಂಜಿ ಕುಡಿಸಿ ಎಂದು ಹೇಳಿದರು.


ಆದರೆ ಮಮ್ಮಿ ಅದಕ್ಕೆ ಒಪ್ಪದೇ, ನನ್ನ ಕೈ ಹಿಡಿದು, ನೀನೇ ಊಟ ಮಾಡ್ಸು ಎಂದರು. ಅವರ ಮಾತಿನ ಅರ್ಥ, ನೀನು ತಂದಿದ್ದ ಊಟ ಮಾಡ್ಸು. ಗಂಜಿ ಬೇಡ ಅನ್ನೋದಾಗಿತ್ತು. ಬಾಯಲ್ಲಿ ವೆಂಟಿಲೇಟರ್ ಇದ್ದ ಕಾರಣ ಅವರಿಗೆ ಊಟ ಮಾಡಿಸುವುದು ಅಸಾಧ್ಯ ಆಗಿತ್ತು.


'ನೀನು ಹುಷಾರಾಗು ಮಾ. ಮತ್ತೊಮ್ಮೆ ಪಳದೆ ಅನ್ನ ಮಾಡಿ ತರ್ತೀನಿ. ನಾನೇ ನನ್ನ ಕೈಯ್ಯಾರೆ ಊಟ ಮಾಡಿಸ್ತೀನಿ. ಈಗ ಗಂಜಿ ತಿನ್ನು' ಎಂದು ಚಿಕ್ಕ ಮಕ್ಕಳಿಗೆ ಹೇಳುವಂತೆ ಹೇಳಿದೆ.


ಪೈಪ್ ಹಾಕಿಸಿಕೊಳ್ಳೋಕೆ ಒಪ್ಪದವರು, ಕೈಯ್ಯಿಂದ ಏನೇನೋ ಸನ್ನೆ ಮಾಡ್ತಾ ಇದ್ರು. ಆದ್ರೆ ಅವರ ಸನ್ನೆ ಅಲ್ಲಿದ್ದ ನಮಗೆ ಯಾರಿಗೂ ಅರ್ಥ ಆಗದೆ ಬೇರೆ ಬೇರೆ ಏನೇನೋ ಕೇಳುತ್ತಲಿದ್ವಿ. ಕೊನೆಗೆ ಕೋಪ ಬಂದ ಮಮ್ಮಿ ನನ್ನ ಕೈ ಹಿಡಿದು ಅಂಗೈ ಮೇಲೆ ಬರೆದು ತೋರ್ಸಿದ್ರು. ಆಗ್ಲೂ ನಂಗೆ ಅರ್ಥ ಆಗದೆ ಹೋದಾಗ, ಬರೆದು ತೋರಿಸ್ತೀನಿ ಪೆನ್ ಕೊಡು ಅಂದ್ರು.


ತಕ್ಷಣ ನನ್ನ ಬ್ಯಾಗ್ ಅಲ್ಲಿ ಇದ್ದ ಡೈರಿ ಹಾಗೂ ಪೆನ್ ತೆಗೆದು ಅಮ್ಮನ ಕೈಗೆ ಪೆನ್ ಕೊಟ್ಟು, ನಾನು ಅವರ ಕೈ bal8 ಡೈರಿ ಹಿಡಿದೆ. 'ವೆಂಟಿಲೇಟರ್ ತೆಗೆದು ಗಂಜಿ ಕುಡಿಸು ಅಂತಾ ಬರೆದು ತೋರ್ಸಿದ್ರು'. ಅವರ ಹಸಿವಿನ ತಾಪ ನಮ್ಮ ಹೊಟ್ಟೆಗೆ ಬೆಂಕಿ ಸುರಿದಿತ್ತು. ಆದ್ರೆ ಮೂಗಿಗೆ ಪೈಪ್ ಹಾಕಿಸ್ಕೊ ಅಂದ್ರೆ ಸುತಾರಾಮ್ ಒಪ್ತಿಲ್ಲ. 


ಅಷ್ಟರಲ್ಲಿ ನನ್ನ ಮಗ ಆರುಷ್ ತನ್ನ ಅಜ್ಜಿ ಬಗ್ಗೆ ಕೇಳೋಕೆ ಫೋನ್ ಮಾಡಿದ. 'ಅಜ್ಜಿ ಗಂಜಿ ಕುಡಿಯೋಕೆ ಪೈಪ್ ಹಾಕಿಸ್ಕೊ ಅಂದ್ರೆ ಒಪ್ತಾ ಇಲ್ಲ' ಅಂತಾ ಅವನಿಗೆ ಅವನೇನು ಮಾಡ್ಬೇಕು ಅನ್ನೋ ಹಿಂಟ್ ಕೊಟ್ಟೆ. ಇಂತದ್ದರೆಲ್ಲೆಲ್ಲ ನನ್ನ ಮಗ ಬುದ್ದಿವಂತ. ತಕ್ಷಣ ಅವನು, ಸ್ಪೀಕರ್ ಆನ್ ಮಾಡಿ ಅಜ್ಜಿ ಕಿವಿ ಹತ್ರ ಫೋನ್ ಹಿಡಿಯೋಕೆ ಹೇಳಿದ.


ನಾನು ಅವನು ಹೇಳಿದಂತೆ ಮಾಡಿದೆ. 'ಅಜ್ಜಿ ನೀನು ಡಾಕ್ಟರ್ ಹೇಳಿದಂಗೆ ಕೇಳಿ ಪೈಪ್ ಹಾಕಿಸ್ಕೊಂಡು ಗಂಜಿ ಕುಡುದ್ರೆ ನಾನು ನಿನ್ನ ನೋಡೋಕೆ ನಾಳೆ ಹಾಸ್ಪಿಟಲ್ ಬರ್ತೀನಿ. ಇಲ್ಲ ಅಂದ್ರೆ ನಾನು ಬರಲ್ಲ' ಎಂದನು.


ಪ್ರೀತಿಯ ಮೊಮ್ಮಗನ ದನಿ ಕೇಳಿ, ಮಮ್ಮಿ ಕಣ್ಣಂಚಲ್ಲಿ ನೀರು ಜಿನುಗಿತ್ತು.


ಫೋನ್ ಇಟ್ಟ ಮೇಲೆ ಮತ್ತೆ ಸನ್ನೆ ಮಾಡಿ ಪೆನ್ ಇಸ್ಕೊಂಡು ಮಲ್ಕೊಂಡೆ, ಡೈರಿಲಿ 'ಪೈಪ್ ಹಾಕ್ಸಿ' ಅಂತಾ ಬರೆದು ತೋರ್ಸಿದ್ರು.


ಅಟೆಂಡರ್ ಬಂದು ಸಾಕಷ್ಟು ಪ್ರಯತ್ನ ಮಾಡಿದರು ಪೈಪ್ ಅವರ ಅನ್ನನಾಳ ತಲುಪಲೇ ಇಲ್ಲ. 4-5 ಬಾರಿ ಪ್ರಯತ್ನ ಮಾಡಿ ಸೋತರು. ಪೈಪ್ ಹಾಕಿ ತೆಗೆದು ಮಾಡಿದ್ದರ ಪರಿಣಾಮ, ಅಮ್ಮನ ಮೂಗಲ್ಲಿ ಸಣ್ಣದಾಗಿ ರಕ್ತ ಜಿನುಗಲು ಶುರುವಿಟ್ಟಿತು. ಆಗ ಅವರು ಬೇಡ ಅಂತಾ ಹೇಳಿ ಸುಮ್ಮನಾದ್ರು.


ಅಮ್ಮ ನೋವಿನಿಂದ ಮುಖ ಕಿವುಚಿದರು. ಆದರೂ ಮೊಮ್ಮಗನ ಮಾತಿಗಾಗಿ ಎಷ್ಟೇ ಕಷ್ಟ ಆದ್ರೂ ನೋವು ನುಂಗಿಕೊಂಡು ತಮ್ಮ ಪ್ರಯತ್ನ ಮಾಡುತ್ತಲೇ ಇದ್ದರು. ಆದ್ರೆ ಪೈಪ್ ಹಾಕೋಕೆ ಆಗ್ಲೆ ಇಲ್ಲ.


🔅


ಆಮೇಲೆ ಅಮ್ಮನ್ನ ICU ಗೆ ಶಿಫ್ಟ್ ಮಾಡಿದ್ರು. ಆದ್ರೆ ಯಾರನ್ನೂ ಒಳಗೆ ಬಿಡ್ಲಿಲ್ಲ. ನಾವೆಲ್ಲಾ ಹೊರಗೆ ಕೂತೆ ಕಾಯ್ತಾ ಇದ್ವಿ. ಆದ್ರೆ ನಂಗೆ ಅಮ್ಮನ್ನ ಬಿಟ್ಟು ಹೊರಗಡೆ ಇರೋದು ತುಂಬಾನೇ ಕಷ್ಟ ಆಯ್ತು. ಒಂದೆರೆಡು ಬಾರಿ ಸಿಸ್ಟರ್ ಕಣ್ಣು ತಪ್ಪಿಸಿ ಹೋಗಿ, ಅಮ್ಮನ್ನ ನೋಡಿ ಬಂದಿದ್ದು ಆಯ್ತು. ಅಮ್ಮ ನಿದ್ದೆ ಮಾಡ್ತಾ ಇದ್ರು. ತೊಂದ್ರೆ ಕೊಡೋದು ಬೇಡ ಅಂತಾ ಸುಮ್ನೆ ಬಂದೆ. ಆದ್ರೂ ಅಮ್ಮನ್ನ ಆ ಪರಿಸ್ಥಿತೀಲಿ ನೋಡೋಕೆ ಮನಸ್ಸಿಗೆ ತುಂಬಾನೇ ಹಿಂಸೆ ಆಗ್ತಾ ಇತ್ತು.


ನಂಗೆ ನೆನಪಿರೋ ಹಾಗೆ, ಅಮ್ಮ ಒಂದೇ ಒಂದು ದಿನಕ್ಕೂ ನೆಗಡಿ, ಜ್ವರ, ಅಂತೆಲ್ಲಾ ಮಲಗಿದ್ದೆ ಗೊತ್ತಿಲ್ಲ. ಅವ್ರು ತುಂಬಾ ಸ್ಟ್ರಾಂಗ್. ಆದ್ರೆ ಅಮ್ಮಂಗೆ ಚಿಕ್ಕ ವಯಸ್ಸಲ್ಲೇ ವಂಶಪಾರಂಪರ್ಯವಾಗಿ ಬಂದ ಸಕ್ಕರೆ ಖಾಯಿಲೆ ಅವರನ್ನು ಒಳಗಿನಿಂದಲೇ ಹಂತಹಂತವಾಗಿ ಕೊಲ್ಲುತ್ತಾ ಬಂದಿದ್ದು ನಮಗೆ ತಿಳಿಯಲೇ ಇಲ್ಲ.


ನನ್ನ ಮದುವೆಯ ನಂತರ ಅಮ್ಮ ಶುಗರ್ ಟ್ಯಾಬ್ಲೆಟ್ ತಗೋಳೋದೆ ಬಿಟ್ಟಿದ್ರು ಅನ್ನೋದು ನಮಗೆ ತಡವಾಗಿ ಗೊತ್ತಾಯ್ತು. ಆದ್ರೆ ಅದಾಗ್ಲೇ ಸಮಯ ಕೈಮೀರಿ ಹೋಗಿತ್ತು. ಸಕ್ಕರೆ ಖಾಯಿಲೆ ಮೊದಲು ನನ್ನಮ್ಮನ ಕಣ್ಣನ್ನೇ ಬಲಿ ತೆಗೆದುಕೊಂಡಿತ್ತು.


ನಾನು 3 ತಿಂಗಳ ಗರ್ಭಿಣಿ ಆಗಿದ್ದಾಗ ಇದ್ದಕ್ಕಿದ್ದಂತೆ ಅಮ್ಮನ ದೃಷ್ಟಿ ಹೋಯ್ತು. ಡಾಕ್ಟರ್ ಕಣ್ಣಿನ ನರಗಳು ವೀಕ್ ಆಗಿವೆ ಏನು ಮಾಡೋಕೆ ಆಗಲ್ಲ. ಆದ್ರೂ ನಮ್ಮ ಪ್ರಯತ್ನ ನಾವು ಮಾಡೋಣ ಅಂತಾ ಎರೆಡು ಕಣ್ಣುಗಳಿಗೆ ಎರೆಡೆರೆಡು ಬಾರಿ ಆಪರೇಷನ್ ಮಾಡಿದ್ರು. ಪರೀಕ್ಷೆಗೆ ಗುರಿಯಾದ ಅಮ್ಮನ ಕಣ್ಣು ಪೂರ್ಣ ಕಾಣದೇ ಹೋದರು ಆಸ್ಪಷ್ಟವಾಗಿ, ಮಸುಕು ಮಾಸುಕಾಗಿ ಕಾಣೋ ಅಷ್ಟು ರಿಪೇರಿ ಆಗಿತ್ತು.


ನನ್ನ ಮತ್ತು ಅಣ್ಣನ ಮದುವೆ ಮಾಡ್ಬೇಕು, ನಮ್ಮ ಮಕ್ಕಳನ್ನ ಆಡಿಸ್ಬೇಕು, ಮೊಮ್ಮಕ್ಕಳನ್ನ ಮುದ್ದಾಡ್ಬೇಕು ಅನ್ನೋ ಆಸೆ ಅಮ್ಮನಿಗೆ ತುಂಬಾ ಇತ್ತು. ಆದ್ರೆ ವಿಧಿ ನಮ್ಮ ಮಕ್ಕಳ ಮುಖ ನೋಡೋ ಭಾಗ್ಯವನ್ನೇ ಅಮ್ಮನಿಂದ ಕಿತ್ಕೊಂಡ. ಅವನಷ್ಟು ಕ್ರೂರಿ ಮತ್ತೊಬ್ಬನಿಲ್ಲ.


🔅


ಬೆಳಗ್ಗೆ 4ರ ಸುಮಾರಿಗೆ ಮತ್ತೊಮ್ಮೆ ಅಮ್ಮನ್ನ ನೋಡೋಕೆ ಅಂತಾ ಕದ್ದು ಮುಚ್ಚಿ ಹೋದೆ. ನನ್ನ ಅದೃಷ್ಟ ಈ ಸಾರಿ ಅಮ್ಮ ಎಚ್ಚರ ಇದ್ರು. ನನ್ನ ದನಿ ಕೇಳಿ ನನ್ನ ಕೈ ಹಿಡಿದು ವೆಂಟಿಲೇಟರ್ ತೆಗಿ ಅಂತಾ ಸನ್ನೆ ಮಾಡಿದ್ರು.


ಆಕ್ಚುಲಿ ನೆನ್ನೆ ವೆಂಟಿಲೇಟರ್ ಹಾಕಿದಾಗಲೇ ಅಮ್ಮ ಅದನ್ನ ತೆಗ್ಸು ಅಂತಾ ತುಂಬಾ ಹೇಳಿದ್ರು. ನಾನು ಬೆಳಗ್ಗೆ ತೆಗಿತಾರೆ. ಅದಿದ್ರೆ ನೀನು ಬೇಗ ಕ್ಯೂರ್ ಆಗ್ತೀಯಾ, ಆಗ ನಾಳೆ ಮೊಮ್ಮಕ್ಕಳ ಜೊತೆ ಮಾತಾಡಬಹುದು ಅಂತ ಸುಳ್ಳು ಹೇಳಿದ್ದೆ.


ಅದಕ್ಕೆ ಅಮ್ಮ ನನ್ನ ಹತ್ರ ಇವಾಗ ಟೈಮ್ ಎಷ್ಟು? ಬೆಳಗ್ಗೆ ಆಗಿಲ್ವಾ ಇನ್ನೂ? ವೆಂಟಿಲೇಟರ್ ತೆಗ್ಸು ಅಂತಾ ಸನ್ನೆ ಮಾಡ್ತಾ ಇದಾರೆ. ಡಾಕ್ಟರ್ ಅದನ್ನ ತೆಗೆದ್ರೆ ಅವ್ರಿಗೆ ಉಸಿರಾಡೋಕೆ ಆಗಲ್ಲ ಅಂತಾ ಹೇಳಿದಾರೆ. ಆದ್ರೆ ಅಮ್ಮ ಅದನ್ನ ತೆಗ್ಸು ಅಂತಿದಾರೆ. ನಂಗೆ ಏನ್ ಮಾಡೋದು ಅಂತಾ ತಲೆ ಕೆಟ್ಟು ಹೋಯ್ತು.


ಜೀವನದಲ್ಲಿ ಸುಳ್ಳು ಮಾತಾಡ್ಬೇಡ, ಯಾವಾಗ್ಲೂ ಸತ್ಯವನ್ನೇ ಮಾತಾಡಬೇಕು. ಸತ್ಯವೇ ನಮ್ಮ ತಾಯಿ ತಂದೆ, ಸತ್ಯವೇ ನಮ್ಮ ಬಂಧು ಬಳಗ, ಅಂತಾ ಚಿಕ್ಕ ವಯಸ್ಸಲ್ಲಿ ಪಾಠ ಮಾಡಿದ ಜೀವಕ್ಕೆ ಇಂದು ನಾನು ಸುಳ್ಳಿನ ಸರಮಾಲೆ ಪೋಣಿಸಿ ಹೇಳ್ತಾ ಇದೀನಿ. 😢


ಇನ್ನೂ ಇವಾಗ ರಾತ್ರಿ 2 ಗಂಟೆ ಅಮ್ಮ. ನೀನು ಮಲಗು. ಬೆಳಗ್ಗೆ ತೆಗಿಸ್ತೀನಿ ಅಂತಾ ಹೇಳಿದೆ. ಅಷ್ಟರಲ್ಲಿ ನನ್ನ ದನಿ ಕೇಳಿದ ವಾರ್ಡ್ ಬಾಯ್ ನಮ್ಮ ಬಳಿ ಬಂದು ನನ್ನನ್ನೇ ಕೆಕ್ಕರಿಸಿ ನೋಡೋಕೆ ಶುರು ಮಾಡಿದ.


ಹೊರಗೆ ಹೋಗಿ. ನಿಮ್ಮನ್ನ ಯಾರು ಒಳಗೆ ಬಿಟ್ಟಿದ್ದು ಅಂತಾ ಒಂದೇ ಸಮನೆ ಬಯ್ಯೋಕೆ ಶುರು ಮಾಡಿದ. ಆದ್ರೆ ನಂಗೆ ಅಮ್ಮನ್ನ ಬಿಟ್ಟು ಹೊರಗೆ ಬರೋಕೆ ಮನಸ್ಸಿಲ್ಲ. ಏನು ಮಾಡಲು ತೋಚದೆ, ಅವನ ಕಾಲಿಗೆ ಬಿದ್ದು ಅಂಗಲಾಚಿ ಬೇಡ್ಕೊಂಡೆ. ನನ್ನ ಸಡನ್ ರಿಯಾಕ್ಷನ್ಗೆ ಎರೆಡೆಜ್ಜೆ ಹಿಂದೆ ಇಟ್ಟವನು, ಅದೇನನ್ನಿಸ್ತೋ, ಸರಿ ಆದ್ರೆ ಗಲಾಟೆ ಮಾಡ್ಬೇಡಿ ಅಂತಾ ಹೇಳಿ ಅಲ್ಲಿಂದ ಹೋದ.


ಅಮ್ಮನ ಕೈ ಹಿಡಿದು ನಿಂತೆ. ಅಮ್ಮ ಪದೇ ಪದೇ ನಿನ್ನ ಹತ್ರ ಮಾತಾಡ್ಬೇಕು ವೆಂಟಿಲೇಟರ್ ತೆಗ್ಸು ಅಂತಾ ಸನ್ನೆ ಮಾಡ್ತಾ ಇದ್ರೆ ಸಂಕಟ ಆಗೋದು. ಸರಿ ಬರೀತಿಯ? ಬರೆದು ತೋರ್ಸು. ಪೆನ್ ಕೊಡ್ತೀನಿ ಅಂದ್ರೆ, ಜಾಸ್ತಿ ಇದೆ. ಬರಿಯೋಕೆ ಆಗಲ್ಲ ಅಂತಾ ಸನ್ನೆ ಮಾಡಿದ್ರು.


ಅಮ್ಮನಿಗೆ ಏನೋ ಸಬೂಬು ಹೇಳಿ ಅಮ್ಮನ ತಲೆ ಸವರುತ್ತಾ ಮಲ್ಗು ಅಮ್ಮ, ನಾನಿಲ್ಲೆ ಇದೀನಿ ಅಂತಾ ಹೇಳಿ ಅಮ್ಮನ ಪಕ್ಕಾನೆ ನಿಂತೆ. ಅವಳ ಸಾಮಿಪ್ಯ ಏನೋ ನೆಮ್ಮದಿ ಕೊಟ್ಟಿತ್ತು.


ಆದರೂ ಅಮ್ಮನ ಸ್ಥಿತಿ ನನ್ನ ಯಾವ ಶತ್ರುವಿಗೂ ಬೇಡ ಅನ್ನೋ ಅಷ್ಟು ಸಂಕಟ ಆಗ್ತಾ ಇತ್ತು. ಆದ್ರೂ ಹುಷಾರಾಗ್ತಾರೆ ಅನ್ನೋ ಭರವಸೆ ಸತ್ತಿರಲಿಲ್ಲ. ತಾಳ್ಮೆಯಿಂದ ಕಾಯೋದೊಂದೇ ಕೆಲಸ ಆಗಿತ್ತು. ಇದರ ಮಧ್ಯೆ ಅಮ್ಮ ಎಚ್ಚರ ಆದಾಗೊಮ್ಮೆ ವೆಂಟಿಲೇಟರ್ ತೆಗ್ಸು, ನಿನ್ನೊಟ್ಟಿಗೆ ಮಾತಾಡ್ಬೇಕು ಅಂತಾ ಸನ್ನೆ ಮಾಡೋರು. ಮೊದ್ಲು ನೀನು ಹುಷಾರಾಗಮ್ಮ, ಆಮೇಲೆ ಇಬ್ಬರು ರಾತ್ರಿ ಪೂರಾ ಮಾತಾಡೋಣ ಅಂತಾ ಸಾಮಾಧಾನ ಮಾಡಿದೆ.


🔅


ಬೆಳಗ್ಗೆ ಅಣ್ಣ ಅತ್ತಿಗೆ ಗಾಬರಿಯಿಂದ ನನ್ನ ಹುಡುಕಿ ಬಂದ್ರು. ನಾನು ICU ಒಳಗೆ ಬಂದಾಗ ಅವರಿಗೆ ನಿದ್ದೆ ಮಂಪರು. ಹಾಗಾಗಿ ಅವರಿಗೆ ಗಾಬರಿಯಾಗಿತ್ತು. ನನ್ನ ಅಮ್ಮನ ಪಕ್ಕ ನೋಡಿ ಸ್ವಲ್ಪ ನಿರಾಳ ಆದವರು ಕಾಫಿ ಕುಡಿದು ಬಾ ಅಂತಾ ಬಲವಂತ ಮಾಡಿದ್ರು. ಆದ್ರೆ ನಾನು ಮಾತ್ರ ಅಮ್ಮನಿಂದ ಒಂದು ಕ್ಷಣ ಕೂಡಾ ಮಿಸುಗಾಡಲಿಲ್ಲ. ಹೊರಗೆ ಹೋದ್ರೆ ಮತ್ತೆ ಒಳಗೆ ಬಿಡಲ್ಲ ಅನ್ನೋ ಭಯವೋ, ಅಮ್ಮನಿಂದ ದೂರ ಆಗ್ತೀನಿ ಅನ್ನೋ ಆತಂಕವೋ ಗೊತ್ತಿಲ್ಲ. ಒಟ್ಟಿನಲ್ಲಿ ನಂಗೆ ಅಲ್ಲಿಂದ ಹೋಗೋ ಮನಸ್ಸಿರಲಿಲ್ಲ..


ನಾನು ಮುಂಚೆ ಇಂದಾನು ತುಂಬಾ ಹಠಮಾರಿ. ಒಬ್ಳೆ ಮಗಳು ಅನ್ನೋ ಪ್ರೀತಿ ಹಠಮಾರಿತನ ಕಲಿಸಿತ್ತು. ನಂಗೆ ಜಾಸ್ತಿ ಹೇಳೋಕೆ ಆಗ್ದೆ, ಅಣ್ಣ ಅತ್ತಿಗೆ ಅಲ್ಲಿಂದ ಹೊರಗೆ ಹೋದ್ರು. ಕಾರಣ ನನ್ನೊಬ್ಬಳನ್ನ ಬಿಟ್ಟಿದ್ದೆ ಹೆಚ್ಚು ಅಲ್ಲಿ. ಮತ್ತೆ ಅವರನ್ನು ನೋಡಿ ಅವರ ಜೊತೆ ನನ್ನನ್ನು ಹೊರಗೆ ಕಳಿಸಿಯಾರು ಅನ್ನೋ ಭಯ ನಂಗೆ. ಅದಕ್ಕೆ ಅವರನ್ನ ಅವಸರ ಮಾಡಿ ಕಳಿಸಿದೆ.


🔅


ಬೆಳಗ್ಗೆ ಪಪ್ಪ ಒಳಗೆ ಬಂದ್ರು. ಮಮ್ಮಿ ಪಪ್ಪನ ಹತ್ರ ಮೊದ್ಲು ಕೇಳಿದ್ದೆ ಟೈಮ್ ಎಷ್ಟು ಅಂತಾ. ಅದಾಗ್ಲೇ ಅವರಿಗೆ ನನ್ನ ಮಾತಿನ ಮೇಲೆ ವಿಶ್ವಾಸ ಹೋಗಿತ್ತು ಅನ್ಸುತ್ತೆ. ಯಾಕೆ ಅಂದ್ರೆ ರಾತ್ರಿ ಇಂದ ನನ್ನ ಗಡಿಯಾರದಲ್ಲಿಯ ಸಮಯ ಮುಂದೆ ಹೋಗ್ತಾನೆ ಇರ್ಲಿಲ್ಲ ಅದಕ್ಕೆ😜.


ಅಮ್ಮನ ಪರಿಸ್ಥಿತಿಗೆ ಪಪ್ಪನ ಕಣ್ಣಲ್ಲಿ ಕೂಡಾ ಕಣ್ಣೀರು ನಿಲ್ತಾ ಇಲ್ಲ. ನನ್ನಪ್ಪ ಅತ್ತಿದ್ದು ನಾನು ನನ್ನ ಅಜ್ಜ ಅಂದ್ರೆ ಪಪ್ಪನ ತಂದೆ ತೀರಿಕೊಂಡಾಗ ನೋಡಿದ್ದು. ಮತ್ತೆ ಇವತ್ತೇ ನೋಡ್ತಾ ಇರೋದು.


ನನ್ನ ಮದ್ವೆ ಫಿಕ್ಸ್ ಆದಾಗ ಒಂದೇ ವಾರದಲ್ಲಿ ನನ್ನ ಮಾದುವೆ ನಡೆದದ್ದು. ಫಿಕ್ಸ್ ಆದ ದಿನದಿಂದ ಪಪ್ಪ ಪ್ರತಿ ರಾತ್ರಿ ನಾನು ಮಲಗಿದ ಮೇಲೆ ನನ್ನ ಕೋಣೆಗೆ ಬಂದು ನನ್ನ ತಲೆ ಸವರಿ, ಎಷ್ಟೋ ಹೊತ್ತು ನನ್ನ ಪಕ್ಕ ಕೂತು, ತಮ್ಮ ರೂಮಿಗೆ ಹೋಗಿ ಚಿಕ್ಕ ಮಕ್ಕಳಂತೆ ಅಳೋರಂತೆ. ಅಮ್ಮ ಆಗಾಗ ಈ ಮಾತು ಹೇಳಿ ಅಪ್ಪನ್ನ ಕಾಡ್ಸೋರು.


ಹೌದು ನನ್ನಪ್ಪನಿಗೆ ನಾನು ಅಂದ್ರೆ ಪ್ರಾಣ. ಈ ಕ್ಷಣಕ್ಕೂ ನಂಗೆನಾದ್ರೂ ನೋವಾದಾಗ ಮೊದ್ಲು ನಂಗೆ ನೆನಪಾಗೋದೇ ನನ್ನಪ್ಪ.


ಪಪ್ಪನ ಕಣ್ಣೀರು ನನ್ನ ಮತ್ತಷ್ಟು ಕುಗ್ಗಿಸಿತು. ತುಂಬಾ ಸ್ಟ್ರಾಂಗ್ ನನ್ನ ಹೀರೋ. ಅವರೇ ಈ ಮಟ್ಟಿಗೆ ಅಳ್ತಿದಾರೆ ಅಂದ್ರೆ ನನ್ನ ಧೈರ್ಯ ಸ್ವಲ್ಪ ಕುಂದಿದ ಹಾಗಾಯ್ತು.


ಪಪ್ಪನ ಬಿಕ್ಕುವಿಕೆಯ ಶಬ್ದಕ್ಕೆ ಅವರು ಅಳ್ತಾ ಇದಾರೆ ಅನ್ನೋದನ್ನ ಗ್ರಹಿಸಿದ ಮಮ್ಮಿ ತಕ್ಷಣ ನನ್ನ ಕೈ ಹಿಡಿದು, ಯಾಕ್ ಅಳ್ತಿದಾರೆ? ಅಳ್ಬೇಡ ಅಂತಾ ಹೇಳು ಅಂತಾ ಸನ್ನೆ ಮಾಡಿದ್ರು.


ಪಪ್ಪನ ಮುಖದ ಹತ್ರ ನನ್ನ ಕೈ ಒಯ್ದು ಅವರ ಕಣ್ಣೀರು ಒರೆಸೋಕೆ ಹೇಳಿದ್ರು. ಅಮ್ಮ ಹಾಗೆ ಅಲ್ವಾ, ತನಗೆಷ್ಟೇ ಕಷ್ಟ ಆದ್ರೂ ಸದಾ ತನ್ನವರ ಹಿತ ಬಯಸುವ ನಿಸ್ವಾರ್ಥ ಜೀವ ಅದು.


ಪಪ್ಪ ತಮ್ಮ ದುಃಖ ತಡಿಯೋಕೆ ಆಗ್ದೆ ಅಲ್ಲಿಂದ ಹೊರ ಹೋದರು. ಇದೇ ಕಾರಣಕ್ಕೆ ನೆನ್ನೆ ಇಂದ ಅವರ ಅರ್ಧ ಜೀವ ಆಸ್ಪತ್ರೆ ಬೆಡ್ ಮೇಲೆ ಮಲಗಿದ್ರು ಕೂಡಾ ಒಳ ಬರದೇ, ದೂರದಿಂದ ನೋಡಿ ಮೌನವಾಗೇ ಹಿಂದೆ ಸರೀತಿದ್ದವರು ಮನಸ್ಸು ತಡಿಯಲಾರದೇ ಈಗ ಒಳಗೆ ಬಂದಿದ್ರು.


🔅


ಯಾರು ಎಷ್ಟೇ ಹೇಳಿದ್ರು ನಾನು ಮಾತ್ರ ಅಮ್ಮನಿಂದ ದೂರ ಸರಿದೇ ಇರ್ಲಿಲ್ಲ. ನೆನ್ನೆ ರಾತ್ರಿ ಇಂದ ಅವಳ ಪಕ್ಕ ನಿಂತವಳಿಗೆ ಕಾಲು ಮರಗಟ್ಟಿದಂತೆ ಆಗಿತ್ತು.


ಮೊಮ್ಮಕ್ಕಳು ಬಂದಾಗ ಅಮ್ಮನ ಸಂಭ್ರಮ ಹೇಳತೀರದ್ದು. ಮೊಮ್ಮಕ್ಕಳಿಬ್ಬರ ಮೈ, ಕೈ, ತಲೆ ಎಲ್ಲಾ ಸವರಿ ಸಮಾಧಾನ ಪಟ್ಟರು. ಅವರ ಕೈ ಹಿಡಿದು ತಮ್ಮ ಕೆನ್ನೆಗೆ ಒತ್ತಿಕೊಂಡರು. ಮುತ್ತಿಕ್ಕುವ ಹಂಬಲ ಆ ಜೀವಕ್ಕೆ. ಆದ್ರೆ ಆಸ್ಪತ್ರೆಯ ವೆಂಟಿಲೇಟರ್ ಅವರ ಆಸೆಗೆ ಅಡ್ಡ ಬಂದಿತ್ತು. ಆದರೂ ಅವರಿಬ್ಬರ ಕೈಯ್ಯನ್ನು ತುಟಿಗೆ ಸೋಕಿಸಿಕೊಂಡು ಖುಷಿ ಪಟ್ಟರು.


🔅


ಸಂಜೆ 4ರ ಸುಮಾರಿಗೆ ಡಾಕ್ಟರ್ ಬಂದು ನೆನ್ನೆ ಇಂದ ಇಲ್ಲೇ ಇದೀರಾ. ನಾವು ಯಾವ ಪೇಷಂಟ್ ಜೊತೆನೂ ಯಾರನ್ನೂ ICU ಒಳಗೆ ಬಿಡಲ್ಲ. ಆದ್ರೆ ನಿಮ್ಮ ಗೋಳಾಟ ನೋಡಲಾರದೇ ಬಿಟ್ಟಿದೀವಿ. ಸ್ವಲ್ಪ ಹೊತ್ತು ಹೊರಗೆ ಹೋಗಿ. ಆಮೇಲೆ ಬರುವಿರಂತೆ ಅಂದ್ರು.


ನಾನು ಹೋಗಲ್ಲ ಅಂತಾ ಹಠ ಹಿಡಿದಾಗ ಇಬ್ಬರು ನರ್ಸ್ ಬಂದು ನನ್ನ ಬಲವಂತದಿಂದ ಎಳೆದೋಯ್ಯಲು ಪ್ರಯತ್ನಿಸಿದರು. ನಾನೇ ಹೋಗ್ತೀನಿ ಅಂತಾ ಹೇಳಿ ಅಮ್ಮನ ಬಳಿ ಬಾಗಿ ಅಮ್ಮ ಸ್ವಲ್ಪ ಹೊತ್ತು ಹೊರಗೆ ಇರ್ತೀನಿ ಅಂತಷ್ಟೇ ಹೇಳಿದೆ. ತಕ್ಷಣ ಅಮ್ಮನ ಹಿಡಿತ ಬಲವಾಯ್ತು. ಹೋಗ್ಬೇಡ ಅಂತಾ ತಮ್ಮ ಕೈ ಎತ್ತಿ ಸನ್ನೆ ಮಾಡಿದ್ರು. ನನ್ನ ಕೈ ಗಟ್ಟಿಯಾಗಿ ಹಿಡಿದು ಅವರ ಅಷ್ಟು ಶಕ್ತಿ ಹಾಕಿ ನನ್ನ ಅವರತ್ತ ಎಳೆದರು.


ಆದರೆ ನರ್ಸ್ ಇನ್ನೂ ಅಲ್ಲೇ ನಿಂತು ನನ್ನನ್ನೇ ನೋಡ್ತಾ ಇದ್ರು. ನಂಗೆ ಬೇರೆ ದಾರಿ ಇಲ್ದೇ ಒತ್ತಾಯವಾಗಿ ಅಮ್ಮನ ಕೈಯಿಂದ ಕೈ ಬಿಡಿಸಿಕೊಂಡು ಬೇಗ ಬರ್ತೀನಿ. ನಿಂಗೆ ಏನಾದ್ರೂ ಬೇಕಿದ್ರೆ ನಿನ್ನ ಕೈ ಮೇಲೆ ಮಾಡು ಸಿಸ್ಟರ್ ನನ್ನ ಕರೀತಾರೆ ಅಂತಾ, ಅಮ್ಮನಿಗೆ ಸಮಾಧಾನ ಹೇಳಿ ಹೊರಗೆ ಬಂದು, ಸಿಸ್ಟರ್ ಹತ್ರ ಕೂಡಾ ಅದೇ ಹೇಳಿ ICU ಬಾಗಿಲಿಗೆ ಕುಳಿತೆ.


ಅರ್ಧ ಗಂಟೆ ಆಗಿತ್ತು ಅಷ್ಟೆ. ನಾನು ಹೊರಗೆ ಬಂದು. ಡಾಕ್ಟರ್ ಒಬ್ರು ನನ್ನ ಬಳಿ ಬಂದು, ಶ್ರೀದೇವಿ ಪೇಷಂಟ್ ಹಾರ್ಟ್ಬೀಟ್ ಸ್ಟಾಪ್ ಆಗಿದೆ. ನಾವು ನಮ್ಮ ಪ್ರಯತ್ನ ಮಾಡ್ತಾ ಇದೀವಿ. ಆದ್ರೆ ಯಾವುದೇ ಖಾತ್ರಿ ಇಲ್ಲ. ಅವರಿಗೆ ಹಾರ್ಟ್ ಅಟ್ಯಾಕ್ ಆಗಿದೆ ಅಂತಾ ಹೇಳಿದ್ರು.


ನಿಂತಲ್ಲೇ ಕುಸಿದು ಕುಳಿತವಳ ಬಾಯಿಯಿಂದ ಮಾತೇ ಹೊರಡ್ತಾ ಇಲ್ಲ. ಅಮ್ಮ ನನ್ನ ಕೈ ಹಿಡಿದು ಹೊರಗೆ ಹೋಗ್ಬೇಡ ಅಂತಾ ಸನ್ನೆ ಮಾಡಿದ್ದೆ ಕಣ್ಣ ಮುಂದೆ ಸುಳಿದಂತೆ ಆಯ್ತು.


ಹರೀತಿದ್ದ ಕಣ್ಣೀರಿನತ್ತ ಗಮನ ಕೊಡದೇ, ಅವರ ಹಾರ್ಟ್ ಬೀಟ್ ನಾನೇ ಡಾಕ್ಟರ್. ನನ್ನ ಹೊರಗಡೆ ಕಳ್ಸಿದ್ದಕ್ಕೆ ಹೀಗಾಗಿದ್ದು. ನನ್ನ ನನ್ನಮ್ಮನ ಹತ್ರ ಬಿಡಿ. ಅವ್ರು ಸರಿ ಹೋಗ್ತಾರೆ ಅಂತಾ ಹುಚ್ಚುಚ್ಚಾಗಿ ಏನೇನೋ ಬಡಬಡಿಸಿದೆ.


'ನೀವು ನೆನ್ನೆ ಇಂದ ಅಲ್ಲೇ ಇದೀರಾ. ಅದೇ ಇನ್ಫೆಕ್ಷನ್ ಆಗಿ ಹೀಗಾಗಿರಬಹುದು. ಮತ್ತೆ ನಿಮ್ಮನ್ನ ಅಲ್ಲಿ ಬಿಡೋಕಾಗಲ್ಲ' ಅಂದ್ರು.


ನಾನು ದುಃಖ, ಅಸಹಾಯಕತೆ, ಕೋಪ ಎಲ್ಲಾ ಸೇರಿ ಡಾಕ್ಟರ್ ಜೊತೆ ಗಲಾಟೆ ಶುರು ಮಾಡಿದೆ. ನನ್ನ ಜೋರು ದನಿ ಕೇಳಿ ಅಣ್ಣ ರೂಮ್ ಒಳಗೆ ಬಂದ. ಅವನು, ಅತ್ತಿಗೆ, ಪಪ್ಪ ಎಲ್ಲಾ ಹೊರಗೆ ಕೂತಿದ್ರು. ಹಾಗಾಗಿ ಅವರ ಜೊತೆ, ನನ್ನನ್ನು ಅಲ್ಲೇ ಕೂರಿಸಿದ ಅಣ್ಣ.


ಡಾಕ್ಟರ್ ಅಣ್ಣನ ಹತ್ರ ಮಮ್ಮಿ ಪರಿಸ್ಥಿತಿ ವಿವರಿಸಿ ನನ್ನ ಕರ್ಕೊಂಡು ಹೋಗೋಕೆ ಹೇಳಿ ಒಳಗೆ ಹೋಗಿದ್ರು.


🔅


1 ತಾಸಿನ ನಂತರ ಬಂದವರು ನಾಳೆ ಬೆಳಗ್ಗೆವರೆಗೂ ನಾವು ಯಾವ ಗ್ಯಾರೆಂಟಿ ಕೊಡಲ್ಲ ಅಂತ ಹೇಳಿ ಹೋದ್ರು. ಅವರಿಗೆ ಅದೊಂದು ಪೇಷಂಟ್ ಜೀವ ಅಷ್ಟೆ. ಆದ್ರೆ ನಮಗೆ ನಮ್ಮ ಬದುಕಿನ ಒಂದು ಭಾಗ. ಡಾಕ್ಟರ್ ಮಾತು ಕೇಳಿ ನಾವೆಲ್ಲಾ ಅಲ್ಲೇ ಸ್ತಬ್ದವಾಗಿ ನಿಂತು ಬಿಟ್ಟೆವು.


ನೆನ್ನೆ ಇಂದ ಈ ಕ್ಷಣದವರೆಗು ಅಮ್ಮ ಹುಷಾರಾಗ್ತಾರೆ, ನನ್ನೊಟ್ಟಿಗೆ ಮಾತಾಡ್ತಾರೆ ಅಂತಾ ಇದ್ದ ಭರವಸೆಯೆಲ್ಲಾ ಈಗ ಪಾತಾಳ ಸೇರಿತ್ತು. ನೆನ್ನೆ ಇಂದ ನನ್ನ ಜೊತೆ ಮಾತಾಡ್ಬೇಕು ಅಂತಾ ಅಷ್ಟೊಂದು ಹಂಬಲಿಸಿದ ಜೀವ ನನ್ನ ಜೊತೆ ಮಾತಾಡದೇ ಹೊರಡ್ತಾ ಇದಾರೆ ಅನ್ನೋ ಕಲ್ಪನೆಯೇ ನನ್ನ ಮತ್ತಷ್ಟು ಹಿಂಸಿಸಿತು.


ಮಾತು ಕಲಿಸಿದವಳ ಮಾತು ಕೇಳುವ ಸೌಜನ್ಯ ಇಲ್ಲದಾಯ್ತಾ ನಂಗೆ? ಒಂದು ಕ್ಷಣ ಅವಳು ಏನ್ ಹೇಳೋಕೆ ಇಷ್ಟ ಪಡ್ತಾ ಇದಾಳೆ ಅನ್ನೋದನ್ನು ನಾನು ಯೋಚಿಸಲಿಲ್ಲ. ಈಗ ನಾನೇ ಮಾತಾಡು ಅಂದ್ರು ಮಾತಾಡೋ ಚೈತನ್ಯ ಆ ದೇಹದಲ್ಲಿ ಉಳಿದಿಲ್ಲ.


🔅


ರಾತ್ರಿ ಮತ್ತೆ ವಾರ್ಡ್ ಬಾಯ್ ಹತ್ರ ಅಂಗಲಾಚಿ ಅಮ್ಮನ ಪಕ್ಕ ಜಾಗ ಪಡೆದು ಅಲ್ಲೇ ನಿಂತೆ. ಈ ಸಾರಿ ನನ್ನ ಮಾತಿಗೆ ಅಮ್ಮ ಕೇವಲ ಕಿವಿಯಾಗಿದ್ದಳು. ನೆನ್ನೆ ಇಂದ ಸನ್ನೆ ಮಾಡಿ ಆದ್ರೂ ನನ್ನೊಟ್ಟಿಗೆ ಮಾತಾಡ್ತಾ ಇದ್ದವಳು ನಾನು ವೆಂಟಿಲೇಟರ್ ತೆಗ್ಸಿಲ್ಲ ಅನ್ನೋ ಕೋಪಕ್ಕೋ, ಅವಳ ಮಾತು ಮೀರಿ ಸುಳ್ಳು ಮಾತಾಡಿದೆ ಅನ್ನೋ ಅಸಮಾಧಾನಕ್ಕೋ, ಅಥವಾ ಮತ್ಯಾವ ಕಾರಣಕ್ಕೋ ನನ್ನೊಂದಿಗೆ ಸಂಪೂರ್ಣವಾಗಿ ಮಾತು ಬಿಟ್ಟು ಸ್ತಬ್ದವಾಗಿ ಮಲಗಿದ್ದಾಳೆ.


ರಾತ್ರಿ ಪೂರಾ ಮಾತಾಡೋದು ನಂಗೆ ಅಮ್ಮನಿಗೆ ಹೊಸ ವಿಷಯವೇನಲ್ಲ. ನಾನು ತವರಿಗೆ ಹೋದಾಗ ಪ್ರತಿ ರಾತ್ರಿ ಎಚ್ಚರ ಆದ್ರೆ ಸಾಕು ಬೆಳಗಾಗುವವರೆಗೂ ನಮ್ಮ ಮಾತು ನಿಲ್ತಾ ಇರ್ಲಿಲ್ಲ. ಅಮ್ಮನಿಗೆ ಯಾವಾಗ್ಲೂ ನಿದ್ದೆ ಕಡಿಮೆ, ಹಾಗಾಗಿ ನಾನು ಸ್ವಲ್ಪ ಮಗ್ಗಲು ಬದಲಾಯಿಸಿದ್ರೆ ಸಾಕು ಎಚ್ಚರ ಆಗೋರು, ನಿದ್ದೆ ಬರ್ಲಿಲ್ವಾ ಅಂತಾ ಶುರು ಆಗೋ ನಮ್ಮ ಮಾತು ಕಥೆ ಪ್ರಪಂಚ ಪರ್ಯಟನೆ ಮಾಡಿ ಬರುತ್ತಿತ್ತು.


ಮನೇಲಿ ಎಲ್ರು ಕಾಡೋರು, ಅವೆಷ್ಟು ಮಾತು ನಿಮ್ಮಿಬ್ಬರದು ಅಂತಾ. ಆದ್ರೆ ಇವತ್ತು ರಾತ್ರಿ ನಾನು ಮಾತಾಡ್ತಾ ಇದೀನಿ. ಆದ್ರೆ ಅಮ್ಮ ಕೇವಲ ಕೇಳುಗಳು ಮಾತ್ರ ಈಗ. ನಾನೆಷ್ಟೇ ಮಾತಾಡಿದ್ರು ಮೌನವೊಂದೇ ಅವಳ ಉತ್ತರ.


🔅


ಬೆಳಗ್ಗೆ ಪಪ್ಪ ICU ಬಂದಾಗ ಅವರ ಕೆಂಪಾದ ಕಣ್ಣುಗಳೇ ಅವರು ರಾತ್ರಿ ಪೂರಾ ಅತ್ತಿದ್ದಾರೆ ಅನ್ನೋದಕ್ಕೆ ಸಾಕ್ಷಿ ಆಗಿದ್ದವು. ಬಂದವರು ಅಮ್ಮನ ಮುಖ ನೋಡುತ್ತಾ ನಿಂತುಬಿಟ್ಟರು. ಆಮೇಲೆ ಅಮ್ಮನ ಕೈ ಹಿಡಿದು, ಮಕ್ಕಳ ಚಿಂತೆ ಮಾಡ್ಬೇಡ ಶ್ರೀದೇವಿ. ನಾನು ಅವರನ್ನ ತುಂಬಾ ಚನಾಗಿ ನೋಡ್ಕೋತೀನಿ. ಅಶ್ವಿನಿ ಚಿಂತೆ ಮಾಡ್ಬೇಡ ಎಂದರು. ಪವಾಡ ಎಂಬಂತೆ ಅಮ್ಮನ ಕೈ ಅಪ್ಪನ ಕೈಯ್ಯನ್ನು ಗಟ್ಟಿಯಾಗಿ ಹಿಡಿಯಿತು.


ಸಾವಿನ ಅಂಚಲ್ಲಿ ಮಲಗಿದ ಜೀವಕ್ಕೆ ಈಗಲೂ ಮಕ್ಕಳದ್ದೇ ಚಿಂತೆ. ಅಪ್ಪ ಮಾತು ಕೊಟ್ಟ ಮೇಲೆ ಆ ಜೀವಕ್ಕೆ ನಿರಾಳ ಎನಿಸಿರಬೇಕು. ಅಮ್ಮನ ಮುಚ್ಚಿದ ಕಣ್ಣಂಚಲ್ಲಿ ಸಣ್ಣ ಹನಿ ಕಂಡಿತು. ತಾಯಿ ಹೃದಯಕ್ಕೆ ದೊಡ್ಡದೊಂದು ಸಲಾಂ ಮಾಡಿದೆ.


ಪಪ್ಪ ಇನ್ನು ತಮ್ಮಿಂದ ಅಲ್ಲಿ ನಿಲ್ಲಲು ಸಾಧ್ಯ ಇಲ್ಲ ಎನಿಸಿದಾಗ ಅಲ್ಲಿಂದ ಹೊರ ನಡೆದರು.


🔅


ಡಾಕ್ಟರ್ ಹೇಳಿದ ಸಮಯ ಮೀರಿತ್ತು. ಅಮ್ಮನಲ್ಲಿ ಯಾವುದೇ ಬದಲಾವಣೆ ಇರಲಿಲ್ಲ. ನನ್ನೆಲ್ಲಾ ಭರವಸೆಯೂ ಸತ್ತಿತ್ತು. ಇನ್ನು ನನ್ನಮ್ಮ ನನ್ನ ಪಾಲಿಗೆ ಇಲ್ಲ ಎಂಬ ಸತ್ಯಕ್ಕೆ ರಾತ್ರಿ ಇಂದಲೇ ಮಾನಸಿಕವಾಗಿ ಅದೆಷ್ಟೇ ತಯಾರಿ ನಡೆಸಿದರು ಮರ್ಕಟ ಮನಸ್ಸು ಮತ್ತೆ ಮತ್ತೆ ಅವಳನ್ನೇ ಬಯಸಿತು. ಅಮ್ಮನ ಪ್ರೀತಿ ಸಾಕು ಎನ್ನುವ ಜೀವ ಈ ಭೂಮಿ ಮೇಲೆ ಇರೋದಕ್ಕೆ ಸಾಧ್ಯಾನ?


ಅಣ್ಣ ಬಂದು ಸ್ವಲ್ಪ ಮಾತಾಡಬೇಕು ಹೊರಗೆ ಬಾ, ಅನು ಇರ್ತಾಳೆ ಅಂತಾ ರಿಕ್ವೆಸ್ಟ್ ಟೋನ್ ಅಲ್ಲಿ ಕರೆದ. ಬೇರೆ ವಿಧಿ ಇಲ್ಲದೇ ಅತ್ತಿಗೆಯನ್ನ ಅಲ್ಲಿ ಬಿಟ್ಟು, ಅವನೊಂದಿಗೆ ಭಾರವಾದ ಹೆಜ್ಜೆ ಹಾಕಿದೆ. ನೆನ್ನೆ ಹೊರಗೆ ಹೊರಟಾಗ ಬೇಡ ಎಂದೂ ತಡೆದ ಜೀವ ಇಂದು ನಿಶ್ಯಬ್ದವಾಗಿ ಚಲನೆಯನ್ನೇ ಮರೆತು ಮಲಗಿದೆ. ವೆಂಟಿಲೇಟರ್ ಮೂಲಕ ಉಸಿರಾಟವೊಂದಿದೆ. ಅದರ ಹೊರೆತು ಜೀವಂತ ಬೊಂಬೆ ಎನಿಸಿದರು..



🔅



'ಏನ್ ವಿಷ್ಯ ಅಣ್ಣ' ಅಂತಾ ನೇರವಾಗಿಯೇ ಕೇಳಿದೆ.


ಹೊರಗೆ ಬಂದವನು ಮಾತಿಗಾಗಿ ತಡಕಾಡುತ್ತಿದ್ದಾಗ, ಸತ್ಯ ಕಣ್ಣ ಮುಂದೆಯೇ ಇದ್ದಾಗ, ಅದಕ್ಕಿಂತ ನೋವಿನ ವಿಷಯ ಮತ್ತೊಂದಿರಲು ಸಾಧ್ಯವೇ ಇಲ್ಲ ಅನ್ನೋ ನಂಬಿಕೆಯಲ್ಲಿ ಕೇಳಿದ್ದೆ.


'ಮುಂದೆ ಏನ್ ಮಾಡೋಣ?' ಅಂದ.


ನಂಗೆ ಅವನ ಮಾತಿನ ಒಳಾರ್ಥ ತಿಳಿಯಲಿಲ್ಲ. 'ಅಂದ್ರೆ?' ಅಂದೆ.


'ಮಮ್ಮಿ ಬಗ್ಗೆ ಏನ್ ಡಿಸೈಡ್ ಮಾಡಿದೀಯ? ಡಾಕ್ಟರ್ ಈಗ ಮತ್ತೊಮ್ಮೆ ಡಯಲಿಸಿಸ್ ಮಾಡೋಣ ಅಂತಿದಾರೆ' ಎಂದನು.


ನಾನು ಒಂದೇ ಒಂದು ಕ್ಷಣ ಕೂಡಾ ಯೋಚಿಸದೇ, 'ಬೇಡ. ಡಿಸ್ಚಾರ್ಜ್ ಮಾಡಿ ಮನೆಗೆ ಕರ್ಕೊಂಡು ಹೋಗೋಣ' ಅಂದೆ.


ನನ್ನ ಮಾತು ಕೇಳಿ ಅಣ್ಣ ಗಾಬರಿಯಲ್ಲಿ, 'ವೆಂಟಿಲೇಟರ್ ತೆಗದ್ರೆ ಬದುಕೋ ಚಾನ್ಸಸ್ ಇಲ್ಲ ಅಂತಿದಾರೆ ಕಣೆ' ಅಂದ. ಅವನ ದನಿಯಲ್ಲಿದ್ದ ಗಾಬರಿ ಸ್ಪಷ್ಟವಾಗಿ ತಿಳೀತಾ ಇತ್ತು.


'ಮಮ್ಮಿಗೆ ಮನೆ ಅಂದ್ರೆ ಜೀವ. ತಿಂಗಳಿಂದ ಆಸ್ಪತ್ರೇಲಿ ಇದ್ದವರು ಪ್ರತಿದಿನ ಕೇಳ್ತಾ ಇದ್ದಿದ್ದು ಒಂದೇ ಮಾತು, ಯಾವಾಗ ಡಿಸ್ಚಾರ್ಜ್ ಮಾಡ್ತಾರೆ? ನಾನು ಮಮೆಗೆ ಹೋಗ್ಬೇಕು ಅಂತಾ' ಅಂದೆ.


ಆ.ದ್ರೆ.. ಅಂತಾ ಅಣ್ಣ ಅನುಮಾನಿಸುತ್ತ ಅಂದಾಗ,


'ಸಾಕು, ಇಷ್ಟು ವರ್ಷ ನಮಗಾಗಿ ಅವರು ಕಷ್ಟ ಪಟ್ಟಿದ್ದು ಸಾಕು. ನಾವು ಏನೇ ಪ್ರಯತ್ನ ಮಾಡಿದ್ರು ಅವರು ಇನ್ನು ಉಳಿಯಲ್ಲ ಅನ್ನೋ ಸತ್ಯ ನಂಗೆ ಅರ್ಥ ಆಗಿದೆ. ಅವರು ಉಳುದ್ರು ಕೂಡಾ ಕೇವಲ ವೆಂಟಿಲೇಟರ್ ಸಹಾಯದಿಂದ ಉಸಿರಾಡೋದು ಬಿಟ್ರೆ ಬೇರೆ ಯಾವ ರೀತಿ ಡೆವಲಪ್ಮೆಂಟ್ ಕೂಡಾ ಅವರಲ್ಲಿ ಸಾಧ್ಯ ಇಲ್ಲ.


ಅವರ ಕಿಡ್ನಿ ಎರೆಡು ಆಲ್ರೆಡಿ ಡ್ಯಾಮೇಜ್ ಆಗಿದೆ.

ಮೊನ್ನೆ ಬ್ರೈನ್ ಡೆಡ್ ಆಗಿದೆ. ನೆನ್ನೆ ಹಾರ್ಟ್. ಲಿವರ್ ಕೂಡಾ. ನೀವು ಎಷ್ಟೇ ಪ್ರಯತ್ನ ಪಟ್ರು ನನ್ನಿಂದ ವಾಸ್ತವ ಸತ್ಯ ಮುಚ್ಚಿಡೋಕೆ ಆಗಲ್ಲ. ನಂಗೆ ಮಮ್ಮಿ ಪರಿಸ್ಥಿತಿ ಗೊತ್ತು. ಸುಮ್ನೆ ಇಲ್ಲದ ವ್ಯರ್ಥ ಪ್ರಯತ್ನ ಮಾಡೋದು ಬೇಡ. ಅಮ್ಮ ಹುಷಾರಾಗ್ತಾರೆ ಅನ್ನೋದೇ ಆದ್ರೆ ಅವರು ಮನೆಗೆ ಹೋದಮೇಲೆ ಅವರ ಆಸೆ ಈಡೇರಿದ ಖುಷಿಗೆ ಹುಷಾರಾಗ್ತಾರೆ. ಇಲ್ಲ ಅಂದ್ರೆ ನಮ್ಮ ಋಣಾನೇ ಇಷ್ಟು ಅನ್ಕೋಳ್ಳೋಣ.


ಪಾಪ ಕಣೋ ಮಮ್ಮಿ ಒದ್ದಾಡೋದು ನನ್ನಿಂದ ನೋಡೋಕೆ ಆಗ್ತಿಲ್ಲ. ಮಲಗಿದಲ್ಲೇ ಮಲಗಿ ಸೊಂಟ, ಕಾಲು ಎಲ್ಲಾ ನೋವು ಅಂತಾ ನೆನ್ನೆ ಮೊನ್ನೆ ಎಲ್ಲಾ ಅದೆಷ್ಟು ಒದ್ದಾಡಿದ್ದಾರೆ ಅನ್ನೋದು ನಾನು ಸ್ವತಃ ಕಣ್ಣಾರೆ ನೋಡಿದೀನಿ. ನೆನ್ನೆ ಸಂಜೆ ಇಂದ ಜೀವಂತ ಬೊಂಬೆ ಹಾಗೆ ಚಲನೇನೇ ಇಲ್ದೇ ಅವರು ಮಲಗಿರೋದು ನೋಡಿದ್ರೆ ಕರುಳು ಕಿತ್ತು ಬಂದಂಗೆ ಆಗುತ್ತೆ.


ಒಂದೇ ಒಂದು ದಿನ 10 ನಿಮಿಷ ಲೇಟ್ ಆಗಿ ಎದ್ದೇಳು ಅಮ್ಮ ಅಂದ್ರೆ, ಲೇಟ್ ಎದ್ರೆ ಮೈ ಕೈ ನೋವು ಕಣೆ, ಜಾಸ್ತಿ ಹೊತ್ತು ಮಲಗೋಕೆ ಆಗಲ್ಲ ಅನ್ನೋಳು. ಆದ್ರೆ ಈಗ ಹಾಸಿಗೆಲೇ ಜೀವನ. ಸಾಕು ಕಣೋ, ನನ್ನಿಂದ ಮಮ್ಮಿ ನೋವುಣ್ಣೊದು ನೋಡೋಕೆ ಆಗ್ತಾ ಇಲ್ಲ. ನಮ್ಗೆ ಅಮ್ಮ, ಬೇಕು ಅಂತಾನೇ ಅನಿಸುತ್ತೆ. ಆದ್ರೆ ಅದಕ್ಕೋಸ್ಕರ ಆ ಜೀವಕ್ಕೆ ನಾವು ಮತ್ತೆ ಮತ್ತೆ ನೋವು ಕೊಡೋದು ಎಷ್ಟು ಸರಿ ಹೇಳು. ಎಂದು ಅಳೋಕೆ ಶುರು ಮಾಡಿದೆ.


ನೀನು ಹೇಗ್ ಹೇಳ್ತೀಯಾ ಹಾಗೆ ಕಣೆ. ನಂಗೆ ಪಪ್ಪಾಗೆ ಧೈರ್ಯ ಸಾಲ್ತಾ ಇಲ್ಲ ಎಂದ. ಹೌದು, ನಮ್ಮನೇಲಿ ನಾನು ಸ್ವಲ್ಪ ಧೈರ್ಯವಂತೆ ಅಂದ್ರೆ ತಪ್ಪಾಗಲ್ಲ. ಪಪ್ಪ ನಂಗೆ ಗಂಡುಮಗನಷ್ಟೇ ಸ್ವಾತಂತ್ರ್ಯ ಜೊತೆಗೆ ಬದುಕನ್ನು ಕಲಿಸಿಕೊಟ್ಟಿದಾರೆ. ಎಂತಾ ಸಂಧರ್ಭ ಬಂದ್ರು ಒಬ್ಳೆ ನಿಭಾಯಿಸಬಲ್ಲೆ ಅನ್ನೋ ಸ್ಥೈರ್ಯ ತುಂಬಿದ್ದಾರೆ. ಹೊರಗಿನ ವ್ಯವಹಾರಗಳನ್ನೆಲ್ಲ ಕಳಿಸಿಕೊಟ್ಟಿದ್ದಾರೆ. ಡಿಸಿಷನ್ ತಗೊಳೋ ಸಾಮರ್ಥ್ಯ ಕಲಿಸಿದ್ದಾರೆ.


ಆದ್ರೆ ಅಣ್ಣ ಸ್ವಲ್ಪ ಹೆಂಗರುಳು. ಅಲ್ದೇ ಅಮ್ಮ ಅಂದ್ರೆ ನಂಗಿಂತ ಒಂದು ಕೈ ಜಾಸ್ತಿ ಪ್ರೀತಿ ಅವನಿಗೆ. ಹಾಗಾಗಿ ಮಮ್ಮಿ ವಿಚಾರದಲ್ಲಿ ಯಾವುದೇ ತೀರ್ಮಾನ ತಗೋಳೋಕು ಅವನಿಗೆ ಧೈರ್ಯ ಸಾಕಾಗಿರಲಿಲ್ಲ.


ಸರಿ ನೀವು ಡಿಸ್ಚಾರ್ಜ್ ಪ್ರೊಸೆಸ್ ಮುಗ್ಸಿ. ನಾನು ಮಮ್ಮಿ ಜೊತೆ ಇರ್ತೀನಿ ಅಂತಾ ಮತ್ತೆ ICU ಕಡೆ ಹೋದೆ.


🔅


ಅಮ್ಮನ ಜೊತೆ ನನ್ನ ಮಾತು ಮತ್ತೆ ಮುಂದುವರೆದಿತ್ತು. ನೆನ್ನೆ ಇಂದ ಅದೇನೇನು ಮಾತಾಡಿದಿನೋ ನಂಗೆ ಗೊತ್ತಿಲ್ಲ. ಆದ್ರೆ ನನ್ನ ಮಾತು ಇನ್ನೂ ಮುಗಿದಿರಲಿಲ್ಲ.


'ಅಮ್ಮ ನಿನ್ನ ಡಿಸ್ಚಾರ್ಜ್ ಮಾಡ್ತಾ ಇದೀವಿ. ನಿನ್ನನ್ನ ನಿನ್ನ ಮನೆಗೆ ಕರ್ಕೊಂಡು ಹೋಗ್ತಾ ಇದೀವಿ. ನೀನು ಬಾಳಿ ಬದುಕಿದ ಮನೆಗೆ ಕರ್ಕೊಂಡು ಹೋಗ್ತಾ ಇದೀವಿ. ಸಂತೋಷನ ಅಮ್ಮ' ಅಂದೆ.


ನನ್ನ ಕೈಲಿದ್ದ ಅಮ್ಮನ ಕೈ ಸಣ್ಣ ಚಲನೆ ಮಾಡಿತು. ಅದು ನನ್ನ ಭ್ರಮೆ ಇರಬೇಕು. ನೆನ್ನೆ ಇಂದ ಕೈ ಹಿಡಿದೇ ಇದೀನಿ ಯಾವ ಸಣ್ಣ ಚಲನೆ ಕೂಡಾ ಇಲ್ಲ. ಈಗ ನಂದೇ ಕೈ ಶೇಕ್ ಆಗಿರ್ಬೇಕು ಅನ್ಕೊಂಡೆ. ಮತ್ತೆ ಮಾತು ಶುರುವಿಟ್ಟೆ.


ನನ್ನ ಕೈಲಿದ್ದ ಅಮ್ಮನ ಕೈ ನನ್ನ ಕೈ ಹಿಡಿಯಲು ಸಣ್ಣದಾಗಿ ಪ್ರಯತ್ನ ಪಡುತ್ತಿರುವಂತೆ ಭಾಸವಾಯ್ತು. ಮನದಲ್ಲಿ ಮತ್ತೇನೋ ಅರಿಯದ ಭರವಸೆಯ ಬೆಳಕು ಮೂಡಿದಂತೆ ಆಯ್ತು.


ಅಮ್ಮನ ಕಿವಿ ಬಳಿ ಹೋಗಿ, 'ಅಮ್ಮಾ.. ನಾನ್ ಬಂದಿದೀನಿ ನೋಡಮ್ಮ' ಅಂದೆ.


ತಕ್ಷಣ ಅಮ್ಮ ಕಣ್ ಬಿಟ್ಟು ಮತ್ತೆ ಕಣ್ಣು ಮುಚ್ಚಿದ್ರು.


ನಂಗೆ ಹಕ್ಕಿ ಹಾಗೆ ಹಾರಾಡೋ ಅಷ್ಟು ಖುಷಿ ಆಯ್ತು.


ಮತ್ತೆ ಮತ್ತೆ ಅದೊಂದೇ ಮಾತು ಹೇಳಿದೆ. 'ಅಮ್ಮ.. ನಾನ್ ಬಂದಿದೀನಿ ನೋಡಮ್ಮ... ' ಆ ಮಾತು ಕಿವಿಗೆ ಕೇಳ್ತಾ ಇದ್ದಂತೆ ಒಂದೇ ಸೆಕೆಂಡ್ ಮಾತ್ರ ಆದ್ರೂ ಕಣ್ಣು ತೆಗೆದು ಮತ್ತೆ ಮುಚ್ಚುತಾ ಇದ್ರು.


ಅದೆಷ್ಟು ಬಾರಿ ನಾನು ಆ ಮಾತು ಹೇಳಿದ್ರು ತಕ್ಷಣ ಪ್ರತಿಕ್ರಿಯಿಸುತ್ತ ಇದ್ದರು. ನಂಗೆ ಖುಷಿಯಾಗಿ ಅಮ್ಮನ ಕೈ ಹಿಡಿದು ಅವರ ಕೈಗೆ ಮುತ್ತಿಕ್ಕಿದೆ. ನನ್ನ ಕಣ್ಣಿಂದ ಜಾರಿದ ಹನಿ ಅವರ ಕೈ ಸೋಕುತ್ತಲೇ, ಅವರ ಕೈ ಚಲನೆ ಶುರು ಆಯ್ತು. ಮತ್ತೆ ಮತ್ತೆ ಕೈ ಸ್ವಲ್ಪ ಸ್ವಲ್ಪ ಮುಂದೆ ಚಾಚುತ್ತಾ ನನ್ನ ತಲೆಯನ್ನ ಅವರತ್ತ ಎಳೆಯಲು ಪ್ರಯತ್ನಿಸಿದರು.


ನಾನು ಅವರತ್ತ ಬಾಗಿದಾಗ ನನ್ನ ತಲೆಯನ್ನ ಸವರಿದರು. ನಾನು ಅಮ್ಮನ ಪಕ್ಕ ಮಲಗಿದಾಗ ಅಮ್ಮ ಅವರಿಗೆ ನಿದ್ದೆ ಬರದೇ ಇದ್ದಾಗಲೆಲ್ಲ ನನ್ನ ತಲೆ ಸವರುತ್ತಾ ಇರ್ತಿದ್ರು. ನಾವು ಮಾತಾಡ್ತಾ ಮಲಗಿದಾಗ್ಲೂ ಅವರದ್ದು ಇದೇ ಕಾಯಕ. ನನ್ನ ತಲೆ ಸವರೋದು ಅಂದ್ರೆ ಅದೇನೋ ಪ್ರೀತಿ ಅವರಿಗೆ. ಅದೇ ಹಳೆ ನೆನಪು ಒತ್ತರಿಸಿ ಬಂದು ಕಣ್ಣಲ್ಲಿ ಹನಿ ನೀರಾಡಿತು. ಅದೆಷ್ಟೋ ಹೊತ್ತು ತಲೆ ನೇವರಿಸಿದರು.


ನೆನ್ನೆ ಇಂದ ಯಾವುದೇ ಚಲನೆ ಇಲ್ಲದೇ ಮಲಗಿದ್ದವರು ಇಂದು ನನ್ನ ಮಾತಿಗೆ ಕಣ್ಣು ತೆಗೆದು ನನ್ನ ನೋಡೋ ಪ್ರಯತ್ನ ಮಾಡ್ತಾ ಇರೋದಷ್ಟೇ ಅಲ್ಲದೇ, ನನ್ನ ತಲೆ ಸವರ್ತಾ ಇರೋದು ನನ್ನಲ್ಲಿ ಭರವಸೆಯ ಆಸೆ ಹುಟ್ಟಿಸಿತು.


ತಕ್ಷಣ ಅಮ್ಮನ ಕೈ ಬೆಡ್ ಮೇಲೆ ಇಟ್ಟು ಓಡಿ ಹೋಗಿ ಡಾಕ್ಟರ್ನ ಕರೆದು ಬಂದೆ. ಅವರು ನಾನು ಹೇಳಿದ ಯಾವ ಮಾತುಗಳನ್ನು ನಂಬುವ ಸ್ಥಿತಿಯಲ್ಲಿ ಇರಲಿಲ್ಲ. ಅದೆಲ್ಲಾ ಸಾಧ್ಯಾನೆ ಇಲ್ಲಮ್ಮ. ನಿಮಗೆಲ್ಲೊ ಭ್ರಮೆ ಆಗಿರಬೇಕು. 3 ದಿನದಿಂದ ಇಲ್ಲೇ ಇರೋದಕ್ಕೆ ಹೀಗಾಗ್ತಾ ಇದೇ. ಸ್ವಲ್ಪ ಹೊರಗಡೆ ಹೋಗಿ ಬನ್ನಿ ಎಂದರು.


ನಾನು ಅವರ ಹತ್ತಿರ ಬೇಡಿಕೊಂಡರು ಅವರದು ಅದೇ ಮಾತು. ಕೊನೆಗೆ ನೀವು ಇಲ್ಲೇ ನಿಲ್ಲಿ ಎಂದು ಹೇಳಿ ಮತ್ತೆ ಅಮ್ಮನ್ನ ಮಾತಾಡಿಸಿದೆ. ಆಗ ಅಮ್ಮ ಮತ್ತೆ ಕಣ್ಣು ಬಿಟ್ಟು ತಕ್ಷಣ ಮತ್ತೆ ಕಣ್ಣು ಮುಚ್ಚಿದರು. ಆಗ ಡಾಕ್ಟರ್ ಮುಂದೆ ಬಂದು ಅಮ್ಮನ್ನ ಪರೀಕ್ಷೆ ಮಾಡಲು ಶುರು ಮಾಡಿದರು.


ನನ್ನ ಕಡೆ ನೋಡಿ, ಯಾವ ಭರವಸೆಯೂ ಇಲ್ಲ. ಆದ್ರೆ ಅವರು ನಿಮ್ಮ ಮಾತಿಗೆ ಮಾತ್ರ ರಿಯಾಕ್ಟ್ ಮಾಡ್ತಾ ಇದಾರೆ. ಆದ್ರೆ ಇದೊಂದೇ ಕಾರಣಕ್ಕೆ ಹೋಪ್ಸ್ ಇಟ್ಕೊಳ್ಳೋಕೆ ಆಗಲ್ಲ. ಕಾರಣ ಅಲ್ರೇಡಿ ಅವರ ಅರ್ಗ್ಯನ್ಸ್ ಎಲ್ಲಾ ಡ್ಯಾಮೇಜ್ ಆಗಿವೆ ಎಂದು ಅಲ್ಲಿಂದ ಹೋದರು.


🔅


ಆಸ್ಪತ್ರೆಯವರ ವಿರೋಧದ ನಡುವೆಯೂ, ಗಟ್ಟಿ ಧೈರ್ಯ ಮಾಡಿ ಬಂಡತನದಿಂದ ಅಮ್ಮನ್ನ ಡಿಸ್ಚಾರ್ಜ್ ಮಾಡಿಸಿದೆವು. ಮಮ್ಮಿನ ನನ್ನ ಮಡಿಲಲ್ಲಿ ಮಲಗಿಸಿಕೊಂಡು ಊರ ದಾರಿ ಹಿಡಿದೆವು.


ಮನಸ್ಸು ಕಲ್ಲು ಮಾಡಿಕೊಂಡು ಆಗಾಗ ಅಮ್ಮನ ಮೂಗಿನ ಹೊಳ್ಳೆಯ ಹತ್ತಿರ ಕೈ ಇಟ್ಟು ಅವರ ಉಸಿರಾಟ ಪರೀಕ್ಷಿಸುವಾಗ ನನ್ನ ಸಾವೇ ಬರಬಾರದೇ ಎನಿಸಿದ್ದಂತು ಸುಳ್ಳಲ್ಲ. ಜೀವ ಕೊಟ್ಟವಳ ಜೀವ ಪರೀಕ್ಷೆ ಮಾಡೋ ಇಂತಾ ಕಷ್ಟದ ಪರಿಸ್ಥಿತಿ ಯಾವ ಶತ್ರುವಿಗೂ ಬೇಡ.


ಒಡಲಲ್ಲಿ ನವ ಮಾಸ ಹೊತ್ತು, ಮಡಿಲಲ್ಲಿ ಲಾಲಿಸಿ ಪಾಲನೆ ಮಾಡಿದವಳನ್ನು ನನ್ನ ಮಡಿಲಲ್ಲಿ ಮಲಗಿಸಿಕೊಂಡಾಗ ಖುಷಿ ಸಂಭ್ರಮದ ಬದಲು ಆ ಕ್ಷಣದ ಪರಿಸ್ಥಿತಿಗೆ ದುಃಖ ಹೆಚ್ಚುತ್ತಲೇ ಇತ್ತು.


ಮಗಳ ಮನೆಗೆ ಅಂತಾ ತಿಂಗಳ ಹಿಂದೆ ಬಂದವಳು ಈಗ ಈ ಪರಿಸ್ಥಿತಿಯಲ್ಲಿ ತನ್ನ ಮನೆಗೆ ಹಿಂದಿರುಗುತ್ತಿರುವುದನ್ನು ಯಾರು ಊಹೆ ಕೂಡಾ ಮಾಡಿರಲಿಲ್ಲ. ವರ್ಷದ ನಂತರ ನನ್ನೊಟ್ಟಿಗೆ ಇರಲು ಬಂದವರು 15 ದಿನ ಇದ್ದು ವಾಪಸ್ ಊರಿಗೆ ಹೋಗುವಾಗ ದಾರಿ ಮಧ್ಯೆ ಉಸಿರಾಟದ ತೊಂದರೆಯಾಗಿ ಆಸ್ಪತ್ರೆ ಸೇರೋ ಹಾಗೆ ಆಗಿತ್ತು ಅಮ್ಮನಿಗೆ.


ಆಗ 15 ದಿನ ಅಮ್ಮನೊಟ್ಟಿಗೆ ನಾನೇ ಆಸ್ಪತ್ರೆಯಲ್ಲಿ ಇದ್ದೆ. ಅದೇ ಒಂದು ತಿಂಗಳು ಅಮ್ಮನ ಜೊತೆ ನಾನು ಕಳೆದ ಕೊನೆ ಕ್ಷಣಗಳು.


ದಾರಿ ಮಧ್ಯೆ ಕಾರ್ ನಿಲ್ಲಿಸಿ ಅಣ್ಣ ಹಾಲಿಗಾಗಿ ಹುಡುಕಾಡಿದ. ರಾತ್ರಿ ಆಗಿದ್ದರಿಂದ ಹಾಲು ಸಿಗುವುದು ತಡವಾಯಿತು.


ಎದೆ ಹಾಲ ಅಮೃತ ಉಣಿಸಿದವಳಿಗೆ ಹಾಲು ಕುಡಿಸಿ ಅಣ್ಣ ತಂಗಿ ಕೊನೆಯ ತಾಯ ಋಣ ತೀರಿಸಿದೆವು. ಋಣ ಸಂದಾಯ ಅಂದರೆ ಬಹುಷಃ ತಪ್ಪಾದೀತು. ತಾಯಿಯ ಋಣ ತೀರಿಸಲು ಯಾರಿಂದಲೂ ಸಾಧ್ಯವೇ ಇಲ್ಲ.


🔅


ಸತತ ಮೂರು ತಾಸಿನ ಪ್ರಯಾಣದ ನಂತರ ಮನೆ ತಲುಪಿದೆವು. ಮನೆಯಲ್ಲಿ ಮಂಚದ ಮೇಲೆ ಅಮ್ಮನನ್ನು ಮಲಗಿಸಿದರು. ನಾನು ಮತ್ತೆ ಅಮ್ಮನ ತಲೆಯನ್ನು ಎತ್ತಿ ನನ್ನ ಮಡಿಲಲ್ಲಿ ಮಲಗಿಸಿಕೊಂಡು, ತಲೆ ಸವರುತ್ತಾ ಕುಳಿತಿದ್ದೆ. ಮತ್ತೊಮ್ಮೆ ಎಲ್ಲರೂ ಹಾಲು ಕುಡಿಸಿದೆವು.


ಮೂರು ದಿನದ ಹಿಂದೆ ಗಂಜಿ ಕೇಳಿದವಳು, ಊಟ ಮಾಡಿಸು ಹಸಿವು ಎಂದವಳು ಏನನ್ನೂ ಮುಟ್ಟಿರಲಿಲ್ಲ. ಮೂರು ದಿನದ ನಂತರ ನಾವು ಕುಡಿಸಿದ ಅಷ್ಟು ಹಾಲನ್ನು ಕುಡಿದು ತನ್ನ ಹಸಿವು ನಿಗಿಸಿಕೊಂದವಳು ಹೊಟ್ಟೆ ತುಂಬಿತು ಅಂತಲೋ, ಭೂಮಿಯ ಮೇಲಿನ ತನ್ನ ಋಣ ತೀರಿತು ಅಂತಲೋ, ಬಾಯಿಗೆ ಹಾಕಿದ ಹಾಲನ್ನು ಹೊರ ಚೆಲ್ಲಿದರು.


ಅಮ್ಮನ ಪ್ರಾಣ ನನ್ನ ಮಡಿಲಲ್ಲೇ ಕೊನೆಯುಸಿರೆಳೆದಿತ್ತು. ಜೀವ ಕೊಟ್ಟವಳ ಜೀವ ಹೋಗಲು ಮಡಿಲು ಕೊಟ್ಟ ನತದೃಷ್ಟೆ ನಾನು. ಪಾಪಿ ಮಗಳ ಮಡಿಲಲ್ಲಿ ತನ್ನ ಪ್ರಾಣ ಬಿಟ್ಟವಳು ಶುಕ್ರವಾರದ ದಿನ ಮುತ್ತೈದೆ ಸಾವು ಪಡೆದಿದ್ದಳು. ಎಲ್ಲರ ಆಕ್ರಂಧನ ಮುಗಿಲು ಮುಟ್ಟಿತ್ತು.


🔅


ಸ್ನಾನ ಮಾಡಿಸಿ ಹೊಸ ಸೀರೆ ಉಡಿಸಿ, ಕೈಗೆ ಹಸಿರು ಬಳೆ ತೊಡಿಸಿ, ಹೂ ಮುಡಿಸಿ, ಅರಿಶಿನ ಕುಂಕುಮ ಹಚ್ಚಿ ಮಲಗಿಸಿದಾಗ ನನ್ನಮ್ಮನ ಸೌಂದರ್ಯ, ನೋಡುವವರು ಹೊಟ್ಟೆ ಕಿಚ್ಚು ಪಡುವಂತೆ ಇತ್ತು. ನಿಜಕ್ಕೂ ಸೌಂದರ್ಯವತಿಯೇ ಅವಳು. ಬೆಳ್ಳನೆ ಮುಖಕ್ಕೆ ಅಜ್ಜಿ ( ಅಮ್ಮನ ತಾಯಿ ) ತಂದ ಸೀರೆ ತುಂಬಾ ಚೆನ್ನಾಗಿ ಕಾಣ್ತಾ ಇತ್ತು.


ಕಣ್ಣು ಕಾಣಲ್ಲ ಅಂದ್ರು ಅಮ್ಮ ಡ್ರೆಸ್ಸಿಂಗ್ ವಿಚಾರದಲ್ಲಿ ತುಂಬಾ ನೀಟ್. ಸೀರೆ ಸೆರಗು ಮಡಿಕೆಯಲ್ಲಿ ಸ್ವಲ್ಪ ಏರು ಪೆರಾಗಿದ್ದರು ಸಹಿಸುತ್ತಿರಲಿಲ್ಲ. ಹೆಗಲ ಮೇಲಿನ ಸೇರಗನ್ನು ಮುಟ್ಟಿ ಮುಟ್ಟಿ ಒಂದಕ್ಕೊಂದು ಮಡಿಕೆ ಅಳತೆ ನೋಡಿ, ಸರಿಯಾಗಿಲ್ಲ ನೋಡು, ಸರಿ ಮಾಡು ಅನ್ನೋರು.


ಆದ್ರೆ ಇವತ್ತು ಗಂಟು ಹಾಕಿ ಸೀರೆ ಉಡಿಸಿ, ಸೆರಗಿಗೆ ಪಿನ್ ಕೂಡಾ ಮಾಡದೇ ಹಾಗೆ ಮುದುರಿ ಇಟ್ಟಿದೀವಿ. ಆದ್ರೆ ಸರಿಪಡಿಸು ಅಂತಾ ಹೇಳದೇ ಸುಮ್ಮನೆ ಮಲಗಿದ್ದಾಳೆ ನನ್ನಮ್ಮ.


ಹಣೆ ತುಂಬಾ ಕಾಸಗಲದ ಸ್ಟಿಕ್ಕರ್ ಹಚ್ಚಿದ್ರು, ಒಣ ಕುಂಕುಮ ಜಾಸ್ತಿ ಆದ್ರೆ ಕಣ್ಣಿಗೆ ಹಾರುತ್ತೆ ಅಂತಾ ಕರ್ಚಿಫ್ ಇಂದ ನಿಧಾನಕ್ಕೆ ಅಳುಕದಂತೆ ಒರೆಸಿಕೊಂಡು ಸ್ವಲ್ಪ ಮಾತ್ರ ಬಿಟ್ಕೊತಾ ಇದ್ಲು. ಆದ್ರೆ ಇವತ್ತು ಎಲ್ಲಾರು ಹಚ್ಚುತ್ತ ಇರುವ ಕುಂಕುಮ ಅವಳ ಹಣೆ ಮೇಲೆಲ್ಲಾ ಹರಡಿದರು, ಅದರತ್ತ ಗಮನ ಹರಿಸದೇ ಸುಮ್ಮನೆ ಮಲಗಿದ್ದಾಳೆ.


ಸದಾ ಮೆತ್ತಗಿನ, ಹಗುರಾದ ಸೀರೆಯನ್ನೇ ಉಡುತ್ತಿದ್ದವಳು ಮೈ ಮೇಲೆ ರಾಶಿ ಹೂ ಹಾರ ಹಾಕಿದರು ಭಾರ ಎನ್ನದೇ ಸುಮ್ಮನೆ ಮಲಗಿದ್ದಾಳೆ.


ಮುಡಿಗೆ ಮೊಳ ಹೂವು ಭಾರ ಎನಿಸುತ್ತೆ, ಎಂದು ಸ್ವಲ್ಪ ಮಾತ್ರ ಮುಡಿಯುತ್ತಿದ್ದವಳು ಮಾರು ಹೂ ಮುಡಿಸಿದರು ಭಾರ ಎನ್ನದೇ ಸುಮ್ಮನಿದ್ದಾಳೆ.


ನಾನು ಸ್ವಲ್ಪ ಬೇಸರದಿಂದ ಮಾತಾಡಿದ್ರು ಸಹಿಸದವಳು, ನಾನಿಷ್ಟು ಅಳುತ್ತಿದ್ದರು ಒಮ್ಮೆ ಕೂಡಾ ನನ್ನ ಸಮಾಧಾನ ಮಾಡದೇ ಕಲ್ಲಂತೆ ಮಲಗಿದ್ದಾಳೆ.


ನಾನು ತವರಿಗೆ ಬಂದರೆ ಸಂಭ್ರಮಿಸುವವಳು, ಅತ್ತಿಗೆಗೆ ಹೇಳಿ ನನ್ನಿಷ್ಟದ ಅಡಿಗೆ ತಯಾರಿ ಮಾಡಿಸುವವಳು ಏನೊಂದು ಮಾತಾಡದೇ ಮೌನವಾಗಿ ಮಲಗಿದ್ದಾಳೆ.


ಈ ಮನೆಯಲ್ಲಿ ಸದಾ ಅವಳ ಪಕ್ಕವೇ ಮಲಗಿ ಅಭ್ಯಾಸ ಆದವಳಿಗೆ ಈಗ ಅವಳ ಪಕ್ಕ ಮಲಗುವ ಅವಕಾಶ ಸಹ ಇಲ್ಲ.


ಅಮ್ಮನಿಗೆ ಅದೆಷ್ಟು ಮುತ್ತಿಕ್ಕಿದೆ. ಮುಂಚೆ ಎಲ್ಲಾ ನನ್ನ ಒಂದೊಂದು ಮುತ್ತಿಗೂ ಪ್ರತಿ ಮುತ್ತಿಕ್ಕುತ್ತಿದ್ದವಳು, ಈಗ ನಾನು ಕೊಟ್ಟಷ್ಟನ್ನು ಪಡೆದು ಹಿಂದಿರುಗಿ ಒಂದೇ ಒಂದು ಮುತ್ತನ್ನು ಕೊಡದೇ ಸ್ವಾರ್ಥಿಯಾಗಿ ಮಲಗಿದ್ದಾಳೆ.


ಮೂರು ದಿನದಿಂದ ನನ್ನ ಜೊತೆ ಮಾತಾಡಲು ಹಪಹಪಿಸಿದವಳು ಈಗ ನಾನು ಮಾತಾಡು ಎಂದರು ಮೌನ ತಳೆದಿದ್ದಾಳೆ.


ಅವಳ ಮುಖವನ್ನೇ ನೋಡುತ್ತಾ, ಅವಳನ್ನು ಎಚ್ಚರಿಸಲು ನಾನು ಅದೆಷ್ಟು ಪ್ರಯತ್ನ ಪಟ್ಟರು ನನ್ನ ಪ್ರಯತ್ನಕ್ಕೆ ಯಾವ ಫಲವು ದೊರೆಯದೆ ಅಮ್ಮ ಮೌನವಾಗಿ ಮಲಗಿದ್ದಾಳೆ.


ಇನ್ನೂ ಸ್ವಲ್ಪ ಹೊತ್ತು ಮಾತ್ರ ಅವಳ ಮುಖ ದರ್ಶನ. ನಾಳಿಯಿಂದ ಫೋಟೋದಲ್ಲಿ ಮಾತ್ರ ಅವಳನ್ನು ನೋಡೋಕೆ ಸಾಧ್ಯ.


ನಮ್ಮ ನೋವು ಸಂಕಟಗಳ ನಡುವೆಯೇ ಅಮ್ಮನ ಅಂತ್ಯಸಂಸ್ಕಾರ ಮುಗಿದಿತ್ತು. ಅಮ್ಮ ಸಂಪೂರ್ಣವಾಗಿ ನಮ್ಮಿಂದ ಶಾಶ್ವತವಾಗಿ ಅಗಲಿ ಹೋಗಿದ್ದಳು.


🔅


ಪ್ರತಿದಿನ ಫೋನ್ ಮಾಡಿ ಮಾತಾಡ್ತಾ ಇದ್ದವಳ ಫೋನಿನ ದಾರಿ ಕಾಯುವುದೊಂದೇ ನನಗುಳಿದ ಭಾಗ್ಯ.


ಕ್ರೂರ ಪ್ರಪಂಚದಲ್ಲಿ ತಬ್ಬಲಿಯಾದೆ ನಾನು. ಎಲ್ಲಾರು 'ಪಾಪ, ತಾಯಿ ಇಲ್ಲದ ಪರದೇಸಿ ಹುಡುಗಿ' ಅಂತಾ ಕನಿಕರದಿಂದ ನನ್ನ ನೋಡುವಾಗ ಹಿಂಸೆ ಆಗುತ್ತೆ.


ಅಮ್ಮನಿಲ್ಲದ ಕ್ಷಣ ನಾನು ಎಂದು ಊಹೆ ಕೂಡಾ ಮಾಡಿರಲಿಲ್ಲ. ಅವಳೊಟ್ಟಿಗೆ ಮಾತಾಡದೇ ನನ್ನ ದಿನ ಮುಗಿಯುತ್ತಿರಲಿಲ್ಲ.


ಅಮ್ಮನಾದರೂ, ನನಗವಳು ಮೊದಲು ಸ್ನೇಹಿತೆ ಆಗಿದ್ದಳು. ಪ್ರತಿಯೊಂದನ್ನು ಅವಳ ಬಳಿ ಹೇಳಿಕೊಂಡಾಗಲೇ ನನ್ನ ಮನಸ್ಸಿಗೆ ಸಮಾಧಾನ. ಆದ್ರೆ ಈಗ ಆಡಲು ಸಾವಿರ ಮಾತಿವೆ, ಆದರೆ ಕೇಳುವ ಎರೆಡು ಕಿವಿ ನನ್ನಗಲಿವೆ.


ನೋವೋ, ನಲಿವೋ, ಸಂತೋಷವೋ, ಸಂಭ್ರಮವೋ, ಈ ಕ್ಷಣಕ್ಕೂ ಮೊದಲು ನೆನಪಾಗುವುದು ಅಮ್ಮ. ಅದೆಷ್ಟೋ ಬಾರಿ ಮರೆತು ಈಗಲೂ ಅವಳ ನಂಬರ್ಗೆ ಕರೆ ಮಾಡಿ ಸೋತಿದ್ದೇನೆ.


ಪ್ರತಿದಿನ ಅವಳು ಕರೆ ಮಾಡುವ ಸಮಯಕ್ಕೆ ಬೇಡ ಅಂದ್ರು ಕಣ್ಣು ಗಡಿಯಾರದಲ್ಲಿ ಸಮಯ ನೋಡುತ್ತೆ. ಆದ್ರೆ ಕರೆ ಮಾಡುವ ಜೀವ ಎಲ್ಲಾ ಜಂಜಾಟಗಳಿಂದ ಮುಕ್ತಿ ಹೊಂದಿದೆ.


ಅವಳಿಲ್ಲದ ಮನೆಗೆ ಹೋದರೆ, ಬಾಗಿಲಲ್ಲಿ ನಿಂತು ನನ್ನ ದಾರಿ ಕಾಯ್ತಾ ಇದ್ದದ್ದು ನೆನಪಾಗುತ್ತೆ. ಹೋದ ಕೂಡ್ಲೆ ಅಪ್ಪಿ ಮುದ್ದಾಡುತ್ತಿದ್ದವಳು, ಈಗ ಫೋಟೋದಲ್ಲಿ ಅವಿತು ಕುಳಿತಿದ್ದಾಳೆ.


ಊರಿಂದ ವಾಪಸ್ಸು ಬರುವಾಗ ಅಪ್ಪಿ ಮುತ್ತಿಟ್ಟು, ಹುಷಾರು ಎಂದು ಹೇಳಿ ಕಾರಿನ ಶಬ್ಧ ನಿಲ್ಲುವವರೆಗೂ ಬಾಗಿಲಲ್ಲಿ ನಿಂತು ಕೈ ಬೀಸಿ ಟಾಟಾ ಮಾಡಿ ವಿಧಾಯ ಹೇಳುತ್ತಿದ್ದವಳು ಕಣ್ಣಿಗೆ ಕಾಣದಂತೆ ಅದೃಶ್ಯವಾಗಿದ್ದಾಳೆ.


ಕಣ್ಣು ಕಾಣುವ ತನಕ

ಬೆನ್ನು ಬಾಗುವ ತನಕ

ತಾಯಿರಲಿ ನನಗೆ ತವರಿರಲಿ......


ಎಲ್ಲಾ ಈಗ ಕನಸು ಮಾತ್ರ....

ವಾಸ್ತವ ಅರಿತು ಬಾಳುವ ಚೈತನ್ಯ ಉಳಿದಿಲ್ಲ.

ಆದ್ರೂ ನನ್ನನ್ನೇ ನಂಬಿದ ಜೀವಗಳಿಗಾಗಿ ಗಟ್ಟಿ ಮನಸ್ಸು ಮಾಡಿ ಉಳಿದಿದ್ದೇನೆ. ನನ್ನ ಗಂಡನ ಹತ್ರ ಪದೇ ಪದೇ ಹೇಳ್ತಾ ಇದ್ದೆ, ನನ್ನ ಮಮ್ಮಿಗೆ ಏನಾದ್ರೂ ಆದ್ರೆ ನಾನು ಕೂಡಾ ಬದುಕಿರೋದಿಲ್ಲ ಅಂತಾ. ಆದ್ರೆ ಈಗ ಜೀವ ಕೊಟ್ಟವಳಿಗಿಂತ ನಾನು ಜೀವ ಕೊಟ್ಟ ಜೀವವೇ ಹೆಚ್ಚಾಯ್ತಾ ಅನ್ನಿಸ್ತಾ ಇದೆ.....



ಮುಕ್ತಾಯ......



Rate this content
Log in

Similar kannada story from Abstract